ರಾಹುಲ್ ಗಾಂಧಿ ಮಾಡಿರುವ ಆರೋಪಗಳು ಕೇವಲ ರಾಜಕೀಯ ಆಕ್ರಮಣಗಳಲ್ಲ; ಅವು ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳನ್ನು ಝಳಪಿಸುವ ದಾಖಲೆಗಳಿದ್ದವು. ಆದರೆ, ಈ ಗಂಭೀರ ಆರೋಪಗಳಿಗೆ ಬದಲಾಗಿ ಬಿಜೆಪಿ ತನ್ನ IT ಸೆಲ್‌ಗಳ ಮೂಲಕ ರಾಹುಲ್ ಅವರ ವಿರುದ್ಧ ವೈಯಕ್ತಿಕ ದಾಳಿ ನಡೆಸುತ್ತಿದೆ. ಏಕೆಂದರೆ ರಾಹುಲ್ ಗಾಂಧಿ ಹೇಳಿರುವ ಸತ್ಯ ಬಿಜೆಪಿಯನ್ನ ಭಯಪಡಿಸುತ್ತಿದೆ!
ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಕುತೂಹಲ ಕೆರಳಿಸಿ ‘ಪಿಚ್ಚರ್ ಅಭಿ ಬಾಕಿ ಹೈ’ ಅಂತ ಹೇಳಿ ಮತಗಳ್ಳತನದ ಬಗ್ಗೆ ‘ಹೈಡ್ರೋಜನ್ ಬಾಂಬ್ ಸಿಡಿಸುವುದಾಗಿ’ ಘೋಷಿಸಿದ್ದರು. ಆ ಬಾಂಬ್ ಸಿಡಿದಂತೆ ಕಾಣಿಸುತ್ತಿದೆ. ಬಿಹಾರದ ಮೊದಲ ಹಂತದ ಮತದಾನಕ್ಕೊಂದು ದಿನ ಮುಂಚೆ ನವೆಂಬರ್ 5 ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಹುಲ್ ಹರ್ಯಾಣದ ಚುನಾವಣೆಗಳಲ್ಲಿ ನಡೆದಿರುವ ‘ಚುನಾವಣಾ ಅಕ್ರಮʼವನ್ನ ಬಹಿರಂಗಪಡಿಸಿ, ಬಿಜೆಪಿ ಮತ್ತು ಚುನಾವಣಾ ಆಯೋಗವನ್ನು ಬೊಟ್ಟು ಮಾಡಿ ತೋರಿಸಿದ್ದರು. ಈ ಆರೋಪಗಳು ಕೇವಲ ರಾಜಕೀಯ ಆಕ್ರಮಣಗಳಲ್ಲ; ಅವು ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳನ್ನು ಝಳಪಿಸುವ ದಾಖಲೆಗಳಿದ್ದವು. ಆದರೆ, ಈ ಗಂಭೀರ ಆರೋಪಗಳಿಗೆ ಬದಲಾಗಿ ಬಿಜೆಪಿ ತನ್ನ IT ಸೆಲ್‌ಗಳ ಮೂಲಕ ರಾಹುಲ್ ಅವರ ವಿರುದ್ಧ ವೈಯಕ್ತಿಕ ದಾಳಿ ನಡೆಸುತ್ತಿದೆ. ಏಕೆಂದರೆ ರಾಹುಲ್ ಗಾಂಧಿ ಹೇಳಿರುವ ಸತ್ಯ ಬಿಜೆಪಿಯನ್ನ ಭಯಪಡಿಸುತ್ತಿದೆ!
ಹರ್ಯಾಣದಲ್ಲಿ ಮತಗಳ್ಳತನದ ದಾಖಲೆಗಳು – ಅಂಕಿ ಅಂಶಗಳು ಮಾತನಾಡುತ್ತಿವೆ.
ಹರ್ಯಾಣದ 2024ರ ಅಸೆಂಬ್ಲಿ ಚುನಾವಣೆಗಳಲ್ಲಿ ಬಿಜೆಪಿ ಅದ್ಭುತ ಗೆಲುವು ಸಾಧಿಸಿತು. ಆದರೆ ರಾಹುಲ್ ಗಾಂಧಿ ಅವರ ‘ಎಚ್-ಫೈಲ್ಸ್’ (H-Files) ಎಂದು ಕರೆದಿರುವ ದಾಖಲೆಗಳು ಈ ಗೆಲುವಿನ ಹಿನ್ನೆಲೆಗೆ ಕಪ್ಪುಗ್ರಹಣ ಹಿಡಿಯುವಂತೆ ಮಾಡಿದೆ. ರಾಹುಲ್ ಗಾಂಧಿ ಪ್ರಕಾರ, ಹರ್ಯಾಣದಲ್ಲಿ ಸರಾಸರಿ 8ಕ್ಕೆ ಒಬ್ಬ ನಕಲಿ ಮತದಾರ ಇದ್ದಾರೆ. ಒಟ್ಟು 25 ಲಕ್ಷಕ್ಕೂ ಹೆಚ್ಚು ನಕಲಿ ಮತಗಳು ಸೇರಿಸಲ್ಪಟ್ಟಿವೆ, ಇದರಿಂದಲೇ ಬಿಜೆಪಿ ಗೆಲುವು ಸಾಧಿಸಿದೆ.
ಹರಿಯಾಣದ ಒಟ್ಟು 2 ಕೋಟಿ ಮತದಾರರಲ್ಲಿ 25 ಲಕ್ಷ ಮತಗಳು ನಕಲಿಯಾಗಿವೆ, ಅಂದರೆ ಪ್ರತಿ ಎಂಟು ಮತದಾರರಲ್ಲಿ ಒಬ್ಬರು ನಕಲಿ (ಶೇ. 12.5) ಎಂದು ರಾಹುಲ್ ಗಾಂಧಿ ತಿಳಿಸಿದ್ದರೆ. ಮುಂದುವರಿದು, ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ರಾಜ್ಯದಲ್ಲಿ ಕಾಂಗ್ರೆಸ್‌ಗೆ ಗೆಲುವು ನಿಶ್ಷಿತ ಎಂದು ಭವಿಷ್ಯ ನುಡಿದಿದ್ದರೂ, ಫಲಿತಾಂಶವು ಬಿಜೆಪಿಯ ಪರವಾಗಿ ಬಂದಿದ್ದನ್ನು ಅವರು ಉಲ್ಲೇಖಿಸಿದ್ದಾರೆ. ಅಸ್ಥಿತ್ವದಲ್ಲಿಯೇ ಇಲ್ಲದ 93,174 ಮತದಾರರ ವಿಳಾಸಗಳು ಪಟ್ಟಿಯಲ್ಲಿವೆ. ಮನೆ ಇಲ್ಲದವರ ಮನೆ ಸಂಖ್ಯೆ ಶೂನ್ಯ ಆಗಿರುತ್ತದೆ. ಆದರೆ, ಇಲ್ಲಿ ಮನೆ ಇಲ್ಲದವರು ಎಂದು ಉಲ್ಲೇಖಿಸಿ ನಕಲಿ ವಿಳಾಸಗಳನ್ನು ಸೇರಿಸಲಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಪರಿಶೀಲನೆ ಇಲ್ಲದೆ 19.26 ಲಕ್ಷ ಮತದಾರರನ್ನು ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ. ಒಬ್ಬ ಮತದಾರ 2 ಬೂತ್‌ಗಳಲ್ಲಿ 223 ಬಾರಿ ಕಾಣಿಸಿಕೊಂಡಿದ್ದಾರೆ. ಫಾರ್ಮ್ 6 (ಹೊಸ ಮತದಾರ ಸೇರ್ಪಡೆ) ಮತ್ತು ಫಾರ್ಮ್ 7 (ಅಳಿಸುವಿಕೆ) ದುರುಪಯೋಗವಾಗಿದೆ. ಇತರ ರಾಜ್ಯಗಳಿಂದ ನಕಲಿ ಲಾಗಿನ್‌ಗಳ ಮೂಲಕ ಕಾಂಗ್ರೆಸ್ ಮತಗಳನ್ನು ಅಳಿಸಲಾಗಿದೆ. ಪ್ರತ್ಯೇಕವಾಗಿ ಲೆಕ್ಕವಿಲ್ಲ, ಆದರೂ ಈ ಸಂಖ್ಯೆ 25 ಲಕ್ಷದ ಒಳಗೆಯಿದೆ ಎಂದು ವಿವರಿಸಿದ್ದಾರೆ. ಬ್ರೆಝಿಲ್‌ನ ಮಾಡೆಲ್ ಒಬ್ಬರ ಫೋಟೋ. ಸೀಮಾ, ಸ್ವೀಟಿ, ಸರಸ್ವತಿ, ರಶ್ಮಿ, ವಿಮಲಾ ಮುಂತಾದ ವಿಭಿನ್ನ ಹೆಸರುಗಳಲ್ಲಿ ಹರಿಯಾಣದ ಮತದಾರರ ಪಟ್ಟಿಯಲ್ಲಿ ಹಲವು ಬಾರಿ ಕಾಣಿಸಿಕೊಂಡಿದೆ.

ಇವರು ಹರಿಯಾಣದ 10 ವಿಭಿನ್ನ ಬೂತ್‌ಗಳಲ್ಲಿ 22 ಬಾರಿ ಮತ ಚಲಾಯಿಸಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಇತಿಹಾಸದಲ್ಲಿ ಮೊದಲ ಬಾರಿಗೆ ಅಂಚೆ ಮತಗಳು (ಸರ್ಕಾರಿ ನೌಕರರಿಂದ) ಭಾರೀ ಪ್ರಮಾಣದಲ್ಲಿ ಬಿಜೆಪಿಗೆ ಬಿದ್ದಿವೆ. ಇದು ಮತ್ತು ಬೂತ್ ಮತಗಳ ನಡುವೆ ದೊಡ್ಡ ವ್ಯತ್ಯಾಸ ಕಂಡು ಬಂದಿದೆ ಎಂದಿದ್ದಾರೆ. ಚುನಾವಣಾ ಆಯೋಗ ಸಿಸಿಟಿವಿ ದೃಶ್ಯಗಳನ್ನು ನಾಶ ಮಾಡಿದೆ. ಡಿಜಿಟಲ್ ಮತದಾರ ಪಟ್ಟಿಗಳನ್ನು ಬಿಡುಗಡೆ ಮಾಡಿಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಅವರೊಂದಿಗೆ ಸೇರಿ ಭಾರತೀಯ ಪ್ರಜಾಪ್ರಭುತ್ವವನ್ನು ನಾಶ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಇದು ಏನು ಸೂಚಿಸುತ್ತದೆ? ಬಿಜೆಪಿ ಚುನಾವಣಾ ಆಯೋಗವನ್ನ ಬಳಸಿಕೊಂಡು ಆಟವಾಡುತ್ತಿದೆ ಅನ್ನೋ ಆರೋಪಕ್ಕೆ ಪುಷ್ಠಿ ಕೊಟ್ಟಂತಿದೆ. ಈ ಆರೋಪಗಳು ಬಂದ ನಂತರ ಬಿಜೆಪಿ ಏನು ಮಾಡಿದೆ? ತನ್ನ IT ಸೆಲ್‌ಗಳ ಮೂಲಕ ರಾಹುಲ್ ಗಾಂಧಿಯ ವಿರುದ್ಧ ಕತ್ತಿ ಮಸೆಯುತ್ತಿದೆ. ಅವರ ಪತ್ರಿಕಾಗೋಷ್ಠಿಯನ್ನು ‘ಲೇವಡಿ’ ಮಾಡಿದ್ದಾರೆ. ರಾಹುಲ್ ಗಾಂಧಿಯವರ ಆರೋಪಕ್ಕೆ ಕೇಂದ್ರ ಸಚಿವ ಕಿರಣ್ ರಿಜಿಜು ಕೂಡ ಪ್ರತಿಕ್ರಿಯಿಸಿ, “ರಾಹುಲ್ ಗಾಂಧಿ ಪ್ರತಿ ಬಾರಿ ತಾವು ಸಿಡಿಸುವ ಪರಮಾಣು ಬಾಂಬ್ ಸ್ಫೋಟಗೊಳ್ಳುತ್ತದೆ ಎಂದು ಹೇಳುತ್ತಾರೆ. ಆದರೆ ಅವರ ಪರಮಾಣು ಬಾಂಬ್ ಎಂದಿಗೂ ಸ್ಫೋಟಗೊಳ್ಳುವುದೇ ಇಲ್ಲ ಏಕೆ? ಅವರು ಯಾವುದೇ ವಿಷಯವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ” ಎಂದು ಅವರು ಟೀಕಿಸಿದ್ದಾರೆ.
ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಪ್ರತಿಕ್ರಿಯಿಸಿ, “ನಮ್ಮ ವ್ಯವಸ್ಥೆಯನ್ನು ಪ್ರಶ್ನಿಸುವ ಕೆಟ್ಟ ಅಭ್ಯಾಸವನ್ನು ರಾಹುಲ್ ಗಾಂಧಿ ಹೊಂದಿದ್ದಾರೆ” ಎಂದು ವ್ಯಂಗ್ಯವಾಡಿದ್ದಾರೆ ಮುಂದುವರಿಯುತ್ತಾ, “ರಾಹುಲ್ ಗಾಂಧಿಯವರ ಹೇಳಿಕೆಯ ಪ್ರಕಾರವೇ ಒಂದು ಸಿಂಪಲ್ ಗಣಿತದ ಲೆಕ್ಕಾಚಾರ ಮಾಡೋಣ. ರಾಹುಲ್ ಗಾಂಧಿಯವರ ಪ್ರಕಾರ, ಆ ಮಹಿಳೆ ಪ್ರತೀ ಗಂಟೆಗೆ ಇಪ್ಪತ್ತು ಬಾರಿ ಮತ ಹಾಕಿದ್ದಾರೆ. ಅಂದರೆ ಪ್ರತೀ ಮೂರು ನಿಮಿಷಕ್ಕೆ ಒಂದು ಮತ ಎಂದಾಯಿತು. ಬೆಳಗ್ಗೆ ಏಳರಿಂದ ಸಂಜೆ ಆರರವರೆಗೆ, ಅಂದರೆ ಹನ್ನೊಂದು ಗಂಟೆಗಳ ಕಾಲ ಮತದಾನ ನಡೆಯುತ್ತದೆ. ಇಷ್ಟು ಕಮ್ಮಿ ಸಮಯದಲ್ಲಿ, ಮತಗಟ್ಟೆ ಅಧಿಕಾರಿಗಳು ಆಕೆಯ ಗುರುತಿನ ಚೀಟಿಯನ್ನು ಗುರುತಿಸಬೇಕು, ಯಾವ ವಾರ್ಡ್ ನಲ್ಲಿ ಆಕೆಯ ಹೆಸರಿದೆ ಎನ್ನುವುದು ನೋಡಬೇಕು, ಕೈಗೆ ಇಂಕ್ ಹಾಕಬೇಕು. ಇದನ್ನೆಲ್ಲಾ ಮೀರಿ, ಆ ಮಹಿಳೆ 223 ಬಾರಿ ಮತಹಾಕಿದ್ದಾರೆ ಎಂದರೆ, ಆಕೆ ಸೂಪರ್ ವುಮೆನ್ ಇರಬೇಕು. ಭದ್ರತಾ ಸಿಬ್ಬಂದಿಯವರ ಗಮನಕ್ಕೆ ಯಾಕೆ ವಿಚಾರ ಬಂದಿಲ್ಲ ” ಎಂದು ಅಮಿತ್ ಮಾಳವೀಯ ಲೇವಡಿ ಮಾಡಿದ್ದಾರೆ.
ಎಲ್ಲಾ ಪ್ರಕ್ರಿಯೆಯನ್ನು ಮುಗಿಸಿ, ಇನ್ನೊಂದು ಬೂತ್ ನಲ್ಲಿ ಮತಚಲಾಯಿಸಲು ತೆಗೆದುಕೊಳ್ಳುವ ಸಮಯವನ್ನು ನೋಡಿದರೆ, ಇದು ಸಾಧ್ಯವೇ ಎನ್ನುವ ಪ್ರಶ್ನೆ ಎದುರಾಗುತ್ತದೆ. ಅಸಲಿಗೆ, ವಿರೋಧ ಪಕ್ಷದ ನಾಯಕರಿಗೆ ವಾಸ್ತವದ ಅರಿವಿಲ್ಲ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ಅವರು ಈಗಲೇ, ಬಿಹಾರದ ಸೋಲಿಗೆ ಒಂದು ನೆಪ ಹುಡುಕುತ್ತಿದ್ದಾರೆ ಎಂದು ಅಮಿತ್ ಮಾಳವೀಯ ತಮ್ಮ ಟ್ವೀಟ್ ನಲ್ಲಿ ಉಲ್ಲೇಖಿಸಿದ್ದಾರೆ.
ರಾಹುಲ್ ಅವರು ECIಯ ಲೋಪಗಳನ್ನು ಎತ್ತಿ ತೋರಿಸಿದರೆ, ಬಿಜೆಪಿ ಏಕೆ ಮುಗಿ ಬೀಳುತ್ತದೆ? ಏಕೆಂದರೆ ಅದು ಸತ್ಯ! ಬಿಜೆಪಿ ಮಾತೇತ್ತಿದ್ರೆ ರಾಹುಲ್ ಅವರನ್ನು ಸುಪ್ರೀಂ ಕೋರ್ಟ್‌ಗೆ ಹೋಗಲು ಅಥವಾ ಅಫಿಡವಿಟ್ ಸಲ್ಲಿಸಲು ಹೇಳುತ್ತಾರೆ, ಆದರೆ ತಮ್ಮ ಮೇಲಿನ ಗಂಭೀರ ಆರೋಪಗಳಿಗೆ ಪ್ರತಿಕ್ರಿಯಿಸುವುದಿಲ್ಲ. ಇದು ರಾಜಕೀಯ ಕುಸಿತವಲ್ಲ; ಇದು ದೇಶದ ಪ್ರಜಾತಂತ್ರವನ್ನು ಬುಡಮೇಲು ಮಾಡುವ ಪ್ರಯತ್ನದಂತೆ ಕಾಣುತ್ತಿದೆ. ‘ಮತಗಳ್ಳತನ’ ಎಂಬ ಆರೋಪ ಸಣ್ಣದಲ್ಲ; ಅದು ಸಂವಿಧಾನದ ಮೇಲಿನ ದಾಳಿ. ಬ್ರೆಜಿಲ್ ಮಾಡೆಲ್ ಫೋಟೋಯ ಬಳಕೆಯಿಂದಲೇ ಸ್ಪಷ್ಟವಾಗುತ್ತದೆ – ಒಂದು ವೋಟರ್ IDಯನ್ನ 22 ಬಾರಿ ಬಳಸಿದ್ದಾರೆ, ಅಡ್ರೆಸ್ ಇಲ್ಲದ ಮನೆಗಳಿಂದ ಸಾವಿರಾರು ಮತಗಳು ಚಲಾವಣೆ ಆಗಿದೆ. ಇದೆಲ್ಲಾ ಏನು? ಇದು ಬಿಜೆಪಿ ಚುನಾವಣೆಯನ್ನ ದುರ್ಬಳಕೆ ಮಾಡಿಕೊಳ್ಳುತ್ತಿದೆ ಅನ್ನೋದರ ಸಂಕೇತ ಅಲ್ವಾ?
ಬಿಜೆಪಿ ಮತ್ತು ECI ಈ ಆರೋಪಗಳಿಗೆ ಉತ್ತರ ಕೊಡಬೇಕು. ಆದರೆ ಅವರು ರಾಹುಲ್ ಅವರ ವಿರುದ್ಧ ಮುಗಿಬಿಳೆಯುತ್ತಿದ್ದಾರೆ. ಬಿಜೆಪಿ ದೇಶದ ಜನರನ್ನು ಮೋಸ ಮಾಡುವುದಲ್ಲವೇ?

ಹರ್ಯಾಣದ ಉದಾಹರಣೆಯೇ ಬಿಹಾರಕ್ಕೆ ಎಚ್ಚರಿಕೆಯಾಗಬೇಕಿತ್ತು. ಆದರೆ ರಾಹುಲ್ ಅವರ ಪತ್ರಿಕಾಗೋಷ್ಠಿ ಬಿಹಾರದ ಮೊದಲ ಹಂತದ ಮತದಾನಕ್ಕೊಂದು ದಿನ ಮುಂಚೆ ನಡೆದಿದೆ. ರಾಹುಲ್ ಗಾಂಧಿ ಎಚ್ಚರಿಸಿದ್ದಾರೆ – ಬಿಜೆಪಿ ಇದೇ ಮಾದರಿಯಲ್ಲಿ ಬಿಹಾರದಲ್ಲೂ ‘ಚೋರಿ’ ಮಾಡಲಿದೆ. ಬಿಜೆಪಿ ಹರ್ಯಾಣದಲ್ಲಿ ಮಾಡಿದ್ದನ್ನು ಬಿಹಾರದಲ್ಲಿ ಪುನರಾವರ್ತಿಸಲಿದೆ ಎಂದು ರಾಹುಲ್ ಆರೋಪಿಸಿದ್ದಾರೆ.
ಬಿಹಾರದಲ್ಲಿ ಈಗ ನಡೀತಾ ಇರುವ ಚುನಾವಣೆ ದೇಶದ ರಾಜಕೀಯಕ್ಕೆ ನಿರ್ಣಾಯಕ. ಇಲ್ಲಿ ನಕಲಿ ಮತಗಳು ಸೇರಿಸಿದರೆ, ನಿತೀಶ್ ಕುಮಾರ್‌ರ ನೇತೃತ್ವದ NDA ಸರ್ಕಾರ ಉಳಿಯುತ್ತದೆ. ಆದರೆ ರಾಹುಲ್ ಅವರ ಎಚ್ಚರಿಕೆಯು ಕಾಂಗ್ರೆಸ್ ಮತ್ತು ಮೈತ್ರಿಪಕ್ಷಗಳಿಗೆ ಶಕ್ತಿ ನೀಡಿದೆ. ECI ಈಗಲೇ ಕ್ರಮ ತೆಗೆದುಕೊಳ್ಳಬೇಕು – ವೋಟರ್ ಲಿಸ್ಟ್‌ಗಳನ್ನು ತಪಾಸಣೆ ಮಾಡಿ, ನಕಲಿ ಮತಗಳನ್ನು ತೆಗೆದುಹಾಕಬೇಕಿದೆ. ಈಗಾಗಲೇ ರಾಹುಲ್ ಗಾಂಧಿ ಚುನಾವಣಾ ಆಯೋಗದ ವಿರುದ್ಧ ಮಾಡಿರುವ ಆರೋಪಕ್ಕೆ ಚುನಾವಣಾ ಆಯೋಗ ಕೂಡ ಉತ್ತರಿಸಬೇಕಿದೆ. ರಾಹುಲ್ ಗಾಂಧಿಯ ಆರೋಪಗಳು ಕೇವಲ ಹರ್ಯಾಣ ಅಥವಾ ಬಿಹಾರಕ್ಕೆ ಸೀಮಿತವಲ್ಲವಾಗಿಲ್ಲ ಬದಲಿಗೆ ಅವು ದೇಶದ ಚುನಾವಣಾ ವ್ಯವಸ್ಥೆಯನ್ನು ಪ್ರಶ್ನಿಸುತ್ತವೆ. ಬಿಜೆಪಿ ‘ವೋಟರ್ ಐಡಿ’ಯನ್ನೇ ಚೋರಿಗೆ ಬಳಸುತ್ತಿದೆ ಎಂಬುದು ಸ್ಪಷ್ಟ ಅನ್ನೋ ಆರೋಪಕ್ಕೆ ಬಿಜೆಪಿ ಉತ್ತರಿಸಬೇಕು. ಯಾಕಂದ್ರೆ ಇದು ದೇಶದ ಪ್ರಜಾತಂತ್ರವನ್ನು ಬುಡಮೇಲು ಮಾಡುವ ಪ್ರಯತ್ನ – ಸಣ್ಣ ಆರೋಪವಲ್ಲ!. ಮತ ಎಣಿಕೆಗೆ ಎರಡು ದಿನಗಳ ಮೊದಲು, ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಬಿಜೆಪಿ ಗೆಲ್ಲುತ್ತದೆ ಮತ್ತು “ನಮ್ಮಲ್ಲಿ ಒಂದು ವ್ಯವಸ್ಥೆ ಇದೆ” ಎಂದು ಹೇಳಿರೋದನ್ನ ನಾಡಿನ ಜನ ಮರೆಯುವಂತಿಲ್ಲ.
ಈ ಹಿಂದೆ ಮೋದಿಯಾದಿಯಾಗಿ ರಾಹುಲ್ ಗಾಂಧಿಗೆ ‘ಪಪ್ಪು’ ‘ಬಾಲ ಬುದ್ದಿ’ ಎಂಬ ಪದಬಳಕೆಯನ್ನ ಮಾಡುತ್ತಿದ್ದರು. ಈಗ ರಾಹುಲ್ ಗಾಂಧಿಯ ವರ್ಚಸ್ಸು ಹೆಚ್ಚುತ್ತಿದೆ. ಮೋದಿ ಕೂಡ ಈಗ ರಾಹುಲ್ ಅವರನ್ನು ‘ಪಪ್ಪು’ ಎಂದು ಕರೆಯುವ ಧೈರ್ಯ ಮಾಡಲಾರರು. ಆದಾಗ್ಯೂ, ‘ಬಾಲ ಬುದ್ದಿ’ ಎಂಬ ಪದವನ್ನು ರಾಹುಲ್ ವಿರುದ್ಧ ಮೋದಿ ಬಳಸಿದ್ದರು. ಆದರೆ, ಅದು ಮೋದಿಗೆ ತಿರುಗುಬಾಣದಂತಾಗಿದೆ. ಈಗ ರಾಹುಲ್ ಅವರನ್ನು ‘ಪಪ್ಪು’ ಎಂದಾಗಲೀ, ‘ಬಾಲ ಬುದ್ದಿ’ಯವರು ಎಂದಾಗಲೀ ಜರಿಯಲು ಬಿಜೆಪಿಗರಿಗೂ ಸಾಧ್ಯವಿಲ್ಲ. ರಾಹುಲ್ ಮುಖ್ಯವಾದ ವಿಷಯಗಳ ಕುರಿತು ಕ್ರಿಯಾತ್ಮಕವಾಗಿ ಯುವ ಪೀಳಿಗೆಯನ್ನು ನೇರವಾಗಿ ಸಂಪರ್ಕಿಸುತ್ತಿದ್ದಾರೆ. ಇಂತಹ ಸಂಪರ್ಕವನ್ನು ಹೆಚ್ಚಿಸಲು ಇದು ಉತ್ತಮ ಕ್ಷಣವೂ ಆಗಿದೆ.

ಬಿಜೆಪಿ ಈಗ ಉತ್ತರ ಕೊಡಬೇಕು. ನಕಲಿ ಮತಗಳ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡಿ, ECIಯ ಸ್ವತಂತ್ರತೆಯನ್ನು ಖಾತರಿಪಡಿಸಿ. ಇಲ್ಲದಿದ್ದರೆ, ರಾಹುಲ್ ಅವರ ‘ಹೈಡ್ರೋಜನ್ ಬಾಂಬ್’ ಇನ್ನಷ್ಟು ದೊಡ್ಡ ಸ್ಫೋಟಕವಾಗಿ ಬದಲಾಗುತ್ತದೆ. ದೇಶದ ಜನರು ಈಗ ಒಗ್ಗೂಡಬೇಕು – ಪ್ರಜಾಪ್ರಭುತ್ವವನ್ನು ಕಾಪಾಡಲು, ಚುನಾವಣಾ ಚೋರಿಗಳನ್ನು ತಡೆಯಲು.
ಈ ಚರ್ಚೆ ಇಲ್ಲೀಗೇ ಕೊನೆ ಆಗಬಾರದು, ಸತ್ಯ ಹೊರಬರುವ ತನಕ, ಪ್ರಜೆಗಳ ಮತಕ್ಕೆ ನ್ಯಾಯ ಸಿಗುವ ತನಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಂಟಿರುವ ಕಳಂಕ ದೂರವಾಗುವ ತನಕ ಈ ಹೋರಾಟ ಮುಂದುವರೆಯಬೇಕು.





