ಅತ್ಯಂತ ಕಿರಿಯ ಅಂತಾರಾಷ್ಟ್ರೀಯ ಟೆನಿಸ್ ತಾರೆ ಕಾರ್ಲೋಸ್ ಆಲ್ಕರಾಜ್ ಅವರು 2026ರ ‘ಆಸ್ಟ್ರೇಲಿಯನ್ ಓಪನ್ಸ್’ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. 2026ರ ಫೆಬ್ರವರಿ 1ರಂದು ನಡೆದ ಫೈನಲ್‌ನ ನಾಲ್ಕು ಸುತ್ತುಗಳಲ್ಲಿ ‘ನೊವಾಕ್ ಜೊಕೋವಿಚ್’ ಅವರನ್ನು (2-6, 6-2, 6-3, 7-5) ಸೋಲಿಸಿ ‘ಆಸ್ಟ್ರೇಲಿಯನ್ ಓಪನ್’ ಟೈಟಲ್ ಗೆದ್ದಿದ್ದಾರೆ.
‘ಆಸ್ಟ್ರೇಲಿಯನ್ ಓಪನ್ಸ್’ ಗೆಲ್ಲುವ ಮೂಲಕ ಆಲ್ಕರಾಜ್ ಅವರು ‘ಕ್ಯಾರಿಯರ್ ಗ್ರ್ಯಾಂಡ್ ಸ್ಲ್ಯಾಮ್’ನ ಎಲ್ಲ ನಾಲ್ಕು ಟೈಟಲ್‌ಗಳನ್ನೂ (ಫ್ರೆಂಚ್ ಓಪನ್ಸ್, ವಿಂಬಲ್ಡನ್ ಓಪನ್ಸ್, ಯುಎಸ್ ಓಪನ್ ಹಾಗೂ ಆಸ್ಟ್ರೇಲಿಯನ್ ಓಪನ್ಸ್) ಗೆದ್ದ 22ರ ಪೋರ ಎಂಬ ಹಿರಿಯನ್ನು ತನ್ನದಾಗಿಸಿಕೊಂಡಿದ್ದಾರೆ. ಹೊಸ ದಾಖಲೆ ಬರೆದಿದ್ದಾರೆ.
ಇತ್ತೀಚೆಗೆ ನಡೆದ, ಆಸ್ಟ್ರೇಲಿಯನ್ ಓಪನ್ಸ್‌ನ ಎಲ್ಲ ಹಂತಗಳಲ್ಲಿ ಆಡಮ್ ವಾಲ್ಟನ್, ಯಾನಿಕ್ ಹಾನ್ಫ್‌ಮನ್, ಕೊರೆಂಟಿನ್ ಮೌಟೆಟ್, ಟಾಮಿ ಪಾಲ್, ಅಲೆಕ್ಸ್ ಡಿ ಮಿನೌರ್ ಹಾಗೂ ಸೆಮಿಫೈನಲ್‌ನಲ್ಲಿ ಅಲೆಕ್ಸಾಂಡರ್ ಜ್ವೆರೆವ್ (6-4, 7-6, 6-7, 6-7, 7-5) ಅವರನ್ನು ಸೋಲಿಸಿ ಆಲ್ಕರಾಜ್ ಫೈನಲ್‌ಗೆ ತಲುಪಿದ್ದರು. ಫೈನಲ್‌ನಲ್ಲಿ ಮೊದಲ ಸೆಟ್ ಸೋತರೂ, ನಂತರದ ಮೂರು ಸೆಟ್‌ಗಳನ್ನು ಗೆದ್ದು ಆಧಿಪತ್ಯ ಸಾಧಿಸಿದರು. ಈ ಗೆಲುವಿನ ಬಳಿಕ, ಅವರು ಟೆನಿಸ್ ತಾರೆಯರ ಪುರುಷರ ವಿಭಾಗದ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ‘ವರ್ಲ್ಡ್ ನಂ.1’ ಎನ್ನಿಸಿಕೊಂಡಿದ್ದಾರೆ. ಲೈವ್ ರ್ಯಾಂಕಿಂಗ್‌ನಲ್ಲಿ ‘ಜನ್ನಿಕ್ ಸಿನ್ನರ್’ಗಿಂತ 3,350 ಪಾಯಿಂಟ್‌ಗಳ ಮುನ್ನಡೆಯಲ್ಲಿದ್ದಾರೆ.
ಅತೀ ಕಿರಿಯ ಅಂತಾರಾಷ್ಟ್ರೀಯ ಟೆನಿಸ್ ತಾರೆ ಆಲ್ಕರಾಜ್ ಅವರು ಸ್ಪೇನ್‌ನ ಮುರ್ಸಿಯಾ ಪ್ರಾಂತ್ಯದ ಎಲ್ ಪಾಲ್ಮಾರ್ ಎಂಬ ಚಿಕ್ಕ ಹಳ್ಳಿಯವರು. ಅವರು ಜನಿಸಿದ್ದು 2003ರ ಮೇ 5. ಈತ ಆಟ ಮತ್ತು ಸಾಧನೆ ಹಾಗೂ ಯಶಸ್ಸಿನಿಂದ ಮಾತ್ರವಷ್ಟೇ ಜಗತ್ತಿನ ಗಮನ ಸೆಳೆದಿಲ್ಲ. ತನ್ನ ಒರಟು ಕೋಪದಿಂದಲೂ ಜಗತ್ತಿನ ಚಿತ್ತ ಸೆಳೆದಾತ. ಕೋಪಿಷ್ಠ ಆಟಗಾರನೆಂದೇ ಕರೆಸಿಕೊಂಡಿರುವಾತ.
ಆಲ್ಕರಾಜ್‌ನ ತಂದೆ ಕಾರ್ಲೋಸ್ ಗೊಂಜಾಲೆಜ್ ಕೂಡ ಟೆನಿಸ್ ಆಟಗಾರನಾಗಿದ್ದರು. ಅವರು ರಾಷ್ಟ್ರೀಯ ಮಟ್ಟದಲ್ಲಿ ಆಡಿದ್ದರಾದರೂ, ಹಣದ ಕೊರತೆಯಿಂದ ಪ್ರೊಫೆಷನಲ್ ಆಗಲಿಲ್ಲ. ಅವರು ಮುರ್ಸಿಯಾದ ರಿಯಲ್ ಸೊಸೈಡಾಡ್ ಕ್ಲಬ್ ಡಿ ಕ್ಯಾಂಪೊದಲ್ಲಿ ಟೆನಿಸ್ ಕೋಚ್ ಮತ್ತು ಆಡಳಿತಗಾರರಾಗಿ ತಮ್ಮ ವೃತ್ತಿಯನ್ನು ಮುನ್ನಡೆಸಿದ್ದರು. ಆಲ್ಕರಾಜ್‌ನ ತಾತ ಕೂಡ ಟೆನಿಸ್ ಆಡುತ್ತಿದ್ದರು. ಹೀಗಾಗಿ ಟೆನಿಸ್ ಆಲ್ಕರಾಜ್‌ಗೆ ರಕ್ತಗತವಾಗಿಯೇ ಬಂದಿತ್ತು.
ಆಲ್ಕರಾಜ್ 4 ವರ್ಷದವನಿದ್ದಾಗಲೇ ಆತನಿಗೆ ತಂದೆ ಗೊಂಜಾಲೆಜ್ ‘ರ್‍ಯಾಕೆಟ್’ (ಟೆನಿಸ್ ಬ್ಯಾಟ್) ಕೊಡಿಸಿದ್ದರು. ಬಾಲ್ಯದಲ್ಲೇ ರೂಢಿಯಾದ ‘ಮುಂಗೋಪ’ವೇ ಆತನಿಗೆ ದೊಡ್ಡ ಸವಾಲಾಗಿತ್ತು. ಆಲ್ಕರಾಜ್ ತನ್ನ 4ರಿಂದ 10ನೇ ವಯಸ್ಸಿನವರೆಗೂ ಸೋಲನ್ನು ಸಹಿಸದ ‘ಬ್ಯಾಡ್ ಲೂಸರ್’ ಆಗಿದ್ದರು. ಆಟದಲ್ಲಿ ಉತ್ತಮ ಪ್ರದರ್ಶನ ನೀಡದಿದ್ದಾಗ ಅಥವಾ ಸೋತಾಗ ಭಾರೀ ಕೋಪ ಬರುತ್ತಿತ್ತು. ಕೋಪದಲ್ಲಿ ವಿಚತ್ರವಾಗಿ ವರ್ತಿಸುತ್ತಿದ್ದರು. ‘ರ್‍ಯಾಕೆಟ್’ ನೆಲಕ್ಕೆ ಬಡಿದು, ಮುರಿದುಹಾಕುತ್ತಿದ್ದರು. ‘ಸೋಲಿನ ನಂತರ ಮಾನಸಿಕವಾಗಿ ಕುಗ್ಗಿಹೋಗುತ್ತೇನೆ’ ಎಂದು ಸ್ವತಃ ಆಲ್ಕರಾಜ್ ಹೇಳಿಕೊಂಡಿದ್ದಾರೆ.

ಆತನ ಮೊದಲ ಕೋಚ್ ‘ಕಿಕೋ ನವಾರೋ’ ಹೇಳುವಂತೆ; “ಆಲ್ಕರಾಜ್ ಸೋಲನ್ನು ಸಹಿಸುತ್ತಿರಲಿಲ್ಲ. ಕೋಪದಿಂದ ರ್ಯಾಕೆಟ್‌ಗಳನ್ನು ಒಡೆದು ಹಾಕುತ್ತಿದ್ದ. ಆಟದ ಕೋರ್ಟ್‌ನಲ್ಲಿ ಅಳುತ್ತಾ ಕುಳಿತುಬಿಡುತ್ತಿದ್ದರು. ಕೋರ್ಟ್‌ಅನ್ನು ಬಿಟ್ಟು ಹೊರಬರುತ್ತಿರಲಿಲ್ಲ. ಆತನನ್ನು ಅಲ್ಲಿಂದ ಯಾರಾದರೂ ಎತ್ತಿಕೊಂಡು ಹೋಗಬೇಕಿತ್ತು. ಇತ್ತೀಚೆಗೆ, ಆತ ನನ್ನನ್ನು ತಾನು ನಿಯಂತ್ರಿಸುವುದನ್ನು ಕಲಿತಿದ್ದಾರೆ.”
ಈ ಲೇಖನ ಓದಿದ್ದೀರಾ?: ’20 ರೂಪಾಯಿಯ ಆ್ಯಸಿಡ್‌ನಿಂದ ಹೆಣ್ಣುಮಕ್ಕಳ ಬದುಕೇ ಬರ್ಬಾದು’; ವಿಚಾರಣೆ ವಿಳಂಬ, ನ್ಯಾಯ ಬಿಸಿಲು ಕುದುರೆ
ಆದಾಗ್ಯೂ, 2024ರ ಆಗಸ್ಟ್ 16ರಂದು ತನ್ನ ಪ್ರೊಫೆಷನಲ್‌ನ ಕರೆಯರ್‌ನಲ್ಲಿ ಮೊದಲ ಬಾರಿಗೆ ಸೋಲುಂಡ ಆಲ್ಕರಾಜ್, ತನ್ನ ಕೋಪವನ್ನು ಮತ್ತೊಮ್ಮೆ ಪ್ರದರ್ಶಿಸಿದ್ದರು. ಅಂದು ನಡೆದ ಸಿನ್ಸಿನ್ನಾಟಿ ಓಪನ್‌ನಲ್ಲಿ ಗೇಲ್ ಮೊನ್‌ಫಿಲ್ಸ್ ವಿರುದ್ಧದ ಮೂರು ಸೆಟ್‌ಗಳಲ್ಲಿ ಆಲ್ಕರಾಜ್ 3-1ಅಂತರದಲ್ಲಿ ಸೋಲುಂಡಿದ್ದರು. ಸೋಲಿನಿಂದ ಕುಪಿತಗೊಂಡ ಆತ, ಟೆನಿಸ್ ಕೋರ್ಟ್‌ನಲ್ಲಿಯೇ ‘ರ್‍ಯಾಕೆಟ್’ಅನ್ನು ನಾಲ್ಕು ಬಾರಿ ಜೋರಾಗಿ ನೆಲಕ್ಕೆ ಹೊಡೆದರು. ‘ರ್‍ಯಾಕೆಟ್’ ಮುರಿಯಿತು. ಆಟದ ವೀಕ್ಷಣೆಗಾಗಿ ನೆರೆದಿದ್ದವರು ಆಲ್ಕರಾಜ್ ವರ್ತನೆ ಕಂಡು ಆಶ್ಚರ್ಯಚಕಿತರಾದರು.
ಆ ಪಂದ್ಯವನ್ನು ಆಲ್ಕರಾಜ್, ‘ನನ್ನ ಕೆರಿಯರ್‌ನ ಅತ್ಯಂತ ಕೆಟ್ಟ ಮ್ಯಾಚ್’ ಎಂದು ಬಣ್ಣಿಸಿದ್ದಾರೆ. “ನಾನು ನನ್ನ ಪ್ರೊಫೆಷನಲ್ ಕರಿಯರ್‌ನಲ್ಲಿ ಎಂದಿಗೂ ಹೀಗೆ ಮಾಡಿಲ್ಲ. ಹಲವು ಸಂದರ್ಭದಲ್ಲಿ ತುಂಬಾ ಫ್ರಸ್ಟ್ರೇಟಿಂಗ್ ಆಗುತ್ತಿತ್ತು. ಕೆಲವೊಮ್ಮೆ ‘ರ್‍ಯಾಕೆಟ್’ ಮುರಿಯಬೇಕೆಂದು ಅನಿಸಿತು. ಆದರೆ, ನನ್ನನ್ನು ನಾನು ನಿಯಂತ್ರಿಸಿಕೊಳ್ಳುತ್ತಿದ್ದೆ. ಆದರೆ, ಇಂದು ನಿಯಂತ್ರಣ ಕಳೆದುಕೊಂಡೆ. ಹಾರ್ಟ್ ರೇಟ್ ಹೈ ಆಗಿದ್ದಾಗ ನಿಯಂತ್ರಿಸುವುದು ಕಷ್ಟ” ಎಂದು ಅವರು ಹೇಳಿಕೊಂಡಿದ್ದರು.
ನಂತರ ಎಕ್ಸ್‌ನಲ್ಲಿ ಕ್ಷಮೆಯಾಚಿಸಿ ಪೋಸ್ಟ್‌ಅನ್ನೂ ಅವರು ಹಂಚಿಕೊಂಡಿದ್ದರು. “ನನ್ನ ವರ್ತನೆ ಸರಿಯಾಗಿರಲಿಲ್ಲ… ಕೋರ್ಟ್‌ನಲ್ಲಿ ಇದು ಆಗಬಾರದಿತ್ತು. ಇದು ಮತ್ತೆ ಆಗದಂತೆ ಎಚ್ಚರವಹಿಸುತ್ತೇನೆ” ಎಂದಿದ್ದರು.
ಆಲ್ಕರಾಜ್ ಅವರನ್ನು ರಾಫೆಲ್ ನಡಾಲ್‌ನ ನಂತರದ ಸ್ಪ್ಯಾನಿಷ್ ದಿಗ್ಗಜ ಎಂದು ಕರೆಯಲಾಗುತ್ತದೆ.




