ರಾಜ್ಯಸಭೆಗೆ ತೆರಳುತ್ತಿರುವ ನಿತೀಶ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಇದರಿಂದಾಗಿ, ಮುಖ್ಯಮಂತ್ರಿ ಹುದ್ದೆಯು ಬಿಜೆಪಿ ಪಾಲಾಗಲಿದೆ ಎಂಬ ಚರ್ಚೆ ಶುರುವಾಗಿದೆ. ಸರ್ಕಾರದಲ್ಲಿ ಜೆಡಿಯುಗೆ ಪ್ರಬಲ ಹುದ್ದೆ ಕೊಡುವ ಅಗತ್ಯದಿಂದ, ನಿಶಾಂತ್ ಅವರಿಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡುವ ಸಾಧ್ಯತೆಯೂ ಇವೆ. ನಾಯಕತ್ವ ಬದಲಾವಣೆಯ ಸಂದರ್ಭದಲ್ಲಿ ನಿಶಾಂತ್ ಅವರನ್ನು ಸಕ್ರಿಯ ರಾಜಕೀಯಕ್ಕೆ ಪರಿಚಯಿಸುವುದು ಸಾಂಸ್ಥಿಕ ಸ್ಥಿರತೆಯನ್ನು ಖಾತ್ರಿ ಪಡಿಸುತ್ತದೆ. ಅವರು ಭವಿಷ್ಯದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಹೊರಹೊಮ್ಮಬಹುದು ಎಂಬ ಆಸೆ ಜೆಡಿಯುನಲ್ಲಿದೆ.
ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ 20 ವರ್ಷಗಳ ಆಡಳಿತ ಯುಗ ಅಂತ್ಯ ಕಂಡಿದೆ. ನಿತೀಶ್ ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿ ನಿತೀಶ್ ಅವರನ್ನು ರಾಜ್ಯಸಭೆಗೆ ಕಳಿಸುವ ಮೂಲಕ, ಬಿಹಾರ ರಾಜ್ಯ ಆಡಳಿತ ಮತ್ತು ರಾಜಕಾರಣದಿಂದ ಹೊರದಬ್ಬಿದೆ. ಇದೀಗ, ಬಿಹಾರದಲ್ಲಿ ಜೆಡಿಯು ಭವಿಷ್ಯವೇನು ಎಂಬ ಪ್ರಶ್ನೆ ಬಿಹಾರಿಗರಲ್ಲಿ ಕಾಡುತ್ತಿದೆ. ಉತ್ತರವಾಗಿ, ನಿತೀಶ್ ಪುತ್ರ ನಿಶಾಂತ್ ಕುಮಾರ್ ಅವರನ್ನು ರಾಜಕಾರಣಕ್ಕೆ ಕರೆತರುವ ಕಸರತ್ತುಗಳು ನಡೆಯುತ್ತಿವೆ. ಬಿಹಾರದಲ್ಲಿ ಮತ್ತೊಂದು ವಂಶ ರಾಜಕಾರಣ ತಲೆ ಎತ್ತುತ್ತಿದೆ.
ಇಷ್ಟು ವರ್ಷ ರಾಜಕೀಯದಿಂದ ದೂರವಿದ್ದ ತಮ್ಮ 50 ವರ್ಷದ ಮಗನನ್ನ ರಾಜಕೀಯ ಮುನ್ನೆಲೆಗೆ ತರುವ ಧಾವಂತದಲ್ಲಿ ನಿತೀಶ್ ಅವರಿದ್ದಾರೆ. ಮಗನ ರಾಜಕೀಯ ಪ್ರವೇಶಕ್ಕೆ ನಿತೀಶ್ ಕುಮಾರ್ ತಮ್ಮ ಒಪ್ಪಿಗೆ ನೀಡಿದ್ದಾರೆ. ನಿಶಾಂತ್ ಕುಮಾರ್ ಅವರು ತಮ್ಮ ತಂದೆ ಕಟ್ಟಿ ಬೆಳೆಸಿದ, 20 ವರ್ಷಗಳಿಂದ ಅಧಿಕಾರದಲ್ಲಿ ಮುನ್ನಡೆಸಿರುವ ಜೆಡಿಯುಗೆ ಮಹತ್ವದ ತಿರುವು ನೀಡುವರೇ? ಶಕ್ತಿ ತುಂಬಬಹುದೇ? ಎಂಬ ಚರ್ಚೆಗಳು ನಡೆಯುತ್ತಿವೆ.
ನಿತೀಶ್ ಕುಮಾರ್ ಮೂಲತಃ ಬಿಹಾರದ ಭಕ್ತಿಯಾರ್ಪುರದವರು. ಅವರ ಕುಟುಂಬ ಇನ್ನೂ ಭಕ್ತಿಯಾರ್ಪುರದಲ್ಲಿ ವಾಸಿಸುತ್ತಿದೆ. 1975ರ ಜುಲೈ 20, ರಂದು ಜನಿಸಿದ ನಿಶಾಂತ್ ಕುಮಾರ್ ಅವರು ನಿತೀಶ್ ಕುಮಾರ್ ಅವರ ಏಕೈಕ ಪುತ್ರ. ಅವಿವಾಹಿತರಾಗಿರುವ ನಿಶಾಂತ್ ಆಧ್ಯಾತ್ಮದ ಕಡೆಗೆ ಹೆಚ್ಚು ಒಲವು ಹೊಂದಿರುವವರು. ಅಪರೂಪಕ್ಕೊಮ್ಮೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಇವರು ಈವರೆಗೆ ರಾಜಕೀಯದಿಂದಲೂ, ತಮ್ಮ ತಂದೆ ಜೆಡಿಯುನಿಂದಲೂ ದೂರವೇ ಉಳಿದ್ದಿದ್ದವರು.
ಭಾರತೀಯ ರಾಜಕಾರಣದಲ್ಲಿ ವಂಶ ರಾಜಕಾರಣ ಮುಂದುವರಿದೇ ಬಂದಿದೆ. ಪಕ್ಷದಲ್ಲಿ ಉನ್ನತ ಹುದ್ದೆಯಲ್ಲಿದ್ದವರು ತಮ್ಮ ಮಕ್ಕಳು ಸೇರಿದಂತೆ ಕುಟುಂಬದವರನ್ನು ತಮ್ಮ ಉತ್ತರಾಧಿಕಾರಿಗಳಾಗಿ ಬೆಳೆಸಿದ್ದೂ ಇದೆ. ಆದರೆ, ಅಂತಹ ಅನೇಕ ರಾಜಕೀಯ ಉತ್ತರಾಧಿಕಾರಿಗಳಿಗಿಂತ ಭಿನ್ನವಾಗಿ, ನಿಶಾಂತ್ ಬೆಳೆದುಬಂದಿದ್ದಾರೆ. ಅವರು ತಮ್ಮ ಜೀವನದ ಬಹುಪಾಲು ಸಮಯವನ್ನು ರಾಜಕೀಯ ಮತ್ತು ಪ್ರಚಾರದಿಂದ ದೂರವಿಟ್ಟಿದ್ದಾರೆ.
ನಿಶಾಂತ್ ಕುಮಾರ್ ವಿವಿಧ ನಗರಗಳಲ್ಲಿ ಶಿಕ್ಷಣ ಪಡೆದಿದ್ದಾರೆ. ಪಾಟ್ನಾದ ಸೇಂಟ್ ಕರೆನ್ಸ್ ಶಾಲೆಯಲ್ಲಿ ಮತ್ತು ನಂತರ ಮಸ್ಸೂರಿಯ ಮಾನವ ಭಾರತಿ ಇಂಡಿಯಾ ಇಂಟರ್ನ್ಯಾಷನಲ್ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದಾರೆ. ನಿಶಾಂತ್ ಕುಮಾರ್ ಬಿಐಟಿ ಮೆಸ್ರಾದಿಂದ ಪದವಿ ಪಡೆದು ಸಾಫ್ಟ್ ವೇರ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ. ನಿತೀಶ್ ಕುಮಾರ್ ಎಂಜಿನಿಯರಿಂಗ್ ಪದವಿಯನ್ನೂ ಹೊಂದಿದ್ದಾರೆ.

ರಾಂಚಿಯ ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (BIT)ಯಲ್ಲಿ ಸಾಫ್ಟ್‌ವೇರ್ ಎಂಜಿನಿಯರಿಂಗ್ ಶಿಕ್ಷಣ ಪಡೆದಿರುವ ನಿಶಾಂತ್, ರಾಜಕೀಯ ಜೀವನ ಬೇಡವೆಂದು ದೂರ ಉಳಿದಿದ್ದರು. ಶಾಂತ ಸ್ವಭಾವಿಯೂ ಆಗಿರುವ ನಿಶಾಂತ್, ಆಧ್ಯಾತ್ಮಿಕತೆ ಮೇಲೆ ಹೆಚ್ಚು ಆಸಕ್ತಿ ಹೊಂದಿದ್ದರು ಎಂದು ಅವರ ಕುಟುಂಬದ ಆಪ್ತ ಮೂಲಗಳು ಹೇಳುತ್ತವೆ. ನಿಶಾಂತ್‌ರನ್ನು ಶಿಕ್ಷಿತ, ಬುದ್ಧಿವಂತ ಮತ್ತು ಸ್ಥಿರ ಮನಸ್ಸಿನವರು ಎಂದೂ ಜೆಡಿಯು ನಾಯಕರು ಬಣ್ಣಿಸುತ್ತಾರೆ.
ನಿಶಾಂತ್ ಕುಮಾರ್ ಜನಮನದಿಂದ ದೂರವಿದ್ದಾರೆ. ಅವರ ಒಟ್ಟು ಆಸ್ತಿ ₹3.5 ಕೋಟಿ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಚರಾಸ್ತಿ ಸುಮಾರು ₹1.98 ಕೋಟಿ ಮೌಲ್ಯದ್ದಾಗಿವೆ. ಅವರ ಹೆಚ್ಚಿನ ಸಂಪತ್ತು ಸರ್ಕಾರಿ ಶಾಲಾ ಶಿಕ್ಷಕಿಯಾಗಿದ್ದ ಅವರ ತಾಯಿ ಮಂಜು ಸಿನ್ಹಾ ಅವರಿಂದ ಆನುವಂಶಿಕವಾಗಿ ಬಂದಿದೆ ಎನ್ನಲಾಗಿದೆ. ನಿತೀಶ್ ಕುಮಾರ್ ಅವರ ಪತ್ನಿ ಮಂಜು ಸಿನ್ಹಾ ಅವರು ಮೇ 2007ರಲ್ಲಿ ನಿಧನರಾಗಿದ್ದಾರೆ.
ನಿತೀಶ್ ಕುಮಾರ್ ಅವರು ನಳಂದ ಜಿಲ್ಲೆಯ ಕಲ್ಯಾಣ್ ಬಿಘಾ ಗ್ರಾಮದಲ್ಲಿ ಕೃಷಿ ಭೂಮಿಯನ್ನು ಹೊಂದಿದ್ದಾರೆ. ಆನುವಂಶಿಕವಾಗಿ ಪಡೆದಿದ್ದಾರೆ. ಕಲ್ಯಾಣ್ ಬಿಘಾದಲ್ಲಿ ಕೃಷಿಯೇತರ ಭೂಮಿಯನ್ನು ಸಹ ಹೊಂದಿದ್ದಾರೆ. ಅವರು ಭಕ್ತಿಯಾರ್ಪುರದ ಹಕಿಕತ್ಪುರ ಪ್ರದೇಶದಲ್ಲಿ ಪೂರ್ವಜರ ಮನೆ ಮತ್ತು ಭೂಮಿಯನ್ನು ಸಹ ಹೊಂದಿದ್ದಾರೆ. ಅವರು ಪಾಟ್ನಾದ ಕಂಕರ್ಬಾಗ್‌ನಲ್ಲಿ ಜಮೀನೊಂದನ್ನ ಹೊಂದಿದ್ದಾರೆ ಎಂದು ಹೇಳಲಾಗುತ್ತದೆ.
ಈ ಸುದ್ದಿ ಓದಿದ್ದೀರಾ? ಬಿಹಾರದಲ್ಲಿ ಲಾಲೂ-ನಿತೀಶ್ ಸಮಾಜವಾದಿ ಪರ್ವ ಮುಗಿಸಿದ ಬಿಜೆಪಿ; ಬಂಗಾಳವೇ ಮುಂದಿನ ಗುರಿ
ನಿಶಾಂತ್ ಕುಮಾರ್ ಅವರಿಗೆ ಇನ್ನೂ ಮದುವೆಯಾಗಿಲ್ಲ. ಅವರು ಸದ್ಯ ಪಾಟ್ನಾದಲ್ಲಿ ವಾಸಿಸುತ್ತಿದ್ದಾರೆ. ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದನ್ನ ತಪ್ಪಿಸಿಕೊಳ್ಳುವ ಇವರು ಇಲ್ಲಿಯವರೆಗೆ ಯಾವುದೇ ರಾಜಕೀಯ ಹುದ್ದೆ ಅಥವಾ ಚುನಾವಣೆಯಲ್ಲಿ ಭಾಗವಹಿಸಿಲ್ಲ. ನಿತೀಶ್ ಕುಮಾರ್ ಅವರು ಸುದೀರ್ಘ ಆಡಳಿತ ನಡೆಸಿದ್ದರೂ, ನಿತೀಶ್ ಅವರು ತಮ್ಮ ಪುತ್ರ ರಾಜಕೀಯವಾಗಿ ಬೆಳೆಯಬೇಕೆಂದು ಬಯಸಿರಲಿಲ್ಲ. ನಿತೀಶ್ ಮತ್ತು ನಿಶಾಂತ್ ಕುಟುಂಬ ಆಧಾರಿತ ರಾಜಕಾರಣದಿಂದ ದೂರವಿದ್ದರು ಎಂದು ಆಪ್ತರು ಹೇಳುತ್ತಾರೆ.
ಆದರೂ, ನಿಶಾಂತ್ ಅವರು ರಾಜಕೀಯಕ್ಕೆ ಬರಬೇಕು, ಪಕ್ಷಕ್ಕೆ ನಾಯಕತ್ವ ನೀಡಬೇಕು, ಪಕ್ಷವನ್ನು ಮುನ್ನಡೆಸಬೇಕೆಂದು ಜೆಡಿಯು ಒಳಗೆ ಆಂತರಿಕ ಬೇಡಿಕೆಯನ್ನು ಹೆಚ್ಚಿಸಿತ್ತು. ರಾಜಕೀಯದಿಂದ ದೂರವಿರುವ ಅವರ ನಿಲುವನ್ನು ಬದಲಿಸುವಂತೆ ಒತ್ತಾಯಿಸಲಾಗಿತ್ತು ಎಂದು ವರದಿಗಳು ಹೇಳುತ್ತಿವೆ.
ಇದೆಲ್ಲದರ ನಡುವೆ, ಕಳೆದ ವರ್ಷ ಬಿಹಾರ ವಿಧಾನಸಭಾ ಚುನಾವಣೆಗೆ ಸ್ವಲ್ಪ ಮೊದಲು, ನಿಶಾಂತ್ ಕುಮಾರ್ ಇದ್ದಕ್ಕಿದ್ದಂತೆ ಹೇಳಿಕೆಯೊಂದನ್ನ ನೀಡಿದ್ದರು. “ಜನರು ಖಂಡಿತವಾಗಿಯೂ ನನ್ನ ತಂದೆಗೆ (ನಿತೀಶ್ ಕುಮಾರ್) ಅವಕಾಶ ನೀಡುತ್ತಾರೆ. ಅವರು ಬಹಳಷ್ಟು ಕೆಲಸ ಮಾಡಿದ್ದಾರೆ ಮತ್ತು ಅದನ್ನು ಮುಂದುವರಿಸುತ್ತಾರೆ” ಎಂದಿದ್ದರು.
ಇದೀಗ, ನಿತೀಶ್ ಅವರು ರಾಜ್ಯ ರಾಜಕಾರಣದಿಂದ ನಿರ್ಗಮಿಸುತ್ತಿರುವ ಸಮಯದಲ್ಲಿ, ಅವರನ್ನು ಬಿಹಾರ ರಾಜಕೀಯಕ್ಕೆ ಕರೆತರಲಾಗುತ್ತಿದೆ. ನಿಶಾಂತ್ ಕೂಡ ರಾಜಕೀಯ ಪ್ರವೇಶಕ್ಕೆ ಸಮ್ಮತಿಸಿದ್ದಾರೆ. ವಂಶಾಡಳಿತವನ್ನು ಮುನ್ನಡೆಸಲು ಸಜ್ಜಾಗಿದ್ದಾರೆ.
ಬಿಹಾರದ ರಾಜಕೀಯ ಕ್ಷೇತ್ರದಲ್ಲಿ ಪಕ್ಷಗಳ ಸಾಂಪ್ರದಾಯಿಕ ಬೆಂಬಲ ವರ್ಗವು ಹೆಚ್ಚು ಸ್ಪರ್ಧಾತ್ಮಕ ರಾಜಕಾರಣಕ್ಕಿಂತ, ಭಾವನಾತ್ಮಕವಾಗಿ ಸಂಪರ್ಕದೊಂದಿಗೆ ಬೆಸೆದುಕೊಂಡಿದೆ. ಆದ್ದರಿಂದ, ಪಕ್ಷದಲ್ಲಿ ನಿತೀಶ್ ನಂತರದ ಸ್ಥಾನವನ್ನು ಅವರ ಮಗನೇ ಭರ್ತಿ ಮಾಡಬೇಕೆಂದು ಜೆಡಿಯು ಬಯಸಿದೆ.
ನಿಶಾಂತ್ ರಾಜಕೀಯ ಪ್ರವೇಶವು ವರ್ಷಗಳಿಂದ ನಿತೀಶ್ ಕುಮಾರ್ ಅವರ ಪರವಾಗಿ ನಿಂತಿರುವ ಕುರ್ಮಿ ಸಮುದಾಯ, ಹಿಂದುಳಿದ ವರ್ಗಗಳು ಹಾಗೂ ದಲಿತ ಸಮುದಾಯಗಳ ಮೇಲೆ ಪ್ರಭಾವ ಬೀರುತ್ತದೆ ಎಂದು ಜೆಡಿಯು ನಾಯಕರು ಭಾವಿಸಿದ್ದಾರೆ.

ರಾಜ್ಯಸಭೆಗೆ ತೆರಳುತ್ತಿರುವ ನಿತೀಶ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಇದರಿಂದಾಗಿ, ಮುಖ್ಯಮಂತ್ರಿ ಹುದ್ದೆಯು ಬಿಜೆಪಿ ಪಾಲಾಗಲಿದೆ. ಸರ್ಕಾರದಲ್ಲಿ ಜೆಡಿಯುಗೆ ಪ್ರಬಲ ಹುದ್ದೆ ಕೊಡುವ ಅಗತ್ಯದಿಂದ, ನಿಶಾಂತ್ ಅವರಿಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡುವ ಸಾಧ್ಯತೆಯೂ ಇವೆ. ನಾಯಕತ್ವ ಬದಲಾವಣೆಯ ಸಂದರ್ಭದಲ್ಲಿ ನಿಶಾಂತ್ ಅವರನ್ನು ಸಕ್ರಿಯ ರಾಜಕೀಯಕ್ಕೆ ಪರಿಚಯಿಸುವುದು ಸಾಂಸ್ಥಿಕ ಸ್ಥಿರತೆಯನ್ನು ಖಾತ್ರಿ ಪಡಿಸುತ್ತದೆ. ಅವರು ಭವಿಷ್ಯದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿಯೂ ಹೊರಹೊಮ್ಮಬಹುದು ಎಂಬ ಆಸೆ ಜೆಡಿಯುನಲ್ಲಿದೆ.
ಮತ್ತೊಂದು ಸಂಗತಿಯೆಂದರೆ, ನಿಶಾಂತ್ ಅವರ ರಾಜಕೀಯ ಪ್ರವೇಶವನ್ನು ಬಿಹಾರದ ಪ್ರಮುಖ ವಿರೋಧ ಪಕ್ಷ ಅರ್‌ಜೆಡಿ ಸಂಭ್ರಮಿಸುತ್ತಿದೆ ಮತ್ತು ಜೆಡಿಯು ನಾಯಕರ ಕಾಲೆಳೆಯುತ್ತಿದೆ. ಏಕೆಂದರೆ, ಈ ಹಿಂದೆ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರು ರಾಜಕೀಯಕ್ಕೆ ಬಂದಾಗ, ನಿತೀಶ್ ಕುಮಾರ್ ಅವರು ವಂಶಾಭಿಮಾನ ಮತ್ತು ವಂಶ ರಾಜಕಾರಣವನ್ನು ಟೀಕಿಸಿದ್ದರು. ಇದೀಗ, ನಿತೀಶ್ ಕುಮಾರ್ ಅವರು ಅದೇ ವಂಶಾಡಳಿತಕ್ಕೆ ಜೋತು ಬಿದ್ದಿದ್ದು, ನಿತೀಶ್‌ರನ್ನು ಆರ್‌ಜೆಡಿ ಕೆಣಕುತ್ತಿದೆ.
ಅಲ್ಲದೆ, ಕ್ಯಾಮೆರಾ ಮುಂದೆ ಕಾಣಿಸಿಕೊಂಡಾಗಲೆಲ್ಲಾ ನಿಶಾಂತ್ ಅವರು ಸಂಕ್ಷಿಪ್ತವಾಗಿ ಮತ್ತು ನೇರವಾಗಿ ಮಾತನಾಡುತ್ತಿದ್ದರೂ, ಎಂದಿಗೂ ಆಳವಾದ ರಾಜಕೀಯ ಪ್ರವೃತ್ತಿಯನ್ನು ಪ್ರದರ್ಶಿಸಿಲ್ಲ. ರಾಜಕೀಯದಲ್ಲಿ ತಮಗೆ ಯಾವುದೇ ನಿರ್ದಿಷ್ಟ ಆಸಕ್ತಿ ಇಲ್ಲವೆಂದೇ ಹೇಳುತ್ತಿದ್ದರು. ಹೀಗಾಗಿ, ರಾಜಕೀಯ ತಳ-ಬುಡ ತಿಳಿಯದ, ರಾಜಕೀಯದಲ್ಲಿ ಪಳಗದ ನಿತಾಂತ್ ಅವರು ಈಗ ಏಕಾಏಕಿ ರಾಜಕೀಯ ಪ್ರವೇಶಿಸುತ್ತಿರುವುದು ಮತ್ತು ಅವರು ಪಕ್ಷದಲ್ಲಿ ಮತ್ತು ಸರ್ಕಾರದಲ್ಲಿ ಉನ್ನತ ಹುದ್ದೆಯನ್ನು ಪಡೆಯಲಿದ್ದಾರೆ. ಅನುಭವ ಇಲ್ಲದಿರುವ ನಿತಾಂತ್ ಅವರ ನೇತೃತ್ವದಲ್ಲಿ ಜೆಡಿಯು ತನ್ನ ಪ್ರಭಾವ ಕಳೆದುಕೊಳ್ಳಬಹುದು. ಇದು, ಬಿಜೆಪಿಗೂ ತೊಡಕುಂಟು ಮಾಡಬಹುದು. ಪರಿಣಾಮ, ಬಿಜೆಪಿ-ಜೆಡಿಯು ಕುರಿತು ಜನಾಭಿಪ್ರಾಯ ಬದಲಾಗಿ, ಮುಂದಿನ ದಿನಗಳಲ್ಲಿ ತಮಗೆ ಅನುಕೂಲವಾಗಬಹುದು ಎಂಬ ಲೆಕ್ಕಾಚಾರವೂ ಆರ್‌ಜೆಡಿಯಲ್ಲಿದೆ.




