ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಯುದ್ಧ ಪರಿಸ್ಥಿತಿ ಈಗ ಜಾಗತಿಕ ಇಂಧನ ಮಾರುಕಟ್ಟೆಯ ಮೇಲೆ ದೊಡ್ಡ ಪರಿಣಾಮ ಬೀರುವ ಹಂತಕ್ಕೆ ತಲುಪಿದೆ. ಫೆಬ್ರವರಿ 28ರಂದು ಅಮೆರಿಕಾ – ಇಸ್ರೇಲ್ ಕೂಟ ಇರಾನ್ ಮೇಲೆ ಭಾರೀ ದಾಳಿ ನಡೆಸಿದ ಬಳಿಕ ಈ ಪ್ರದೇಶದಲ್ಲಿ ಉದ್ವಿಗ್ನತೆ ತೀವ್ರವಾಗಿದೆ. ಈ ದಾಳಿಯಲ್ಲಿ ಇರಾನ್‌ನ ಪರಮೋಚ್ಚ ನಾಯಕ ಅಲಿ ಖಮೇನಿ ಸೇರಿದಂತೆ ಹಲವು ಪ್ರಮುಖ ನಾಯಕರು ಸಾವನ್ನಪ್ಪಿದ್ದಾರೆ. ಜೊತೆಗೆ ಶಾಲೆಯಲ್ಲಿದ್ದ ಸುಮಾರು 165 ಮಕ್ಕಳು ಮೃತಪಟ್ಟಿದ್ದಾರೆ. ಈ ದಾಳಿಯ ಬಳಿಕ ಇರಾನ್ ಕಠಿಣ ಪ್ರತಿಕ್ರಿಯೆ ನೀಡಿದ್ದು, ಜಾಗತಿಕ ವ್ಯಾಪಾರದಲ್ಲಿ ಅತ್ಯಂತ ಪ್ರಮುಖವಾದ ಸಮುದ್ರ ಮಾರ್ಗಗಳಲ್ಲಿ ಒಂದಾದ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿರುವುದಾಗಿ ಘೋಷಿಸಿದೆ. ಹಾರ್ಮುಜ್ ಜಲಸಂಧಿ ಮೂಲಕವೇ ವಿಶ್ವದ ಬಹುಪಾಲು ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲ ಸಾಗಾಣಿಕೆ ನಡೆಯುತ್ತದೆ. ಈ ಮಾರ್ಗವನ್ನು ಮುಚ್ಚುವುದರಿಂದ ಜಾಗತಿಕ ಇಂಧನ ಸರಬರಾಜು ವ್ಯವಸ್ಥೆಯೇ ಅಸ್ತವ್ಯಸ್ತವಾಗುತ್ತದೆ.
ಇದರ ಜೊತೆಗೆ ಇರಾನ್,, ಕುವೈತ್, ಕತಾರ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (UAE) ದೇಶಗಳಲ್ಲಿರುವ ಅಮೆರಿಕ ಸೇನಾ ನೆಲೆಗಳ ಮೇಲೆ ತೀವ್ರ ದಾಳಿಗಳನ್ನು ನಡೆಸುತ್ತಿದೆ. ಈ ಕಾರಣದಿಂದ ಆ ದೇಶಗಳು ತಮ್ಮ ನೈಸರ್ಗಿಕ ಅನಿಲ ಮತ್ತು ಕಚ್ಚಾ ತೈಲ ಸಂಸ್ಕರಣಾ ಘಟಕಗಳನ್ನು ಒಂದೊಂದಾಗಿ ಮುಚ್ಚುವ ಪರಿಸ್ಥಿತಿ ಎದುರಾಗಿದೆ. ಯುದ್ಧದ ಪರಿಸ್ಥಿತಿಯಲ್ಲಿ ಸಂಸ್ಕರಣಾ ಘಟಕಗಳನ್ನು ನಿರಂತರವಾಗಿ ಕಾರ್ಯಗತಗೊಳಿಸುವುದು ಕಷ್ಟವಾಗುವುದರಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ.
ಈ ಬೆಳವಣಿಗೆಗಳ ಪರಿಣಾಮವಾಗಿ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಅಸ್ಥಿರತೆ ಹೆಚ್ಚಾಗಿದೆ. ಒಂದು ಕಡೆ ನೈಸರ್ಗಿಕ ಅನಿಲದ ಬೆಲೆ ಗಗನಕ್ಕೇರುತ್ತಿದ್ದರೆ, ಮತ್ತೊಂದು ಕಡೆ ಕಚ್ಚಾ ತೈಲದ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆಯಾಗುತ್ತಿದೆ. ಇದರ ನೇರ ಪರಿಣಾಮ ವಿಶ್ವದ ಅನೇಕ ದೇಶಗಳ ಆರ್ಥಿಕ ವ್ಯವಸ್ಥೆಯ ಮೇಲೆ ಬೀಳುವ ಸಾಧ್ಯತೆ ಇದೆ. ಕತಾರ್ ದೇಶದ ನೈಸರ್ಗಿಕ ಅನಿಲ ಉತ್ಪಾದನೆ ಪ್ರಮುಖ ಪಾತ್ರವಹಿಸುತ್ತದೆ. ಕತಾರ್ ವಿಶ್ವದ ಪ್ರಮುಖ ದ್ರವೀಕೃತ ನೈಸರ್ಗಿಕ ಅನಿಲ (LNG) ಉತ್ಪಾದಕ ರಾಷ್ಟ್ರಗಳಲ್ಲಿ ಒಂದಾಗಿದೆ. ಇಲ್ಲಿ ನೈಸರ್ಗಿಕ ಅನಿಲವನ್ನು ದ್ರವೀಕರಿಸುವ ಪ್ರಕ್ರಿಯೆ ಅತ್ಯಂತ ಸಂಕೀರ್ಣವಾಗಿರುತ್ತದೆ. ಅನಿಲವನ್ನು ದ್ರವ ರೂಪಕ್ಕೆ ತರಲು ಅದನ್ನು ಸುಮಾರು ಮೈನಸ್ 162 ಡಿಗ್ರಿ ಸೆಲ್ಸಿಯಸ್ ತಾಪಮಾನಕ್ಕೆ ತಂಪುಗೊಳಿಸಲಾಗುತ್ತದೆ. ಈ ಪ್ರಕ್ರಿಯೆ ನಿರಂತರವಾಗಿ ನಡೆಯಬೇಕು. ಒಮ್ಮೆ ಈ ವ್ಯವಸ್ಥೆ ನಿಂತರೆ ಸಂಪೂರ್ಣ ಘಟಕದ ತಾಪಮಾನ ಏರಿಕೆಯಾಗುತ್ತದೆ.
ಹೀಗಾಗಿ, ಈ ಪ್ರಕ್ರಿಯೆ ನಿಂತ ನಂತರ ಅದನ್ನು ಮತ್ತೆ ಆರಂಭಿಸುವುದು ಸುಲಭವಲ್ಲ. ಮರು ಕಾರ್ಯಗತಗೊಳಿಸಲು ಯಂತ್ರೋಪಕರಣಗಳನ್ನು ಸರಿಪಡಿಸಿ, ವ್ಯವಸ್ಥೆಯನ್ನು ಮತ್ತೆ ಮೈನಸ್ 162 ಡಿಗ್ರಿ ಸೆಲ್ಸಿಯಸ್ ತಾಪಮಾನಕ್ಕೆ ತಂಪುಗೊಳಿಸಬೇಕು. ಇದಕ್ಕೆ ಕನಿಷ್ಠ ಎರಡು ತಿಂಗಳುಗಳ ಕಾಲ ಬೇಕಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಇದು ನಾಳೆಯಿಂದ ಅಥವಾ ಇನ್ನೊಂದು ವಾರದಲ್ಲೇ ಯುದ್ಧವನ್ನ ನಿಲ್ಲಿಸಿದ್ರು ಕೂಡ ಎಲ್ಲವೂ ಮತ್ತೆ ಸರಿಯಾಗೋಕೆ ಇನ್ನೂ 2 ಅಥವಾ 3 ತಿಂಗಳು ಬೇಕಾಗಬಹುದು ಅಥವಾ 2-3 ತಿಂಗಳುಗಳ ಕಾಲ ಈ ಸಮಸ್ಯೆ ಹೀಗೇಯೇ ಮುಂದುವರೆಯತ್ತೆ. ಇದರ ಪರಿಣಾಮವಾಗಿ ಜಾಗತಿಕ ಮಟ್ಟದಲ್ಲಿ ಎಲ್‌ಪಿಜಿ ಪೂರೈಕೆಯ ಸುಮಾರು ಶೇ.20 ರಷ್ಟು, ಭಾರತದಲ್ಲಿ 40ರಷ್ಟು ಭಾಗ ತಾತ್ಕಾಲಿಕವಾಗಿ ಲಭ್ಯವಾಗದ ಪರಿಸ್ಥಿತಿ ಉಂಟಾಗಬಹುದು.
ಭಾರತದ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿದೆ. ಭಾರತ ತನ್ನ ಬಹುಪಾಲು ಎಲ್‌ಪಿಜಿಯನ್ನು ಪಶ್ಚಿಮ ಏಷ್ಯಾ ಅಥವಾ ಮಧ್ಯಪ್ರಾಚ್ಯ ರಾಷ್ಟ್ರಗಳಿಂದಲೇ ಆಮದು ಮಾಡಿಕೊಳ್ಳುತ್ತದೆ. ದೇಶಕ್ಕೆ ಬೇಕಾಗುವ ಎಲ್‌ಪಿಜಿಯ ಸುಮಾರು ಶೇ.90 ರಷ್ಟು ಭಾಗವನ್ನು ಭಾರತ ಆಮದು ಮೂಲಕವೇ ಪೂರೈಸಿಕೊಳ್ಳುತ್ತದೆ. ಇದರಲ್ಲಿ ಸುಮಾರು ಶೇ.55 ರಿಂದ 60 ರಷ್ಟು ಭಾಗವನ್ನು ನೇರವಾಗಿ ಅನಿಲ ರೂಪದಲ್ಲೇ ಆಮದು ಮಾಡಿಕೊಳ್ಳಲಾಗುತ್ತದೆ. ಉಳಿದ ಶೇ.40 ರಿಂದ 45 ರಷ್ಟು ಭಾಗವನ್ನು ದೇಶೀಯ ತೈಲ ಸಂಸ್ಕರಣಾಗಾರಗಳಿಂದ ಪಡೆಯಲಾಗುತ್ತದೆ.
ಭಾರತದ ಒಟ್ಟು ಎಲ್‌ಪಿಜಿ ಬಳಕೆಯಲ್ಲಿ ಸುಮಾರು ಶೇ.40 ರಿಂದ 45 ರಷ್ಟು ಭಾಗವನ್ನು ದೇಶದ ಸಂಸ್ಕರಣಾಗಾರಗಳೇ ಉತ್ಪಾದಿಸುತ್ತವೆ. ಪ್ರಮುಖವಾಗಿ ರಿಲಯನ್ಸ್ ಕಂಪನಿಯ ಜಾಮ್ನಗರ ಸಂಸ್ಕರಣಾಗಾರ, ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOCL) ಮತ್ತು ಭಾರತ್ ಪೆಟ್ರೋಲಿಯಂ (BPCL) ಕಂಪನಿಗಳ ಸಂಸ್ಕರಣಾಗಾರಗಳಿವೆ. ಈ ಘಟಕಗಳು ಕಚ್ಚಾ ತೈಲವನ್ನು ಸಂಸ್ಕರಿಸಿ ಎಲ್‌ಪಿಜಿ ಸೇರಿದಂತೆ ಹಲವು ಪೆಟ್ರೋಲಿಯಂ ಉತ್ಪನ್ನಗಳನ್ನು ಉತ್ಪಾದಿಸುತ್ತವೆ. ಆದರೆ ಇಲ್ಲಿ ಒಂದು ಪ್ರಮುಖ ಅಂಶ ಇದೆ. ಆದರೆ ಈ ಕಂಪನಿಗಳಿಗೆ ಬೇಕಾದ ಕಚ್ಚಾ ತೈಲವೂ ಅದೇ ಮಧ್ಯಪ್ರಾಚ್ಯ ದೇಶಗಳಿಂದ ಆಮದಾಗುತ್ತದೆ. ಅಂದರೆ ಕಚ್ಚಾ ತೈಲದ ಬೆಲೆ ಏರಿದರೆ ಅದರ ನೇರ ಪರಿಣಾಮ ಎಲ್‌ಪಿಜಿ ಉತ್ಪಾದನೆ ಮತ್ತು ಬೆಲೆಗಳ ಮೇಲೂ ಬೀಳುತ್ತದೆ. ಮಧ್ಯಪ್ರಾಚ್ಯದಲ್ಲಿ ಯುದ್ಧ ತೀವ್ರವಾದರೆ ಕಚ್ಚಾ ತೈಲದ ಪೂರೈಕೆ ಅಸ್ತವ್ಯಸ್ತವಾಗುವ ಸಾಧ್ಯತೆ ಹೆಚ್ಚುತ್ತದೆ. ಭಾರತದಲ್ಲಿ ಅಡುಗೆ ಗ್ಯಾಸ್ ಸಿಲಿಂಡರ್ ಬೆಲೆ ಇನ್ನಷ್ಟು ಏರಬಹುದು. ಸಾಮಾನ್ಯ ಕುಟುಂಬಗಳಿಗೆ ಇದು ದೊಡ್ಡ ಹೊರೆಯಾಗುತ್ತದೆ.
ಈಗಾಗಲೇ ದೆಹಲಿ ಹಾಗೂ ಬೆಂಗಳೂರಿನಂತ ನಗರಗಳಲ್ಲಿ ಸಿಲಿಂಡರ್ ಕ್ಷಾಮದಿಂದ ಬೇಯುತ್ತಿದೆ. ಈಗ ಈ ಪರಿಸ್ಥಿತಿ ಇನ್ನೂ ಹದಗೆಡುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ. ಈ ಎಲ್ಲಾ ಬೆಳವಣಿಗೆಗಳನ್ನು ನೋಡಿದರೆ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧವು ಕೇವಲ ಆ ಪ್ರದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ಅದು ಜಾಗತಿಕ ಆರ್ಥಿಕತೆಯ ಮೇಲೆಯೂ, ವಿಶೇಷವಾಗಿ ಇಂಧನ ಮಾರುಕಟ್ಟೆಯ ಮೇಲೆಯೂ ದೊಡ್ಡ ಪರಿಣಾಮ ಬೀರುತ್ತಿದೆ. ಭಾರತ ಸೇರಿದಂತೆ ಅನೇಕ ದೇಶಗಳು ಮಧ್ಯಪ್ರಾಚ್ಯದಿಂದ ಇಂಧನ ಆಮದು ಮಾಡುವುದರಿಂದ ಈ ಪರಿಸ್ಥಿತಿ ಮುಂದುವರಿದರೆ ಎಲ್‌ಪಿಜಿ ಪೂರೈಕೆ, ಬೆಲೆ ಹಾಗೂ ಸಾಮಾನ್ಯ ಜನರ ದಿನನಿತ್ಯದ ಬದುಕಿನ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಮಧ್ಯಪ್ರಾಚ್ಯದ ಈ ಉದ್ವಿಗ್ನ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಜಾಗತಿಕ ಇಂಧನ ಭದ್ರತೆ ಮತ್ತು ಆರ್ಥಿಕ ಸ್ಥಿರತೆಗೆ ದೊಡ್ಡ ಸವಾಲಾಗಿ ಪರಿಣಮಿಸುವ ಎಲ್ಲಾ ಸಾಧ್ಯತೆಗಳಿದೆ.
ಮಧ್ಯಪ್ರಾಚ್ಯದಲ್ಲಿ ಇಂದು ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯನ್ನು ನೋಡಿದಾಗ ಭಾರತಕ್ಕೆ ಒಂದು ದೊಡ್ಡ ಪ್ರಶ್ನೆ ಎದುರಾಗತ್ತೆ. ಅಮೆರಿಕಾ–ಇಸ್ರೇಲ್ ಕೂಟದ ಕ್ರಮಗಳಿಗೆ ಭಾರತ ಯಾವ ಮಟ್ಟಿಗೆ ಬೆಂಬಲ ನೀಡಬೇಕು ಎಂಬ ವಿಚಾರ ಈಗ ಚರ್ಚೆಗೆ ಕಾರಣವಾಗಿದೆ. ಇರಾನ್ ಮೇಲೆ ದಾಳಿ ನಡೆಯುವುದಕ್ಕಿಂತ ಕೇವಲ 48 ಗಂಟೆಗಳ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್ ಭೇಟಿ ನೀಡಿದ್ದು ಕೂಡ ಹಲವರ ಗಮನ ಸೆಳೆದಿತ್ತು. ಆ ಭೇಟಿಯ ಸಂದರ್ಭದಲ್ಲಿ ಇಸ್ರೇಲ್‌ಗೆ ಬೆಂಬಲ ವ್ಯಕ್ತಪಡಿಸುವ ಸಂದೇಶಗಳು ಹೊರಬಂದಿದ್ದವು. ಅಲ್ಲಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ “ಭಾರತ ಇಸ್ರೇಲ್ ಜೊತೆಗೆ ದೃಢವಾಗಿ ನಿಲ್ಲುತ್ತದೆ” ಎಂದು ಮೋದಿ ಘೋಷಣೆ ಮಾಡಿದ್ದರು. ರಾಜಕೀಯ ವಿಶ್ಲೇಷಕರು ಹೇಳುವಂತೆ, ಭಾರತವು ಮಧ್ಯಪ್ರಾಚ್ಯದ ಎಲ್ಲಾ ರಾಷ್ಟ್ರಗಳ ಜೊತೆ ಸಮತೋಲನದ ಸಂಬಂಧವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ವಿಶೇಷವಾಗಿ ಇರಾನ್ ಜೊತೆ ಭಾರತಕ್ಕೆ ಇತಿಹಾಸದಿಂದಲೇ ಆರ್ಥಿಕ ಮತ್ತು ಇಂಧನ ಸಂಬಂಧಗಳಿವೆ. ಭಾರತಕ್ಕೆ ಬೇಕಾಗುವ ಕಚ್ಚಾ ತೈಲ ಮತ್ತು ಅನಿಲದ ದೊಡ್ಡ ಭಾಗ ಈ ಪ್ರದೇಶದಿಂದಲೇ ಬರುತ್ತದೆ.

ಎಲ್ಲವೂ ತಿಳಿದಿದ್ದರೂ ಮೋದಿ ಸರ್ಕಾರ ಅಮೆರಿಕ-ಇಸ್ರೇಲ್ ಪಡೆಯತ್ತ ವಾಲಿದೆ. ಇಸ್ರೇಲ್ ಭೇಟಿಯ ವೇಳೆ “ಇಸ್ರೇಲ್ ಜೊತೆ ನಾವಿದ್ದೇವೆ” ಎಂದು ಹೇಳಿದ್ದು ಇರಾನ್‌ಗೆ ಸ್ಪಷ್ಟ ಸಂದೇಶ ರವಾನೆ ಆಗಿದೆ. ಇರಾನ್ ಈಗ ಹಾರ್ಮುಜ್ ಮುಚ್ಚಿ ಭಾರತಕ್ಕೆ ನೇರ ಹೊಡೆತ ನೀಡುತ್ತಿದೆ. ಇರಾನ್ ಜೊತೆ ಉತ್ತಮ ಸಂಬಂಧ ಕಾಪಾಡಿದ್ದರೆ, ಈ ದಾಳಿಗೆ ಭಾರತ ಸ್ಪಷ್ಟವಾಗಿ ವಿರೋಧ ವ್ಯಕ್ತಪಡಿಸಿದ್ದರೆ ಅಥವಾ ನಡುವಿನ ಸೇತುವೆಯಾಗಿದ್ದರೆ ಇಷ್ಟು ಬೇಗ ಈ ಬಿಕ್ಕಟ್ಟು ಬರುತ್ತಿರಲಿಲ್ಲ. ಯಾಕಂದ್ರೆ ಈಗಾಗಲೇ ಚೀನಾ ಮಾತ್ರ ಆ ಹಾರ್ಮುಜ್ ಜಲಸಂಧಿಯ ಮೂಲಕ ತೈಲ ಸಾಗಣೆ ಮಾಡುತ್ತಿರುವುದು. ಮಧ್ಯಪ್ರಾಚ್ಯದಲ್ಲಿ ಯಾವುದೇ ಯುದ್ಧ ಅಥವಾ ಉದ್ವಿಗ್ನತೆ ಉಂಟಾದರೆ ಅದರ ನೇರ ಪರಿಣಾಮ ಭಾರತದ ಇಂಧನ ಪೂರೈಕೆ, ಎಲ್‌ಪಿಜಿ ಬೆಲೆ ಮತ್ತು ಆರ್ಥಿಕ ವ್ಯವಸ್ಥೆಯ ಮೇಲೆ ಬೀಳುತ್ತದೆ.





