ಗುತ್ತಿಗೆ ವ್ಯವಸ್ಥೆಯಲ್ಲಿನ ಸಮಸ್ಯೆಗಳನ್ನು ಸರಿಪಡಿಸಬೇಕೆಂಬ ಗುರಿಗಿಂತ ಸೈದ್ಧಾಂತಿಕ ವಿರೋಧಿಯನ್ನು ಮುಗಿಸಬೇಕೆಂಬ ವೈಯಕ್ತಿಕ ದಾಳಿಯೇ ಬಿಜೆಪಿಗೆ ಪ್ರಧಾನವಾಗಿರುವಂತೆ ಕಾಣುತ್ತಿದೆ
ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಗುತ್ತಿಗೆದಾರ ಮತ್ತು ಬಿಜೆಪಿ ಕಾರ್ಯಕರ್ತರೂ ಆಗಿದ್ದ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡ ಬಳಿಕ, ‘ಗುತ್ತಿಗೆದಾರರ ಸಮಸ್ಯೆಗಳು’ ರಾಜಕೀಯ ಅಸ್ತ್ರದ ಭಾಗವಾದವು. ಸಂತೋಷ್ ಪಾಟೀಲ್ ಅವರು ನೇರವಾಗಿ ಅಂದಿನ ಸಚಿವ ಕೆ.ಎಸ್.ಈಶ್ವರಪ್ಪನವರ ವಿರುದ್ಧ ಆಪಾದನೆ ಮಾಡಿ, ಸಾವಿಗೆ ಶರಣಾಗಿದ್ದರು. ಈಶ್ವರಪ್ಪನವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯಿಸಿ ಅಂದಿನ ವಿರೋಧ ಪಕ್ಷವಾದ ಕಾಂಗ್ರೆಸ್ ಯಶಸ್ವಿಯೂ ಆಗಿತ್ತು.
ಅದಾಗಿ, ಎರಡು ವರ್ಷ ಕಳೆದರೂ, ಗುತ್ತಿಗೆದಾರರ ಆತ್ಮಹತ್ಯೆಗಳು ಘಟಿಸುವುದು ಅಥವಾ ಅಕಾಲಿಕ ಮರಣಕ್ಕೆ ತುತ್ತಾಗುವುದು ಇವತ್ತಿಗೂ ನಿಂತಿಲ್ಲ. ಈಗ ಗುತ್ತಿಗೆದಾರ ಸಚಿನ್ ಪಾಂಚಾಳ ಅವರು ಬೀದರ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಸಂಬಂಧ, ಸಚಿವ ಪ್ರಿಯಾಂಕ್ ಖರ್ಗೆಯವರ ಆಪ್ತ ರಾಜು ಕಪನೂರ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ. ರಾಜು ನೀಡಿದ ಕಿರುಕುಳದಿಂದ ಬೇಸತ್ತಿರುವುದಾಗಿ ಸಚಿನ್ ಡೆತ್ ನೋಟ್ ಬರೆದಿದ್ದಾರೆ. ಈ ಕಾರಣ ಇಟ್ಟುಕೊಂಡು ವಿಪಕ್ಷ ನಾಯಕರು, ”ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಬೇಕು” ಎಂದು ಆಗ್ರಹಿಸುತ್ತಿದ್ದಾರೆ. ಪ್ರಕರಣವನ್ನು ಸರ್ಕಾರ ಸಿಐಡಿ ತನಿಖೆಗೆ ವಹಿಸಿದೆ. ಇತ್ತ ಸಿಬಿಐ ತನಿಖೆ ಮಾಡಬೇಕೆಂದು ಬಿಜೆಪಿ ಪಟ್ಟು ಹಿಡಿದಿದೆ. ‘ಬಟ್ಟೆ ಹರಿದುಕೊಂಡರೂ ರಾಜೀನಾಮೆ ಕೊಡುವುದಿಲ್ಲ’ ಎಂದಿರುವ ಪ್ರಿಯಾಂಕ್ ಅವರು, ಈ ಪ್ರಕರಣದಲ್ಲಿ ಭಾಗಿಯಾಗದೆಯೂ ಇರಬಹುದು. ಆದರೆ ಗುತ್ತಿಗೆದಾರರ ಬಿಕ್ಕಟ್ಟುಗಳ ಕುರಿತು ಕಾಂಗ್ರೆಸ್ ಸರ್ಕಾರವೂ ಗಂಭೀರವಾಗಿಲ್ಲ, ಬಿಜೆಪಿ ಕಾಲದ ಸಮಸ್ಯೆಗಳೇ ಮುಂದುವರಿಯುತ್ತಿವೆ ಎಂಬುದು ಈ ಪ್ರಕರಣದಿಂದ ಸ್ಪಷ್ಟವಾಗುತ್ತದೆ.
ಬಿಜೆಪಿ ಅಧಿಕಾರದಲ್ಲಿದ್ದ ಅವಧಿಯಲ್ಲಿ ಪತ್ರಿಕಾಗೋಷ್ಠಿಯೊಂದರ ವೇಳೆ ಅಂದಿನ ಕೆಪಿಸಿಸಿ ಮಾಧ್ಯಮ ಸಂಯೋಜಕ ಸಲೀಂ ಮತ್ತು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಅವರ ನಡುವೆ ನಡೆದ ಪಿಸುಮಾತು ವಿಡಿಯೊದಲ್ಲಿ ರೆಕಾರ್ಡ್ ಆಗಿ, ಭಾರೀ ಸುದ್ದಿಯಾಗಿತ್ತು. ‘ಜಲಸಂಪನ್ಮೂಲ ಇಲಾಖೆಯಲ್ಲಿ ಮೊದಲೆಲ್ಲ 6 ರಿಂದ 8 ಪರ್ಸೆಂಟ್ ಇತ್ತು. ಡಿಕೆಶಿ ಬಂದ ಮೇಲೆ 12 ಪರ್ಸೆಂಟ್ ಮಾಡಿದರು. ಡಿ.ಕೆ.ಶಿವಕುಮಾರ್ ಕಲೆಕ್ಷನ್ ಗಿರಾಕಿ’ ಎಂದೆಲ್ಲ ಮಾತನಾಡಿಕೊಂಡಿದ್ದು ವಿವಾದ ಸೃಷ್ಟಿಸಿತ್ತು.
ಇದನ್ನೂ ಓದಿರಿ: ‘ನಮ್ಮ ದಲಿತ ನಾಯಕ’ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಲ್ಲ ಎಂದ ಕಾಂಗ್ರೆಸ್
ಬೊಮ್ಮಾಯಿಯವರ ಅವಧಿಯಲ್ಲಿ ಕಮಿಷನ್ ದಂಧೆ ತಾರಕಕ್ಕೇರಿ 40% ಮುಟ್ಟಿದ್ದು ದಾಖಲೆ ಬರೆದಿತ್ತು. ಬೊಮ್ಮಾಯಿಯವರದ್ದು ಭ್ರಷ್ಟ ಸರ್ಕಾರ ಎಂಬ ಟೀಕೆ ದೊಡ್ಡಮಟ್ಟದಲ್ಲಿ ಚರ್ಚೆ ಹುಟ್ಟಿಹಾಕಿತು. ‘ಪೇಸಿಎಂ’ನಂತಹ ಕ್ಯಾಂಪೇನ್ ಕೈಗೆತ್ತಿಕೊಂಡು ಸರ್ಕಾರವನ್ನು ಉರುಳಿಸುವಲ್ಲಿ ಕಾಂಗ್ರೆಸ್ ಯಶಸ್ವಿಯಾಯಿತು. ಆದರೆ ಸರ್ಕಾರ ಬದಲಾಯಿತೇ ಹೊರತು, ಗುತ್ತಿಗೆದಾರರ ಪರಿಸ್ಥಿತಿಗಳು ಬದಲಾಗಲಿಲ್ಲ.
ಗುತ್ತಿಗೆ ವ್ಯವಸ್ಥೆಯನ್ನು, ಕಾಲ ಕಾಲಕ್ಕೆ ಆಗುವ ಬೆಳವಣಿಗೆಗಳನ್ನು ನಾವು ಅರ್ಥಮಾಡಿಕೊಳ್ಳದೆ, ಪರಿಹಾರ ಮಾರ್ಗಗಳು ದೊರಕುವುದಿಲ್ಲ. ಒಂದು ಪೂರ್ವನಿಯೋಜಿತ ಒಪ್ಪಂದದಂತೆ ಭ್ರಷ್ಟಾಚಾರ ನಡೆಯುತ್ತದೆ. ನಾವೊಂದು ಭ್ರಷ್ಟಾಚಾರದ ಜಾಲದಲ್ಲಿದ್ದೇವೆ ಎಂದು ಗೊತ್ತಿದ್ದೇ ಗುತ್ತಿಗೆ ಪಡೆಯುವವರು ಕೊನೆಗೆ ಆತ್ಮಹತ್ಯೆಯ ದಾರಿಯನ್ನೂ ಹಿಡಿಯುತ್ತಾರೆಂದರೆ- ಅವರ ಮೇಲಿರುವ ಒತ್ತಡ, ಅಧಿಕಾರಿ ವರ್ಗದ ಕಿರುಕುಳ ದೊಡ್ಡಮಟ್ಟದಲ್ಲಿರುತ್ತದೆ. ಮತ್ತೊಂದೆಡೆ ಪ್ರಾಮಾಣಿಕ ಅಧಿಕಾರಿಗಳನ್ನು ನಿಯಂತ್ರಣದಲ್ಲಿಡುವ ಕೆಲಸವನ್ನು ರಾಜಕಾರಣಿಗಳು ನಿರಂತರವಾಗಿ ಮಾಡುತ್ತಲೇ ಇರುತ್ತದೆ.
ಬಿಜೆಪಿ ಅವಧಿಯಲ್ಲಿ ಒಬ್ಬರು ಸಚಿವರ ಸುತ್ತ ನಡೆದ ಘಟನೆಯೊಂದನ್ನು ಖಡಕ್ ಅಧಿಕಾರಿಯೊಬ್ಬರು ಖಾಸಗಿ ಮಾತುಕತೆಯಲ್ಲಿ ವಿವರಿಸಿದ್ದುಂಟು. ಗುತ್ತಿಗೆದಾರರನ್ನೆಲ್ಲ ಒಟ್ಟಿಗೆ ಕೂರಿಸಿಕೊಂಡು ಸಭೆ ಮಾಡುತ್ತಿದ್ದ ಸಚಿವರು, ”ನೋಡ್ರಪ್ಪ, ಎಲ್ಲ ದಾಖಲೆಗಳನ್ನು ಈ ಅಧಿಕಾರಿಗೆ ಕೊಡಿ, ಪೇಮೆಂಟ್‌ನೆಲ್ಲ ಈ ವ್ಯಕ್ತಿಗೆ ಕೊಡಿ” ಎಂದು ಆರ್‌ಎಸ್‌ಎಸ್ ಮುಖಂಡರೊಬ್ಬರನ್ನು ತೋರಿಸಿದ್ದರಂತೆ. ಗುತ್ತಿಗೆದಾರರಿಗೂ ಆರ್‌ಎಸ್‌ಎಸ್ ವ್ಯಕ್ತಿಗೂ ಯಾವ ಸಂಬಂಧ? ಕಾನೂನಿನಲ್ಲಾಗಲಿ, ಆಡಳಿತ ಕ್ರಮದಲ್ಲಾಗಲಿ ಇವರ ಹಸ್ತಕ್ಷೇಪಕ್ಕೆ ಅವಕಾಶವಿಲ್ಲ. ಆದರೂ ಅನ್ಯ ವ್ಯಕ್ತಿಗೆ ಪೇಮೆಂಟ್ ಸಂದಾಯ ಮಾಡಿ ಎನ್ನುವಷ್ಟರ ಮಟ್ಟಿಗೆ ಆ ಸಚಿವರು ಒಂದು ಹೆಜ್ಜೆ ಮುಂದಿಟ್ಟಿದ್ದರು ಎಂದು ಆ ಅಧಿಕಾರಿ ಮಾಹಿತಿ ಹಂಚಿಕೊಂಡಿದ್ದರು.
ಮೊದಲೆಲ್ಲ 10 ಪರ್ಸೆಂಟ್ ಇತ್ತು. ಅದನ್ನು ನಲವತ್ತು ಪರ್ಸೆಂಟ್‌ಗೆ ಏರಿಸಿದ್ದು ಬಿಜೆಪಿ ಸರ್ಕಾರ. ಮೊದಲೆಲ್ಲ ಕೆಲಸ ಆದಮೇಲೆ ಬಿಲ್ ಪಡೆಯುವಾಗ ಇಂತಿಷ್ಟು ಹಣವನ್ನು ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಗುತ್ತಿಗೆದಾರರು ಕೊಡುವ ಪದ್ಧತಿ ಇತ್ತು. ಬಿಜೆಪಿ ಅವಧಿಯಲ್ಲಿ ಕೆಲಸ ಆಗುವುದಕ್ಕೆ ಮೊದಲೇ ದುಡ್ಡನ್ನು ಗುತ್ತಿಗೆದಾರರು ನೀಡಬೇಕಾದ ಪದ್ಧತಿ ಚಾಲ್ತಿಗೆ ಬಂತು.
ವರ್ಕ್ ಆರ್ಡರ್ (ಕಾರ್ಯಾದೇಶ) ಇಲ್ಲದೆ ಕೆಲಸ ಮಾಡಿಸುವುದು ನಡೆಯುತ್ತದೆ. ಸಂತೋಷ್ ಪಾಟೀಲ್ ವರ್ಕ್ ಆರ್ಡರ್ ಇಲ್ಲದೆ ಕೆಲಸ ಮಾಡಿದ್ದರು ಎಂಬುದನ್ನು ಗಮನಿಸಬೇಕು. ಇಂತಹ ಸಂದರ್ಭದಲ್ಲಿ ರಾಜಕಾರಣಿಗಳು ಗುತ್ತಿಗೆದಾರರ ಜೀವ ಹಿಂಡಿಬಿಡುತ್ತಾರೆ. ಯಾವುದಾದರೂ ತುರ್ತು ಕಾಮಗಾರಿ ಆಗಬೇಕಿದ್ದಾಗ ಕಾರ್ಯಾದೇಶ ಇಲ್ಲದೆಯೇ ಕೆಲಸಗಳು ನಡೆಯುತ್ತವೆ, ಆ ನಂತರ ವರ್ಕ್ ಆರ್ಡರ್ ಆಗುವುದು ಕಳೆದ ಹಲವು ವರ್ಷಗಳಿಂದಲೂ ನಡೆದುಕೊಂಡು ಬಂದಿದೆ. ದೊಡ್ಡ ದೊಡ್ಡ ಗುತ್ತಿಗೆ ಕುಳಗಳು ಆರಾಮವಾಗಿ ಇದ್ದರೂ ಚಿಕ್ಕಪುಟ್ಟ ಗುತ್ತಿಗೆದಾರರು ಸದಾ ಒತ್ತಡದಲ್ಲಿ ಅಲೆದಾಡುತ್ತಿರುತ್ತಾರೆ. ಬಡ್ಡಿ ದುಡ್ಡಿಗೆ ತಂದ ಸಾಲ ಬೆಳೆಯುತ್ತಲೇ ಇರುತ್ತದೆ. ಕಮಿಷನ್ ಕೊಡದಿದ್ದರೆ ಅಧಿಕಾರಿಗಳು ಕಚೇರಿಯಿಂದ ಕಚೇರಿಗೆ ಅಲೆದಾಡಿಸುತ್ತಾರೆ.
40 ಪರ್ಸೆಂಟ್ ಸರ್ಕಾರದ ವಿರುದ್ಧ ಗುಡುಗಿ ಅಧಿಕಾರಕ್ಕೆ ಬಂದ ಕಾಂಗ್ರೆಸ್, ಗುತ್ತಿಗೆದಾರರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕಿತ್ತು. ಇದಕ್ಕೆ ಸಾಂಸ್ಥಿಕ ಸ್ವರೂಪದ ಉತ್ತರವನ್ನು ಕಂಡುಕೊಳ್ಳಬೇಕಿತ್ತು. ಗುತ್ತಿಗೆದಾರರ ವಿಚಾರದಲ್ಲಿ ಒಂದು ಸ್ಪಷ್ಟ ನೀತಿ, ನಿರೂಪಣೆ ಈ ವೇಳೆಗೆ ಆಗಬೇಕಿತ್ತು. ವಿಚಿತ್ರವೆಂದರೆ ಒಬ್ಬೊಬ್ಬ ಸಚಿವರು, ಒಂದೊಂದು ರೀತಿ ಗುತ್ತಿಗೆ ಸಮಸ್ಯೆಯನ್ನು ನಿರ್ವಹಿಸುತ್ತಾರೆ.
ಗುತ್ತಿಗೆದಾರ ಹಣ ಬಿಚ್ಚದಿದ್ದರೆ ಫೈಲ್ ಧೂಳು ಹಿಡಿಯುತ್ತದೆ. ಕಾರಣಗಳನ್ನು ಹೇಳಿ ಪೆಂಡಿಂಗ್ ಇಡುತ್ತಾರೆ. ಇಂತಹ ಸಮಸ್ಯೆ ಬಗೆಹರಿಸಲೆಂದೇ ಟೋಕನ್ ವ್ಯವಸ್ಥೆ ಇದೆ. ಅಂದರೆ, ಕಂತುಕಂತಿನಲ್ಲಿ ಬಿಡುಗಡೆಯಾಗುವ ಅನುದಾನವನ್ನು ಮೊದಲು ಕಾಮಗಾರಿ ಮಾಡಿದವರಿಗೆ ಹಂಚಿಕೆ ಮಾಡುವುದು ಟೋಕನ್ ವ್ಯವಸ್ಥೆ. ಆದರೆ ಯಾವಾಗ ಮೊದಲಿರುವ 10 ಜನರನ್ನು ಕಡೆಗಣಿಸಿ, 11ನೇ ವ್ಯಕ್ತಿಗೆ ಹಣ ಬಿಡುಗಡೆಯಾಗುತ್ತದೆಯೋ, ಅದು ಭ್ರಷ್ಟಾಚಾರದ ಸ್ಪಷ್ಟ ನಿದರ್ಶನ. ಕಮಿಷನ್ ಕೊಟ್ಟು ಟೋಕನ್ ಪದ್ಧತಿಯನ್ನು ಸದರಿ ಗುತ್ತಿಗೆದಾರ ಓವರ್ ಟೇಕ್ ಮಾಡಿರುತ್ತಾನೆ! ಇದನ್ನು ತಡೆಗಟ್ಟಲು ಕೆಲವು ಅಧಿಕಾರಿಗಳು ನಿಯಮಗಳನ್ನು ರೂಪಿಸಿದ್ದರು. ಸಾಫ್ಟ್‌ವೇರ್‌ಗಳನ್ನು ಚಾಲ್ತಿಗೆ ತರುವ ಕೆಲಸ ಮಾಡಿದ್ದರು. ಆದರೂ ಆ ವ್ಯವಸ್ಥೆಯಲ್ಲಿ ಆಡಳಿತ ವರ್ಗದ ಇಚ್ಛಾಶಕ್ತಿ ಪ್ರದರ್ಶನವಾಗುತ್ತಿಲ್ಲ.
ಗುತ್ತಿಗೆ ವ್ಯವಸ್ಥೆಯಲ್ಲಿ ತಿಮಿಂಗಿಲಾಕಾರದ ಭ್ರಷ್ಟಾಚಾರ ನಡೆಯುವುದೂ ಉಂಟು. ಬೃಹತ್ ನೀರಾವರಿ ಇಲಾಖೆಯಲ್ಲಿ ಆಗುವ ಭ್ರಷ್ಟಾಚಾರಗಳು ಇದಕ್ಕೆ ಸ್ಪಷ್ಟ ಉದಾಹರಣೆ. ಗುತ್ತಿಗೆದಾರನೇ ಎಲ್ಲ ಪ್ರಾಜೆಕ್ಟ್ ರೂಪಿಸಿ, ಸಂಬಂಧಪಟ್ಟ ಇಂಜಿನಿಯರ್‌ಗಳ ಸಹಿಯನ್ನೂ ಪಡೆದುಕೊಂಡು, ಶೂನ್ಯ ಅಥವಾ ಕಳಪೆ ಕಾಮಗಾರಿಗೆ ಕೋಟಿ ಕೋಟಿ ನುಂಗುವುದೂ ನಡೆದುಬಂದಿದೆ. ಹೇಮಾವತಿ ಎಡದಂಡೆ ನಾಲೆ ಕಾಮಗಾರಿಯ ಸಂಬಂಧ ಆಗಿದ್ದ ಬೃಹತ್ ಭ್ರಷ್ಟಾಚಾರವನ್ನು ‘ಈದಿನ.ಕಾಂ’ ಹೊರಗೆಳೆದಿತ್ತು.
ಇದನ್ನೂ ಓದಿರಿ: ಕಲಬುರಗಿ | ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೊಡುವ ಪ್ರಶ್ನೆಯೇ ಉದ್ಭವಿಸಲ್ಲ : ಅಜಯ್ ಸಿಂಗ್
ಇನ್ನೊಂದೆಡೆ ಗುತ್ತಿಗೆದಾರರಾಗಿ ಬಂದು, ದೊಡ್ಡಮಟ್ಟದಲ್ಲಿ ಹಣ ಮಾಡಿಕೊಂಡು ಶಾಸಕರಾಗಿ ಆಯ್ಕೆಯಾದವರು ನಮ್ಮ ರಾಜ್ಯದಲ್ಲಿದ್ದಾರೆ. ಈ ವಿಚಾರದಲ್ಲಿ ಎಲ್ಲ ಪಕ್ಷಗಳೂ ಸೆಕ್ಯುಲರ್! ಎಲ್ಲ ಕಡೆಯೂ ಗುತ್ತಿಗೆದಾರರು ಕುರ್ಚಿ ಹಿಡಿದಿದ್ದಾರೆ.
ಗುತ್ತಿಗೆ ಪದ್ಧತಿಯ ಭ್ರಷ್ಟಾಚಾರವು ಬಹಳ ಹಳೆಯ ಸಮಸ್ಯೆ. ಇದಕ್ಕೆ ಪರಿಹಾರವನ್ನು ಕಂಡುಕೊಳ್ಳುವುದು ಇಂದಿನ ತುರ್ತು. ಪರಿಹಾರ ಮಾರ್ಗಗಳಿಗಾಗಿ ಶಾಸನ ಸಭೆಯಲ್ಲಿ ಚರ್ಚೆಯಾಗಬೇಕು. ಬದಲಾವಣೆಗೆ ಬೇಕಾದ ಸಾಂಸ್ಥಿಕ ಸ್ವರೂಪಗಳಿಗಾಗಿ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗಳ ಸಮಿತಿ ರಚಿಸಿ ಶಿಫಾರಸು ಪಡೆಯಬೇಕು. ಅದುವೇ ಪರಿಹಾರ ಮಾರ್ಗ.
ಆದರೆ ಈಗ ನಡೆಯುತ್ತಿರುವುದು ವ್ಯಕ್ತಿಗತ ದಾಳಿಯಷ್ಟೇ. ಸೈದ್ಧಾಂತಿಕವಾಗಿ ಆರ್‌ಎಸ್‌ಎಸ್ ವಿಚಾರಗಳನ್ನು ಬಲವಾಗಿ ವಿರೋಧಿಸಿರುವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ದ್ವೇಷ ಹುಟ್ಟುಹಾಕುವ ಕಸರತ್ತನ್ನು ಸಂಘಪರಿವಾರ ಮಾಡುತ್ತಿದೆ. ಸಚಿನ್ ಪಾಂಚಾಳ ಅವರು ನೇರವಾಗಿ ಪ್ರಿಯಾಂಕ್ ಖರ್ಗೆಯವರ ಹೆಸರನ್ನು ಉಲ್ಲೇಖಿಸಿದ್ದರೆ, ಈಗ ನಡೆಯುತ್ತಿರುವ ದಾಳಿಗೆ ಅರ್ಥವಿರುತ್ತಿತ್ತೇನೋ. ಆದರೆ ಇಲ್ಲಿ ವ್ಯವಸ್ಥೆಯನ್ನು ಸರಿಪಡಿಸಬೇಕೆಂಬ ನೆಲೆಗಿಂತ ಸೈದ್ಧಾಂತಿಕ ವಿರೋಧಿಯನ್ನು ಮುಗಿಸಬೇಕೆಂಬ ವೈಯಕ್ತಿಕ ದಾಳಿಯೇ ಪ್ರಧಾನವಾಗಿರುವಂತೆ ಕಾಣುತ್ತಿದೆ.

ಯತಿರಾಜ್ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.




