ಮಹಿಳಾ ದಿನಾಚರಣೆಯಂದು ನಾವು ಅಬಲೆಯರಲ್ಲ, ಸಬಲೆಯರು ಎಂದು ದೃಢಪಡಿಸಿ, ದಿಟ್ಟ 'ಆಡಳಿತಗಾರ್ತಿ'ಯಾಗಿ ಹೊರಹೊಮ್ಮಿದ ಮಹಿಳೆಯರ ಕ್ರಾಂತಿಕಾರಿ ಹಾದಿಯನ್ನು ಸ್ಮರಿಸೋಣ. ರಾಜಕೀಯ ವ್ಯವಸ್ಥೆಯೊಳಗೆ ಬದಲಾವಣೆ ತರಲು ಹಂಬಲಿಸುತ್ತಿರುವ ಪ್ರತಿಯೊಬ್ಬ ಮಹಿಳೆಗೂ ಮಹಿಳಾ ದಿನಾಚರಣೆಯ ಶುಭಾಶಯಗಳು.
ಯಾವ ಕ್ಷೇತ್ರವೇ ಆಗಿರಲಿ ಅಲ್ಲಿ ಪುರುಷ ಪ್ರಧಾನ ವ್ಯವಸ್ಥೆಯ ಗೋಡೆಗಳು ಈ ಹಿಂದೆಯೂ ಇತ್ತು, ಇಂದೂ ಇದೆ. ಆ ಗೋಡೆಗಳನ್ನು ಕೆಡವಿ ಮುನ್ನುಗ್ಗುವುದು ಸರಳ ಹಾದಿಯಲ್ಲ. ಹಿಂದೆಯೂ-ಇಂದಿಗೂ ಮಹಿಳೆಯರು ಈ ತಡೆಗೋಡೆಯನ್ನು ಉರುಳಿಸಲು ಅಂಜುವುದಿದೆ. ಅಂತಹ ನಾರಿಗಳಿಗೆ ಸ್ಫೂರ್ತಿ ನಮ್ಮ ದಿಟ್ಟ ನಾಯಕಿಯರು.
ಮಹಿಳೆ ರಾಜಕೀಯಕ್ಕೆ ಬಂದರೆ ಅದು ಇಡೀ ಸಮಾಜದ ದಿಕ್ಕನ್ನೇ ಬದಲಿಸಬಲ್ಲದು ಎಂಬುದನ್ನು ಇತಿಹಾಸವೇ ಸಾಬೀತುಪಡಿಸಿದೆ. ದೇಶ ಸ್ವಾತಂತ್ರ್ಯ ಪಡೆದಾಗಿನಿಂದ ಇಂದಿನವರೆಗೂ, ರಾಜಕೀಯ ಎನ್ನುವುದು ಕೇವಲ ಅಧಿಕಾರದ ಗದ್ದುಗೆಯಲ್ಲ, ಅದು ಕೋಟ್ಯಂತರ ಜನರ ಬದುಕನ್ನು ರೂಪಿಸುವ ವೇದಿಕೆ ಎಂದು ಮತ್ತೆ ಮತ್ತೆ ನೆನಪಿಸಿದವರು ಮಹಿಳೆಯರು. ಸಾವಿರಾರು ವರ್ಷಗಳ ಕಾಲ ‘ಮನೆಗೆ ಸೀಮಿತ’ ಎಂಬ ಹಣೆಪಟ್ಟಿಯನ್ನು ಹೊಂದಿದ್ದ ಮಹಿಳೆಯರು ಪುರುಷ ಪ್ರಧಾನ ಸಮಾಜವನ್ನು ಧಿಕ್ಕರಿಸಿ ಹೊರಬಂದು ಇಂದು ದೇಶದ ರಕ್ಷಣೆ, ಹಣಕಾಸು ಮತ್ತು ವಿದೇಶಾಂಗ ನೀತಿಗಳನ್ನು ನಿರ್ಧರಿಸುವ, ಸರ್ಕಾರದ ಭ್ರಷ್ಟತೆಯನ್ನು ನೇರವಾಗಿ, ನಿಷ್ಠುರವಾಗಿ ಪ್ರಶ್ನಿಸುವ ಹಂತಕ್ಕೆ ಬೆಳೆದಿದ್ದಾರೆ.
ಇದನ್ನು ಓದಿದ್ದೀರಾ? ಹಾಸನ ಮಹಿಳಾ ದಿನಾಚರಣೆ | ಹೆಣ್ಣಿನ ಆತ್ಮಗೌರವದ ದಾಖಲೀಕರಣದ ಅನನ್ಯತೆ
ಮಹಿಳಾ ದಿನಾಚರಣೆಯು ಕೇವಲ ಸಂಭ್ರಮದ ದಿನವಲ್ಲ. ಅದು ಈ ಹಿಂದೆ ಅಬಲೆಯೆಂದು ಕರೆಸಿಕೊಂಡವರು ‘ಸಬಲೆ’ಯಾಗಿ, ಉತ್ತಮ ‘ಆಡಳಿತಗಾರ್ತಿ’ಯಾಗಿ ಹೊರಹೊಮ್ಮಿದ ಕ್ರಾಂತಿಕಾರಿ ಹಾದಿಯ ಸ್ಮರಣೆ. ಅದರಲ್ಲೂ 2014ರ ನಂತರದ ಭಾರತೀಯ ರಾಜಕೀಯ ಪುಟವನ್ನೊಮ್ಮೆ ತಿರುವಿ ಹಾಕಿದರೆ, ನಮಗೆ ಕಾಣುವುದು ಪುರುಷರ ಅಬ್ಬರವಲ್ಲ, ಬದಲಿಗೆ ಮಹಿಳೆಯರ ತೀಕ್ಷ್ಣ ಮಾತುಗಳು, ಕಠಿಣ ನಿರ್ಧಾರಗಳು. ಉಕ್ಕಿನ ಮಹಿಳೆಯಿಂದ ಹಿಡಿದು ಇಂದಿನ ನಾಯಕಿಯರವರೆಗೂ ರಾಜಕೀಯದಲ್ಲಿ ಮಹಿಳೆಯರ ಗುರುತನ್ನು ನಾವಿಂದು ಸ್ಮರಿಸೋಣ.
ಇಂದಿರಾ ಗಾಂಧಿ
ದೇಶದ ಮೊದಲ ಮತ್ತು ಏಕೈಕ ಮಹಿಳಾ ಪ್ರಧಾನಮಂತ್ರಿ, ‘ಭಾರತದ ಉಕ್ಕಿನ ಮಹಿಳೆ’ (Iron Lady of India) ಇಂದಿರಾ ಗಾಂಧಿ ದೇಶದ ಇತಿಹಾಸದಲ್ಲಿ ಅತ್ಯಂತ ಪ್ರಭಾವಶಾಲಿ ನಾಯಕರಲ್ಲಿ ಒಬ್ಬರೆಂದು ಗುರುತಿಸಲ್ಪಟ್ಟವರು. ಬಾಂಗ್ಲಾದೇಶದ ವಿಮೋಚನೆ ಮತ್ತು ಬ್ಯಾಂಕುಗಳ ರಾಷ್ಟ್ರೀಕರಣದಂತಹ ದಿಟ್ಟ ನಿರ್ಧಾರಗಳ ಮೂಲಕ ಜಗತ್ತಿನ ಗಮನವನ್ನೇ ಸೆಳೆದವರು. 1966ರ ಜನವರಿಯಿಂದ 1977ರ ಮಾರ್ಚ್‌ವರೆಗೆ ಮತ್ತು 1980ರ ಜನವರಿಯಿಂದ 1984ರ ಅಕ್ಟೋಬರ್‌ವರೆಗೆ ಇಂದಿರಾ ಗಾಂಧಿ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ. 1971ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಪಾಕಿಸ್ತಾನವನ್ನು ಸೋಲಿಸಿ ಬಾಂಗ್ಲಾದೇಶದ ಉದಯಕ್ಕೆ ಕಾರಣರಾದವರು ಇಂದಿರಾ. ‘ಭಾರತ ರತ್ನ’ ಪಡೆದ ಮೊದಲ ಮಹಿಳೆ. ‘ತುರ್ತು ಪರಿಸ್ಥಿತಿ’ ಹೇರುವಂತಹ ಅವರ ವಿವಾದಾತ್ಮಕ ನಿರ್ಧಾರಗಳನ್ನೂ ಬದಿಗೊತ್ತುವಂತಿಲ್ಲ.

ಜೆ. ಜಯಲಲಿತಾ
‘ಅಮ್ಮ’ ಎಂದೇ ಹೆಸರುವಾಸಿಯಾದ ಜೆ. ಜಯಲಲಿತಾ ಅವರು ಭಾರತೀಯ ರಾಜಕೀಯದಲ್ಲಿ, ಅದರಲ್ಲೂ ವಿಶೇಷವಾಗಿ ತಮಿಳುನಾಡು ರಾಜಕೀಯದಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ. ಪುರುಷ ಪ್ರಧಾನ ರಾಜಕೀಯ ವ್ಯವಸ್ಥೆಯಲ್ಲಿ ಜಯಲಲಿತಾ ಎದುರಿಸಿದ ಸವಾಲುಗಳು ಮತ್ತು ಸಾಧಿಸಿದ ಮೈಲಿಗಲ್ಲುಗಳು ಅಭೂತಪೂರ್ವ. ಚಿತ್ರರಂಗದಿಂದ ರಾಜಕೀಯಕ್ಕೆ ಬಂದು, ಎಐಎಡಿಎಂಕೆ ಪಕ್ಷದ ಅಧಿಪತಿಯಾಗಿ ದಶಕಗಳ ಕಾಲ ತಮಿಳುನಾಡು ರಾಜಕಾರಣವನ್ನು ನಿಯಂತ್ರಿಸಿದ್ದಾರೆ. 1989ರಲ್ಲಿ ತಮಿಳುನಾಡು ವಿಧಾನಸಭೆಯ ಮೊದಲ ಮಹಿಳಾ ವಿಪಕ್ಷ ನಾಯಕಿಯಾಗಿ ಜಯಲಲಿತಾ ಆಯ್ಕೆಯಾದರು. ವಿಧಾನಸಭೆಯಲ್ಲಿ ಡಿಎಂಕೆ ನಾಯಕರುಗಳಿಂದ ತಮಗಾದ ಅವಮಾನದಿಂದ ಕೆದರಿದ ಕೂದಲಿನೊಂದಿಗೆ, ಕಣ್ಣೀರು ಹಾಕುತ್ತಲೇ ಸದನದಿಂದ ಹೊರಹೋಗಿದ್ದ ಜಯಲಲಿತಾ ಅವರು “ಮುಖ್ಯಮಂತ್ರಿಯಾಗಿಯೇ ಈ ಸದನಕ್ಕೆ ಮರಳುತ್ತೇನೆ” ಎಂದು ಶಪಥ ಮಾಡಿ, ಅದನ್ನು ಸಾಧಿಸಿ ತೋರಿಸಿದವರು. ಅದಾದ ಬಳಿಕ ಆರು ಬಾರಿ ತಮಿಳುನಾಡು ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ ಮತ್ತು ಪೂರ್ಣಾವಧಿ ಪೂರೈಸಿದ ರಾಜ್ಯದ ಮೊದಲ ಮಹಿಳಾ ಮುಖ್ಯಮಂತ್ರಿ ಎಂಬ ಇತಿಹಾಸ ಸೃಷ್ಟಿಸಿದ್ದಾರೆ.

ಸೋನಿಯಾ ಗಾಂಧಿ
ಸೋನಿಯಾ ಗಾಂಧಿಯವರು 1991ರಲ್ಲಿ ತಮ್ಮ ಪತಿ ರಾಜೀವ್ ಗಾಂಧಿಯವರ ಹತ್ಯೆಯ ನಂತರ ರಾಜಕೀಯದಿಂದ ದೂರವಿದ್ದರೂ, ನಂತರದ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಿದವರು. 1998ರಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಸೋನಿಯಾ ಅವರು, ಅಸ್ತಿತ್ವದ ಬಿಕ್ಕಟ್ಟಿನಲ್ಲಿದ್ದ ಕಾಂಗ್ರೆಸ್ ಅನ್ನು ಒಗ್ಗೂಡಿಸಿ ಸತತ 15 ವರ್ಷಗಳ ಕಾಲ ಸುದೀರ್ಘ ಅವಧಿಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು. 2004ರಲ್ಲಿ ಸಮಾನ ಮನಸ್ಕ ಪಕ್ಷಗಳನ್ನು ಒಗ್ಗೂಡಿಸಿ ಸಂಯುಕ್ತ ಪ್ರಗತಿಪರ ಮೈತ್ರಿಕೂಟವನ್ನು (UPA) ರಚಿಸಿದವರು ಸೋನಿಯಾ. ಈ ಮೈತ್ರಿಕೂಟ ಸತತ ಎರಡು ಅವಧಿಗೆ (2004-2014) ಕೇಂದ್ರದಲ್ಲಿ ಅಧಿಕಾರ ನಡೆಸಿದೆ. 2004ರಲ್ಲಿ ಪ್ರಧಾನಿ ಹುದ್ದೆಗೇರುವ ಅವಕಾಶವಿದ್ದರೂ, ಅದನ್ನು ನಿರಾಕರಿಸಿ ಡಾ. ಮನಮೋಹನ್ ಸಿಂಗ್ ಅವರನ್ನು ಪ್ರಧಾನಿಯನ್ನಾಗಿ ಆಯ್ಕೆ ಮಾಡಿದರು. ಸೋನಿಯಾ ಗಾಂಧಿ ತಮ್ಮ ಇಡೀ ರಾಜಕೀಯ ಜೀವನದಲ್ಲಿ ಒಂದೂ ಲೋಕಸಭಾ ಚುನಾವಣೆಯನ್ನು ಸೋತಿಲ್ಲ ಎಂಬುದು ಗಮನಾರ್ಹ. ಸ್ಪರ್ಧಿಸಿದ ಎಲ್ಲಾ ಚುನಾವಣೆಗಳಲ್ಲಿಯೂ ಭರ್ಜರಿ ಜಯ ಸಾಧಿಸಿದ್ದಾರೆ.

ಸುಷ್ಮಾ ಸ್ವರಾಜ್
ದೇಶದ ಮೊದಲ ಪೂರ್ಣಾವಧಿ ಮಹಿಳಾ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್. ಅದಕ್ಕೂ ಹಿಂದೆಯೇ ಇಂದಿರಾ ಈ ಖಾತೆಯನ್ನು ನಿರ್ವಹಿಸಿದ್ದರು. ಆದರೆ ಸುಷ್ಮಾ ಸ್ವರಾಜ್ ಅವರು ಭಾರತದ ಮೊದಲ ಪೂರ್ಣಾವಧಿ ಮಹಿಳಾ ವಿದೇಶಾಂಗ ಸಚಿವೆಯಾಗಿ 2014ರಿಂದ 2019ರವರೆಗೆ ಸೇವೆ ಸಲ್ಲಿಸಿದ್ದಾರೆ. ಹಾಗೆಯೇ 1998ರಲ್ಲಿ ದೆಹಲಿಯ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿದ್ದಾರೆ. ಕೇವಲ 25ನೇ ವಯಸ್ಸಿನಲ್ಲಿಯೇ 1977ರ ಹರಿಯಾಣ ಸರ್ಕಾರದಲ್ಲಿ ಸಚಿವೆಯಾಗುವ ಮೂಲಕ ಅತಿ ಕಿರಿಯ ವಯಸ್ಸಿನ ಕ್ಯಾಬಿನೆಟ್ ಸಚಿವೆ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಸೋನಿಯಾ ಗಾಂಧಿ ಬಳಿಕ ಲೋಕಸಭೆಯ ಎರಡನೇ ಮಹಿಳಾ ವಿರೋಧ ಪಕ್ಷದ ನಾಯಕಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ಮಾಯಾವತಿ
ದೇಶದ ಇತಿಹಾಸದಲ್ಲಿ ಅತ್ಯಂತ ಪ್ರಭಾವಶಾಲಿ ಮಹಿಳಾ ನಾಯಕರಲ್ಲಿ ಮಾಯಾವತಿಯೂ ಒಬ್ಬರು. ಬಹುಜನ ಚಳವಳಿಯ ನಾಯಕ ಕಾನ್ಶಿರಾಮ್ ಅವರ ರಾಜಕೀಯಕ್ಕೆ ಆಕರ್ಷಿತರಾದ ಮಾಯಾವತಿ 1984ರಲ್ಲಿ ಬಹುಜನ ಸಮಾಜ ಪಕ್ಷ (BSP) ಸ್ಥಾಪನೆಯಾದಾಗಿನಿಂದ ಪಕ್ಷದಲ್ಲಿ ಸಕ್ರಿಯವಾಗಿದ್ದಾರೆ. ಉತ್ತರ ಪ್ರದೇಶದಾದ್ಯಂತ ಬಿಎಸ್‌ಪಿ ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು. 1995ರಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾದ ಮಾಯಾವತಿ ಅವರು ಭಾರತದ ಇತಿಹಾಸದಲ್ಲೇ ಮೊದಲ ದಲಿತ ಮಹಿಳಾ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. ಅದಾದ ಬಳಿಕ ಒಟ್ಟು ನಾಲ್ಕು ಬಾರಿ ಯುಪಿ ಸಿಎಂ ಆಗಿದ್ದಾರೆ.

ಮಮತಾ ಬ್ಯಾನರ್ಜಿ
ಪ್ರಸ್ತುತ ದೇಶದ ವಿರೋಧ ಪಕ್ಷದ ಸಾಲಿನಲ್ಲಿರುವ ಅತ್ಯಂತ ಶಕ್ತಿಶಾಲಿ ಮಹಿಳೆ, ಪಶ್ಚಿಮ ಬಂಗಾಳದ ಮೊದಲ ಮಹಿಳಾ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ. 2011ರಲ್ಲಿ ಪಶ್ಚಿಮ ಬಂಗಾಳದಲ್ಲಿ 34 ವರ್ಷಗಳ ಕಾಲ ಆಡಳಿತ ನಡೆಸಿದ್ದ ಎಡರಂಗದ (Left Front) ಸರ್ಕಾರವನ್ನು ಸೋಲಿಸಿ ಅಧಿಕಾರಕ್ಕೆ ಬಂದಿದ್ದಾರೆ. 2021ರ ಬಂಗಾಳ ಚುನಾವಣೆಯಲ್ಲಿ ಇಡೀ ಕೇಂದ್ರ ಸರ್ಕಾರದ ಪ್ರಚಾರ ಯಂತ್ರದ ವಿರುದ್ಧವಾಗಿ ಏಕಾಂಗಿಯಾಗಿ ಹೋರಾಡಿ ಜಯಗಳಿಸಿರುವುದೇ ಮಮತಾ ರಾಜಕೀಯ ಶಕ್ತಿಗೆ ಸಾಕ್ಷಿ. ಈ ಹಿಂದೆ ಕೇಂದ್ರ ರೈಲ್ವೆ ಸಚಿವರಾಗಿ ಎರಡು ಬಾರಿ (1999 ಮತ್ತು 2009), ಕಲ್ಲಿದ್ದಲು ಮತ್ತು ಗಣಿ ಸಚಿವರಾಗಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. 1998ರಲ್ಲಿ ಕಾಂಗ್ರೆಸ್‌ನಿಂದ ಹೊರಬಂದು ಟಿಎಂಸಿ ಸ್ಥಾಪಿಸಿ ಇಂದಿಗೂ ಪಶ್ಚಿಮ ಬಂಗಾಳದಲ್ಲಿ ಪ್ರಭಾವ ಹೊಂದಿದ್ದಾರೆ. ಪ್ರಸ್ತುತ ದೇಶದಲ್ಲಿರುವ ಇಬ್ಬರು ಮಹಿಳಾ ಮಹಿಳಾ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಒಬ್ಬರು.

ನಿರ್ಮಲಾ ಸೀತಾರಾಮನ್
2014ರ ನಂತರ ರಾಜಕೀಯದ ಅತ್ಯಂತ ಪ್ರಭಾವಶಾಲಿ ಮಹಿಳೆಯರಲ್ಲಿ ನಿರ್ಮಲಾ ಕೂಡಾ ಒಬ್ಬರು. ಭಾರತದ ಮೊದಲ ಪೂರ್ಣಾವಧಿಯ ರಕ್ಷಣಾ ಸಚಿವೆಯಾಗಿದ್ದ ನಿರ್ಮಲಾ, ಪ್ರಸ್ತುತ ದೇಶದ ಎರಡನೇ ಹಣಕಾಸು ಸಚಿವೆಯಾಗಿ ಕಾರ್ಯನಿರ್ಹಿಸುತ್ತಿದ್ದಾರೆ. 2025ರ ಬಜೆಟ್ ಮಂಡನೆಯೊಂದಿಗೆ ಸತತವಾಗಿ ಎಂಟು ಬಾರಿ ಬಜೆಟ್ ಮಂಡಿಸಿದ ಮೊದಲ ಮಹಿಳಾ ಹಣಕಾಸು ಸಚಿವೆ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. ಸತತ ಹಲವು ವರ್ಷಗಳಿಂದ ಫೋರ್ಬ್ಸ್‌ನ ವಿಶ್ವದ 100 ಅತ್ಯಂತ ಶಕ್ತಿಶಾಲಿ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. 2024ರ ಪಟ್ಟಿಯಲ್ಲಿ 32ನೇ ಸ್ಥಾನದಲ್ಲಿದ್ದರು. 2003 ರಿಂದ 2005ರವರೆಗೆ ರಾಷ್ಟ್ರೀಯ ಮಹಿಳಾ ಆಯೋಗದ (NCW) ಸದಸ್ಯೆಯಾಗಿ ಕಾರ್ಯನಿರ್ವಹಿಸಿದ್ದಾರೆ.

ಪ್ರಿಯಾಂಕಾ ಗಾಂಧಿ ವಾದ್ರಾ
ರಾಜಕೀಯ ಹಿನ್ನೆಲೆಯಿರುವ ಕುಟುಂಬದಿಂದಲೇ ಬಂದ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ವಯನಾಡು ಸಂಸದೆಯಾಗಿದ್ದಾರೆ. ಸದ್ಯ ಲೋಕಸಭೆಯಲ್ಲಿ ಆಡಳಿತಾರೂಢ ಬಿಜೆಪಿಗೆ ಉತ್ತರಿಸಲು ಸಾಧ್ಯವಾಗದಂತಹ ಪ್ರಶ್ನೆಗಳನ್ನು ಎತ್ತುದ್ದಿದ್ದಾರೆ. ಉತ್ತರ ಪ್ರದೇಶದ 2022ರ ವಿಧಾನಸಭಾ ಚುನಾವಣೆಯ ವೇಳೆ “ಲಡ್ಕಿ ಹೂಂ, ಲಡ್ ಸಕ್ತಿ ಹೂಂ” (ನಾನು ಹುಡುಗಿ, ನಾನು ಹೋರಾಡಬಲ್ಲೆ) ಎಂಬ ಘೋಷಣೆಯೊಂದಿಗೆ ಮಹಿಳಾ ಸಬಲೀಕರಣದ ಅಭಿಯಾನವನ್ನು ಮುನ್ನಡೆಸಿದರು. ಈ ಅಭಿಯಾನದ ಅಡಿಯಲ್ಲಿ ಕಾಂಗ್ರೆಸ್ ಪಕ್ಷವು ಮಹಿಳೆಯರಿಗೆ ಶೇ. 40ರಷ್ಟು ಸೀಟುಗಳನ್ನು ಮೀಸಲಿಟ್ಟಿತ್ತು. ಪ್ರಿಯಾಂಕಾ ಅವರ ವ್ಯಕ್ತಿತ್ವ, ಮಾತಿನ ಶೈಲಿ ಮತ್ತು ನಾಯಕತ್ವದ ಗುಣಗಳು ಅವರ ಅಜ್ಜಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ನೆನಪಿಸುತ್ತವೆ ಎಂಬುದು ಮತದಾರರ ಮೇಲೆ ಧನಾತ್ಮಕ ಪ್ರಭಾವ ಬೀರಿದೆ. ಕರ್ನಾಟಕ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ನಡೆದ ‘ನಾ ನಾಯಕಿ’ ಮಹಿಳಾ ಸಮಾವೇಶದಲ್ಲಿ ಭಾಗವಹಿಸಿ, ಮಹಿಳಾ ಮತದಾರರನ್ನು ಸೆಳೆಯುವಲ್ಲಿ ಮತ್ತು ಮಹಿಳೆಯರಿಗೆ ಆರ್ಥಿಕ ನೆರವು ನೀಡುವ ಯೋಜನೆಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದವರು ಪ್ರಿಯಾಂಕಾ.

ಮಹುವಾ ಮೊಯಿತ್ರಾ
ಸಮಕಾಲೀನ ಭಾರತೀಯ ರಾಜಕೀಯದಲ್ಲಿ ಒಬ್ಬ ಪ್ರಭಾವಶಾಲಿ ಮಹಿಳಾ ನಾಯಕಿ ಮಹುವಾ ಮೊಯಿತ್ರಾ. ಪಶ್ಚಿಮ ಬಂಗಾಳದ ಟಿಎಂಸಿ ಪಕ್ಷವನ್ನು ಪ್ರತಿನಿಧಿಸುವ ಮೊಯಿತ್ರಾ ಸಂಸತ್ತಿನಲ್ಲಿ ತಮ್ಮ ಹರಿತವಾದ ಭಾಷಣಗಳು ಮತ್ತು ದಿಟ್ಟ ನಿಲುವುಗಳಿಂದ ಹೆಸರುವಾಸಿ. ಜೆಪಿ ಮೋರ್ಗಾನ್ ಸಂಸ್ಥೆಯಲ್ಲಿ ಇನ್ವೆಸ್ಟ್‌ಮೆಂಟ್ ಬ್ಯಾಂಕರ್ ಆಗಿ ಲಂಡನ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೊಯಿತ್ರಾ ತಮ್ಮ ಉನ್ನತ ಉದ್ಯೋಗವನ್ನು ಬಿಟ್ಟು 2009ರಲ್ಲಿ ಭಾರತಕ್ಕೆ ಮರಳಿದ್ದಾರೆ. ಆರಂಭದಲ್ಲಿ ಕಾಂಗ್ರೆಸ್ ಸೇರಿದ್ದ ಅವರು ಬಳಿಕ ಟಿಎಂಸಿ ಸೇರಿ 2016ರಲ್ಲಿ ಪಶ್ಚಿಮ ಬಂಗಾಳದ ಕರಿಂಪುರ ಕ್ಷೇತ್ರದಿಂದ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ. 2019ರ ಲೋಕಸಭೆಯಲ್ಲಿ ಕೃಷ್ಣನಗರ ಕ್ಷೇತ್ರದಿಂದ ಸ್ಪರ್ಧಿಸಿ ಸಂಸತ್ ಪ್ರವೇಶಿಸಿದ ಮೊಯಿತ್ರಾ ಅವರ ‘ಫ್ಯಾಸಿಸಂನ ಲಕ್ಷಣಗಳು’ ಕುರಿತಾಗಿ ನೀಡಿದ ಚೊಚ್ಚಲ ಭಾಷಣವು ರಾಷ್ಟ್ರಮಟ್ಟದಲ್ಲಿ ಭಾರಿ ಚರ್ಚೆಗೆ ನಾಂದಿ ಹಾಡಿತ್ತು. 2023ರಲ್ಲಿ ಕೆಲವು ವಿವಾದಗಳ ಕಾರಣದಿಂದ ಮೊಯಿತ್ರಾ ಅವರನ್ನು ಸಂಸತ್ತಿನಿಂದ ಉಚ್ಚಾಟಿಸಲಾಗಿತ್ತು. ಆದರೆ 2024ರ ಲೋಕಸಭೆ ಚುನಾವಣೆಯಲ್ಲಿ ಮತ್ತೆ ಅದೇ ಕೃಷ್ಣನಗರ ಕ್ಷೇತ್ರದಿಂದ ಭಾರಿ ಮತಗಳ ಅಂತರದಿಂದ ಗೆದ್ದು ಸಂಸತ್ತಿಗೆ ಮರಳುವ ಮೂಲಕ ತಮ್ಮ ಪ್ರಭಾವವನ್ನು ಸಾಬೀತುಪಡಿಸಿದ್ದಾರೆ. ತಮ್ಮ ನಿರರ್ಗಳ ಇಂಗ್ಲಿಷ್ ಭಾಷಣಗಳು, ಅಂಕಿಅಂಶಗಳ ಸಹಿತ ನೀಡುವ ತರ್ಕಬದ್ಧವಾದ ವಾದಗಳು ಮತ್ತು ಮಹಿಳಾ ಹಕ್ಕುಗಳ ಪರವಾಗಿ ಧ್ವನಿ ಎತ್ತುವ ಗುಣಕ್ಕಾಗಿ ಸದ್ಯ ಹೆಸರುವಾಸಿಯಾಗಿದ್ದಾರೆ.

ಸುಪ್ರಿಯಾ ಸುಳೆ
ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ – ಎಸ್‌ಪಿ) ಪ್ರಮುಖ ನಾಯಕಿಯಾಗಿರುವ ಸುಪ್ರಿಯಾ ಸುಳೆ ಬಾರಾಮತಿ ಲೋಕಸಭಾ ಕ್ಷೇತ್ರದಿಂದ ಸತತವಾಗಿ ಆಯ್ಕೆಯಾಗುತ್ತಿದ್ದು, ಅನೇಕ ಬಾರಿ ‘ಸಂಸದ ರತ್ನ’ ಪ್ರಶಸ್ತಿಗೆ ಭಾಜನರಾಗಿದ್ದಾರೆ. 2011ರಲ್ಲಿ ಮಹಾರಾಷ್ಟ್ರದಾದ್ಯಂತ ಹೆಣ್ಣು ಭ್ರೂಣ ಹತ್ಯೆಯ ವಿರುದ್ಧ ಬೃಹತ್ ಪಾದಯಾತ್ರೆ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಸಂಘಟಿಸಿದವರು ಸುಪ್ರಿಯಾ. ರಾಜಕೀಯದಲ್ಲಿ ಯುವತಿಯರಿಗೆ ವೇದಿಕೆ ಒದಗಿಸುವ ನಿಟ್ಟಿನಲ್ಲಿ 2012ರಲ್ಲಿ ‘ರಾಷ್ಟ್ರವಾದಿ ಯುವತಿ ಕಾಂಗ್ರೆಸ್’ ಅನ್ನು ಪ್ರಾರಂಭಿಸಿದರು. ಶಿಕ್ಷಣದ ಮೂಲಕ ಮಹಿಳಾ ಸಬಲೀಕರಣ ಮತ್ತು ಕುಡಿಯುವ ನೀರಿನ ಮಾಲಿನ್ಯದಂತಹ ವಿಚಾರದಲ್ಲಿ ಕಾರ್ಯನಿರ್ವಹಿಸಿದ ಸುಪ್ರಿಯಾ ಅವರಿಗೆ ‘ಮುಂಬೈ ವುಮೆನ್ ಆಫ್ ದಿ ಡಿಕೇಡ್’ ಅಚೀವರ್ಸ್ ಪ್ರಶಸ್ತಿ ಲಭಿಸಿದೆ. ಸದ್ಯ ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ, ಲಿಂಗ ಸಮಾನತೆ ಮತ್ತು ಮಕ್ಕಳ ಹಕ್ಕುಗಳ ಪರವಾಗಿ ನಿರಂತರವಾಗಿ ಧ್ವನಿ ಎತ್ತುತ್ತಿದ್ದಾರೆ.

ರಾಜ್ಯದಲ್ಲಿಯೂ ಪಚಾಯತ್ ರಾಜ್ ವ್ಯವಸ್ಥೆಯಿಂದ ಹಿಡಿದು ವಿಧಾನಸಭೆಯವರೆಗೆ ಮಹಿಳೆಯರ ಪಾತ್ರ ದೊಡ್ಡದಿದೆ. ರಾಜ್ಯದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಅವರಂತಹ ನಾಯಕಿಯರು ಮಹಿಳಾ ಪ್ರಧಾನ ಗ್ಯಾರಂಟಿ ಯೋಜನೆಗಳ ಮೂಲಕ ಮನೆಮನೆಗೆ ತಲುಪಿದ್ದಾರೆ. ಸದ್ಯ ನಯನಾ ಮೋಟಮ್ಮ ಯುವ ನಾಯಕಿಯಾಗಿ ವಿಧಾನಸಭೆಯಲ್ಲಿ ತಮ್ಮ ಸ್ಪಷ್ಟ ಮತ್ತು ತಾರ್ಕಿಕ ಮಾತುಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ಹೀಗೆ ರಾಜ್ಯ-ಕೇಂದ್ರ ರಾಜಕೀಯದಲ್ಲಿ ಮಹಿಳೆಯರು ಅವಿರತ ಸಾಧನೆಗೈದಿದ್ದಾರೆ.
2023ರಲ್ಲಿ ಕೇಂದ್ರ ಸರ್ಕಾರ ‘ನಾರಿ ಶಕ್ತಿ ವಂದನ್ ಅಧಿನಿಯಮ’ (ಮಹಿಳಾ ಮೀಸಲಾತಿ ಬಿಲ್) ಅಂಗೀಕರಿಸಿದೆ. ಆದರೆ ಇನ್ನೂ ಜಾರಿಗೊಳಿಸಿಲ್ಲ. ಈ ಕಾನೂನು ಪ್ರಕಾರ ಮುಂದಿನ ದಿನಗಳಲ್ಲಿ ಶೇ. 33ರಷ್ಟು ಮಹಿಳೆಯರು ಸಂಸತ್ತಿನಲ್ಲಿ ಸ್ಥಾನ ಪಡೆಯಲಿದ್ದಾರೆ. ರಾಜಕೀಯ ಎನ್ನುವುದು ಇನ್ನು ಮುಂದೆ ಕೇವಲ ಪುರುಷರ ಅಂಗಳವಲ್ಲ, ಅದು ಮಹಿಳೆಯರ ವಿವೇಚನೆ, ಸಹನೆ, ಜ್ಞಾನದ ಅಂಗಳ. ರಾಜಕೀಯ ವ್ಯವಸ್ಥೆಯೊಳಗೆ ಬದಲಾವಣೆ ತರಲು ಹಂಬಲಿಸುತ್ತಿರುವ ಪ್ರತಿಯೊಬ್ಬ ಮಹಿಳೆಗೂ ಮಹಿಳಾ ದಿನಾಚರಣೆಯ ಶುಭಾಶಯಗಳು.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




