ಮಹೇಂದ್ರ ಸಿಂಗ್ ಧೋನಿ ಅವರ ಮೇಲಿನ ಅಭಿಮಾನಿಗಳ ಪ್ರೀತಿ ಗುಟ್ಟಾಗೇನು ಉಳಿದಿಲ್ಲ. ಅವರು ಎಲ್ಲಿ ಕಾಣಿಸಿಕೊಂಡರೂ “ಧೋನಿ! ಧೋನಿ!” ಎಂಬ ಹರ್ಷೋದ್ಗಾರಗಳು, ಕರತಾಡನ ಮೊಳಗುವುದು ಸಹಜ. 44 ವರ್ಷದ ಧೋನಿ ಪ್ರತಿ ಐಪಿಎಲ್ ಆವೃತ್ತಿಯಲ್ಲೂ ಆಡಬೇಕು ಎಂಬುದು ಅಭಿಮಾನಿಗಳ ಅತೀವ ಆಸೆಯಾಗಿದೆ. ಹೀಗಿರುವಾಗ, 2026ರ ಐಪಿಎಲ್ ಬಳಿಕ ಧೋನಿ ನಿವೃತ್ತಿ ಹೊಂದುತ್ತಾರೆಯೇ ಎಂಬ ಪ್ರಶ್ನೆಗೆ ಸ್ವತಃ ಧೋನಿಯವರೇ ಸೂಕ್ಷ್ಮ ಸುಳಿವು ನೀಡಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಐಪಿಎಲ್ 2026ರ ಟೂರ್ನಿಗೂ ಮುನ್ನ ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಸಿಎಸ್‌ಕೆ ಫ್ರಾಂಚೈಸಿಯು ಅಭಿಮಾನಿಗಳಿಗಾಗಿ ವಿಶೇಷ ಸಂವಾದ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಕಾರ್ಯಕ್ರಮವನ್ನು ನಿರೂಪಿಸುತ್ತಿದ್ದ ಟಾಲಿವುಡ್ ನಟ ಶಿವಕಾರ್ತಿಕೇಯನ್ ಅವರು ಧೋನಿಯವರನ್ನು ಕುರಿತು, “ನೀವು ನಿವೃತ್ತಿ ಹೊಂದುತ್ತೀರಾ? ಆದರೆ ನೀವು ಈ ಹಿಂದೆ “ಖಂಡಿತಾ ಇಲ್ಲ’ ಎಂದು ಹೇಳಿದ್ದಿರಿ. ನಾವು ಪ್ರತಿ ವರ್ಷವೂ ಇದೇ ಉತ್ತರವನ್ನು ನಿರೀಕ್ಷಿಸುತ್ತೇವೆ. ನಿಮ್ಮ ಫಿಟ್‌ನೆಸ್ ನೋಡಿದರೆ ನೀವು 60 ವರ್ಷ ತುಂಬುವವರೆಗೂ ಲೀಲಾಜಾಲವಾಗಿ ಆಡಬಹುದು ಎನಿಸುತ್ತದೆ” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಟೀಕೆಗಳ ಸುಳಿಯಲ್ಲೂ ಮಿನುಗಿದ ಕೇರಳದ ತಾರೆ: ಸಂಜು ಸ್ಯಾಮ್ಸನ್ ಎಂಬ ಛಲದಂಕಮಲ್ಲ
ಇದಕ್ಕೆ ಮುಗುಳ್ನಗುತ್ತಲೇ ಉತ್ತರಿಸಿದ ಧೋನಿ, “ಇದು ತುಂಬ ಕಷ್ಟಕರವಾದದ್ದು” ಎಂದರು. ಆಗ ಶಿವಕಾರ್ತಿಕೇಯನ್” “ನಿಮ್ಮ ಫಿಟ್‌ನೆಸ್‌ನಿಂದಾಗಿ ಇದು ಸುಲಭವೆಂದು ನಾನು ಭಾವಿಸುತ್ತೇನೆ” ಎಂದು ಹೇಳಿದರು.
ಇದಕ್ಕೆ ಮರುಪ್ರತಿಕ್ರಿಯಿಸಿದ ಧೋನಿ, “ಇದು ತುಂಬಾ ಕಷ್ಟ. ಆದರೂ, ನಾನು ಖಂಡಿತ ಪ್ರಯತ್ನಿಸುತ್ತೇನೆ,” ಎಂದು ಹೇಳಿದರು.
ಧೋನಿಯವರ ಈ “ಪ್ರಯತ್ನಿಸುತ್ತೇನೆ” ಎಂಬ ಮಾತಿಗೆ ನೆರೆದಿದ್ದ ಅಭಿಮಾನಿಗಳಿಂದ ಕರತಾಡನ, ಹರ್ಷೋದ್ಗಾರ ಮುಗಿಲುಮುಟ್ಟಿತ್ತು. ಆಗ ಸಂತಸಗೊಂಡ ಶಿವಕಾರ್ತಿಕೇಯನ್, “ನಮಗೆ ನಮಗೆ ಬೇಕಾದ ಉತ್ತರ ಸಿಕ್ಕಿದೆ” ಎಂದು ಸಂಭ್ರಮಿಸಿದರು.
ಸಿಎಸ್‌ಕೆ ತಂಡದ ಐಪಿಎಲ್ 2026 ರ ಪ್ರಮುಖ ಅಂಶಗಳು:
5 ಬಾರಿ ಚಾಂಪಿಯನ್: ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವು 2010, 2011, 2018, 2021 ಮತ್ತು 2023ರಲ್ಲಿ ಒಟ್ಟು ಐದು ಬಾರಿ ಐಪಿಎಲ್ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿದೆ.
ಮಾರ್ಚ್ 30ರಂದು ಮೊದಲ ಪಂದ್ಯ: ಮಾರ್ಚ್ 30ರಂದು ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕಣಕ್ಕಿಳಿಯುವ ಮೂಲಕ ಸಿಎಸ್‌ಕೆ ತನ್ನ ಐಪಿಎಲ್ 2026ರ ಅಭಿಯಾನವನ್ನು ಅಧಿಕೃತವಾಗಿ ಆರಂಭಿಸಲಿದೆ.





