ಫಿಫಾ ವಿಶ್ವಕಪ್ 2026 | ಯುದ್ಧಗಳ ಕಾರ್ಮೋಡದ ನಡುವೆ ಫುಟ್‌ಬಾಲ್ ಹಬ್ಬಕ್ಕೆ 100 ದಿನಗಳ ಕ್ಷಣಗಣನೆ

Date:

ಅಮೆರಿಕದ ಆಂತರಿಕ ರಾಜಕೀಯದ ಬೆಳವಣಿಗೆಗಳೂ ಸಹ ಟೂರ್ನಿಯ ಮೇಲೆ ಪ್ರಭಾವ ಬೀರುತ್ತಿವೆ. ಡೊನಾಲ್ಡ್ ಟ್ರಂಪ್ ಅವರ ಕಠಿಣ ಆಂತರಿಕ ನೀತಿ-ನಿರ್ಧಾರಗಳು ಮತ್ತು ವಲಸೆ ನಿಯಮಗಳ ಬಗ್ಗೆಯೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆತಂಕ ಮನೆಮಾಡಿದೆ. ಟೂರ್ನಿಯನ್ನು ಬಹಿಷ್ಕರಿಸುವಂತೆ ಕೆಲವು ವಲಯಗಳಿಂದ ಕರೆಗಳು ಬಂದಿದ್ದರೂ, ಅವುಗಳು ಸದ್ಯಕ್ಕೆ ಅಷ್ಟಾಗಿ ಪರಿಣಾಮ ಬೀರಿಲ್ಲ. ಆದರೂ, ಜಾಗತಿಕ ಮಟ್ಟದ ಅನಿಶ್ಚಿತತೆಯ ವಾತಾವರಣವು ಕ್ರೀಡಾಭಿಮಾನಿಗಳಲ್ಲಿ ಮತ್ತು ಆಯೋಜಕರಲ್ಲಿ ಒಂದು ರೀತಿಯ ಆತಂಕವನ್ನು ಹುಟ್ಟುಹಾಕಿದೆ ಎಂಬುದು ಸುಳ್ಳಲ್ಲ.

ಜಗತ್ತಿನಾದ್ಯಂತ ಕೋಟ್ಯಂತರ ಕ್ರೀಡಾಭಿಮಾನಿಗಳ ನರನಾಡಿಗಳಲ್ಲಿ ವಿದ್ಯುತ್ ಸಂಚಲನ ಮೂಡಿಸುವ ಜಾಗತಿಕ ಕ್ರೀಡಾ ಮಹೋತ್ಸವ ‘ಫಿಫಾ ವಿಶ್ವಕಪ್ 2026’ರ ಆರಂಭಕ್ಕೆ ಸರಿಯಾಗಿ ಇನ್ನೂ 100 ದಿನಗಳು ಬಾಕಿಯಿವೆ. ಆದರೆ, ಎಂದಿನ ಉಲ್ಲಾಸ, ಸಂಭ್ರಮದ ನಿರೀಕ್ಷೆಯ ನಡುವೆ ಪಶ್ಚಿಮ ಏಷ್ಯಾದಲ್ಲಿ  ದಿನೇ ದಿನೇ ಉಲ್ಬಣಿಸುತ್ತಿರುವ ಬಿಕ್ಕಟ್ಟು ಹಾಗೂ ಜಾಗತಿಕ ಮಟ್ಟದ ಭೌಗೊಳಿಕ – ರಾಜಕೀಯ ಉದ್ವಿಗ್ನತೆಗಳು ಈ ಬಾರಿಯ ವಿಶ್ವಕಪ್ ಟೂರ್ನಿಯ ಮೇಲೆ ದಟ್ಟ ಕಾರ್ಮೋಡವನ್ನು ಆವರಿಸುವಂತೆ ಮಾಡಿವೆ. ಕ್ರೀಡೆ ಮತ್ತು ರಾಜಕೀಯವನ್ನು ಬೆರಸಬಾರದು ಎಂಬ ನಿಯಮವಿದ್ದರೂ, ಪ್ರಸ್ತುತ ಜಾಗತಿಕ ವಿದ್ಯಮಾನಗಳು ಫುಟ್‌ಬಾಲ್‌ ಹಬ್ಬದ ಮೇಲೆ ನೇರ ಪರಿಣಾಮ ಬೀರುವ ಆತಂಕ ಸೃಷ್ಟಿಯಾಗಿದೆ.

ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಮೂರು ದೇಶಗಳು—ಅಮೆರಿಕ, ಮೆಕ್ಸಿಕೊ ಮತ್ತು ಕೆನಡಾ—ಜಂಟಿಯಾಗಿ ಈ 23ನೇ ಆವೃತ್ತಿಯ ಫಿಫಾ ವಿಶ್ವಕಪ್‌ಗೆ ಆತಿಥ್ಯ ವಹಿಸುತ್ತಿವೆ. ಜೂನ್‌ 11 ರಿಂದ ಜುಲೈ 19ರವರೆಗೆ ನಡೆಯಲಿರುವ ಈ ಟೂರ್ನಿಯ ಫುಟ್‌ಬಾಲ್‌ ಇತಿಹಾಸದಲ್ಲೇ ಅತಿ ದೊಡ್ಡ ಕ್ರೀಡಾಕೂಟ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. 2022ರಲ್ಲಿ ಕತಾರ್‌ನಲ್ಲಿ ನಡೆದ 22ನೇ ಆವೃತ್ತಿಯ ವಿಶ್ವಕಪ್‌ನಲ್ಲಿ ಕೇವಲ 32 ತಂಡಗಳು ಭಾಗವಹಿಸಿದ್ದವು. ಆದರೆ, ಈ ಬಾರಿ ಫಿಫಾ ತನ್ನ ವ್ಯಾಪ್ತಿಯನ್ನು ವಿಸ್ತರಿಸಿದ್ದು ದಾಖಲೆಯ 48 ತಂಡಗಳು ಜಾಗತಿಕ ಪ್ರಶಸ್ತಿಗಾಗಿ ಕಣಕ್ಕಿಳಿಯಲಿವೆ. ಈ ಮೂಲಕ ಹೆಚ್ಚು ದೇಶಗಳಿಗೆ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವ ಅವಕಾಶ ಲಭ್ಯವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

​ಟೂರ್ನಿಯ ಸ್ವರೂಪದಲ್ಲಿ ಈ ಬಾರಿ ಭಾರಿ ಬದಲಾವಣೆ ತರಲಾಗಿದ್ದು, ಒಟ್ಟು 48 ತಂಡಗಳನ್ನು 12 ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನಲ್ಲಿ ತಲಾ ನಾಲ್ಕು ತಂಡಗಳಿರಲಿವೆ. ಲೀಗ್‌ ಹಂತದ ಅಂತ್ಯಕ್ಕೆ ಈ 12 ಗುಂಪುಗಳಲ್ಲಿನ ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ನೇರವಾಗಿ ನಾಕ್‌ಔಟ್‌ ಹಂತಕ್ಕೆ ಪ್ರವೇಶಿಸಲಿವೆ. ಇದರ ಜೊತೆಗೆ, ಮೂರನೇ ಸ್ಥಾನ ಪಡೆದ ಅತ್ಯುತ್ತಮ ಎಂಟು ತಂಡಗಳಿಗೂ ನಾಕ್‌ಔಟ್ ಹಂತದ ಮೊದಲ ಸುತ್ತಿಗೆ (32ರ ಘಟ್ಟಕ್ಕೆ) ಪ್ರವೇಶಿಸುವ ಅದೃಷ್ಟ ಒಲಿಯಲಿದೆ. ತಂಡಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಈ ಬಾರಿಯ ಕಾದಾಟ ಇನ್ನಷ್ಟು ರೋಚಕವಾಗಿರಲಿದ್ದು, ಪ್ರತಿ ಪಂದ್ಯವೂ ನಿರ್ಣಾಯಕವಾಗಿರಲಿದೆ.

ಪಂದ್ಯಗಳ ಆಯೋಜನೆ ಮತ್ತು ಆರ್ಥಿಕ ವಹಿವಾಟಿನ ದೃಷ್ಟಿಯಿಂದಲೂ ಈ ಬಾರಿಯ ಟೂರ್ನಿ ಬೃಹತ್ ಮಟ್ಟದಲ್ಲಿದೆ. ನಾಲ್ಕು ವಿಭಿನ್ನ ಕಾಲಮಾನಗಳಲ್ಲಿ, ಮೂರು ದೇಶಗಳ ಒಟ್ಟು 16 ಕ್ರೀಡಾಂಗಣಗಳಲ್ಲಿ ಬರೋಬ್ಬರಿ 104 ಪಂದ್ಯಗಳು ನಡೆಯಲಿವೆ. ಈ ಪೈಕಿ ಸಿಂಹಪಾಲು ಅಮೆರಿಕದ ಪಾಲಾಗಿದ್ದು, ಅಲ್ಲಿ 78 ಪಂದ್ಯಗಳು ಜರುಗಲಿವೆ. ಉಳಿದಂತೆ ಮೆಕ್ಸಿಕೊ 13 ಪಂದ್ಯಗಳಿಗೆ ಮತ್ತು ಕೆನಡಾ 13 ಪಂದ್ಯಗಳಿಗೆ ಆತಿಥ್ಯ ವಹಿಸಲಿವೆ. ಆರ್ಥಿಕ ದೃಷ್ಟಿಯಿಂದ ನೋಡುವುದಾದರೆ, ಕತಾರ್ ವಿಶ್ವಕಪ್ 7 ಬಿಲಿಯನ್ ಡಾಲರ್ ಆದಾಯ ತಂದುಕೊಟ್ಟಿತ್ತು. ಆದರೆ, 2026ರ ವಿಶ್ವಕಪ್ ಟೂರ್ನಿಯು ಬರೋಬ್ಬರಿ 11 ಬಿಲಿಯನ್ ಡಾಲರ್ (ಅಂದಾಜು ₹91,000 ಕೋಟಿ) ದಾಖಲೆಯ ಆದಾಯವನ್ನು ಹುಟ್ಟುಹಾಕುವ ನಿರೀಕ್ಷೆಯಿದೆ.

ಕಳೆದ ಬಾರಿ 2022ರಲ್ಲಿ ಕತಾರ್‌ನಲ್ಲಿ ನಡೆದ ಕಳೆದ ಬಾರಿಯ ಫಿಫಾ ವಿಶ್ವಕಪ್ ಫೈನಲ್ ಪಂದ್ಯವು ಕಾಲ್ಚೆಂಡಿನ ಇತಿಹಾಸದಲ್ಲೇ ಅತ್ಯಂತ ರೋಚಕ ಹಣಾಹಣಿಯಾಗಿ ಮೂಡಿಬಂದಿತ್ತು. ಈ ಅಂತಿಮ ಕದನದಲ್ಲಿ ಲಿಯೊನೆಲ್ ಮೆಸ್ಸಿ ನಾಯಕತ್ವದ ಅರ್ಜೆಂಟೀನಾ ತಂಡವು, ಹಾಲಿ ಚಾಂಪಿಯನ್ ಆಗಿದ್ದ ಫ್ರಾನ್ಸ್ ತಂಡವನ್ನು ಮಣಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ನಿಗದಿತ ಹಾಗೂ ಹೆಚ್ಚುವರಿ ಸಮಯದ ಮುಕ್ತಾಯಕ್ಕೆ ಪಂದ್ಯವು 3-3 ಗೋಲುಗಳಿಂದ ಸಮಬಲ ಸಾಧಿಸಿತ್ತು. ಅಂತಿಮವಾಗಿ ನಡೆದ ಪೆನಾಲ್ಟಿ ಶೂಟೌಟ್‌ನಲ್ಲಿ 4-2 ಅಂತರದಿಂದ ಫ್ರಾನ್ಸ್ ತಂಡವನ್ನು ಮಣಿಸಿದ ಅರ್ಜೆಂಟೀನಾ, ಬರೋಬ್ಬರಿ 36 ವರ್ಷಗಳ ಸುದೀರ್ಘ ಅವಧಿಯ ಬಳಿಕ ತನ್ನ 3ನೇ ವಿಶ್ವಕಪ್ ಟ್ರೋಫಿ ಮುಡಿಗೇರಿಸಿಕೊಂಡು ಇತಿಹಾಸ ನಿರ್ಮಿಸಿತು.

​ಇನ್ನು ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಪ್ರಶಸ್ತಿ ಗೆದ್ದ ದಾಖಲೆ ಲ್ಯಾಟಿನ್ ಅಮೆರಿಕದ ದೈತ್ಯ ರಾಷ್ಟ್ರ ಬ್ರೆಜಿಲ್ ಹೆಸರಿನಲ್ಲಿದೆ. ಫುಟ್‌ಬಾಲ್ ಮಾಂತ್ರಿಕ ಪೀಲೆ ಸೇರಿದಂತೆ ಹಲವು ದಂತಕಥೆಗಳನ್ನು ಹುಟ್ಟುಹಾಕಿರುವ ಬ್ರೆಜಿಲ್ ತಂಡವು, ಇದುವರೆಗೆ ಗರಿಷ್ಠ 5 ಬಾರಿ (1958, 1962, 1970, 1994 ಹಾಗೂ 2002) ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಫುಟ್‌ಬಾಲ್ ಸಾಮ್ರಾಜ್ಯದ ಅನಭಿಷಿಕ್ತ ದೊರೆಯಾಗಿ ಮೆರೆದಿದೆ. ಬ್ರೆಜಿಲ್ ನಂತರದ ಸ್ಥಾನದಲ್ಲಿ ಯುರೋಪಿನ ಬಲಿಷ್ಠ ತಂಡಗಳಾದ ಜರ್ಮನಿ ಮತ್ತು ಇಟಲಿ ಇದ್ದು, ಇವೆರಡೂ ರಾಷ್ಟ್ರಗಳು ತಲಾ 4 ಬಾರಿ ವಿಶ್ವಕಪ್ ಗೆದ್ದು ಎರಡನೇ ಸ್ಥಾನದಲ್ಲಿವೆ.

ಇದನ್ನು ಓದಿದ್ದೀರಾ? 6 ದಶಕಗಳ ಕಾಯುವಿಕೆ ಅಂತ್ಯ: ಬಂಗಾಳವನ್ನು ಬಗ್ಗು ಬಡಿದು ರಣಜಿ ಫೈನಲ್ ಪ್ರವೇಶಿಸಿದ ಜಮ್ಮು ಕಾಶ್ಮೀರ

2026ರ ​ಟೂರ್ನಿಯ ಉದ್ಘಾಟನಾ ಪಂದ್ಯವು ಜೂನ್ 11ರಂದು ಮೆಕ್ಸಿಕೊ ಸಿಟಿಯ ಐತಿಹಾಸಿಕ ‘ಎಸ್ಟಾಡಿಯೊ ಅಜ್ಟೆಕಾ’ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದಾದ ಬಳಿಕ ಸುಮಾರು ಆರು ವಾರಗಳ ಕಾಲ ನಡೆಯುವ ಈ ಫುಟ್‌ಬಾಲ್ ಸಮರವು, ಜುಲೈ 19ರಂದು ನ್ಯೂಯಾರ್ಕ್‌ನ ಹೊರವಲಯದಲ್ಲಿರುವ 82,500 ಆಸನಗಳ ಬೃಹತ್ ಸಾಮರ್ಥ್ಯದ ‘ಮೆಟ್‌ಲೈಫ್ ಸ್ಟೇಡಿಯಂ’ನಲ್ಲಿ ನಡೆಯಲಿರುವ ಅಂತಿಮ ಹಣಾಹಣಿಯೊಂದಿಗೆ ಮುಕ್ತಾಯಗೊಳ್ಳಲಿದೆ. ಆದರೆ, ಈ ಚತುರ್ವಾರ್ಷಿಕ ಮಹೋತ್ಸವದ ಸಿದ್ಧತೆಗಳು ಒಂದರ ಹಿಂದೊಂದರಂತೆ ವಿವಾದ ಹಾಗೂ ಆತಂಕಗಳಿಂದ ಸುತ್ತುವರಿದಿರುವುದು ಮಾತ್ರ ವಿಪರ್ಯಾಸ.

​ಆತಿಥೇಯ ರಾಷ್ಟ್ರಗಳಲ್ಲಿ ಒಂದಾದ ಮೆಕ್ಸಿಕೊದಲ್ಲಿನ ಆಂತರಿಕ ಭದ್ರತೆಯು ಪ್ರಸ್ತುತ ಕಳವಳಕಾರಿಯಾಗಿದೆ. ಕುಖ್ಯಾತ ಡ್ರಗ್ ಮಾಫಿಯಾ ಕಿಂಗ್‌ಪಿನ್ ನೆಮೆಸಿಯೊ ಒಸೆಗುರಾ ಸೆರ್ವಾಂಟೆಸ್ ಸಾವಿನ ಬಳಿಕ ಮೆಕ್ಸಿಕೊದಲ್ಲಿ ಭುಗಿಲೆದ್ದಿರುವ ಹಿಂಸಾಚಾರವು ಆಟಗಾರರ, ಪ್ರೇಕ್ಷಕರ ಭದ್ರತೆಯ ಬಗ್ಗೆ ಭಾರಿ ಆತಂಕ ಮೂಡಿಸಿದೆ. ಹಿಂಸಾಚಾರದ ಕೇಂದ್ರಬಿಂದುವಾಗಿರುವ ಗ್ವಾಡಲಜಾರಾ ನಗರದಲ್ಲೇ ನಾಲ್ಕು ಪಂದ್ಯಗಳು ನಿಗದಿಯಾಗಿವೆ. ಇದರಲ್ಲಿ ಆತಿಥೇಯ ಮೆಕ್ಸಿಕೊ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟೂರ್ನಿಯ ಆರಂಭಿಕ ಪಂದ್ಯ ಮತ್ತು ಉರುಗ್ವೆ-ಸ್ಪೇನ್ ನಡುವಿನ ಬಹುನಿರೀಕ್ಷಿತ ಮೊದಲ ಸುತ್ತಿನ ಪಂದ್ಯವೂ ಸೇರಿದೆ.

​ಇದರ ಬೆನ್ನಲ್ಲೇ, ಜಾಗತಿಕ ಮಟ್ಟದಲ್ಲಿ ಭುಗಿಲೆದ್ದಿರುವ ಪಶ್ಚಿಮ ಏಷ್ಯಾದ ಬಿಕ್ಕಟ್ಟು ಟೂರ್ನಿಗೆ ದೊಡ್ಡ ಕಂಟಕವಾಗಿ ಪರಿಣಮಿಸಿದೆ. ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಜಂಟಿಯಾಗಿ ನಡೆಸಿರುವ ಇತ್ತೀಚಿನ ದಾಳಿಗಳು ಹೊಸ ಆತಂಕವನ್ನು ಸೃಷ್ಟಿಸಿವೆ. ಅಚ್ಚರಿಯೆಂದರೆ, ಇರಾನ್ ತಂಡವು ತನ್ನ ಗುಂಪಿನ ಮೂರು ಪ್ರಮುಖ ಪಂದ್ಯಗಳನ್ನು ಅಮೆರಿಕದ ನೆಲದಲ್ಲೇ (ಲಾಸ್ ಏಂಜಲೀಸ್ ಮತ್ತು ಸಿಯಾಟಲ್‌ನಲ್ಲಿ) ಆಡಬೇಕಿದೆ. ಯುದ್ಧದ ಕಾರ್ಮೋಡ ಕವಿದಿರುವ ಎರಡು ಬದ್ಧ ವೈರಿ ರಾಷ್ಟ್ರಗಳ ನಡುವೆ ಕ್ರೀಡಾ ಸಂಬಂಧ ಹೇಗೆ ನಿಭಾಯಿಸಲ್ಪಡುತ್ತದೆ ಎಂಬುದು ತೀವ್ರ ಕುತೂಹಲ ಹಾಗೂ ಆತಂಕಕ್ಕೆ ಕಾರಣವಾಗಿದೆ.

​ಅಮೆರಿಕದ ಆಂತರಿಕ ರಾಜಕೀಯದ ಬೆಳವಣಿಗೆಗಳೂ ಸಹ ಟೂರ್ನಿಯ ಮೇಲೆ ಪ್ರಭಾವ ಬೀರುತ್ತಿವೆ. ಡೊನಾಲ್ಡ್ ಟ್ರಂಪ್ ಅವರ ಕಠಿಣ ಆಂತರಿಕ ನೀತಿ-ನಿರ್ಧಾರಗಳು ಮತ್ತು ವಲಸೆ ನಿಯಮಗಳ ಬಗ್ಗೆಯೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆತಂಕ ಮನೆಮಾಡಿದೆ. ಟೂರ್ನಿಯನ್ನು ಬಹಿಷ್ಕರಿಸುವಂತೆ ಕೆಲವು ವಲಯಗಳಿಂದ ಕರೆಗಳು ಬಂದಿದ್ದರೂ, ಅವುಗಳು ಸದ್ಯಕ್ಕೆ ಅಷ್ಟಾಗಿ ಪರಿಣಾಮ ಬೀರಿಲ್ಲ. ಆದರೂ, ಜಾಗತಿಕ ಮಟ್ಟದ ಅನಿಶ್ಚಿತತೆಯ ವಾತಾವರಣವು ಕ್ರೀಡಾಭಿಮಾನಿಗಳಲ್ಲಿ ಮತ್ತು ಆಯೋಜಕರಲ್ಲಿ ಒಂದು ರೀತಿಯ ಆತಂಕವನ್ನು ಹುಟ್ಟುಹಾಕಿದೆ ಎಂಬುದು ಸುಳ್ಳಲ್ಲ.

​ಇಷ್ಟೆಲ್ಲಾ ಗೊಂದಲ, ಬಿಕ್ಕಟ್ಟುಗಳ ನಡುವೆಯೂ ಫಿಫಾ ಆಡಳಿತ ಮಂಡಳಿಯು ಪರಿಸ್ಥಿತಿಯನ್ನು ತಿಳಿಗೊಳಿಸುವ ಪ್ರಯತ್ನ ಮಾಡುತ್ತಿದೆ. ಫಿಫಾ ಮುಖ್ಯಸ್ಥ ಗಿಯಾನಿ ಇನ್ಫಾಂಟಿನೊ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಪಂದ್ಯಗಳು ಸುಗಮವಾಗಿ ನಡೆಯುವ ಬಗ್ಗೆ ತಮಗೆ ‘ತುಂಬಾ ವಿಶ್ವಾಸವಿದೆ’ ಎಂದು ಭರವಸೆ ನೀಡಿದ್ದಾರೆ. ಭದ್ರತೆ ಮತ್ತು ಇತರ ವ್ಯವಸ್ಥೆಗಳ ಬಗ್ಗೆ ಅವರು ಅಭಯ ನೀಡಿದ್ದರೂ, ಇರಾನ್ ತಂಡ ಅಮೆರಿಕದಲ್ಲಿ ಆಡಬೇಕಿರುವುದರಿಂದ ಮತ್ತು ಭೌಗೋಳಿಕ ರಾಜಕೀಯ ಸಮೀಕರಣಗಳು ಕ್ಷಣಕ್ಷಣಕ್ಕೂ ಬದಲಾಗುತ್ತಿರುವುದರಿಂದ ಭೀತಿಯಂತೂ ಹಾಗೆಯೇ ಉಳಿದಿದೆ.

​ಇನ್ನು ಕೇವಲ ಮೂರುವರೆ ವರ್ಷಗಳ ಹಿಂದೆಯಷ್ಟೇ (2022ರಲ್ಲಿ) ಕತಾರ್‌ನ ಲುಸೈಲ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಫ್ರಾನ್ಸ್‌ನ ಕೈಲಿಯನ್ ಎಂಬಾಪೆ ಮತ್ತು ಅರ್ಜೆಂಟೀನಾದ ಲಿಯೊನೆಲ್ ಮೆಸ್ಸಿ ಅವರ ನಡುವಿನ ರೋಚಕ ಕದನವು ಫುಟ್‌ಬಾಲ್ ಪ್ರೇಮಿಗಳ ಮನದಲ್ಲಿ ಇನ್ನೂ ಹಸಿರಾಗಿದೆ. ಮಧ್ಯಪ್ರಾಚ್ಯದ ವಿಪರೀತ ಬಿಸಿಲಿನ ಹವಾಮಾನದ ಕಾರಣ ಕತಾರ್ ವಿಶ್ವಕಪ್ ಅನ್ನು ಸಂಪ್ರದಾಯಕ್ಕೆ ವಿರುದ್ಧವಾಗಿ ಚಳಿಗಾಲದಲ್ಲಿ ನಡೆಸಲಾಗಿತ್ತು. ಇದೀಗ 23ನೇ ಆವೃತ್ತಿಯ ವಿಶ್ವಕಪ್ ಮತ್ತೆ ತನ್ನ ಸಾಂಪ್ರದಾಯಿಕ ಬೇಸಿಗೆಯ ವೇಳಾಪಟ್ಟಿಗೆ ಮರಳಿದೆ. ಸುಂದರ ಆಟ ಎಂದೇ ಕರೆಯಲ್ಪಡುವ ಫುಟ್‌ಬಾಲ್‌ನ ಈ ಜಾಗತಿಕ ಹಬ್ಬವು ಎಲ್ಲಾ ಅಡೆತಡೆಗಳನ್ನು ಮೀರಿ ಯಶಸ್ವಿಯಾಗಲಿದೆಯೇ ಇಲ್ಲವೇ ಯುದ್ಧ, ಸಂಘರ್ಷಗಳ ಕಾರ್ಮೋಡ ಟೂರ್ನಿಗೂ ತಾಕಲಿದೆಯೇ ಎಂಬುದು ಸದ್ಯ ಎಲ್ಲರ ಮುಂದಿರುವ ಪ್ರಶ್ನೆ.

blank profile picture 973460 640
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

84.56 ಲಕ್ಷ ಕೋಟಿ ರೂ. ನಷ್ಟದ ಅಮೆರಿಕ – ಇರಾನ್ ಸಂಘರ್ಷದಲ್ಲಿ ನಿಜಕ್ಕೂ ಗೆದ್ದವರಾರು?

ಅಮೆರಿಕದ ಬಹುಕೋಟಿ ಡಾಲರ್ ವೆಚ್ಚದ 'ಪೇಟ್ರಿಯಾಟ್' ಮತ್ತು 'ಥಾಡ್' ಕ್ಷಿಪಣಿ ನಿರೋಧಕ...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...