ಮುಂಬರುವ ಟಿ20 ವಿಶ್ವಕಪ್ ಪಂದ್ಯಗಳನ್ನು ಭದ್ರತಾ ಕಾರಣಗಳಿಗಾಗಿ ಭಾರತದಿಂದ ಶ್ರೀಲಂಕಾಕ್ಕೆ ಸ್ಥಳಾಂತರಿಸಬೇಕೆಂಬ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ (ಬಿಸಿಬಿ) ಬೇಡಿಕೆಯ ಕುರಿತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕೊನೆಗೂ ಮೌನ ಮುರಿದಿದೆ. ಈ ವಿಚಾರದಲ್ಲಿ ತಾನು ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ, ಅಂತಿಮ ತೀರ್ಮಾನ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ವಿವೇಚನೆಗೆ ಬಿಟ್ಟದ್ದು ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.
ಏನಿದು ವಿವಾದ?
ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ಹಿಂದೂಗಳ ಮೇಲೆ ನಡೆದ ಹಲ್ಲೆ ಮತ್ತು ಹತ್ಯೆಗಳ ಹಿನ್ನೆಲೆಯಲ್ಲಿ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಸಂಬಂಧ ಹದಗೆಟ್ಟಿದೆ. ಈ ಬೆಳವಣಿಗೆಗಳ ಬೆನ್ನಲ್ಲೇ, ಐಪಿಎಲ್ ಹರಾಜಿನಲ್ಲಿ 9.20 ಕೋಟಿ ರೂ. ನೀಡಿ ಖರೀದಿಸಿದ್ದ ಬಾಂಗ್ಲಾದ ವೇಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ತಂಡದಿಂದ ಕೈಬಿಡುವಂತೆ ಬಿಸಿಸಿಐ, ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಫ್ರಾಂಚೈಸಿಗೆ ಸೂಚನೆ ನೀಡಿತ್ತು.
ಈ ಘಟನೆಯ ನಂತರ, ಸುರಕ್ಷತೆಯ ಕಾರಣಗಳನ್ನು ಮುಂದಿಟ್ಟುಕೊಂಡು ಭಾರತದಲ್ಲಿ ನಡೆಯಬೇಕಿರುವ ತನ್ನ ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸುವಂತೆ ಬಾಂಗ್ಲಾದೇಶ ಸರ್ಕಾರ ಹಾಗೂ ಬಿಸಿಬಿ, ಐಸಿಸಿಯನ್ನು ಒತ್ತಾಯಿಸಿವೆ. ಟೂರ್ನಿ ಫೆಬ್ರವರಿ 7 ರಂದು ಆರಂಭವಾಗಲಿದ್ದು, ಸಮಯ ಮೀರುತ್ತಿದ್ದರೂ ಐಸಿಸಿ ಮತ್ತು ಬಿಸಿಬಿ ನಡುವಿನ ಇಮೇಲ್ ಸಮರಕ್ಕೆ ಇನ್ನೂ ತಾರ್ಕಿಕ ಅಂತ್ಯ ಸಿಕ್ಕಿಲ್ಲ.
ಬಿಸಿಸಿಐ ಹೇಳಿದ್ದೇನು?
ಈ ಬಿಕ್ಕಟ್ಟಿನ ಕುರಿತು ಸುದ್ದಿಸಂಸ್ಥೆ ಪಿಟಿಐಗೆ ಪ್ರತಿಕ್ರಿಯಿಸಿರುವ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, “ನಮ್ಮ ಸಭೆಯು ‘ಸೆಂಟರ್ ಆಫ್ ಎಕ್ಸಲೆನ್ಸ್’ (CoE) ಮತ್ತು ಇತರ ಕ್ರಿಕೆಟ್ ವಿಷಯಗಳಿಗೆ ಸೀಮಿತವಾಗಿತ್ತು. ಬಾಂಗ್ಲಾದೇಶದ ಪಂದ್ಯಗಳ ಸ್ಥಳಾಂತರ ಅಥವಾ ಅವರ ಭಾಗವಹಿಸುವಿಕೆಯ ವಿಷಯ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಈ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ಐಸಿಸಿಗೆ ಇದೆ,” ಎಂದು ಹೇಳುವ ಮೂಲಕ ಚೆಂಡನ್ನು ಐಸಿಸಿ ಅಂಗಳಕ್ಕೆ ತಳ್ಳಿದ್ದಾರೆ.
ಇದನ್ನು ಓದಿದ್ದೀರಾ? ಐಪಿಎಲ್‌ನಿಂದ ಹೊರಬಿದ್ದ ಮುಸ್ತಫಿಜುರ್ ರಹಮಾನ್ ಈಗ ಪಿಎಸ್‌ಎಲ್ ಪಾಲು
ವೇಳಾಪಟ್ಟಿ ಮತ್ತು ಸ್ಥಳಗಳು
2026ರ ಟಿ-20 ವಿಶ್ವಕಪ್ ಫೆಬ್ರವರಿ 7 ರಿಂದ ಮಾರ್ಚ್ 8 ರವರೆಗೆ ಭಾರತ ಮತ್ತು ಶ್ರೀಲಂಕಾದ ಎಂಟು ಕ್ರೀಡಾಂಗಣಗಳಲ್ಲಿ ನಡೆಯಲಿದೆ. ‘ಸಿ’ ಗುಂಪಿನಲ್ಲಿರುವ ಬಾಂಗ್ಲಾದೇಶವು ಇಂಗ್ಲೆಂಡ್, ವೆಸ್ಟ್ ಇಂಡೀಸ್, ನೇಪಾಳ ಮತ್ತು ಇಟಲಿ ವಿರುದ್ಧ ಸೆಣಸಬೇಕಿದೆ. ಪ್ರಸ್ತುತ ವೇಳಾಪಟ್ಟಿಯ ಪ್ರಕಾರ, ವೆಸ್ಟ್ ಇಂಡೀಸ್, ಇಂಗ್ಲೆಂಡ್ ಮತ್ತು ಇಟಲಿ ವಿರುದ್ಧದ ಪಂದ್ಯಗಳು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಹಾಗೂ ನೇಪಾಳ ವಿರುದ್ಧದ ಪಂದ್ಯ ಮುಂಬೈಯ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಬೇಕಿದೆ.
ಐಸಿಸಿ ಭರವಸೆ
ಜಯ್ ಶಾ ನೇತೃತ್ವದ ಐಸಿಸಿ, ತಮ್ಮ ಕಳವಳಗಳನ್ನು ಪರಿಹರಿಸಲು ಮತ್ತು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಬದ್ಧವಾಗಿದೆ ಎಂದು ಬಿಸಿಬಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. “ಬಾಂಗ್ಲಾದೇಶ ತಂಡವು ಟೂರ್ನಿಯಲ್ಲಿ ಸಂಪೂರ್ಣವಾಗಿ ಮತ್ತು ತಡೆರಹಿತವಾಗಿ ಭಾಗವಹಿಸುವುದನ್ನು ಖಚಿತಪಡಿಸಿಕೊಳ್ಳಲು ಐಸಿಸಿ ಬದ್ಧತೆಯನ್ನು ಪುನರುಚ್ಚರಿಸಿದೆ. ಭದ್ರತಾ ಯೋಜನೆಯ ಭಾಗವಾಗಿ ನಮ್ಮ ಸಲಹೆಗಳನ್ನು ಸ್ವಾಗತಿಸುವುದಾಗಿ ಐಸಿಸಿ ತಿಳಿಸಿದೆ,” ಎಂದು ಬಿಸಿಬಿ ಹೇಳಿದೆ.





