ಐಸಿಸಿ ಪುರುಷರ ಟಿ20 ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆಯ ವೇಳೆ ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ ಆರೋಪದ ಮೇಲೆ ಟೀಮ್ ಇಂಡಿಯಾದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ವಿರುದ್ಧ ದೂರು ದಾಖಲಾಗಿದೆ.
ವಕೀಲ ವಾಜಿದ್ ಖಾನ್ ಬಿದ್ಕರ್ ಅವರು ನವದೆಹಲಿಯ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಈ ದೂರು ಸಲ್ಲಿಸಿದ್ದಾರೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದ ಬಳಿಕ ಮೈದಾನದಲ್ಲಿ ನಡೆದ ಸಂಭ್ರಮಾಚರಣೆ ವೇಳೆ ಪಾಂಡ್ಯ ತ್ರಿವರ್ಣ ಧ್ವಜಕ್ಕೆ ಅವಮಾನ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೊಗಳ ಪ್ರಕಾರ, ಹಾರ್ದಿಕ್ ಪಾಂಡ್ಯ ರಾಷ್ಟ್ರಧ್ವಜವನ್ನು ಹೆಗಲ ಮೇಲೆ ಹೊದ್ದುಕೊಂಡು ಸಂಭ್ರಮಿಸುತ್ತಿರುವುದು ಕಂಡುಬಂದಿದೆ. ಆಚರಣೆಯ ವೇಳೆ ಅವರು ಧ್ವಜವನ್ನು ಮೈಗೆ ಸುತ್ತಿಕೊಂಡೇ ನೃತ್ಯ ಮಾಡಿದ್ದು ಮಾತ್ರವಲ್ಲದೆ, ಹಾಗೆಯೇ ವೇದಿಕೆಯ ಮೇಲೆ ಮಲಗಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ. ಇದೇ ವೇಳೆ, ಪಾಂಡ್ಯ ತಮ್ಮ ಟಿ20 ವಿಶ್ವಕಪ್ ಗೆಲುವಿನ ಶ್ರೇಯಸ್ಸನ್ನು ಗೆಳತಿ ಮಹಿಕಾ ಶರ್ಮಾ ಅವರಿಗೆ ಸಲ್ಲಿಸಿದ್ದರು.
ಈ ಕುರಿತು ಸಂಸ್ಥೆಯೊಂದಿಗೆ ಮಾತನಾಡಿರುವ ದೂರುದಾರ ವಾಜಿದ್ ಖಾನ್, “ಟಿ20 ವಿಶ್ವಕಪ್ ಸಂಭ್ರಮಾಚರಣೆಯನ್ನು ನೀವೆಲ್ಲರೂ ನೋಡಿರಬಹುದು. ಹಾರ್ದಿಕ್ ಪಾಂಡ್ಯ ಗೆಲುವಿನ ಖುಷಿಯಲ್ಲಿ ತಮ್ಮ ಗೆಳತಿಯೊಂದಿಗೆ ನೃತ್ಯ ಮಾಡುತ್ತಿದ್ದರು. ಆ ಸಮಯದಲ್ಲಿ ಅವರ ಬೆನ್ನಿಗೆ ರಾಷ್ಟ್ರಧ್ವಜವನ್ನು ಕಟ್ಟಲಾಗಿತ್ತು,” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಯುದ್ಧ ನಿಲ್ಲಲ್ಲ, ಹಾರ್ಮುಜ್ ತೆರೆಯಲ್ಲ: ಟ್ರಂಪ್‌ಗೆ ಇರಾನ್ ಸಡ್ಡು
“1971ರ ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆಯ ಸೆಕ್ಷನ್ 2ರ ಪ್ರಕಾರ, ನಾವು ರಾಷ್ಟ್ರಧ್ವಜದ ಘನತೆಯನ್ನು ಕಾಪಾಡಬೇಕು. ಆದರೆ, ಗೆಲುವಿನ ಸಂಭ್ರಮದ ಅಮಲಿನಲ್ಲಿ ಪಾಂಡ್ಯ ಅವರು ರಾಷ್ಟ್ರಧ್ವಜವನ್ನು ಮೈಗೆ ಸುತ್ತಿಕೊಂಡೇ ತಮ್ಮ ಗೆಳತಿಯೊಂದಿಗೆ ಮಲಗಿದ್ದರು. ಇದು ರಾಷ್ಟ್ರಧ್ವಜಕ್ಕೆ ಮಾಡಿದ ಅಪಮಾನ ಎಂದು ನಾನು ಭಾವಿಸುತ್ತೇನೆ. ಈ ಕೃತ್ಯವು ಕಾಯ್ದೆಯ ಉಲ್ಲಂಘನೆಯಾಗಿದೆ” ಎಂದು ಖಾನ್ ವಾದಿಸಿದ್ದಾರೆ.
ಘಟನೆ ಅಹಮದಾಬಾದ್‌ನಲ್ಲಿ ನಡೆದಿರುವುದರಿಂದ ಪ್ರಕರಣದ ವ್ಯಾಪ್ತಿಯ ಬಗ್ಗೆ ಪೊಲೀಸರು ಮೊದಲು ಪ್ರಶ್ನಿಸಿದರು ಎಂದು ಖಾನ್ ತಿಳಿಸಿದ್ದಾರೆ. “ನಾನು ದೂರು ನೀಡಲು ಹೋದಾಗ, ಘಟನೆ ಅಲ್ಲಿ ನಡೆದಿದೆ, ಇಲ್ಲಲ್ಲ ಎಂದು ಪೊಲೀಸರು ಹೇಳಿದರು. ಆದರೆ, ರಾಷ್ಟ್ರಧ್ವಜವು ಇಡೀ ದೇಶವನ್ನು ಪ್ರತಿನಿಧಿಸುವ ಸಂಕೇತವಾಗಿರುವುದರಿಂದ ನಾವು ಇಲ್ಲಿಯೇ ದೂರು ದಾಖಲಿಸಬಹುದು ಎಂದು ನಾನು ಪಟ್ಟು ಹಿಡಿದೆ. ಬಳಿಕ ಅವರು ನನ್ನ ದೂರು ಸ್ವೀಕರಿಸಿ, ನನಗೆ ಒಂದು ಪ್ರತಿಯನ್ನು ನೀಡಿದ್ದಾರೆ,” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಶಿವಾಜಿನಗರ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ದೂರು ಸ್ವೀಕರಿಸಿರುವುದನ್ನು ಖಚಿತಪಡಿಸಿದ್ದಾರೆ. ಆದರೆ, ಮುಂದಿನ ಕಾನೂನು ಕ್ರಮಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡಿಲ್ಲ.
ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 96 ರನ್‌ಗಳಿಂದ ಮಣಿಸುವ ಮೂಲಕ ಭಾರತ ತನ್ನ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಯಶಸ್ವಿಯಾಗಿ ಉಳಿಸಿಕೊಂಡಿದೆ. ಈ ಗೆಲುವು ಭಾರತೀಯ ಕ್ರಿಕೆಟ್ ತಂಡಕ್ಕೆ ಹಲವು ಐತಿಹಾಸಿಕ ಮೈಲಿಗಲ್ಲುಗಳನ್ನು ನಿರ್ಮಿಸಿದೆ. ತವರಿನಲ್ಲಿ ಟಿ20 ವಿಶ್ವಕಪ್ ಗೆದ್ದ ಮೊದಲ ತಂಡ, 2024ರ ಗೆಲುವಿನ ನಂತರ ಸತತವಾಗಿ ಪ್ರಶಸ್ತಿ ಗೆದ್ದ ಮೊದಲ ತಂಡ ಹಾಗೂ 2007 ಮತ್ತು 2024ರ ನಂತರ ಮೂರನೇ ಬಾರಿಗೆ ಈ ಟ್ರೋಫಿಯನ್ನು ಮುಡಿಗೇರಿಸಿಕೊಂಡ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಟೀಮ್ ಇಂಡಿಯಾ ಪಾತ್ರವಾಗಿದೆ.





