ಫೆಬ್ರವರಿ 28ರಂದು ಆರಂಭವಾದ ಯುದ್ಧವು ಒಂದು ವಾರದಲ್ಲಿ ಮತ್ತೊಂದು ಹಂತಕ್ಕೆ ಜಿಗಿದಿದೆ. ಮಾರ್ಚ್ 8ರ ನಸುಕಿನಲ್ಲಿ, ಇರಾನ್ ತೈಲ ಸಂಸ್ಕರಣಾಗಾರಗಳು ಮತ್ತು ಸಂಬಂಧಿತ ನೆಲೆಗಳ ಮೇಲೆ ಅಮೆರಿಕ-ಇಸ್ರೇಲ್ ಮಾರಣಾಂತಿಕ ದಾಳಿ ನಡೆಸಿವೆ. ಪರಿಣಾಮ, ಟೆಹ್ರಾನ್ ಮತ್ತು ಕರಾಜ್ ನಗರ ಪ್ರದೇಶಗಳಲ್ಲಿನ ಗಾಳಿಯು ವಿಷವಾಗಿ ಮಾರ್ಪಟ್ಟಿತು. ಇರಾನ್ ಸರ್ಕಾರವು ತನ್ನ ಜನರಿಗೆ ಮಾಸ್ಕ್‌ಗಳನ್ನು ಧರಿಸಲು, ರೆಫ್ರಿಜರೇಟರ್‌ಗಳಲ್ಲಿರುವ ಆಹಾರವನ್ನು ಬಿಸಾಡಲು ಹಾಗೂ ಕುಡಿಯುವ ನೀರಿನ ಫಿಲ್ಟರ್‌ಗಳನ್ನು ತಕ್ಷಣವೇ ಬದಲಾಯಿಸಲು ಸೂಚಿಸಿತು. ಬಳಿಕ, ಕೆಲವೇ ಗಂಟೆಗಳಲ್ಲಿ ಗಲ್ಫ್ ಅರಬ್ ರಾಷ್ಟ್ರಗಳಲ್ಲಿನ ತೈಲ ನೆಲೆಗಳನ್ನು ನಾಶ ಮಾಡುವುದಾಗಿ ಎಚ್ಚರಿಕೆ ನೀಡಿತು. ಅಂತೆಯೇ, ಹೈಫಾ ಕೊಲ್ಲಿಯಲ್ಲಿರುವ ಇಸ್ರೇಲ್‌ನ ಮುಖ್ಯ ತೈಲ ಸಂಸ್ಕರಣಾಗಾರದ ಮೇಲೆ ಮಾರಣಾಂತಿಕ ದಾಳಿ ನಡೆಸಿತು.
ಹೈಫಾ ಕೊಲ್ಲಿಯ ಮೇಲಿನ ದಾಳಿಯು ಇಸ್ರೇಲ್‌ನ ಆರ್ಥಿಕತೆ ಮತ್ತು ಮಿಲಿಟರಿ ಸಾಮರ್ಥ್ಯಕ್ಕೆ ತೀವ್ರ ಹೊಡೆತ ನೀಡಿದೆ. ಏಕೆಂದರೆ, ಈ ಸಂಸ್ಕರಣಾಗಾರವು ಇಸ್ರೇಲ್‌ನ ತೈಲ ಬಳಕೆಯ ಅರ್ಧಕ್ಕಿಂತ ಹೆಚ್ಚು ಇಂಧನವನ್ನು ಪೂರೈಸುತ್ತದೆ. ಈ ದಾಳಿಗಳಿಂದಾಗಿ, ಇರಾನ್ ಮೇಲಿನ ಅಮೆರಿಕ-ಇಸ್ರೇಲ್ ಯುದ್ಧವು ಸಂಪೂರ್ಣ ಯುದ್ಧದತ್ತ ಅಪಾಯಕಾರಿ ತಿರುವನ್ನು ಪಡೆದುಕೊಂಡಿದೆ. ಅದು ಪರಮಾಣು ಯುದ್ಧವಾಗಿ ಬದಲಾದರೆ, ಇಂದು ನಮಗೆ ತಿಳಿದಿರುವಂತೆ ಅದು ಜಗತ್ತಿನ ಅಂತ್ಯವಾಗಬಹುದು.
ಈ ಭೀಕರ ಫಲಿತಾಂಶಕ್ಕೆ ಹೆದರಲು ನಾನು ಎರಡು ಕಾರಣಗಳನ್ನು ಅರಿತಿದ್ದೇನೆ: ಮೊದಲನೆಯದಾಗಿ, 12 ದಿನಗಳ ಯುದ್ಧಕ್ಕಿಂತ ಮೊದಲು, ಇಸ್ರೇಲ್ ಇಷ್ಟು ದಿನಗಳಲ್ಲಿ ಅನುಭವಿಸಿದ ಮತ್ತು ಈಗ ಅನುಭವಿಸುತ್ತಿರುವ ದಾಳಿಯ ತೀವ್ರತೆಯನ್ನು ಎಂದಿಗೂ ಕಂಡಿರಲಿಲ್ಲ. ಇರಾನ್ ತನ್ನ ಇಂಟರ್‌ಸೆಪ್ಟರ್ ಕ್ಷಿಪಣಿಗಳ ‘ಐರನ್ ಡೋಮ್’ ಅನ್ನು ಭೇದಿಸಬಲ್ಲ ಹೊಸ ತಲೆಮಾರಿನ ಕ್ಷಿಪಣಿಗಳನ್ನು ಹೊಂದಿದೆ ಎಂಬುದೂ ಇಸ್ರೇಲ್‌ಗೆ ಗೊತ್ತಿರಲಿಲ್ಲ. ಈಗ ಅದನ್ನು ತಿಳಿದ ಇಸ್ರೇಲ್, ಮೊದಲ ಆಘಾತವನ್ನು ಅನುಭವಿಸಿತು. ಆ 12 ದಿನಗಳಲ್ಲಿ ದೇಶವು ಅನುಭವಿಸಿದ ಹಾನಿಯ ಸಂಪೂರ್ಣ ವ್ಯಾಪ್ತಿಯನ್ನು ಇಸ್ರೇಲಿ ಸರ್ಕಾರವು ಅಧಿಕೃತವಾಗಿ ಬಹಿರಂಗಪಡಿಸಿಲ್ಲ. ಆದರೆ, 33 ಅಥವಾ 34 ಜನರು ಮೃತಪಟ್ಟಿದ್ದಾರೆ ಮತ್ತು 3,500 ಜನರು ಗಾಯಗೊಂಡಿದ್ದಾರೆ ಎಂದು ಅಂದಾಜುಗಳು ಹೇಳುತ್ತವೆ.
ಪ್ರಸ್ತುತ ಯುದ್ಧದ ಹಂತದಲ್ಲಿ, ಇರಾನ್ ಕೇವಲ ಹೆಚ್ಚಿನ ಸಂಖ್ಯೆಯ ಕ್ಷಿಪಣಿ ದಾಳಿ ಮಾಡುತ್ತಿಲ್ಲ. ಬದಲಾಗಿ ಕಳೆದ ಜೂನ್‌ನಲ್ಲಿ ಬಳಸಿದ್ದಕ್ಕಿಂತ ಹೆಚ್ಚು ಅತ್ಯಾಧುನಿಕವಾಗಿರುವ ಕ್ಷಿಪಣಿಗಳನ್ನು ಹಾರಿಸುತ್ತಿದೆ. ಹೈಫಾ ಸಂಸ್ಕರಣಾಗಾರದ ಮೇಲೆ ‘ಖೇಬರ್ ಶೆಕಾನ್’ ಎಂದು ಕರೆಯಲ್ಪಡುವ ಘನ ಇಂಧನ ರಾಕೆಟ್‌ನೊಂದಿಗೆ ದಾಳಿ ಮಾಡಲಾಯಿತು. ಇದು 11 ಮೀಟರ್ ಉದ್ದವಿದ್ದು ಅರ್ಧ ಟನ್‌ಗಿಂತ ಹೆಚ್ಚು ಸಿಡಿತಲೆಯನ್ನು ಹೊಂದಿದೆ.

ಟೆಲ್‌ಅವಿವ್ ಮೇಲಿನ ದಾಳಿಯ ದೃಶ್ಯಗಳನ್ನು ಅಲ್ ಜಜೀರಾ ಸೆರೆಹಿಡಿದಿದೆ. ಆ ದೃಶ್ಯಗಳು; ಇರಾನ್‌ನ ಹೈಪರ್ಸಾನಿಕ್ ಕ್ಷಿಪಣಿಗಳು ಇಸ್ರೇಲಿ ಇಂಟರ್‌ಸೆಪ್ಟರ್‌ಗಳನ್ನು ತಪ್ಪಿಸಿಕೊಳ್ಳುವಲ್ಲಿ ಯಾವುದೇ ತೊಂದರೆಯನ್ನು ಅನುಭವಿಸುತ್ತಿಲ್ಲ ಎಂದು ತೋರಿಸುತ್ತವೆ. ಅನೇಕ ಕ್ಷಿಪಣಿಗಳು ಸ್ವತಂತ್ರವಾಗಿ ಚಲಿಸುವ ಸಾಮರ್ಥ್ಯವನ್ನು ಹೊಂದಿವೆ. ಅವುಗಳನ್ನು ತಡೆಯುವುದು ಇಸ್ರೇಲ್‌ಗೆ ಕಷ್ಟಕರವಾಗಿದೆ. ಅಲ್ಲದೆ, ಅವುಗಳು ಸ್ವತಂತ್ರವಾಗಿ ಬಿಡುಗಡೆ ಮಾಡಬಲ್ಲ ‘ಕ್ಲಸ್ಟರ್’ ಸಿಡಿತಲೆಗಳನ್ನು ಹೊಂದಿದ್ದು, ಇಂಟರ್‌ಸೆಪ್ಟಿಂಗ್ ಕ್ಷಿಪಣಿಗಳಿಗೆ ಗುರಿಯನ್ನು ತಪ್ಪಿಸುತ್ತವೆ. ಮಾತ್ರವಲ್ಲ, ನಾಗರಿಕ ಜನಸಂಖ್ಯೆಗೆ, ವಿಶೇಷವಾಗಿ ಹಗಲಿನ ವೇಳೆಯಲ್ಲಿ ಮಕ್ಕಳಿಗೆ ಗಂಭೀರ ಅಪಾಯವನ್ನುಂಟುಮಾಡುತ್ತವೆ.
ಹಲವು ಅಮೆರಿಕನ್ ಅಂದಾಜುಗಳ ಪ್ರಕಾರ, ಇಸ್ರೇಲ್‌ನ ಇಂಟರ್‌ಸೆಪ್ಟರ್ ರಕ್ಷಣೆಯನ್ನು ಭೇದಿಸುವ ಇರಾನಿನ ಕ್ಷಿಪಣಿಗಳ ಪ್ರಮಾಣವು ಸಂಘರ್ಷದ ಆರಂಭದಲ್ಲಿ 10% ಇದ್ದದ್ದು, ಯುದ್ಧದ ಆರನೇ ದಿನದ ಅಂತ್ಯದ ವೇಳೆಗೆ 20 ರಿಂದ 35%ಗೆ ಏರಿದೆ. ಈ ಬದಲಾವಣೆಯು, ಇರಾನ್ ಮೊದಲು ತನ್ನ ಹಳೆಯ ಕ್ಷಿಪಣಿಗಳ ಸಂಗ್ರಹವನ್ನು ಖಾಲಿ ಮಾಡಿತು. ಈಗ ತನ್ನ ಹೊಸ, ಹೈಪರ್ಸಾನಿಕ್ ಮತ್ತು ಸ್ವತಂತ್ರವಾಗಿ ಚಲಿಸಬಲ್ಲ ಕ್ಷಿಪಣಿಗಳನ್ನು ಬಳಸಲು ಪ್ರಾರಂಭಿಸಿದೆ ಎಂಬುದನ್ನು ದೃಢಪಡಿಸುತ್ತದೆ.
ಇರಾನ್‌ನ ಕ್ಷಿಪಣಿ ಉಡಾವಣಾ ತಾಣಗಳನ್ನು ನಾಶಪಡಿಸುವ ಇಸ್ರೇಲ್ ಮತ್ತು ಅಮೆರಿಕದ ಪ್ರಯತ್ನಗಳು ಇಲ್ಲಿಯವರೆಗೆ ಹೆಚ್ಚು ಯಶಸ್ಸು ಕಂಡಿಲ್ಲ. ಏಕೆಂದರೆ, ಇರಾನ್‌ನ ಉಡಾವಣಾ ತಾಣಗಳಲ್ಲಿ ಹೆಚ್ಚಿನವು ಭೂಗತವಾಗಿವೆ. ಉಡಾವಣೆಯಾದ ನಂತರವಷ್ಟೇ ಅವು ಗೋಚರಿಸುತ್ತವೆ. ಈ ಸಿಂಗಲ್-ಶಾಟ್ ಕ್ಷಿಪಣಿ ಉಡಾವಣಾ ತಾಣಗಳನ್ನು ಟೆಲಿವಿಷನ್‌ನಲ್ಲಿ ಕ್ಷಿಪಣಿಯ ನಿಷ್ಕಾಸದ ಬಿಳಿ ಹೊಗೆ ಮತ್ತು ಅದಕ್ಕೂ ಮೊದಲು ಬರುವ ಕಂದು ಬಣ್ಣದ ಧೂಳಿನ ಬೃಹತ್ ಸ್ಫೋಟದಿಂದಷ್ಟೇ ಗುರುತಿಸಬಹುದು.
ಇರಾನ್‌ನ ಭೂಗತ ಉಡಾವಣೆ ತಾಣಗಳು ದೇಶದ ವಿಶಾಲ ಭೂಪ್ರದೇಶದಲ್ಲಿ ಹರಡಿಕೊಂಡಿವೆ. ಆದ್ದರಿಂದ ಉಡಾವಣೆಯ ಸಮಯದಲ್ಲಿ ಅವು ಸ್ವಯಂ-ನಾಶವಾಗುವವರೆಗೆ ಅವು ವಾಸ್ತವಿಕವಾಗಿ ಅಗೋಚರವಾಗಿರುತ್ತವೆ. ಇರಾನ್ ಪ್ರತಿದಿನ ಇಂತಹ ಹೆಚ್ಚಿನ ಉಡಾವಣಾ ತಾಣಗಳನ್ನು ನಿರ್ಮಿಸುತ್ತಿದೆ. ಇರಾನ್‌ನಾದ್ಯಂತ ಎಷ್ಟು ಹರಡಿವೆ ಎಂದು ಯಾರಿಗೂ ತಿಳಿದಿಲ್ಲ. ಏಕೆಂದರೆ, ಅವು ತಮ್ಮ ಉದ್ದೇಶವನ್ನು ಪೂರೈಸಿದ ನಂತರವೇ ಹೊರ ಜಗತ್ತಿಗೆ ಗೊತ್ತಾಗುತ್ತದೆ. ಆದರೆ ಅವು ಸಾವಿರಾರು ಸಂಖ್ಯೆಯಲ್ಲಿವೆ ಎಂದು ನಂಬಲಾಗಿದೆ.
ಹೀಗಾಗಿ, ಅಮೆರಿಕದ ದಾಳಿಗಳು ಇರಾನ್‌ನಲ್ಲಿ ದಂಗೆ, ಆಡಳಿತ ಬದಲಾವಣೆ ಹಾಗೂ ಗೊಂದಲವನ್ನು ಉಂಟುಮಾಡುವ ಬದಲು, ಇರಾನಿನ ಆಡಳಿತದ ದೃಢತೆ ಮತ್ತು ತಮ್ಮ ಸರ್ಕಾರಕ್ಕೆ ಇರಾನಿಯನ್ನರ ಬೆಂಬಲವನ್ನು ಹೆಚ್ಚಿಸಿವೆ. ಇರಾನ್ ತಿಂಗಳುಗಳಲ್ಲದಿದ್ದರೂ, ವರ್ಷಗಳ ಹಿಂದೆಯೇ ನಿರ್ಧರಿಸಿದ್ದ ಕಾರ್ಯತಂತ್ರವನ್ನು ಅನುಸರಿಸುತ್ತಿದೆ ಎಂಬುದು ಸ್ಪಷ್ಟವಾಗಿದೆ. ಜೊತೆಗೆ, ಹೌತಿಗಳ ಸಹಾಯದೊಂದಿಗೆ ಇರಾನ್, ಪ್ರತಿದಿನ 20 ಶತಕೋಟಿ ಬ್ಯಾರೆಲ್ ತೈಲ ಹರಿಯುವ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದೆ. ಇದು, ಜಗತ್ತನ್ನೇ ಕ್ರಮೇಣವಾಗಿ ಉಸಿರುಗಟ್ಟಿಸುತ್ತಿದೆ.

ಇಸ್ರೇಲಿ ನಗರಗಳ ಮೇಲೆ ಇರಾನ್ ತನ್ನ ಪ್ರಸ್ತುತ ದಾಳಿಯ ವೇಗವನ್ನು ಕಾಯ್ದುಕೊಳ್ಳಲು ಸಾಧ್ಯವಾದರೆ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಗಂಭೀರ ಸಂದಿಗ್ಧತೆಯನ್ನು ಎದುರಿಸುತ್ತಾರೆ. ಈವರೆಗೆ ಇಸ್ರೇಲಿ ನಾಗರಿಕರು ಐರನ್ ಡೋಮ್ ಮೇಲೆ ನಂಬಿಕೆ ಇಟ್ಟಿದ್ದರು, ತಮ್ಮ ಸುರಕ್ಷತೆ ಖಚಿತವೆಂದು ಭಾವಿಸಿದ್ದರು. ಆದರೆ, ಈಗ ಆ ನಂಬಿಕೆ ಬಿರುಕು ಬಿಟ್ಟಿದೆ. ನೆತನ್ಯಾಹು ಮೇಲೆ ನಂಬಿಕೆಯನ್ನು ಕಳೆದುಕೊಳ್ಳಲು ಅಲ್ಲಿನ ನಾಗರಿಕರು ಪ್ರಾರಂಭಿಸಿದ್ದಾರೆ.
ಕಳೆದ ವರ್ಷ ಜೂನ್‌ನಲ್ಲಿ, ಇಸ್ರೇಲಿಗಳು ಒಂದು ತಲೆಮಾರಿನ ನಂತರ ಮೊದಲ ಬಾರಿಗೆ ಯುದ್ಧದ ಹಾನಿಯನ್ನು ಅನುಭವಿಸಿದ್ದರು. ಟೆಲ್ ಅವಿವ್‌ನಲ್ಲಿರುವ ಮೊಸಾದ್ ಪ್ರಧಾನ ಕಚೇರಿಯ ಭಾಗಶಃ ನಾಶ ಮತ್ತು ಹೈಫಾ ವಿಮಾನ ನಿಲ್ದಾಣಕ್ಕೆ ಉಂಟಾದ ಹಾನಿಯು ಇಸ್ರೇಲಿಗರಿಗೆ ತೀವ್ರ ಹಾನಿಯ ಪರಿಚಯ ಮಾಡಿಕೊಟ್ಟಿತು. ಆಗಲೂ, ನೆತನ್ಯಾಹು ಸರ್ಕಾರವು ಮೃತಪಟ್ಟವರ ಅಥವಾ ಗಾಯಗೊಂಡವರ ಅಂಕಿಅಂಶಗಳನ್ನು ತಡವಾಗಿ ಬಿಡುಗಡೆ ಮಾಡಿತ್ತು.
ಆದಾಗ್ಯೂ, ಜೂನ್ ತಿಂಗಳ ದಾಳಿಗಳು ಹೆಚ್ಚಿನ ಸಂಖ್ಯೆಯ ಇಸ್ರೇಲಿಗಳಿಗೆ ಯುದ್ಧದ ಭೀಕರತೆಯನ್ನು ಪರಿಚಯಿಸಿತ್ತು. ಹಲವಾರು ಜನರು ನೆಲಮಾಳಿಗೆಗಳು ಮತ್ತು ಬಂಕರ್‌ಗಳಲ್ಲಿ ಆಶ್ರಯ ಪಡೆಯುವಂತೆ ಮಾಡಿತು. ಸರ್ಕಾರವು ಯಾವುದೇ ಸಾವು-ನೋವುಗಳ ಲೆಕ್ಕವನ್ನು ಬಿಡುಗಡೆ ಮಾಡದಿದ್ದರೂ, ಜನರು ಕೊಲ್ಲಲ್ಪಟ್ಟರು ಅಥವಾ ಗಂಭೀರವಾಗಿ ಗಾಯಗೊಂಡರು ಎಂಬುದು ಎಲ್ಲರಿಗೂ ಸ್ಪಷ್ಟವಾಗಿದೆ.
ಆದ್ದರಿಂದ, ಮೊದಲ ಬಾರಿಗೆ, ಇಸ್ರೇಲಿಗಳು ಗಾಜಾ, ವೆಸ್ಟ್ ಬ್ಯಾಂಕ್ ಹಾಗೂ ಪೂರ್ವ ಜೆರುಸಲೆಂನಲ್ಲಿನ ಸಂತ್ರಸ್ತರು ಕಳೆದ ಕೆಲವು ದಶಕಗಳಿಂದ ಜೀವಿಸುತ್ತಿರುವ ಭಯವನ್ನು ಅನುಭವಿಸಿದರು. ಅಂದರೆ, ಅವರು ರಾತ್ರಿ ಮಲಗಲು ಹೋದಾಗ ಮರುದಿನ ಬೆಳಿಗ್ಗೆ ಎಚ್ಚರಗೊಳ್ಳುತ್ತಾರೆಯೇ ಅಥವಾ ಇಲ್ಲವೇ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ; ಅಥವಾ ಅವರ ಮಕ್ಕಳು ಬೆಳಿಗ್ಗೆ ಶಾಲೆಗೆ ಹೋದಾಗ ಮಧ್ಯಾಹ್ನ ಮನೆಗೆ ಮರಳುತ್ತಾರೆಯೇ ಇಲ್ಲವೇ ಎಂಬುದರ ಖಾತರಿಯಿಲ್ಲ. ಇದು 2003ರಿಂದ ಇಂದಿನವರೆಗೆ ಅಮೆರಿಕ ಪ್ರಚೋದಿತ ಇಸ್ರೇಲ್ ಎಸಗಿರುವ ದಾಳಿಯಿಂದಾಗಿ ಇರಾಕ್, ಲಿಬಿಯಾ, ಸಿರಿಯ ಹಾಗೂ ಯೆಮೆನ್‌ನಲ್ಲಿರುವ ಲಕ್ಷಾಂತರ ಅರಬ್ ಕುಟುಂಬಗಳು ಬದುಕಲು ಎದುರಿಸುತ್ತಿರುವ ಭಯವನ್ನು ಇಸ್ರೇಲಿಗರಿಗೆ ತೋರಿಸಿಕೊಟ್ಟಿದೆ.
ಆದ್ದರಿಂದ, ಜೂನ್‌ನಲ್ಲಿ ಇರಾನ್‌ನ ರಾತ್ರಿಯ ಬಾಂಬ್ ದಾಳಿಯ ಕೆಲವು ದಿನಗಳು ನೆತನ್ಯಾಹು ಅವರ ಅಜೇಯತೆಯ ಭ್ರಮೆಯನ್ನು ನಾಶಪಡಿಸಿದ್ದಕ್ಕಿಂತ ಮಿಗಿಲಾಗಿ, ದೇಶದ ಜನರಲ್ಲಿ ಅಭದ್ರತೆಯನ್ನೂ ಸೃಷ್ಟಿಸಿತು. ತಮ್ಮ ನ್ನು ಆಳುತ್ತಿರುವ ಬಲಪಂಥೀಯ ಮೈತ್ರಿಕೂಟವು ದೇಶವನ್ನು ಸುರಕ್ಷಿತವಾಗಿರಿಸುತ್ತದೆ ಎಂಬ ಇಸ್ರೇಲಿಗರ ಸಾರ್ವಜನಿಕರ ವಿಶ್ವಾಸವನ್ನು ನಾಶಪಡಿಸಿತು.
ಇದರ ಪ್ರತಿಫಲನವನ್ನು ಎರಡು ಸಮೀಕ್ಷೆಗಳು ವಿವರಿಸುತ್ತವೆ. 2024ರ ಮೇನಲ್ಲಿ ‘ಪ್ಯೂ’ ನಡೆಸಿದ ‘ಪ್ರಿಫರ್ಡ್ ಪಾರ್ಟಿ’ ಸಮೀಕ್ಷೆಯು, ಇಸ್ರೇಲಿನ 58% ಮತದಾರರು ನೆತನ್ಯಾಹು ಅವರ ಬಲಪಂಥೀಯ ಮೈತ್ರಿಕೂಟದ ವಿರುದ್ಧ ತಿರುಗಿದ್ದಾರೆ ಮತ್ತು ಕೇವಲ 38% ಜನರು ಅದನ್ನು ಬೆಂಬಲಿಸಿದ್ದಾರೆ ಎಂದು ತೋರಿಸಿತ್ತು. ಆದರೆ, 2025ರ ಜೂನ್ ತಿಂಗಳ ಸಂಘರ್ಷದ ಬಳಿಕ, ಹೀಬ್ರೂ ಪತ್ರಿಕೆ ‘Maariv’ ನಡೆಸಿದ ಮತ್ತೊಂದು ಸಮೀಕ್ಷೆಯು, ಕೇವಲ 27% ಇಸ್ರೇಲಿಗರು ಮಾತ್ರ ನೆತನ್ಯಾಹು ಅವರ ಮೇಲೆ ವಿಶ್ವಾಸ ಉಳಿಸಿಕೊಂಡಿದ್ದಾರೆ ಎಂಬುದನ್ನು ಎತ್ತಿ ತೋರಿಸಿತು.
ಇದಕ್ಕೆ ನೆತನ್ಯಾಹು ಅವರ ಪ್ರತಿಕ್ರಿಯೆಯು ಗಾಜಾ ಮತ್ತು ವೆಸ್ಟ್ ಬ್ಯಾಂಕ್‌ನಲ್ಲಿರುವ ಬಡಪಾಯಿ ಪ್ಯಾಲೆಸ್ತೀನಿಯರ ಮೇಲೆ ತಮ್ಮ ದೌರ್ಜನ್ಯವನ್ನು ಹೆಚ್ಚಿಸುವುದರಲ್ಲಿ ವ್ಯಕ್ತವಾಯಿತು. 2025ರಅಕ್ಟೋಬರ್ 10 ಮತ್ತು 2026ರ ಫೆಬ್ರವರಿ 10ರ ನಡುವಿನ 120 ದಿನಗಳಲ್ಲಿ, ಇಸ್ರೇಲಿ ಪಡೆಗಳು ಕದನ ವಿರಾಮವನ್ನು 1,620 ಬಾರಿ ಉಲ್ಲಂಘಿಸಿದವು. ಅಂದರೆ, ಪ್ರತಿದಿನ ಸುಮಾರು 15 ಬಾರಿ ದಾಳಿ ನಡೆಸಿವೆ. ಈ ಅವಧಿಯಲ್ಲಿ, ಇಸ್ರೇಲಿ ಪಡೆಗಳು 520 ಬಾರಿ ಪ್ಯಾಲೆಸ್ತೀನಿಯನ್ ನಾಗರಿಕರ ಮೇಲೆ ಗುಂಡು ಹಾರಿಸಿದವು, ಹಳದಿ ರೇಖೆಯ ಆಚೆಗಿನ ವಸತಿ ಪ್ರದೇಶಗಳ ಮೇಲೆ 79 ಬಾರಿ ದಾಳಿ ನಡೆಸಿದವು, ಗಾಜಾದ ಮೇಲೆ 749 ಬಾರಿ ಬಾಂಬ್ ಮತ್ತು ಶೆಲ್ ದಾಳಿ ನಡೆಸಿದವು, 232 ಸಂದರ್ಭಗಳಲ್ಲಿ ಜನರ ಆಸ್ತಿಯನ್ನು ಧ್ವಂಸಗೊಳಿಸಿದವು ಹಾಗೂ 50 ಪ್ಯಾಲೆಸ್ತೀನಿಯರನ್ನು ಗಾಜಾದಿಂದ ವಶಕ್ಕೆ ತೆಗೆದುಕೊಂಡವು.
ಈಗಲೂ, ಗಾಜಾಗೆ ಹರಿದುಬರುವ ಪ್ರಮುಖ ಮಾನವೀಯ ನೆರವನ್ನು ತಡೆಯುವುದನ್ನು ಇಸ್ರೇಲ್ ಮುಂದುವರೆಸಿದೆ. ಇಡೀ ಗಾಜಾ ಪಟ್ಟಿಯಾದ್ಯಂತ ಮನೆಗಳು ಮತ್ತು ಮೂಲಸೌಕರ್ಯಗಳನ್ನು ನಾಶಪಡಿಸುತ್ತಿದೆ.

ಇದೇ ಸಮಯದಲ್ಲಿ, ಅಮೆರಿಕ-ಇಸ್ರೇಲ್ ಜಂಟಿಯಾಗಿ ಕಳೆದ ವಾರ, ಇರಾನ್ ಮೇಲೆ ದಾಳಿ ಆರಂಭಿಸಿದವು. ಆದರೆ, ಇರಾನ್‌ನ ಪ್ರತಿದಾಳಿಯು ಇಸ್ರೇಲಿಗರು ಎಚ್ಚೆತ್ತುಕೊಳ್ಳುವಂತೆ ಮಾಡಿದೆ. ಅಮೆರಿಕದ ಎಲ್ಲ ತಾಂತ್ರಿಕ ಬಲದ ಬೆಂಬಲವಿದ್ದರೂ ಸಾಂಪ್ರದಾಯಿಕ ಯುದ್ಧದ ಮೂಲಕ ಯುದ್ಧವನ್ಉ ಗೆಲ್ಲಲು ಸಾಧ್ಯವಿಲ್ಲ ಎಂದು ಇಸ್ರೇಲಿಗಳು ಅರಿತುಕೊಳ್ಳುತ್ತಿದ್ದಾರೆ. ನೆತನ್ಯಾಹು ಮೇಲಿನ ವಿಶ್ವಾಸವು ಮತ್ತಷ್ಟು ಕುಗ್ಗಿದೆ.
ಹೀಗಿರುವಾಗ, ನೆತನ್ಯಾಹು ಅವರ ಬತ್ತಳಿಕೆಯಲ್ಲಿ ಉಳಿದಿರುವ ಕೊನೆಯ ಬಾಣ ಯಾವುದು? ಉತ್ತರ ಇಸ್ರೇಲ್‌ನ ಪರಮಾಣು ಬಾಂಬ್. ಇಸ್ರೇಲ್ ಎಷ್ಟು ಪರಮಾಣು ಬಾಂಬ್ ಹೊಂದಿದೆ ಎಂಬುದರ ಬಗ್ಗೆ ಯಾರಿಗೂ ನಿಖರವಾದ ಮಾಹಿತಿ ಇಲ್ಲ. ಆದರೆ, 2009ರಲ್ಲಿ ಅಲ್ ಜಜೀರಾ ಪ್ರಕಟಿಸಿದ ಅಂದಾಜಿನ ಪ್ರಕಾರ, ಆಗಲೇ ಇಸ್ರೇಲ್ 118 ಪರಮಾಣು ಬಾಂಬ್‌ಗಳನ್ನು ಹೊಂದಿತ್ತು. ಈಗ ಇನ್ನೂ ಹೆಚ್ಚಿರಬಹುದು!
ಒಂದು ವೇಳೆ, ಪ್ರಸ್ತುತ ಪೀಳಿಗೆಯು ‘ಸಣ್ಣ’ ಪರಮಾಣು ಬಾಂಬ್‌ಗಳ ವಿನಾಶಕಾರಿ ಶಕ್ತಿಯನ್ನು ಮರೆತಿದ್ದರೆ, ಅಂತಹವರು 1945ರ ಆಗಸ್ಟ್ 6ರಂದು ಹಿರೋಷಿಮಾದ ಮೇಲೆ ಸ್ಫೋಟಿಸಲಾದ ಯುರೇನಿಯಂ ಬಾಂಬ್ ದಾಳಿ ಬಗ್ಗೆ ಮತ್ತೊಮ್ಮೆ ನೆನಪಿಸಿಕೊಳ್ಳಬೇಕು. ಆ ಬಾಂಬ್‌ಗಳು 15,000 ಟನ್ ಡೈನಮೈಟ್‌ಗೆ ಸಮನಾದ ಸ್ಫೋಟಕ ಶಕ್ತಿಯನ್ನು ಹೊಂದಿದ್ದವು. ಆ ಬಾಂಬ್‌ಗಳು ಹಿರೋಷಿಮಾದ ಸುಮಾರು 70% ಕಟ್ಟಡಗಳನ್ನು ನೆಲಸಮ ಮಾಡಿತು ಮತ್ತು ಸುಟ್ಟುಹಾಕಿತು. 1945ರ ಅಂತ್ಯದ ವೇಳೆಗೆ ಅಂದಾಜು 1,40,000 ಸಾವುಗಳಿಗೆ ಕಾರಣವಾಯಿತು. ಅದೇ ವರ್ಷದ ಆಗಸ್ಟ್ 9ರಂದು ನಾಗಾಸಾಕಿಯ ಮೇಲೆ ಸ್ಫೋಟಿಸಲಾದ ಪ್ಲುಟೋನಿಯಂ ಬಾಂಬ್, ನಗರದ 6.7 ಚದರ ಕಿ. ಮೀ. ಪ್ರದೇಶವನ್ನು ನೆಲಸಮ ಮಾಡಿತು. ಅಲ್ಲಿ, 1945ರ ಅಂತ್ಯದ ವೇಳೆಗೆ 74,000 ಜನರನ್ನು ಕೊಂದಿತು. ಎರಡೂ ಸ್ಫೋಟಗಳಲ್ಲಿ ನೆಲದ ಉಷ್ಣತೆಯು 4,000 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿತು, ಎರಡೂ ನಗರಗಳ ಮೇಲೆ ವಿಕಿರಣಶೀಲ ಮಳೆ ಸುರಿಯಿತು.
ಈ ಲೇಖನ ಓದಿದ್ದೀರಾ?: ಇರಾನ್ ಯುದ್ಧ | ಜಗತ್ತು ತೈಲ ಬಿಕ್ಕಟ್ಟು ಎದುರಿಸುತ್ತಿದ್ದರೆ, ಚೀನಾ ನೆಮ್ಮದಿಯಾಗಿದೆ; ಕಾರಣವೇನು?
ಈ ಎರಡೂ ಸ್ಫೋಟಗಳು ಯಾವುದೇ ಸಾಮಾನ್ಯ ಸಮಯದಲ್ಲಿ, ಯಾವುದೇ ಸಾಮಾನ್ಯ ಸ್ಥಳದಲ್ಲಿ, ಅಂತಹ ಆಯುಧದ ಬಳಕೆಯು ಅಸಾಧ್ಯವೆಂಬುದನ್ನು ತೋರುತ್ತವೆ. ಆದರೆ, ನೆತನ್ಯಾಹು ಆಡಳಿತದಲ್ಲಿರುವ ಇಸ್ರೇಲ್ ಧೋರಣೆಯು ಈ ಅಂಕೆಯನ್ನು ಮೀರುವಂತಿದೆ. ಏಕೆಂದರೆ, ನೆತನ್ಯಾಹು ಅಪರಾಧಿಯಾಗಿರುವ ವ್ಯಕ್ತಿ. ಅವರು ಇಸ್ರೇಲ್‌ನ ಪ್ರಧಾನ ಮಂತ್ರಿ ಅಥವಾ ಸರ್ಕಾರದಲ್ಲಿ ಬೇರೆ ಯಾವುದೇ ಹುದ್ದೆಯನ್ನು ಹೊಂದಿಲ್ಲದೇ ಇದ್ದರೆ, ಅವರು ಮೂರು ಬಾರಿ ಲಂಚದ ಪ್ರಕರಣಗಳಲ್ಲಿ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಹೀಗಾಗಿಯೇ, ಅವರು ಜೈಲಿನಿಂದ ಹೊರಗಿರಬೇಕೆಂದರೆ, ‘ಗ್ರೇಟರ್ ಇಸ್ರೇಲ್’ನಿಂದ ಪ್ರತಿಯೊಬ್ಬ ಕೊನೆಯ ಪ್ಯಾಲೆಸ್ತೀನಿಯರನ್ನು ಹೊರಹಾಕುವ ಗುರಿಯನ್ನು ಮುಂದುವರಿಸುವುದೇ ಏಕೈಕ ಖಚಿತ ದಾರಿ ಎಂಬುದನ್ನು ಕಂಡುಕೊಂಡಿದ್ದಾರೆ. ಆದ್ದರಿಂದ ಅವರ ಸರ್ಕಾರವು 2023ರ ಅಕ್ಟೋಬರ್ 7ರಿಂದ 2026ರ ಫೆಬ್ರವರಿ 21ರ ನಡುವೆ ಕನಿಷ್ಠ 75,227 ಪ್ಯಾಲೆಸ್ತೀನಿಯರನ್ನು ಕೊಂದಿದೆ. 1,54,525 ಕ್ಕಿಂತ ಹೆಚ್ಚು ಜನರನ್ನು ಗಾಯಗೊಳಿಸಿದೆ. ಆದರೂ, ಅದಕ್ಕೆ ಯಾವುದೇ ಹಿಂಜರಿಕೆ-ಸಂಕೋಚವಿಲ್ಲ.
ಅಮೆರಿಕ ಮತ್ತು ಅಂತಾರಾಷ್ಟ್ರೀಯ ಸಮುದಾಯವು ಇಸ್ರೇಲ್ ಮೇಲೆ ಹೇರಿದ ಹಮಾಸ್ ಜೊತೆಗಿನ ಕದನ ವಿರಾಮವು ನೆತನ್ಯಾಹುಗೆ ತಲೆನೋವು ತಂದಿತು. ತಾವು ಅಧಿಕಾರದಲ್ಲಿ ಉಳಿಯಲು ಹೊಸ ಶತ್ರು ಮತ್ತು ಇಸ್ರೇಲ್‌ಗೆ ಹೊಸ ಮಾರಣಾಂತಿಕ ಬೆದರಿಕೆಯನ್ನು ಕಂಡುಕೊಳ್ಳುವುದು ಅಗತ್ಯವೆಂದು ನೆತನ್ಯಾಹು ಭಾವಿಸಿದ್ದಾರೆ. ಇದಕ್ಕಾಗಿ ಅವರು ಇರಾನ್‌ನಿಂದ ಇಸ್ರೇಲ್ ಮತ್ತು ಅಮೆರಿಕಗೆ ಉಂಟಾಗಿರುವ ಬೆದರಿಕೆಯನ್ನು ಅಸ್ತ್ರವಾಗಿಸಿಕೊಂಡಿದ್ದಾರೆ. ತಮ್ಮ ಉದ್ದೇಶವನ್ನು ಈಡೇರಿಸಲು ಬೇಕಾದ ಮೂರ್ಖತನ ಅಹಂಕಾರವನ್ನು ಹೊಂದಿರುವ ಟ್ರಂಪ್ ಅವರನ್ನು ನೆತನ್ಯಾಹು ಕಂಡುಕೊಂಡಿದ್ದಾರೆ.
ಯಾವುದೇ ರಾಷ್ಟ್ರದ ಮುಖ್ಯಸ್ಥರ ಅಧಿಕೃತ ಅಮೆರಿಕ ಭೇಟಿಯನ್ನು ವ್ಯವಸ್ಥೆ ಮಾಡಲು ಸಾಮಾನ್ಯವಾಗಿ ಒಂದು ವರ್ಷದಿಂದ ಎರಡು ವರ್ಷಗಳ ಸಮಯ ತೆಗೆದುಕೊಳ್ಳುತ್ತದೆ. ಆದರೆ, 2025ರಲ್ಲಿ, ಯುರೇನಿಯಂ ಮೂಲಸೌಕರ್ಯದ ಕುರಿತು ಇರಾನ್ ಜೊತೆ ಟ್ರಂಪ್ ಒಪ್ಪಂದದ ಮಾತುಕತೆ ನಡೆಸಿದಾಗಲೆಲ್ಲಾ, ಮರುದಿನವೇ ನೆತನ್ಯಾಹು ಅವರು ಟ್ರಂಪ್ ಮನೆ ಬಾಗಿಲಲ್ಲಿ ಕಾಣಿಸಿಕೊಳ್ಳುತ್ತಿದ್ದರು. 2025-26ರಲ್ಲಿ ಟ್ರಂಪ್‌ಅವರನ್ನು ನೆತನ್ಯಾಹು ಆರು ಬಾರಿ ಭೇಟಿಯಾಗಿದ್ದಾರೆ. ಈ ಪ್ರತಿ ಭೇಟಿಯ ನಂತರ, ಟ್ರಂಪ್ ಇರಾನ್‌ನೊಂದಿಗಿನ ಶಾಂತಿ ಮಾತುಕತೆಯಿಂದ ಹಿಂದೆ ಸರಿದಿದ್ದಾರೆ, ಜೊತೆಗೆ, ಹೆಚ್ಚಿನ ಬೇಡಿಕೆಗಳನ್ನು ಇಟ್ಟಿದ್ದಾರೆ ಎಂಬುದನ್ನು ಗಮನಿಸಬಹುದು.
ಇಂದು, ಇರಾನ್ ಜೊತೆಗಿನ ಯುದ್ಧವು ಇಸ್ರೇಲ್‌ಗೆ ಅಪಾಯಕಾರಿಯಾಗಿರುವಾಗ, ನೆತನ್ಯಾಹು ಅವರಿಗೆ ಒಂದೇ ಒಂದು ಆಯ್ಕೆ ಉಳಿದಿದೆ. ಅದು ಇರಾನ್ ವಿರುದ್ಧ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವುದು. ಆದರೆ, ಇಸ್ರೇಲ್, ಅಮೆರಿಕ ಅಥವಾ ಇನ್ನಾವುದೇ ರಾಷ್ಟ್ರ ಪರಮಾಣು ದಾಳಿ ಅಥವಾ ಯುದ್ಧಕ್ಕೆ ಇಳಿಯುವುದನ್ನು ತಡೆಯುವ ಶಕ್ತಿ ರಷ್ಯಾ ಮತ್ತು ಚೀನಾ ರಾಷ್ಟ್ರಗಳಿಗಿದೆ.
ರಷ್ಯಾ ಅತಿ ಹೆಚ್ಚು ಪರಮಾಣ ಶಸ್ತ್ರಾಸ್ತ್ರಗಳನ್ನು ಹೊಂದಿದೆ. ಚೀನಾ ಕೂಡ ಗಮನಾರ್ಹವಾಗಿ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿದೆ. ಈ ಎರಡೂ ರಾಷ್ಟ್ರಗಳು ಪರಮಾಣ ದಾಳಿಗೆ ಇಳಿದರೆ, ಇಡೀ ನ್ಯಾಟೋ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳು ಸರ್ವನಾಶವಾಗಲಿವೆ. ಅಂತೆಯೇ, ಪರಮಾಣು ಯುದ್ಧವನ್ನು ವಿರೋಧಿಸುವ ದೃಢ ನಿಲುವುಳ್ಳ ರಾಷ್ಟ್ರವಾಗಿ ಕಾಣಿಸಿಕೊಂಡಿದೆ.
ಇರಾನ್ ಮೇಲೆ ಒಂದೇ ಒಂದು ಪರಮಾಣು ಬಾಂಬ್‌ಅನ್ನು ಬಳಸಿದರೆ, ನಾವು ಕಣಕ್ಕಿಳಿಯುತ್ತೇವೆ. ಪರಿಸ್ಥಿತಿಗಳು ಬದಲಾಗುತ್ತವೆ ಎಂಬುದನ್ನು ಇಸ್ರೇಲ್ ಮತ್ತು ಜಗತ್ತಿಗೆ ರಷ್ಯಾ-ಚೀನಾ ಎಚ್ಚರಿಕೆ ನೀಡಬಹುದು. ಈ ಎಚ್ಚರಿಕೆಯು ಇಸ್ರೇಲ್‌ನ ಮೊಂಡುತನಕ್ಕೆ ಕಡಿವಾಣ ಹಾಕಬಹುದು!
ಮೂಲ: ದಿ ವೈರ್
ಬರಹ: ಪ್ರೇಮ್ ಶಂಕರ್ ಝಾ
ಕನ್ನಡಕ್ಕೆ: ಸೋಮಶೇಖರ್ ಚಲ್ಯ




