ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದಿಂದ ಬಾಂಗ್ಲಾದೇಶದ ವೇಗದ ಬೌಲರ್ ಮುಸ್ತಫಿಜುರ್ ರೆಹಮಾನ್ ಅವರನ್ನು ಕೈಬಿಟ್ಟ ವಿವಾದವು ತೀವ್ರ ಸ್ವರೂಪ ಪಡೆದುಕೊಂಡಿದ್ದು, ಬಾಂಗ್ಲಾದೇಶ ಸರ್ಕಾರವು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಗಳ ಪ್ರಸಾರ ಮತ್ತು ಪ್ರಚಾರದ ಮೇಲೆ ಅನಿರ್ದಿಷ್ಟಾವಧಿ ನಿಷೇಧ ಹೇರಿದೆ. ಅಷ್ಟೇ ಅಲ್ಲದೆ, ಮುಂಬರುವ ಟಿ20 ವಿಶ್ವಕಪ್‌ಗಾಗಿ ಭಾರತಕ್ಕೆ ತನ್ನ ತಂಡವನ್ನು ಕಳುಹಿಸದಿರಲು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಮಹತ್ವದ ನಿರ್ಧಾರ ಕೈಗೊಂಡಿದೆ.
ಮಾರ್ಚ್ 26 ರಂದು ಹೊರಡಿಸಲಾದ ಅಧಿಕೃತ ಆದೇಶದಲ್ಲಿ, ಐಪಿಎಲ್‌ಗೆ ಸಂಬಂಧಿಸಿದ ಎಲ್ಲ ಪ್ರಸಾರಗಳು, ಪ್ರಚಾರಗಳು ಮತ್ತು ಕಾರ್ಯಕ್ರಮಗಳ ಪ್ರಸಾರವನ್ನು ತಕ್ಷಣದಿಂದ ಜಾರಿಗೆ ಬರುವಂತೆ ತಡೆಹಿಡಿಯಲಾಗಿದೆ ಎಂದು ಬಾಂಗ್ಲಾ ಸರ್ಕಾರ ತಿಳಿಸಿದೆ.
ಮುಂದಿನ ಆದೇಶದವರೆಗೆ ಈ ನಿಷೇಧ ಜಾರಿಯಲ್ಲಿರುತ್ತದೆ ಎಂದು ತಿಳಿಸಲಾಗಿದ್ದು, ‘ಸಾರ್ವಜನಿಕ ಹಿತಾಸಕ್ತಿ’ಯ ದೃಷ್ಟಿಯಿಂದ ಮತ್ತು ಸಚಿವಾಲಯದ ಅನುಮೋದನೆಯ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.
ತಾರ್ಕಿಕ ಕಾರಣವಿಲ್ಲದ ನಿರ್ಧಾರ: ಸರ್ಕಾರದ ಆಕ್ರೋಶ
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನೀಡಿದ ಸೂಚನೆಯ ಮೇರೆಗೆ ಮುಂಬರುವ ಹೊಸ ಋತುವಿಗೆ ಮುನ್ನ ಕೆಕೆಆರ್ ತಂಡವು ಮುಸ್ತಫಿಜುರ್ ಅವರನ್ನು ಬಿಡುಗಡೆ ಮಾಡಿದೆ ಎಂದು ವರದಿಯಾಗಿದೆ. ಈ ನಡೆಗೆ ಯಾವುದೇ ತಾರ್ಕಿಕ ಕಾರಣಗಳಿಲ್ಲ ಎಂದು ಬಾಂಗ್ಲಾದೇಶದ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿದ್ದೀರಾ? ಟಿ20 ವಿಶ್ವಕಪ್ | ಭಾರತಕ್ಕೆ ಬರುವುದಿಲ್ಲ ಎಂದು ಘೋಷಿಸಿದ ಬಾಂಗ್ಲಾದೇಶ
”ಭಾರತೀಯ ಕ್ರಿಕೆಟ್ ಮಂಡಳಿಯ ಈ ನಿರ್ಧಾರಕ್ಕೆ ಯಾವುದೇ ಸಮಂಜಸವಾದ ಕಾರಣಗಳಿಲ್ಲ. ಇಂತಹ ನಿರ್ಧಾರವು ಬಾಂಗ್ಲಾದೇಶದ ಜನರಲ್ಲಿ ಆಘಾತ, ನೋವು ಮತ್ತು ತೀವ್ರ ಆಕ್ರೋಶವನ್ನು ಉಂಟುಮಾಡಿದೆ,” ಎಂದು ಸರ್ಕಾರ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ. ಜನರ ಭಾವನೆಗಳನ್ನು ಗೌರವಿಸಿ, ದೇಶಾದ್ಯಂತ ಐಪಿಎಲ್ ಪ್ರಸಾರವನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದೆ.
ಪ್ರಸಾರ ನಿಷೇಧದ ಬೆಳವಣಿಗೆಯ ಬೆನ್ನಲ್ಲೇ, ಮುಂಬರುವ ಐಸಿಸಿ ಪುರುಷರ ಟಿ20 ವಿಶ್ವಕಪ್‌ಗಾಗಿ ತನ್ನ ರಾಷ್ಟ್ರೀಯ ತಂಡವನ್ನು ಭಾರತಕ್ಕೆ ಕಳುಹಿಸದಿರಲು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ನಿರ್ಧರಿಸಿದೆ. ಕೆಕೆಆರ್ ತಂಡದಿಂದ ಮುಸ್ತಫಿಜುರ್ ಅವರನ್ನು ಬಿಡುಗಡೆ ಮಾಡಿದ ನಂತರ ಭಾನುವಾರ ರಾತ್ರಿ ನಡೆದ ತುರ್ತು ಸಭೆಯಲ್ಲಿ ಬಿಸಿಬಿ ನಿರ್ದೇಶಕರು ಈ ಸರ್ವಾನುಮತದ ನಿರ್ಧಾರವನ್ನು ಕೈಗೊಂಡಿದ್ದಾರೆ.





