ಸಾರ್ವಜನಿಕ ನಿಧಿಗಳ ಕುರಿತ ಮಾಹಿತಿಗಳನ್ನು ಸರ್ಕಾರ ಮುಚ್ಚಿಡುತ್ತಿರುವುದಾದರೂ ಯಾಕಾಗಿ? ಇಲ್ಲಿ ಬೃಹತ್ ಭ್ರಷ್ಟಾಚಾರ ಅಥವಾ ಹಗರಣ ನಡೆದಿರಬಹುದೇ? ಇದಕ್ಕೆ ಸರ್ಕಾರವೇ ಉತ್ತರಿಸಬೇಕು. ಆದರೆ, ಸರ್ಕಾರ ಉತ್ತರಿಸಲು ಸಿದ್ಧವಿಲ್ಲ.
ಕೊರೊನಾ ವೈರಲ್ ಆಕ್ರಮಣದ ಕಾಲದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹುಟ್ಟುಹಾಕಿದ ‘ಪ್ರಧಾನಮಂತ್ರಿ ಕೇರ್ಸ್ ಫಂಡ್‘ ಅರ್ಥಾತ್ ‘ಪಿಎಂ ಕೇರ್ಸ್’ ಕುರಿತು ಅಂದಿನಿಂದಲೂ ಭಾರೀ ಚರ್ಚೆಗಳು ನಡೆಯುತ್ತಿವೆ. ಕೊರೊನಾ ವಿರುದ್ಧದ ಹೋರಾಟಕ್ಕಾಗಿ ಪಿಎಂ ಕೇರ್ಸ್‌ಗೆ ಯಾರೆಲ್ಲ ದಾನಿಗಳು ದೇಣಿಗೆ ನೀಡಿದರು. ಎಷ್ಟು ಹಣ ಹರಿದು ಬಂದಿತು. ಅದರಲ್ಲಿ, ಬಳಕೆಯಾದದ್ದು ಎಷ್ಟು? ಇನ್ನೂ ಎಷ್ಟು ಪಿಎಂ ಕೇರ್ಸ್‌ನಲ್ಲಿದೆ ಎಂಬುದು ಈವರೆಗೂ ದೇಶವಾಸಿಗಳಿಗೆ ಗೊತ್ತಾಗಿಲ್ಲ. ಸರ್ಕಾರ ಪಿಎಂ ಕೇರ್ಸ್‌ನ ಮಾಹಿತಿಗಳನ್ನು ಬಚ್ಚಿಟ್ಟುಕೊಂಡಿದೆ. ಅದು ಸಾರ್ವಜನಿಕ ನಿಧಿಯಲ್ಲ, ಮಾಹಿತಿ ಕೊಡಲು ಬರುವುದಿಲ್ಲವೆಂದು ಮೋದಿ ಸರ್ಕಾರ ವಾದಿಸುತ್ತಿದೆ. ಇದೀಗ, ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ಸರ್ಕಾರ, ಪಿಎಂ ಕೇರ್ಸ್ ಕುರಿತು ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಅನುಮತಿಸಬಾರದು ಎಂದು ಪ್ರಧಾನಮಂತ್ರಿಗಳ ಕಚೇರಿ ಲೋಕಸಭಾ ಸಚಿವಾಲಯಕ್ಕೆ ಪತ್ರವೊಂದನ್ನು ಬರೆದಿದೆ.
ಹೌದು, 2026ರ ಜನವರಿ 30ರಂದು ಲೋಕಸಭಾ ಸಚಿವಾಲಯಕ್ಕೆ ಪ್ರಧಾನಿ ಕಚೇರಿ ಬರೆದಿರುವ ಪತ್ರದ ಕುರಿತು ಈಗ ಚರ್ಚೆಗಳು ಮುನ್ನೆಲೆಗೆ ಬಂದಿವೆ. ಈ ಪತ್ರದ ಬೆನ್ನಲ್ಲೇ, ಪಿಎಂ ಕೇರ್ಸ್ ಫಂಡ್, ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿ (PMNRF) ಮತ್ತು ರಾಷ್ಟ್ರೀಯ ರಕ್ಷಣಾ ನಿಧಿ (NDF) ಈ ಮೂರು ನಿಧಿಗಳ ಕುರಿತು ಲೋಕಸಭೆಯಲ್ಲಿ ಪ್ರಶ್ನೆಗಳು, ಝೀರೋ ಅವರ್ ನೋಟಿಸ್‌ಗಳು ಅಥವಾ ಸ್ಪೆಷಲ್ ಮೆನ್ಷನ್‌ಗಳನ್ನು ಅನುಮತಿಸುವುದಿಲ್ಲ ಎಂದು ಲೋಕಸಭಾ ಸಚಿವಾಲಯದಿಂದ ಸಂಸದರಿಗೆ ಸೂಚನೆ ನೀಡಲಾಗಿದೆ ಎಂದು ಆರೋಪಿಸಲಾಗಿದೆ.
ಪ್ರಧಾನಿ ಕಚೇರಿಯು ತನ್ನ ಪತ್ರದಲ್ಲಿ ಲೋಕಸಭೆ ಕಲಾಪ ನಡವಳಿ ನಿಯಮಗಳ ನಿಬಂಧನೆ 41(2)(8) ಮತ್ತು Rule 41(2)(17)ಯನ್ನು ಉಲ್ಲೇಖಿಸಿದೆ. ಈ ಸೆಕ್ಷನ್‌ಗಳು ಹೇಳುವಂತೆ, ಪ್ರಶ್ನೆಗಳು ಭಾರತ ಸರ್ಕಾರದ ಪ್ರಾಥಮಿಕ ಜವಾಬ್ದಾರಿಯಲ್ಲದ ವಿಷಯಗಳಿಗೆ ಸಂಬಂಧಿಸಿರಬಾರದು. ಸರ್ಕಾರಕ್ಕೆ ನೇರವಾಗಿ ಜವಾಬ್ದಾರಿಯಲ್ಲದ ಸಂಸ್ಥೆಗಳು ಅಥವಾ ವ್ಯಕ್ತಿಗಳ ನಿಯಂತ್ರಣದಲ್ಲಿರುವ ವಿಷಯಗಳನ್ನು ಪ್ರಶ್ನಿಸಲು ಅನುಮತಿ ಇಲ್ಲ. ಅಂದರೆ, ಪಿಎಂ ಕೇರ್ಸ್, ಪಿಎಂ NRAF ಹಾಗೂ NDF ನಿಧಿಗಳು ಸರ್ಕಾರದ ಪ್ರಾಥಮಿಕ ಜವಾಬ್ದಾರಿಯಲ್ಲದ ವಿಷಯಗಳು ಎಂದು ಸರ್ಕಾರ ಹೇಳುತ್ತಿದೆ.
ಪತ್ರದಲ್ಲಿ ಪ್ರಧಾನಿ ಕಚೇರಿ ವಾದಿಸಿರುವಂತೆ, ಈ ಮೂರು ನಿಧಿಗಳು ಸಂಪೂರ್ಣವಾಗಿ ಸ್ವಯಂಪ್ರೇರಿತ ಸಾರ್ವಜನಿಕ ಕೊಡುಗೆಗಳಿಂದ ರಚಿತವಾಗಿವೆ. ಇವುಗಳಿಗೆ ಭಾರತದ ಸಂಯೋಜಿತ ನಿಧಿಯಿಂದ ಯಾವುದೇ ಹಣ ಬರುವುದಿಲ್ಲ. ಹೀಗಾಗಿ, ಇವು ಸರ್ಕಾರಿ ನಿಧಿಗಳಲ್ಲ. ಸರ್ಕಾರದ ಪ್ರಾಥಮಿಕ ಜವಾಬ್ದಾರಿಯಲ್ಲದ್ದರಿಂದ ಸಂಸತ್ತಿನಲ್ಲಿ ಪ್ರಶ್ನೆಗಳು ಅನ್ವಯಿಸುವುದಿಲ್ಲ ಎಂದು ಹೇಳಿಕೊಂಡಿದೆ. ಮಾತ್ರವಲ್ಲದೆ, ಈ ನಿಧಿಗಳ ಕುರಿತಾದ ಪ್ರಶ್ನೆಗಳನ್ನು ಲೋಕಸಭೆ ಕಲಾಪ ನಡವಳಿ ನಿಯಮಗಳ ನಿಬಂಧನೆ 41(2)(8) ಮತ್ತು Rule 41(2)(17) ನಿಯಮಗಳ ಅಡಿಯಲ್ಲಿ ನಿರಾಕರಿಸಬಹುದು ಎಂದು ಸಚಿವಾಲಯಕ್ಕೆ ಹೇಳಿದೆ.

ಈ ನಿರ್ಧಾರದ ಹಿನ್ನೆಲೆಯಲ್ಲಿ ಪಿಎಂ ಕೇರ್ಸ್ ಫಂಡ್‌ನ ಗೌಪ್ಯತೆಯ ಕುರಿತು ಮತ್ತಷ್ಟು ಪ್ರಶ್ನೆಗಳು ಮುನ್ನೆಲೆಗೆ ಬಂದಿವೆ. ಮುಖ್ಯವಾಗಿ, ಆರು ವರ್ಷಗಳ ಹಿಂದೆ, 2020ರ ಮಾರ್ಚ್‌ನಲ್ಲಿ ಪಿಎಂ ಕೇರ್ಸ್ ರಚಿಸಲಾಯಿತು. ಈ ನಿಧಿಗೆ ಪ್ರಧಾನಿ ಮೋದಿ ಅವರೇ ಅಧ್ಯಕ್ಷರೂ ಆಗಿದ್ದಾರೆ. ಸರ್ಕಾರದ ಹೇಳಿಕೆಯ ಪ್ರಕಾರ, ಇದು ಸಾರ್ವಜನಿಕ ಚಾರಿಟಬಲ್ ಟ್ರಸ್ಟ್ ಆಗಿದ್ದು, ಸರ್ಕಾರಿ ಸಂಸ್ಥೆಯಲ್ಲ. ಹೀಗಾಗಿ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಬರುವುದಿಲ್ಲ ಎಂದು ವಾದಿಸುತ್ತಲೇ ಇದೆ.
ಸರ್ಕಾರದ ವಾದಕ್ಕೆ ಸುಪ್ರೀಂ ಕೋರ್ಟ್ ಮತ್ತು ಇತರ ನ್ಯಾಯಾಲಯಗಳೂ ಸೀಲ್ ಒತ್ತಿವೆ. ಈ ನಿಧಿಯನ್ನು ಸರ್ಕಾರಿ ಆಡಿಟ್ ಸಂಸ್ಥೆ ಸಿಎಜಿ ಬದಲಾಗಿ ಖಾಸಗಿ ಆಡಿಟರ್‌ಗಳು ಆಡಿಟ್ ಮಾಡುತ್ತಾರೆ. ಫಂಡ್‌ನ ವೆಬ್‌ಸೈಟ್‌ನಲ್ಲಿ ವಾರ್ಷಿಕ ವರದಿಗಳು, ಕೊಡುಗೆಗಳ ಸಾಮಾನ್ಯ ವಿವರಗಳು ಲಭ್ಯವಿವೆ. ಆದರೆ, ವೈಯಕ್ತಿಕ ಕೊಡುಗೆದಾರರ ಹೆಸರುಗಳು ಅಥವಾ ಕೆಲವು ನಿಖರ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲ. ಕೊಡುಗೆದಾರರ ಹೆಸರುಗಳನ್ನೂ ಗೌಪ್ಯವಾಗಿಯೇ ಇರಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಹಾಸನ ಮಣ್ಣಿನ ಹೆಣ್ಣು ಬೇರುಗಳು | ಮೈಸೂರು ಸಾಂಪ್ರದಾಯಿಕ ಕಲೆಗೆ ಮೆರುಗು ತಂದ- ಪ್ರಭಾ ಮಲ್ಲೇಶ್
ಸಾರ್ವಜನಿಕರಿಂದ ಹಣ ಹರಿದು ಬರುವ ಈ ನಿಧಿಯ ವಿವರಗಳನ್ನು ಗೌಪ್ಯವಾಗಿ ಇಟ್ಟಿರುವ ಕುರಿತು ವಿರೋಧ ಪಕ್ಷಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಸಂಶಯ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಧೋರಣೆಯನ್ನು ತೀವ್ರವಾಗಿ ಟೀಕಿಸುತ್ತಿದ್ದಾರೆ.
ಪ್ರಧಾನಮಂತ್ರಿ ಮತ್ತು ಸರ್ಕಾರಿ ಸಚಿವರು ಟ್ರಸ್ಟಿಗಳಾಗಿರುವುದರಿಂದ, ಸರ್ಕಾರಿ ಸೌಲಭ್ಯಗಳಾದ ಪ್ರಧಾನಿ ಕಚೇರಿ, ವೆಬ್‌ಸೈಟ್ ಅನ್ನು ಬಳಸುತ್ತಿರುವುದರಿಂದ ಇದು ಸರ್ಕಾರಿ ನಿಧಿಯಂತೆಯೇ ಆಗಿದೆ. ಸಾರ್ವಜನಿಕ ಕೊಡುಗೆಗಳು ಸಾವಿರಾರು ಕೋಟಿ ರೂಪಾಯಿಯಷ್ಟು ಬಂದಿರುವುದರಿಂದ ಈ ಕುರಿತು ಸಂಸತ್ತು ಮತ್ತು ಜನರು ಕೇಳುವ ಹಕ್ಕು ಹೊಂದಿದ್ದಾರೆ ಎಂದು ವಿಪಕ್ಷಗಳು ಹೇಳುತ್ತಿವೆ.
ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಇದನ್ನು ‘ಪಾರದರ್ಶಕತೆಯನ್ನು ತಪ್ಪಿಸುವ ಪ್ರಯತ್ನ’ ಎಂದು ಕರೆದಿದ್ದಾರೆ. ‘ಸರ್ಕಾರ ಏನನ್ನು ಮರೆಮಾಚುತ್ತಿದೆ?’ ಎಂಬ ಪ್ರಶ್ನೆಗಳು ಉದ್ಭವಿಸಿವೆ. ಆರ್‌ಟಿಐ ಅರ್ಜಿಗಳನ್ನು ನಿರಾಕರಿಸಲಾಗಿದೆ. ಈಗ ಸಂಸತ್ತಿನಲ್ಲಿಯೂ ಪ್ರಶ್ನೆಗಳನ್ನು ನಿರ್ಬಂಧಿಸುವುದು ಸಂಸದೀಯ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುತ್ತದೆ ಎಂದು ಟೀಕಿಸಲಾಗಿದೆ.

ಈ ಕಟ್ಟರ್ ಗೌಪ್ಯತೆಯು ನಿಯಮಾವಳಿಗಳ ಆಧಾರದ ಮೇಲೆ ಇದ್ದರೂ, ಇದು ಫಂಡ್‌ನ ಕಾರ್ಯವಿಧಾನ, ಹಣದ ಬಳಕೆ ಮತ್ತು ಜವಾಬ್ದಾರಿಯ ಕುರಿತು ಸಾರ್ವಜನಿಕ ಆತಂಕಗಳನ್ನು ಹೆಚ್ಚಿಸಿದೆ. ಸರ್ಕಾರ ಇದನ್ನು ಸಾರ್ವಜನಿಕ ಹಿತಕ್ಕಾಗಿ ಮತ್ತು ಕೊಡುಗೆದಾರರ ಗೌಪ್ಯತೆಗಾಗಿ ಎಂದು ಸಮರ್ಥಿಸಿಕೊಳ್ಳುತ್ತದೆ. ಆದರೆ, ಇದು ಅಧಿಕಾರದ ದುರುಪಯೋಗ ಅಥವಾ ಮರೆಮಾಚುವಿಕೆ ಎಂದು ವಿಪಕ್ಷಗಳು ಹಾಗೂ ಕಾರ್ಯಕರ್ತರು ಹೇಳುತ್ತಿದ್ದಾರೆ. ಆದರೂ, ಸಾರ್ವಜನಿಕ ನಿಧಿಗಳ ಕುರಿತ ಮಾಹಿತಿಗಳನ್ನು ಸರ್ಕಾರ ಮುಚ್ಚಿಡುತ್ತಿರುವುದಾದರೂ ಯಾಕಾಗಿ? ಇಲ್ಲಿ ಬೃಹತ್ ಭ್ರಷ್ಟಾಚಾರ ಅಥವಾ ಹಗರಣ ನಡೆದಿರಬಹುದೇ? ಇದಕ್ಕೆ ಸರ್ಕಾರವೇ ಉತ್ತರಿಸಬೇಕು. ಆದರೆ, ಸರ್ಕಾರ ಉತ್ತರಿಸಲು ಸಿದ್ಧವಿಲ್ಲ.




