ಕೆಎಸ್‌ಸಿಎ ಅಧ್ಯಕ್ಷರಾಗಿ, ಅವರು ಕರ್ನಾಟಕ ಕ್ರಿಕೆಟ್‌ನ ಇಡೀ ಭವಿಷ್ಯವನ್ನು ರೂಪಿಸುವ ಮಹತ್ತರ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಅವರ ನಾಯಕತ್ವದಲ್ಲಿ, ಕರ್ನಾಟಕವು ಭಾರತೀಯ ಕ್ರಿಕೆಟ್‌ಗೆ ಇನ್ನೂ ಹೆಚ್ಚಿನ ಪ್ರತಿಭೆಗಳನ್ನು ನೀಡುವ ಮೂಲಕ, ತನ್ನ ಹಳೆಯ ವೈಭವವನ್ನು ಮರಳಿ ಪಡೆಯುವ ಭರವಸೆಯಿಡಲಾಗಿದೆ.
ಟೀಂ ಇಂಡಿಯಾದ ಮಾಜಿ ವೇಗಿ ಬಿ ಕೆ ವೆಂಕಟೇಶ್ ಪ್ರಸಾದ್ ಈಗ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA)ಯ ನೂತನ ಅಧ್ಯಕ್ಷರಾಗಿ, ಆಡಳಿತಾತ್ಮಕ ರಂಗದಲ್ಲಿ ಎರಡನೇ ಇನಿಂಗ್ಸ್ ಆರಂಭಿಸಿದ್ದಾರೆ. ಕ್ರೀಡಾಂಗಣದಲ್ಲಿ ಅವರ ಪಯಣವು ಗಟ್ಟಿತನ, ಶಿಸ್ತು ಮತ್ತು ಕ್ರಿಕೆಟ್ ಮೇಲಿನ ಅಚಲ ಪ್ರೀತಿಯ ಪ್ರತೀಕವಾಗಿತ್ತು. 1990 ರ ದಶಕದ ಆರಂಭದಲ್ಲಿ, ಕರ್ನಾಟಕ ಕ್ರಿಕೆಟ್ ತಂಡವು ಅತ್ಯಂತ ಬಲಿಷ್ಠವಾಗಿತ್ತು. ಸುನಿಲ್ ಜೋಶಿ, ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್ ಮತ್ತು ದೊಡ್ಡ ಗಣೇಶ್ ಅವರಂತಹ ದಿಗ್ಗಜರ ನಡುವೆ ಪ್ರಸಾದ್ ಕೂಡ ಬೆಳೆದರು. ಇದೀಗ ಇಡೀ ಕ್ರಿಕೆಟ್ ಸಂಸ್ಥೆಯನ್ನು ಮುನ್ನಡೆಸುವ ಜವಾಬ್ದಾರಿಯನ್ನು ವೆಂಕಟೇಶ್ ಹೊತ್ತಿದ್ದಾರೆ. ಅದರಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತಾರೆ ಎಂದು ಕಾದು ನೋಡಬೇಕಿದೆ.
ಬಾಲ್ಯ ಮತ್ತು ಆರಂಭಿಕ ಜೀವನ
ವೆಂಕಟೇಶ್ ಪ್ರಸಾದ್ ಅವರು ಆಗಸ್ಟ್ 5, 1969 ರಂದು ಬೆಂಗಳೂರಿನಲ್ಲಿ ಜನಿಸಿದರು. ಅವರ ಪೂರ್ಣ ಹೆಸರು ಬದ್ರೀನಾಥ್ ಕೃಷ್ಣಮೂರ್ತಿ ವೆಂಕಟೇಶ್ ಪ್ರಸಾದ್. ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ಪ್ರಸಾದ್‌ಗೆ ಬಾಲ್ಯದಿಂದಲೇ ಕ್ರಿಕೆಟ್ ಎಂದರೆ ಅಚ್ಚುಮೆಚ್ಚು. ಆಗಿನ ದಿನಗಳಲ್ಲಿ, ಕ್ರಿಕೆಟ್ ಆಡುವುದು ಕೇವಲ ಮನರಂಜನೆಯಾಗಿರಲಿಲ್ಲ, ಅದೊಂದು ಭಾವನಾತ್ಮಕ ಬಂಧವಾಗಿತ್ತು.
ಬೆಂಗಳೂರಿನ ರಸ್ತೆಗಳಲ್ಲಿ ಮತ್ತು ಸ್ಥಳೀಯ ಮೈದಾನಗಳಲ್ಲಿ ಆಡಿದ ಅವರ ಆಟವೇ ವೃತ್ತಿಪರ ಕ್ರಿಕೆಟ್‌ಗೆ ಅಡಿಪಾಯ ಹಾಕಿತು. ಮೈದಾನದಲ್ಲಿ ಗಂಟೆಗಟ್ಟಲೆ ಬೌಲಿಂಗ್ ಅಭ್ಯಾಸ ಮಾಡುವುದು, ಬಿಸಿಲು ಮತ್ತು ಧೂಳಿನಲ್ಲಿ ಬೆವರು ಸುರಿಸುವುದು ಅವರ ದೈನಂದಿನ ಕಾಯಕವಾಗಿತ್ತು. ಆಗಿನ ಯುವಕರಿಗೆ ಕ್ರಿಕೆಟ್‌ನಲ್ಲಿ ವೃತ್ತಿಜೀವನ ರೂಪಿಸಿಕೊಳ್ಳುವುದು ಸುಲಭದ ಮಾತಾಗಿರಲಿಲ್ಲ. ಆದರೂ, ತಮ್ಮ ವೇಗ ಮತ್ತು ನಿಖರತೆಯ ಮೇಲೆ ಪ್ರಸಾದ್‌ಗೆ ನಂಬಿಕೆ ಇತ್ತು.
ಸ್ಥಳೀಯ ಮಟ್ಟದಲ್ಲಿ ಪ್ರಸಾದ್ ಅವರ ಪ್ರತಿಭೆ ಬೇಗನೆ ಗುರುತಿಸಲ್ಪಟ್ಟಿತು. ಯುವ ಕ್ರಿಕೆಟಿಗರನ್ನು ಗುರುತಿಸುವಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ನಿರ್ಣಾಯಕ ಪಾತ್ರ ವಹಿಸಿತು. ಅವರು ತಮ್ಮ ಆರಂಭಿಕ ಕ್ರಿಕೆಟ್ ತರಬೇತಿಯನ್ನು ಬೆಂಗಳೂರಿನಲ್ಲೇ ಪಡೆದರು, ಅಲ್ಲಿ ಅವರು ತಮ್ಮ ಅನನ್ಯ ಬೌಲಿಂಗ್ ಶೈಲಿಯನ್ನು ಅಭಿವೃದ್ಧಿಪಡಿಸಿದರು. ಆರಂಭದಲ್ಲಿ ಮಧ್ಯಮ ವೇಗದ ಬೌಲರ್ ಆಗಿದ್ದರೂ, ತಮ್ಮ ಚಲನೆ, ಸ್ವಿಂಗ್ ಮತ್ತು ಚೆಂಡನ್ನು ನಿಖರವಾಗಿ ನಿಯಂತ್ರಿಸುವ ಸಾಮರ್ಥ್ಯದಿಂದಾಗಿ ಅವರು ಶೀಘ್ರವಾಗಿ ಗಮನ ಸೆಳೆದರು.

ವೃತ್ತಿಜೀವನದ ಮುನ್ನಡೆ: ಕರ್ನಾಟಕದ ಪರ ಹೋರಾಟ
ಪ್ರಸಾದ್ ಅವರ ವೃತ್ತಿಪರ ಕ್ರಿಕೆಟ್ ಪಯಣವು ಕರ್ನಾಟಕ ತಂಡದೊಂದಿಗೆ ಪ್ರಾರಂಭವಾಯಿತು. 1993ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಪ್ರಸಾದ್, ತಮ್ಮ ನಿರಂತರ ಪ್ರದರ್ಶನದಿಂದ ರಾಷ್ಟ್ರೀಯ ಆಯ್ಕೆಗಾರರ ಗಮನ ಸೆಳೆದರು. ರಾಜ್ಯ ಕ್ರಿಕೆಟ್‌ನಲ್ಲಿ ಅವರ ಪ್ರದರ್ಶನವು ಅತ್ಯುತ್ತಮವಾಗಿತ್ತು. ಕಠಿಣ ಪಿಚ್‌ಗಳಲ್ಲೂ ಅವರು ಚೆಂಡಿಗೆ ಬೇಕಾದ ಸ್ವಿಂಗ್ ಮತ್ತು ಬೌನ್ಸ್ ನೀಡುವಲ್ಲಿ ಯಶಸ್ವಿಯಾಗುತ್ತಿದ್ದರು. ಅವರ ಬೌಲಿಂಗ್‌ನ ಒಂದು ವಿಶಿಷ್ಟ ಅಂಶವೆಂದರೆ – ನಿಧಾನಗತಿಯ ಚೆಂಡು. ಇದನ್ನು ಎದುರಾಳಿ ಬ್ಯಾಟ್ಸ್‌ಮನ್‌ಗಳು ಸುಲಭವಾಗಿ ಲೆಕ್ಕಾಚಾರ ಮಾಡಲು ಸಾಧ್ಯವಾಗುತ್ತಿರಲಿಲ್ಲ.
ಇದನ್ನು ಓದಿದ್ದೀರಾ? ಇಮ್ರಾನ್ ಖಾನ್ | ಮೈದಾನದ ‘ಕಪ್ತಾನ’ನಿಂದ ಜೈಲಿನ ಕೈದಿಯವರೆಗೆ
ಕರ್ನಾಟಕ ತಂಡವು 1990ರ ದಶಕದಲ್ಲಿ ರಣಜಿ ಟ್ರೋಫಿ ಮತ್ತು ಇರಾನಿ ಟ್ರೋಫಿಯಲ್ಲಿ ಪ್ರಾಬಲ್ಯ ಸಾಧಿಸಿತು. ಈ ಯಶಸ್ಸಿನಲ್ಲಿ ಪ್ರಸಾದ್ ಅವರ ಕೊಡುಗೆ ಮಹತ್ವದ್ದಾಗಿತ್ತು. ತಮ್ಮ ಸ್ವದೇಶಿ ಮೈದಾನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅವರು ಎದುರಾಳಿ ಬ್ಯಾಟ್ಸ್‌ಮನ್‌ಗಳಿಗೆ ಸಿಂಹಸ್ವಪ್ನವಾಗಿದ್ದರು.
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ: ಯಶಸ್ಸಿನ ಹೆಜ್ಜೆಗುರುತು
ಕರ್ನಾಟಕ ತಂಡದಲ್ಲಿನ ಪ್ರಬಲ ಪ್ರದರ್ಶನದ ಫಲವಾಗಿ, ವೆಂಕಟೇಶ್ ಪ್ರಸಾದ್ ಅವರಿಗೆ 1994ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ಅವಕಾಶ ಒದಗಿಬಂತು. ಪ್ರಸಾದ್ ಅವರು ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ ಜನಪ್ರಿಯತೆ ಗಳಿಸಿದರು. ಅವರ ನಿಖರವಾದ ಲೈನ್ ಮತ್ತು ಲೆಂಗ್ತ್, ಮತ್ತು ವಿಶೇಷವಾಗಿ ಡೆತ್ ಓವರ್‌ಗಳಲ್ಲಿ ಅವರ ನಿಯಂತ್ರಣವು ಭಾರತೀಯ ತಂಡಕ್ಕೆ ಬಲ ತುಂಬಿತು.
1996 ರಲ್ಲಿ ಪ್ರಸಾದ್ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಕೇವಲ ತಮ್ಮ ಆರಂಭಿಕ ಪಂದ್ಯಗಳಿಂದಲೇ ಅವರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು. 33 ಟೆಸ್ಟ್ ಪಂದ್ಯಗಳನ್ನು ಆಡಿರುವ ಅವರು 96 ವಿಕೆಟ್‌ಗಳನ್ನು ಪಡೆದಿದ್ದಾರೆ. ಪ್ರಸಾದ್ ಅವರ ಟೆಸ್ಟ್ ವೃತ್ತಿಜೀವನದಲ್ಲಿ ಅತ್ಯಂತ ಸ್ಮರಣೀಯ ಪ್ರದರ್ಶನವೆಂದರೆ, 1999 ರಲ್ಲಿ ಚೆನ್ನೈನಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಪಂದ್ಯ. ಈ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಕೇವಲ 6 ರನ್‌ಗಳಿಗೆ 5 ವಿಕೆಟ್‌ಗಳನ್ನು ಪಡೆದು ವಿಶ್ವ ದಾಖಲೆ ನಿರ್ಮಿಸಿದ್ದರು. ಒಟ್ಟು 161 ಏಕದಿನ ಪಂದ್ಯಗಳಲ್ಲಿ ಅವರು 196 ವಿಕೆಟ್‌ಗಳನ್ನು ಪಡೆದಿದ್ದಾರೆ.
ವಿಶ್ವಕಪ್‌ಗಳಲ್ಲಿ ಅತ್ಯುತ್ತಮ ಪ್ರದರ್ಶನ
ವೆಂಕಟೇಶ್ ಪ್ರಸಾದ್ ಅವರು 1996 ಮತ್ತು 1999ರ ಕ್ರಿಕೆಟ್ ವಿಶ್ವಕಪ್‌ಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. 1996ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಏಕದಿನ ವಿಶ್ವಕಪ್ ಪಾಕ್ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 45/3 ವಿಕೆಟ್ ಪಡೆಯುವ ಮೂಲಕ ಗಮನಾರ್ಹ ಪ್ರದರ್ಶನ ನೀಡಿ ಗೆಲುವಿಗೆ ಕಾರಣರಾಗಿದ್ದರು.

1999 ರ ವಿಶ್ವಕಪ್‌ನಲ್ಲಿ, ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಪ್ರಸಾದ್ ಅವರ ಪ್ರದರ್ಶನ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆದಿದೆ. ಪಾಕಿಸ್ತಾನದ ಆರಂಭಿಕ ಬ್ಯಾಟ್ಸ್‌ಮನ್ ಆಮೀರ್ ಸೊಹೈಲ್, ಪ್ರಸಾದ್ ಅವರ ಚೆಂಡನ್ನು ಬೌಂಡರಿಗೆ ಬಾರಿಸಿ, ಅವರನ್ನು ಕೆಣಕಿದ್ದರು. ಮರುಚೆಂಡಿನಲ್ಲಿಯೇ ಪ್ರಸಾದ್ ಸೊಹೈಲ್ ಅವರ ವಿಕೆಟ್ ಪಡೆದು, ಅವರಿಗೆ ಪೆವಿಲಿಯನ್ ದಾರಿ ತೋರಿಸಿದ ರೀತಿ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಅತ್ಯಂತ ರೋಮಾಂಚಕ ಕ್ಷಣಗಳಲ್ಲಿ ಒಂದಾಗಿದೆ. ಆ ಪಂದ್ಯದಲ್ಲಿ ಪ್ರಸಾದ್ 27 ರನ್ ನೀಡಿ 5 ವಿಕೆಟ್ ಕಬಳಿಸಿ ಭಾರತಕ್ಕೆ ಐತಿಹಾಸಿಕ ವಿಜಯ ತಂದುಕೊಟ್ಟರು.
ವೆಂಕಟೇಶ್ ಪ್ರಸಾದ್ ಅವರ ಕ್ರಿಕೆಟ್ ಸಾಧನೆಗಾಗಿ ಹಲವು ಪ್ರಶಸ್ತಿಗಳು ಮತ್ತು ಗೌರವಗಳು ಸಂದಿವೆ. ಭಾರತೀಯ ಕ್ರೀಡಾ ಕ್ಷೇತ್ರದಲ್ಲಿ ಅತ್ಯುನ್ನತ ಗೌರವಗಳಲ್ಲಿ ಒಂದಾದ ಅರ್ಜುನ ಪ್ರಶಸ್ತಿ (1996) ಅವರಿಗೆ ಲಭಿಸಿದೆ. ಅವರ ಕ್ರಿಕೆಟ್ ವೃತ್ತಿಜೀವನದ ಗಣನೀಯ ಸಾಧನೆಗಳಿಗೆ ಇದು ಸೂಕ್ತ ಮಾನ್ಯತೆಯಾಗಿದೆ. 2005 ರಲ್ಲಿ, ವೆಂಕಟೇಶ್ ಪ್ರಸಾದ್ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದರು. ಆದರೆ, ಕ್ರಿಕೆಟ್‌ನಿಂದ ದೂರ ಉಳಿಯಲಿಲ್ಲ. ಬದಲಿಗೆ, ಆಟದ ತಾಂತ್ರಿಕ ಮತ್ತು ಆಡಳಿತಾತ್ಮಕ ಅಂಶಗಳಿಗೆ ತಮ್ಮನ್ನು ತೊಡಗಿಸಿಕೊಂಡರು.
ಬೌಲಿಂಗ್ ತರಬೇತುದಾರ
ಪ್ರಸಾದ್ ಅವರು ಭಾರತದ ಅಂಡರ್-19 ತಂಡದ ಬೌಲಿಂಗ್ ಕೋಚ್ ಆಗಿ ಕೆಲಸ ಮಾಡಿದರು. 2007 ರಿಂದ 2009 ರವರೆಗೆ ಭಾರತೀಯ ಕ್ರಿಕೆಟ್ ತಂಡದ ಬೌಲಿಂಗ್ ಕೋಚ್ ಆಗಿ ಸೇವೆ ಸಲ್ಲಿಸಿದರು. ಅವರ ತರಬೇತಿ ಅಡಿಯಲ್ಲಿ, ಯುವ ಭಾರತೀಯ ವೇಗದ ಬೌಲರ್‌ಗಳು ತಮ್ಮ ಕೌಶಲ್ಯಗಳನ್ನು ಉತ್ತಮಪಡಿಸಿಕೊಳ್ಳಲು ಸಾಧ್ಯವಾಯಿತು.ಇಂಡಿಯನ್ ಪ್ರೀಮಿಯರ್ ಲೀಗ್ (IPL) ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ (ಈಗ ಪಂಜಾಬ್ ಕಿಂಗ್ಸ್) ತಂಡಗಳ ಬೌಲಿಂಗ್ ಕೋಚ್ ಆಗಿ ಕೆಲಸ ಮಾಡಿದರು. ಅಲ್ಲದೆ, ಕರ್ನಾಟಕ ರಾಜ್ಯದ ಪ್ರಥಮ ದರ್ಜೆ ತಂಡದ ಕೋಚ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. 2010 ರಿಂದ 2013ರ ಅವಧಿಯವರೆಗೆ ಕೆಎಸ್‌ಸಿಎ ಉಪಾಧ್ಯಕ್ಷರಾಗಿಯೂ ಆಗಿ ಸೇವೆ ಸಲ್ಲಿಸಿದ್ದಾರೆ.
ಆಡಳಿತದಲ್ಲಿ ಹೊಸ ಆಯಾಮ
ಬಿ.ಕೆ. ವೆಂಕಟೇಶ್ ಪ್ರಸಾದ್ ವೇಗದ ಬೌಲರ್ ಆಗಿ ರಾಜ್ಯ ಹಾಗೂ ರಾಷ್ಟ್ರವನ್ನು ಪ್ರತಿನಿಧಿಸಿ ಹಲವು ಪಂದ್ಯಗಳನ್ನು ಗೆಲ್ಲಿಸಿದ್ದಾರೆ. ಈಗ, ಕೆಎಸ್‌ಸಿಎ ಅಧ್ಯಕ್ಷರಾಗಿ, ಅವರು ಕರ್ನಾಟಕ ಕ್ರಿಕೆಟ್‌ನ ಇಡೀ ಭವಿಷ್ಯವನ್ನು ರೂಪಿಸುವ ಮಹತ್ತರ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಅವರ ನಾಯಕತ್ವದಲ್ಲಿ, ಕರ್ನಾಟಕವು ಭಾರತೀಯ ಕ್ರಿಕೆಟ್‌ಗೆ ಇನ್ನೂ ಹೆಚ್ಚಿನ ಪ್ರತಿಭೆಗಳನ್ನು ನೀಡುವ ಮೂಲಕ, ತನ್ನ ಹಳೆಯ ವೈಭವವನ್ನು ಮರಳಿ ಪಡೆಯುವ ಭರವಸೆಯಿಡಲಾಗಿದೆ. ಸಂಪೂರ್ಣ ವಾಣಿಜ್ಯಮಯ ಕ್ರೀಡೆಯಾಗಿ ಬದಲಾಗುತ್ತಿರುವ ಕ್ರಿಕೆಟ್‌ಅನ್ನು ಎಲ್ಲ ವರ್ಗದ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಕೆಎಸ್‌ಸಿಎಯನ್ನು ಸಾಮಾನ್ಯರಿಗೂ ತಲುಪುವಂತೆ ಮಾಡಲಿ.





