ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ…
ಸೃಜನಶೀಲತೆ, ನಿರಂತರತೆ ಮತ್ತು ನೈತಿಕತೆಯನ್ನು ಬೇಡುವ ಮಾಧ್ಯಮ ಕ್ಷೇತ್ರದಲ್ಲಿ ನಮ್ಮ ಹಾಸನ ಬಹಳ ದೊಡ್ಡ ಕೃಷಿ ಮಾಡಿದೆ. ಸಮಾಜವನ್ನು ಕಾಯುವ ಜವಾಬ್ದಾರಿಯನ್ನು ಹೊತ್ತಿರುವ ಪತ್ರಿಕೋದ್ಯಮವನ್ನು ‘ನಮ್ಮೂರು’ ವಿಶೇಷವಾಗಿ ಪ್ರತಿನಿಧಿಸುತ್ತಿರುವುದು ಖುಷಿಯ ವಿಚಾರ. ಅಕ್ಷರದ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡುತ್ತಿರುವ ಕ್ರಿಯಾಶೀಲ ಪತ್ರಕರ್ತರ ದಂಡೇ ಹಾಸನದಲ್ಲಿರುವಾಗ ಅದರಲ್ಲಿ ಮಹಿಳೆಯರ ಗಣನೀಯ ಪಾತ್ರವನ್ನು ವಿಶೇಷವಾಗಿ ದಾಖಲಿಸುವುದು ಅತ್ಯಂತ ಜವಾಬ್ದಾರಿಯ ಕೆಲಸ.
ಮಾಧ್ಯಮ ಕ್ಷೇತ್ರಗಳಲ್ಲಿನ ಮಹಿಳೆಯರ ಕ್ರಿಯಾಶೀಲತೆ ಮತ್ತು ಪರಿಶ್ರಮವನ್ನು ಗುರುತಿಸಿ ದಾಖಲಿಸಬೇಕೆನ್ನುವುದು ಪ್ರೋತ್ಸಾಹದಾಯಕ ಅನ್ನುವುದಕ್ಕಿಂತಲೂ ಅವಶ್ಯಕತೆ. ಮಾಧ್ಯಮ ಕ್ಷೇತ್ರ ಬಹಳಷ್ಟು ಕಾಲದವರೆಗೂ ಅಥವಾ ಇತ್ತೀಚಿನವರೆಗೂ… ತನ್ನ ಉನ್ನತ ಹುದ್ದೆಗಳಲ್ಲಿ ಮತ್ತು ಜವಾಬ್ದಾರಿಗಳಲ್ಲಿ ಹೆಣ್ಣನ್ನು ಮುಕ್ತವಾಗಿ… ವ್ಯಾಪಕವಾಗಿ ಒಳಗೊಂಡಿಲ್ಲ. ಆ ನಿಟ್ಟಿನಲ್ಲಿ ಮಹಿಳೆಯರ ಪ್ರಯತ್ನಶೀಲತೆಗೆ ಕೊರತೆ ಇಲ್ಲದಿದ್ದರೂ, ಮಾರ್ಗದರ್ಶನ, ವೇದಿಕೆ ಮತ್ತು ಮಾರುಕಟ್ಟೆ ಯಾವುದೂ ಇಲ್ಲದೆ ಮಹಿಳೆಯರು ಮುಖ್ಯವಾಹಿನಿ ಮಾಧ್ಯಮದ ಮುಖ್ಯಸ್ಥರಾಗಲು ಸಾಧ್ಯವಾಗಿರಲಿಲ್ಲ. ಹಾಸನ ಜಿಲ್ಲಾ ಪತ್ರಿಕೋದ್ಯಮದ ಮಟ್ಟಿಗೆ ಲೀಲಾವತಿ ಅವರು ‘ಹಾಸನವಾಣಿ’ ಸ್ಥಳೀಯ ದಿನಪತ್ರಿಕೆಯ ಸಂಪಾದಕತ್ವವನ್ನು ವಹಿಸಿಕೊಂಡಿದ್ದೇ ಮೊದಲು. ಕನ್ನಡಪ್ರಭ ದಿನಪತ್ರಿಕೆಯ ಜಿಲ್ಲಾ ವರದಿಗಾರರಾಗಿ ಸುದೀರ್ಘ ಕಾಲ ಕಾರ್ಯನಿರ್ವಹಿಸಿದ್ದ ಲೀಲಾವತಿ ಅವರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಏಕೈಕ ಮಹಿಳೆ. ಸ್ವಸಾಮರ್ಥ್ಯ ಮತ್ತು ನಿರಂತರ ಇಚ್ಛಾಶಕ್ತಿಯಿಂದ ಪತ್ರಿಕೆಯನ್ನು ಕಟ್ಟಿ ಬೆಳೆಸಿದವರು. ಅದಾಗಿ ಇತ್ತೀಚಿನವರೆವಿಗೂ ಮಾಧ್ಯಮ ಕ್ಷೇತ್ರದ ಸಂಪಾದಕ ಹುದ್ದೆಯಂತಹ ಮಹತ್ವದ ಹುದ್ದೆಗಳಲ್ಲಿ ಮಹಿಳೆಯರು ಕಾಣಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ.
ಇದನ್ನು ಓದಿದ್ದೀರಾ?: ಸಮಾಜ ಸ್ಪಂದನಶೀಲೆ- ಸೌಭಾಗ್ಯ ಸಿ.
ಐರನ್ ಲೇಡಿ ಎಂದೇ ಕರೆಸಿಕೊಳ್ಳುವ ಸುಶೀಲಾ ಸುಬ್ರಹ್ಮಣ್ಯ ಅವರು ನಮ್ಮ ನೆಲದ ಮಹಿಳಾ ಪತ್ರಕರ್ತೆಯರ ಹೆಸರಿಸುವಾಗ ಮೊದಲ ಸಾಲಿನಲ್ಲಿ ಸ್ಮರಿಸಿಕೊಳ್ಳಬೇಕಾದ ಹೆಸರು. ಬರೋಬ್ಬರಿ 64 ವರ್ಷಗಳ ಕಾಲ ರಾಷ್ಟ್ರೀಯ ಮಟ್ಟದಲ್ಲಿ ಒಂದು ಆಂಗ್ಲ ಪತ್ರಿಕೆಯನ್ನು ನಡೆಸಿಕೊಂಡು ಬಂದ ಇವರ ಸಾಹಸ ಶ್ಲಾಘನೀಯ. ‘ಸದರ್ನ್ ಎಕನಾಮಿಸ್ಟ್’ ಹೆಸರಿನ ಈ ಆಂಗ್ಲ ಭಾಷೆಯ ಪಾಕ್ಷಿಕ ದಿನನಿತ್ಯದ ಆಗುಹೋಗುಗಳನ್ನೇ ಸುದ್ದಿ ಮಾಡದೆ, ಅರ್ಥಶಾಸ್ತ್ರ ಪತ್ರಿಕೋದ್ಯಮದ ಮುಖಾಂತರ ಮಾರುಕಟ್ಟೆ, ಅಂಕಿ ಅಂಶ, ನೀತಿ ನಿಯಮಗಳ ಜೊತೆಗೆ, ಅರ್ಥ ವ್ಯವಸ್ಥೆಯ ಮೂಲ ಮತ್ತು ಉದ್ದೇಶಗಳನ್ನು ವಿಶ್ಲೇಷಿಸಿ ವರದಿ ಮಾಡುವ ಪತ್ರಿಕೆ. ವಾಣಿಜ್ಯ ಪತ್ರಿಕೋದ್ಯಮದಲ್ಲಿ, ಸುದ್ದಿ ಸಂಗ್ರಹ ಮತ್ತು ವರದಿಗಾರಿಕೆಗಿಂತ ಭಿನ್ನವಾದ ಚಿಂತನೆಗಳು ಮತ್ತು ವಿಶ್ಲೇಷಣೆಗಳು ಅಗತ್ಯವಿದ್ದು, ಅದನ್ನು ಒಬ್ಬ ಮಹಿಳೆ ತನ್ನ 92ರ ವಯಸ್ಸಿನಲ್ಲೂ ನಿಭಾಯಿಸಿಕೊಂಡು ಬರುತ್ತಿರುವ ರೀತಿ ಇಂದಿನ ಪತ್ರಕರ್ತೆಯರಿಗೆ ಅತ್ಯಂತ ದೊಡ್ಡ ಮಾದರಿ.
ಇದನ್ನು ಓದಿದ್ದೀರಾ?: ಉದ್ದಿಮೆ ಕ್ಷೇತ್ರದಲ್ಲಿ ಜಿಲ್ಲೆಯ ಹೆಣ್ಣುಮಕ್ಕಳು
ಜಿಲ್ಲೆಯ ಅತ್ಯಂತ ಹಳೆಯ ದಿನಪತ್ರಿಕೆ ಜನಮಿತ್ರದ ಸ್ಥಾಪಕ ಸಂಪಾದಕರಾದ ಕೃ.ನ.ಮೂರ್ತಿಯವರ ಪತ್ನಿ ಪಾರ್ವತಿ ಕೃ.ನ.ಮೂರ್ತಿ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದವರು. ಪತ್ರಿಕೋದ್ಯಮವೂ ಸಾಹಿತ್ಯವೇ. ಒಂದು ವಿಷಯವನ್ನು ತೂಗಿಸಿಕೊಂಡು ಹೋಗುವ, ತಿದ್ದುವ, ತೀಡುವ ಕೆಲಸ ಮಾತ್ರದಿಂದ ಪತ್ರಿಕೆ ವಸ್ತುನಿಷ್ಠವಾಗಲು ಸಾಧ್ಯ. ವಿಷಯ ಮತ್ತು ಬರವಣಿಗೆಯ ಶೈಲಿಸೂತ್ರದ ಕುಸುರಿ ಕೆಲಸದಲ್ಲಿ ಕೈ ಜೋಡಿಸಿ ಜನಮಿತ್ರ ಪತ್ರಿಕೆಯ ಹಿಂದಿನ ಶಕ್ತಿಯಾಗಿದ್ದವರು ಪಾರ್ವತಿ ಕೃ.ನ.ಮೂರ್ತಿಯವರು. ನಮ್ಮಲ್ಲಿನ ಬಹುತೇಕ ಸ್ಥಳೀಯ ಪತ್ರಿಕೆಗಳು ಅಂದು, ಇಂದೂ ಈ ಹಿಂದಿನ ಸ್ತ್ರೀ ಶಕ್ತಿಗಳಿಂದಲೇ ನಡೆಯುತ್ತಿವೆ ಅನ್ನುವುದನ್ನು ಅಲ್ಲಗಳೆಯಲಾಗುವುದಿಲ್ಲ.
ಬಾನು ಮುಷ್ತಾಕ್ ಎನ್ನುವ ಸೃಜನಶೀಲ ಹೆಣ್ಣು ಮಗಳೊಬ್ಬಳ ಧೈರ್ಯ ಮತ್ತು ವಿಚಾರವಂತಿಕೆಯ ಮಗ್ಗುಲನ್ನು ಪರಿಚಯಿಸಿದ್ದರಲ್ಲಿ ಪತ್ರಿಕೋದ್ಯಮದ ಪಾತ್ರ ಹಿರಿದು. ಪತ್ರಿಕೋದ್ಯಮದ ಧೀಮಂತ- ಲಂಕೇಶ್‌ರವರ ಗರಡಿಯಲ್ಲಿ ಪಳಗುತ್ತ ಪತ್ರಿಕಾ ಬರಹದಲ್ಲಿ ತೊಡಗಿಸಿಕೊಂಡ ಬಾನು ಮುಷ್ತಾಕ್‌ರವರ ಚಿಂತನೆಗಳು ವ್ಯಾಪ್ತಿ ಹಿಗ್ಗಿಸಿಕೊಳ್ಳುವುದರಲ್ಲಿ ಪತ್ರಿಕೋದ್ಯಮ ಕೆಲಸ ಮಾಡಿದೆ. ಅತ್ಯುತ್ತಮ ವರದಿಗಳ ಮೂಲಕ ಬಾನು ಮುಷ್ತಾಕ್ ತಮ್ಮನ್ನು ಪತ್ರಕರ್ತರಾಗಿಯೂ ಸಾಬೀತು ಪಡಿಸಿಕೊಂಡಿದ್ದಾರೆ.
ಇದನ್ನು ಓದಿದ್ದೀರಾ?: ಸ್ತ್ರೀ ಲೋಕದ ಅಸ್ಮಿತೆ- ಪದ್ಮಾ ಶ್ರೀರಾಮ್
ಕನ್ನಡ ಪತ್ರಿಕೆಗಳಲ್ಲಿ ಹತ್ತಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಗೊರೂರು ಪಂಕಜ, ಸುವರ್ಣ ಸಿ., ಇಂದಿರಾ ಹಿರಿಯೂರು, ಸುಜಲಾದೇವಿ, ಶೃತಿ ಕಾಮಸಮುದ್ರ, ಡಾ.ಎಚ್.ಸಿ.ಭವ್ಯ ನವೀನ್ ಮುಂತಾದವರ ಜೊತೆ ಪತ್ರಿಕೋದ್ಯಮವನ್ನು ಕಲಿತು, ಕೆಲಸ ಮಾಡುತ್ತಿರುವ ಕಿರಿಯ ಪತ್ರಕರ್ತೆಯರು ವಿಫುಲವಾಗಿದ್ದು ಅವರು ಗಟ್ಟಿಯಾಗಿ ರೂಪುಗೊಳ್ಳಲಿ ಅನ್ನುವುದೇ ಆಶಯ. ಇವರಲ್ಲದೆ, ವಿವಿಧ ಸಾಮಾಜಿಕ/ದೃಶ್ಯಮಾಧ್ಯಮದಲ್ಲಿ ಕೆಲಸ ನಿರ್ವಹಿಸಿರುವ ಲತಾ ಧರ್ಮರಾಜು, ಚೇತನಾ ಹರೀಶ್, ಜಾನ್ಹವಿ, ಕಾವ್ಯ ಶೆಟ್ಟಿ, ಈ.ಆರ್.ಶ್ವೇತಾ ಮಂಜುನಾಥ್, ಗಿರಿಜಾ ಎಸ್.ಜಿ. ನಮ್ಮ ಜಿಲ್ಲೆಯವರು. ಇನ್ನೂ ಅನೇಕರಿರಬಹುದು…
*
ಸುದ್ದಿ ಸಂಪಾದನೆ, ಪರಿಷ್ಕರಣೆ ಯಾವುದೇ ಪತ್ರಿಕೆಯ ಜೀವಾಳ. ಅದನ್ನು ಮುನ್ನೆಲೆಯಲ್ಲಿ ಪ್ರತಿನಿಧಿಸುವುದಕ್ಕಿಂತ, ಅದನ್ನು ತಿದ್ದಿ ತೀಡುವ ಕೆಲಸವನ್ನು ಮಾಡಿಕೊಂಡು ಬರುತ್ತಿರುವವರನ್ನು ಅತ್ಯಂತ ಮುಖ್ಯವಾಗಿ ಗುರುತಿಸಬೇಕಾದ್ದು ಈ ಹೊತ್ತಿನ ಅಗತ್ಯ ಮತ್ತು ವೇದಿಕೆಯ ಉದ್ದೇಶ ಅನ್ನುವುದನ್ನು ಗಮನದಲ್ಲಿರಿಸಿಕೊಂಡು ಹತ್ತಾರು ವರ್ಷಗಳ ಕಾಲ ಯಾವ ನಿರೀಕ್ಷೆಯೂ ಇಲ್ಲದೆ ಕನ್ನಡ ಮಾಧ್ಯಮ ಲೋಕದ ಏಳಿಗೆಯಲ್ಲಿ ದುಡಿದವರ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಇದಾಗಿದೆ.
ಇದನ್ನು ಓದಿದ್ದೀರಾ?: ಐತಿಹಾಸಿಕ ಮಹಿಳೆಯರು ಮತ್ತು ಹಾಸನ ಜಿಲ್ಲೆ
ಮಾಧ್ಯಮ ಕ್ಷೇತ್ರಕ್ಕೆ ಜಿಲ್ಲೆಯ ಮಹಿಳೆಯರ ಕೊಡುಗೆ ಅಂದಾಕ್ಷಣ ಮೊದಲಿಗೆ ಹಾಸನದ ಪತ್ರಕರ್ತೆಯರ ಹೆಸರುಗಳನ್ನು ಮಾತ್ರ ಹುಡುಕಲು ಶುರು ಮಾಡಿದ್ದು ನಂತರದಲ್ಲಿ ನನಗೇ ಖೇದವೆನಿಸಿತು. ಪತ್ರಿಕೋದ್ಯಮ ತನ್ನ ಸಂರಚನೆಯಲ್ಲಿ ಸಂಪಾದಕೀಯ ವಿಭಾಗದಿಂದ ಮೆರುಗು ಪಡೆದುಕೊಳ್ಳುತ್ತದಾದರೂ ಅದರ ಉಳಿದ ವಿಭಾಗಗಳಿಲ್ಲದೆ ಅತ್ಯಂತ ಸೀಮಿತವಾಗಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಪತ್ರಿಕಾರಂಗ- ಪತ್ರಿಕಾ ಉದ್ಯಮವಾಗಿ ಬದಲಾಗುವ ಹಾದಿಯಲ್ಲಿ ತನ್ನೊಳಗೇ ವಿಸ್ತಾರವಾಗುತ್ತಾ ಬಂದ ನಂತರ, ಪತ್ರಿಕೆಗಳನ್ನು ನೈತಿಕವಾಗಿ ನಿಲ್ಲುವ ಮತ್ತು ವ್ಯಾವಹಾರಿಕವಾಗಿ ಬೆಳೆಯುವ ಸಾಧ್ಯತೆಗಳನ್ನು ತೆರೆದುಕೊಟ್ಟಿದ್ದು ಉತ್ಪಾದನಾ, ಜಾಹೀರಾತು ಮತ್ತು ಪ್ರಸರಣ ವಿಭಾಗಗಳು. ಹಾಗಾಗಿ ಮಾಧ್ಯಮ ಕ್ಷೇತ್ರಕ್ಕೆ ಮಹಿಳೆಯರ ಕೊಡುಗೆ ಎಂದು ಬಂದಾಗ, ಕೇವಲ ಪತ್ರಕರ್ತರನ್ನು ಮಾತ್ರವಲ್ಲದೆ, ಸುದ್ದಿ ಮನೆಯ ಹಲವು ಜವಾಬ್ದಾರಿಗಳನ್ನು ವಹಿಸಿಕೊಂಡು ದೀರ್ಘಕಾಲಿಕವಾಗಿ ಮಾಧ್ಯಮದಲ್ಲಿ ಸೇವೆ ಸಲ್ಲಿಸುತ್ತಿರುವ ನಮ್ಮ ನೆಲದ ಎಲೆ ಮರೆ ಕಾಯಿಗಳನ್ನು ಪರಿಚಯಿಸುವುದು ಹೆಚ್ಚು ಅರ್ಥಪೂರ್ಣವೆನಿಸಿದ ಕಾರಣದಿಂದ ಕೆಲವರ ಹೆಸರುಗಳನ್ನು ಇಲ್ಲಿ ಉಲ್ಲೇಖಿಸುತ್ತಿದ್ದೇನೆ.
ಅಪ್ಪ ನಡೆಸುತ್ತಿದ್ದ ‘ಹಾಸನ ಸಂಗಾತಿ’ಯ ಜೊತೆಗೆ ಹಲವು ಸಣ್ಣ ಪತ್ರಿಕೆಗಳ ಕಷ್ಟ ಸುಖಗಳನ್ನು ಹತ್ತಿರದಿಂದ ನೋಡಿಕೊಂಡೇ ಬೆಳೆದವಳು ನಾನು. ಆಳ ಮತ್ತು ತಳದ ಅರಿವು ಎಲ್ಲರನ್ನು ಗುರುತಿಸಬೇಕಾದ ಅವಶ್ಯಕತೆಯನ್ನು ಕಲಿಸುತ್ತದೆ. ಆ ನಿಟ್ಟಿನಲ್ಲಿ ಹೇಳುವುದಾದರೆ, ವರದಿಗಾರರ ಕಚ್ಚಾ ಸುದ್ದಿಗಳನ್ನು ಪಕ್ಕಾ ಮಾಡುವ ಜವಾಬ್ದಾರಿಯನ್ನು ಹೊತ್ತು ನಿರ್ವಹಿಸುತ್ತಿದ್ದವರೇ ಕಂಪೋಸಿಟರ್‌ಗಳು- ಕಂಪ್ಯೂಟರ್ ಬಂದ ನಂತರ ಡಿಟಿಪಿ ಆಪರೇಟರ್‌ಗಳು. ನಾವೀಗ ಅವರನ್ನು ಚಂದಗೆ ಪೇಜಿನೇಟರ್ ಅಂತ ಕರೆಯುತ್ತೇವೆ. ಹಾಸನದ ಪತ್ರಿಕೋದ್ಯಮದಲ್ಲಿ ಪೇಜಿನೇಟರ್‌ಗಳಲ್ಲಿ ಮಹಿಳೆಯರ ಸಂಖ್ಯೆಯೇ ಜಾಸ್ತಿ. ಸುದ್ದಿಗಳನ್ನು ಒಪ್ಪವಾಗಿ ಟೈಪಿಸಿ, ಚಂದಗೆ ಲೇಔಟ್ ಮಾಡಿಕೊಡುತ್ತಿದ್ದ ಜನತಾ ಮಾಧ್ಯಮದ ಲತಾಮ್ಮ- ಲತಾ ಬಾಯಿ ಎರಡು ದಶಕಗಳನ್ನು ಮೀರಿ ಅಲ್ಲಿ ಕೆಲಸ ಮಾಡಿದ್ದಾರೆ. ಕಳೆದ ಹಲವು ವರ್ಷದಿಂದ ಪ್ರಜೋದಯದಲ್ಲಿ ಕೆಲಸ ಮಾಡುತ್ತಿರುವ ಭಾರತಿ, ಹದಿನಾರು ವರ್ಷಗಳಿಂದ ಜನಮಿತ್ರ ಪತ್ರಿಕೆಯ ಪುಟ ವಿನ್ಯಾಸದ ಜೊತೆಗೆ ಉಪಸಂಪಾದಕಿಯಾಗಿರುವ ಶ್ರೀ ಲಕ್ಷ್ಮಿ ಎಸ್.ಪ್ರಸಾದ್, ಸತ್ಯದ ಹೊನಲು, ಹಲೋ ಹಾಸನ್, ಜನಮಿತ್ರ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ದಶಕದವರೆಗೆ ಕೆಲಸ ಮಾಡಿದ್ದ ಶಶಿ ಹೆಚ್.ಜಿ, ಜನತಾ ಮಾಧ್ಯಮ, ಜೇನುಗಿರಿ ಮುಂತಾದ ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಚೈತ್ರ… ಸ್ಥಳೀಯ ದಿನಪತ್ರಿಕೆಗಳ ಉಳಿವಿನಲ್ಲಿ ಬಹಳ ಮಹತ್ವದ ಪಾತ್ರವನ್ನು ವಹಿಸಿದ್ದಾರೆ. ಪತ್ರಿಕೆಯೊಂದರ ವ್ಯವಸ್ಥಾಪಕತ್ವ ಮತ್ತು ಉಪಸಂಪಾದನೆಯನ್ನು ಮಾಡಿಕೊಂಡು ಬರುತ್ತಿರುವ ಭೀಮ ವಿಜಯ ಪತ್ರಿಕೆಯ ಭವ್ಯ ನಾಗರಾಜ್, ಹೊಯ್ಸಳ ಪಥ ಪತ್ರಿಕೆಯ ಪೂಜಾ ರಘುನಂದನ್ ಕೂಡ ಇಲ್ಲಿ ಗುರುತಿಡಬೇಕಾದ ಹೆಸರು.
ಇದನ್ನು ಓದಿದ್ದೀರಾ?: ಜಿಲ್ಲೆಯ ಫಲವತ್ತತೆಗೆ ಆಶಾ ತಾಯಂದಿರ ಕೊಡುಗೆ
ಪತ್ರಿಕೆಗಳ ಉಳಿವಿನಲ್ಲಿ ಪ್ರಸರಣ ವಿಭಾಗದ ಪಾತ್ರ ಅತ್ಯಂತ ಕ್ಲಿಷ್ಟ. ಬೆಳಗಿನ ಜಾವ ನಡುಗತ್ತಲಲ್ಲಿ ಎದ್ದು ಪತ್ರಿಕೆಗಳನ್ನು ಎಣಿಸಿ, ಜೋಡಿಸಿ, ಮನೆ ಮನೆಗೆ ಕಳಿಸುವ ಕೆಲಸ ಮಾಡುವ ಪತ್ರಿಕಾ ವಿತರಣಾ ವಿಭಾಗದಲ್ಲಿ ಸವಾಲುಗಳೇ ಹೆಚ್ಚು. ಆದರೆ ಅಲ್ಲಿಯೂ ನಮ್ಮ ಹೆಣ್ಣುಮಕ್ಕಳು ದುಡಿದು ಸೈ ಎನ್ನಿಸಿಕೊಂಡಿರುವ ಹಲವು ಉದಾಹರಣೆಗಳಿವೆ. ದಶಕಗಳಿಂದ ಪೇಪರ್ ಏಜೆಂಟ್ ಆಗಿರುವ ಕುಪ್ಪಳ್ಳಿ ಹಾಲಮ್ಮ, ನಿಟ್ಟೂರು ಗಂಗಮ್ಮ, ಚೀಕನಹಳ್ಳಿ ಶ್ವೇತ, ಹಾಸನದ ತರುಣ್ ಡಿಸ್ಟ್ರಿಬ್ಯೂರ್ಸ್‌ನಿಂದ ಪ್ರೀತಿ ತರುಣ್… ಇವರೆಲ್ಲರೂ ಪತ್ರಿಕೋದ್ಯಮದ ತಳಹಂತದ ಹಾಗೂ ಅತ್ಯಂತ ಪ್ರಮುಖ ಘಟ್ಟಕ್ಕೆ ತಮ್ಮ ಪರಿಶ್ರಮದ ಕೊಡುಗೆಯನ್ನು ನೀಡುತ್ತಾ ಬಂದಿದ್ದಾರೆ.
ಇದನ್ನು ಓದಿದ್ದೀರಾ?: ಮಹಿಳಾ ಸಬಲೀಕರಣದ ಆಶಾಕಿರಣಗಳು
ಸಂಪಾದಕೀಯ, ವಿನ್ಯಾಸ ಮತ್ತು ಜಾಹೀರಾತು, ಪ್ರಸರಣ… ಎಲ್ಲಾ ವಿಭಾಗಗಳಲ್ಲೂ ಮುಳುಗೇಳುತ್ತಿರುವ ನನಗೆ, ಮಾಧ್ಯಮ ಕ್ಷೇತ್ರ ಎಂದರೆ ಇಂದಿಗೂ ಕಣ್ಣರಳಿಸಿ ನೋಡುವ ಕೌತುಕ. ಸಮಾನತೆಯ ಪ್ರಶ್ನೆ ಅಲ್ಲದಿದ್ದರೂ ಇಲ್ಲಿ ಕೆಲಸ ನಿರ್ವಹಿಸುತ್ತಿರುವ ಪುರುಷ ಮತ್ತು ಮಹಿಳೆಯರ ನಡುವಣ ಆತ್ಮವಿಶ್ವಾಸದಲ್ಲಿ ಬಹಳ ವ್ಯತ್ಯಾಸವಿದೆ. ಅದನ್ನು ಪತ್ರಿಕೋದ್ಯಮದ ಪಿಹೆಚ್.ಡಿಯಿಂದಲೂ ಮೀರಲಾಗುವುದಿಲ್ಲ ಎನ್ನುವುದು ನನ್ನ ಅನುಭವ. ಅದೊಂದು ಬೌದ್ಧಿಕ ಪ್ರಜ್ಞೆಯನ್ನು ಕಡೆಗಣಿಸುವ ಸಾಮಾಜಿಕತೆ ಬಗ್ಗೆ ಹೆಚ್ಚು ವಿಚಾರಗಳಾಗಬೇಕು. ಕಾರ್ಯಕ್ಷೇತ್ರದಲ್ಲಿ ಹೆಸರಾಗದಿದ್ದರೂ ಹೆಸರಿಸುವ ಪರಿಪಾಠದಲ್ಲಿ ಮಹಿಳೆಯರು ಹೆಚ್ಚು ಕಾಣಿಸಿಕೊಳ್ಳಲಿ ಎನ್ನುವ ಆಶಯದ ಈ ಲೇಖನದಲ್ಲಿ ಯಾರಾದರೂ ತಪ್ಪಿಸಿಕೊಂಡು ಲೋಪವಾಗಿದ್ದರೆ ಅದು ನನ್ನ ಮಿತಿಯೂ ಹೌದು, ಆ ಮುಖಾಂತರ ಸಮಾಜದ ಮಿತಿಯೂ ಹೌದು.
-ಡಾ. ಎಚ್.ಸಿ.ಭವ್ಯ ನವೀನ್





