ಲಿವರ್ ಕ್ಯಾನ್ಸರ್‌ನಿಂದ ಮೃತಪಟ್ಟ ತಂದೆಯ ಅಂತಿಮ ದರ್ಶನಕ್ಕಾಗಿ ಧಾವಿಸಿದ್ದ ಭಾರತ ಟಿ20 ಕ್ರಿಕೆಟ್ ತಂಡದ ಸದಸ್ಯ ರಿಂಕು ಸಿಂಗ್, ವೆಸ್ಟ್ ಇಂಡೀಸ್ ವಿರುದ್ಧದ ಮಹತ್ವದ ಪಂದ್ಯಕ್ಕೆ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ಪ್ರಕಟಿಸಿದೆ.
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕಾರ್ಯದರ್ಶಿ ದೇವಜೀತ್ ಸೈಕಿಯಾ ಈ ವಿಚಾರವನ್ನು ದೃಢಪಡಿಸಿದ್ದು, ಶನಿವಾರ ರಿಂಕು ಸಿಂಗ್ ಕೊಲ್ಕತ್ತಾದಲ್ಲಿ ಭಾರತ ತಂಡ ಸೇರಿಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ. ಭಾನುವಾರ ಭಾರತ ತಂಡ ಟಿ20 ವಿಶ್ವಕಪ್ ಟೂರ್ನಿಯ ಸೂಪರ್8 ಹಂತದ ಕೊನೆಯ ಪಂದ್ಯದಲ್ಲಿ ವೆಸ್ಟ್ಇಂಡೀಸ್ ಸವಾಲನ್ನು ಎದುರಿಸಲಿದೆ.
ಇದನ್ನು ಓದಿದ್ದೀರಾ? ಶೋಯೆಬ್ ಖಾನ್ | ಬಿಹಾರದ ಕುಗ್ರಾಮದಿಂದ ಯುಎಇ ವಿಶ್ವಕಪ್ ತಂಡದವರೆಗೆ ರೋಚಕ ಪಯಣ
ತಂದೆಗೆ ಅಂತಿಮ ಗೌರವ ಸಲ್ಲಿಸಿದ ರಿಂಕುಸಿಂಗ್ ಮುಂಜಾನೆ 5 ಗಂಟೆಗೆ ಚೆನ್ನೈನಿಂದ ಹೊರಟಿದ್ದು, ಹೊಸದಿಲ್ಲಿಗೆ ಧಾವಿಸಿದ್ದಾರೆ ಎಂದು ಸೈಕಿಯಾ ಐಎಎನ್ಎಸ್ಗೆ ತಿಳಿಸಿದರು.
ಗ್ರೇಟರ್ ನೋಯ್ಡಾದ ಯಥಾರ್ತ್ ಆಸ್ಪತ್ರೆಗೆ ಸಿಂಗ್ ತಂದೆಯನ್ನು ಫೆಬ್ರುವರಿ 21ರಂದು ದಾಖಲಿಸಲಾಗಿತ್ತು. ಕೃತಕ ಉಸಿರಾಟ ವ್ಯವಸ್ಥೆಯಲ್ಲಿದ್ದ ಅವರು ಶುಕ್ರವಾರ ಮುಂಜಾನೆ ಕೊನೆಯುಸಿರೆಳೆದಿದ್ದರು. ತಂದೆಯ ಆರೋಗ್ಯ ಹದಗೆಟ್ಟಾಗ ತಂದೆಯ ಜತೆಗಿದ್ದ ರಿಂಕು ಸಿಂಗ್, ಗುರುವಾರ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೆ ಮುನ್ನ ತಂಡವನ್ನು ಸೇರಿಕೊಂಡಿದ್ದರು. ಆದರೆ ಆಡುವ 11ರ ಬಳಗದಲ್ಲಿ ಸಿಂಗ್ ಅವಕಾಶ ಪಡೆದಿರಲಿಲ್ಲ. ಅವರ ಬದಲು ತಂಡದಲ್ಲಿ ಜಾಗ ಪಡೆದ ಸಂಜು ಸ್ಯಾಮ್ಸನ್ ಅವರು ಅಭಿಷೇಕ್ ಶರ್ಮಾ ಜತೆ ಇನಿಂಗ್ಸ್ ಆರಂಭಿಸಿದರು.





