ರಾಜಕೀಯ ಪ್ರಾತಿನಿಧ್ಯದ ವಿಚಾರದಲ್ಲಿ ಕರ್ನಾಟಕ ವಿಧಾನಸಭೆಯಲ್ಲಿ 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ಶಾಸಕರ ಸಂಖ್ಯೆ ಎಷ್ಟಿದೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಇದು ಯುವಜನರ ಆಶಯ–ಆಕಾಂಕ್ಷೆಗಳನ್ನು ಸಂಪೂರ್ಣವಾಗಿ ಪ್ರತಿಬಿಂಬಿಸುವಲ್ಲಿ ಕೊರತೆ ಉಂಟುಮಾಡುತ್ತಿದೆ. ಹೀಗಿರುವಾಗ ಮುಂದಿನ ದಿನಗಳಲ್ಲಿ ಯುವಜನರಿಗೆ ರಾಜಕೀಯ ಪ್ರಾತಿನಿಧ್ಯ ಎಷ್ಟಿರಲಿದೆ ಎಂಬ ಪ್ರಶ್ನೆ ಕಾಡುತ್ತಿದೆ.
ಈ ಸಮಾಜದಲ್ಲಿ ಒಂದು ಮಗು ಜನಿಸಿದ ನಂತರ ಅದರ ಜವಾಬ್ದಾರಿ ಕೇವಲ ಅದರ ಪೋಷಕರದ್ದು ಮಾತ್ರ ಆಗಿರುವುದಿಲ್ಲ. ಅದು ಈ ಸಮಾಜದ ಜವಾಬ್ದಾರಿ ಕೂಡ ಆಗಿರುತ್ತದೆ. ಮಕ್ಕಳ ಸೂಕ್ಷ್ಮ ಮನಸ್ಥಿತಿಗಳಿಗೆ, ಅವರ ಸ್ವಾತಂತ್ರ್ಯಕ್ಕೆ ಯಾವುದೇ ರೀತಿಯಾದ ಧಕ್ಕೆ ತರದೆ ಇರುವ ರೀತಿಯಲ್ಲಿ ಈ ಸಮಾಜ ಜವಾಬ್ದಾರಿಯಿಂದ ನಡೆದುಕೊಳ್ಳಬೇಕಾಗಿದೆ. ಅದೇ ರೀತಿಯಲ್ಲಿ ಯುವಜನರ ಜೊತೆಗೂ ಕೂಡ ಈ ನಾಗರಿಕರ ಸಮೂಹ ಅಂತಃಕರಣದ ಸೂಕ್ಷ್ಮ ಪ್ರಜ್ಙೆಯ ದೃಷ್ಟಿಯಲ್ಲಿ ನೋಡುವ ಅಗತ್ಯತೆ ಇದೆ.
ಆದರೆ ಮಕ್ಕಳ ವಿಚಾರದಲ್ಲಾಗಲಿ ಅಥವಾ ಯುವ ಜನರ ವಿಚಾರದಲ್ಲಾಗಲಿ, ಈ ಪ್ರಜ್ಞಾವಂತ ಮಾನವ ಸಮುದಾಯದ ಬಹುತೇಕರು ಉಡಾಫೆ ಧೋರಣೆಯಲ್ಲೇ ನಡೆದುಕೊಳ್ಳುವುದು ವಿಪರ್ಯಾಸವೆನಿಸಿದೆ. ಯುವಜನರು ಎಂದರೆ ಕೆಲಸಕ್ಕೆ ಬಾರದವರು, ಸೋಮಾರಿಗಳು, ಜೀವನದ ಮುಂದಿನ ಗುರಿಗಳ ಬಗ್ಗೆ ಅರಿವಿಲ್ಲದವರು ಎಂಬಂತಹ ಪೂರ್ವಗ್ರಹಪೀಡಿತ ನಕಾರಾತ್ಮಕ ಅಭಿಪ್ರಾಯಗಳನ್ನೇ ಹಲವರು ವ್ಯಕ್ತಪಡಿಸುತ್ತಾರೆ.
ಇದನ್ನು ಓದಿದ್ದೀರಾ? ಯುವಜನರ ಮೌನ ಕೇಳಲೂ ಕಿವಿಬೇಕಿದೆ: ‘ಯುವಜನ ಆಯೋಗ’ ರಚನೆಗೆ ಆಗ್ರಹಿಸಿ ಯುವಧ್ವನಿ ಅಭಿಯಾನ
ಇಂತಹ ಸೂಕ್ಷ್ಮಾತಿಸೂಕ್ಷ್ಮ ಪ್ರಜ್ಞೆಯನ್ನು ಕಳೆದುಕೊಂಡಂತಹ ಸಾಮಾಜಿಕ ಅಭಿಪ್ರಾಯಗಳು ಯುವಜನರ ಆತ್ಮಸ್ಥೈರ್ಯವನ್ನು ಹಾಳುಗೆಡುವಂತೆ ಮಾಡುತ್ತಿವೆ. ಇಂತಹ ಆಷಾಢಭೂತಿತನದ ಅಭಿಪ್ರಾಯಗಳನ್ನು ಒಡೆಯಲು, ಯುವಜನರ ಸಮಸ್ಯೆಗಳನ್ನು ಬಗೆಹರಿಸಲು, ಯುವಜನರ ದನಿಗೆ ಶ್ರವಣವಾಗಲು ತುರ್ತಾಗಿ ರಚನೆಯಾಗಬೇಕಾಗಿರುವುದು ಯುವಜನ ಆಯೋಗ.
ಕರ್ನಾಟಕದ ಜನಸಂಖ್ಯೆಯಲ್ಲಿ ಸುಮಾರು 32% ಜನ 15–35 ವಯೋಮಾನದ ಯುವಜನರು (2023ರ ರಾಷ್ಟ್ರೀಯ ಯುವಜನ ನೀತಿ ಮತ್ತು ಕರ್ನಾಟಕ ಸರ್ಕಾರದ ಅಂದಾಜು ಆಧಾರದ ಮೇಲೆ) ಇದ್ದಾರೆ. ಈ ದೊಡ್ಡ ಸಂಖ್ಯೆಯ ಯುವ ಶಕ್ತಿ ರಾಜ್ಯದ ಭವಿಷ್ಯದ ಬುನಾದಿ. ಆದರೆ ಈ ಯುವಜನರು ಎದುರಿಸುತ್ತಿರುವ ಸವಾಲುಗಳು ಕಡಿಮೆಯಿಲ್ಲ: ಉದ್ಯೋಗ ಕೊರತೆ, ಗುಣಮಟ್ಟದ ಶಿಕ್ಷಣದ ಕೊರತೆ, ಮಾನಸಿಕ ಆರೋಗ್ಯ ಸಮಸ್ಯೆಗಳು, ರಾಜಕೀಯ ಪ್ರಾತಿನಿಧ್ಯದ ಕೊರತೆ, ಕೌಶಲಾಭಿವೃದ್ಧಿಯಲ್ಲಿ ವಂಚನೆ ಮತ್ತು ಭವಿಷ್ಯದಲ್ಲಿ ಬರುತ್ತಿರುವ ತಾಂತ್ರಿಕ–ಪರಿಸರ ಸವಾಲುಗಳು.
2023–24ರಲ್ಲಿ ಕರ್ನಾಟಕದಲ್ಲಿ ನೋಂದಾಯಿತ ನಿರುದ್ಯೋಗಿ ಯುವಜನರ ಸಂಖ್ಯೆ ಸುಮಾರು 12.8 ಲಕ್ಷಕ್ಕೆ ಏರಿದೆ (ಆರ್ಥಿಕ ಸಮೀಕ್ಷೆ 2023–24). ಸಿಎಂಐಇ ದತ್ತಾಂಶದ ಪ್ರಕಾರ ರಾಜ್ಯದಲ್ಲಿ 18–25 ವರ್ಷದೊಳಗಿನ ಯುವಜನರಲ್ಲಿ ಉದ್ಯೋಗ ದರ ಕೇವಲ 38.4%. ಉಳಿದವರು ಭಾಗಶಃ ಉದ್ಯೋಗ, ಅನೌಪಚಾರಿಕ ಕ್ಷೇತ್ರ ಅಥವಾ ಸಂಪೂರ್ಣ ನಿರುದ್ಯೋಗದಲ್ಲಿ ಸಿಲುಕಿದ್ದಾರೆ. ಇದರ ಜೊತೆಗೆ ರಾಷ್ಟ್ರೀಯ ಮಾನಸಿಕ ಆರೋಗ್ಯ ಸಮೀಕ್ಷೆ 2022–23ರ ಪ್ರಕಾರ 15–24 ವರ್ಷದ ಯುವಜನರಲ್ಲಿ ಖಿನ್ನತೆ ಮತ್ತು ಆತಂಕದಂತಹ ಆರೋಗ್ಯ ಸಮಸ್ಯೆಗಳು 15–18% ಇವೆ. ಆದರೆ ರಾಜ್ಯದಲ್ಲಿ ಯುವಜನ ಕೇಂದ್ರಿತ ಮಾನಸಿಕ ಆರೋಗ್ಯ ಸೇವೆಗಳು ಅತ್ಯಲ್ಪ.
ರಾಜಕೀಯ ಪ್ರಾತಿನಿಧ್ಯದ ವಿಚಾರದಲ್ಲಿ ಕರ್ನಾಟಕ ವಿಧಾನಸಭೆಯಲ್ಲಿ 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ಶಾಸಕರ ಸಂಖ್ಯೆ ಎಷ್ಟಿದೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಇದು ಯುವಜನರ ಆಶಯ–ಆಕಾಂಕ್ಷೆಗಳನ್ನು ಸಂಪೂರ್ಣವಾಗಿ ಪ್ರತಿಬಿಂಬಿಸುವಲ್ಲಿ ಕೊರತೆ ಉಂಟುಮಾಡುತ್ತಿದೆ. ಹೀಗಿರುವಾಗ ಮುಂದಿನ ದಿನಗಳಲ್ಲಿ ಯುವಜನರಿಗೆ ರಾಜಕೀಯ ಪ್ರಾತಿನಿಧ್ಯ ಎಷ್ಟಿರಲಿದೆ ಎಂಬ ಪ್ರಶ್ನೆ ಕಾಡುತ್ತಿದೆ.
ಈಗಿನ ಯುವಜನ ಮತ್ತು ಕ್ರೀಡಾ ಇಲಾಖೆಯನ್ನು ಗಮನಿಸಿದರೆ, ಅದು ಮುಖ್ಯವಾಗಿ ಕ್ರೀಡಾ ಕಾರ್ಯಕ್ರಮಗಳು, ಕ್ರೀಡಾ ಆಯೋಜನೆಗಳು ಮತ್ತು ಕ್ರೀಡಾ ಮೂಲಸೌಕರ್ಯ ಅಭಿವೃದ್ಧಿಗೆ ಸೀಮಿತವಾಗಿದೆ. ಯುವಜನರ ಉದ್ಯೋಗ, ಕೌಶಲ, ಉದ್ಯಮಶೀಲತೆ, ಮಾನಸಿಕ ಆರೋಗ್ಯ, ನಾಗರಿಕ ತೊಡಗಿಸಿಕೊಳ್ಳುವಿಕೆ ಮತ್ತು ನೀತಿ ವಕಾಲತ್ತುಗಳ ಕಡೆಗೆ ಸಾಕಷ್ಟು ಗಮನ ಹರಿಯುತ್ತಿಲ್ಲ. ಇದು ಒಂದು ರೀತಿಯ ಐತಿಹಾಸಿಕ ಆದ್ಯತೆಯ ಫಲಿತಾಂಶವೇ ಹೊರತು ಯಾರ ಮೇಲೂ ಆರೋಪವಲ್ಲ.
ಭವಿಷ್ಯದಲ್ಲಿ ಯುವಜನರನ್ನು ಕಾಯುತ್ತಿರುವ ಸವಾಲುಗಳು ಇನ್ನೂ ದೊಡ್ಡವು. 2030ರೊಳಗೆ ಭಾರತದಲ್ಲಿ 10 ಕೋಟಿ ಹೊಸ ಉದ್ಯೋಗಗಳ ಅಗತ್ಯವಿದ್ದು, ಅದರಲ್ಲಿ ಕರ್ನಾಟಕದ ಪಾಲು ಸುಮಾರು 80 ಲಕ್ಷದಷ್ಟು ಇರಬಹುದು. ಆದರೆ ಆಟೊಮೇಷನ್ ಮತ್ತು ಎಐ ತಂತ್ರಜ್ಞಾನದಿಂದ ಸಾಂಪ್ರದಾಯಿಕ ಉದ್ಯೋಗಗಳು ಕಣ್ಮರೆಯಾಗುತ್ತಿವೆ. ಹವಾಮಾನ ಬದಲಾವಣೆಯಿಂದ ಕೃಷಿ ಮತ್ತು ಗ್ರಾಮೀಣ ಯುವಜನರ ಜೀವನೋಪಾಯಕ್ಕೆ ಧಕ್ಕೆ ಬರುತ್ತಿದೆ. ಈ ಎಲ್ಲ ಸವಾಲುಗಳನ್ನು ಒಂದೇ ಇಲಾಖೆಯಿಂದ ಎದುರಿಸುವುದು ಕಷ್ಟ.
ಇದನ್ನು ಓದಿದ್ದೀರಾ? ದಕ್ಷಿಣ ಕನ್ನಡ | ಯುವಜನರಿಗೆ ಉದ್ಯೋಗ ಸೃಷ್ಟಿ ಭರವಸೆ ನೀಡುವಲ್ಲಿ ಬಜೆಟ್ ವಿಫಲ: ಡಿವೈಎಫ್ಐ
ಇಂತಹ ಸಂದರ್ಭದಲ್ಲಿ ಕರ್ನಾಟಕಕ್ಕೆ ಒಂದು ಸ್ವತಂತ್ರ, ಸ್ವಾಯತ್ತ ಯುವಜನ ಆಯೋಗದ ಅಗತ್ಯ ಎದ್ದು ಕಾಣುತ್ತದೆ. ಕೇರಳ, ಅಸ್ಸಾಂ, ಮಿಜೋರಾಂ ಮತ್ತು ಬಿಹಾರದಂತಹ ರಾಜ್ಯಗಳು ಈಗಾಗಲೇ ಯುವಜನ ಆಯೋಗಗಳನ್ನು ಸ್ಥಾಪಿಸಿ ಯಶಸ್ವಿಯಾಗಿ ನಡೆಸಿಕೊಂಡು ಬಂದಿವೆ.
ಈ ಆಯೋಗಗಳ ಕೆಲವು ಪ್ರಮುಖ ಕಾರ್ಯಕ್ರಮ ಹೀಗಿವೆ :
- ಯುವಜನರಿಗೆ ಸಂಬಂಧಿಸಿದ ಎಲ್ಲ ನೀತಿಗಳನ್ನು ಒಗ್ಗೂಡಿಸುವ ಮತ್ತು ಮೇಲ್ವಿಚಾರಣೆ ಮಾಡುವುದು.
- ಉದ್ಯೋಗ, ಕೌಶಲ, ಉದ್ಯಮಶೀಲತೆ ಮತ್ತು ಮಾನಸಿಕ ಆರೋಗ್ಯಕ್ಕೆ ವಿಶೇಷ ಕಾರ್ಯಕ್ರಮಗಳ ರೂಪಿಸುವುದು .
- ಯುವಜನರ ರಾಜಕೀಯ–ಸಾಮಾಜಿಕ ಪ್ರಾತಿನಿಧ್ಯವನ್ನು ಬಲಪಡಿಸುವ ನೀತಿ ವಕಾಲತ್ತುಗಳಿಗ ಆದ್ಯತೆ.
- ಎಲ್ಲಾ ಇಲಾಖೆಗಳ ಯುವಜನ ಸಂಬಂಧಿತ ಯೋಜನೆಗಳ ಸಮನ್ವಯ ಮತ್ತು ಮೌಲ್ಯಮಾಪನ.
- ಯುವಜನರ ಸಮಸ್ಯೆಗಳ ಬಗ್ಗೆ ವಾರ್ಷಿಕ ವರದಿ ಮತ್ತು ಶ್ವೇತಪತ್ರ ಬಿಡುಗಡೆ ಮಾಡುವುದು.
ಇದರಿಂದ ಯುವಜನರಿಗೆ ಏಕಗವಾಕ್ಷಿಯ ವ್ಯವಸ್ಥೆ ದೊರೆಯುತ್ತದೆ. ಅವರ ಸಮಸ್ಯೆಗಳಿಗೆ ತ್ವರಿತ ಪ್ರತಿಕ್ರಿಯೆ, ನೀತಿ ಮಟ್ಟದಲ್ಲಿ ಧ್ವನಿ ಮತ್ತು ಭವಿಷ್ಯದ ಸವಾಲುಗಳಿಗೆ ಸಿದ್ಧತೆ ಸಾಧ್ಯವಾಗುತ್ತದೆ.
ಯುವಜನರೇ ರಾಜ್ಯದ, ದೇಶದ, ಜಗತ್ತಿನ ಭವಿಷ್ಯ. ಅವರ ಆಶಯಗಳನ್ನು ಅರ್ಥೈಸಿ, ಅವರ ಸವಾಲುಗಳನ್ನು ಗಂಭೀರವಾಗಿ ಪರಿಗಣಿಸಿ, ಅವರ ಶಕ್ತಿಯನ್ನು ಸಕಾರಾತ್ಮಕ ದಿಕ್ಕಿನಲ್ಲಿ ಬಳಸಿಕೊಳ್ಳುವ ಒಂದು ದೀರ್ಘಕಾಲಿಕ ಚೌಕಟ್ಟು ಇಂದಿನ ಅಗತ್ಯ. ಸ್ವತಂತ್ರ ಯುವಜನ ಆಯೋಗ ಎಂಬುದು ಆ ದಿಕ್ಕಿನಲ್ಲಿ ಒಂದು ದೊಡ್ಡ ಹೆಜ್ಜೆಯಾಗಬಲ್ಲದು. ಇದು ಯುವ ಶಕ್ತಿಯನ್ನು ಪ್ರೀತಿಯಿಂದ, ಗೌರವದಿಂದ ಸಮಾಜದ ಮುಖ್ಯಧಾರೆಗೆ ತರುವ ಒಂದು ಸಕಾರಾತ್ಮಕ ಪ್ರಯತ್ನವಾಗುತ್ತದೆ.
ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹೆಚ್ಚಿನ ಮುತುವರ್ಜಿ ವಹಿಸಿ ಯುವಜನ ಆಯೋಗ ರಚನೆಗೆ ಯುವಜನರಿಂದ ಬಂದ ಅಭಿಪ್ರಾಯಗಳು, ನಾಡಿನ ಸಾಮಾಜಿಕ ಅಭಿವೃದ್ಧಿಯಲ್ಲಿ ತೊಡಗಿರುವ ಸಂಘಟನೆಗಳಿಂದ ಬಂದಿರುವ ಸಲಹೆಗಳನ್ನು ಗಮನದಲ್ಲಿರಿಸಿಕೊಂಡು ರಾಜ್ಯ ಯುವಜನರ ಸಮಸ್ಯೆಗಳು ಮತ್ತು ಸವಾಲುಗಳನ್ನು ಶಾಶ್ವತವಾಗಿ ತೊಡೆದು ಹಾಕುವ ಸಲುವಾಗಿ ಆದಷ್ಟು ಬೇಗ ಯುವಜನ ಆಯೋಗ ರಚಿಸುವಂತಾಗಲಿ.

ಲಿಖಿತ್ ರೈ
ಲಿಖಿತ್ ರೈ ಮೂಲತಃ ಕೊಡಗು ಜಿಲ್ಲೆಯ ವಿರಾಜಪೇಟೆಯವರು. 9 ವರ್ಷಗಳಿಂದ ವಿವಿಧ ಮಾಧ್ಯಮಗಳಲ್ಲಿ ಉಪ ಸಂಪಾದಕನಾಗಿ, ನಿರೂಪಕನಾಗಿ, ವರದಿಗಾರನಾಗಿ ಸೇವೆ ಸಲ್ಲಿಸಿದ್ದಾರೆ. ಕಳೆದ 5 ತಿಂಗಳುಗಳಿಂದ ಸ್ವತಂತ್ರ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದು, ಜೊತೆಗೆ ವಿವಿಧ NGO ಗಳಲ್ಲಿ ಯುವಜನ ಮತ್ತು ಮಕ್ಕಳ ಮಾರ್ಗದರ್ಶಕನಾಗಿ ಕೆಲಸ ಮಾಡುತ್ತಿದ್ದಾರೆ.




