ಪೂರ್ವಜರ ನಾಡಿನಲ್ಲಿ ‘ಫ್ರೀಡಂ ಬೇಬಿ’ಯ ಐತಿಹಾಸಿಕ ಶತಕ: ಹರಿಣಗಳ ನಾಡಿನ ‘ಸೆನುರಾನ್ ಮುತ್ತುಸ್ವಾಮಿ’ ಹಿನ್ನಲೆಯೇ ರೋಚಕ

Date:

ಸೆನುರಾನ್ ಅವರ ಈ ಸಾಧನೆಯ ಹಿಂದಿನ ಕಥೆ ತಿಳಿಯಬೇಕೆಂದರೆ ನಾವು ಸುಮಾರು ನೂರು ವರ್ಷಗಳ ಹಿಂದಿನ ಇತಿಹಾಸಕ್ಕೆ ಹೋಗಬೇಕು. ತಮಿಳುನಾಡಿನ ವೆಲ್ಲೂರು ಮತ್ತು ನಾಗಪಟ್ಟಣಂ ಭಾಗದಿಂದ ಹಡಗು ಏರಿದವರಲ್ಲಿ ಸೆನುರಾನ್ ಮುತ್ತುಸ್ವಾಮಿ ಅವರ ಮುತ್ತಜ್ಜ ಕೂಡ ಒಬ್ಬರು. ಹಡಗಿನಲ್ಲಿ ಟಿಕೆಟ್ ಪಡೆಯಲು ಸಾಧ್ಯವಾಗದೆ, ಕದ್ದುಮುಚ್ಚಿ ಪ್ರಯಾಣಿಸಿ ದಕ್ಷಿಣ ಆಫ್ರಿಕಾದ ಡರ್ಬನ್ ತೀರ ಸೇರಿದ್ದ ಅವರು, ಅಲ್ಲಿನ ಕಬ್ಬಿನ ಗದ್ದೆಗಳಲ್ಲಿ ರಕ್ತ ಬಸಿಯುವಂತೆ ದುಡಿದರು

ಭಾರತದ ಈಶಾನ್ಯ ಭಾಗದ ಸುಂದರ ನಗರ ಅಸ್ಸಾಂನ ಗುವಾಹಟಿಯ ಬರ್ಸಾಪರಾ ಕ್ರೀಡಾಂಗಣದಲ್ಲಿ ಇತಿಹಾಸವೊಂದು ನಿರ್ಮಾಣವಾಗಿದೆ. ಅದು ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪ್ರತಿಷ್ಠಿತ ಟೆಸ್ಟ್ ಸರಣಿಯ ಎರಡನೇ ಪಂದ್ಯ. ಪ್ರವಾಸಿ ದಕ್ಷಿಣ ಆಫ್ರಿಕಾ ತಂಡವು ಭಾರತದ ಬಲಿಷ್ಠ ಬೌಲಿಂಗ್ ದಾಳಿಗೆ ಸಿಲುಕಿ ತತ್ತರಿಸುತ್ತಿತ್ತು. ತಂಡದ ಸ್ಕೋರ್ ಇನ್ನೂರು ದಾಟುವಷ್ಟರಲ್ಲೇ ಪ್ರಮುಖ ಐದು ವಿಕೆಟ್‌ಗಳು ಉರುಳಿ ಹೋಗಿದ್ದವು. ಇನ್ನೇನು ಹರಿಣಗಳ ಪಡೆ ಆಲೌಟಾಗುವುದು ಖಚಿತ ಎಂದು ಎಲ್ಲರೂ ಭಾವಿಸಿದ್ದರು. ಆಗ ಕ್ರೀಸಿನಲ್ಲಿದ್ದ ಸೆನುರಾನ್ ಮುತ್ತುಸ್ವಾಮಿ ಭಾರತದ ಮಣ್ಣಿನಲ್ಲಿ, ತನ್ನ ಪೂರ್ವಜರ ಭೂಮಿಯಲ್ಲಿ, ಸೆನುರನ್ ಬಾರಿಸಿದ 109 ರನ್‌ಗಳ ಇನಿಂಗ್ಸ್, ದಕ್ಷಿಣ ಆಫ್ರಿಕಾವನ್ನು ಮೊದಲ ಇನಿಂಗ್ಸ್‌ನಲ್ಲಿ 489 ರನ್‌ಗಳಿಗೆ ಕೊಂಡೊಯ್ದಿತು. ಇದು ಅವನ ಮೊದಲ ಟೆಸ್ಟ್ ಶತಕ, ಮತ್ತು ಗುವಾಹಟಿ ಸ್ಟೇಡಿಯಂನ ಮೊದಲ ಶತಕಗಾರನಾಗಿ ಅವನ ಹೆಸರು ಚಿರಸ್ಥಾಯಿಯಾಗಿಸಿತು.

ಭಾರತದ ಸ್ಪಿನ್ ಮಾಂತ್ರಿಕರಾದ ಕುಲ್ದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ ಅವರ ಎಸೆತಗಳನ್ನು ಅತ್ಯಂತ ತಾಳ್ಮೆಯಿಂದ ಎದುರಿಸುತ್ತಿದ್ದ ಸೆನುರಾನ್, ತಂಡವನ್ನು ಆಪತ್ತಿನಿಂದ ಪಾರು ಮಾಡಿದರು. ಇತ್ತ ಗುವಾಹಟಿಯಲ್ಲಿ ರೋಚಕ ಪಂದ್ಯ ನಡೆಯುತ್ತಿದ್ದರೆ, ಅತ್ತ ಸಾವಿರಾರು ಮೈಲಿಗಳಾಚೆಗಿನ ದಕ್ಷಿಣ ಆಫ್ರಿಕಾದ ಡರ್ಬನ್ ನಗರದಲ್ಲಿ ತಾಯಿಯೊಬ್ಬಳ ಎದೆಯಲ್ಲಿ ತಲ್ಲಣ ಶುರುವಾಗಿತ್ತು. ಆಕೆ ವಾಣಿ ಮೂಡ್ಲಿ. ತನ್ನ ಮಗ ಶತಕದ ಹೊಸ್ತಿನಲಿರುವುದನ್ನು ಕಂಡು, ಆಫ್ರಿಕಾದ ಪಶ್ಚಿಮ ತುದಿಯ ಘಾನಾ ದೇಶದ ಬಿಸಿನೆಸ್ ಟ್ರಿಪ್ ಮುಗಿಸಿ, ವಿಮಾನವೇರಿ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಮನೆಗೆ ಧಾವಿಸಿದರು. ಮನೆ ತಲುಪಿದ ಕ್ಷಣದಲ್ಲಿ ಸೆನುರನ್ ಶತಕ ಪೂರ್ಣಗೊಳಿಸಿದ್ದನ್ನು ನೇರಪ್ರಸಾರದಲ್ಲಿ ನೋಡಿದರು. ಡರ್ಬನ್‌ನಲ್ಲಿ ಟಿವಿ ಪರದೆಯ ಮುಂದೆ ಉಸಿರು ಬಿಗಿಹಿಡಿದು ಕುಳಿತಿದ್ದ ತಾಯಿ ವಾಣಿ ಅವರ ಕಣ್ಣಲ್ಲಿ ಆನಂದಬಾಷ್ಪ ಹರಿಯಿತು. ತಕ್ಷಣವೇ ತಮ್ಮ ವಾಟ್ಸಾಪ್ ಪ್ರೊಫೈಲ್ ಚಿತ್ರವನ್ನು ಬದಲಿಸಿ, ಮಗ ಬ್ಯಾಟ್ ಎತ್ತಿ ಸಂಭ್ರಮಿಸುತ್ತಿರುವ ಫೋಟೋ ಹಾಕಿ, “ಗುವಾಹಟಿ ಕ್ರೀಡಾಂಗಣದ ಮೊದಲ ಶತಕವೀರ” ಎಂದು ಬರೆದುಕೊಂಡರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
Senuran Muthusamy 2

ಈ ಪಂದ್ಯದಲ್ಲಿ ಸೆನುರಾನ್‌ ಅವರ ಇನಿಂಗ್ಸ್ ಅದ್ಭುತವಾಗಿತ್ತು. 206 ಎಸೆತಗಳನ್ನು ಎದುರಿಸಿ, 10 ಬೌಂಡರಿಗಳು ಮತ್ತು 2 ಸಿಕ್ಸರ್‌ಗಳೊಂದಿಗೆ ಅವರು ಭರ್ಜರಿ ಶತಕ ದಾಖಲಿಸಿದರು. ಭಾರತದ ಬೌಲರ್‌ಗಳಾದ, ಜಸ್‌ಪ್ರೀತ್‌ ಬುಮ್ರಾ, ಕುಲದೀಪ್ ಯಾದವ್ ಮತ್ತು ಮೊಹಮ್ಮದ್ ಸಿರಾಜ್ ಅವರನ್ನು ದಿಟ್ಟವಾಗಿ ಎದುರಿಸಿದರು. ತಂಡದ ಸ್ಕೋರ್ 201/5 ಇದ್ದಾಗ ಬಂದ ಸೆನುರಾನ್‌, ಮಾರ್ಕೋ ಜಾನ್ಸೆನ್‌ರೊಂದಿಗೆ 94 ರನ್‌ಗಳ ಜೊತೆಯಾಟದ ಮೂಲಕ ತಂಡವನ್ನು ಬಲಪಡಿಸಿದರು. ಇದು ಕೇವಲ ವೈಯಕ್ತಿಕ ಸಾಧನೆಯಲ್ಲ; ದಕ್ಷಿಣ ಆಫ್ರಿಕಾ ಪೂರ್ಣ ಟೆಸ್ಟ್ ಸರಣಿ ಗೆಲ್ಲುವ ಆಸೆಯನ್ನು ಹೆಚ್ಚಿಸಿದೆ.

ತಾಯಿಯ ಮುದ್ದಿನ ‘ಫ್ರೀಡಂ ಬೇಬಿ’ ಸೆನುರಾನ್ ಮುತ್ತುಸ್ವಾಮಿ

ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದ ನೀತಿ ಎಂಬ ಅನಿಷ್ಟ ಪದ್ಧತಿ ಕೊನೆಗೊಂಡು, ನೆಲ್ಸನ್ ಮಂಡೇಲಾ ಅವರ ನೇತೃತ್ವದಲ್ಲಿ ಹೊಸ ಪ್ರಜಾಪ್ರಭುತ್ವ ಉದಯಿಸಿದ 1994ರ ಇಸವಿಯಲ್ಲಿ ಸೆನುರಾನ್ ಮುತ್ತುಸ್ವಾಮಿ ಜನಿಸಿದರು. ಇದೇ ಕಾರಣಕ್ಕೆ ಅವರ ತಾಯಿ ವಾಣಿ ಅವರನ್ನು ಪ್ರೀತಿಯಿಂದ “ಫ್ರೀಡಂ ಬೇಬಿ” (ಸ್ವಾತಂತ್ರ್ಯದ ಕೂಸು) ಎಂದು ಕರೆಯುತ್ತಾರೆ. ತಾನು ಹುಟ್ಟುವ ಮೊದಲು ತನ್ನ ಪೂರ್ವಜರು ಅನುಭವಿಸಿದ ನೋವು, ಅವಮಾನ ಮತ್ತು ಸಂಕಷ್ಟಗಳ ಕಥೆಗಳನ್ನು ಕೇಳುತ್ತಲೇ ಬೆಳೆದವರು ಮುತ್ತುಸ್ವಾಮಿ.

ಸೆನುರಾನ್ ಅವರ ಈ ಸಾಧನೆಯ ಹಿಂದಿನ ಕಥೆ ತಿಳಿಯಬೇಕೆಂದರೆ ನಾವು ಸುಮಾರು ನೂರು ವರ್ಷಗಳ ಹಿಂದಿನ ಇತಿಹಾಸಕ್ಕೆ ಹೋಗಬೇಕು. ಅದು ಬ್ರಿಟಿಷರ ಆಳ್ವಿಕೆಯ ಕಾಲ. ಬ್ರಿಟಿಷ್ ಸಾಮ್ರಾಜ್ಯವು ಗುಲಾಮಗಿರಿಯನ್ನು ರದ್ದುಗೊಳಿಸಿದ ನಂತರ, ತಮ್ಮ ಕಬ್ಬಿನ ತೋಟಗಳಲ್ಲಿ, ಗಣಿಗಳಲ್ಲಿ ಮತ್ತು ರೈಲ್ವೆ ಹಳಿಗಳ ನಿರ್ಮಾಣಕ್ಕೆ ಅಗ್ಗದ ದರದಲ್ಲಿ ಕೆಲಸ ಮಾಡಲು ಸಾವಿರಾರು ಕಾರ್ಮಿಕರ ಅಗತ್ಯವಿತ್ತು. ಆಗ ಬ್ರಿಟಿಷರ ಕಣ್ಣು ಬಿದ್ದಿದ್ದು ಭಾರತದ ಮೇಲೆ. ತಮಿಳುನಾಡು, ಬಿಹಾರ, ಉತ್ತರ ಪ್ರದೇಶ ಮತ್ತು ಆಂಧ್ರಪ್ರದೇಶದ ಹಳ್ಳಿಗಳಿಂದ ಸಾವಿರಾರು ಜನರನ್ನು “ಒಪ್ಪಂದದ ಕೂಲಿಗಳಾಗಿ”  ಹಡಗುಗಳಲ್ಲಿ ತುಂಬಿ ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್, ಮಾರಿಷಸ್, ಫಿಜಿ ಮುಂತಾದ ದೇಶಗಳಿಗೆ ಕಳುಹಿಸಲಾಯಿತು. ಹೀಗೆ ತಮಿಳುನಾಡಿನ ವೆಲ್ಲೂರು ಮತ್ತು ನಾಗಪಟ್ಟಣಂ ಭಾಗದಿಂದ ಹಡಗು ಏರಿದವರಲ್ಲಿ ಸೆನುರಾನ್ ಮುತ್ತುಸ್ವಾಮಿ ಅವರ ಮುತ್ತಜ್ಜ ಕೂಡ ಒಬ್ಬರು. ಹಡಗಿನಲ್ಲಿ ಟಿಕೆಟ್ ಪಡೆಯಲು ಸಾಧ್ಯವಾಗದೆ, ಕದ್ದುಮುಚ್ಚಿ ಪ್ರಯಾಣಿಸಿ ದಕ್ಷಿಣ ಆಫ್ರಿಕಾದ ಡರ್ಬನ್ ತೀರ ಸೇರಿದ್ದ ಅವರು, ಅಲ್ಲಿನ ಕಬ್ಬಿನ ಗದ್ದೆಗಳಲ್ಲಿ ರಕ್ತ ಬಸಿಯುವಂತೆ ದುಡಿದರು. ಅಂದು ಅವರು ಅನುಭವಿಸಿದ ಕಷ್ಟಗಳು ಇಂದಿನ ಪೀಳಿಗೆಗೆ ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ.

ಇದನ್ನು ಓದಿದ್ದೀರಾ? ʼಮೀಸಲಾತಿ ಆಟಗಾರʼ ಎಂದು ಹಂಗಿಸಿದವರಿಗೆ ಗೆಲುವಿನ ಉತ್ತರ ಕೊಟ್ಟ ತೆಂಬಾ ಬವುಮಾ

ದಕ್ಷಿಣ ಆಫ್ರಿಕಾದಲ್ಲಿ ಭಾರತೀಯರನ್ನು ಕಂಡರೆ ಅಲ್ಲಿನ ಬಿಳಿಯ ಆಡಳಿತಗಾರರಿಗೆ ಅಸಡ್ಡೆ. ಅವರನ್ನು ಪ್ರತ್ಯೇಕ ಕಾಲೋನಿಗಳಲ್ಲಿ ಇರಿಸಲಾಗಿತ್ತು. ಮೂಲಭೂತ ಸೌಕರ್ಯಗಳಿಲ್ಲದಿದ್ದರೂ, ಭಾರತೀಯರು ತಮ್ಮ ಛಲ ಬಿಡಲಿಲ್ಲ. ಸೆನುರಾನ್ ಅವರ ತಾತ, ಭಾನುವಾರದ ರಜೆಯ ದಿನವೂ ವಿಶ್ರಾಂತಿ ಪಡೆಯದೆ ದುಡಿದು, ಆ ಹಣವನ್ನು ಒಗ್ಗೂಡಿಸಿ ಭಾರತೀಯ ಮಕ್ಕಳಿಗಾಗಿ ಶಾಲೆಗಳನ್ನು ಕಟ್ಟಲು ಸರ್ಕಾರಕ್ಕೆ ನೀಡುತ್ತಿದ್ದರು. ಶಿಕ್ಷಣ ಒಂದೇ ನಮ್ಮ ವಿಮೋಚನೆಗೆ ದಾರಿ ಎಂಬುದನ್ನು ಅರಿತಿದ್ದ ಆ ಹಿರಿಯ ಜೀವಗಳು, ತಾವು ಅನಕ್ಷರಸ್ಥರಾಗಿದ್ದರೂ ತಮ್ಮ ಮಕ್ಕಳು ಕಲಿಯಬೇಕೆಂಬ ಹಂಬಲ ಹೊಂದಿದ್ದರು. ಈ ಪರಂಪರೆಯ ಕುಡಿಯೇ ಸೆನುರಾನ್. ವರ್ಣಭೇದ ನೀತಿಯ ಉತ್ತುಂಗದಲ್ಲಿದ್ದಾಗ ಜನಿಸಿದ ಸೆನುರಾನ್ ತಾಯಿ ವಾಣಿ, ತಾವೊಬ್ಬ ಹೋರಾಟಗಾರ್ತಿಯಾಗಿ ಬೆಳೆದರು. ಕರಿಯರು ಮತ್ತು ಭಾರತೀಯರ ಹಕ್ಕುಗಳಿಗಾಗಿ ನಡೆದ ಚಳವಳಿಗಳಲ್ಲಿ ಭಾಗವಹಿಸಿದರು. ಹೀಗೆ ರಕ್ತಗತವಾಗಿ ಬಂದ ಹೋರಾಟದ ಮನೋಭಾವ ಸೆನುರಾನ್ ಅವರ ಆಟದಲ್ಲಿ ಎದ್ದು ಕಾಣುತ್ತದೆ.

Senuran Muthusamy 3

ಸೆನುರಾನ್ ಅವರ ಬಾಲ್ಯ ಸುಖಮಯವಾಗಿರಲಿಲ್ಲ. ತಂದೆ ಪುನ್ನತಂಬರನ್ ಮುತ್ತುಸ್ವಾಮಿ ಕೂಡ ಕ್ರಿಕೆಟ್ ಹುಚ್ಚರಾಗಿದ್ದರು. ಮಗು ನಡೆಯಲು ಕಲಿಯುವ ಮುನ್ನವೇ ಕೈಗೆ ಬ್ಯಾಟ್ ನೀಡಿದ್ದರು. ಆದರೆ ಮಗ ಸಣ್ಣವನಿದ್ದಾಗಲೇ ಅವರು ಕಣ್ಣು ಮುಚ್ಚಿದರು. ಸೆನುರಾನ್ ಅವರಿಗೆ ಕೇವಲ 11 ವರ್ಷ ವಯಸ್ಸಾಗಿದ್ದಾಗ, ತಂದೆ ಅನಾರೋಗ್ಯದಿಂದ ವಿಧಿವಶರಾದರು. ಆ ಎಳೆಯ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡ ಬಾಲಕನ ಕನಸುಗಳಿಗೆ ನೀರೆರೆದವರು ತಾಯಿ ವಾಣಿ. ತಂದೆಯಿಲ್ಲದ ಕೊರಗು ಮಗನ ಕ್ರಿಕೆಟ್ ಭವಿಷ್ಯವನ್ನು ಹಾಳುಮಾಡಬಾರದೆಂದು ನಿರ್ಧರಿಸಿದ ಆಕೆ, ತಾವೇ ಕೋಚ್ ಆದರು. ಮೈದಾನಕ್ಕೆ ಹೋಗಿ ಮಗನ ತರಬೇತಿ ಪಡೆಯುವ ವಿಡಿಯೋ ಮಾಡಿ, ಮನೆಗೆ ಬಂದು ಆತನ ಫುಟ್‌ವರ್ಕ್, ಬ್ಯಾಟ್ ಹಿಡಿಯುವ ಶೈಲಿಯನ್ನು ತಿದ್ದುತ್ತಿದ್ದರು. ಅಷ್ಟೇ ಅಲ್ಲ, ಸೆನುರಾನ್ ಅವರ ಅಜ್ಜಿ ಕೂಡ ಮೊಮ್ಮಗನಿಗೆ ನೆರವಾಗಲು ಹಿತ್ತಲಿನಲ್ಲಿ ಬೌಲಿಂಗ್ ಮಾಡುತ್ತಿದ್ದರು! “ಚೆಂಡನ್ನು ಸುಮ್ಮನೆ ಎಸೆಯಬೇಡಿ ಅಜ್ಜಿ, ಸರಿಯಾಗಿ ಬೌಲ್ ಮಾಡಿ” ಎಂದು ಪುಟಾಣಿ ಸೆನುರಾನ್ ಗದರುತ್ತಿದ್ದಾಗ, ಆ ಕುಟುಂಬದ ಕ್ರಿಕೆಟ್ ಪ್ರೇಮ ಎಂಥದ್ದು ಎಂದು ಅರ್ಥವಾಗುತ್ತದೆ. ಹಬ್ಬ ಹರಿದಿನಗಳೆನ್ನದೆ, ಕ್ರಿಸ್‌ಮಸ್ ರಜೆಯಲ್ಲೂ ಸೆನುರಾನ್ ಜಿಮ್‌ನಲ್ಲಿ ಬೆವರು ಸುರಿಸುತ್ತಿದ್ದರು. ಶೇಕ್ಸ್‌ಪಿಯರ್‌ನ ನಾಟಕದ ಸಾಲುಗಳನ್ನು ಡೈರಿಯಲ್ಲಿ ಬರೆದಿಟ್ಟುಕೊಂಡು, “ಶ್ರೇಷ್ಠತೆ ಎಂಬುದು ಹುಟ್ಟಿನಿಂದ ಬರುವುದಿಲ್ಲ, ಸಾಧನೆಯಿಂದ ಬರುತ್ತದೆ” ಎಂದು ನಂಬಿದ್ದರು.

ವೇಗದ ಬೌಲರ್‌ ಆಗಿ ವೃತ್ತಿ ಜೀವನ ಆರಂಭಿಸಿದ ಮುತ್ತುಸ್ವಾಮಿ

ಇಲ್ಲಿ ಮತ್ತೊಂದು ಕುತೂಹಲಕಾರಿ ಸಂಗತಿಯಿದೆ. ಇಂದು ವಿಶ್ವದರ್ಜೆಯ ಸ್ಪಿನ್ನರ್ ಆಗಿರುವ ಸೆನುರಾನ್, ತಮ್ಮ ವೃತ್ತಿಜೀವನವನ್ನು ಆರಂಭಿಸಿದ್ದು ವೇಗದ ಬೌಲರ್ ಆಗಿ! ಹೌದು, ಎಡಗೈ ಮಧ್ಯಮ ವೇಗಿಯಾಗಿ ಅವರು ಬೌಲಿಂಗ್ ಮಾಡುತ್ತಿದ್ದರು. ಆದರೆ ನಿರಂತರ ಬೌಲಿಂಗ್‌ನಿಂದ ಬೆನ್ನುನೋವು ಕಾಣಿಸಿಕೊಂಡಾಗ, ಅವರ ಕೋಚ್‌ಗಳಾದ ಯಶಿನ್ ಇಬ್ರಾಹಿಂ ಮತ್ತು ಮಾರ್ಕ್ ಏಂಜೆಲ್ ಅವರು ಸ್ಪಿನ್ ಬೌಲಿಂಗ್ ಮಾಡುವಂತೆ ಸಲಹೆ ನೀಡಿದರು. ಇದು ಅವರ ಬದುಕಿನ ತಿರುವು. ವೇಗದ ಬೌಲಿಂಗ್‌ನ ಆಕ್ರಮಣಕಾರಿ ಮನೋಭಾವವನ್ನು ಸ್ಪಿನ್ ಬೌಲಿಂಗ್‌ನ ಚಾಕಚಕ್ಯತೆಯೊಂದಿಗೆ ಬೆರೆಸಿದ ಸೆನುರಾನ್, ದಕ್ಷಿಣ ಆಫ್ರಿಕಾದ ಪಿಚ್‌ಗಳಲ್ಲಿ ಮಿಂಚತೊಡಗಿದರು. ಕೇಶವ್ ಮಹಾರಾಜ್ ಅವರಂತಹ ಹಿರಿಯ ಸ್ಪಿನ್ನರ್ ತಂಡದಲ್ಲಿದ್ದರೂ, ತಮ್ಮದೇ ಆದ ಸ್ಥಾನ ಕಂಡುಕೊಳ್ಳಲು ಅವರು ನಡೆಸಿದ ಸಂಘರ್ಷ ಸಾಮಾನ್ಯವಾದದ್ದಲ್ಲ. ಪಾಕಿಸ್ತಾನದ ವಿರುದ್ಧದ ಸರಣಿಯಲ್ಲಿ 11 ವಿಕೆಟ್ ಕಬಳಿಸುವ ಮೂಲಕ ತಾವು ಕೇವಲ ಬದಲಿ ಆಟಗಾರನಲ್ಲ, ಮ್ಯಾಚ್ ವಿನ್ನರ್ ಎಂಬುದನ್ನು ಸಾಬೀತುಪಡಿಸಿದರು.

ಸೆನುರಾನ್ ಅವರ ಜೀವನದ ಕಥೆ ಹೇಳುವಾಗ, ವಿಶ್ವ ಕ್ರಿಕೆಟ್‌ನಲ್ಲಿ ಭಾರತೀಯ ಮೂಲದ ಇತರ ಆಟಗಾರರ ಸಾಧನೆಯನ್ನು ಸ್ಮರಿಸಲೇಬೇಕು. ಬ್ರಿಟಿಷರು ಕೇವಲ ದಕ್ಷಿಣ ಆಫ್ರಿಕಾಕ್ಕೆ ಮಾತ್ರವಲ್ಲ, ವೆಸ್ಟ್ ಇಂಡೀಸ್‌ಗೂ ಭಾರತೀಯರನ್ನು ಕರೆದೊಯ್ದಿದ್ದರು. ಅಲ್ಲಿನ ಗಯಾನ ಮತ್ತು ಟ್ರಿನಿಡಾಡ್ ದ್ವೀಪಗಳಲ್ಲಿ ನೆಲೆಸಿದ ಭಾರತೀಯರ ಮೂರನೇ ಅಥವಾ ನಾಲ್ಕನೇ ತಲೆಮಾರಿನ ಕುಡಿಗಳೇ ಶಿವನಾರಾಯಣ್ ಚಂದ್ರಪಾಲ್, ರಾಮ್‌ನರೇಶ್ ಸರವಣ್ ಮತ್ತು ಸುನಿಲ್ ನರೈನ್ ಅವರಂತಹ ದಿಗ್ಗಜರು. ವೆಸ್ಟ್ ಇಂಡೀಸ್ ಕ್ರಿಕೆಟ್ ಇತಿಹಾಸದಲ್ಲಿ ಬ್ರಯನ್ ಲಾರಾ ನಂತರ ಅತ್ಯಂತ ಹೆಚ್ಚು ಗೌರವಿಸಲ್ಪಡುವ ಹೆಸರು ಶಿವನಾರಾಯಣ್ ಚಂದ್ರಪಾಲ್ ಅವರದ್ದು. ಬಿಹಾರ ಮೂಲದ ಇವರ ಪೂರ್ವಜರು ಕಬ್ಬಿನ ಗದ್ದೆಗಳಲ್ಲಿ ಕೆಲಸ ಮಾಡಲು ಹೋಗಿದ್ದರು. ವಿಚಿತ್ರವಾದ ಬ್ಯಾಟಿಂಗ್ ಶೈಲಿಯನ್ನು ಹೊಂದಿದ್ದ ಚಂದ್ರಪಾಲ್, ವಿಶ್ವದ ಅತ್ಯಂತ ಶ್ರೇಷ್ಠ ವೇಗಿಗಳನ್ನು ಎದುರಿಸಿ 11,000ಕ್ಕೂ ಹೆಚ್ಚು ಟೆಸ್ಟ್ ರನ್ ಗಳಿಸಿದ್ದರು. ಅವರು ಕ್ರೀಸ್‌ನಲ್ಲಿ ನಿಂತರೆ ಸಾಕು, ಬೌಲರ್‌ಗಳು ಬೆವರುತ್ತಿದ್ದರು. ಇಂದು ಅವರ ಮಗ ಟೇಜ್‌ನಾರಾಯಣ್ ಚಂದ್ರಪಾಲ್ ಕೂಡ ವೆಸ್ಟ್ ಇಂಡೀಸ್ ಪರ ಟೆಸ್ಟ್ ಆಡುತ್ತಿದ್ದಾರೆ. ಅವರು ಭಾರತಕ್ಕೆ ಬಂದಾಗಲೆಲ್ಲಾ, ತಮ್ಮ ಪೂರ್ವಜರ ಊರುಗಳನ್ನು ಹುಡುಕಿಕೊಂಡು ಹೋಗುತ್ತಾರೆ. ಇದು ರಕ್ತಸಂಬಂಧದ ಸೆಳೆತ.

Senuran Muthusamy 1

ದಕ್ಷಿಣ ಆಫ್ರಿಕಾದಲ್ಲೇ ನೋಡುವುದಾದರೆ, ಹಾಶಿಮ್ ಆಮ್ಲಾ ಅವರ ಹೆಸರು ಚರಿತ್ರಾರ್ಹ. ಗುಜರಾತ್ ಮೂಲದ ಆಮ್ಲಾ, ದಕ್ಷಿಣ ಆಫ್ರಿಕಾದ ರಾಷ್ಟ್ರೀಯ ತಂಡವನ್ನು ಮುನ್ನಡೆಸಿದ ಮೊದಲ ‘ಬಿಳಿಯರಲ್ಲದ’ ನಾಯಕ. ಅವರ ಗಡ್ಡ ಮತ್ತು ಮಣಿಕಟ್ಟಿನ ತಿರುವಿನ ಆಟ ವಿಶ್ವವಿಖ್ಯಾತ. ಹಾಗೆಯೇ ಕೇಶವ್ ಮಹಾರಾಜ್. ಇವರ ಪೂರ್ವಜರು ಉತ್ತರ ಪ್ರದೇಶದ ಸುಲ್ತಾನ್‌ಪುರದಿಂದ ಬಂದವರು. ಇವರೆಲ್ಲರೂ ಭಾರತೀಯ ಮೂಲದವರಾದರೂ, ದಕ್ಷಿಣ ಆಫ್ರಿಕಾದ ಜೆರ್ಸಿ ಧರಿಸಿ ಆಡುವಾಗ ಅಲ್ಲಿನ ದೇಶಭಕ್ತಿಯನ್ನು ಮೆರೆಯುತ್ತಾರೆ. 2019ರಲ್ಲಿ ಸೆನುರಾನ್ ಮುತ್ತುಸ್ವಾಮಿ ಮೊದಲ ಬಾರಿಗೆ ಭಾರತಕ್ಕೆ ಬಂದಾಗ, ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರು ಅವರ ಆಟಕ್ಕಿಂತ ಹೆಚ್ಚಾಗಿ ಅವರ ಹೆಸರಿನ ಬಗ್ಗೆಯೇ ಪ್ರಶ್ನೆ ಕೇಳಿದ್ದರು. “ನೀವು ತಮಿಳು ಮಾತನಾಡುತ್ತೀರಾ?”, “ನೀವು ಭಾರತೀಯರೋ ಅಥವಾ ಆಫ್ರಿಕನ್ನರೋ?” ಎಂಬ ಪ್ರಶ್ನೆಗಳಿಗೆ ಸೆನುರಾನ್ ಬಹಳ ಪ್ರಬುದ್ಧವಾಗಿ ಉತ್ತರಿಸಿದ್ದರು. “ನನ್ನ ಬೇರುಗಳು ಭಾರತದಲ್ಲಿವೆ, ಅದನ್ನು ನಾನು ಗೌರವಿಸುತ್ತೇನೆ. ಆದರೆ ನಾನು ಹುಟ್ಟಿ ಬೆಳೆದಿದ್ದು ದಕ್ಷಿಣ ಆಫ್ರಿಕಾದಲ್ಲಿ. ಪ್ರೋಟಿಯಾಸ್(ದಕ್ಷಿಣ ಆಫ್ರಿಕಾ) ಲಾಂಛನವನ್ನು ಎದೆಮೇಲೆ ಧರಿಸುವುದು ನನ್ನ ಪಾಲಿನ ಪರಮ ಗೌರವ. ನಾವು ಭಾರತಕ್ಕೆ ಬಂದರೆ ಅಲ್ಲಿನವರಂತೆ ಕಾಣುವುದಿಲ್ಲ, ನಮಗೆ ಸೇರಬೇಕಾದ ಜಾಗ ದಕ್ಷಿಣ ಆಫ್ರಿಕಾ,” ಎಂದು ಹೇಳಿದ್ದರು.

ಗುವಾಹಟಿಯಲ್ಲಿ ಶತಕ ಬಾರಿಸಿದ ನಂತರ, ಸೆನುರಾನ್ ಅವರ ತಾಯಿ ಹೇಳಿದ ಮಾತುಗಳು ಬಹಳ ಅರ್ಥಪೂರ್ಣವಾಗಿವೆ. “ನಮ್ಮ ಪೂರ್ವಜರು ಇಲ್ಲಿಗೆ ಬಂದಾಗ ಏನೂ ಇಲ್ಲದ ಬರಿಗೈ ಫಕೀರರಾಗಿದ್ದರು. ಅವರು ಅನುಭವಿಸಿದ ಹಿಂಸೆ, ಅವಮಾನಗಳಿಗೆ ಲೆಕ್ಕವಿಲ್ಲ. ಆದರೆ ಅವರು ಸೋಲಲಿಲ್ಲ. ಅವರ ತ್ಯಾಗದ ಫಲವಾಗಿ ಇಂದು ನನ್ನ ಮಗ ವಿಶ್ವದ ಶ್ರೇಷ್ಠ ತಂಡದ ವಿರುದ್ಧ, ಅವರದ್ದೇ ನೆಲದಲ್ಲಿ ಶತಕ ಬಾರಿಸಿದ್ದಾನೆ. ಇದು ಸೇಡಲ್ಲ, ಇದು ಸಾಧನೆ,” ಎಂದು ವಾಣಿ ಭಾವುಕರಾಗಿ ನುಡಿದಿದ್ದಾರೆ. ಸೆನುರಾನ್ ಮುತ್ತುಸ್ವಾಮಿ ಅವರ ಬ್ಯಾಟಿಂಗ್‌ನಲ್ಲಿ ದ್ರಾವಿಡ್ ಅವರಂತಹ ತಾಳ್ಮೆ ಮತ್ತು ಗಂಗೂಲಿ ಅವರಂತಹ ಆಕ್ರಮಣಶೀಲತೆ ಎರಡೂ ಇದೆ ಎಂದು ವಿಶ್ಲೇಷಕರು ಹೇಳುತ್ತಾರೆ. ಆದರೆ ಅದರಾಚೆಗೆ ಅವರಲ್ಲಿರುವುದು, ನೂರು ವರ್ಷಗಳ ಹಿಂದೆ ಹಡಗಿನಲ್ಲಿ ಕದ್ದುಮುಚ್ಚಿ ಬಂದು, ಅಪರಿಚಿತ ನಾಡಿನಲ್ಲಿ ಬದುಕು ಕಟ್ಟಿಕೊಂಡ ಹೋರಾಟಗಾರ ಮುತ್ತಜ್ಜನ ಕೆಚ್ಚೆದೆಯ ಗುಣ.

ಇದನ್ನೂ ಓದಿ ಕುದಿಕಡಲು | ಸಂಘಪರಿವಾರದಿಂದ ಕೊಲ್ಲಲಾಗದ ಗಾಂಧಿ

ಕ್ರಿಕೆಟ್ ಕೇವಲ ಆಟವಲ್ಲ, ಅದು ಗಡಿಗಳನ್ನು ಮೀರಿದ ಭಾವನಾತ್ಮಕ ಸೇತುವೆ ಎಂಬುದಕ್ಕೆ ಸೆನುರಾನ್ ಸಾಕ್ಷಿಯಾಗಿದ್ದಾರೆ. ನಾಗಪಟ್ಟಣಂನ ಯಾವುದೋ ಮೂಲೆಯಲ್ಲಿ ಹುಟ್ಟಬೇಕಿದ್ದ ಜೀವವೊಂದು, ಇತಿಹಾಸದ ಚಕ್ರದ ಉರುಳುವಿಕೆಯಿಂದಾಗಿ ಡರ್ಬನ್‌ನಲ್ಲಿ ಜನಿಸಿ, ಮತ್ತೆ ಬಂದು ಭಾರತದ ನೆಲದಲ್ಲಿ ಮೈಲಿಗಲ್ಲು ಸ್ಥಾಪಿಸುವುದು ವಿಧಿಯಾಟವೇ ಸರಿ. ಶಿವನಾರಾಯಣ್ ಚಂದ್ರಪಾಲ್ ಅವರಿಂದ ಹಿಡಿದು ಹಾಶಿಮ್ ಆಮ್ಲಾ, ಕೇಶವ್ ಮಹಾರಾಜ್ ಮತ್ತು ಈಗ ಸೆನುರಾನ್ ಮುತ್ತುಸ್ವಾಮಿಯವರೆಗೆ, ಈ ಎಲ್ಲ ಆಟಗಾರರು ಭಾರತೀಯ ವಲಸಿಗರ ಯಶೋಗಾಥೆಯನ್ನು ಜಗತ್ತಿಗೆ ಸಾರುತ್ತಿದ್ದಾರೆ. ಅಂದು ಬ್ರಿಟಿಷರು ಇವರನ್ನು ಕೂಲಿಗಳೆಂದು ಕರೆದಿರಬಹುದು, ಆದರೆ ಇಂದು ಕ್ರಿಕೆಟ್ ಜಗತ್ತು ಇವರನ್ನು “ರಾಜರು” ಎಂದು ಕರೆಯುತ್ತಿದೆ. ಗುವಾಹಟಿಯ ಆ ಇನಿಂಗ್ಸ್, ದಕ್ಷಿಣ ಆಫ್ರಿಕಾದ ಕ್ರಿಕೆಟ್ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತದ್ದಾಗಿದೆ.

blank profile picture 973460 640
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...