ನಿಮ್ಮ ಮಕ್ಕಳು ಆರ್‌ಎಸ್‌ಎಸ್‌ಗೆ ಹೋಗ್ತಾರಾ? ಎಚ್ಚರ, ಈ ಕೃತಿಗಳು ಹೇಳುವ ಸತ್ಯಗಳೇ ಬೇರೆ!

Date:

ಗೋಲ್ವಾಲ್ಕರ್ ಇನ್ನೊಂದು ಕೋಮಿನ ಜನರ ನರಮೇಧಕ್ಕೆ ಕರೆ ನೀಡುತ್ತಿರುವುದನ್ನು ಇಲ್ಲಿ ಗಮನಿಸಬಹುದು. ಇಂತಹ ಸಂಘಟನೆಯನ್ನು ಕೇವಲ ನಿರ್ಬಂಧಿಸುವುದಲ್ಲ, ಈ ನೆಲದಿಂದಲೇ ಮೂಲೋತ್ಪಾಟನೆ ಮಾಡುವುದು ಇಂದಿನ ತುರ್ತು. 

“ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌) ಎಂಬ ಹೆಸರಿನ ಸಂಘಟನೆಯ ಚಟುವಟಿಕೆಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ, ಸರ್ಕಾರಿ ಶಾಲಾ ಕಾಲೇಜುಗಳ ಆವರಣದಲ್ಲಿ, ಮುಜರಾಯಿ ದೇವಾಲಯಗಳಲ್ಲಿ ನಿರ್ಬಂಧಿಸಬೇಕು. ಈ ಸಂಘಟನೆಯ ನಡೆಗಳು ದೇಶದ ಸಾಂವಿಧಾನಿಕ ಮೌಲ್ಯಗಳಿಗೆ ವಿರುದ್ಧವಾಗಿವೆ. ಪೊಲೀಸ್ ಅನುಮತಿ ಪಡೆಯದೆ ದೊಣ್ಣೆಗಳನ್ನು ಹಿಡಿದು ಆಕ್ರಮಣಕಾರಿ ಪ್ರದರ್ಶನ ನಡೆಸುವ ಮೂಲಕ ಮುಗ್ಧ ಮಕ್ಕಳು ಹಾಗೂ ಯುವಜನರ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರಲಾಗುತ್ತಿದೆ” ಎಂದು ಸಚಿವ ಪ್ರಿಯಾಂಕ್ ಖರ್ಗೆಯವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದರು. ಇದಾದ ಬಳಿಕ, ಜಾತಿವಾದಿ ಆರ್‌ಎಸ್‌ಎಸ್‌ ಮುಖಂಡರೆಲ್ಲ ತರಹೇವಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದು ನಿರೀಕ್ಷಿತವೂ ಆಗಿತ್ತು. ಸುಳ್ಳನ್ನು ಹೇಳಿದರೂ ನೂರಾರು ಜನ ಒಟ್ಟಿಗೆ ಶುರು ಮಾಡಿ, ಅದನ್ನೇ ಜನರಿಗೆ ನಂಬಿಸುವುದು ಆರ್‌ಎಸ್‌ಎಸ್‌ನ ಹುಟ್ಟುಗುಣ. ಇದೊಂದು ಸುಳ್ಳುಪೊಳ್ಳು ಹೇಳಿಕೊಂಡು ದೊಡ್ಡದಾದ, ತಾರತಮ್ಯವನ್ನೇ ಉಸಿರಾಡುವ ಸಂಘಟನೆ. ಇದರ ನಿಜಬಣ್ಣವನ್ನು ತೆರೆದಿಡಬೇಕಾದ ಕಾಲವಿದು.

ದೇಶದಲ್ಲಿ ಮೂರು ಬಾರಿ ನಿಷೇಧಕ್ಕೆ ಒಳಗಾಗಿದ್ದ ಈ ಸಂಘಟನೆ ನಿಧಾನಕ್ಕೆ ದೇಶದ ಅಧಿಕಾರ ಗದ್ದುಗೆ ಏರುವ ಮಟ್ಟಕ್ಕೆ ಬೆಳೆಯಿತು. ಅಂದರೆ ಆರ್‌ಎಸ್‌ಎಸ್‌ನ ನಿಜ ಬಂಡವಾಳವನ್ನು ಜನಸಾಮಾನ್ಯರು ಅರಿತುಕೊಳ್ಳಲೇ ಇಲ್ಲ. ಆದರೆ ಈಗಲೂ ಕಾಲ ಮಿಂಚಿಲ್ಲ. ಆರ್‌ಎಸ್‌ಎಸ್‌ ಎಂತಹ ಸಂಘಟನೆ ಎಂಬುದನ್ನು ಈಗಾಗಲೇ ವಿಚಾರವಂತರು, ಆರ್‌ಎಸ್‌ಎಸ್‌ ಮೂಲದಿಂದ ಬಂದವರು ದಾಖಲಿಸಿದ್ದಾರೆ. ಕನ್ನಡದ ಮಟ್ಟಿಗೂ ಕೆಲವು ಕೃತಿಗಳು ಆರ್‌ಎಸ್‌ಎಸ್‌ನ ಆಂತರ್ಯವನ್ನು ಬಗೆದಿಟ್ಟಿವೆ. ಅವುಗಳು ಏನನ್ನು ಹೇಳಲು ಹೊರಟಿವೆ ಎಂಬುದನ್ನು ನಾವು ಮತ್ತೆಮತ್ತೆ ಮನನ ಮಾಡಿಕೊಳ್ಳಬೇಕು ಮತ್ತು ಇಂತಹ ಕೃತಿಗಳು ಇನ್ನಷ್ಟು ಹೊರಬರಲು ಪ್ರೋತ್ಸಾಹಿಸಬೇಕು.  

ಒಂದು ಕಾಲದಲ್ಲಿ ಆರ್‌ಎಸ್‌ಎಸ್‌ನೊಂದಿಗೆ ಇದ್ದು, ಬಿಜೆಪಿಯ ಮೊದಲ ರಾಜ್ಯಾಧ್ಯಕ್ಷರೂ ಆಗಿದ್ದ ಎ.ಕೆ. ಸುಬ್ಬಯ್ಯ, ವಾಸ್ತವದಲ್ಲಿ ಕಟು ಪ್ರಾಮಾಣಿಕ ನಿಷ್ಠುರ ವ್ಯಕ್ತಿ. ಇವರನ್ನು ‘ಎಕೆ 47 ಸುಬ್ಬಯ್ಯ’ ಎಂದು ರೈತನಾಯಕ ಪುಟ್ಟಣ್ಣಯ್ಯ ಬಣ್ಣಿಸುತ್ತಿದ್ದರು. ಅಷ್ಟರ ಮಟ್ಟಿಗೆ ಸುಬ್ಬಯ್ಯ ವಾಸ್ತವವಾದಿ. ಆರ್‌ಎಸ್‌ಎಸ್ ಢೋಂಗಿತನಗಳನ್ನು ನೋಡಿ, ಬೇಸತ್ತು ಕೇಸರಿಪಾಳೆಯದಿಂದ ಹೊರಬಂದರು. ನಂತರ ಅವರು ಬರೆದ ‘ಆರ್‌ಎಸ್‌ಎಸ್ ಅಂತರಂಗ’- ಆ ಸಂಘಟನೆಯ ಹಲವು ಮುಖಗಳನ್ನು ಪರಿಚಯಿಸಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
rss 3 2

ಇದನ್ನೂ ಓದಿರಿ: ಕೊಪ್ಪಳ | ತನಿಖೆಯಲ್ಲಿ ಸತ್ಯ ಬಯಲು: ಕೋಮು ಸಂಘರ್ಷಕ್ಕೆ ಆಹಾರವಾಗದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷನ ಕೊಲೆ!

ಇತ್ತೀಚೆಗೆ ಹಿರಿಯ ಸಾಹಿತಿ ದೇವನೂರ ಮಹಾದೇವ ಅವರು ‘ಪ್ರಜಾವಾಣಿ’ ಪತ್ರಿಕೆಗೆ ಬರೆದ ಲೇಖನದಲ್ಲಿ “ಆರ್‌ಎಸ್‌ಎಸ್‌ ಹುಟ್ಟಿ ನೂರು ವರ್ಷಗಳಾಗಿಬಿಟ್ಟಿತಂತೆ. ಇಂದು ಇದು ನೋಡುವುದಕ್ಕೆ ಹೇಗಿದೆ? ಹೇಗಿದೆ ಅಂದರೆ, ಆರ್‌ಎಸ್‌ಎಸ್‌ ತನ್ನ ಎಳೆತನದಲ್ಲೆ ಬುದ್ಧಿ ಸ್ಥಗಿತಗೊಂಡ ದೇಹ ಮಾತ್ರ ಬೆಳವಣಿಗೆಯಾದ ದಢೂತಿ ದೇಹದಂತೆ ಗೋಚರಿಸುತ್ತಿದೆ. ಆರ್‌ಎಸ್‌ಎಸ್‌ನಿಂದ ತರಬೇತಿ ಪಡೆದು ಹೊರಬೀಳುವವರೂ ಹಾಗೆಯೇ ಕಾಣುತ್ತಿದ್ದಾರೆ. ಈಗ ಅದು ಸಂಖ್ಯೆಯಲ್ಲಿ ಬಹಳ ದೊಡ್ಡದಾಗಿ ಬೆಳೆದಿರಬಹುದು. ಆದರೆ ಎಳೆತನದಲ್ಲೇ ಬುದ್ಧಿ ಸ್ಥಗಿತಗೊಂಡ ನಂತರವೂ ಆಗುವ ದಢೂತಿ ದೇಹದ ಅಸಮತೋಲನ ಇದು. ನಮ್ಮ ಸಹಜೀವಿಗಳು ಹೀಗಾಗಿರುವುದನ್ನು ಕಂಡು ಸಂಕಟವಾಗುತ್ತಿದೆ” ಎಂದು ವಿಷಾದಿಸುತ್ತಾರೆ. ಆದರೆ ಆರ್‌ಎಸ್‌ಎಸ್‌ನ ಉದ್ದೇಶವೇ ಜನರ ಬುದ್ಧಿಯನ್ನು ಕಸಿಯುವುದಾಗಿದೆ. ಬಾಲ್ಯದಿಂದಲೇ ಮಕ್ಕಳ ಸ್ವಂತಿಕೆಯನ್ನು ನಾಶಮಾಡುತ್ತಾ, ಕೋಮುದ್ವೇಷವನ್ನು ತುಂಬುತ್ತಾ ಹೋಗುತ್ತದೆ. ಎ.ಕೆ.ಸುಬ್ಬಯ್ಯನವರು ತಮ್ಮ ಕೃತಿಯಲ್ಲಿ ದಾಖಲಿಸಿರುವ ಸಂಗತಿಗಳನ್ನು ಗಮನಿಸಬಹುದು:

“ಆರ್‌ಎಸ್‌ಎಸ್ ಆಜ್ಞಾವರ್ತಿಗಳಾಗಿ ಕೆಲಸ ಮಾಡುವ ಜನಗಳಿಗೆ ಸ್ವಯಂ ಸೇವಕರು ಎಂದು ರಸವತ್ತಾಗಿ ಆಕರ್ಷಕವಾಗಿ ಕರೆಯಲಾಗುತ್ತದೆ. ನಿಜವಾದ ಅರ್ಥದಲ್ಲಿ ಸ್ವಯಂ ಸೇವಕ ಎಂದರೆ ಸ್ವತಂತ್ರ ಚಿಂತನೆ ಮಾಡುವ ಶಕ್ತಿಯನ್ನು ಕಳಕೊಂಡು ಯಾಂತ್ರಿಕವಾಗಿ ಆರ್‌ಎಸ್‌ಎಸ್‌ ಗುಲಾಮಗಿರಿ ಒಪ್ಪಿಕೊಂಡವ ಎಂದರ್ಥ. ಮಕ್ಕಳ ಚಿಂತನಾ ಸಾಮರ್ಥ್ಯವನ್ನು ಸಂಪೂರ್ಣ ನಾಶ ಮಾಡಿ, ಅವರ ನರಗಳನ್ನು ಸಹ ಕತ್ತರಿಸಿ, ಸಮಾಜದ ಜೊತೆ ಬದುಕುವ ಯೋಗ್ಯತೆಯನ್ನು ಇಲ್ಲದಂತೆ ಮಾಡಿ ಆರ್‌ಎಸ್‌ಎಸ್ ಗುಲಾಮಗಿರಿಯನ್ನು ತುಟಿಕ್‌ಪಿಟಿಕ್ ಎನ್ನದೆ ಸ್ವೀಕರಿಸುವಂತೆ ಮಾಡಲು, ನಿತ್ಯ ನಡೆಯುವ ಶಾಖೆಗಳನ್ನು ಬಳಸಲಾಗುವುದು. ನಿಜವಾಗಿಯೂ ಶಾಖೆಗಳೆಂದರೆ, ಸಮಾಜದ ಮೇಲೆ ಅಕ್ರಮವೆಸಗುವ ಕೇಂದ್ರಗಳಾಗಿವೆ. ಶಾಖೆಗಳಲ್ಲಿ ಆಟ ಮತ್ತು ಭಜನೆಗಳ ಆಕರ್ಷಣೆ ತೋರಿಸಿ, ಬುದ್ಧಿ ಬೆಳೆಯುವ ಹಂತದಲ್ಲಿರುವ ಕಂಡವರ ಮಕ್ಕಳನ್ನು ಕರೆದೊಯ್ಯಲಾಗುತ್ತದೆ” ಎಂದು ಎಚ್ಚರಿಸುತ್ತಾರೆ ಸುಬ್ಬಯ್ಯ.

ಮಕ್ಕಳಲ್ಲಿ ಹೇಗೆಲ್ಲ ಕೋಮುದ್ವೇಷ ತುಂಬಲಾಗುತ್ತದೆ ಎಂಬುದಕ್ಕೆ ಸುಬ್ಬಯ್ಯ ನೀಡುವ ಒಂದು ಉದಾಹರಣೆ ಹೀಗಿದೆ: “’ಮೈ ಶಿವಾಜಿ ಹೂಂ’ ಎನ್ನುವ ಆಟವನ್ನು ಶಾಖೆಗಳಲ್ಲಿ ಆಡಿಸುತ್ತಾರೆ. ಮಕ್ಕಳೆಲ್ಲರೂ ‘ಮೈ ಶಿವಾಜಿ ಹೂಂ, ಮೈ ಶಿವಾಜಿ ಹೂಂ’ ಎಂದುಕೊಂಡು ಓಡಾಡುತ್ತಾರೆ. ಮಧ್ಯದಲ್ಲಿ ಒಬ್ಬ ‘ಮೈ ಔರಂಗಜೇಬ ಹೂಂ’ ಎನ್ನುತ್ತಾನೆ. ಉಳಿದ ಮಕ್ಕಳೆಲ್ಲರೂ ಹೋಗಿ ‘ಮೈ ಔರಂಗಜೇಬ ಹೂಂ’ ಅಂದವನ ಮೇಲೆ ಬೀಳುತ್ತಾರೆ – ಅವನನ್ನು ಥಳಿಸುತ್ತಾರೆ. ಮುಸಲ್ಮಾನರ ಬಗ್ಗೆ ದ್ವೇಷ ಮೂಡಿಸಲು ಆಟವನ್ನು ಸಹ ಯಾವ ರೀತಿ ಬಳಸಿಕೊಳ್ಳುತ್ತಾರೆಂಬುದಕ್ಕೆ ಇದೊಂದು ಉದಾಹರಣೆ ಮಾತ್ರ…”- ಇಂತಹ ವಿಷಕಾರಿ ತಂತ್ರಗಾರಿಕೆಯನ್ನು ಮಾಡುವ ಸಂಘಟನೆಯಿಂದ ಮನುಷ್ಯತ್ವವನ್ನು ನಿರೀಕ್ಷಿಸಲು ಸಾಧ್ಯವೇ?

ಸುಬ್ಬಯ್ಯನವರು ದಾಖಲಿಸುವ ಇಂತಹ ಹತ್ತಾರು ವಿಚಾರಗಳನ್ನು ಓದಿದರೆ ಮೈನಡುಕ ಹುಟ್ಟುತ್ತದೆ. “ಶಾಖೆಗಳಲ್ಲಿ ನಡೆಯುವ ಪ್ರತಿಯೊಂದು ಚಟುವಟಿಕೆ, ಪರಧರ್ಮೀಯರ ಬಗ್ಗೆ ಅದರಲ್ಲೂ ಇಸ್ಲಾಂ ಮತ್ತು ಕ್ರೈಸ್ತ ಧರ್ಮೀಯರ ಬಗ್ಗೆ ದ್ವೇಷ ನಿರ್ಮಾಣ ಮಾಡುವುದಕ್ಕಾಗಿಯೇ ನಡೆಯುವುದು. ಸಂಸ್ಕೃತ ಭಾಷೆಯ ಆಕರ್ಷಕ ಲೇಪದೊಳಗೆ ನಡೆಯುವ ಈ ಅಕ್ರಮ ಚಟುವಟಿಕೆಯನ್ನು ನೇರವಾಗಿ ಗುರುತಿಸುವುದು ಅಷ್ಟು ಸುಲಭವಲ್ಲ. ಆದರೂ ಸ್ವಯಂ ಪ್ರತಿಭೆಯುಳ್ಳ ಮಕ್ಕಳು ಅಲ್ಲಿ ಬಹುಕಾಲ ಉಳಿಯಲಾರರು. ಅಲ್ಲದೆ ಸ್ವಂತ ಬುದ್ಧಿ ಉಪಯೋಗಿಸಿ ಪ್ರಶ್ನೆ ಕೇಳುವ ಮಕ್ಕಳನ್ನು ಗುರುತಿಸಿ, ಈತ ಕೆಟ್ಟು ಹೋಗಿದ್ದಾನೆ ಮತ್ತು ಇತರ ಸ್ವಯಂ ಸೇವಕರನ್ನೂ ಕೆಡಿಸಿಬಿಡುತ್ತಾನೆಂದು ಹೇಳಿ ದೂರೀಕರಿಸಲಾಗುವುದು. ಶಾಖೆಗೆ ಕರೆದೊಯ್ಯಲಾಗುವ ಅಧಿಕ ಸಂಖ್ಯೆಯ ಮಕ್ಕಳ ಪೈಕಿ, ಯಾರಿಗೆ ಸ್ವಯಂ ಚಿಂತನಾ ಸಾಮರ್ಥ್ಯವಿರುವುದಿಲ್ಲವೋ ಮತ್ತು ಯಾರಿಗೆ ಆತ್ಮವಿಶ್ವಾಸದ ಕೊರತೆಯಿರುತ್ತದೋ, ಅಂಥ ಹಿಡಿಯಷ್ಟು ಮಕ್ಕಳು ಮಾತ್ರ ಕಡೆತನಕ ಅಲ್ಲಿಯೇ ಉಳಿದು, ಸ್ವಯಂ ಸೇವಕರೆನ್ನಿಸಿಕೊಳ್ಳುತ್ತಾರೆ. ಇವರಿಗೆ ಆಟದಲ್ಲಿ ಪಾಠದಲ್ಲಿ ಹಾಡಿನಲ್ಲಿ ಕಥೆಗಳಲ್ಲಿ ಪರಧರ್ಮೀಯರ ಬಗ್ಗೆ ದ್ವೇಷ ಹುಟ್ಟಿಸಿ, ಮಕ್ಕಳ ಮೆದುಳು ತೊಳೆದು ಅವರಲ್ಲಿರುವಂತಹ ಎಲ್ಲ ಪ್ರತಿಭೆಯನ್ನು ಕೊಂದು ಆರ್‌ಎಸ್‌ಎಸ್‌ನ ಗುಲಾಮಗಿರಿಯನ್ನು ಮರುಮಾತನಾಡದೆ ಸ್ವೀಕರಿಸುವಂತೆ ಮಾಡಲಾಗುವುದು. ಮುಂದೆ ಇವರು ಪರಧರ್ಮಗಳ ಬದ್ಧ ವೈರಿಗಳಾಗಿ ತಯಾರಾಗುವರು”- ಇದು ಸುಬ್ಬಯ್ಯ ದಾಖಲಿಸಿರುವ ಎಚ್ಚರಿಕೆ. ನಿಮ್ಮ ಮನೆಯ ಅಂಗಳಕ್ಕೆ, ನಿಮ್ಮ ಮಕ್ಕಳು ಓದುವಲ್ಲಿಗೆ ಆರ್‌ಎಸ್‌ಎಸ್‌ನವರು ಬಂದಿದ್ದರೆ ಗಂಭೀರವಾಗಿ ಚಿಂತಿಸಬೇಕಾಗುತ್ತದೆ.

ಇದನ್ನೂ ಓದಿರಿ: ಎಚ್‌ಡಿಕೆ ಭೂ ಒತ್ತುವರಿ ಕೇಸ್‌: ಸಮಗ್ರ ವರದಿ ಕೇಳಿದ ಹೈಕೋರ್ಟ್; ಏನಿದು ಪ್ರಕರಣ?

“ಆರ್‌ಎಸ್‌ಎಸ್‌ನ ದೃಷ್ಟಿಯಲ್ಲಿ ಅಳಲೇಕಾಯಿ ಪಂಡಿತ ವರ್ಗದವರ ಆಚಾರ ಪದ್ಧತಿಯೇ ಹಿಂದೂ ಆಚಾರ ಪದ್ಧತಿ. ಇದು ಸರ್ವಶ್ರೇಷ್ಠವೆಂದು ಉಳಿದವರೆಲ್ಲರೂ ಒಪ್ಪಿಕೊಳ್ಳಬೇಕು… ಶೂದ್ರರೆನ್ನುವವರು ಮೇಲುವರ್ಗದವರ ಜೀವನ ಪದ್ಧತಿ ಶ್ರೇಷ್ಠವೆಂದು ಒಪ್ಪಿಕೊಂಡು, ಅದನ್ನು ಸ್ವತಃ ಆಚರಿಸುವ ಅಧಿಕಾರವಿಲ್ಲದೆ ಆಜ್ಞೆ ಮಾತ್ರ ಸ್ವೀಕರಿಸಿಕೊಂಡು ಗುಲಾಮರಾಗಿ ಮುಂದುವರಿಯಬೇಕು” ಎನ್ನುವ ಸುಬ್ಬಯ್ಯ, “ಆರ್‌ಎಸ್‌ಎಸ್ ಎಂದರೆ- ರಾಷ್ಟ್ರೀಯ ಸುಳ್ಳರ ಸಂಘ” ಎಂದು ಝಾಡಿಸುತ್ತಾರೆ. ಆರ್‌ಎಸ್‌ಎಸ್‌ನವರ ಭ್ರಷ್ಟಾಚಾರ, ಕೋಮುದ್ವೇಷ ಉದ್ಧೀಪನೆ, ಶಿಸ್ತಿನ ಹೆಸರಲ್ಲಿ ಗುಲಾಮಗಿರಿ ಬೆಳೆಸುವ ರೀತಿ- ಹೀಗೆ ಹಲವು ಮುಖಗಳನ್ನು ಸುಬ್ಬಯ್ಯನವರ ಪುಸ್ತಕ ಕನ್ನಡ ಲೋಕಕ್ಕೆ ಪರಿಚಯಿಸಿತು. ಸುಬ್ಬಯ್ಯನವರ ವಿಚಾರಗಳನ್ನು ಅಲ್ಲಗಳೆಯಲು ಆರ್‌ಎಸ್‌ಎಸ್‌ನವರಿಗೆ ಎದೆಗಾರಿಕೆ ಇಂದಿಗೂ ಇಲ್ಲ!

ದೇವನೂರರು ಕಂಡ “ಆರ್‌ಎಸ್‌ಎಸ್‌- ಆಳ ಮತ್ತು ಅಗಲ”

ಆರ್‌ಎಸ್‌ಎಸ್ ವಿಚಾರದಲ್ಲಿ ಸುಬ್ಬಯ್ಯನವರ ನಂತರ ದೊಡ್ಡ ಸಂಚಲನ ಸೃಷ್ಟಿಸಿದವರು ಹಿರಿಯ ಸಾಹಿತಿ ದೇವನೂರ ಮಹಾದೇವ. ಅವರು ಬರೆದ ‘ಆರ್‌ಎಸ್‌ಎಸ್ ಆಳ ಮತ್ತು ಅಗಲ’ ಎಂಬ ಕಿರುಪುಸ್ತಕ ಕರ್ನಾಟಕದಲ್ಲಿ ಭಾರೀ ಚರ್ಚೆಯನ್ನೇ ಹುಟ್ಟು ಹಾಕಿತು. ಪುಸ್ತಕದ ಕಾಪಿರೈಟ್ ತೆಗೆದು ಹಾಕಿದ್ದರಿಂದ ಹಲವು ಪ್ರಕಾಶಕರು ಪುಸ್ತಕವನ್ನು ಸ್ವಯಂಪ್ರೇರಿತವಾಗಿ ಮುದ್ರಣ ಹಾಕಿ, ಶಾಲಾ ಕಾಲೇಜುಗಳಲ್ಲಿ ಹಂಚಿದರು. ಸಾವಿರಾರು ಪ್ರತಿಗಳು ಕೆಲವೇ ದಿನಗಳಲ್ಲಿ ಮಾರಾಟವಾದವು. ಆರ್‌ಎಸ್‌ಎಸ್‌ ಬಗ್ಗೆ ತಿಳಿಯಲು ಇರುವ ದಿಕ್ಸೂಚಿಯಂತೆ ಇರುವ ಈ ಕೃತಿ ಈಗ ಕರ್ನಾಟಕದ ಲಕ್ಷಾಂತರ ಮನೆಗಳಲ್ಲಿದೆ.

rss 2 2

ಆರ್‌ಎಸ್‌ಎಸ್‌ನ ಪ್ರಮುಖ ನಾಯಕರ ಬರಹಗಳಿಂದ ವಿಚಾರಗಳನ್ನು ಆಯ್ದು ಜನರ ಮುಂದೆ ಇಡುವ ದೇವನೂರರು, ಅವುಗಳ ನಿಜವಾದ ಉದ್ದೇಶವನ್ನು ಬಯಲಿಗೆಳೆಯುತ್ತಾ ಹೋಗುತ್ತಾರೆ. ಚಾತುರ್ವರ್ಣ ವ್ಯವಸ್ಥೆಯನ್ನು ಬಯಸುವ ಮತ್ತು ಸಂವಿಧಾನ ವಿರೋಧಿ ನಿಲುವುಗಳನ್ನು ತಾಳುವ ಆರ್‌ಎಸ್‌ಎಸ್‌ನ ಸರಸಂಘಚಾಲಕ ‘ಎಂ.ಎಸ್.ಗೋಲ್ವಾಲ್ಕರ್‌’ನ ವಿಚಾರಗಳು ಮತ್ತು ಹಿಂದುತ್ವದ ಥಿಂಕ್‌ಟಾಂಕ್‌ ವಿ.ಡಿ.ಸಾವರ್ಕರನ ಬರೆಹಗಳ ಒಳಹೊಕ್ಕು, ಅವರ ಅಂತರಂಗದ ಸತ್ಯಗಳನ್ನು ಬಯಲಿಗೆಳೆಯುತ್ತಾರೆ.

“ನಮ್ಮ ಸಂವಿಧಾನವೋ, ಕೆಲವು ಪಾಶ್ಚಾತ್ಯ ರಾಷ್ಟ್ರಗಳಿಂದ ಕೆಲವಾರು ವಿಧಿಗಳನ್ನು ತೆಗೆದು ಸಾಮರಸ್ಯವಿಲ್ಲದೆ ಒಟ್ಟಿಗೆ ತೊಡಕು ತೊಡಕಾಗಿ ತೇಪೆ ಹಾಕಿದ್ದು, ಅಷ್ಟೇ… ವಿಶ್ವಸಂಸ್ಥೆಯ ಸನ್ನದಿ (ಚಾರ್ಟರ್‌)ನಿಂದ ಅಥವಾ ಹಿಂದಿನ ರಾಷ್ಟ್ರಸಂಘದ ಸನ್ನದಿನಿಂದ ಕೆಲವು ಕುಂಟು ತತ್ವಗಳು ಮತ್ತು ಅಮೆರಿಕ ಹಾಗೂ  ಬ್ರಿಟನ್ ಸಂವಿಧಾನಗಳ ತೇಪೆ ಕೆಲಸ ಇದು” ಎನ್ನುತ್ತಾರೆ ಗೋಲ್ವಾಲ್ಕರ್.

ಆರ್‌ಎಸ್‌ಎಸ್‌ನ ಮುಖವಾಣಿ ಆರ್ಗನೈಸರ್ ಪತ್ರಿಕೆಯು, ಸಂವಿಧಾನ ಸಮರ್ಪಣೆಯಾದ ನಾಲ್ಕು ದಿನಗಳ ಬಳಿಕ ಅಸಹನೆಯನ್ನು ಹೊರಹಾಕುತ್ತದೆ. “ಭಾರತದ ಸಂವಿಧಾನದ ಬಗ್ಗೆ ಅತ್ಯಂತ ಹೀನಾಯವಾದದ್ದು ಏನೆಂದರೆ ಅದರಲ್ಲಿ ಭಾರತೀಯವಾದದ್ದು ಏನೂ ಇಲ್ಲ. ವಾಸ್ತವವಾಗಿ ನಮ್ಮ ಮನುಸ್ಮೃತಿ ಅತ್ಯಂತ ಪ್ರಾಚೀನವಾಗಿದ್ದು. ಜಗತ್ತಿನ ಜನರೆಲ್ಲಾ ಸ್ವಪ್ರೇರಿತರಾಗಿ ಅದರ ಬಗ್ಗೆ ಅಪಾರ ಆದರವನ್ನು ವ್ಯಕ್ತಪಡಿಸುತ್ತಾರೆ. ಆದರೆ ನಮ್ಮ ಸಂವಿಧಾನ ಪಂಡಿತರಿಗೆ ಅದು ಏನೂ ಅಲ್ಲ” ಎಂದು ಸಂವಿಧಾನದ ವಿರುದ್ಧ ತುರುಸಿಕೊಳ್ಳುತ್ತದೆ.

ಇದನ್ನೂ ಓದಿರಿ: ಕೊಪ್ಪಳ | ತನಿಖೆಯಲ್ಲಿ ಸತ್ಯ ಬಯಲು: ಕೋಮು ಸಂಘರ್ಷಕ್ಕೆ ಆಹಾರವಾಗದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷನ ಕೊಲೆ!

ಅಂಬೇಡ್ಕರ್ ರಚಿತ ಸಂವಿಧಾನಕ್ಕಿಂತ ಆರ್‌ಎಸ್‌ಎಸ್‌ಗೆ ಶ್ರೇಣಿಕೃತ ಸಮಾಜವನ್ನು ಹೇಳುವ ಮನುಸ್ಮೃತಿಯೇ ಮುಖ್ಯ. ಸಾವರ್ಕರ್‌ನ ಮಾತುಗಳು ಇದನ್ನು ಮತ್ತಷ್ಟು ಸ್ಪಷ್ಟಪಡಿಸುತ್ತವೆ. “ನಮ್ಮ ಹಿಂದೂ ರಾಷ್ಟ್ರದಲ್ಲಿ ವೇದಗಳ ನಂತರ ಮನುಸ್ಮೃತಿಯೇ ಅತ್ಯಂತ ಪೂಜನೀಯ ಮತಗ್ರಂಥವಾಗಿದೆ. ಪ್ರಾಚೀನ ಕಾಲದಿಂದಲೂ ನಮ್ಮ ಸಂಸ್ಕೃತಿ- ಪದ್ಧತಿಗಳು, ಚಿಂತನೆ ಮತ್ತು ನಡವಳಿಕೆಗಳಿಗೆ ನಿರ್ಣಾಯಕ ತತ್ವ ಅದೇ ಆಗಿದೆ. ಈ ಗ್ರಂಥ ಶತಮಾನಗಳಿಂದಲೂ ನಮ್ಮ ದೇಶದ ಆಧ್ಯಾತ್ಮಿಕ ಹಾಗೂ ದೈವಿಕ ಪಯಣವನ್ನು ಕ್ರೂಢೀಕರಿಸಿ ಸಂಹಿತೆಯಾಗಿಸಿದೆ. ಕೋಟ್ಯಂತರ ಹಿಂದೂಗಳು ಇಂದಿಗೂ ತಮ್ಮ ಬದುಕು ಮತ್ತು ನಡೆನುಡಿಗಳಲ್ಲಿ ಅನುಸರಿಸುತ್ತಿರುವ ನೀತಿ ನಿಯಮಗಳಿಗೆ ಮನುಸ್ಮೃತಿಯೇ ಆಧಾರ. ಇವತ್ತು ಮನುಸ್ಮೃತಿಯೇ ಹಿಂದೂ ಕಾಯಿದೆ” ಎಂಬುದು ಸಾವರ್ಕರ್ ಉವಾಚ. ಇಂಥವರಿಂದ ಸಮಾನತೆಯ ಸಮಾಜವನ್ನು ನಿರೀಕ್ಷಿಸಲು ಸಾಧ್ಯವೇ? ಆರ್‌ಎಸ್‌ಎಸ್‌ನವರ ಪ್ರಾಣ ಯಾವುದೆಂದು ಶೋಧಿಸುವ ದೇವನೂರರು, ಇಂತಹ ವಿಚಾರಗಳನ್ನು ಆಯ್ದು ನಮ್ಮ ಮುಂದೆ ಇಟ್ಟಿದ್ದಾರೆ.

“ಗೋಳ್ವಾಲ್ಕರ್ ತಮ್ಮ ಪುಸ್ತಕಕ್ಕೆ ‘ಬಂಚ್‌ ಆಫ್ ಥಾಟ್ಸ್‌’ ಎಂದು ಹೆಸರಿಟ್ಟಿದ್ದಾರೆ. ಕನ್ನಡ ಅನುವಾದಕ್ಕೆ ‘ಚಿಂತನಗಂಗಾ’ ಎಂಬ ಹೆಸರಿದೆ. ಇರಲಿ, ಇದರಲ್ಲೇನಾರು ‘ಥಾಟ್ಸ್’ ಅಥವಾ ‘ಚಿಂತನ’ ಅನ್ನಿಸಿಕೊಳ್ಳುವುದು ಏನಾದರೂ ಇದೆಯಾ ಎಂದು ನೋಡಿದರೆ, ಕಿಂಚಿತ್ತೂ ಕಂಡುಬರುವುದಿಲ್ಲ. ಅವರುಗಳಲ್ಲಿ ಇರುವುದು ಕೇವಲ ಮೂರು ಮತ್ತೊಂದು ಅಪಾಯಕಾರಿ ನಂಬಿಕೆಗಳು ಮಾತ್ರವೆ. ಅದೂ ಭೂತಕಾಲದ ಅಪಾಯಕಾರಿ ನಂಬಿಕೆಗಳು” ಎನ್ನುತ್ತಾರೆ ದೇವನೂರು.

“ಭಾರತದಲ್ಲಿ ವಿಶ್ವಮಾನವನಾಗಿ ಹುಟ್ಟಿದ ಮಗುವೊಂದು ಜಾತಿವರ್ಣಗಳಿಂದ ಬಿಗಿದು ಕಟ್ಟಲ್ಪಟ್ಟು ಸಾಯುವವರೆಗೆ ಅಲ್ಲೆ ಬಿದ್ದಿರಬೇಕು ಎಂಬ ಆಶಯದ ಚಾತುರ್ವರ್ಣದ ಈ ಅಲ್ಪ ಹಿಂದೂ ಪ್ರಭೇದಕ್ಕೆ (ಸಂಘಪರಿವಾರಕ್ಕೆ) ಅಂಬೇಡ್ಕರ್ ನೇತೃತ್ವದಲ್ಲಿ ರಚಿತವಾದ ಭಾರತದ ಇಂದಿನ ನಾಗರಿಕವಾದ ಮಾನವೀಯ ಸಂವಿಧಾನವೆಂದರೆ ದುಃಸ್ವಪ್ನ. ಇದು ಇವರಿಗೆ ನಿದ್ದೆಯನ್ನೂ ಕೊಡುತ್ತಿಲ್ಲ. ಭಾರತದ ಇಂದಿನ ಸಂವಿಧಾನವನ್ನು ಧ್ವಂಸ ಮಾಡಲು ಆರ್‌ಎಸ್‌ಎಸ್‌ ಮತ್ತು ಅದರ ಪರಿವಾರ ಮಾಡಬಾರದ ಕೆಲಸ ಮಾಡುತ್ತಿದೆ” ಎಂದು ಎಚ್ಚರಿಸುವ ದೇವನೂರರು, ಬಿಜೆಪಿ ತನ್ನ ಅಧಿಕಾರಾವಧಿಯಲ್ಲಿ ಮಾಡಿರುವ ಅಧ್ವಾನಗಳನ್ನು ಚರ್ಚಿಸುತ್ತಾರೆ. ಈ ಕಾರಣಕ್ಕೆ ‘ಆರ್‌ಎಸ್‌ಎಸ್ ಆಳ- ಅಗಲ’ ಬಹುಚರ್ಚಿತ ಕೃತಿಯಾಗಿ ಹೊಮ್ಮಿತು. ಹಲವು ಭಾಷೆಗಳಿಗೂ ಅನುವಾದ ಕಂಡಿತು.

‘ಆರ್‌ಎಸ್‌ಎಸ್‌ ಕರಾಳ ಮುಖಗಳು’: ಹನುಮೇಗೌಡರು ಕಂಡುಂಡ ಸಂಘಿ ಜಗತ್ತು

“ರಾಷ್ಟ್ರೀಯ ಸ್ವಯಂ ಸೇವಕ ಸಂಘ ನನ್ನದು. ಸಂವಿಧಾನ ಒಪ್ಪದ ಬೇನಾಮಿ ಆರ್‌ಎಸ್‌ಎಸ್‌ಗೆ ಮೋಹನ್ ಭಾಗವತ್ ಮುಖ್ಯಸ್ಥರು. ಸಂವಿಧಾನ ಒಪ್ಪಿದ, ದೇಶಭಕ್ತರ ಆರ್‌ಎಸ್‌ಎಸ್‌ಗೆ ನಾನೇ ಅಧಿಪತಿ” ಎನ್ನುವ ಹನುಮೇಗೌಡರು ನೋಂದಾಯಿತ ಆರ್‌ಎಸ್‌ಎಸ್‌ ಸಂಘಟನೆಯ ಸಂಸ್ಥಾಪಕರು. 1925ರಲ್ಲಿ ಚಾಲ್ತಿಗೆ ಬಂದ ಆರ್‌ಎಸ್‌ಎಸ್‌ಗೆ ಒಂದು ಕಚೇರಿ ಇಲ್ಲ. ಅದೊಂದು ಬೇನಾಮಿ ಸಂಘಟನೆ. ಅವರು ಮಾಡುವ ವಿಧ್ವಂಸಕ ಕೃತ್ಯಗಳಿಗೆ ಯಾರು ಹೊಣೆ?- ಈ ಪ್ರಶ್ನೆಯನ್ನು ಎತ್ತುವ ಹನುಮೇಗೌಡರು, ಮೂಲತಃ ಬೇನಾಮಿ ಆರ್‌ಎಸ್‌ಎಸ್‌ನಲ್ಲಿ ದಶಕಗಳ ಕಾಲ ಚಪ್ಪಲಿಯನ್ನಲ್ಲ, ಪಾದವನ್ನೇ ಸವೆಸಿದ್ದರು. ಯಾವಾಗ ಅನ್ಯಾಯ, ಅಕ್ರಮ, ಸಂಘಿ ನಾಯಕರಿಂದಾದ ಅತ್ಯಾಚಾರಗಳನ್ನು ಪ್ರಶ್ನಿಸಲು ಶುರುಮಾಡಿದರೋ ಆಗಲೇ ಗೌಡರ ‘ಸೇವೆ’ ಆರ್‌ಎಸ್‌ಎಸ್‌ಗೆ ಬೇಡವಾಯಿತು. ಅವರ ಮೇಲೆ ಹಲ್ಲೆಯಾಯಿತು. ರೌಡಿ ಎಂದು ಕೇಸ್ ಮಾಡಲಾಯಿತು. “ನಾನು ರೌಡಿಯಾದರೆ, ನನಗೊಬ್ಬ ಡಾನ್ ಇರಬೇಕಲ್ಲವೇ? ಆ ಡಾನ್‌ ಸರಸಂಘಚಾಲಕ” ಎಂದು ಗೌಡರು ಮರುಪ್ರಶ್ನಿಸಿದ್ದರು. ಇಷ್ಟೆಲ್ಲ ಆದರೂ ಗೌಡರನ್ನು ಆರ್‌ಎಸ್‌ಎಸ್‌ನಿಂದ ಹೊರಹಾಕುವ ಧೈರ್ಯ ಅಲ್ಲಿದ್ದವರಿಗೆ ಸಾಲದಾಯಿತು. ಕೊನೆಗೆ ಆರ್‌ಎಸ್‌ಎಸ್‌ಗೆ ಇವರೇ ಝಾಡಿಸಿ ಹೊರಬಂದರು, ಮನುಷ್ಯರಾದರು, ಆರ್‌ಎಸ್‌ಎಸ್ ಹೆಸರಲ್ಲಿ ಸಂಘಟನೆ ನೋಂದಣಿ ಮಾಡಿಸಿದರು, ‘ಆರ್‌ಎಸ್‌ಎಸ್‌ ಕರಾಳ ಮುಖಗಳು’ ಎಂಬ ಕೃತಿಯನ್ನೂ ಬರೆದರು. ತಮ್ಮ ಅನುಭವಗಳನ್ನು ಹಸಿಹಸಿಯಾಗಿ ದಾಖಲಿಸಿದರು.

rss 4 2

ಇದನ್ನೂ ಓದಿರಿ: ಎಸ್‌ಟಿ ಒಳಮೀಸಲಾತಿ ಮುನ್ನಲೆಗೆ; ‘ನಾಯಕ- ಕುರುಬ’ರ ನಡುವೆ ಬಿಕ್ಕಟ್ಟು ಮೂಡುವುದೇ?

“ಅಧಿಕಾರ ಹಿಡಿಯುವುದೇ ಸಂಘಪರಿವಾರದವರ ಹಿಡನ್ ಅಜೆಂಡಾ. ಸೇಫ್ಟಿ ಝೋನ್‌ನಲ್ಲಿ ನಿಂತು, ಸುಲಭವಾಗಿ ಮತ್ತು ಮೈಗಳ್ಳರಾಗಿ ಬದುಕಬೇಕೆಂಬುದು ಮೇಲ್ವರ್ಗದವರ ಚಿಂತನೆ. ಚಾತುರ್ವರ್ಣವನ್ನು ಜಾರಿಗೆ ತರಲು ಇರುವ ಮುಖವಾಡವೇ ಆರ್‌ಎಸ್‌ಎಸ್‌. ಇದರ ರಾಜಕೀಯ ಫೇಸ್ ಬಿಜೆಪಿ. ಆರ್‌ಎಸ್‌ಎಸ್‌ ಹೊರಗೆ ಕಾಣುವುದೇ ಬೇರೆ, ಅದರ ಅಂತರಂಗವೇ ಬೇರೆ. ಆರ್‌ಎಸ್‌ಎಸ್‌ಗೆ ನೂರು ವರ್ಷವಾಯಿತು ಎನ್ನುತ್ತಾರೆ. ಹಿಂದೂ ನಾವೆಲ್ಲ ಒಂದು ಎಂದು ಪ್ರತಿಪಾದಿಸುತ್ತಾರೆ. ಆದರೆ ಇಷ್ಟು ವರ್ಷಗಳಲ್ಲಿ ಎಂದಿಗೂ ಜಾತಿ ತಾರತಮ್ಯದ ವಿರುದ್ಧ ಹೋರಾಡಲಿಲ್ಲ. ದಲಿತರ ದೌರ್ಜನ್ಯ, ಅತ್ಯಾಚಾರಗಳನ್ನು ಖಂಡಿಸಲಿಲ್ಲ. ಹಿಂದುತ್ವದ ಹೆಸರಲ್ಲಿ ದಲಿತ, ಶೂದ್ರರನ್ನು ಮುಂದೆ ಬಿಟ್ಟು, ಅವರು ಬೀದಿ ಹೆಣವಾದ ಬಳಿಕ ಅದರ ಮೇಲೆ ಅಧಿಕಾರ ಹಿಡಿಯುವುದು ಈ ಮೇಲ್ವರ್ಗದವರ ಉದ್ದೇಶ” ಎನ್ನುತ್ತಾರೆ ಹನುಮೇಗೌಡ.

“ಬೇನಾಮಿ ಹೆಸರಲ್ಲಿ ಭಯೋತ್ಪಾದನಾ ಕೃತ್ಯಗಳನ್ನು ಎಸಗಿದರೂ ಯಾರೂ ಹೊಣೆಗಾರರಾಗುವುದಿಲ್ಲ” ಎಂದು ತಿಳಿದ ಗೌಡರು, ಆರ್‌ಎಸ್‌ಎಸ್‌ ಹೆಸರಲ್ಲಿ ಸಂಘಟನೆಯನ್ನು ನೋಂದಣಿ ಮಾಡಿಸಿದ್ದಾರೆ. “ನಾನು ಆರ್‌ಎಸ್‌ಎಸ್‌ನವನು” ಎಂದು ಹೇಳುವ ಯಾವುದೇ ಕೋಮುವಾದಿಯ ವಿರುದ್ಧ ಹನುಮೇಗೌಡರು ಈಗ ದೂರು ದಾಖಲಿಸಬಹುದು!

“ದೇಶಕ್ಕಾಗಿ ಆರ್‌ಎಸ್‌ಎಸ್‌ ಬಿಟ್ಟೆ”- ಮುಕುಂದರಾಜ್

“ಆರ್‌ಎಸ್‌ಎಸ್‌ ದೇಶಭಕ್ತ ಸಂಘಟನೆ” ಎಂಬ ವಾದವೊಂದಿದೆ. ಆದರೆ ಅದು ದೇಶಭಕ್ತ ಸಂಘಟನೆಯಲ್ಲ, ವಾಸ್ತವದಲ್ಲಿ ಜಾತಿವಾದಿ, ಧಾರ್ಮಿಕ ಮೂಲಭೂತವಾದಿ ಸಂಘಟನೆ. ಇದಕ್ಕೂ ಆರ್‌ಎಸ್‌ಎಸ್‌ಗೂ ಯಾವುದೇ ಸಂಬಂಧವಿಲ್ಲ ಎಂದು ಅರಿತುಕೊಂಡ ಎಲ್‌.ಎನ್. ಮುಕುಂದರಾಜ್ ಅವರು, “ದೇಶಕ್ಕಾಗಿ ಆರ್‌ಎಸ್‌ಎಸ್ ಬಿಟ್ಟೆ” ಎಂದು ಕೃತಿ ಬರೆದರು. ಈಗ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿರುವ ಮುಕುಂದರಾಜ್ ಅವರಿಗೆ ಬಹುಶಃ ಮಹಾನ್ ಗುರುಗಳು ಸಿಗದೆ ಹೋಗಿದ್ದರೆ, ಇಂದು ಆರ್‌ಎಸ್‌ಎಸ್‌ ಶಾಖೆಯ ಕಾಲಾಳುವಾಗಿ ಕಾಣೆಯಾಗುತ್ತಿದ್ದರು. ಈ ನೆಲದ ನಿಜವಾದ ಸತ್ವವನ್ನು ತಿಳಿಸಿಕೊಟ್ಟ ಗುರುಗಳಿಂದಾಗಿ ಅವರು ಸಂಘಿಗಳ ಸಹವಾಸದಿಂದ ದೂರವಾದರು.

rss 1 3

“ನಾನು ಆರ್‌ಎಸ್‌ಎಸ್‌ ಬಿಟ್ಟಿದ್ದು ಯಾಕೆ ಎಂದು ಕೆಲವರಿಗೆ ಅನುಮಾನ ಇರಬಹುದು. ಅದರಲ್ಲಿ ಅಂತಹ ದೊಡ್ಡ ವಿಚಾರವೇನೂ ಇಲ್ಲ. ಕನ್ನಡ ಸಾಹಿತ್ಯದ ವಿದ್ಯಾರ್ಥಿಯಾಗಿದ್ದ ನನಗೆ ಸಾಹಿತ್ಯದ ಓದು ಹೊಸಬಗೆಯ ಚಿಂತನೆಗಳ ಅರಿವು ಮೂಡಿಸಿದ್ದು ಇದಕ್ಕೆ ಕಾರಣವಿರಬಹುದು. ತುಮಕೂರಿನ ಸಂಜೆ ಕಾಲೇಜಿನ ವಿದ್ಯಾರ್ಥಿಯಾಗಿದ್ದ ನಾನು ಬಿಎ ಪಾಸು ಮಾಡಿದನಂತರ ಸ್ನಾತಕೋತ್ತರ ಪದವಿ ಪಡೆಯಲು ಸೇರಿಕೊಂಡಿದ್ದೇ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರಕ್ಕೆ. ಜಿ.ಎಸ್.ಶಿವರುದ್ರಪ್ಪ, ಚಿದಾನಂದಮೂರ್ತಿ, ಚಂದ್ರಶೇಖರ ಕಂಬಾರ, ಲಕ್ಷ್ಮೀನಾರಾಯಣ ಭಟ್, ಸಿ.ವೀರಣ್ಣ, ಹೆಚ್.ಕೆ. ಜಯದೇವ್, ಕಿ.ರಂ. ನಾಗರಾಜ, ಡಿ.ಆರ್.ನಾಗರಾಜು, ಕೆ.ವಿ.ನಾರಾಯಣ್, ಸುಮತೀಂದ್ರ ನಾಡಿಗ್, ಕೆ.ಪಿ. ಭಟ್, ಸಿದ್ದಲಿಂಗಯ್ಯ, ಕಾಳೇಗೌಡ ನಾಗವಾರ, ಬರಗೂರು ರಾಮಚಂದ್ರಪ್ಪ ಇವರೆಲ್ಲಾ ಅಲ್ಲಿ ನನಗೆ ಮೇಷ್ಟ್ರುಗಳಾಗಿದ್ದರು. ಅವರೆಲ್ಲರೂ ಆ ಕಾಲಕ್ಕೇ ಕನ್ನಡ ಸಾಹಿತ್ಯ ವಲಯದಲ್ಲಿ ಪ್ರಸಿದ್ಧರಾಗಿದ್ದ ಅದ್ಭುತವಾದಂತಹ ಮೇಷ್ಟ್ರುಗಳು. ಕನ್ನಡ ಸಾಹಿತ್ಯ, ತೌಲನಿಕವಾಗಿ ಜಗತ್ತಿನ ಸಾಹಿತ್ಯ, ಭಾಷಾ ವಿಜ್ಞಾನ, ಕಾವ್ಯ ಮೀಮಾಂಸೆ ಇತ್ಯಾದಿ ಸಿಲಬಸ್‌ನಲ್ಲಿದ್ದ ಪಾಠಗಳನ್ನೇ ಎಲ್ಲರಿಗೂ ಹೇಳಿಕೊಡುವಂತೆ ನನಗೂ ಹೇಳಿಕೊಡುತ್ತಿದ್ದರು. ಪ್ರತ್ಯೇಕ ಪಠ್ಯಗಳನ್ನು ನನಗೊಬ್ಬನಿಗೇ ಹೇಳಿಕೊಟ್ಟವರಲ್ಲ. ಕಿರಂ ನಾಗರಾಜ್ ಮಾತ್ರ ನನಗೊಬ್ಬನಿಗೇ ಪ್ರತ್ಯೇಕವಾಗಿ ಹೇಳುತ್ತಿದ್ದರು. ಕನ್ನಡ ಎಂ.ಎ ಓದಬೇಕಾದರೆ ಸಿಲಬಸ್‌ನಲ್ಲಿ ಏನು ಇರುತ್ತೋ ಪಂಪ, ಕುಮಾರವ್ಯಾಸ, ಹರಿಹರ, ರಾಘವಾಂಕ, ಬಸವಣ್ಣ, ಅಲ್ಲಮಪ್ರಭು, ಸರ್ವಜ್ಞ, ಶಿಶುನಾಳ ಷರೀಫ, ಕುವೆಂಪು, ಬೇಂದ್ರೆ, ಅಡಿಗ, ಲಂಕೇಶ್, ತೇಜಸ್ವಿಯವರನ್ನು ಎಲ್ಲಾ ವಿದ್ಯಾರ್ಥಿಗಳು ಓದುವ ಹಾಗೆ, ಒಬ್ಬ ಎಂಎ ವಿದ್ಯಾರ್ಥಿ ಏನನ್ನು ಓದಬೇಕಿತ್ತೋ ಅದನ್ನೆಲ್ಲ ಗಂಭೀರವಾಗಿ ಓದುತ್ತಿದ್ದ ಹಾಗೆ ನಾನು ಏನೋ ತಪ್ಪು ಮಾಡುತ್ತಾ ಇದೀನಿ ಅಂತ ಅನ್ನಿಸೋದಕ್ಕೆ ಶುರುವಾಯಿತು. ಅಲ್ಲಿ ಸಂಘದಲ್ಲಿ ಹೇಳುತ್ತಿರುವುದು ಒಂದು. ಅವರೇನೋ ದೇಶಪ್ರೇಮ, ಹಿಂದೂ ಧರ್ಮ ಎಂದು ಏನೇನೋ ಹೇಳುತ್ತಿದ್ದಾರೆ. ಆದರೆ ನಾನು ಓದುತ್ತಿರುವ ರಾಮಾಯಣದಲ್ಲಿ ಹಿಂದೂ ಧರ್ಮಕ್ಕಿಂತ ಭಿನ್ನವಾದ ವಿಚಾರವಿದೆ. ಕುಮಾರವ್ಯಾಸನ ಮಹಾಭಾರತ (ಕರ್ನಾಟ ಭಾರತ ಕಥಾಮಂಜರಿ), ಪಂಪನ ವಿಕ್ರಮಾರ್ಜುನ ವಿಜಯ, ರನ್ನನ ಗದಾಯುದ್ಧ- ಇವೆಲ್ಲವೂ ಮಹಾಭಾರತವನ್ನು ಕೇಂದ್ರವಾಗಿಟ್ಟುಕೊಂಡು ಬರೆದಿರುವ ಮಹಾಕಾವ್ಯಗಳು. ಇದರಲ್ಲಿ ಸಂಘ ಹೇಳುವುದಕ್ಕಿಂತಲೂ ಬೇರೆ ಏನೋ ಇನ್ನೊಂದು ತರಹ ಇದೆಯಲ್ಲ! ಎಂಬ ಶಂಕೆ ಉಂಟಾಯಿತು…” ಎಂದು ದಾಖಲಿಸಿದ್ದಾರೆ ಮುಕುಂದರಾಜ್.

ಗುರು ಕಿ.ರಂ.ನಾಗರಾಜ ಅವರು ತಮಗೆ ಬೇಕಂತಲೇ ಬೋಧಿಸುತ್ತಿದ್ದ ಕೃತಿಗಳ ಬಗ್ಗೆ ನೆನಪಿಸಿಕೊಳ್ಳುವ ಅವರು, “ಕನ್ನಡ ಸಾಹಿತ್ಯ ಕೃತಿಗಳ ಯಾವ ಭಾಗವನ್ನು ಅವರು ನನಗೆ ಓದಲು ಹೇಳುತ್ತಿದ್ದರೆಂದರೆ, ಮನುಷ್ಯ ವಿರೋಧಿಯಾದಂತಹ ಧಾರ್ಮಿಕ ನಿಲುವುಗಳನ್ನು ಎಲ್ಲಿ ನಮ್ಮ ಕವಿಗಳು ನೇರವಾಗಿ ಖಂಡಿಸಿದ್ದಾರೋ ಅಂತಹ ಭಾಗಗಳನ್ನು ನನಗೆ ಕೊಡುತ್ತಿದ್ದರು. ಅದನ್ನು ಓದಿದಾಗ ನನಗನ್ನಿಸಿತು ನಾನು ನಿಜವಾಗಲೂ ತಪ್ಪು ಮಾಡುತ್ತಿದ್ದೀನಿ ಎಂದು. ಯಾರೂ ನನ್ನನ್ನು ಎಬಿವಿಪಿ ಬಿಡು, ಆರ್‌ಎಸ್‌ಎಸ್ ಬಿಡು ಎಂದು ಹೇಳುತ್ತಿರಲಿಲ್ಲ. ಅವರೇನಾದರು ಬಿಡು ಎಂದು ಹೇಳುತ್ತಿದ್ದರೆ, ನಾನು ವಾದಕ್ಕೆ, ಜಗಳಕ್ಕೆ ಬಿದ್ದುಬಿಡುತ್ತಿದ್ದೆ. ಎಷ್ಟು ವಾದ ಅಂದರೆ ನೀವು ಆರ್‌ಎಸ್‌ಎಸ್ ಹುಡುಗರ ಜೊತೆಯಲ್ಲಿ ಮಾತಿನಲ್ಲಿ ಗೆಲ್ಲುವುದಕ್ಕೆ ಸಾಧ್ಯವೇ ಆಗೋಲ್ಲ. ಅವರದ್ದು ಹಿಡಿದಿದ್ದೇ ಹಠ. ನಾವೇ ಶ್ರೇಷ್ಠ, ನಾವು ಹೇಳಿದ್ದೇ ಸರಿ, ನಮ್ಮ ಹಿಂದೂ ಧರ್ಮವೇ ಶ್ರೇಷ್ಠ. ಈ ರೀತಿಯ ವಾದಗಳನ್ನು ಸುಮ್ಮನೆ ಬಡಬಡಾಯಿಸುವುದು. ಅವರ ಯಾವ ವಾದಕ್ಕೂ ತಳಹದಿ ಇರುವುದಿಲ್ಲ. ಯಾವುದೂ ಕೂಡಾ ಸ್ವತಃ ಅನುಭವದಿಂದ, ಅಧ್ಯಯನದಿಂದ ಬಂದ ವಾದಗಳಲ್ಲ. ಯಾರೋ ನಮ್ಮ ತಲೆಯಲ್ಲಿ ತುಂಬಿದ ಮಾತುಗಳು, ಯಾರೋ ನಮಗೆ ಹೇಳಿಕೊಟ್ಟ ಮಾತುಗಳನ್ನು ಇಲ್ಲಿ ತಂದು ಸುರಿಯುವುದು. ನಾನೂ ಹೀಗೆಯೇ ವಾದ ಮಾಡುತ್ತಿದ್ದೆ. ಯಾವಾಗ ಕಿರಂ ನನ್ನನ್ನು ಗಂಭೀರ ಓದಿಗೆ ತೊಡಗಿಸಿದರೋ; ಆಗ ನಾನು ಏನೋ ತಪ್ಪು ಮಾಡುತ್ತಿದ್ದೀನಿ ಎಂಬುದು ನನಗೆ ಗೊತ್ತಾಯಿತು” ಎಂದು ಬರೆದುಕೊಂಡಿದ್ದಾರೆ.

ಆರ್‌ಎಸ್‌ಎಸ್‌ನಲ್ಲೇ ಇದ್ದು, ಅದರ ಬಗ್ಗೆ ವಿಮರ್ಶಾ ದೃಷ್ಟಿಕೋನ ಇಟ್ಟುಕೊಂಡವರು ಬಹುಕಾಲ ಅಲ್ಲಿ ಉಳಿಯುವುದಿಲ್ಲ. ಖಂಡಿತವಾಗಿಯೂ ಹೊರಬರುತ್ತಾರೆ. ಹಾಗೆ ಕರ್ನಾಟಕದಲ್ಲಿ ನೂರಾರು, ಸಾವಿರಾರು ಜನ ಆರ್‌ಎಸ್‌ಎಸ್‌ ತೊರೆದಿರುವುದಂತೂ ಸತ್ಯ. ಅವರೆಲ್ಲರೂ ಮಾತನಾಡಲು ಶುರುಮಾಡಿದರೆ ಖಂಡಿತವಾಗಿಯೂ ಆರ್‌ಎಸ್‌ಎಸ್ ಪತರಗುಟ್ಟಿ, ನಗೆದುಬೀಳುತ್ತದೆ.

ಇದನ್ನೂ ಓದಿರಿ: ಹೊರಮೈ ರೋಗನಿರೋಧಕ ಸಹಿಷ್ಣುತೆಯ ಸಂಶೋಧನೆಗೆ 2025ರ ವೈದ್ಯಕೀಯ ನೊಬೆಲ್ ಪ್ರಶಸ್ತಿ

ಈ ಆರ್‌ಎಸ್‌ಎಸ್ ಎಂದಿಗೂ ಬಹುತ್ವ ಭಾರತದ ಮತ್ತು ಕನ್ನಡ ನೆಲದ ಕಸುವನ್ನು ಹೊಂದಿಲ್ಲದ ಸಂಘಟನೆ. ಇದರ ಚಹರೆಗಳು ಹಿಟ್ಲರ್‌ನ ನಾಝಿ ಸಿದ್ಧಾಂತದೊಂದಿಗೆ ತಾಳೆಯಾಗುತ್ತವೆ. ಸಂಘಿಗಳ ಗುರೂಜಿ ಗೋಲ್ವಾಲ್ಕರ್, “ಜರ್ಮನಿ ತನ್ನ ಜನಾಂಗ ಹಾಗೂ ಸಂಸ್ಕೃತಿಯ ಪರಿಶುದ್ಧತೆಯನ್ನು ಉಳಿಸಿಕೊಳ್ಳುವ ಸಲುವಾಗಿ ತನ್ನ ದೇಶದಲ್ಲಿದ್ದ ಸೆಮಿಟಿಕ್ ಜನಾಂಗದ ಯಹೂದ್ಯರನ್ನು ಸಂಪೂರ್ಣವಾಗಿ ನಿರ್ನಾಮಗೊಳಿಸಿ ಪ್ರಪಂಚವನ್ನೇ ಬೆಚ್ಚಿ ಬೀಳಿಸಿತು. ಇಲ್ಲಿ ಅತ್ಯುಚ್ಚಮಟ್ಟದ ಜನಾಂಗೀಯ ಅಭಿಮಾನ ತೋರಿ ಬಂದಿದೆ. ಹಿಂದೂಸ್ಥಾನದಲ್ಲಿರುವ ನಾವು ಈ ಉತ್ತಮ ಪಾಠದಿಂದ ಕಲಿಯಬೇಕಾಗಿದೆ ಮತ್ತು ಲಾಭ ಪಡೆಯಬೇಕಾಗಿದೆ” ಎನ್ನುತ್ತಾರೆ. ಅಂದರೆ ಈ ಗೋಲ್ವಾಲ್ಕರ್ ಇನ್ನೊಂದು ಕೋಮಿನ ಜನರ ನರಮೇಧಕ್ಕೆ ಕರೆ ನೀಡುತ್ತಿರುವುದನ್ನು ಇಲ್ಲಿ ಗಮನಿಸಬಹುದು. ಇಂತಹ ಸಂಘಟನೆಯನ್ನು ಕೇವಲ ನಿರ್ಬಂಧಿಸುವುದಲ್ಲ, ಈ ನೆಲದಿಂದಲೇ ಮೂಲೋತ್ಪಾಟನೆ ಮಾಡುವುದು ಇಂದಿನ ತುರ್ತು. ಈ ಕೆಲಸವನ್ನು ನಮ್ಮ ಹಿರಿಯ ಸಾಹಿತಿಗಳು, ಹೋರಾಟಗಾರರು, ರಾಜಕೀಯ ವಿಮರ್ಶಕರು ಪುಸ್ತಕ, ಭಾಷಣ, ಪ್ರತಿಭಟನೆ ಇತ್ಯಾದಿ ಸ್ವರೂಪದಲ್ಲಿ ಮಾಡುತ್ತಲೇ ಇದ್ದಾರೆ. ಈ ಕೆಲಸವನ್ನು ನಾವೀಗ ತೀವ್ರಗೊಳಿಸಬೇಕಾಗುತ್ತದೆ. ಆರ್‌ಎಸ್‌ಎಸ್‌ ನಿಜಬಣ್ಣ ತೆರೆದಿಡುವ ಕೃತಿಗಳನ್ನು ಮನೆಮನೆಗೆ ತಲುಪಿಸಬೇಕಾಗಿದೆ.

yathiraj 3
ಯತಿರಾಜ್‌ ಬ್ಯಾಲಹಳ್ಳಿ
+ posts

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...