ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ…
ಹಾಸನ ಎಂದ ತಕ್ಷಣ ನಮ್ಮ ಮುಂದೆ ಹಾಯ್ದು ಹೋಗುವುದು ಬೇಲೂರು, ಹಳೇಬೀಡು, ಶ್ರವಣಬೆಳಗೊಳ, ಎಂಸಿಎಫ್, ಆಲೂಗಡ್ಡೆ, ಹಾಸನ ಜಾತ್ರೆಯ ಮುರುಗಿನ ಜೋಡು, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಅನಕೃ, ಹಾಸನದ ರಾಜಾರಾವ್, ಬುಕರ್ ಬಾನು ಮುಸ್ತಾಕ್, ಭಾರತದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಮುಂತಾದವರು. ಇಂತಹ ಸಾಧಕರನ್ನು ನೀಡಿರುವ ಈ ನೆಲದ ಮಣ್ಣಲ್ಲಿ ಜಗತ್ತೇ ಬೆಚ್ಚಿ ಬೀಳುವಂತಹ ಮಹಿಳಾ ದೌರ್ಜನ್ಯ ಜನಪ್ರತಿನಿಧಿಯೊಬ್ಬನಿಂದ ನಡೆದದ್ದು, ಆ ದೌರ್ಜನ್ಯಕ್ಕೆ ಜಿಲ್ಲೆಯ ಜಾಗೃತ ಮಹಿಳೆಯರು ಹೋರಾಟದ ಮೂಲಕ ತಕ್ಕ ಶಾಸ್ತಿ ಮಾಡಿದ್ದು ಚರಿತ್ರಾರ್ಹ ಮಹಾದಾಖಲೆ.
ಭಾರತದ ಸಂದರ್ಭದಲ್ಲಿ ಮನುಸ್ಮೃತಿ ಮತ್ತು ಕೌಟಿಲ್ಯನ ಅರ್ಥಶಾಸ್ತ್ರ ಈ ಮಣ್ಣಿನ ಮಹಿಳೆಯರಿಗೆ ಶತಶತಮಾನಗಳಿಂದ ಮಾಡಿದ ಶೋಷಣೆಗಳು ತಾಳ್ಮೆಯ ತಾಯಿ ಬೇರಾದ ಸ್ತ್ರೀಯ ಒಡಲೊಳಗೆ ಮಡುಗಟ್ಟಿರುವ ತಲ್ಲಣಗಳು ಮನುಷ್ಯತ್ವ ಇರುವ ಯಾರನ್ನಾದರು ಕಲಕಿಬಿಡುತ್ತವೆ. ಅಧೀರತೆ, ನೋವು, ಸಂಕಟ ತಮ್ಮೊಳಗಿದ್ದರೂ ಕರುಳು ತುಂಬಾ ಕರುಣೆ ತುಂಬಿಕೊಂಡು ಪ್ರೀತಿ ಹಂಚುವ ಪ್ರಮುಖ ಜೀವವೇ ಮಹಿಳೆ. ಈ ನೆಲದಲ್ಲಿ ಪುರುಷ ಪ್ರಣೀತ ಶಿಕ್ಷಣದ ವ್ಯವಸ್ಥೆ ಇದ್ದರೂ ‘ಜನನಿಯೇ ಮೊದಲ ಗುರು’ ಎನ್ನುವ ಅಭಿಧಾನಕ್ಕೆ ಒಳಗಾದವಳು ಮಹಿಳೆ. ಮನುಧರ್ಮಶಾಸ್ತ್ರದ ಕಟ್ಟುಪಾಡಿಗೆ ಅಂಜಿ ತಮ್ಮ ಶಿಕ್ಷಣದ ಕನಸನ್ನು ಸಾಕಾರ ಮಾಡಿಕೊಳ್ಳಲು ಸೋತ ಅಗಣಿತಾಗಣಿತ ಹೆಣ್ಣು ಜೀವಗಳ ಲೆಕ್ಕ ಇಟ್ಟವರಾರು? ಶತಮಾನಗಳಿಂದ ಹಾಸುಹೊಕ್ಕಾಗಿದ್ದ ಲಿಂಗತಾರತಮ್ಯ, ಅಸಮಾನತೆ, ಮೈಲಿಗೆಯ ಮನೋಧರ್ಮದ ಹಕೀಕತ್ತಿನ ಕಾರಣದಿಂದ ಹೆಣ್ಣುಮಕ್ಕಳ ಶಿಕ್ಷಣದ ಸ್ವಾತಂತ್ರ್ಯ ದೋಚಿದ್ದಕ್ಕೆ ನಾಗರಿಕ ಸಮಾಜ ತಲೆ ತಗ್ಗಿಸಬೇಕು.
ಇದನ್ನು ಓದಿದ್ದೀರಾ?: ಶೈಕ್ಷಣಿಕ ಪ್ರಗತಿಯಲ್ಲಿ ಬಿಸಿಯೂಟ ತಾಯಂದಿರ ಕೊಡುಗೆ
ಈ ಎಲ್ಲಾ ಪೂರ್ವಗ್ರಹಗಳಿಂದ ಬಿಡುಗಡೆಗೊಳಿಸಿ, ಹೊಸ ಬದುಕು ಮತ್ತು ಚಿಂತನೆಗಳನ್ನು ಕಟ್ಟಿಕೊಟ್ಟು ಆತ್ಮೋದ್ಧಾರದ ಬೆಳಕಾಗಬೇಕು ಶಿಕ್ಷಣವೆಂದು- ಜ್ಯೋತಿಬಾ, ಸಾವಿತ್ರಿಬಾ ಫುಲೆ ದಂಪತಿಗಳು ಮತ್ತು ಡಾ. ಬಿ.ಆರ್.ಅಂಬೇಡ್ಕರ್ ಅವರು ಪ್ರತಿಪಾದಿಸಿದ ನಂತರದಲ್ಲಿ ಅವರ ವಿಚಾರಧಾರೆಯಂತೆ ಮಹಿಳೆಯರೊಳಗೆ ಶಿಕ್ಷಣದ ವಿಮೋಚನೆಯ ಕಿಡಿ ಹೊತ್ತಿತು. ಶಿಕ್ಷಣದಿಂದ ಮಾತ್ರ ಮಹಿಳಾ ವಿಮೋಚನೆ ಸಾಧ್ಯವೆಂಬ ಸತ್ಯವನ್ನು ಅರಿತ ಹಲವು ಮಹಿಳೆಯರು ಹಾಸನ ಜಿಲ್ಲೆಯಲ್ಲಿಯೂ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಮುನ್ನೆಡೆಸಿದ್ದಾರೆ. ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹಲವು ರೀತಿಯ ಹೊಸ ದಾರಿಗಳನ್ನು ತೋರಿದ್ದಾರೆ.
ಪೂರ್ವದ ಕಿರಿಸಾವೆಯಿಂದ ಪಶ್ಚಿಮದ ಕಾಡುಮನೆ, ಉತ್ತರದ ಕಣಕಟ್ಟೆಯಿಂದ ದಕ್ಷಿಣದ ಸಿದ್ದಾಪುರ ಗೇಟ್‌ವರೆಗೆ ಹಾಸನ ಜಿಲ್ಲೆಯ ವ್ಯಾಪ್ತಿಯಲ್ಲಿ ಸರ್ಕಾರಿ ಮತ್ತು ಖಾಸಗಿ ಸೇರಿ ಅಂದಾಜು 5,000 ಶಿಕ್ಷಣ ಸಂಸ್ಥೆಗಳಿರಬಹುದು. ಇದರಲ್ಲಿ ಸುಮಾರು ಎರಡು ಲಕ್ಷಕ್ಕೂ ಮೀರಿದ ಹೆಣ್ಣುಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಸುಮಾರು 26 ಸಾವಿರಕ್ಕೂ ಹೆಚ್ಚು ಶಿಕ್ಷಕಿಯರು ಜಿಲ್ಲೆಯಲ್ಲಿ ಸೇವೆಯಲ್ಲಿದ್ದಾರೆ. ಇಂತಹ ವಿಸ್ತಾರದ ಜಿಲ್ಲೆಯಲ್ಲಿ ಶೈಕ್ಷಣಿಕ ಸಾಧನೆ ಮಾಡಿದ ಪ್ರಮುಖ ಮಹಿಳಾ ಸಾಧಕಿಯರೂ ಇದ್ದಾರೆ.
ಇದನ್ನು ಓದಿದ್ದೀರಾ?: ಮಹಿಳಾ ಸಬಲೀಕರಣದ ಆಶಾಕಿರಣಗಳು
ಕರ್ನಾಟಕದ ಕಸ್ತೂರಬಾರೆಂದೇ ಖ್ಯಾತರಾದ ಯಶೋಧರಾ ದಾಸಪ್ಪ ಎಸ್.ನಿಜಲಿಂಗಪ್ಪನವರ ಸಂಪುಟದಲ್ಲಿ ಸಮಾಜ ಕಲ್ಯಾಣ ಸಚಿವರಾಗಿದ್ದಾಗ 1969ರಲ್ಲಿ ಅರಸೀಕೆರೆಯಲ್ಲಿ ಕಸ್ತೂರಬಾ ರಾಷ್ಟ್ರೀಯ ಸ್ಮಾರಕವನ್ನು ಸ್ಥಾಪಿಸಿ ಮಹಿಳೆಯರಲ್ಲಿ ಶಿಕ್ಷಣ, ಸ್ವಾವಲಂಬನೆ ಬೆಳೆಸಿದರು. ಸಹಕಾರಿ ದುರೀಣ ಎಲ್.ಟಿ.ಕಾರ್ಲೆಯವರ ಕಾರ್ಲೆ ಗ್ರಾಮದಲ್ಲಿ, ಗ್ರಾಮೀಣ ವಿದ್ಯಾರ್ಥಿನಿಯರಿಗಾಗಿ ‘ಕಸ್ತೂರಬಾ ಕನ್ಯಾ ವಿದ್ಯಾಲಯ’ವನ್ನು 1972ರಲ್ಲಿ ತೆರೆದರು. ಈ ಶಾಲೆಯು ಶಿಕ್ಷಣ ಇಲಾಖೆಯಲ್ಲಿ ಕೆಕೆವಿ ಶಾಲೆ ಎಂದು ದಾಖಲೆ ಇದ್ದರು, ಸುತ್ತಮುತ್ತಲಿನ ಸಾರ್ವಜನಿಕರು ವಿದ್ಯಾರ್ಥಿಗಳು ಈಗಲೂ ಕರೆಯುವುದು ‘ಯಶೋಧರಮ್ಮ ಶಾಲೆ’ ಎಂದು. ಈ ಶಾಲೆ ಯಶೋಧರ ದಾಸಪ್ಪನವರು ಗ್ರಾಮೀಣ ವಿದ್ಯಾರ್ಥಿನಿಯರ ಶಿಕ್ಷಣಕ್ಕಾಗಿ ನೀಡಿದ ಕೊಡುಗೆಯಾಗಿ ಈಗಲೂ ನಡೆಯುತ್ತಿದೆ. ಗಾಂಧೀಜಿಯಿಂದ ದತ್ತು ಪಡೆದ ದಲಿತ ಹೆಣ್ಣುಮಗುವಿಗೆ ಇವರು ಶಿಕ್ಷಣ ಕೊಡಿಸಿ, ಮದುವೆ ಮಾಡಿ ಜಾತಿ ತಾರತಮ್ಯದ ಮೌಢ್ಯವನ್ನು ಮುರಿದರು.
ಸಕಲೇಶಪುರದ ಚಿನ್ನಳ್ಳಿಯಲ್ಲಿ 1933ರಲ್ಲಿ ಜನಿಸಿದ ಕಮಲ ಕಲಿವೀರ್ ಮೈಸೂರಿನ ಗುಡ್ ಶಫರ್ಡ್ ಶಾಲೆಯಲ್ಲಿ ವ್ಯಾಸಂಗ ಮಾಡಿ ಶಿಕ್ಷಕಿಯಾಗಿ, ಬನವಾಸೆಯ ಮಹೇಂದ್ರ ಕಲಿವೀರ್‌ರನ್ನು ಮದುವೆಯಾದರು. ಗಾಂಧಿ, ಅಂಬೇಡ್ಕರ್ ವಿಚಾರಧಾರೆಗಳ ಪ್ರಭಾವಕ್ಕೊಳಗಾಗಿದ್ದ ಇವರು, 1958ರಲ್ಲಿ ಹಾಸನ ಜಿಲ್ಲಾ ಹರಿಜನಸಂಘ ಸ್ಥಾಪಿಸಿ ಅದರ ಅಧ್ಯಕ್ಷರಾದರು. ಸಾಮಾಜಿಕ ಪಿಡುಗಾಗಿದ್ದ ವರದಕ್ಷಿಣೆ, ಅನಕ್ಷರತೆಯ ವಿರುದ್ಧ ಚಳವಳಿ ಮಾಡಿದರು. 1924ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಸನದಲ್ಲಿ ಸ್ಥಾಪಿಸಿದ ‘ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ ಶಿಕ್ಷಣ ವಸತಿ ಶಾಲೆ’ಯನ್ನು ಉಳಿಸುವಲ್ಲಿ ಶ್ರಮಿಸಿದರು. ಈ ಶಾಲೆಗೆ ಡಾ. ಬಿ.ಆರ್.ಅಂಬೇಡ್ಕರ್ 1954ರಲ್ಲಿ ಭೇಟಿ ಕೊಟ್ಟಿದ್ದರು ಎನ್ನುವ ಅಭಿಪ್ರಾಯ ಕೆಲವರಲ್ಲಿ ಇದೆ. ದಲಿತ ಹೆಣ್ಣುಮಕ್ಕಳಿಗೆ ಶಿಕ್ಷಣ ಸವಾಲಾಗಿದ್ದ ಕಾಲದಲ್ಲಿ 1983ರಲ್ಲಿ ಆಡುವಳ್ಳಿಯಲ್ಲಿ, 1984ರಲ್ಲಿ ಆಲೂರಿನಲ್ಲಿ ಕಲಿವೀರ್ ಶಾಲೆಗಳನ್ನು ಹೆಣ್ಣುಮಕ್ಕಳಿಗಾಗಿ ತೆರೆದರು. ಮಹಿಳೆಯರ ಶಿಕ್ಷಣ, ಸ್ವಾವಲಂಬನೆಗಾಗಿ ಹಾಸನದಲ್ಲಿ 1985ರಲ್ಲಿ ಲಕ್ಷ್ಮಿ ಮಹಿಳಾ ಸಮಾಜ, 1987ರಲ್ಲಿ ಸರಸ್ವತಿ ಮಹಿಳಾ ಸಮಾಜ ಪ್ರಾರಂಭಿಸಿದರು. ಮಲೆನಾಡ ಕೂಲಿ ಕಾರ್ಮಿಕ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ 1992ರಲ್ಲಿ ಬಾಳ್ಳುಪೇಟೆಯಲ್ಲಿ ಕಲಿವೀರ್ ಶಾಲೆ ತೆರೆದು ನಡೆಸಿದ ಇವರು 1995ರಲ್ಲಿ ನಿಧನ ಹೊಂದಿದರು.
ಇದನ್ನು ಓದಿದ್ದೀರಾ?: ದಿಟ್ಟತನದ ಗಟ್ಟಿ ಹೋರಾಟಗಾರ್ತಿ, ಸಾಹಿತಿ- ವಿಜಯಾ ದಬ್ಬೆ
ಸರ್ಕಾರಿ ಕನ್ನಡ ಶಾಲೆಗಳೇ ಶಿಕ್ಷಣ ಸಂಸ್ಕೃತಿಯ ತಾಯಿಬೇರುಗಳು, ಇಲ್ಲಿ ಕಲಿತು ಸಾಧಿಸಿದವರು ಅಪಾರ. ಹಾಸನದಲ್ಲೊಂದು ಅಪರೂಪದ ಸರ್ಕಾರಿ ಶಾಲೆಯಿದೆ. ಅದೇ ‘ಹನುಮಮ್ಮ ಶಾಲೆ’. ಹನುಮಮ್ಮ ಹೆಚ್ಚು ಶಿಕ್ಷಣ ಪಡೆದವರೂ ಅಲ್ಲ. ಸ್ವಚ್ಛತೆ, ಶಿಸ್ತು, ಸಮಯ ಪ್ರಜ್ಞೆಯನ್ನು ಉಸಿರಾಗಿಸಿಕೊಂಡಿದ್ದ ಸಾಮಾನ್ಯ ನಾಲ್ಕನೆ ದರ್ಜೆ ನೌಕರರು. ತಲೆಗೆ ಎಣ್ಣೆ ಇಲ್ಲದೆ, ಸಿಂಬಳ ಸುರಿಸಿಕೊಂಡು, ಅಸ್ತವ್ಯಸ್ತ ಬಟ್ಟೆಗಳನ್ನು ಹಾಕಿಕೊಂಡು ಕೊಳಕಾಗಿ ಶಾಲೆಗೆ ಬರುವ ಕೂಲಿಕಾರರ ಮಕ್ಕಳ ಸಿಂಬಳ ತೆಗೆದು, ಮುಖ ತೊಳೆದು, ತಲೆಗೆ ಎಣ್ಣೆಹಾಕಿ ಬಾಚಿ, ಅವರ ಉಗುರುಗಳನ್ನು ಕತ್ತರಿಸಿ ಸ್ವಚ್ಛಗೊಳಿಸಿ, ಅಸ್ತವ್ಯಸ್ತ ಬಟ್ಟೆಗಳನ್ನು ಸರಿಪಡಿಸಿ, ಶಾಲೆ ಬಿಟ್ಟ ಮಕ್ಕಳನ್ನು ಶಿಸ್ತಾಗಿ ಶಾಲೆಗೆ ಕರೆತಂದು ಶಿಕ್ಷಣಕ್ಕೆ ಹಚ್ಚುತ್ತಿದ್ದ ಬಡ ಮಕ್ಕಳ ಶಿಕ್ಷಣದ ತಾಯಿ ಇವರು. ಇದೆಲ್ಲವನ್ನು ಅವರು ಮಾಡಿದ್ದು ಸ್ವಂತ ಹಣದಿಂದ. ಇಷ್ಟಲ್ಲದೆ ಶಾಲೆಗೆ ಸರಿಯಾದ ಸಮಯಕ್ಕೆ ಹಾಜರಾಗದ ಶಿಕ್ಷಕರನ್ನು ಗೇಟಿನ ಹೊರಗೆ ನಿಲ್ಲಿಸಿ ಶಿಕ್ಷಕರಲ್ಲಿ ಸಮಯಪ್ರಜ್ಞೆ ಕಲಿಸಿದ ಶಿಕ್ಷಣ ಕಳಕಳಿಯ ಗಟ್ಟಿಗಿತ್ತಿ. ನಿವೃತ್ತಿಯ ನಂತರ 82ನೆಯ ವಯಸ್ಸಿನಲ್ಲಿ ನಿಧನದವರೆಗೂ ಸರಿಯಾದ ಸಮಯಕ್ಕೆ ಶಾಲೆಗೆ ಹಾಜರಾಗಿ ಮಕ್ಕಳಲ್ಲಿ, ಶಿಕ್ಷಕರಲ್ಲಿ ಶಿಸ್ತು, ಸ್ವಚ್ಛತೆ, ಸಮಯಪ್ರಜ್ಞೆ ಹೆಚ್ಚುವಂತೆ ಮಾಡಿದ ಅಸಾಮಾನ್ಯ ಮಹಿಳೆಯಿವರು.
ಶೈಕ್ಷಣಿಕ ಶ್ರೇಷ್ಠತೆ ಮತ್ತು ಮಾನವೀಯ ಮೌಲ್ಯಗಳನ್ನು ಹೊಂದಿರುವ ತಾರಾ ಎಸ್.ಸ್ವಾಮಿ ಜನಿಸಿದ್ದು 1963ರಲ್ಲಿ. ತಾಯಿ ಜಯಮ್ಮ, ತಂದೆ ಸಿ.ಟಿ.ಮಳಲಿಗೌಡ. ಪತಿ ವೈ.ಎನ್.ಸುಬ್ಬಸ್ವಾಮಿ. ಬೆಂಗಳೂರಿನ ಐಐಟಿಯಿಂದ ಇಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದು 1984ರಲ್ಲಿ ಉಪನ್ಯಾಸಕರಾಗಿ ವೃತ್ತಿ ಪ್ರಾರಂಭಿಸಿ ಒಂಬತ್ತು ವರ್ಷಗಳು ಸೇವೆ ಸಲ್ಲಿಸಿ ಕೆಲಸಕ್ಕೆ ರಾಜೀನಾಮೆ ನೀಡಿದರು. ಮಕ್ಕಳಿಗೆ ಮೌಲಿಕ ಮತ್ತು ಗುಣಮಟ್ಟದ ಶಿಕ್ಷಣ ನೀಡುವ ಕನಸಿನೊಂದಿಗೆ ತಾವು ವಾಸವಿದ್ದ ಬಾಡಿಗೆ ಮನೆಯಲ್ಲಿ ತಮ್ಮ ಇಬ್ಬರು ಮಕ್ಕಳೊಂದಿಗೆ ಇತರ ಮೂರು ಮಕ್ಕಳನ್ನು ಸೇರಿಸಿಕೊಂಡು ಐದು ಮಕ್ಕಳ ನರ್ಸರಿ ಶಾಲೆ ಪ್ರಾರಂಭಿಸಿ, ಈಗ ಎಸ್‌ಎಸ್‌ಎಲ್‌ಸಿವರೆಗೆ ಶಾಲೆಯನ್ನು ನಡೆಸುತ್ತಿರುವ ಇವರ ವಿಜಯ ಶಾಲೆ ನಿಜವಾಗಿಯೂ ಮಹಿಳೆಯೊಬ್ಬರು ಶಿಕ್ಷಣ ಕ್ಷೇತ್ರದಲ್ಲಿ ಸಾಧಿಸಿರುವ ಮಹತ್ವದ ಸಾಧನೆಯಾಗಿದೆ. ಶೈಕ್ಷಣಿಕ, ಸಹಪಠ್ಯೇತರ ಚಟುವಟಿಕೆ, ಕ್ರೀಡೆಗಳಿಗೆ ಹೆಚ್ಚು ಮಹತ್ವ ನೀಡುವ ವಿಜಯ ಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಹಲವು ವರ್ಷಗಳಿಂದ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆಯುತ್ತಿದ್ದಾರೆ. ಮಕ್ಕಳ ಈ ಸಾಧನೆಯನ್ನು ಗುರುತಿಸಿ ಸರ್ಕಾರ, ಸಂಘ ಸಂಸ್ಥೆಗಳು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಿವೆ. ಪ್ರಚಾರ ಬಯಸದೆ ತಣ್ಣಗೆ ಸಮಾಜಸೇವೆ ಮಾಡುವ ಇವರು ಕೆರೆಗಳ ಪುನರುಜ್ಜೀವನ, ಅಂಧಮಕ್ಕಳಿಗೆ, ಕ್ರೀಡಾಪಟುಗಳಿಗೆ, ಸಂತ್ರಸ್ತ ಹೆಣ್ಣುಮಕ್ಕಳಿಗೆ ಆರ್ಥಿಕ ನೆರವು, ಸಾಲುಮರದ ತಿಮ್ಮಕ್ಕನವರಿಗೆ ಆರ್ಥಿಕ ಸಹಾಯ ನೀಡಿದ್ದಾರೆ. ಸಕಲೇಶಪುರದ ಹಿಜ್ಜನಹಳ್ಳಿ, ಬೆಳಗಾವಿ, ಮೂಡಿಗೆರೆ, ಹೊಳೆನರಸೀಪುರ ನೆರೆಸಂತ್ರಸ್ತರಿಗೆ ಹಾಗೂ ಹೊರ ರಾಜ್ಯಗಳಾದ ಒರಿಸ್ಸಾ, ಉತ್ತರಾಖಂಡ್ ಪ್ರವಾಹಪೀಡಿತ ಸಂತ್ರಸ್ತರಿಗೆ ಆರ್ಥಿಕ, ಆಹಾರ ಮತ್ತು ಅರಿವೆ ಸಹಾಯ ಮಾಡಿ ಮಾನವೀಯತೆಯನ್ನು ಮೆರೆದಿದ್ದಾರೆ. ಗುಣಮಟ್ಟದ ಶಿಕ್ಷಣ ಮತ್ತು ಮಾನವೀಯ ಮೌಲ್ಯಗಳಿಗೆ ಸದಾ ತುಡಿಯುವ ಇವರು ನಮ್ಮ ನಡುವಿನ ಅಪರೂಪದ ಶಿಕ್ಷಣ ಸಾಧಕಿಯಾಗಿ ರೂಪುಗೊಂಡಿದ್ದಾರೆ.
ಇದನ್ನು ಓದಿದ್ದೀರಾ?: ಪೌರಕಾರ್ಮಿಕ ಮಹಿಳೆಯರಿಗೆ ಸಿಗಬೇಕಿದೆ ಘನತೆಯ ಬದುಕು…
ಮರ್ಕುಲಿಯ ವೆಂಕಟೇಶ್, ಲಕ್ಷ್ಮಮ್ಮನವರ ಪುತ್ರಿಯಾಗಿ 1967ರಲ್ಲಿ ಜನಿಸಿದ ಕುಸುಮ ಎಂ.ವಿ, ಟಿಸಿಹೆಚ್ ಮುಗಿಸಿ 1993ರಲ್ಲಿ ಶಿಕ್ಷಕಿ ವೃತ್ತಿ ಪ್ರಾರಂಭಿಸಿದರು. 1994ರಲ್ಲಿ ಶಿಕ್ಷಕರಾದ ರಾಮಕೃಷ್ಣೇಗೌಡರನ್ನು ಮದುವೆಯಾದರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿದ್ದರಹಳ್ಳಿ, ಅರಸೀಕೆರೆ ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇವರ ಕಾರ್ಯತತ್ಪರತೆಗಾಗಿ 2005ರ ಜಿಲ್ಲಾ ಶ್ರೇಷ್ಠ ಶಿಕ್ಷಕಿ, 2013ರ ರಾಜ್ಯ ಅತ್ಯುತ್ತಮ ಶಿಕ್ಷಕಿ, 2015ರ ರಾಷ್ಟ್ರೀಯ ಉತ್ತಮ ಶಿಕ್ಷಕಿ ಪ್ರಶಸ್ತಿಗಳ ಗೌರವಕ್ಕೆ ಪಾತ್ರರಾಗಿದ್ದಾರೆ. ಇದಲ್ಲದೆ ಅರಕಲಗೂಡು ತಾಲ್ಲೂಕಿನ ಗೊಬ್ಬಳಿ ಕಾವಲ್‌ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವೃತ್ತಿಯಲ್ಲಿದ್ದಾಗ ಪ್ರೇಮಾ ಅವರಿಗೆ 2013ರಲ್ಲಿ ಉತ್ತಮ ಶಿಕ್ಷಕಿ ರಾಷ್ಟ್ರ ಪ್ರಶಸ್ತಿ ದೊರಕಿದೆ. ಈಗ ನಿವೃತ್ತರಾಗಿದ್ದಾರೆ.
ಸೋಮನಾಥನ್ ಮೊದಲಿಯರ್, ಜಾನಕಿಯವರ ಮಗಳಾಗಿ 1948ರಲ್ಲಿ ಜನಿಸಿದ ಅನ್ನಲಕ್ಷ್ಮಿ ಎಸ್, ಬೆಂಗಳೂರಿನಲ್ಲಿ ಓದಿ ಯೋಗನಾಥನ್‌ರನ್ನು ಮದುವೆಯಾಗಿ ಅರಸೀಕೆರೆಯಲ್ಲಿ ನೆಲೆಸಿ ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕಿಯಾಗಿ ಸೇವೆ ಮಾಡಿ ಪವಿತ್ರ ವಿದ್ಯಾ ಸಂಸ್ಥೆಯನ್ನು ಸ್ಥಾಪಿಸಿ, 1985ರಲ್ಲಿ ಶಾರದಾ ಶಾಲೆಯನ್ನು ಪ್ರಾರಂಭಿಸಿದರು. ಈ ಶಾಲೆಯಲ್ಲಿ ಓದಿದ ಡಾ. ಅರುಣ್ ಟಿ. ಇವರು ಐಎಎಸ್ ಅಧಿಕಾರಿಯಾಗಿ ಹಾಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದೇ ಶಾಲೆಯ ಪಠ್ಯೇತರ ಚಟುವಟಿಕೆಗಳ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಧನಂಜಯ ಕೆ.ವಿ(ಡಾಲಿ) ಕನ್ನಡ ಚಿತ್ರರಂಗದ ಜನಪ್ರಿಯ ನಾಯಕ ನಟರಾಗಿ ಬೆಳೆದಿದ್ದಾರೆ. ಒಬ್ಬಂಟಿ ಮಹಿಳೆಯಾಗಿ ಸಂಸ್ಥೆ ಕಟ್ಟಿ 26 ಶಿಕ್ಷಕಿಯರ ಬದುಕಿಗೆ ಆಶ್ರಯ ಕಲ್ಪಿಸಿ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಭಾಜನರಾದ ಇವರು 2023ರಲ್ಲಿ ನಿಧನರಾದರು.
ಇದನ್ನು ಓದಿದ್ದೀರಾ?: ಸ್ತ್ರೀ ಲೋಕದ ಅಸ್ಮಿತೆ- ಪದ್ಮಾ ಶ್ರೀರಾಮ್
1970ರಲ್ಲಿ ನಂಜೇಗೌಡ ಗಂಗಮ್ಮನವರ ಮಗಳಾಗಿ ಜನಿಸಿದ ವರಮಹಾಲಕ್ಷಿಯವರು ಪತಿಯ ನಿಧನದ ನಂತರ ವರಮಹಾಲಕ್ಷ್ಮಿ ವಿದ್ಯಾಸಂಸ್ಥೆ ಅಧ್ಯಕ್ಷರಾಗಿ ಬಹಳ ಸಮರ್ಥವಾಗಿ ಎರಡು ಶಾಲೆಗಳನ್ನು ಒಂದು ಪದವಿ ಪೂರ್ವ ಕಾಲೇಜು, ಡಿಇಡಿ, ಬಿಎಡಿ ಕಾಲೇಜುಗಳನ್ನು ನಡೆಸುತ್ತಿದ್ದಾರೆ.
1972ರಲ್ಲಿ ಹೆಚ್.ಕೆ.ರಂಗೇಗೌಡ, ಸರೋಜಮ್ಮ ಎಂ.ಎಸ್. ಇವರ ಮಗಳಾಗಿ ಜನಿಸಿದ ಡಾ.ಭಾರತಿನಾಗೇಶ್ ಎಂಎಸ್ಸಿ, ಪಿಎಚ್.ಡಿ ಪದವಿ ಪಡೆದು, ಡಾ. ಕೆ.ನಾಗೇಶ್‌ರವರನ್ನು ವಿವಾಹವಾಗಿ, 2003ರಲ್ಲಿ ನಾಗೇಶ್ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಅದರ ಕಾರ್ಯದರ್ಶಿಗಳಾಗಿ ಚನ್ನರಾಯಪಟ್ಟಣದಲ್ಲಿ ಶಾಲೆಗಳು, ಪದವಿ ಪೂರ್ವ ಕಾಲೇಜು ಮತ್ತು ನರ್ಸಿಂಗ್ ಹಾಗೂ ಅಲೈಡ್ ಹಾಗೂ ಪ್ಯಾರಾ ಮೆಡಿಕಲ್ ಸೈನ್ಸ್ ಕಾಲೇಜುಗಳನ್ನು ನಡೆಸುತ್ತಿದ್ದಾರೆ.
1973ರಲ್ಲಿ ಗವಿರಂಗಸ್ವಾಮಿ, ತುಳಸಮ್ಮನವರ ಮಗಳಾಗಿ ಜನಿಸಿದ ಶೋಭಾರವರು ಎಂ.ಎ ಪದವೀಧರರಾಗಿ, ಜಿ.ಎಂ.ಬಾಲಕೃಷ್ಣರನ್ನು ಮದುವೆಯಾಗಿ, ಸ್ವರ್ಣ ವಿದ್ಯಾ ಸಂಸ್ಥೆಯ ಕಾರ್ಯದರ್ಶಿಯಾಗಿ, ಹೊಳೆನರಸೀಪುರದಲ್ಲಿ ಮಾನಸ ಹೆಸರಿನ ಶಾಲೆಗಳು, ಪದವಿ ಪೂರ್ವ ಕಾಲೇಜನ್ನು ನಡೆಸುತ್ತಿದ್ದಾರೆ. ಇವರ ಶಾಲೆಯಲ್ಲಿ ಓದಿದ ಎಚ್.ಹಿಂದಲಹಳ್ಳಿ ವಿದ್ಯಾರ್ಥಿನಿ ಸುಮಾ ಎಚ್.ಕೆ. ಇವರು ಐಎಎಸ್ ಅಧಿಕಾರಿಯಾಗಿ ಸೇವೆಯಲ್ಲಿದ್ದಾರೆ. ಇವರ ಶಾಲೆಯ ಮಕ್ಕಳು ರಾಷ್ಟ್ರಮಟ್ಟದ ಕ್ರೀಡೆ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ್ದಾರೆ.
ಇದನ್ನು ಓದಿದ್ದೀರಾ?: ಐತಿಹಾಸಿಕ ಮಹಿಳೆಯರು ಮತ್ತು ಹಾಸನ ಜಿಲ್ಲೆ
ಜಿಲ್ಲೆಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ ಜಯಲಕ್ಷ್ಮಿ ರಾಜಣ್ಣಗೌಡ, ಮಂಜುಳ ಪ್ರಸಾದ್, ಮೈಸೂರು, ಕೆ.ಆರ್.ಪೇಟೆ, ಮೂಡಿಗೆರೆಯಲ್ಲಿ ನಳಂದ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿ ಯಶಸ್ವಿಯಾಗಿ ನಡೆಸುತ್ತಿರುವ ಅರಕಲಗೂಡು ತಾಲೂಕು ಜಿತ್ತೇನಹಳ್ಳಿಯ ಎಚ್.ಎಚ್.ಸಾವಿತ್ರಿ, ಚಿಕ್ಕಮಗಳೂರಿನಲ್ಲಿ ಸಾಯಿ ಏಂಜಲ್ಸ್ ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿರುವ ಶಾಂತಿಗ್ರಾಮದ ವಿಜಯ ನಾಗೇಶ್‌ರವರ ಕೊಡುಗೆ ಶಿಕ್ಷಣ ಕೇತ್ರಕ್ಕೆ ಮಹತ್ವದ್ದಾಗಿದೆ. ಇವರೇ ಅಲ್ಲದೆ ಶಿಕ್ಷಣ ಕ್ಷೇತ್ರದಲ್ಲಿ ಎಲೆಮರೆ ಕಾಯಿಗಳಂತೆ ಸಾಧನೆ ಮಾಡಿರುವ ನೂರಾರು ಮಹಿಳೆಯರಿದ್ದಾರೆ. ಒಂದು ಪುಟ್ಟ ಚೌಕಟ್ಟಿನಲ್ಲಿ ಅಷ್ಟು ದೊಡ್ಡ ಸಂಖ್ಯೆಯ ಮಹಿಳಾ ಸಾಧಕಿಯರನ್ನಿಲ್ಲಿ ದಾಖಲಿಸಲು ಸಾಧ್ಯವಾಗುತ್ತಿಲ್ಲ. ಈ ಎಲ್ಲ ಕಾಳಜಿಯುಕ್ತ ಮಹಿಳೆಯರ ಅವಿರತ ಕೊಡುಗೆಯ ಫಲವಾಗಿ ಹಾಸನ ಜಿಲ್ಲಾ ಶಿಕ್ಷಣ ಕ್ಷೇತ್ರ ರಾಜ್ಯಮಟ್ಟದಲ್ಲಿ ಅತ್ಯುತ್ತಮ ಶೈಕ್ಷಣಿಕ ಪ್ರಗತಿ ಸಾಧಿಸಿದ ಜಿಲ್ಲೆಯೆಂದು ಗುರುತಿಸಿಕೊಳ್ಳಲು ಸಾಧ್ಯವಾಗಿದೆ.
-ಹರೀಶ್ ಕಟ್ಟೇಬೆಳಗುಲಿ





