ಕುಸ್ತಿಪಟುಗಳು ಬೀದಿಯಲ್ಲಿ ಅಳುತ್ತಿದ್ದಾಗಲೂ, ಬ್ರಿಜ್‌ಭೂಷಣ್ ಅವರಿಗೆ ರಾಜಕೀಯ ರಕ್ಷಣೆ ದೊರೆಯುತ್ತಲೇ ಇತ್ತು. ಆರೋಪ ಎದುರಿಸುತ್ತಿರುವವರಿಗೆ ಟಿಕೆಟ್ ನೀಡುವಲ್ಲಿ, ಅಧಿಕಾರ ನೀಡುವಲ್ಲಿ ಅಥವಾ ರಕ್ಷಣೆ ನೀಡುವಲ್ಲಿ ಬಿಜೆಪಿ ಪಕ್ಷ ತೋರುವ ಆಸಕ್ತಿ, ಸಂತ್ರಸ್ತರಿಗೆ ನ್ಯಾಯ ಒದಗಿಸುವಲ್ಲಿ ಕಾಣಿಸಲಿಲ್ಲ
ಒಂದು ಕಾಲದಲ್ಲಿ ತ್ರಿವರ್ಣ ಧ್ವಜ ಹೊದ್ದು ಜಗತ್ತಿನ ಅಖಾಡದಲ್ಲಿ ನಿಂತಾಗ, ಇಡೀ ಭಾರತವೇ ಎದ್ದು ಚಪ್ಪಾಳೆ ತಟ್ಟಿತ್ತು. ಆದರೆ, ವಿಪರ್ಯಾಸವೆಂದರೆ ಅದೇ ‘ಚಿನ್ನದ ಹುಡುಗಿಯರು’ ತಮ್ಮ ಮಾನ, ಪ್ರಾಣ ಮತ್ತು ಗೌರವಕ್ಕಾಗಿ ರಾಷ್ಟ್ರ ರಾಜಧಾನಿಯ ರಸ್ತೆಯಲ್ಲಿ ಕುಳಿತು ಕಣ್ಣೀರು ಹಾಕಬೇಕಾಯಿತು. ಭಾರತೀಯ ಕುಸ್ತಿ ಒಕ್ಕೂಟದ ಮಾಜಿ ಅಧ್ಯಕ್ಷ ಮತ್ತು ಬಿಜೆಪಿಯ ಪ್ರಭಾವಿ ನಾಯಕ ಬ್ರಿಜ್‌ಭೂಷಣ್ ಶರಣ್ ಸಿಂಗ್ ವಿರುದ್ಧದ ಲೈಂಗಿಕ ದೌರ್ಜನ್ಯದ ಆರೋಪಗಳು, ಕೇವಲ ಕ್ರೀಡಾ ಲೋಕದ ಕಳಂಕವಷ್ಟೇ ಅಲ್ಲ, ಬದಲಿಗೆ ಆಳುವ ವ್ಯವಸ್ಥೆಯು ಹೆಣ್ಣುಮಕ್ಕಳ ನೋವಿಗೆ ಸ್ಪಂದಿಸುವಲ್ಲಿ ತೋರಿದ ಘೋರ ಅಸಡ್ಡೆಗೆ ಹಿಡಿದ ಕನ್ನಡಿಯಾಗಿದೆ
ಸಾಕ್ಷಿ ಮಲಿಕ್, ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ಅವರಂತಹ ಒಲಂಪಿಕ್ ಪದಕ ವಿಜೇತರು ಬ್ರಿಜ್‌ಭೂಷಣ್ ವಿರುದ್ಧ ಗಂಭೀರ ಸ್ವರೂಪದ ಲೈಂಗಿಕ ಕಿರುಕುಳದ ಆರೋಪಗಳನ್ನು ಹೊರಿಸಿದರು. ಅಪ್ರಾಪ್ತ ಬಾಲಕಿ ಸೇರಿದಂತೆ ಹಲವು ಮಹಿಳಾ ಕುಸ್ತಿಪಟುಗಳು ತಮಗಾದ ಅನ್ಯಾಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಆದರೆ, ಆರೋಪ ಹೊತ್ತ ವ್ಯಕ್ತಿ ‘ಬಾಹುಬಲಿ’ ಎಂಬ ಕಾರಣಕ್ಕೋ ಅಥವಾ ಆಳುವ ಪಕ್ಷದ ಸಂಸದ ಎಂಬ ಕಾರಣಕ್ಕೋ, ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಲು ಸುಪ್ರೀಂ ಕೋರ್ಟ್ ಮೆಟ್ಟಿಲೇರುವವರೆಗೂ ಕಾಯಬೇಕಾಯಿತು. “ನನ್ನನ್ನು ಯಾರೂ ಮುಟ್ಟಲಾರರು” ಎಂಬ ಆರೋಪಿಯ ದರ್ಪದ ಮಾತುಗಳಿಗೆ ಸಾಕ್ಷಿಯಾಗಿ ಸರ್ಕಾರ ಮೌನಕ್ಕೆ ಶರಣಾಗಿತ್ತು.
ದಿನಗಟ್ಟಲೇ ದೆಹಲಿಯ ಜಂತರ್ ಮಂತರ್‌ನ ಫುಟ್‌ಪಾತ್ ಮೇಲೆ ಈ ಕ್ರೀಡಾಪಟುಗಳು ಮಳೆ, ಬಿಸಿಲೆನ್ನದೆ ಧರಣಿ ಕುಳಿತರು. “ಬೇಟಿ ಬಚಾವೋ”(ಹೆಣ್ಣು ಮಕ್ಕಳನ್ನು ಉಳಿಸಿ) ಎಂದು ಘೋಷಣೆ ಕೂಗುವ ಸರ್ಕಾರ, ತನ್ನದೇ ಪಕ್ಷದ ಪ್ರಭಾವಿ ನಾಯಕನ ವಿರುದ್ಧ ಧ್ವನಿ ಎತ್ತದ ಹೆಣ್ಣುಮಕ್ಕಳನ್ನು ನಡೆಸಿಕೊಂಡ ರೀತಿ ಪ್ರಜಾಪ್ರಭುತ್ವದ ಅಣಕದಂತಿತ್ತು. ಸರ್ಕಾರದ ಯಾವೊಬ್ಬ ಪ್ರತಿನಿಧಿಯೂ ಸ್ಥಳಕ್ಕೆ ಬಂದು ಸಾಂತ್ವನ ಹೇಳುವ ಸೌಜನ್ಯ ತೋರಲಿಲ್ಲ. ಬದಲಿಗೆ ಐಟಿ ಸೆಲ್ ಮತ್ತು ಬೆಂಬಲಿಗರ ಮೂಲಕ ಸಂತ್ರಸ್ತರನ್ನೇ ತೇಜೋವಧೆ ಮಾಡುವ ಪ್ರಯತ್ನಗಳು ನಡೆದವು.

2023ರ ಮೇ 28ರಂದು ದೇಶದ ಪ್ರಜಾಪ್ರಭುತ್ವದ ದೇಗುಲವೆಂದೇ ಕರೆಯಲ್ಪಡುವ ಹೊಸ ಸಂಸತ್ತಿನ ಉದ್ಘಾಟನೆ ನಡೆಯುತ್ತಿತ್ತು. ಅದೇ ಸಮಯದಲ್ಲಿ, ಅತ್ತ ಕಡೆ ನ್ಯಾಯ ಕೇಳಲು ಶಾಂತಿಯುತವಾಗಿ ಮೆರವಣಿಗೆ ಹೊರಟಿದ್ದ ನಮ್ಮ ದೇಶದ ಹೆಮ್ಮೆಯ ಕುಸ್ತಿಪಟುಗಳನ್ನು ದೆಹಲಿ ಪೊಲೀಸರು ನಡೆಸಿಕೊಂಡ ರೀತಿ ನಾಗರಿಕ ಸಮಾಜ ತಲೆ ತಗ್ಗಿಸುವಂತಿತ್ತು. ಸಾಕ್ಷಿ ಮಲಿಕ್, ವಿನೇಶ್ ಫೋಗಟ್ ಮತ್ತು ಸಂಗೀತಾ ಫೋಗಟ್ ಅವರನ್ನು ರಸ್ತೆಯಲ್ಲಿ ದರದರನೆ ಎಳೆದಾಡಲಾಯಿತು. ಬೂಟುಗಾಲಿನ ಒಡೆತ, ಎಳೆದಾಟಗಳ ನಡುವೆ ತ್ರಿವರ್ಣ ಧ್ವಜ ಮಣ್ಣುಪಾಲಾಯಿತು. ಅತ್ಯಾಚಾರ ಆರೋಪ ಹೊತ್ತ ವ್ಯಕ್ತಿ ಸಂಸತ್ತಿನೊಳಗೆ ಹೊಸ ಕಟ್ಟಡದ ಉದ್ಘಾಟನೆಯಲ್ಲಿ ನಗುತ್ತಾ ಪೋಸು ಕೊಡುತ್ತಿದ್ದರೆ, ಹೊರಗೆ ಸಂತ್ರಸ್ತೆಯರನ್ನು ಕ್ರಿಮಿನಲ್‌ಗಳಂತೆ ವ್ಯಾನಿಗೆ ತುಂಬಲಾಯಿತು. ಈ ದೃಶ್ಯಗಳು ದೇಶದ ಆತ್ಮಸಾಕ್ಷಿಯನ್ನು ಕಲಕಿದ್ದವು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಜಾಪ್ರಭುತ್ವ ಪೊರೆದ ಅಮೆರಿಕ; ಪುಡಿಗಟ್ಟುತ್ತಿರುವ ಭಾರತ
ಪೊಲೀಸರ ದೌರ್ಜನ್ಯದಿಂದ ಮತ್ತು ಸರ್ಕಾರದ ನಿರ್ಲಕ್ಷ್ಯದಿಂದ ನೊಂದು ಬೆಂದ ಕುಸ್ತಿಪಟುಗಳು, ತಾವು ರಕ್ತ ಬೆವರು ಸುರಿಸಿ ದೇಶಕ್ಕಾಗಿ ಗಳಿಸಿದ ಪದಕಗಳನ್ನು ಗಂಗಾ ನದಿಗೆ ಎಸೆಯಲು ಮುಂದಾದರು.”ನಮಗೆ ನ್ಯಾಯ ಸಿಗದ ಮೇಲೆ ಈ ಪದಕಗಳಿಗೇನು ಬೆಲೆ?” ಎಂಬ ಅವರ ಪ್ರಶ್ನೆ ಇಡೀ ವ್ಯವಸ್ಥೆಗೆ ಬಾರಿಸಿದ ಚಾವಟಿ ಏಟಿನಂತಿತ್ತು. ಅಂದು ರೈತ ನಾಯಕ ನರೇಶ್ ಟಿಕಾಯತ್ ತಡೆಯದಿದ್ದರೆ, ಭಾರತದ ಕ್ರೀಡಾ ಇತಿಹಾಸದ ಅಮೂಲ್ಯ ರತ್ನಗಳು ಗಂಗೆಯ ಪಾಲಾಗುತ್ತಿದ್ದವು. ಆ ಕ್ಷಣದಲ್ಲಿ ಸಾಕ್ಷಿ ಮಲಿಕ್ ಮತ್ತು ವಿನೇಶ್ ಫೋಗಟ್ ಅವರ ಆಕ್ರಂದನ ಇಡೀ ದೇಶವನ್ನೇ ಕಣ್ಣೀರು ಹಾಕಿಸಿತ್ತು.
ಈ ಇಡೀ ಪ್ರಕರಣದಲ್ಲಿ ಎದ್ದು ಕಂಡಿದ್ದು ಬಿಜೆಪಿಯ ಇಬ್ಬಗೆಯ ನೀತಿ. ಸ್ತ್ರೀ ಸುರಕ್ಷತೆಯ ಬಗ್ಗೆ ಉದ್ದುದ್ದ ಭಾಷಣ ಮಾಡುವ ನಾಯಕರು, ತಮ್ಮದೇ ಪಕ್ಷದ ನಾಯಕನ ವಿರುದ್ಧ ಗಂಭೀರ ಆರೋಪಗಳು ಬಂದಾಗ ನಡೆದುಕೊಂಡ ರೀತಿ ನಿಜಕ್ಕೂ ಅಸಹ್ಯ ಹುಟ್ಟಿಸುತ್ತದೆ. ಕುಸ್ತಿಪಟುಗಳು ಬೀದಿಯಲ್ಲಿ ಅಳುತ್ತಿದ್ದಾಗಲೂ, ಬ್ರಿಜ್‌ಭೂಷಣ್ ಅವರಿಗೆ ರಾಜಕೀಯ ರಕ್ಷಣೆ ದೊರೆಯುತ್ತಲೇ ಇತ್ತು. ಆರೋಪ ಎದುರಿಸುತ್ತಿರುವವರಿಗೆ ಟಿಕೆಟ್ ನೀಡುವಲ್ಲಿ, ಅಧಿಕಾರ ನೀಡುವಲ್ಲಿ ಅಥವಾ ರಕ್ಷಣೆ ನೀಡುವಲ್ಲಿ ಬಿಜೆಪಿ ಪಕ್ಷ ತೋರುವ ಆಸಕ್ತಿ, ಸಂತ್ರಸ್ತರಿಗೆ ನ್ಯಾಯ ಒದಗಿಸುವಲ್ಲಿ ಕಾಣಿಸಲಿಲ್ಲ. ಉನ್ನಾಂವ್ ಪ್ರಕರಣದಿಂದ ಹಿಡಿದು ಕುಸ್ತಿಪಟುಗಳ ಪ್ರಕರಣದವರೆಗೂ, ‘ರೇಪಿಸ್ಟ್’ ಮನಸ್ಥಿತಿಯ ಆರೋಪಿಗಳಿಗೆ ಅಧಿಕಾರದ ಛತ್ರಿ ಹಿಡಿಯುವ ಚಾಳಿ ಮುಂದುವರಿದಿದೆ.
ಬ್ರಿಜಭೂಷಣ್ ವಿರುದ್ಧದ ಆರೋಪಪಟ್ಟಿಯಲ್ಲಿ ದೆಹಲಿ ಪೊಲೀಸರು ಲೈಂಗಿಕ ಕಿರುಕುಳ ಮತ್ತು ಹಿಂಬಾಲಿಸುವಿಕೆಯ ಬಗ್ಗೆ ಉಲ್ಲೇಖಿಸಿದರೂ, ಅವರು ಇನ್ನೂ ರಾಜಕೀಯವಾಗಿ ಪ್ರಬಲರಾಗಿಯೇ ಉಳಿದಿದ್ದಾರೆ. ಆದರೆ, ಕುಸ್ತಿಪಟು ಸಾಕ್ಷಿ ಮಲಿಕ್ “ನಾನು ಕುಸ್ತಿಯನ್ನೇ ತ್ಯಜಿಸುತ್ತೇನೆ” ಎಂದು ಕಣ್ಣೀರು ಹಾಕಿ ಬೂಟುಗಳನ್ನು ಮೇಜಿನ ಮೇಲಿಟ್ಟ ಕ್ಷಣ, ಭಾರತೀಯ ಕ್ರೀಡಾ ವ್ಯವಸ್ಥೆಯ ಸೋಲನ್ನು ಸಾರಿ ಹೇಳಿತು. ಅಧಿಕಾರದ ಮದದಲ್ಲಿ ನ್ಯಾಯದ ದೇವತೆ ಕಣ್ಣುಮುಚ್ಚಿ ಕುಳಿತಾಗ, ನೊಂದವರ ಕಣ್ಣೀರು ಇತಿಹಾಸದ ಪುಟಗಳಲ್ಲಿ ಕಪ್ಪು ಚುಕ್ಕೆಯಾಗಿ ಉಳಿಯುತ್ತದೆ.






