ಕೇಂದ್ರ ಗಾಂಧಿ ಹೆಸರಿನ ಉದ್ಯೋಗ ಖಾತ್ರಿ ಕಾನೂನನ್ನು ತೆಗೆದು ಹಾಕಿ, ರಾಮನ ಹೆಸರಿನಲ್ಲಿ ಇದನ್ನು ತನ್ನ ತೆಕ್ಕೆಗೆ ತೆದುಕೊಂಡು ಮೂಗಿಗೆ ತುಪ್ಪ ಹಚ್ಚುವ ಸುಳ್ಳು ಉದ್ಯೋಗ ಭರವಸೆಯ ಕಾನೂನನ್ನು ತಂದು, ಗ್ರಾಮೀಣ ಕೂಲಿಕಾರರನ್ನು ಮೋಸ ಮಾಡುವ ಕುತಂತ್ರಕ್ಕೆ ಈ ಸರ್ಕಾರ ಕೈ ಹಾಕಿದೆ. ಈ ಮೂಲಕ ಬಂಡವಾಳಿಗರನ್ನು ಗ್ರಾಮ ಪಂಚಾಯಿತಿಗಳಿಗೂ ತುರುಕುವ ಹುನ್ನಾರ ನಡೆಯುತ್ತಿದೆ.
ನಮ್ಮ ಸಂವಿಧಾನವು ಬದುಕುವ ಹಕ್ಕನ್ನು ಮೂಲಭೂತ ಹಕ್ಕಾಗಿ ಖಚಿತಪಡಿಸಿದೆ. ಆದರೆ ಬದುಕುವ ಹಕ್ಕು ವಾಸ್ತವವಾಗಿ ಖಾತ್ರಿಯಾಗಬೇಕಾದರೆ ಉದ್ಯೋಗದ ಹಕ್ಕು ಅವಶ್ಯಕ.
ಈ ಸತ್ಯದ ಬಗ್ಗೆ ಸಂವಿಧಾನದ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಸಂಪೂರ್ಣ ಅರಿವಿತ್ತು. ಆದರೆ ಸಂವಿಧಾನವನ್ನು ಸ್ವೀಕರಿಸಿದ 1950ರ ಜನವರಿ 26ರಿಂದಲೇ ಉದ್ಯೋಗದ ಹಕ್ಕನ್ನು ತಕ್ಷಣ ಜಾರಿಗೊಳಿಸುವುದು ವ್ಯಾವಹಾರಿಕವಾಗಿರಲಿಲ್ಲ. ಆದ್ದರಿಂದ ಅದನ್ನು ಸಂವಿಧಾನದ ನೀತಿ ನಿರ್ದೇಶಕ ತತ್ವಗಳಲ್ಲಿ ಸೇರಿಸಿ, ಸರ್ಕಾರವು ಆದಷ್ಟು ಬೇಗ ಉದ್ಯೋಗದ ಹಕ್ಕು ಜನರಿಗೆ ಲಭ್ಯವಾಗುವಂತೆ ಸೂಕ್ತ ನೀತಿ-ದೋರಣೆಗಳನ್ನು ರೂಪಿಸಬೇಕು ಎಂದು ಸೂಚಿಸಲಾಗಿತ್ತು.
ಈ ಹಿನ್ನೆಲೆಯಲ್ಲೇ 2005ರಲ್ಲಿ ಜಾರಿಗೆ ಬಂದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ ಒಂದು ಮಹತ್ವದ ಮೊದಲ ಹೆಜ್ಜೆಯಾಗಿತ್ತು. ಸಂವಿಧಾನ ಸ್ವೀಕಾರದ 55 ವರ್ಷಗಳ ನಂತರ, ಜನ ಸಂಘಟನೆಗಳು ಹಾಗೂ ಚಳವಳಿಗಳ ಒತ್ತಡದ ಫಲವಾಗಿ ಆಗಿನ ಕಾಂಗ್ರೆಸ್ ಸರ್ಕಾರ ಈ ಕಾನೂನನ್ನು ಜಾರಿಗೆ ತಂದಿತು.
ಲೋಕಸಭೆಯಲ್ಲಿ ಸುದೀರ್ಘ ಚರ್ಚೆಯ ಬಳಿಕ, ಎಲ್ಲ ಪಕ್ಷಗಳ ಸದಸ್ಯರು ಒಮ್ಮತದಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾನೂನನ್ನು ಅಂಗೀಕರಿಸಿ ಇತಿಹಾಸ ನಿರ್ಮಿಸಿದರು.
ಹಾಗಿದ್ದರೆ ಈ ಕಾನೂನು ಪರಿಪೂರ್ಣವಾಯಿತೇ? ಖಂಡಿತವಾಗಿಯೂ ಇಲ್ಲ. ಮಾನವ ಹಕ್ಕುಗಳು ಯಾವಾಗಲೂ ಪ್ರತಿ ವ್ಯಕ್ತಿಗೆ ಸಲ್ಲುವ ಹಕ್ಕುಗಳಾಗಿರಬೇಕು. ಆದರೆ ಈ ಕಾನೂನು ಪ್ರತಿ ವರ್ಷ ಒಂದು ಗ್ರಾಮೀಣ ಕುಟುಂಬಕ್ಕೆ 100 ದಿನಗಳ ಉದ್ಯೋಗದ ಖಾತ್ರಿ ಮಾತ್ರ ನೀಡುತ್ತಿತ್ತು. ನಮ್ಮ ಪಕ್ಕದ ರಾಜ್ಯ ಮಹಾರಾಷ್ಟ್ರದಲ್ಲಿ 1978ರಿಂದಲೇ ಉದ್ಯೋಗ ಖಾತ್ರಿ ಕಾನೂನಿನ ಅಡಿಯಲ್ಲಿ ಪ್ರತಿ ವ್ಯಕ್ತಿಗೆ 365 ದಿನಗಳ ಉದ್ಯೋಗದ ಹಕ್ಕು ನೀಡುವ ಕಾನೂನು ಜಾರಿಯಲ್ಲಿದೆ. ಈ ರೀತಿಯ ಕುಂದುಕೊರತೆಗಳನ್ನು ಸೂಚಿಸಬಹುದು. ಆದರೆ ಗ್ರಾಮೀಣ ಉದ್ಯೋಗ ಸೃಷ್ಟಿ ಹಾಗೂ ಉತ್ಪಾದಕ ಸ್ಥಿರ ಆಸ್ತಿ ನಿರ್ಮಾಣ—ಈ ಎರಡೂ ಗುರಿಗಳನ್ನು ಈಡೇರಿಸುವ ನಿಟ್ಟಿನಲ್ಲಿ ಈ ಕಾನೂನು ಕ್ರಾಂತಿಕಾರಿ ಹೆಜ್ಜೆಯಾಗಿತ್ತು.
ಈ ಕಾನೂನು ಜಾರಿಯಾದ ದಿನದಿಂದಲೇ ಬಂಡವಾಳಶಾಹಿಗಳು ಹಾಗೂ ಅವರ ಬಾಲಬಡಕರಾದ ಕೆಲ ಮಧ್ಯಮವರ್ಗದ ವಿಚಾರವಂತರು, ನಮ್ಮ ದೇಶವು ಇದರಿಂದ ದಿವಾಳಿಯಾಗುತ್ತದೆಂದು ಗುಲ್ಲೆಬ್ಬಿಸಿದ್ದರು. ಸ್ತ್ರೀ–ಪುರುಷರಿಗೆ ಸಮಾನ ಕೂಲಿಯ ಖಾತ್ರಿ ಗ್ರಾಮೀಣ ಶ್ರಮಿಕರಿಗೆ ದೊರಕಿದ ಪರಿಣಾಮ ಒಟ್ಟಾರೆ ಕೂಲಿ ದರ ಏರಿಕೆಯಾಗಿ ಮಾಲೀಕರಿಗೆ ಹೊಟ್ಟೆನೋವು ಶುರುವಾಯಿತು. ಬಂಡವಾಳದ ಕೈಗಾರಿಕೋದ್ಯಮಿಗಳಿಗೆ ಸವಲತ್ತು, ಸಬ್ಸಿಡಿ, ಸಾಲಮನ್ನ ಮುಂತಾದ ಬಕ್ಷಿಸ್‌ಗಳನ್ನು ನೀಡುವ ಸರ್ಕಾರಗಳ ವಿರುದ್ಧ ಪಟ್‌ಪಿಟ್ ಎನ್ನದ ಮಾಧ್ಯಮಗಳು, ಗ್ರಾಮೀಣ ಕೂಲಿಕಾರರಿಗೆ ಉದ್ಯೋಗದ ಹಕ್ಕು ನೀಡಲು ಈ ಕಾನೂನಿಗೆ ಮೀಸಲಿಟ್ಟ ಸಣ್ಣ ಮೊತ್ತದ ಮೇಲೆಯೇ ನಿರಂತರ ತಕರಾರು ಮಾಡುತ್ತಲೇ ಬಂದವು.
ಆದರೆ ವರ್ಷಗಳು ಕಳೆದಂತೆ ಗ್ರಾಮೀಣ ಉದ್ಯೋಗ ಖಾತರಿಗಾಗಿ ಬಜೆಟ್ ಮೊತ್ತ ಹೆಚ್ಚುತ್ತಲೇ ಹೋಯಿತು. ದೇಶ ದಿವಾಳಿಯಾಗುವ ಬದಲು, ಗ್ರಾಮೀಣ ಜನಜೀವನದಲ್ಲಿ ಸ್ಪಷ್ಟ ಸುಧಾರಣೆ ಕಂಡುಬಂದಿತು. ಆಫ್ರಿಕಾದ ದೇಶಗಳೂ ಕೂಡ ಈ ಕಾನೂನಿನ ಅಧ್ಯಯನಕ್ಕಾಗಿ ಭಾರತಕ್ಕೆ ಬರತೊಡಗಿದವು.
ಕಳೆದ 20 ವರ್ಷಗಳಲ್ಲಿ ಈ ಕಾನೂನು ಕೋಟ್ಯಂತರ ಮಾನವದಿನಗಳ ಉದ್ಯೋಗ ಸೃಷ್ಟಿಸಿದೆ. ನೀರು, ಮಣ್ಣು, ಕೃಷಿ, ಅರಣ್ಯ, ಜಾನುವಾರುಗಳ ಸಂರಕ್ಷಣೆ ಹಾಗೂ ಅವುಗಳ ಅಭಿವೃದ್ಧಿಯಲ್ಲಿ ಸಾಧಿಸಿದ ಪ್ರಗತಿ ಅಷ್ಟಿಷ್ಟಲ್ಲ. ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಕಾನೂನು, ಗ್ರಾಮೀಣ ಪ್ರದೇಶಗಳಿಂದ ನಗರಗಳತ್ತ ವಲಸೆ ಹೋಗುತ್ತಿದ್ದ ಲಕ್ಷಾಂತರ ಜನರ ಬದುಕನ್ನು ಸ್ಥಿರಗೊಳಿಸಿದೆ.
ಆದರೆ ಈ ಕಾನೂನು ಸರಿಯಾಗಿ ಅನುಷ್ಠಾನಗೊಂಡಿತೇ? ಖಂಡಿತವಾಗಿಯೂ ಇಲ್ಲ. ಅನೇಕ ಲೋಪದೋಷಗಳು ಇದ್ದವು. ಕಾನೂನು ಜಾರಿಯಾದ 4–5 ವರ್ಷಗಳಲ್ಲೇ ಗ್ರಾಮ ಪಂಚಾಯಿತಿ ಪದಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಭ್ರಷ್ಟಾಚಾರದ ಹೊಸಹೊಸ ವಿಧಾನಗಳನ್ನು ಕಂಡುಕೊಂಡರು. ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿ, ಕಾಂಟ್ರ್ಯಾಕ್ಟರ್‌ಗಳ ಮೂಲಕ ಯಂತ್ರಗಳನ್ನು ಬಳಸಿಕೊಂಡು ಕೆಲಸ ಮಾಡಿಸಿಕೊಂಡು ಹಣವನ್ನು ಜೇಬಿಗೆ ಹಾಕುವ ದಂಧೆಗಳು ನಡೆದಿವೆ.
ಈ ರೀತಿಯ ಭ್ರಷ್ಟಾಚಾರವನ್ನು ತಡೆಯಬೇಕೆಂದು ಮನರೆಗಾ ಕೂಲಿಕಾರರ ಸಂಘಟನೆಗಳು ಹೋರಾಟ ನಡೆಸಿವೆ. ನಮ್ಮ ಘನ ಸರ್ಕಾರಗಳು ರಾಜಕೀಯ ಬದ್ಧತೆ ತೋರಿದ್ದರೆ ಈ ಭ್ರಷ್ಟಾಚಾರವನ್ನು ತಡೆಯಲು ಸಾಧ್ಯವಿತ್ತು. ಆದರೆ ಅದನ್ನು ಮಾಡದೆ, ಈಗ ನಮ್ಮ ಒಕ್ಕೂಟದ ಮೋದಿ ಸರ್ಕಾರವು ಮನರೇಗಾವನ್ನೇ ರದ್ದುಗೊಳಿಸಿದೆ.
ಕೇವಲ ಅದರ ಹೆಸರನ್ನು ಬದಲಿಸಿ ‘ವಿಬಿಜಿ ರಾಮ್ ಜಿ’(ವಿಕಸಿತ್ ಭಾರತ ಗ್ಯಾರಂಟಿ ಫಾರ್ ರೋಜಗಾರ ಆಂಡ್ ಆಜೀವಿಕಾ ಮಿಷನ್ – ಗ್ರಾಮೀಣ) ಎಂಬ ಹೆಸರಿನ ಉದ್ಯೋಗ ಯೋಜನೆಯನ್ನು ತಂದಿರುವುದಾಗಿ ಹೇಳಲಾಗುತ್ತಿದೆ. ಇದಲ್ಲದೆ, 100 ದಿನಗಳ ಬದಲಾಗಿ ವರ್ಷಕ್ಕೆ 125 ದಿನ ಉದ್ಯೋಗ ನೀಡಲಾಗುತ್ತದೆ ಎಂದು ಡಿಂಡಿಮ ಬಾರಿಸಲಾಗುತ್ತಿದೆ. ಆದರೆ ಇಲ್ಲಿ ಉದ್ಯೋಗದ ಖಾತ್ರಿ ಇಲ್ಲ.
ಯಾಕೆಂದರೆ ಮನರೇಗಾದಲ್ಲಿ ಒಕ್ಕೂಟ ಸರ್ಕಾರದ ಬಜೆಟ್‌ಗೆ ಯಾವುದೇ ಮಿತಿ ಇರಲಿಲ್ಲ. ದೇಶದ ಗ್ರಾಮೀಣ ಭಾಗದ ಯಾರೇ ಆಗಲಿ ಉದ್ಯೋಗ ಕೇಳಿದಲ್ಲಿ, 100 ದಿನಗಳವರೆಗೆ ಉದ್ಯೋಗ ಒದಗಿಸುವ ಹೊಣೆಗಾರಿಕೆ ಸರ್ಕಾರದ ಮೇಲಿತ್ತು. ಆದರೆ ‘ರಾಮ್ ಜಿ’ ಯೋಜನೆಯಲ್ಲಿ ಅದು ಇಲ್ಲ. ದಿಲ್ಲಿ ಸರ್ಕಾರದ ಅಭಿವೃದ್ಧಿ ಯೋಜನೆ ಗುರುತಿಸಿದ ಪ್ರದೇಶಗಳಲ್ಲಿ, ನಿರ್ದಿಷ್ಟ ಕಾಮಗಾರಿಗಳಿಗೆ ಮಾತ್ರ ಸೀಮಿತ ಹಣಕಾಸು ವ್ಯವಸ್ಥೆ ಇದೆ.
ಅಷ್ಟೇ ಅಲ್ಲ, ಮನರೇಗಾದಲ್ಲಿ ಕೂಲಿ ಹಣವನ್ನು ಶೇ. 100ರಷ್ಟು ಒಕ್ಕೂಟ ಸರ್ಕಾರವೇ ನೀಡುತ್ತಿತ್ತು. ಈಗ ಹೊಸ ಕಾನೂನಿನಂತೆ ಒಕ್ಕೂಟ ಸರ್ಕಾರ ಕೇವಲ ಶೇ.60ರಷ್ಟು ಮಾತ್ರ ಒದಗಿಸುತ್ತದೆ; ಉಳಿದ 40ರಷ್ಟು ಹಣವನ್ನು ರಾಜ್ಯ ಸರ್ಕಾರಗಳು ನೀಡಬೇಕಾಗಿದೆ. ಜಿಎಸ್‌ಟಿ ಪಾಲು ಸರಿಯಾಗಿ ದೊರೆಯುತ್ತಿಲ್ಲವೆಂದು ರಾಜ್ಯ ಸರ್ಕಾರಗಳು ಈಗಾಗಲೇ ಬೊಬ್ಬೆ ಹೊಡೆಯುತ್ತಿರುವಾಗ, ಸಾಲದ ಭಾರದಲ್ಲಿ ಸೊರಗಿರುವ ರಾಜ್ಯ ಸರ್ಕಾರಗಳು ಈ ಶೇ.40ರಷ್ಟು ಹೊರೆ ಹೊರುವ ಸ್ಥಿತಿಯಲ್ಲಿ ಇಲ್ಲ. ಹೀಗಾಗಿ ಬಡಜನರ ಉದ್ಯೋಗದ ಹಕ್ಕನ್ನು ನಿರಾಕರಿಸುವ ಉದ್ದೇಶದಿಂದಲೇ ಈ ಹೊಸ ಕಾನೂನು ರೂಪಿಸಲಾಗಿದೆ.
ಮೋದಿ ಸರ್ಕಾರ ಉದ್ಯೋಗದ ಹಕ್ಕನ್ನು ಕೈಬಿಟ್ಟಿದ್ದು ಯಾಕೆ?
ಮನರೇಗಾ ಕಾನೂನಿನಿಂದಾಗಿ ಕೇವಲ ಉದ್ಯೋಗ ಸೃಷ್ಟಿ ಮತ್ತು ಗ್ರಾಮೀಣ ಸ್ಥಿರ ಉತ್ಪಾದಕ ಆಸ್ತಿ ನಿರ್ಮಾಣವಷ್ಟೇ ಅಲ್ಲ, ಇನ್ನೂ ಅನೇಕ ತಾತ್ವಿಕ ಅಂಶಗಳು ಕಾರ್ಯರೂಪಕ್ಕೆ ಬಂದವು.
ಮನರೇಗಾ ಕಾನೂನಿನ ಪರಿಣಾಮವಾಗಿ: ಗ್ರಾಮಸಭೆಗಳಲ್ಲಿ ಇವರೆಗೆ ಕೇವಲ 8–10 ಫಲಾನುಭವಿಗಳು ಮಾತ್ರ ಭಾಗವಹಿಸುತ್ತಿದ್ದ ಸ್ಥಿತಿಗೆ ಬದಲಾಗಿ, ಈಗ ನೂರಾರು ಕೂಲಿಕಾರರು, ಮಹಿಳೆಯರು, ದಲಿತರು ಹಾಗೂ ಹಿಂದುಳಿದ ವರ್ಗದ ಜನರು ಭಾಗವಹಿಸಿ ಯಾವ ಕಾಮಗಾರಿಗಳನ್ನು ಕೈಗೊಳ್ಳಬೇಕೆಂದು ತಾವೇ ನಿರ್ಧರಿಸಲು ಆರಂಭಿಸಿದರು.
ಚಿಕ್ಕ ಹಿಡುವಳಿದಾರರ ಸ್ವಂತ ಭೂಮಿಯಲ್ಲಿ ಕೃಷಿ ಹೊಂಡ, ಭೂಮಿ ಸಮತಲೀಕರಣ ಮುಂತಾದ ಕೆಲಸಗಳು ನಡೆದಿದ್ದು, ಬಡ ರೈತರ ಉತ್ಪಾದಕತೆ ಹೆಚ್ಚಳ ಕಂಡಿತು. ಕೃಷಿ ಕಾರ್ಮಿಕರು ಸಂಘಟಿತರಾಗುವ ಅವಕಾಶ ದೊರಕಿತು(ಕರ್ನಾಟಕದಲ್ಲಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಗಳಾದ ಗ್ರಾಕೂಸ್ ಮೊದಲಾದವುಗಳು ಲಕ್ಷಾಂತರ ಕೂಲಿಕಾರರನ್ನು ಸಂಘಟಿಸಿದ್ದು ಐತಿಹಾಸಿಕ ಬೆಳವಣಿಗೆಯಾಗಿದೆ).
ಪಂಚಾಯತ್ ಮಟ್ಟದ ನಿರ್ಧಾರ ಪ್ರಕ್ರಿಯೆಗಳಲ್ಲಿ ಕೂಲಿಕಾರರು, ಮಹಿಳೆಯರು, ದಲಿತರು ಹಾಗೂ ಹಿಂದುಳಿದ ವರ್ಗಗಳ ಸಹಭಾಗಿತ್ವ ಗಮನಾರ್ಹವಾಗಿ ಹೆಚ್ಚಿತು. ಮೊದಲ ಬಾರಿಗೆ ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರ ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡಿಕೆಯನ್ನು ಮಾಡಿತು.
ಈ ಎಲ್ಲ ಬೆಳವಣಿಗೆಗಳು ಮಹಾತ್ಮ ಗಾಂಧೀಜಿಯವರ ಗ್ರಾಮಸ್ವರಾಜ್ಯದ ಕಲ್ಪನೆಯೊಂದಿಗೆ ಹೊಂದಿಕೆಯಾಗುತ್ತವೆ. ಗಾಂಧೀಜಿ ಅಂತ್ಯೋದಯದಿಂದ ಸರ್ವೋದಯದ ಆರಂಭವಾಗಬೇಕು ಎಂದು ಹೇಳಿದ್ದರು. ಉದ್ಯೋಗ ಖಾತ್ರಿ ಯೋಜನೆ ಈ ಎರಡೂ ತಾತ್ವಿಕ ಅಂಶಗಳನ್ನು ಒಳಗೊಂಡಿತ್ತು.
ದೇಶದ ಎಲ್ಲ ಪ್ರಕೃತಿ ಸಂಪತ್ತನ್ನು ಬಂಡವಾಳಶಾಹಿಗಳಿಗೆ ಧಾರೆ ಎರೆಯುತ್ತಿರುವ ಮೋದಿ ಸರ್ಕಾರಕ್ಕೆ ಈ ರೀತಿಯ ಜನಪರ ಬೆಳವಣಿಗೆಗಳು ಹೇಗೆ ರುಚಿಸಬೇಕು? ಅದಾನಿ, ಅಂಬಾನಿ ಮೊದಲಾದ ಬಂಡವಾಳಶಾಹಿಗಳ ನಿರಂತರ ಒತ್ತಡದ ಪರಿಣಾಮವಾಗಿ, ಈ ಕಾನೂನನ್ನು ರದ್ದುಪಡಿಸುವ ಸಂಚು ನಡೆದಿರುವುದು ಸ್ಪಷ್ಟ. ಸರ್ಕಾರ ತನ್ನ ಸ್ವಾಭಾವಿಕ ಕಾರ್ಯಪದ್ದತಿಯಾದ ಮೋಸಗಾರಿಕೆಯನ್ನು ಅಳವಡಿಸಿಕೊಂಡು, 100 ದಿನಗಳ ಉದ್ಯೋಗವನ್ನು 125 ದಿನಗಳಿಗೆ ವಿಸ್ತರಿಸುವುದಾಗಿ ಹಾಗೂ ಪಾರದರ್ಶಕ ಆಡಳಿತಕ್ಕಾಗಿ ‘ವಿಬಿ ಜಿ ರಾಮ್ ಜಿ’ ಕಾನೂನು ತರುವುದಾಗಿ ಹೇಳಿ, ಮೊದಲಿನ ಉದ್ಯೋಗ ಖಾತ್ರಿ ಕಾನೂನನ್ನೇ ರದ್ದುಗೊಳಿಸಿದೆ. ಇದರ ಪರಿಣಾಮವಾಗಿ ಉದ್ಯೋಗ ಮುಂದಿನ ದಿನಗಳಲ್ಲಿ ‘ರಾಮಭರೋಸೆ’ ಆಗಲಿದೆ.
ಕಾರ್ಪೊರೇಟ್ ಲಾಭಕ್ಕೆ ಅನುಕೂಲ ಒದಗಿಸಲು ಸರ್ಕಾರ ರೈತ ವಿರೋಧಿ ಮೂರು ಕೃಷಿ ಕಾನೂನುಗಳನ್ನು ಜಾರಿಗೆ ತಂದಾಗ, ರೈತರು ದಿಲ್ಲಿಯ ಅಂಗಳದಲ್ಲಿ ಸುದೀರ್ಘ ಹೋರಾಟ ನಡೆಸಿ, 600ಕ್ಕೂ ಹೆಚ್ಚು ಹುತಾತ್ಮರ ಬಲಿದಾನದೊಂದಿಗೆ ಆ ಕಾನೂನುಗಳನ್ನು ರದ್ದುಗೊಳಿಸುವಲ್ಲಿ ಯಶಸ್ವಿಯಾದರು. ಅದೇ ರೀತಿಯಲ್ಲಿ ಗ್ರಾಮೀಣ ಕೂಲಿಕಾರರೂ ಕೂಡ ಸಂಘಟಿತರಾಗಿ, ಒಗ್ಗಟ್ಟು ತೋರಿಸಿ ತಮ್ಮ ಉದ್ಯೋಗದ ಹಕ್ಕನ್ನು ಕಾಪಾಡಿಕೊಳ್ಳಬೇಕಿದೆ.
ಈ ಲೇಖನ ಓದಿದ್ದೀರಾ?: ಮನರೇಗಾ ಬದಲಿಗೆ ವಿಬಿ-ಜಿ ರಾಮ್‌ಜಿ; ಗಾಂಧಿ ಕನಸಿಗೆ ಕೊಳ್ಳಿ ಇಟ್ಟ ಕೇಂದ್ರ
ಮೋದಿ ಸರ್ಕಾರಕ್ಕೆ ಪ್ರೀತಿ ಇರುವುದು ಕೇಂದ್ರಿತ ವ್ಯವಸ್ಥೆಗೆ, ಕಾರ್ಪೋರೆಟ್ ಹಿತರಕ್ಷಣೆಗೆ, ವರ್ಣಾಶ್ರಮ ಆಧಾರಿತ ಹಿಂದುತ್ವಕ್ಕೆ ಹಾಗೂ ಸ್ವದೇಶಿಯ ಹೆಸರಿನಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಅಭಿವೃದ್ಧಿಗೆ. ಇಂತಹ ಪರಿಸ್ಥಿತಿಯಲ್ಲಿ ದುಡಿಯುವ ವರ್ಗ, ಮಹಿಳೆಯರು, ದಲಿತರು ಜಾಗೃತರಾಗಿ ಸಂಘಟಿತರಾಗಿ ತಮ್ಮ ಹಕ್ಕುಗಳಿಗಾಗಿ, ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆಗಾಗಿ ಹಾಗೂ ನಿಜವಾದ ಜನತಂತ್ರದ ಅನುಷ್ಠಾನಕ್ಕಾಗಿ ಮುನ್ನಡೆಯುವುದಾದರೆ ಬಂಡವಾಳವಾಹಿಗಳ ಹಿತರಕ್ಷಣೆ ಹೇಗೆ ಸಾಧ್ಯ?
ಮನರೇಗಾದಿಂದ ಬೃಹತ್ ಬಂಡವಾಳವಾಹಿಗಳ ಹಿತರಕ್ಷಣೆ ಸಾಧ್ಯವಾಗುತ್ತಿಲ್ಲ. ಇದು ಬಡವರ ಹಕ್ಕಾಗಿರುವುದರಿಂದ ಉದ್ಯಮಿಗಳ ಪಾಲು ಮಾಡಲಾಗುವುದಿಲ್ಲ. ಏಕೆಂದರೆ ಈ ಕಾನೂನು ರಾಜ್ಯಗಳ ಹಿಡಿತದಲ್ಲಿದೆ. ಅದಕ್ಕಾಗಿಯೇ ಕೇಂದ್ರ ಗಾಂಧಿ ಹೆಸರಿನ ಉದ್ಯೋಗ ಖಾತ್ರಿ ಕಾನೂನನ್ನು ತೆಗೆದು ಹಾಕಿ, ಇದನ್ನು ರಾಮನ ಹೆಸರಿನಲ್ಲಿ ತನ್ನ ತೆಕ್ಕೆಗೆ ತೆದುಕೊಂಡು ಬಡವರ ಮೂಗಿಗೆ ತುಪ್ಪ ಹಚ್ಚುವ ಸುಳ್ಳು ಉದ್ಯೋಗ ಭರವಸೆಯ ಕಾನೂನನ್ನು ಜಾರಿಗೆ ತಂದು, ಗ್ರಾಮೀಣ ಕೂಲಿಕಾರರನ್ನು ಮೋಸಗೊಳಿಸುವ ಕುತಂತ್ರಕ್ಕೆ ಈ ಸರ್ಕಾರ ಕೈ ಹಾಕಿದೆ. ಈ ಮೂಲಕ ಬಂಡವಾಳಿಗರನ್ನು ಗ್ರಾಮ ಪಂಚಾಯತ್‌ಗಳಿಗೂ ತುರುಕುವ ಹುನ್ನಾರ ನಡೆಯುತ್ತಿದೆ.




