ಐಪಿಎಲ್‌ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆಡುತ್ತಿರುವ ಟೀಂ ಇಂಡಿಯಾ ಕ್ರಿಕೆಟ್‌ನ ವಿಕೆಟ್ ಕೀಪರ್ ಕಂ ಬ್ಯಾಟರ್ ದಿನೇಶ್ ಕಾರ್ತಿಕ್ ಅವರಿಗೆ ಈ ಬಾರಿಯ 17ನೇ ಐಪಿಎಲ್ ಆವೃತ್ತಿಯೇ ಕೊನೆಯ ಆವೃತ್ತಿಯಾಗಲಿದೆ.
38 ವರ್ಷದ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಈ ಬಾರಿಯ ಐಪಿಎಲ್ ಆವೃತ್ತಿಯ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಲಿದ್ದಾರೆ. ಇದಕ್ಕೂ ಮುನ್ನ ಐಪಿಎಲ್ ತ್ಯಜಿಸಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಮಾರ್ಚ್ 22 ರಂದು ಐಪಿಎಲ್‌ನ 17ನೇ ಆವೃತ್ತಿ ಆರಂಭವಾಗಲಿದ್ದು, ಚೆನ್ನೈನಲ್ಲಿ ನಡೆಯುವ ಪಂದ್ಯದಲ್ಲಿ ಕಳೆದ ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಆರ್‌ಸಿಬಿ ತಂಡವನ್ನು ಎದುರಿಸಲಿದೆ.
“2024ರ ಆವೃತ್ತಿ ದಿನೇಶ್ ಕಾರ್ತಿಕ್ ಅವರಿಗೆ ಕೊನೆಯ ಆವೃತ್ತಿಯಾಗಲಿದೆ.ಐಪಿಎಲ್ ನಂತರ ಅಂತಾರಾಷ್ಟ್ರೀಯ ನಿವೃತ್ತಿಯ ಬಗ್ಗೆ ನಿರ್ಧರಿಸಲಿದ್ದಾರೆ” ಎಂದು ಬಿಸಿಸಿಐ ಮೂಲಗಳು ಮಾಧ್ಯಮಗಳಿಗೆ ತಿಳಿಸಿವೆ.
ಕಾರ್ತಿಕ್ ಅವರು 2022ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಕೊನೆಯ ಬಾರಿಗೆ ಪ್ರತಿನಿಧಿಸಿದ್ದರು. ಐಪಿಎಲ್‌ನಲ್ಲಿ 5.5 ಕೋಟಿ ರೂ.ಗೆ ಖರೀದಿಯಾಗಿರುವ ಅವರು ಕಳೆದ ಎರಡು ಆವೃತ್ತಿಗಳಿಂದ ಆರ್‌ಸಿಬಿ ಪರ ಆಡುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ವಿದೇಶಿ ಪ್ರವಾಸಿ ಮೇಲೆ ಅತ್ಯಾಚಾರ; ʼಅತಿಥಿ ದೇವೋಭವʼ ಎಂದ ದೇಶದಲ್ಲಿ ಇದೆಂಥಾ ಕ್ರೌರ್ಯ!
ಐಪಿಎಲ್‌ನಲ್ಲಿ ದಿನೇಶ್ ಕಾರ್ತಿಕ್ ಒಟ್ಟು 6 ತಂಡಗಳನ್ನು ಪ್ರತಿನಿಧಿಸಿದ್ದಾರೆ. ಡೆಲ್ಲಿ ಡೇರ್ ಡೇವಿಲ್ಸ್(2008-14), ಪಂಜಾಬ್ ಸೂಪರ್ ಕಿಂಗ್ಸ್ (2011), ಮುಂಬೈ ಇಂಡಿಯನ್ಸ್(2012-13),ಗುಜರಾತ್ ಲಯನ್ಸ್(2016-17), ಕೆಕೆಆರ್(2018-21) ಹಾಗೂ ಆರ್‌ಸಿಬಿ (2015 ಹಾಗೂ 2022ರಿಂದ ಪ್ರಸ್ತುತ) ತಂಡಗಳನ್ನು ಪ್ರತಿನಿಧಿಸಿದ್ದಾರೆ.
ಒಟ್ಟು 242 ಪಂದ್ಯಗಳನ್ನು ಆಡಿರುವ ದಿನೇಶ್ ಕಾರ್ತಿಕ್ ಎಂ ಎಸ್ ಧೋನಿ(250) ಹಾಗೂ ರೋಹಿತ್ ಶರ್ಮಾ(243) ನಂತರದ ಸ್ಥಾನದಲ್ಲಿದ್ದಾರೆ. ಒಟ್ಟು 17 ಐಪಿಎಲ್‌ನ ಆವೃತ್ತಿಗಳಲ್ಲಿ ಎರಡು ಪಂದ್ಯಗಳು ಮಾತ್ರ ದಿನೇಶ್ ಆಡಿಲ್ಲ. 2014ರಲ್ಲಿ ದೆಹಲಿ ತಂಡ ಕಾರ್ತಿಕ್ ಅವರನ್ನು 12.5 ಕೋಟಿ ಕೊಟ್ಟು ಖರೀದಿಸಿತ್ತು. 2015ರಲ್ಲಿ ಆರ್‌ಸಿಬಿ ತಂಡಕ್ಕೆ 10.5 ಕೋಟಿಗೆ ಹರಾಜಾಗಿದ್ದರು.
ಐಪಿಎಲ್‌ನಲ್ಲಿ ಒಟ್ಟು 242 ಪಂದ್ಯಗಳನ್ನು ಆಡಿರುವ ದಿನೇಶ್ ಕಾರ್ತಿಕ್ 25.81ರ ಸರಾಸರಿಯಂತೆ 4516 ರನ್ ಪೇರಿಸಿದ್ದಾರೆ. ಇವರ ಆಟದಲ್ಲಿ 20 ಅರ್ಧ ಶತಕಗಳು ಸೇರಿವೆ. ವಿಕೆಟ್ ಕೀಪಿಂಗ್‌ನಲ್ಲಿ 141 ಕ್ಯಾಚ್‌ಗಳು ಹಾಗೂ 36 ಸ್ಟಂಪಿಂಗ್ ಮಾಡಿದ್ದಾರೆ.
2008ರಲ್ಲಿ ಐಪಿಎಲ್ ಆರಂಭವಾದಾಗಿನಿಂದ ಎಲ್ಲ ಆವೃತ್ತಿಗಳನ್ನು ಆಡಿರುವ ಕೆಲವೇ ಆಟಗಾರರಲ್ಲಿ ದಿನೇಶ್ ಕೂಡ ಒಬ್ಬರು. ದಿನೇಶ್ ಹೊರತುಪಡಿಸಿ ಧೋನಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶಿಖರ್ ಧವನ್, ವೃದ್ಧಿಮಾನ್ ಸಾಹ ಹಾಗೂ ಮನೀಶ್ ಪಾಂಡೆ ಎಲ್ಲ ಐಪಿಎಲ್‌ಗಳನ್ನು ಆಡಿರುವ ಉಳಿದ ಆಟಗಾರರು.





