ಅಲೆಮಾರಿ, ಅರೆ ಅಲೆಮಾರಿ ಅಡವಿ ಶಿಕಾರಿ ಸಮುದಾಯಕ್ಕೆ ಇಂದಿಗೂ ಸ್ವಂತ ಭೂಮಿ ಇಲ್ಲ, ಶಾಶ್ವತ ವಾಸದ ಮನೆಗಳಿಲ್ಲ, ಮೂಲಭೂತ ಸೌಕರ್ಯಗಳಿಲ್ಲ, ತಾತ್ಕಾಲಿಕ ಶೆಡ್‌ಗಳಲ್ಲಿಯೇ ಜೀವನ. ಅಂತಹ ಒಂದು ಅಲೆಮಾರಿ ಕುಟುಂಬದ ಬದುಕಿನ ಚಿತ್ರಣ ಇಲ್ಲಿದೆ...
ಅಡವಿ ಶಿಕಾರಿ ಸಮುದಾಯವು ಕರ್ನಾಟಕದ ಉತ್ತರ ಭಾಗದಲ್ಲಿ- ವಿಶೇಷವಾಗಿ ಗದಗ, ಧಾರವಾಡ, ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ವಾಸಿಸುವ ಪಾರಂಪರಿಕ ಅರಣ್ಯಾವಲಂಬಿ ಸಮುದಾಯವಾಗಿದೆ. ಹೆಸರೇ ಸೂಚಿಸುವಂತೆ, ಈ ಸಮುದಾಯದವರು ತಲೆಮಾರುಗಳಿಂದಲೂ ಕಾಡು ಪ್ರಾಣಿಗಳ ಬೇಟೆ, ಹಕ್ಕಿ ಹಿಡಿಯುವಿಕೆ, ಮೀನುಗಾರಿಕೆ ಮತ್ತು ಜೇನು ಬಿಡಿಸುವುದು ಮುಖ್ಯ ಜೀವನಾಧಾರವಾಗಿ ಮಾಡಿಕೊಂಡಿದ್ದರು. ಅಲೆಮಾರಿ ಅಥವಾ ಅರೆ-ಅಲೆಮಾರಿ ಜೀವನಶೈಲಿಯನ್ನು ಅನುಸರಿಸುವ ಈ ಸಮುದಾಯದವರು ಸಾಮಾನ್ಯವಾಗಿ ಗ್ರಾಮಗಳ ಹೊರವಲಯದಲ್ಲಿ ಪ್ರತ್ಯೇಕವಾಗಿ ನೆಲೆಸಿರುತ್ತಾರೆ.
ಲಭ್ಯವಿರುವ ಅಂದಾಜುಗಳ ಪ್ರಕಾರ, ಕರ್ನಾಟಕದಲ್ಲಿ ಈ ಸಮುದಾಯದ ಜನಸಂಖ್ಯೆ 2 ರಿಂದ 3 ಲಕ್ಷದ ನಡುವೆ ಇರಬಹುದು. ಬಾಗಲಕೋಟೆ ಜಿಲ್ಲೆಯೊಂದರಲ್ಲೇ ಸುಮಾರು 92,831 ಮಂದಿ ಈ ಸಮುದಾಯಕ್ಕೆ ಸೇರಿದ್ದು, ಬಾಗಲಕೋಟೆ, ಬಾದಾಮಿ ಹಾಗೂ ಹುನಗುಂದ ತಾಲೂಕುಗಳಲ್ಲಿ ಹೆಚ್ಚಿನ ಜನಸಾಂದ್ರತೆ ಕಂಡುಬರುತ್ತದೆ. ಈ ಸಂಖ್ಯೆಗಳು ಹಳೆಯ ಅಧಿಕೃತ ಅಂದಾಜುಗಳ ಆಧಾರದಲ್ಲಿವೆ; ಇತ್ತೀಚಿನ ಜಾತಿ ಗಣತಿ ಅಥವಾ ಸಮೀಕ್ಷೆಗಳಲ್ಲಿ ಇನ್ನಷ್ಟು ನಿಖರ ಮಾಹಿತಿ ಲಭ್ಯವಾಗಬಹುದು.
ಬ್ರಿಟಿಷ್ ಆಳ್ವಿಕೆಯ ಅರಣ್ಯ ಕಾಯ್ದೆಗಳು ಮತ್ತು ಸ್ವಾತಂತ್ರ್ಯಾನಂತರದ ನಿಯಮಾವಳಿಗಳು ಈ ಸಮುದಾಯದ ಪಾರಂಪರಿಕ ಕುಲಕಸುಬನ್ನು(ಬೇಟೆ ಮತ್ತು ಅರಣ್ಯ ಉತ್ಪನ್ನ ಸಂಗ್ರಹ) ಬಲವಂತವಾಗಿ ನಿಲ್ಲಿಸಿದವು. ಇದರ ಪರಿಣಾಮವಾಗಿ ಬಹುತೇಕರು ಕೂಲಿ ಕೆಲಸ, ಕೃಷಿ ಕೂಲಿ ಅಥವಾ ಪಶುಸಂಗೋಪನೆಗೆ ಮುಖಾಮುಖಿಯಾಗಿದ್ದಾರೆ. ಆದರೂ, ಮಳೆಗಾಲದಲ್ಲಿ ಹಳ್ಳ-ಹೊಳೆಗಳಲ್ಲಿ ಮೀನುಗಾರಿಕೆ ಮತ್ತು ಬೇಸಿಗೆಯಲ್ಲಿ ಜೇನುಗೂಡು ಹುಡುಕಿ ಜೇನುತುಪ್ಪ ಸಂಗ್ರಹಿಸುವುದನ್ನು ಅನೇಕರು ಮುಂದುವರೆಸಿದ್ದಾರೆ. ಇದು ಅವರ ಸಾಂಸ್ಕೃತಿಕ ಗುರುತು ಮತ್ತು ಜೀವನಶೈಲಿಯ ಅವಿಭಾಜ್ಯ ಅಂಗವಾಗಿದೆ.

ಶಾಶ್ವತ ಮನೆ
ಈ ಕುರಿತು ಬಾಗಲಕೋಟೆ ಜಿಲ್ಲೆಯ ಕೆರೂರು ಗ್ರಾಮದ ರುಕಮ್ಮವ್ವ ಅವರು ಈ ದಿನ.ಕಾಮ್ ಜತೆ ಮಾತನಾಡಿ, “ಜೋಳ, ಸೂರ್ಯಕಾಂತಿ ಹಾಗೂ ಕಡಲೆ ಬೆಳೆಗಳ ಕಾಲದಲ್ಲಿ ಸುಮಾರು ಎರಡು ತಿಂಗಳು ಜೇನು ಮಾರಾಟ ಮಾಡಿ ಜೀವನ ಮಾಡ್ತಿವಿ. ನಮ್ಮ ಅಜ್ಜ-ಮುತ್ತಜ್ಜರ ಕಾಲದಿಂದಲೂ ಇದೇ ಕೆಲಸ ಐತಿ ನಮ್ದು, ಮೊದಲು ಕಾಡಿನ್ಯಾಗ ಬೇಟೆಯಾಡಿ ಬದುಕು ಸಾಗಿಸ್ತಿದ್ವಿ. ಆದರೆ ಸರ್ಕಾರದವರು ಅದನ್ನು ಬಂದ್ ಮಾಡಿದ ಮ್ಯಾಲ ರೈತರ ಹೊಲದಾಗ ಮುಂಜಾನೆಯಿಂದ ಸಂಜೆ ತನಕ ಅಲೆದಾಡಿ ಜೇನುಗೂಡು ಹುಡುಕಿ ಜೇನು ಬಿಡಿಸಿ ಮಾರಾಟ ಮಾಡಬೇಕಾದ ಪರಿಸ್ಥಿತಿ ಬಂದೈತಿ” ಎಂದರು.
ಒಂದು ದಿನಕ್ಕೆ ಎಷ್ಟು ಜೇನು ಗೂಡುಗಳು ಸಿಗುತ್ತವೆ ಎಂಬ ಪ್ರಶ್ನೆಗೆ “ದೇವರು ಕೊಟ್ಟಷ್ಟು ಸಿಗತೈತ್ರಿ. ಒಂದೊಂದು ಬಾರಿ ಜೇನುಗೂಡುಗಳೇ ಸಿಗುವುದಿಲ್ರೀ. ಹೆಂಗಾದರೂ ಮಾಡಿ ಜೀವನ ಸಾಗಿಸಬೇಕಲ್ರೀ” ಎಂದು ತಮ್ಮ ಅಳಲು ತೋಡಿಕೊಂಡರು.
“ಸದ್ಯ ಒಂದು ಕೆಜಿ ಜೇನುತುಪ್ಪ ಸುಮಾರು 800 ರೂಪಾಯಿಗೆ ಮಾರಾಟ ಆಗತೈತಿ. ಜೋಳ, ಕಡಲೆ ಸುಗ್ಗಿ ಮುಗಿದ ಮ್ಯಾಲ ಜೇನು ಸಿಗುವುದು ಕಡಿಮೆ ಆಗ್ತೈತಿ, ನಾವು ಪ್ರತಿ ವರ್ಷ ರಾಮದುರ್ಗ, ಬಾಗಲಕೋಟೆ, ಬೀಳಗಿ, ಹಿಂಗ್ ಊರಿಂದ ಊರಿಗೆ ಅಡ್ಯಾಡಿ ಜೇನು ತುಪ್ಪ ಮಾರೋದು, ಅದ ರೊಕ್ಕದಾಗ ಜೀವನ ಮಾಡುದೇ ನಮ್ಮ ಜೀವನ” ಎಂದು ಹೇಳಿದರು.
“ಮಳೆಗಾಲದ ಸಂದರ್ಭದಲ್ಲಿ ಹಳ್ಳ, ಹೊಳೆಗಳಿಗೆ ಹೋಗಿ ಮೀನು ಹಿಡಿದು ಮಾರಾಟ ಮಾಡಿ ಜೀವನ ಸಾಗಿಸ್ತಿವಿ, ಹಿಂಗೆ ಯಾವಾಗಲೂ ನಾವು ನಮ್ಮ ಕುಲ ಕಸುಬು ಬಿಟ್ಟಿಲ್ಲ ನೋಡ್ರಿ, ಮತ್ತ್ ಇದರಿಂದ ದೊಡ್ಡ ಆದಾಯ ಏನೂ ಬರುದಿಲ್ರೀ ಹೊಟ್ಟೆಗೆ ಬಟ್ಟೆಗೆ ಅಷ್ಟ ಆಗತೈತಿ, ಸರ್ಕಾರದವರು ನಮಗೆ ಏನಾದರೂ ಸಹಾಯ ಮಾಡಿದ್ರ ಅವರಿಗೆ ಪುಣ್ಯ ಬರ್ತೈತಿ” ಎಂದು ಮನವಿ ಮಾಡಿದರು.

“ಅಲೆಮಾರಿ ಹಾಗೂ ಅರೆ ಅಲೆಮಾರಿ ಹಿನ್ನೆಲೆಯ ಅಡವಿ ಶಿಕಾರಿ ಸಮುದಾಯಕ್ಕೆ ಇಂದಿಗೂ ಸ್ವಂತ ಭೂಮಿ ಮತ್ತು ಒಂದೆಡೆ ವಾಸವಾಗಿರಲು ಒಂದು ಸೂರು, ನಿವೇಶನ ಯಾವುದೂ ಇಲ್ಲ. ಅನೇಕ ಕುಟುಂಬಗಳು ಮೂಲಭೂತ ಸೌಕರ್ಯಗಳಿಲ್ಲದೆ ತಾತ್ಕಾಲಿಕ ಶೆಡ್‌ಗಳಲ್ಲಿ ಜೀವನ ನಡೆಸುತ್ತಿವೆ. ಅಲೆಮಾರಿ ಜೀವನಶೈಲಿಯಿಂದ ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗಿದ್ದು, ಶಿಕ್ಷಣ ಇಲಾಖೆ ಈ ಕುರಿತು ಗಮನ ಹರಿಸಬೇಕಿದೆ” ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.
ಜೇನುಗೂಡು ಮತ್ತು ಅರಣ್ಯ ಉತ್ಪನ್ನಗಳ ಮೇಲೆ ಅವಲಂಬಿತವಾಗಿರುವ ಈ ಸಮುದಾಯ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಮುನ್ನಡೆಯಲು ರಾಜಕೀಯ ಪ್ರಾತಿನಿಧ್ಯ ಅಗತ್ಯವಾಗಿದೆ.
ಬ್ರಿಟಿಷ್ ಕಾಲದ ಅರಣ್ಯ ಕಾಯ್ದೆಗಳು ಅರಣ್ಯವಾಸಿಗಳನ್ನು ಅಕ್ರಮವೆಂದು ಪರಿಗಣಿಸಿ, ಬೇಟೆ ಹಾಗೂ ಅರಣ್ಯ ಉತ್ಪನ್ನ ಸಂಗ್ರಹವನ್ನು ಅಪರಾಧಗಳನ್ನಾಗಿ ಮಾಡಿದ್ದವು. ಇದರಿಂದ ಅಡವಿ ಶಿಕಾರಿ ಸಮುದಾಯಕ್ಕೆ ಅನ್ಯಾಯವಾಯಿತು.
ಈ ಅನ್ಯಾಯಕ್ಕೆ ಪ್ರತಿಕ್ರಿಯೆಯಾಗಿ ಜಾರಿಗೆ ಬಂದ ಅರಣ್ಯ ಹಕ್ಕುಗಳ ಕಾಯ್ದೆ 2006 ಅರಣ್ಯ ಹಕ್ಕುಗಳನ್ನು ಒಪ್ಪಿಕೊಂಡರೂ, ಅದರ ಲಾಭಗಳು ಇನ್ನೂ ಸಂಪೂರ್ಣವಾಗಿ ತಲುಪಿಲ್ಲ. ವಾಸಸ್ಥಾನ, ಶಿಕ್ಷಣ ಮತ್ತು ಜೀವನೋಪಾಯದಲ್ಲಿ ಈ ಸಮುದಾಯ ಇನ್ನೂ ಹಿಂದುಳಿದ ಸ್ಥಿತಿಯಲ್ಲಿದ್ದು, ಈ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದು ಅಡವಿ ಶಿಕಾರಿ ಸಮುದಾಯವನ್ನು ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಸಬಲಗೊಳಿಸುವ ಹೊಣೆ ಸರ್ಕಾರ ಮತ್ತು ಜನಪ್ರತಿನಿಧಿಗಳದ್ದಾಗಿದೆ.
ಅರಣ್ಯ ಹಕ್ಕುಗಳ ಕಾಯ್ದೆ 2006ರ ಪ್ರಾಮುಖ್ಯತೆ ಮತ್ತು ಸವಾಲುಗಳು
ಈ ಐತಿಹಾಸಿಕ ಅನ್ಯಾಯವನ್ನು ಸರಿಪಡಿಸಲು 2006ರಲ್ಲಿ ಜಾರಿಗೆ ಬಂದ Scheduled Tribes and Other Traditional Forest Dwellers(Recognition of Forest Rights) Act (FRA) ಅರಣ್ಯವಾಸಿಗಳಿಗೆ ವೈಯಕ್ತಿಕ ಹಾಗೂ ಸಮುದಾಯ ಅರಣ್ಯ ಹಕ್ಕುಗಳನ್ನು ಗುರುತಿಸುವ ಅವಕಾಶ ನೀಡಿದೆ. ಇದು ಅರಣ್ಯ ಉತ್ಪನ್ನಗಳ ಸಂಗ್ರಹ, ವಾಸಸ್ಥಾನ ಮತ್ತು ಜೀವನೋಪಾಯಕ್ಕೆ ಕಾನೂನು ರಕ್ಷಣೆ ನೀಡುತ್ತದೆ. ಆದರೆ ಕರ್ನಾಟಕದಲ್ಲಿ ಈ ಕಾಯ್ದೆ ಇನ್ನೂ ಜಾರಿಯಾಗಿಲ್ಲ.

ಗ್ರಾಮ ಸಭೆಗಳು, ಅರಣ್ಯ ಹಕ್ಕು ಸಮಿತಿಗಳು ಮತ್ತು ಇತರ ಸಂಸ್ಥೆಗಳಲ್ಲಿ ಸಾಮರ್ಥ್ಯದ ಕೊರತೆ, ಅಧಿಕಾರಿಗಳ ವಿವೇಚನೆಯಂತಹ ಅಡ್ಡಿಗಳಿಂದಾಗಿ ಜಾರಿ ಅಸಮರ್ಪಕವಾಗಿದೆ. ಇತ್ತೀಚಿನ ವರದಿಗಳು (2024-2026) ಕರ್ನಾಟಕದಲ್ಲಿ FRA ಜಾರಿಯಲ್ಲಿ ದೊಡ್ಡ ಅಂತರಗಳಿವೆ ಎಂದು ತೋರಿಸಿವೆ. ಸರ್ಕಾರ ಮತ್ತು ಜನಪ್ರತಿನಿಧಿಗಳು ಈ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನ್ವಯಿಸಿ, ಅರ್ಜಿಗಳನ್ನು ವೇಗವಾಗಿ ಪರಿಶೀಲಿಸಿ, ಹಕ್ಕುಪತ್ರಗಳನ್ನು ನೀಡಬೇಕು.
ಇದನ್ನೂ ಓದಿದ್ದೀರಾ? ಸಂಕಷ್ಟದ ಸುಳಿಯಲ್ಲಿ ಬಾಂಗ್ಲಾ ಜವಳಿ ಉದ್ಯಮ: ಫೆ.1ರಿಂದ ಗಿರಣಿಗಳಿಗೆ ಅನಿರ್ದಿಷ್ಟಾವಧಿ ಬೀಗ
ಅಡವಿ ಶಿಕಾರಿ ಸಮುದಾಯವು ಕೇವಲ ಜೀವನೋಪಾಯದ ಹೋರಾಟಗಾರರಲ್ಲ. ಅರಣ್ಯ ಸಂರಕ್ಷಣೆಯಲ್ಲಿ ಸಾಂಸ್ಕೃತಿಕ ಮತ್ತು ಪರಿಸರ ಪಾಲುದಾರರಾಗಿದ್ದಾರೆ. ಅವರ ಪಾರಂಪರಿಕ ಜ್ಞಾನವು ಅರಣ್ಯ ಸಂರಕ್ಷಣೆಗೆ ಅಮೂಲ್ಯವಾಗಿದೆ. ಆದರೆ ಇಂದಿನ ಸವಾಲುಗಳು – ಭೂಮಿ ಕೊರತೆ, ಶಿಕ್ಷಣದ ಅಡಚಣೆ, ಆರ್ಥಿಕ ಅಸ್ಥಿರತೆ ಮತ್ತು FRA ಜಾರಿಯ ವಿಳಂಬದಿಂದ ಆದಿವಾಸಿ ಸಮುದಾಯವನ್ನು ಹಿಂದುಳಿದ ಸ್ಥಿತಿಯಲ್ಲಿರಿಸಿವೆ.
ಸರ್ಕಾರಕ್ಕೆ ಇದು ಒಂದು ನೈತಿಕ ಹೊಣೆಗಾರಿಕೆಯಾಗಿದೆ. ಅರಣ್ಯ ಹಕ್ಕುಗಳ ಕಾಯ್ದೆಯನ್ನು ವೇಗವಾಗಿ, ಪಾರದರ್ಶಕವಾಗಿ ಜಾರಿಗೊಳಿಸಿ, ಅಲೆಮಾರಿ ಸಮುದಾಯಕ್ಕೆ ಶಾಶ್ವತ ವಾಸಸ್ಥಾನ, ಶಿಕ್ಷಣ, ಆರೋಗ್ಯ ಮತ್ತು ಪರ್ಯಾಯ ಜೀವನೋಪಾಯದ ಅವಕಾಶಗಳನ್ನು ಒದಗಿಸಬೇಕು. ಇದು ಕರ್ನಾಟಕದ ಸಾಮಾಜಿಕ ನ್ಯಾಯದ ಪ್ರಶ್ನೆಯಾಗಿದೆ. ಇದರಿಂದ ಸಮುದಾಯವು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ಮುನ್ನಡೆಯಬಹುದು. ಅರಣ್ಯ ಸಂರಕ್ಷಣೆಯೊಂದಿಗೆ ಸಮತೋಲಿತ ಅಭಿವೃದ್ಧಿಯನ್ನು ಸಾಧಿಸಬಹುದು. ಇಲ್ಲದಿದ್ದರೆ, ಈ ಸಮುದಾಯದ ಸಂಘರ್ಷಕ್ಕೆ ಕೊನೆಯೇ ಇಲ್ಲದಂತಾಗುತ್ತದೆ.

ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು




