ಸೌಜನ್ಯ ಅತ್ಯಾಚಾರ- ಕೊಲೆ ನಡೆದ ಎರಡು ದಿನದಲ್ಲೇ ಸಂತೋಷ್ ರಾವ್ ಎಂಬಾತನ ಬಂಧನ ಮಾಡಲಾಗಿತ್ತು. ಸುಮಾರು 6 ವರ್ಷಗಳ ಕಾಲ ಸಂತೋಷ್ ಜೈಲಿನಲ್ಲಿದ್ದರು. ಆದರೆ ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯ 2023ರಲ್ಲಿ ಸಂತೋಷ ರಾವ್ ಪ್ರಕರಣದಲ್ಲಿ ನಿರ್ದೋಷಿ ಎಂದು ಘೋಷಿಸಿದೆ. ಇವಿಷ್ಟು ನಡೆಯುತ್ತಿದ್ದಂತೆ ನಿಜಕ್ಕೂ ಈ ನೀಚ ಕೃತ್ಯವನ್ನು ಎಸಗಿದವರು ಯಾರು ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ.
ದೇಶವನ್ನೇ ಬೆಚ್ಚಿ ಬೀಳಿಸಿದ್ದ ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದೆ. ಪ್ರಕರಣದ ಮರು ತನಿಖೆ ನಡೆಸುವಂತೆ ಕೋರಿ ಸೌಜನ್ಯ ತಾಯಿ ಕುಸುಮಾವತಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಇಂದು ರಾಜ್ಯ ಸರ್ಕಾರ ಮತ್ತು ಸಿಬಿಐಗೆ ನೋಟಿಸ್ ನೀಡಿದೆ. ಈ ಮೂಲಕ ಪ್ರಕರಣದಲ್ಲಿ ಮತ್ತೆ ನ್ಯಾಯದ ಭರವಸೆ ಚಿಗುರಿದೆ.
2012ರ ಅಕ್ಟೋಬರ್ 9ರಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯ ಧರ್ಮಸ್ಥಳದ ಬಳಿ 17 ವರ್ಷದ ಕಾಲೇಜು ವಿದ್ಯಾರ್ಥಿನಿ ಸೌಜನ್ಯಳನ್ನು ಅಪಹರಿಸಿ ಅತ್ಯಾಚಾರ ಮಾಡಲಾಗಿತ್ತು. ಮರುದಿನ ಆಕೆಯ ಮೃತದೇಹ ನೇತ್ರಾವತಿ ಸ್ನಾನಘಟ್ಟದ ಬಳಿಯ ಪೊದೆಯಲ್ಲಿ ಸಿಕ್ಕಿತ್ತು. ಅಂದಿನಿಂದ ಇಂದಿನವರೆಗೂ ಸೌಜನ್ಯ ಕುಟುಂಬ ಮತ್ತು ಮಹಿಳಾಪರ ಹೋರಾಟಗಾರರು ನಿರಂತರವಾಗಿ ಹೋರಾಟ ನಡೆಸುತ್ತಲೇ ಇದ್ದಾರೆ. ಕಳೆದೊಂದು ವರ್ಷದಿಂದ ಮಹಿಳಾಪರ ಹೋರಾಟಗಾರರು, ಲೇಖಕಿಯರು ‘ಕೊಂದವರು ಯಾರು?’ ಎಂಬ ಆಂದೋಲನ ಕಟ್ಟಿಕೊಂಡು ಸೌಜನ್ಯ ಮಾತ್ರವಲ್ಲದೆ ಧರ್ಮಸ್ಥಳ ಆಸುಪಾಸಿನಲ್ಲಿ ನಡೆದ ಮಹಿಳೆಯರ ಅಸಹಜ ಸಾವಿನ ತನಿಖೆಗೆ ಆಗ್ರಹಿಸಿ ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ.
ಇದನ್ನು ಓದಿದ್ದೀರಾ? BREAKING NEWS | ಸೌಜನ್ಯ ಅತ್ಯಾಚಾರ-ಕೊಲೆ ಪ್ರಕರಣ: ರಾಜ್ಯ ಸರ್ಕಾರ, ಸಿಬಿಐಗೆ ಸುಪ್ರೀಂ ನೋಟಿಸ್
ಈ ಬಗ್ಗೆ ಈದಿನ ಡಾಟ್ ಕಾಮ್‌ಗೆ ಪ್ರತಿಕ್ರಿಯಿಸಿರುವ ಮಹಿಳಾಪರ ಹೋರಾಟಗಾರ್ತಿ ಮಲ್ಲಿಗೆ ಸಿರಿಮನೆ, “ಸೌಜನ್ಯ ಪ್ರಕರಣದಲ್ಲಿ ಮೊದಲಿನಿಂದಲೂ ಈ ಹೋರಾಟ ಹಲವು ದಿಕ್ಕಿನಿಂದ ನಡೆಯುತ್ತಾ ಬಂದಿದೆ. ಒಂದು ಕಡೆ ತಳಮಟ್ಟದಲ್ಲಿ ಜನರು, ಸಾಮಾಜಿಕ ಹೋರಾಟಗಾರರು, ಸಂಘಟನೆಗಳು ಕುಟುಂಬದೊಂದಿಗೆ ನಿಂತಿರುವ ಕಾರಣ ಹೋರಾಟ ಗಟ್ಟಿಯಾಗಿ ಇಲ್ಲಿಯವರೆಗೂ ಮುಂದುವರೆಯುತ್ತಾ ಬಂದಿದೆ. ಸೌಜನ್ಯ ವಿಚಾರದಲ್ಲಿ ಕಾನೂನು ಮಾರ್ಗದ ಮೂಲಕವೂ ಆಗಾಗ ಮಧ್ಯಪ್ರವೇಶ ನಡೆದಿದೆ. ಇದೀಗ ಸುಪ್ರೀಂ ಕೋರ್ಟ್ ಆದೇಶವನ್ನು ಕೊಂದವರು ಯಾರು ತಂಡ ಸ್ವಾಗತಿಸುತ್ತದೆ” ಎಂದು ತಿಳಿಸಿದರು.
“ಮಹಿಳಾ ವಿಚಾರದಲ್ಲಿ ನಾವು ಬಹಳಷ್ಟು ಪ್ರಕರಣಗಳನ್ನು ನೋಡಿದ್ದೇವೆ. ತಳಮಟ್ಟದಲ್ಲಿ ಮಹಿಳೆಯರ ಗಟ್ಟಿಯಾದ ಧ್ವನಿ ಎದ್ದಾಗ ವ್ಯವಸ್ಥೆ ಅದರತ್ತ ತಿರುಗಿ ನೋಡಿದೆ. ಮಹಿಳೆಯರಿಗೆ ನ್ಯಾಯ ದೊರಕಬೇಕು ಎಂಬ ನಿಟ್ಟಿನಲ್ಲಿ ನ್ಯಾಯಾಂಗ ಕೆಲವು ಸಂದರ್ಭದಲ್ಲಿ ಮಧ್ಯಪ್ರವೇಶ ಮಾಡಿದೆ. ಅದು ಮಹಿಳಾ ಹೋರಾಟದ ಮಟ್ಟಿಗೆ ದೊಡ್ಡ ಮೈಲಿಗಲ್ಲು ಆಗಿರುವುದನ್ನು ನಾವು ಇತಿಹಾಸದಲ್ಲಿ ನೋಡಿದ್ದೇವೆ. ಅದೇ ರೀತಿಯಲ್ಲಿ ಸೌಜನ್ಯ ಪ್ರಕರಣದಲ್ಲಿಯೂ ಈ ಆದೇಶ ಮೈಲಿಗಲ್ಲಾಗಲಿ. ಮಹಿಳೆಯರ ಧ್ವನಿಗೆ ನ್ಯಾಯಾಂಗ ವ್ಯವಸ್ಥೆ ಇನ್ನಷ್ಟೂ ಶಕ್ತಿ ತುಂಬಬೇಕು” ಎಂದರು.
“ಈ ಆದೇಶವನ್ನು ರಾಜ್ಯ ಸರ್ಕಾರ ಪೂರ್ಣ ಪ್ರಮಾಣದಲ್ಲಿ ಸ್ವಾಗತಿಸಬೇಕು. ಸ್ವಾಗತಿಸುತ್ತದೆ ಎಂಬ ನಿರೀಕ್ಷೆ ನಮ್ಮದು. ಮರು ತನಿಖೆಯ ಕೋರ್ಟ್ ನಿರ್ದೇಶನಕ್ಕೆ ಪೊಲೀಸ್ ವ್ಯವಸ್ಥೆ ಸಹಕಾರ ನೀಡುವಂತೆ ಮಾಡುವಂತದ್ದು ಸರ್ಕಾರದ ಜವಾಬ್ದಾರಿ. ಸರ್ಕಾರ ಈ ಜವಾಬ್ದಾರಿಯನ್ನು ನಿಷ್ಪಕ್ಷಪಾತವಾಗಿ ನಿರ್ವಹಿಸಬೇಕು. ಈ ಹಿಂದಿನ ಸರ್ಕಾರಗಳು ತೆಗೆದುಕೊಳ್ಳದ ಹೆಜ್ಜೆಯನ್ನು ಈ ಸರ್ಕಾರ ಇಡಬೇಕು. ಕೋರ್ಟ್ ಆದೇಶ ಪಾಲಿಸುವ ನಿಟ್ಟಿನಲ್ಲಿ ಗಟ್ಟಿಯಾದ ನಿರ್ಧಾರ ಕೈಗೊಳ್ಳಬೇಕು” ಎಂದು ಕೊಂದವರು ಯಾರು ಆಂದೋಲನದ ಭಾಗವಾಗಿ ಆಗ್ರಹಿಸಿದರು.
ಸ್ತ್ರೀವಾದಿ ಚಿಂತಕಿ, ಲೇಖಕಿ ಜ್ಯೋತಿ ಅನಂತಸುಬ್ಬರಾವ್ ಈದಿನ ಡಾಟ್ ಕಾಮ್‌ಗೆ ಪ್ರತಿಕ್ರಿಯಿಸಿ, “ಸುಪ್ರೀಂ ಕೋರ್ಟ್ ನಿರ್ದೇಶನವು ಅದನ್ನು NFIW ಮತ್ತು ಕೊಂದವರು ಯಾರು ಪರವಾಗಿ ಸ್ವಾಗತಿಸುತ್ತೇವೆ. ಇದು ಸಕಾರಾತ್ಮಕ ಬೆಳವಣಿಗೆ. ಸರ್ಕಾರ ಮರು ತನಿಖೆಯಿಂದ ಹಿಂದೆ ಸರಿಯಬಾರದು ಎಂದು ರಾಜ್ಯ ಸರ್ಕಾರವನ್ನು ನಾವು ಆಗ್ರಹಿಸುತ್ತೇವೆ. ಈ ಮರು ತನಿಖೆಯನ್ನು ಎಸ್‌ಐಟಿ ತನಿಖೆಯೊಂದಿಗೆ ಸೇರಿಸಿದರೆ ಒಳ್ಳೆಯದು” ಎಂದು ಹೇಳಿದರು.
“ಹೈಕೋರ್ಟ್ 2024ರಲ್ಲಿ ಈ ಹಿಂದೆ ನಡೆದ ತನಿಖೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತ್ತು. ವೈದ್ಯಕೀಯ ಸಾಕ್ಷ್ಯ ನಾಶವಾಗಿದ್ದು, ಸಿಗಲು ಸಾಧ್ಯವಿಲ್ಲ ಎಂದು ಹೇಳಿತ್ತು. ಆದರೆ ಈಗ ಸುಪ್ರೀಂ ಕೋರ್ಟ್ ವೈದ್ಯಕೀಯ ಸಾಕ್ಷ್ಯವನ್ನು ಪಡೆದು ಮರುತನಿಖೆ ಮಾಡಬಹುದು ಎಂಬ ಕುಸುಮಾವತಿ ಅವರ ಮನವಿಯನ್ನು ಒಪ್ಪಿದೆ. ಇಂದು ವೈಜ್ಞಾನಿಕ, ತಂತ್ರಜ್ಞಾನ ಸಾಕಷ್ಟು ಪ್ರಗತಿಯಾಗಿದೆ. ಈ ತಂತ್ರಜ್ಞಾನವನ್ನು ಸರ್ಕಾರ ಬಳಸಿಕೊಳ್ಳಬೇಕು. ಎಷ್ಟು ಸಾಕ್ಷ್ಯಗಳ ಕೊಲೆಯಾಗಿದೆ. ಅದರ ಬಗ್ಗೆಯೂ ತನಿಖೆಯಾಗಬೇಕು” ಎಂದು ಆಗ್ರಹಿಸಿದರು.
ರೈತ ಹೋರಾಟಗಾರ್ತಿ ಅರಳಾಳುಸಂದ್ರದ ಅನಸೂಯಮ್ಮ, “ತುಂಬಾ ತಡವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಈ ಬೆಳವಣಿಗೆ ನಡೆದಿದೆ. ಆದರೂ ಉತ್ತಮ ತೀರ್ಮಾನ. ನಾವು ಸುಮಾರು ಕಡೆಗಳಲ್ಲಿ ಹೋರಾಟ ನಡೆಸಿದ್ದೇವೆ. ಈ ಪ್ರಕರಣವು ಹೆಣ್ಣು ಕುಲಕ್ಕೆ ಮಾಡಿದ ಅವಮಾನ. ಧರ್ಮಸ್ಥಳದ ಆಸುಪಾಸಿನಲ್ಲಿ ನಡೆದ ಕೃತ್ಯಗಳು ಇನ್ನೂ ನಿಗೂಢವಾಗಿದೆ. ಬೇರೆ ಕಡೆ ಈ ರೀತಿ ಅತ್ಯಾಚಾರ ಪ್ರಕರಣಗಳು ನಡೆದಾಗ ಎರಡು ಮೂರು ದಿನಗಳಲ್ಲಿ ಆರೋಪಿ ಪತ್ತೆ ಹಚ್ಚಲಾಗುತ್ತದೆ. ಆದರೆ ಧರ್ಮಸ್ಥಳದಲ್ಲಿ ಯಾಕೆ ಇಷ್ಟೊಂದು ನಿಗೂಢ ಬೆಳವಣಿಗೆ? ಸರ್ಕಾರ, ಸಂಘ ಸಂಸ್ಥೆಗಳು ಯಾಕೆ ಕಣ್ಣು ಮುಚ್ಚಿ ಕುಳಿತಿದೆ” ಎಂದು ಪ್ರಶ್ನಿಸಿದರು.
ಭಾರತೀಯ ಮಹಿಳಾ ರಾಷ್ಟ್ರೀಯ ಒಕ್ಕೂಟ (NFIW) ನಾಯಕಿ, ಕೊಂದವರು ಯಾರು ತಂಡದ ಭಾಗವಾಗಿರುವ ಪದ್ಮ ಪಾಟೀಲ್, “ನಾವು ಈಗ ಕಾನೂನಿನ ಪ್ರಕಾರ ಹೋರಾಟ ನಡೆಸುತ್ತಿದ್ದೇವೆ. ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಸಿಗಲಿದೆ ಎಂಬ ಭರವಸೆಯಿದೆ. ಕಾನೂನುಬದ್ಧವಾಗಿ ನಮಗೆ ನ್ಯಾಯ ಸಿಗದಿದ್ದರೆ ಹೋರಾಟ ಮುಂದುವರೆಸುತ್ತೇವೆ” ಎಂದು ತಿಳಿಸಿದರು.

ಇನ್ನು ಮಹಿಳಾ ಹಕ್ಕುಗಳು ಹೋರಾಟಗಾರ್ತಿ, ಕೊಂದವರು ಯಾರು? ತಂಡದ ಭಾಗವಾಗಿರುವ ಮಮತಾ ಯಜಮಾನ್ ಈದಿನ ಡಾಟ್ ಕಾಮ್‌ಗೆ ಪ್ರತಿಕ್ರಿಯಿಸಿ, “ಈ ಬೆಳವಣಿಗೆ ಖಂಡಿತವಾಗಿಯೂ ನ್ಯಾಯದ ಭರವಸೆ ಮೂಡಿಸಿದೆ. ಕೊಂದವರು ಯಾರು ಆಂದೋಲನದ ಮೂಲಕ ನಾವು ಮಹಿಳಾ ಆಯೋಗ, ಸರ್ಕಾರದ ಮೇಲೆ ಒತ್ತಡ ಹೇರಿದಾಗ ನಡೆದ ಬೆಳವಣಿಗೆ ಕೊಂಚ ಭರವಸೆಯನ್ನು ಮೂಡಿಸಿತ್ತು. ಇದೀಗ ಸುಪ್ರೀಂ ಕೋರ್ಟ್ ಆದೇಶ ಭರವಸೆ ಹೆಚ್ಚಿಸಿದೆ. ಸೌಜನ್ಯ ಮಾತ್ರವಲ್ಲದೆ ಧರ್ಮಸ್ಥಳದ ಸುತ್ತಮುತ್ತ ನಡೆದಿರುವಂತಹ ಎಲ್ಲ ಅಸಹಜ ಸಾವು ಪ್ರಕರಣಗಳಿಗೆ ನ್ಯಾಯ ಒದಗಿಸಬೇಕು. ಇದರ ಹಕ್ಕು, ಜವಾಬ್ದಾರಿ, ಹೊಣೆಗಾರಿಕೆ ಸರ್ಕಾರದ ಮೇಲಿದೆ” ಎಂದು ತಿಳಿಸಿದರು.
ಲೇಖಕಿ, ಕವಯತ್ರಿ ಮತ್ತು ಸ್ತ್ರೀವಾದಿ ಚಿಂತಕಿ ಚಂದ್ರಕಲಾ ನಂದಾವರ ಈದಿನ ಡಾಟ್ ಕಾಮ್‌ಗೆ ಪ್ರತಿಕ್ರಿಯಿಸಿದ್ದು, “ನ್ಯಾಯ ಸಿಗುವುದೇ ಎಂಬುದು ಇಂದಿಗೂ ಪ್ರಶ್ನೆಯೇ. ಆದರೆ ಸುಪ್ರೀಂ ಕೋರ್ಟ್ ಸರ್ಕಾರ, ಸಿಬಿಐಗೆ ನೋಟಿಸ್ ನೀಡಿರುವಂತಹ ಬೆಳವಣಿಗೆಯು ನಮ್ಮ ನ್ಯಾಯಾಂಗ ವ್ಯವಸ್ಥೆ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಸಾಕ್ಷಿ. ಆದರೆ ಈ ಪ್ರಕರಣದ ತನಿಖೆಯೂ ದೀರ್ಘವಾಗದಿರಲಿ” ಎಂದು ಅಭಿಪ್ರಾಯಿಸಿದರು.
ಸೌಜನ್ಯ ಕೊಲೆ ಪ್ರಕರಣವು ದಕ್ಷಿಣ ಕನ್ನಡ ಜಿಲ್ಲೆ, ಕರ್ನಾಟಕ ರಾಜ್ಯ ಮಾತ್ರವಲ್ಲದೆ ದೇಶದ ಹಲವು ಭಾಗಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ವೇಳೆಯೇ ಧರ್ಮಸ್ಥಳ ವ್ಯಾಪ್ತಿಯಲ್ಲಿ ನಡೆದಿರುವ ಹಲವು ಕೊಲೆ, ನಿಗೂಢ ಸಾವು, ನಾಪತ್ತೆ ಪ್ರಕರಣಗಳು ಮುನ್ನೆಲೆಗೆ ಬಂದಿತ್ತು.
ಸೌಜನ್ಯ ಪ್ರಕರಣವನ್ನು 2013ರಲ್ಲಿ ಸಿಬಿಐಗೆ ವರ್ಗಾಯಿಸಲಾಗಿತ್ತು. ನಂತರ 2015ರಲ್ಲಿ ಮಂಗಳೂರಿನಿಂದ ಬೆಂಗಳೂರಿನ ವಿಶೇಷ ಸಿಬಿಐ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು. ಈ ನಡುವೆ ಪ್ರಕರಣದ ಸಾಕ್ಷಿಯಾಗಿದ್ದ ರವಿ ಪೂಜಾರಿ ಎಂಬುವವರು ನಿಗೂಢವಾಗಿ ಸಾವನ್ನಪ್ಪಿದ್ದರು. ಸೌಜನ್ಯ ಅತ್ಯಾಚಾರ ಕೊಲೆ ನಡೆದ ಎರಡು ದಿನದಲ್ಲೇ ಸಂತೋಷ್ ರಾವ್ ಎಂಬಾತನ ಬಂಧನ ಮಾಡಲಾಗಿತ್ತು. ಸುಮಾರು 11 ವರ್ಷಗಳ ಕಾಲ ಸಂತೋಷ್ ಜೈಲಿನಲ್ಲಿದ್ದರು. ಆದರೆ ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಿ.ಬಿ ಸಂತೋಷ್ ಅವರು 2023ರಲ್ಲಿ ಸಂತೋಷ ರಾವ್ ಪ್ರಕರಣದಲ್ಲಿ ನಿರ್ದೋಷಿ ಎಂದು ಘೋಷಿಸಿದ್ದರು. ಇವಿಷ್ಟು ನಡೆಯುತ್ತಿದ್ದಂತೆ ನಿಜಕ್ಕೂ ಈ ನೀಚ ಕೃತ್ಯವನ್ನು ಎಸಗಿದವರು ಯಾರು ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ.
ಇದಾದ ಬಳಿಕ ಸೌಜನ್ಯ ಕುಟುಂಬ ಪ್ರಕರಣದ ಮರುತನಿಖೆಗೆ ಕೋರಿ ಹೈಕೋರ್ಟ್ ಮೊರೆ ಹೋಯಿತು. ಒಂದು ವರ್ಷಗಳ ಕಾಲ ದೀರ್ಘ ಹೋರಾಟ ನಡೆಸಿತು. ಆದರೆ 2024ರ ಸೆಪ್ಟೆಂಬರ್‌ನಲ್ಲಿ ಹೈಕೋರ್ಟ್ ಈ ಪ್ರಕರಣದ ಮರುತನಿಖೆ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿತು. ಈ ಆದೇಶವನ್ನು ಪ್ರಶ್ನಿಸಿ ತಾಯಿ ಕುಸುಮಾವತಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಸುಪ್ರೀಂ ಸರ್ಕಾರಕ್ಕೆ ನೋಟಿಸ್ ನೀಡಿದೆ. ಇದರಿಂದಾಗಿ ಮತ್ತೆ ನ್ಯಾಯದ ಭರವಸೆ ಮೂಡಿದೆ. ಆದರೆ ಸರ್ಕಾರ ನ್ಯಾಯವನ್ನು ಹಿಸುಕದಿರಲಿ ಎಂಬ ಆಶಯ ನಮ್ಮದು.





