ಕನಸು ಕಾಣಲು ಕಣ್ಣುಗಳೇ ಬೇಕು ಎಂಬ ನಂಬಿಕೆಯನ್ನು ಸುಳ್ಳು ಎಂದು ಸಾಬೀತುಪಡಿಸಿದ ಸಾಹಸಿ ದೀಪಿಕಾ ಟಿ ಸಿ. ಅವರ ಜೀವನವೇ ಸ್ಫೂರ್ತಿಯ ಪಯಣ. ದೃಷ್ಟಿ ದೋಷ, ಆರ್ಥಿಕ ಸಂಕಷ್ಟ, ಸಮಾಜದ ಕೀಳರಿಮೆ—ಎಲ್ಲವನ್ನೂ ಮೀರಿ ತ್ರಿವರ್ಣ ಧ್ವಜವನ್ನು ಜಾಗತಿಕ ವೇದಿಕೆಯಲ್ಲಿ ಎತ್ತಿಹಿಡಿದ ಕ್ಷಣ, ಕೇವಲ ಅವರ ವೈಯಕ್ತಿಕ ಜಯವಲ್ಲ; ಇದು ಅಂಧರ ಕ್ರೀಡೆಗೂ ಮತ್ತು ಭಾರತದ ಹೆಗ್ಗಳಿಕೆಗೆ ಮಹತ್ವದ ಮೈಲುಗಲ್ಲು. ದೀಪಿಕಾ ಅವರ ಕಥೆ, ಸಂಕಷ್ಟಗಳ ಮಧ್ಯೆಯೂ ಸಾಧಿಸಿ ತೋರುವ ಧೈರ್ಯಕ್ಕೆ ಜೀವಂತ ಉದಾಹರಣೆ
ಕಣ್ಣುಗಳು ಜಗತ್ತನ್ನು ನೋಡದಿದ್ದರೂ ಕನಸುಗಳು ಆಕಾಶವನ್ನೇ ಮುಟ್ಟಬಲ್ಲವು ಎಂಬುದಕ್ಕೆ ಕರ್ನಾಟಕದ ತುಮಕೂರು ಮೂಲದ ದೀಪಿಕಾ ಟಿ ಸಿ ಅವರು ಜೀವಂತ ಸಾಕ್ಷಿ. ಶ್ರೀಲಂಕಾದ ಕೊಲಂಬೋದಲ್ಲಿ ನಡೆದ ಚೊಚ್ಚಲ ಅಂಧರ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ದೀಪಿಕಾ ನಾಯಕತ್ವದ ಭಾರತೀಯ ತಂಡ ಅಜೇಯ ಚಾಂಪಿಯನ್ ಆಯಿತು. ಫೈನಲ್‌ನಲ್ಲಿ ನೇಪಾಳವನ್ನು 7 ವಿಕೆಟ್‌ಗಳಿಂದ ಸೋಲಿಸಿ ಟ್ರೋಫಿ ಎತ್ತಿದ ತಂಡವು ಟೂರ್ನಿಯುದ್ದಕ್ಕೂ ಅಪ್ರತಿಮ ಪ್ರದರ್ಶನ ತೋರಿತು. ಇದಕ್ಕೂ ಮುಂಚೆ, 2023ರ ಆಗಸ್ಟ್‌ನಲ್ಲಿ ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ IBSA ವಿಶ್ವ ಕ್ರೀಡಾಕೂಟದ (ಚೊಚ್ಚಲ ಅಂಧರ ಮಹಿಳಾ ಟಿ20 ಸ್ಪರ್ಧೆ) ಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು 9 ವಿಕೆಟ್‌ಗಳಿಂದ ಸೋಲಿಸಿ ಚಿನ್ನ ಗೆದ್ದಿತ್ತು. ಎರಡೂ ಬಾರಿ ದೀಪಿಕಾ ನೇತೃತ್ವದಲ್ಲಿ ತ್ರಿವರ್ಣ ಧ್ವಜ ಎತ್ತಿ ಹಾರಾಡುವ ದೃಶ್ಯ ದೇಶಕ್ಕೆ ಹೆಮ್ಮೆ ತಂದಿತು. ನಮ್ಮ ಕರ್ನಾಟಕದ ತುಮಕೂರಿನ ದೀಪಿಕಾ ದೃಷ್ಟಿ ದೋಷವಿದ್ದರೂ ದೃಷ್ಟಿಕೋನದಲ್ಲಿ ಸ್ಪಷ್ಟತೆ ಇದ್ದರೆ ಜಗತ್ತನ್ನೇ ಗೆಲ್ಲಬಹುದು ಎಂದು ಅವರು ಸಾಧಿಸಿ ತೋರಿಸಿದ್ದಾರೆ.
ಹುಟ್ಟು ಮತ್ತು ಕೌಟುಂಬಿಕ ಹಿನ್ನೆಲೆ
ದೀಪಿಕಾ ಟಿ ಸಿ ಅವರು ಕರ್ನಾಟಕದ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಚಿಕ್ಕತಿಮ್ಮನಹಳ್ಳಿ ಗ್ರಾಮದಲ್ಲಿ, ಬಡ ಕೃಷಿಕರ ಕುಟುಂಬದಲ್ಲಿ ಜನಿಸಿದರು. ತಂದೆ ಚಿಕ್ಕತಿಮ್ಮಪ್ಪ ಮತ್ತು ತಾಯಿ ಚಿತ್ರಮ್ಮ – ಇಬ್ಬರೂ ಕೃಷಿ ಕೂಲಿಕಾರ್ಮಿಕರು. ಬಡ ಕುಟುಂಬದಲ್ಲಿ ದೀಪಿಕಾ ಬಾಲ್ಯದಿಂದಲೇ ಕಷ್ಟ-ಸವಾಲುಗಳನ್ನು ಎದುರಿಸುತ್ತ ಬೆಳೆಯಬೇಕಾಯಿತು. ಸುಲಭ ಜೀವನವಿಲ್ಲದಿದ್ದರೂ, ಹಳ್ಳಿಯ ಮಣ್ಣಿನ ಪರಿಸರ ಮತ್ತು ಪರಿಶ್ರಮದ ಮೌಲ್ಯಗಳು ಬಾಲ್ಯದಲ್ಲೇ ಅವರ ವ್ಯಕ್ತಿತ್ವವನ್ನು ರೂಪಿಸಿವೆ.
ಮೂಲತಃ ಕೃಷಿಕರಾದ ತಂದೆ-ತಾಯಿ ಮಗಳ ಭವಿಷ್ಯದ ಬಗ್ಗೆ ಅಪಾರ ಕಾಳಜಿ ಹೊಂದಿದ್ದರೂ, ಆದರೆ ಜೀವನದ ಸನ್ನಿವೇಶಗಳು ಅನಿರೀಕ್ಷಿತ ತಿರುವು ನೀಡಿದವು. ದೀಪಿಕಾ ಅವರು ಹುಟ್ಟಿನಿಂದಲೇ ಅಥವಾ ಬಾಲ್ಯದಲ್ಲೇ ದೃಷ್ಟಿ ಸಮಸ್ಯೆಯನ್ನು ಎದುರಿಸಬೇಕಾಯಿತು. 5 ತಿಂಗಳು ಮಗುವಿದ್ದಾಗ ಉಗುರಿನಿಂದ ಪರಚಿಕೊಂಡ ಕಾರಣ ಬಲಕಣ್ಣಿನ ದೃಷ್ಟಿ ಹೋಯಿತು. ವೈದ್ಯರಿಗೆ ತೋರಿಸಿದರೆ ಮಗುವಿಗೆ ಶಸ್ತ್ರಚಿಕಿತ್ಸೆ ಮಾಡುವುದು ಸೂಕ್ತವಾಗುವುದಿಲ್ಲ.10 ವರ್ಷದ ಮೇಲೆ ಬನ್ನಿ ಎಂದು ಹೇಳಿದ್ದರಂತೆ. 12 ವರ್ಷದ ನಂತರ ಹೋದಾಗ ಶಸ್ತ್ರಚಿಕಿತ್ಸೆ ಮಾಡಬಹುದು ಆದರೆ ದೃಷ್ಟಿಬರುವುದು ಖಚಿತವಿಲ್ಲ ಎಂದು ಹೇಳಿದ್ದರಂತೆ. ತಂದೆ ಸಾಲ ಮಾಡಿ ಪ್ರಯತ್ಸಿಸಿದಾಗ ದೀಪಿಕಾ ಅವರೇ ಬೇಡ ಎಂದು ಹೇಳಿದ್ದರಂತೆ. “ನಮ್ಮ ಮಗಳು ಖಂಡಿತ ಏನನ್ನಾದರೂ ಸಾಧಿಸಬಲ್ಲಳು” ಎಂಬ ನಿಶ್ಚಯ ಮತ್ತು ವಿಶ್ವಾಸ ಅವರನ್ನು ಸದಾ ದೀಪಿಕಾ ಅವರ ಬೆನ್ನಿಗೆ ನಿಲ್ಲುವಂತೆ ಮಾಡಿತು. ಅವರ ಪ್ರೋತ್ಸಾಹ, ಹೋರಾಟಕ್ಕೆ ಬೇಕಾದ ಧೈರ್ಯ, ಮತ್ತು ಮಗಳ ಸಾಮರ್ಥ್ಯದ ಮೇಲಿನ ನಂಬಿಕೆಯೇ ದೀಪಿಕಾ ಅವರ ಮುಂದಿನ ಬದುಕಿಗೆ ದೃಢವಾದ ಬುನಾದಿಯಾಯಿತು.

ಬಾಲ್ಯ ಮತ್ತು ಶಿಕ್ಷಣ: ಕತ್ತಲೆಯೊಂದಿಗಿನ ಸೆಣಸಾಟ
ದೀಪಿಕಾ ಅವರ ಬಾಲ್ಯದ ದಿನಗಳು ಇತರ ಮಕ್ಕಳಂತೆ ಸಂತಸದಿಂದರಲಿಲ್ಲ. ದೃಷ್ಟಿದೋಷವಿದ್ದ ಕಾರಣ, ಸಾಮಾನ್ಯ ಶಾಲೆಯಲ್ಲಿ ಕಲಿಯುವುದು ಮತ್ತು ಆಟವಾಡುವುದು ಅವರಿಗೆ ಸವಾಲಾಗಿತ್ತು. ಓದುವಾಗ ಅಕ್ಷರಗಳು ಮಸುಕಾಗಿ ಕಾಣುವುದು, ಕಪ್ಪುಹಲಗೆಯ ಮೇಲಿನ ಬರಹಗಳು ಕಾಣದಿರುವುದು ದೀಪಿಕಾ ಅವರನ್ನು ಮಾನಸಿಕವಾಗಿ ಕುಗ್ಗಿಸುವಂತಿತ್ತು. ಆದರೆ, ದೀಪಿಕಾ ಸೋಲೊಪ್ಪಿಕೊಳ್ಳುವವರಲ್ಲ. ತಮ್ಮ ದೃಷ್ಟಿ ದೋಷವನ್ನು ಅವರು ತಮ್ಮ ದೌರ್ಬಲ್ಯವಾಗಿಸಿಕೊಳ್ಳದೆ, ಅದನ್ನೇ ಶಕ್ತಿಯನ್ನಾಗಿ ಪರಿವರ್ತಿಸಿಕೊಂಡರು. ಕುಣಿಗಲ್, ಮೈಸೂರಿನಲ್ಲಿ ತಮ್ಮ ಶಾಲಾ ದಿನಗಳನ್ನು ಕಳೆದರು. ಇಲ್ಲಿಯೇ ಅವರ ಬದುಕಿನ ದಿಕ್ಕು ಬದಲಾಗಿದ್ದು. ಶಿಕ್ಷಣದ ಜೊತೆಗೆ ಕ್ರೀಡೆಯತ್ತಲೂ ಅವರಿಗೆ ಆಸಕ್ತಿ ಮೂಡಲು ಈ ಪರಿಸರ ಕಾರಣವಾಯಿತು.
ಇದನ್ನು ಓದಿದ್ದೀರಾ? ಪೂರ್ವಜರ ನಾಡಿನಲ್ಲಿ ‘ಫ್ರೀಡಂ ಬೇಬಿ’ಯ ಐತಿಹಾಸಿಕ ಶತಕ: ಹರಿಣಗಳ ನಾಡಿನ ‘ಸೆನುರಾನ್ ಮುತ್ತುಸ್ವಾಮಿ’ ಹಿನ್ನಲೆಯೇ ರೋಚಕ
ಕ್ರಿಕೆಟ್ನತ್ತ ಒಲವು ಮತ್ತು ಆರಂಭಿಕ ಪಯಣ
ಕ್ರಿಕೆಟ್ ಸಾಮಾನ್ಯವಾಗಿ ಕಣ್ಣುಗಳ ಮೂಲಕ ಚೆಂಡಿನ ಚಲನವಲನವನ್ನು ಅವಲೋಕಿಸಿ ಆಡುವ ಆಟ. ಆದರೆ ಅಂಧರ ಕ್ರಿಕೆಟ್‌ನಲ್ಲಿ ದೃಷ್ಟಿಗಿಂತ ಶ್ರವಣಶಕ್ತಿ ಮತ್ತು ಅಂತಃಪ್ರಜ್ಞೆ ಮುಖ್ಯ. ಚೆಂಡಿನೊಳಗೆ ಹಾಕಿರುವ ಗೆಜ್ಜೆಗಳ ಶಬ್ದ, ಮೈದಾನದಲ್ಲಿನ ತಂಡದ ಸದಸ್ಯರ ಸೂಚನೆಗಳು—ಇವೆಲ್ಲ ಆಟಗಾರರಿಗೆ ದಾರಿ ತೋರಿಸುತ್ತವೆ. ದೀಪಿಕಾ ಅವರಿಗೆ ಬಾಲ್ಯದಿಂದಲೇ ಆಟೋಟಗಳ ಬಗ್ಗೆ ಅಪಾರ ಆಸಕ್ತಿ. ಶಾಲೆಯ ದಿನಗಳಲ್ಲಿ ಅವರು ಥ್ರೋಬಾಲ್, ಅಥ್ಲೆಟಿಕ್ಸ್ ಮುಂತಾದ ಕ್ರೀಡಾಕ್ಷೇತ್ರಗಳಲ್ಲಿ ಚುರುಕಾಗಿ ಪಾಲ್ಗೊಂಡಿದ್ದರು. ಆದರೆ ಮೊದಲ ಬಾರಿಗೆ ಕ್ರಿಕೆಟ್ ಬ್ಯಾಟ್ ಹಿಡಿದ ಕ್ಷಣವೇ, ಈ ಆಟವೇ ತಮ್ಮ ಜೀವನದ ನಿಜವಾದ ದಿಕ್ಕು ಎಂದು ಅವರಿಗೆ ಅರಿತುಬಂದಿತು. ಅವರ ಆಟದ ಶೈಲಿ, ಕೌಶಲ್ಯ ಹಾಗೂ ಸಮರ್ಪಣೆಯನ್ನು ಗಮನಿಸಿದ ತರಬೇತುದಾರರು ದೀಪಿಕಾಗೆ ವಿಶೇಷವಾಗಿ ಮಾರ್ಗದರ್ಶನ ನೀಡಿದರು. ನಿರಂತರ ಅಭ್ಯಾಸ ಮತ್ತು ಶ್ರಮದ ಫಲವಾಗಿ ಅವರು ಕರ್ನಾಟಕ ಅಂಧರ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದರು. ಆಲ್‌ರೌಂಡರ್ ಆಗಿ, ಬ್ಯಾಟಿಂಗ್‌ನಲ್ಲೂ ಬೌಲಿಂಗ್‌ನಲ್ಲೂ ತಮ್ಮದೇ ಆದ ಸಾಮರ್ಥ್ಯ ತೋರಿಸುತ್ತಾ, ರಾಜ್ಯ ಮಟ್ಟದ ಹಲವು ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಈ ಸಾಧನೆಗಳು ಅವರನ್ನು ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುವಂತೆ ಮಾಡಿತು. ಭಾಗಶಃ ದೃಷ್ಟಿ ಹೊಂದಿರುವ B3 ವರ್ಗದ ಆಟಗಾರ್ತಿಯಾಗಿ ದೀಪಿಕಾ ತಂಡದ ಪ್ರಮುಖ ಆಧಾರವಾದರು. ಅವರ ಧೈರ್ಯ, ಶ್ರದ್ಧೆ ಮತ್ತು ಆಟದ ಮೇಲಿನ ಅದಮ್ಯ ಪ್ರೀತಿಯೇ ಅವರ ಯಶಸ್ಸಿನ ಅಡಿಗಲ್ಲುಗಳಾಗಿವೆ.
ನಾಯಕತ್ವದ ಹೊಣೆ ಮತ್ತು ಸವಾಲುಗಳು
ಆಟಗಾರ್ತಿಯಾಗಿ ಯಶಸ್ವಿಯಾಗುವುದು ಬೇರೆ, ಒಂದು ತಂಡವನ್ನು ಮುನ್ನಡೆಸುವುದು ಬೇರೆ. ಭಾರತೀಯ ಅಂಧರ ಮಹಿಳಾ ಕ್ರಿಕೆಟ್ ತಂಡದ ನಾಯಕಿಯಾಗಿ ಆಯ್ಕೆಯಾದಾಗ ದೀಪಿಕಾ ಅವರ ಹೆಗಲ ಮೇಲೆ ದೊಡ್ಡ ಜವಾಬ್ದಾರಿ ಬಂತು. ತಂಡದ ಆಟಗಾರರು ದೇಶದ ವಿವಿಧ ಮೂಲೆಗಳಿಂದ ಬಂದವರು. ಭಾಷೆ ಬೇರೆ, ಸಂಸ್ಕೃತಿ ಬೇರೆ. ಆದರೆ ನಾಯಕಿಯಾಗಿ ದೀಪಿಕಾ ಅವರೆಲ್ಲರನ್ನೂ ಒಂದುಗೂಡಿಸಿದರು. ಮೈದಾನದಲ್ಲಿ ಆಕ್ರಮಣಕಾರಿ ಆಟ, ಮೈದಾನದ ಹೊರಗೆ ಶಾಂತ ಸ್ವಭಾವ – ಇದು ದೀಪಿಕಾ ಅವರ ಶೈಲಿ. ಆರ್ಥಿಕ ಸಂಕಷ್ಟಗಳು, ಪ್ರಾಯೋಜಕರ ಕೊರತೆ, ಮಹಿಳಾ ಕ್ರಿಕೆಟ್ ಬಗ್ಗೆ ಇದ್ದ ತಾತ್ಸಾರ – ಈ ಎಲ್ಲವನ್ನೂ ಮೆಟ್ಟಿ ನಿಂತು ದೀಪಿಕಾ ತಮ್ಮ ತಂಡವನ್ನು ಬಲಿಷ್ಠವಾಗಿ ರೂಪಿಸಿದರು.

2023ರ ಐತಿಹಾಸಿಕ ವಿಶ್ವಕಪ್ ಗೆಲುವು
2023ರಲ್ಲಿ ಇಂಗ್ಲೆಂಡಿನ ಬರ್ಮಿಂಗ್‌ಹ್ಯಾಮ್‌ನಲ್ಲಿ ಆಯೋಜಿಸಲಾದ IBSA ವಿಶ್ವ ಕ್ರೀಡಾಕೂಟದಲ್ಲಿ ಮೊದಲ ಬಾರಿಗೆ ಅಂಧರ ಮಹಿಳಾ ಕ್ರಿಕೆಟ್ ಸೇರಿಸಲಾಯಿತು. ಇದು ದೀಪಿಕಾ ಮತ್ತು ಭಾರತೀಯ ತಂಡಕ್ಕೆ ತಮ್ಮ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸುವ ಅಪರೂಪದ ಅವಕಾಶವಾಗಿತ್ತು. ಲೀಗ್ ಹಂತದಲ್ಲಿ ಭಾರತ ತಂಡ ಅಪ್ರತಿಮ ಪ್ರದರ್ಶನ ನೀಡಿತು. ಆಸ್ಟ್ರೇಲಿಯಾ, ಇಂಗ್ಲೆಂಡ್ಂತಹ ಬಲಿಷ್ಠ ತಂಡವನ್ನು ಸೋಲಿಸಿ, ದೀಪಿಕಾ ಅವರ ಶಾಂತ–ದೃಢ ನಾಯಕತ್ವದಲ್ಲಿ ಅಜೇಯವಾಗಿ ಫೈನಲ್‌ಗೆ ಪ್ರವೇಶಿಸಿತು. ಫೈನಲ್‌ನಲ್ಲಿ ಎದುರಾಳಿಯಾಗಿದ್ದ ಆಸ್ಟ್ರೇಲಿಯಾದ ಮೇಲೆ ಭಾರತೀಯ ತಂಡ ತೀವ್ರ ಒತ್ತಡ ಹೇರಿತು. ಮಳೆಯ ಅಡ್ಡಿಯ ನಡುವೆಯೂ ಭಾರತೀಯ ಬೌಲರ್‌ಗಳ ಶಿಸ್ತುಬದ್ಧ ಬೌಲಿಂಗ್ ಮತ್ತು ಫೀಲ್ಡಿಂಗ್ ಎದುರಾಳಿಗಳನ್ನು ಕಡಿಮೆ ಮೊತ್ತಕ್ಕೆ ಸೀಮಿತಗೊಳಿಸಿತು. ನಂತರ ಗುರಿ ಬೆನ್ನಟ್ಟುವಾಗ ದೀಪಿಕಾ ಅವರ ತಾಳ್ಮೆಯ ದಾರಿಯಲ್ಲಿ ಭಾರತ ಸುಲಭವಾಗಿ 9 ವಿಕೆಟ್‌ಗಳಿಂದ ಸೋಲಿಸಿ ಐತಿಹಾಸಿಕ ಜಯ ದಾಖಲಿಸಿತು. ಚಿನ್ನದ ಪದಕವನ್ನು ಕೈಯಲ್ಲಿ ಹಿಡಿದು ಟ್ರೋಫಿಯನ್ನು ಎತ್ತಿದ ದೀಪಿಕಾ ಅವರ ಆ ಮಹತ್ವದ ಕ್ಷಣ, ಇಡೀ ದೇಶವೇ ಹೆಮ್ಮೆ ಪಡುವಂತೆ ಮಾಡಿದರು.ಅದು ಜಯಿಸಿದ್ದು ಪಂದ್ಯವಷ್ಟೇ ಅಲ್ಲ, ಅಂಧರ ಕ್ರೀಡಾಪಟುಗಳ ನಡೆಯನ್ನು ಬದಲಿಸಿದ ಧೈರ್ಯ ಮತ್ತು ಸಾಮರ್ಥ್ಯದ ಘೋಷಣೆ ಅದಾಗಿತ್ತು.
ಆಟದ ಶೈಲಿ ಮತ್ತು ವಿಶೇಷತೆ
ದೀಪಿಕಾ ಒಬ್ಬ ಪರಿಪೂರ್ಣ ಆಲ್‌ರೌಂಡರ್ ಎಂಬುದು ಅವರ ಆಟದ ಪ್ರತಿಯೊಂದು ಅಂಶದಿಂದ ಸ್ಪಷ್ಟವಾಗುತ್ತದೆ. ಬ್ಯಾಟಿಂಗ್‌ನಲ್ಲಿ ಅವರು ಬಲಗೈ ಬ್ಯಾಟರ್ ಆಗಿ ಬಿಕ್ಕಟ್ಟಿನ ಕ್ಷಣಗಳಲ್ಲೂ ತಾಳ್ಮೆ ಕಳೆದುಕೊಳ್ಳದೆ, ಅಗತ್ಯವಿದ್ದಾಗ ಹೊಣೆ ಹೊತ್ತು ಬೌಂಡರಿಗಳನ್ನು ಬಾರಿಸುವ ಸಾಮರ್ಥ್ಯ ಹೊಂದಿದ್ದಾರೆ. ತಂಡಕ್ಕೆ ಸ್ಥೈರ್ಯ ನೀಡುವ ಮಧ್ಯಮ ಕ್ರಮದ ಸಾಂದರ್ಭಿಕ ಆಟಗಾರ್ತಿ ಎಂಬ ಹೆಗ್ಗಳಿಕೆ ಇವರಿಗೆ ಸರಿ ಹೊಂದುತ್ತದೆ. ಬೌಲಿಂಗ್‌ನಲ್ಲಿ ದೀಪಿಕಾ ವಿಕೆಟ್ ಪಡೆಯುವ ಚಾಕಚಕ್ಯತೆಯಿಂದ ಹೆಸರುವಾಸಿ; ಎದುರಾಳಿ ಬ್ಯಾಟರ್‌ಗಳ ಮನೋಭಾವವನ್ನು ಗ್ರಹಿಸಿ, ತಕ್ಷಣಕ್ಕೆ ಬೌಲಿಂಗ್ ರೀತಿಯನ್ನು ಬದಲಾಯಿಸುವ ನಿಪುಣತೆ ಇವರ ಯಶಸ್ಸಿನ ಕೀಲಿಕೈ. ದೃಷ್ಟಿ ದೋಷವಿದ್ದರೂ, ಫೀಲ್ಡಿಂಗ್‌ನಲ್ಲಿ ದೀಪಿಕಾ ಅಸಾಧಾರಣ. ಚೆಂಡಿನ ಸದ್ದು ಮತ್ತು ದಿಕ್ಕನ್ನು ಅರ್ಥಮಾಡಿಕೊಂಡು ಕ್ಷಣಾರ್ಧದಲ್ಲಿ ಡೈವ್ ಹೊಡೆದು ಚೆಂಡನ್ನು ತಡೆಯುವ ಇವರ ಚುರುಕುತನ ತಂಡಕ್ಕೆ ಅಮೂಲ್ಯ. ಎಲ್ಲ ವಿಭಾಗಗಳಲ್ಲೂ,ಇಂತಹ ಸಮತೋಲನ ತೋರಿಸುವ ದೀಪಿಕಾ ನಿಜವಾದ ಆಲ್‌ರೌಂಡರ್.
ಆಟದ ಹೊರಗೆ ಮೃದು ಸ್ವಾಭಾವ
ದೀಪಿಕಾ ಮೈದಾನದಲ್ಲಿ ಎಷ್ಟು ಕಠಿಣವಾಗಿ ಹೋರಾಡುತ್ತಾರೋ, ಹೊರಗೆ ಅಷ್ಟೇ ಮೃದು ಮತ್ತು ಸರಳ ಜೀವನ ನಡೆಸುವವರು. ತಂದೆ-ತಾಯಿಯ ಕಷ್ಟವನ್ನು ಹತ್ತಿರದಿಂದ ಕಂಡ ಕಾರಣ, ಯಶಸ್ಸಿನ ಮಧ್ಯೆಯೂ ಅಹಂಕಾರ ಇಲ್ಲ. ಕ್ರಿಕೆಟ್‌ನ ಸಾಧನೆಯ ಕಾರಣದಿಂದ ಮುಂಬೈನ ಆದಾಯ ತೆರಿಗೆ ಇಲಾಖೆಯಲ್ಲಿ ನೌಕರಿ ಲಭಿಸಿರುವ ಕಾರಣ ಕುಟುಂಬಕ್ಕೆ ಆದಾರವಾಗಿದ್ದಾರೆ. “ನನ್ನ ಸಾಧನೆ ನನ್ನೊಬ್ಬಳದ್ದಲ್ಲ, ಅದು ತಂಡದ ಶ್ರಮ ಮತ್ತು ಪೋಷಕರ ತ್ಯಾಗದ ಫಲ” ಎನ್ನುವ ಆಕೆಯ ವಿನಮ್ರತೆ ಎಲ್ಲರನ್ನೂ ಸೆಳೆಯುತ್ತದೆ. “ದೃಷ್ಟಿ ಇಲ್ಲದಿರಬಹುದು, ಆದರೆ ನಾವು ಯಾರಿಗೂ ಕಡಿಮೆಯಲ್ಲ. ಅವಕಾಶ ಸಿಕ್ಕರೆ ಜಗತ್ತನ್ನೇ ಗೆಲ್ಲಬಲ್ಲೆವು. ಕನಸು ಕಾಣಲು ಕಣ್ಣುಗಳೇ ಬೇಕಿಲ್ಲ, ಮನಸ್ಸು ಇದ್ದರೆ ಸಾಕು” ಎನ್ನುವ ದೀಪಿಕಾ ಅವರ ಸಂದೇಶವು ಗುರಿ ಸಾಧಿಸುವ ಪ್ರತಿಯೊಬ್ಬರಿಗೂ ಪ್ರೇರಣಾದಾಯಕ.
ತುಮಕೂರಿನ ಒಂದು ಚಿಕ್ಕ ಹಳ್ಳಿಯಿಂದ ಬಂದ ದೀಪಿಕಾ ಟಿ.ಸಿ. ಅವರ ಕಥೆ ಹೋರಾಟದಿಂದ ಸಾಧನೆ ಮಾಡಿದವರ ನಿಜವಾದ ಉದಾಹರಣೆ. ಬಡತನ, ದೃಷ್ಟಿ ದೋಷ, ಮತ್ತು ಸಮಾಜದ ಕೀಳರಿಮೆ, ಇವುಗಳೆಲ್ಲ ಅವರ ಮುಂದೆ ದೊಡ್ಡ ಅಡೆತಡೆಗಳಾಗಿದ್ದರೂ, ದೀಪಿಕಾ ಅವುಗಳನ್ನು ಒಂದೊಂದಾಗಿ ಜಯಿಸಿ ಇಂದು ಚಾಂಪಿಯನ್ ಆಗಿ ನಿಂತಿದ್ದಾರೆ. ವಿಶ್ವದ ಕ್ರಿಕೆಟ್ ಕಾಶಿ ಎನಿಸಿಕೊಂಡ ಇಂಗ್ಲೆಂಡ್‌ನ ಮೈದಾನದಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಕ್ಷಣ, ಅವರ ಪರಿಶ್ರಮ ಮತ್ತು ಛಲಕ್ಕೆ ದೊರೆತ ಸಾರ್ಥಕ ಪ್ರಶಸ್ತಿ. ಕರ್ನಾಟಕದವರಾದ ಅವರು ಮುಂದಿನ ದಿನಗಳಲ್ಲಿ ಇನ್ನೂ ಎತ್ತರಕ್ಕೆ ಏರಿ, ಅಂಧರ ಕ್ರಿಕೆಟ್ ಜಗತ್ತಿನಲ್ಲಿ ಭಾರತದ ಹೆಸರನ್ನು ಶಾಶ್ವತವಾಗಿ ಬೆಳಗಲಿ. ಅವರ ಹೋರಾಟ ಮತ್ತು ಸಾಧನೆ ಮುಂದಿನ ಪೀಳಿಗೆಗೆ ನಿಜವಾದ ಸ್ಫೂರ್ತಿಯಾಗಲಿ.






