ಸ್ತ್ರೀಕೇಂದ್ರಿತ ವಸ್ತುವಿದ್ದರೂ ಸಮಸ್ಯೆಗಳನ್ನು ವ್ಯಕ್ತಿಗತ ಬದುಕಿನ ಸಂದರ್ಭಕ್ಕೆ ಮಾತ್ರ ಸೀಮಿತಗೊಳಿಸದೆ ಕೌಟುಂಬಿಕ, ಸಾಮಾಜಿಕ, ರಾಜಕೀಯ, ಆರ್ಥಿಕ ಪರಿಸರದಲ್ಲಿ ಆ ಬೇರುಗಳಿರುವುದನ್ನು ಗುರುತಿಸುತ್ತಾರೆ. ಪ್ರಗತಿಶೀಲ ಸಾಹಿತ್ಯ ಚಳವಳಿಯ ಅಡಿಯಲ್ಲಿ ಗುರುತಿಸಲಾಗುವ ಇತರ ಐದಾರು ಸಾಹಿತಿಗಳ ನಡುವೆ ನಿರಂಜನರು ತುಂಬಾ ವಿಶಿಷ್ಟವಾಗಿ ನಿಲ್ಲುತ್ತಾರೆ ಎಂಬುದನ್ನು ಗುರುತಿಸಬಹುದು.
ನಮ್ಮ ಕನ್ನಡದ ಪ್ರಮುಖ ಲೇಖಕರಲ್ಲಿ ಒಬ್ಬರಾದ ನಿರಂಜನರನ್ನು(ಕುಳಕುಂದ ಶಿವರಾಯ) ಪ್ರಗತಿಶೀಲ ಸಾಹಿತಿಯೆಂದು ಗುರುತಿಸಲಾಗುತ್ತದೆ. ನಿರಂಜನರು 150ಕ್ಕೂ ಹೆಚ್ಚು ಕತೆಗಳನ್ನು ಮತ್ತು 22 ಕಾದಂಬರಿಗಳನ್ನು ಬರೆದಿದ್ದಾರೆ. ಮಾರ್ಕ್ಸ್, ಲೆನಿನ್ ತತ್ವಗಳಿಗೆ ತಮ್ಮ ನಿಷ್ಠೆಯನ್ನು ಉಳಿಸಿಕೊಂಡು ಯಾವ ರಾಜಿಗಿಳಿಯದೆ ಸಾಮಾಜಿಕ ಸಮಸ್ಯೆಗಳನ್ನು ಸ್ತ್ರೀಯರದ್ದೇ ಎಂದು ಪ್ರತ್ಯೇಕಿಸದೆ, ಇಡೀ ಸಾಮಾಜಿಕ ವ್ಯವಸ್ಥೆಯ ಸ್ವರೂಪವನ್ನು ತಳಹದಿಯಾಗಿಟ್ಟುಕೊಂಡು ಎಲ್ಲ ಬಗೆಯ ಅಸಮಾನತೆಗಳಲ್ಲಿ ಲಿಂಗಾಧಾರಿತ ಅಸಮಾನತೆಯೂ ಒಂದೆಂದು ವಿಶ್ಲೇಷಿಸುತ್ತಾರೆ. ಸ್ತ್ರೀಕೇಂದ್ರಿತ ವಸ್ತುವಿದ್ದರೂ ಸಮಸ್ಯೆಗಳನ್ನು ವ್ಯಕ್ತಿಗತ ಬದುಕಿನ ಸಂದರ್ಭಕ್ಕೆ ಮಾತ್ರ ಸೀಮಿತಗೊಳಿಸದೆ ಕೌಟುಂಬಿಕ, ಸಾಮಾಜಿಕ, ರಾಜಕೀಯ, ಆರ್ಥಿಕ ಪರಿಸರದಲ್ಲಿ ಆ ಬೇರುಗಳಿರುವುದನ್ನು ಗುರುತಿಸುತ್ತಾರೆ. ಪ್ರಗತಿಶೀಲ ಸಾಹಿತ್ಯ ಚಳುವಳಿಯ ಅಡಿಯಲ್ಲಿ ಗುರುತಿಸಲಾಗುವ ಇತರ ಐದಾರು ಸಾಹಿತಿಗಳ ನಡುವೆ ನಿರಂಜನರು ತುಂಬಾ ವಿಶಿಷ್ಟವಾಗಿ ನಿಲ್ಲುತ್ತಾರೆ ಎಂಬುದನ್ನು ಗುರುತಿಸಬಹುದು.
ಸಾಮಾಜಿಕ ಸಂಸ್ಥೆಯಾದ ’ವಿವಾಹ’ ಮತ್ತು ಅದರಿಂದ ಉತ್ಪನ್ನವಾಗುವ ’ಕುಟುಂಬ’ವು ಸಾಮಾನ್ಯವಾಗಿ ಹೆಣ್ಣಿನ ವಿಷಯದಲ್ಲಿ ಶೋಷಣೆಯ ಮೂಲ ಸಾಧನವಾಗಿಯೇ ಕಾರ್ಯ ನಿರ್ವಹಿಸುವುದು ಒಂದು ದುರಂತ. ಸುಖೀ ಸಂಸಾರಗಳು ಇರುತ್ತವಾದರೂ ಅದು ಆಯ್ಕೆಯ ವಿಷಯವಾಗದೆ, ಅನಿರೀಕ್ಷಿತ ವಿದ್ಯಮಾನಗಳಾಗುವುದೇ ಹೆಚ್ಚು. ನಿರಂಜನರ ಒಂದು ಕಾದಂಬರಿ ’ಪಾಲಿಗೆ ಬಂದದ್ದೇ ಪಂಚಾಮೃತ’ – ಅದರ ಶೀರ್ಷಿಕೆಯೇ ಈ ಅರ್ಥವನ್ನು ಧ್ವನಿಸುತ್ತದೆ. ಒಮ್ಮೊಮ್ಮೆ ಈ ಪಂಚಾಮೃತವೆಂದುಕೊಂಡದ್ದು ವಿಷವಾಗಿಯೂ ಪರಿಣಮಿಸುತ್ತದೆ, ಎನ್ನುವುದನ್ನು ಸಾರಿ ಹೇಳುವ ಕಾದಂಬರಿ ಇದು. ಈ ಕಾದಂಬರಿಯ ಮುಖ್ಯ ಪಾತ್ರ ಸುನಂದಳಿಗೆ ಗಂಡನ ಸಂಬಂಧ ವಿಷವಾಗಿ ಪರಿಣಮಿಸುತ್ತದೆ. ಈ ಕಾದಂಬರಿಯ ಮುಂದುವರಿದ ಭಾಗವೇ ’ಏಕಾಂಗಿನಿ’.
ಗಂಡಿನ ಅವಲಂಬನವಿಲ್ಲದೆ ಹೆಣ್ಣು ಬದುಕುವುದು ಅಸಾಧ್ಯವೆನ್ನುವಂತಹ ಸಾಂಪ್ರದಾಯಿಕ ಕಲ್ಪನೆಯಿರುವ ಸಮಾಜದಲ್ಲಿ ಏಕಾಂಗಿನಿಯಾಗಿ ಬದುಕುವ ನಿರ್ಧಾರ ತೆಗೆದುಕೊಳ್ಳುವ ’ಏಕಾಂಗಿನಿ’ಯ ಸುನಂದ, ಹಿಂದೂ ವಿವಾಹದ ಪಾವಿತ್ರ್ಯತೆಯಲ್ಲಿ ನಂಬಿಕೆಯಿಟ್ಟವಳು. ತಾಳಿ ಕಟ್ಟಿದ ಗಂಡ ತನ್ನನ್ನು ದೈಹಿಕ, ಮಾನಸಿಕ ಚಿತ್ರಹಿಂಸೆಗೆ ಗುರಿಪಡಿಸುತ್ತಲೇ ವೇಶ್ಯೆಯರ ಸಂಗ ಮಾಡುತ್ತಿದ್ದಾಗ ಕುದಿಯುತ್ತಾಳೆ. ಅಂತಹ ಗಂಡನಿಂದ ಪರಿತ್ಯಕ್ತಳಾದ ಸುನಂದ ಸಮಾಜದ ದ್ವಿಸ್ತರ ನೀತಿಯನ್ನು ಪ್ರಶ್ನಿಸುತ್ತಾಳೆ: “ನನ್ನನ್ನೇನು ಪರಮಸಾತ್ವಿಕಳು ಅಂತ ಜನ ಹೇಳ್ತಾರೇನು? ಕೆಟ್ಟ ನಡತೆಗಾಗಿ ಗಂಡ ಬಿಟ್ಟಿದಾನೆ ಅಂತಾರೆ. ಗಂಡನನ್ನು ಮಾತ್ರ ಆ ಜನ ಏನೂ ಅನ್ನೋದಿಲ್ಲ.”
ಹಿಂದೂ ವಿವಾಹ ಕಾಯಿದೆಯ ತಿದ್ದುಪಡಿ ಮಸೂದೆಯು ಪಾರ್ಲಿಮೆಂಟಿನಲ್ಲಿ ಚರ್ಚೆಯಲ್ಲಿದ್ದ ಸಮಯದಲ್ಲಿ ರಚಿತವಾದ ಈ ಕಾದಂಬರಿಯಲ್ಲಿ ಕಾನೂನಿನ ಈ ಬದಲಾವಣೆ ಹೆಣ್ಣಿನ ಪಾಲಿಗೆ ಕೊಡಬಹುದಾದ ಅರ್ಥವಂತಿಕೆಯತ್ತಲೂ ಗಮನ ಸೆಳೆಯುತ್ತದೆ: “ವಿವಾಹ ವಿಚ್ಛೇದನ ತತ್ವ ನನಗೆ ಒಪ್ಪಿಗೆ; ಆದರೆ ಅದನ್ನು ಅನ್ಯಾಯ ಸರಿಪಡಿಸೋಕೆ ಉಪಯೋಗಿಸಬೇಕು; ಹೊಸ ಅನ್ಯಾಯ ಮಾಡೋಕಲ್ಲ” ಎನ್ನುವ ಗೆಳತಿ ರಾಧಳ ಮಾತು ಸುನಂದಳಿಗೆ ಬಲ ಕೊಡುತ್ತದೆ. ಗಂಡನಿಂದ ಪರಿತ್ಯಕ್ತಳಾಗಿ ನೀತಿಗೆಟ್ಟವಳು ಎಂದೆನಿಸಿಕೊಳ್ಳುವುದಕ್ಕಿಂತ ನೀಚನಾದ ಗಂಡನನ್ನು ದೂರವಿಟ್ಟವಳು ಎಂದೆನಿಸಿಕೊಳ್ಳುವುದೇ ಉತ್ತಮ, ಎಂದು ತೀರ್ಮಾನಿಸುತ್ತಾಳೆ. ಹೀಗೆ ಕೊರಳಿಗೆ ಭಾರವಾದ ಮಾಂಗಲ್ಯ ಸೂತ್ರವನ್ನು ಕಳೆದುಕೊಂಡ ಸುನಂದ, ಸ್ವತಂತ್ರಳಾಗಿ ತನ್ನ ಮಗಳು ಸರಸ್ವತಿಯನ್ನು ಬೆಳೆಸುವುದಕ್ಕಾಗಿ ಮತ್ತು ತಾನು ಬದುಕುವುದಕ್ಕಾಗಿ ಉದ್ಯೋಗವನ್ನು ಹಿಡಿಯುತ್ತಾಳೆ.

ಆರ್ಥಿಕ ಸ್ವಾತಂತ್ರ್ಯ ಮತ್ತು ಹೆಣ್ಣಿನ ಉದ್ಯೋಗಗಳು ಅವಳ ಪರಾವಲಂಬನ ಸ್ಥಿತಿಯನ್ನು ಕಡಿಮೆ ಮಾಡಬಲ್ಲವು, ಎಂಬ ನಿರಂಜನರ ಆಲೋಚನೆಗಳು ’ಏಕಾಂಗಿನಿ’ ಕಾದಂಬರಿಯಲ್ಲಿ ಹರಳುಗಟ್ಟಿವೆ. ಕಾದಂಬರಿಯ ಕೊನೆಯಲ್ಲಿ ಸುನಂದೆ ಹೇಳುವ ಮಾತುಗಳು ಕಾದಂಬರಿ ಧ್ವನಿಸುವ ಹೆಣ್ಣಿನ ಆದರ್ಶದ ಸ್ಥಿತಿಯನ್ನು ಸೂಚಿಸುತ್ತದೆ: “ನಾನು ಹಿಂದೂ ಸ್ತ್ರೀ. ಪ್ರತಿಯೊಬ್ಬರೂ ನನಗದನ್ನು ನೆನಪು ಹುಟ್ಟಿಸ್ತಾನೇ ಇರುತ್ತಾರೆ. ನನ್ನನ್ನು ಬೆನ್ನ ಹಿಂದೆ ಲೇವಡಿ ಮಾಡೋ ಜನರೇ ಎದುರಾಗಿ ನೀತಿಪಾಠದ ಮಂತ್ರ ಜಪಿಸುತ್ತಾರೆ. ಗೃಹದೇವತೆ – ಆದರ್ಶ ಸತಿ! ಎಂಥೆಂಥ ಕಲ್ಪನೆಗಳು. ಆದರೆ ನಾನು ದೇವತೆಯಲ್ಲ, ಕುಸುಮಾ. ದೇವತೆಯಾಗುವುದು ನನಗೆ ಬೇಕಾಗಿಲ್ಲ. ನಾನು ಮನುಷ್ಯಳಾದರೆ ಸಾಕು- ಒಳ್ಳೆಯ ಮನುಷ್ಯಳಾದರೆ ಸಾಕು…”
“ಸಾಂಪ್ರದಾಯಿಕವಾಗಿ ಸುಭದ್ರವೆನಿಸಿಕೊಂಡಿದ್ದ ಕೌಟುಂಬಿಕ ನೆಲೆಗಳ ತೋರಿಕೆಯ ಭದ್ರತೆಯನ್ನು ಮತ್ತು ಅವುಗಳ ಒಳಗೆ ಅಡಗಿರುವ ಸಂತ್ರಸ್ಥ ನೆಲೆಗಳನ್ನು ವಸ್ತುವಾಗಿ ಆರಿಸಿಕೊಂಡು ಲಿಂಗಾಧಾರಿತ ಸಂಬಂಧಗಳ ವಾಸ್ತವ ರೂಪಗಳನ್ನು’ಅಭಯ’ ಕಾದಂಬರಿಯಲ್ಲಿ ವಿಶ್ಲೇಷಿಸಲಾಗಿದೆ. “ಹೆಣ್ಣಿನ ದೇಹದ ಮೇಲಿನ ಪುರುಷನ ಆಕ್ರಮಣ ಮತ್ತು ಅವಳ ಲೈಂಗಿಕ ಶಕ್ತಿಯ ಮೇಲೆ ಅವನ ನಿಯಂತ್ರಣಗಳೆರಡೂ ಹೆಣ್ಣಿನ ಸ್ಥಿತಿಯನ್ನು ದುರಂತಮಯವಾಗಿಸುತ್ತವೆ: ಸಾಕು ತಂದೆತಾಯಿಗಳ ನಿರ್ಲಕ್ಷ್ಯಕ್ಕೆ ಒಳಗಾಗಿ ಬೀದಿಗೆ ಬಂದ ಜಲಜ, ಕೌಟುಂಬಿಕ ಕಲಹದಿಂದಾಗಿ ಪಟ್ಟಣ ಸೇರಿ ಮೈಮಾರುವ ಕಸುಬಿಗೆ ಇಳಿದ ಕನಕಲಕ್ಷ್ಮಿ, ಪ್ರಿಯತಮನ ಕಪಟದಿಂದಾಗಿ ಬಸಿರು ಹೊತ್ತ ತುಂಗಮ್ಮ , ದೈಹಿಕ ನ್ಯೂನತೆಗಳಿಂದಾಗಿ ಕುಟುಂಬದವರಿಂದ ತಿರಸ್ಕರಿಸಲ್ಪಟ್ಟ ಕುರುಡಿ ಸುಂದ್ರಾ, ಮೂಕಿ ಕಲ್ಯಾಣಿ, ವೇಶ್ಯಾಕುಲದ ಸುಮತಿ ಮುಂತಾದ ಹತ್ತು ಹಲವಾರು ಪಾತ್ರಗಳು ಹೆಣ್ಣಿನ ನೋವಿನ ಅನಂತಮುಖಗಳಿಗೆ ಪ್ರತೀಕಗಳಾಗಿವೆ.
ಸಮಾಜದಲ್ಲಿರುವ ಲಿಂಗಭೇದನೀತಿಯ ದ್ವಿಸ್ತರ ನ್ಯಾಯವನ್ನು ಪ್ರತಿನಿಧಿಸುವ ಧರ್ಮದ ಕರಾಳ ಸ್ವರೂಪವನ್ನು ಕಾಣಿಸುವ ಕಾದಂಬರಿಯಾಗಿ ’ಬನಶಂಕರಿ’ ಮಹತ್ವದ್ದಾಗುತ್ತದೆ. ನಿರಂಜನರ ಸ್ತ್ರೀಪರ ಚಿಂತನೆಯ ಒಲವುಗಳ ಉತ್ತಮ ಅಭಿವ್ಯಕ್ತಿ ಈ ಕೃತಿಯಾಗಿದೆ. ಬಾಲಕಿ ಬನಶಂಕರಿ ಮೈನೆರೆಯುವ ಮುನ್ನವೇ ವಿಧವೆಯ ಪಟ್ಟ ಪಡೆದವಳು. ’ಬಳೆಗಳಿಲ್ಲದ ಕೈ, ಹಾರವಿಲ್ಲದ ಕೊರಳು, ತಿಲಕವಿಲ್ಲದ ಹಣೆ, ಹೂ ಮುಡಿಯದ , ಮೂಗುಬಟ್ಟಿಡದೆ ಬಾಳಬೇಕಾದಂತಹ’ ನಿರಲಂಕಾರ ಸ್ಥಿತಿಯಲ್ಲಿ ಅತ್ತೆ-ಮಾವ, ಅಣ್ಣ-ಅಜ್ಜಿಯ ಹಂಗಿಗೆ ಒಳಗಾಗಬೇಕಾದ ದುರವಸ್ಥೆಗೆ ಈಡಾಗುತ್ತಾಳೆ. ಅವಳ ಬದುಕಿನಲ್ಲಿ ಹಾದು ಹೋಗುವ ಮಾವ, ಅಣ್ಣ, ರಾಮಾಶಾಸ್ತ್ರಿ, ಸುಂದರಮ್ಮ, ಅಜ್ಜಿ, ಕಾವೇರಿ – ಎಲ್ಲರೂ ಅವಳನ್ನು ಮಾನವೀಯ ಅನುಕಂಪದಿಂದಲೇ ಕಂಡರೂ ಅವರಿದ್ದ ಸಮಾಜದ ಪ್ರತಿಕೂಲ ಪರಿಸ್ಥಿತಿಯನ್ನು ಅವರು ಬದಲಿಸಲಾರರು. ತಮ್ಮ ನೆರೆಹೊರೆಯ ನಿಂದನೆ, ಅಪಹಾಸ್ಯಗಳಿಗೆ ಮನನೊಂದರೂ ಮಾವ ಅವಳ ಕೇಶಮುಂಡನದ ವಿರುದ್ಧವೇ ಇದ್ದವರು. ಸ್ವತಃ ಮಡಿಹೆಂಗಸಾದ ಅವಳ ಅಜ್ಜಿ ಮಠದ ಹಾಗೂ ನೆರೆಹೊರೆಯವರ ಕ್ರೂರದೃಷ್ಟಿಯಿಂದ ಮೊಮ್ಮಗಳನ್ನು ಕಾಪಾಡಲು ಹೆಣಗುತ್ತಾಳೆ. ಅಜ್ಜಿ ಸುಬ್ಬಕ್ಕನಿಗೆ ಮೊಮ್ಮಗಳ ಸಾಕುವಿಕೆ ಸಾವು, ಬದುಕಿನ ಪ್ರಶ್ನೆಯಾಗುತ್ತದೆ. ಬನಶಂಕರಿಗೆ ಅನುಕಂಪ ಮತ್ತು ಬೆಂಬಲ ತೋರಿದ ಸುಂದರಮ್ಮ ಮತ್ತು ರಾಮಾಶಾಸ್ತ್ರಿ ದಂಪತಿಗಳಿಗೆ ಆದ ಹಾನಿ, ಅಪಮಾನ ಮತ್ತು ಹುಟ್ಟಿಕೊಂಡ ಶತ್ರುಗಳು ಬನಶಂಕರಿಯು ಬಾಳಬೇಕಾದ ಸ್ಥಿತಿಯ ಗಂಭೀರ ಸ್ವರೂಪವನ್ನು ತೋರಿಸುತ್ತವೆ.

ಮಧ್ಯಮವರ್ಗದ ಮೇಲುಜಾತಿಯ ಹೆಣ್ಣಿನ ಈ ಸಮಸ್ಯೆಗೆ ಧರ್ಮದ ಮುಖವಾಡವಿದ್ದರೂ ಅದರಡಿಯಿರುವುದೆಲ್ಲಾ ಪುರುಷನ ಕಾಮಲಾಲಸೆಯೇ. ಜೊತೆಗೆ ಹೆಣ್ಣಿನ ಅಸಹಾಯಕ ಅವಲಂಬನ ಸ್ಥಿತಿಯು ಸಮಸ್ಯೆಯ ದಿಕ್ಕನ್ನು ಹೆಚ್ಚಿಸಿದೆ. ಧಾರ್ಮಿಕ ಮೂಢನಂಬಿಕೆ, ಕಂದಾಚಾರಗಳನ್ನು ವಿಚಾರಶಕ್ತಿಯಿಂದ ಎದುರಿಸುವ, ಇಲ್ಲವೆ ವಿಮರ್ಶಿಸುವ ಒಂದು ಪ್ರಕ್ರಿಯೆಯನ್ನು ಇಲ್ಲಿ ನೋಡುತ್ತವೆ. ಕಾದಂಬರಿಯ ವೈಚಾರಿಕ ನೆಲೆಯನ್ನು ಪ್ರತಿನಿಧಿಸುವ ಪಾತ್ರಗಳಲ್ಲೊಂದಾದ ರಾಮಾಶಾಸ್ತ್ರಿಯ ಅಧ್ಯಯನ, ತಿಳುವಳಿಕೆಯನ್ನು ಹಂಚಿಕೊಳ್ಳುವ ಅವನ ಧರ್ಮಪತ್ನಿ ಸುಂದರಮ್ಮ ಹೇಳುತ್ತಾಳೆ:
“ಇನ್ನೊಂದು ಮದುವೆ ಪಾಪವಲ್ಲ ಬನೂ…. ಖಂಡಿತಾ ಪಾಪವಲ್ಲ. ಧರ್ಮಶಾಸ್ತ್ರದ ಹೆಸರಿನಲ್ಲಿ ನಿನಗೆ ಹಿಂಸೆ ಕೊಡೋದಿದೆಯಲ್ಲ ಅದು ಪಾಪ …….. ಗಂಡಸು ಎರಡನೇ, ಮೂರನೇ ಮದುವೆ ಮಾಡಿಕೊಳ್ಳೋವಾಗ ಹೆಂಗಸು – ವಿಧವೆ – ಮತ್ತೊಮ್ಮೆ ಮದುವೆಯಾಗೋದು ಪಾಪವಲ್ಲ.” ಹೀಗೆ ಬನಶಂಕರಿಯ ಗೆಳತಿ ಸುಂದರಮ್ಮ ಅವಳಿಗೆ ಮತ್ತೊಂದು ಮದುವೆಯಾಗುವ ಸಲಹೆ ಕೊಡುತ್ತಾಳಾದರೂ ಅಂತಹದೊಂದು ಅವಕಾಶವು ಬನಶಂಕರಿ ವಾಸಿಸುತ್ತಿದ್ದ ಚಿಕ್ಕ ಊರಿನಲ್ಲಿ ಸಿಗುವುದೂ ಅಸಾಧ್ಯವಾಗುತ್ತದೆ.
ವಯೋಸಹಜವಾದ ಕಾಮದ ಪೂರೈಕೆ, ಮಾತೃತ್ವದ ಅಭಿಲಾಷೆಯಂತಹ ನೈಸರ್ಗಿಕ ಅಂಶಗಳು ಸಾಮಾಜಿಕ ವ್ಯವಸ್ಥೆಯೊಂದರಲ್ಲಿ ನಿಯಂತ್ರಣಕ್ಕೊಳಪಟ್ಟಿರುವಾಗ ಸ್ತ್ರೀಪುರುಷರಿಬ್ಬರಿಗೂ ಬೇರೆ ಬೇರೆಯದೇ ರೀತಿಯಲ್ಲಿ ಅವನ್ನು ಅನ್ವಯಿಸುವುದನ್ನು ವಿಮರ್ಶಾತ್ಮಕವಾಗಿ ಇಲ್ಲಿ ನೋಡಲಾಗಿದೆ. ಬದುಕಿನ ಯಾವ ಸವಿಯನ್ನೂ ತಿಳಿಯದ ಬನಶಂಕರಿ ವಿಧವೆಯಾದ್ದರಿಂದ ವಿವಾಹೇತರವಾದ ಯಾವ ಸಂಬಂಧವನ್ನೂ ಮತ್ತು ವಿವಾಹವನ್ನೂ ಮಾಡಿಕೊಳ್ಳಲವಕಾಶವಿಲ್ಲ. ಆದರೆ ಅನಾಯಾಸವಾಗಿ ಸಿಗಬಹುದಾದ ಹೆಣ್ಣಿನ ಸಂಗವನ್ನು ಮಾಡುವ ಬಯಕೆಯನ್ನು ಸ್ವಾಮಿಗಳಿಂದ ಹಿಡಿದು ಮಠದ ಎಲ್ಲ ’ಗೌರವಾನ್ವಿತ’ರೂ ವ್ಯಕ್ತಪಡಿಸುತ್ತಾರೆ. ಪುರುಷರು ವಿವಾಹಿತರಾಗಿರಲಿ, ಇಲ್ಲದಿರಲಿ, ಇಲ್ಲವೆ ವಿಧುರರಾಗಿರಲಿ, ಅವರು ಬಹುಪತ್ನಿತ್ವ, ವಿವಾಹಪೂರ್ವ ಸಂಬಂಧ ಮತ್ತು ವೇಶ್ಯಾಸಂಗವನ್ನು ಬಯಸಿದರೆ, ಅದು ಧಾರ್ಮಿಕ ಸಮಸ್ಯೆಯಾಗುವುದಿಲ್ಲ.
ಬನಶಂಕರಿ ತನ್ನ ಬಾಳಿನ ಎಲ್ಲ ಒಡನಾಡಿಗಳನ್ನು ಕಳೆದುಕೊಂಡ ಮೇಲೆ ಬದುಕುವುದೇ ಅಸಾಧ್ಯವೆನಿಸಿದಾಗ ತನ್ನ ಭವಿಷ್ಯದ ಬಗ್ಗೆ ಗಟ್ಟಿ ನಿಲುವನ್ನು ತಳೆಯುತ್ತಾಳೆ. ತನಗೆ ಆಶ್ರಯ ನೀಡುವೆನೆಂದ ವಿವಾಹಿತ ಪಾರುಪತ್ಯೆಗಾರನ ಆಹ್ವಾನಕ್ಕೆ ಬನಶಂಕರಿಯ ಹೆಣ್ತನದ ಕರೆ, ಬದುಕುವ ಆಸಕ್ತಿಗಳು ಸ್ಪಂದಿಸುತ್ತವೆ. ಅಷ್ಟೇ ಅಲ್ಲ, ಇಲ್ಲಿ ಬನಶಂಕರಿಯ ಜೀವನದ ಆಯ್ಕೆ ಯಾವ ಸಮಾಜ ಸುಧಾರಣೆಯ ಭಾಗವಾಗಿಯೂ ಬರುವುದಿಲ್ಲ ಬದುಕಿನ ಕರೆಯ ಸೆಳೆತ ಪ್ರಬಲವಾದದ್ದರಿಂದಲೇ ಆ ಕ್ಷಣದಲ್ಲಿ ಬನಶಂಕರಿಗೆ ನೈತಿಕತೆಯ ಪ್ರಶ್ನೆ ಎದುರಾಗಲಿಲ್ಲ. ಈ ಕಾದಂಬರಿಯು ಪ್ರಕಟವಾದದ್ದು 1954ರಲ್ಲಿ. ಈ ಕಾಲಘಟ್ಟದಲ್ಲಿ ಸಂವಿಧಾನದ ಮಹತ್ವ ಮತ್ತು ಚರ್ಚೆಯ ಪ್ರಭಾವವನ್ನು ಈ ಕೃತಿಯ ಮೇಲಾಗಿರುವುದನ್ನು ಗಮನಿಸಬಹುದು. ಸಂವಿಧಾನವು ಹೆಣ್ಣಿಗೆ ನೀಡಿದ ಸಮಾನತೆಯ ಹಕ್ಕುಗಳ ಆಶಯಗಳ ಒತ್ತಾಸೆಯಿರುವುದನ್ನು ಗಮನಿಸಬಹುದು.

ನಿರಂಜನರ ಕಾದಂಬರಿಗಳಲ್ಲಿ ಬರುವ ಮತ್ತೊಂದು ಕುತೂಹಲಕರವಾದ ಸಂಗತಿಯೆಂದರೆ ಅವರ ಬಹುಪಾಲು ಪಾತ್ರಗಳು ಆಧುನಿಕತೆಯ ಪ್ರಕ್ರಿಯೆಗೆ ತಮ್ಮನ್ನು ತೆರೆದುಕೊಳ್ಳುವುದರೊಂದಿಗೆ ತಾವಿರುವ ಸ್ಥಿತಿಯಿಂದ ಬಿಡುಗಡೆಯ ನೆಲೆಯತ್ತ ಸಾಗುತ್ತಿರುತ್ತವೆ. ಆಧುನಿಕತೆಯನ್ನು ಕುರಿತ ನಿರಂಜನರ ವೈಚಾರಿಕತೆಯ ನೆಲೆಯೂ ಇದಾಗಿರುವುದನ್ನು ಗಮನಿಸಬೇಕು. ಚಿಕ್ಕ ಊರುಗಳಿಂದ ಹೊರಟ ಬನಶಂಕರಿಯ ಬನಶಂಕರಿ, ಏಕಾಂಗಿನಿಯ ಸುನಂದ, ಅಭಯದ ತುಂಗಮ್ಮ… ಎಲ್ಲರೂ ಹೊಸ ಊರಿನಲ್ಲಿ ತಮ್ಮ ಬದುಕು ಕಟ್ಟಿಕೊಳ್ಳುವ ಪ್ರಯತ್ನ ಮಾಡುತ್ತಾರೆ.
ನಿರಂಜನರ ’ನಂದಗೋಕುಲ’ ಕಾದಂಬರಿಯಲ್ಲಿ ಹೆಣ್ಣಿನ ಲೈಂಗಿಕತೆಯ ಎರಡು ವಿಭಿನ್ನ ಮಾದರಿಗಳನ್ನು ಕುರಿತ ಚರ್ಚೆಯಿದೆ: ಈ ಕಾದಂಬರಿಯ ಕೇಂದ್ರ ಪಾತ್ರ ಸಮಾಜಶಾಸ್ತ್ರಜ್ಞನಾದ ವಿಶ್ವೇಶ್ವರ. ಅವನು ತನ್ನ ಸಂಶೋಧನಾ ಪ್ರಬಂಧವನ್ನು ಬರೆಯಲು ಸೂಕ್ತವಾದ ಪರಿಸರವೆಂದು ಗೆಳೆಯನ ಮನೆಗೆ ಭಾವನಗರಕ್ಕೆ ಬರುತ್ತಾನೆ. ಅವನ ಸಂಶೋಧನೆಯ ವಿಷಯ: ಕಿಷ್ಕಿಂದೆಯ ನಗರ – ಪಟ್ಟಣಗಳಲ್ಲಿ ಸಮಾಜದ ವರ್ಗೀಕರಣ. ಈ ವಿಷಯವನ್ನು ಕುರಿತು ಮಹಾಪ್ರಬಂಧವನ್ನು ಬರೆಯಲು ಬಂದ ವಿಶ್ವೇಷ್ವರ ತನ್ನ ಮೂಲ ವಿಷಯವನ್ನು ಬಿಟ್ಟು ಭಾವನಗರದ ಸಮಾಜದ ವೀಕ್ಷಣೆ, ಅಧ್ಯಯನಕ್ಕೆ ತೊಡಗುತ್ತಾನೆ. ಅಲ್ಲಿನ ಆಗುಹೋಗುಗಳು ಅವನ ಕುತೂಹಲವನ್ನು ಕೆರಳಿಸಿ ಚಿಂತನೆಗೆ ಸಾಮಗ್ರಿಗಳನ್ನು ಒದಗಿಸುತ್ತವೆ.
ಹೆಣ್ಣಿಗೆ ಸಂಬಂಧಪಟ್ಟಂತೆ ಎರಡು ಮಾದರಿಗಳು ಈ ಸಮಾಜಶಾಸ್ತ್ರಜ್ಞನ ವಿಶ್ಲೇಷಣೆಗೆ ಇಲ್ಲಿ ಗುರಿಯಾಗುತ್ತವೆ. “ತೀರದ ಬಯಕೆಯ ಕಾರಣದಿಂದ ಎಷ್ಟೋ ಜನ ಹೆಂಗಸರು ವೇಶ್ಯೆಯರಾಗುತ್ತಾರೆ; ಇನ್ನೆಷ್ಟೋ ಜನ ಸಾಮಾಜಿಕ, ಆರ್ಥಿಕ ಕಾರಣದಿಂದ ಆ ಕಸುಬಿಗೆ ಇಳಿಯುತ್ತಾರೆ. “ ನಿವೃತ್ತ ಜಡ್ಜನ ಎರಡನೇ ಮಡದಿಯು ತನ್ನ ಅತೃಪ್ತ ಕಾಮನೆಗಳ ಪೂರೈಕೆಗಾಗಿ ವಿವಾಹೇತರ ಸಂಬಂಧಗಳತ್ತ ದೃಷ್ಟಿ ಹರಿಸುತ್ತಾಳೆ. ಈ ಸಂಬಂಧವನ್ನು ಕುರಿತು ಸಮಾಜಶಾಸ್ತ್ರಜ್ಞನ ವಿಶ್ಲೇಷಣೆ ಹೀಗಿದೆ: “ರುಗ್ಣ ಶಯ್ಯೆಯಲ್ಲಿರುವ ಪಾಳೇಗಾರಿಕೆ, ಆ ಗಂಡ. ಆ ಆವರಣದಲ್ಲೇ ತನಗಿಷ್ಟ ಬಂದಂತೆ ಬದುಕಲೆತ್ನಿಸುತ್ತಿರುವ ಔದ್ಯೋಗೀಕರಣ – ಆ ಹೆಂಡತಿ.” ಈ ವಿಚಿತ್ರ ಸಾಮಾಜಿಕ ಸ್ಥಿತಿಯನ್ನು ಸಮಾಜದ ಕಾಯಿಲೆಯಾಗಿ ಗುರುತಿಸಲಾಗಿದೆ. ಆ ಹೆಂಗಸಿಗೆ ಆರ್ಥಿಕ ಭದ್ರತೆಯಿದೆ, ಸಾಮಾಜಿಕ ಸ್ಥಾನಮಾನವಿದೆ, ಆದರೆ ಸುಖವಿಲ್ಲ. ಸಾಮಾಜಿಕ ಕಟ್ಟುಪಾಡುಗಳನ್ನು ಮುರಿಯಲು ಅವಳು ಸಿದ್ಧಳಿದ್ದರೂ ಶಾಸನದ ರಕ್ಷಣೆಯನ್ನು ಅವಳು ಪಡೆಯಲಾರಳು. ವಿವಾಹ ವಿಚ್ಛೇದನದ ವಿಚಾರ ಮಾಡಲಾರಳು. ಕೈಲಾಗದ ಮುದುಕ ಗಂಡನಿಗೆ ಮಂಕುಬೂದಿ ಎರಚಿ ಬೇರೆ ರೀತಿಯಾಗಿ ತನ್ನ ಆಸೆಗಳನ್ನು ನೆರವೇರಿಸಿಕೊಳ್ಳಲು ಯತ್ನಿಸುತ್ತಾಳೆ.
ಇದೊಂದು ಹೆಣ್ಣಿನ ಮಾದರಿಯಾದರೆ, ಮತ್ತೊಂದು ಮಾದರಿ ಆ ಭಾವನಗರದ ಸಮಾಜದಲ್ಲಿ ಕಾಣಲು ಸಿಕ್ಕ ವೇಶ್ಯೆಯೊಬ್ಬಳ ಚಿತ್ರಣ. ನಂದಗೋಕುಲದ ವಿಸ್ತರಣಕ್ಕೆ ಖಾಲಿಯಾದ ಮನೆಗೆ ವೇಶ್ಯೆಯೊಬ್ಬಳು ವಾಸಿಸಲು ಬರುತ್ತಾಳೆ. ಅವಳ ಆಗಮನ ನಂದಗೋಕುಲದ ಶಾಂತಿಯನ್ನು ಕದಡುತ್ತದೆ. ಅಲ್ಲಿನ ಎಲ್ಲ ಯುವಕರು, ನಿವಾಸಿಗಳು ಒಟ್ಟಿಗೇ ಸೇರಿ ಆ ವೇಶ್ಯೆಯನ್ನು ಒಂದೇ ದಿನದಲ್ಲಿ ಆ ಜಾಗದಿಂದ ಓಡಿಸಿಬಿಡುತ್ತಾರೆ. ನಂದಗೋಕುಲದ ಧವಳಕೀರ್ತಿಗೆ ಕ್ಷುದ್ರ ಜನ ಅಂಟಿಸಲೆತ್ನಿಸಿದ ಕಳಂಕ ದೂರವಾಯಿತೆಂದು ಸಂಭ್ರಮಿಸುತ್ತಾರೆ.
ಈ ಘಟನೆಯನ್ನು ಕುರಿತು ಕೇಂದ್ರಪಾತ್ರ ವಿಶ್ವೇಶ್ವರನ ವಿಶ್ಲೇಷಣೆಯೆಂದರೆ, “ನಂದಗೋಕುಲದ ಶಾಂತಿಯನ್ನು ಕದಡಿದ ಆ ಹೆಣ್ಣು ಏಕೆ ಆ ವೃತ್ತಿಯನ್ನು ಕೈಗೊಂಡಳು? ಆಕೆಯ ಆತ್ಮಕಥನ – ಅದು ಲಭ್ಯವಾದುದೇ ಆದರೆ – ಸಮಾಜಶಾಸ್ತ್ರದ ವಿದ್ಯಾರ್ಥಿಗೆ ಅಭ್ಯಾಸಕ್ಕೊಂದು ನಮೂನೆಯಾದೀತು, ಸೃಜನಶೀಲ ಬರಹಗಾರನಿಗೆ ಒಳ್ಳೆಯ ಕಾದಂಬರಿಗೊಂದು ವಸ್ತುವಾದೀತು” ಎಂದುಕೊಳ್ಳುತ್ತಾನೆ. “ಹೆಣ್ಣಿನ ಬಯಕೆಗಳೇನಿದ್ದರೂ ಗಂಡಿಗಿರುವಷ್ಟು ಸ್ವಾತಂತ್ರ್ಯ ಅವಳಿಗಿಲ್ಲ. ಗಂಡು ಒಂದು ತಪ್ಪು ಮಾಡಿ ದಕ್ಕಿಸಿಕೊಳ್ಳಬಹುದು, ಹೆಣ್ಣು ಆಜೀವಪರ್ಯಂತ ಮರುಗಬೇಕು.” ಎನ್ನುವ ತೀರ್ಮಾನವನ್ನು ಕಾದಂಬರಿ ಪ್ರಕಟಿಸುತ್ತದೆ.
ಪಾಳೇಗಾರಿಕೆ ಮತ್ತು ಔದ್ಯೋಗೀಕರಣ – ಎರಡೂ ವ್ಯವಸ್ಥೆಯಲ್ಲಿ ಸರಕಾಗಿ ಪರಿಗಣಿಸಲ್ಪಟ್ಟ ಹೆಣ್ಣಿನ ವಿಮೋಚನೆಯ ಹಾದಿಯನ್ನು ಕಂಡುಕೊಳ್ಳಬೇಕಾದ ಅನಿವಾರ್ಯತೆಯನ್ನು ಸೂಚಿಸುವ ಧ್ವನ್ಯಾರ್ಥವು ಇದರಲ್ಲಿ ಸೂಚಿಸಲಾಗಿದೆ. ವಿವಾಹ ಸಂಸ್ಥೆಯ ವಿಷಮತೆಯನ್ನು ಚಿತ್ರಿಸಿರುವ ನಿರಂಜನರು ಸುಂದರ ದಾಂಪತ್ಯದ ಮಾದರಿಗಳನ್ನೂ ಚಿತ್ರಿಸದೇ ಬಿಟ್ಟಿಲ್ಲ. ಏಕಾಂಗಿನಿ ಕಾದಂಬರಿಯ ರಾಧಮ್ಮ, ಕುಸುಮಾ, ವಿಜಯಾ ದಂಪತಿಗಳು, ಬನಶಂಕರಿ ಕಾದಂಬರಿಯ ರಾಮಾಶಾಸ್ತ್ರಿ ಮತ್ತು ಸುಂದರಮ್ಮ ದಂಪತಿಗಳು ಇದಕ್ಕೆ ಒಳ್ಳೆಯ ನಿದರ್ಶನ.

ಡಾ.ಎನ್. ಗಾಯತ್ರಿ
ಲೇಖಕಿ ಡಾ. ಎನ್. ಗಾಯತ್ರಿ ಮೂಲತಃ ಬೆಂಗಳೂರಿನವರು. ಮಹಿಳಾ ಪರ ಚಿಂತಕಿಯಾಗಿ, ಜಾಗೃತಿ ಮಹಿಳಾ ಅಧ್ಯಯನ ಕೇಂದ್ರದ ಸ್ಥಾಪಕ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. 22 ವರ್ಷ ಕಾಲ 'ಅಚಲ' ಮಾಸಪತ್ರಿಕೆಯ ಸಂಪಾದಕಿಯಾಗಿದ್ದು, ಈಗ 'ಹೊಸತು' ಪತ್ರಿಕೆಯ ಸಂಪಾದಕ ಬಳಗದಲ್ಲೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೃತಿಗಳು: 'ಮಹಿಳೆ: ಬಿಡುಗಡೆಯ ಹಾದಿಯಲ್ಲಿ’, 'ಮಹಿಳಾ ಚಳವಳಿಯ ಮಜಲುಗಳು’, 'ಮುಖಾಮುಖಿ', 'ಕ್ಲಾರಾ ಜೆಟ್ಕಿನ್, 'ಮಹಿಳಾ ಮೀಸಲಾತಿ' ಮತ್ತು 'ಲಿಂಗ ರಾಜಕಾರಣ', ಫ್ರೆಡರಿಕ್ ಜೋಲಿಯೂ ಕ್ಯೂರಿ (ಅನುವಾದ), ಭಗತ್‌ಸಿಂಗ್ ಮತ್ತು ಅವನ ಸಂಗಾತಿಗಳು (ವ್ಯಕ್ತಿ ಚಿತ್ರ), ನಾನೇಕ ನಾಸ್ತಿಕ (ಅನುವಾದ), ತ್ರಿವೇಣಿಯವರ ಬಗ್ಗೆ ಬರೆದ ಲೇಖನಗಳ ಸಂಗ್ರಹ (ಸಂಪಾದಿತ).




