ಗೌತಮ್ ಗಂಭೀರ್ ಒಬ್ಬ ಹೋರಾಟಗಾರ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಕೋಚ್ ಆಗಿ ಕೇವಲ ತಂತ್ರಗಾರಿಕೆ ಮಾತ್ರವಲ್ಲದೆ, ಟೀಕೆಗಳನ್ನು ಸ್ವೀಕರಿಸುವ ಮತ್ತು ಒತ್ತಡದ ಸಂದರ್ಭದಲ್ಲಿ ತಂಡದ ವಾತಾವರಣವನ್ನು ತಿಳಿಯಾಗಿಡುವ ಜಾಣ್ಮೆಯೂ ಅಗತ್ಯ. ಹಿರಿಯರ ಮಾತುಗಳು ಕೇವಲ ಟೀಕೆಗಳಲ್ಲ, ಅವು ಭಾರತ ಕ್ರಿಕೆಟ್‌ನ ಹಿತದೃಷ್ಟಿಯಿಂದ ಬಂದ ಎಚ್ಚರಿಕೆ ಗಂಟೆಗಳು ಎಂಬುದನ್ನು ಗಂಭೀರ್ ಅರ್ಥಮಾಡಿಕೊಳ್ಳಬೇಕಿದೆ
ರಾಹುಲ್ ದ್ರಾವಿಡ್ ಅವರ ಶಾಂತ ಸ್ವಭಾವದ ನಂತರ ಟೀಮ್ ಇಂಡಿಯಾದ ಚುಕ್ಕಾಣಿ ಹಿಡಿದ ಗೌತಮ್ ಗಂಭೀರ್, ತಮ್ಮ ಆಕ್ರಮಣಕಾರಿ ಶೈಲಿಗೆ ಹೆಸರಾದವರು. ಆದರೆ, ತವರಿನಲ್ಲೇ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಅನುಭವಿಸಿದ ಮುಖಭಂಗ(ವೈಟ್‌ವಾಶ್) ಮತ್ತು ಬಾರ್ಡರ್- ಗವಾಸ್ಕರ್ ಟ್ರೋಫಿಯ ಆರಂಭಿಕ ಹಂತದಲ್ಲಿನ ಗೊಂದಲಗಳು ಗಂಭೀರ್ ಅವರನ್ನು ಟೀಕೆಗಳ ಸುಳಿಗೆ ಸಿಲುಕಿಸಿವೆ. ಮೈದಾನದಲ್ಲಿನ ಫಲಿತಾಂಶಕ್ಕಿಂತ ಹೆಚ್ಚಾಗಿ, ಮೈದಾನದ ಹೊರಗೆ ಹಿರಿಯ ಕ್ರಿಕೆಟಿಗರ ವಾಗ್ದಾಳಿಗಳು ಗಂಭೀರ್ ಅವರ ತಲೆನೋವನ್ನು ಹೆಚ್ಚಿಸಿವೆ.
ಗಂಭೀರ್ ಕೋಚ್ ಆದಾಗಿನಿಂದಲೂ ಅವರ ನೇರ ನಡೆನುಡಿ ಚರ್ಚೆಯ ವಿಷಯವಾಗಿದೆ. ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ರಿಕಿ ಪಾಂಟಿಂಗ್ ಅವರ ಹೇಳಿಕೆಗೆ ಗಂಭೀರ್ ನೀಡಿದ ಪ್ರತಿಕ್ರಿಯೆ ವಿವಾದದ ಕಿಡಿ ಹೊತ್ತಿಸಿತು. ವಿರಾಟ್ ಕೊಹ್ಲಿ ಫಾರ್ಮ್ ಬಗ್ಗೆ ಪಾಂಟಿಂಗ್ ಆಡದ್ದ ಮಾತಿಗೆ, “ಭಾರತದ ಕ್ರಿಕೆಟ್ ಬಗ್ಗೆ ಪಾಂಟಿಂಗ್‌ಗೆ ಏನು ಕೆಲಸ? ಅವರು ತಮ್ಮ ಆಸ್ಟ್ರೇಲಿಯಾ ತಂಡದ ಬಗ್ಗೆ ಯೋಚಿಸಲಿ,” ಎಂದು ಗಂಭೀರ್ ಖಾರವಾಗಿ ಉತ್ತರಿಸಿದ್ದರು.
ಇದು ಅನೇಕ ಹಿರಿಯ ಕ್ರಿಕೆಟಿಗರಿಗೆ ರುಚಿಸಲಿಲ್ಲ. ಈ ಕುರಿತು ಪ್ರತಿಕ್ರಿಯಿಸಿದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್, ಬಿಸಿಸಿಐಗೆ ನೇರ ಸಲಹೆ ನೀಡದರು. “ಗಂಭೀರ್ ಅವರಿಗೆ ಮಾಧ್ಯಮಗಳ ಮುಂದೆ ಮಾತನಾಡಲು ಬಿಡಬಾರದು. ಡ್ರೆಸ್ಸಿಂಗ್ ರೂಮ್‌ನಲ್ಲಿ ಅವರು ಉತ್ತಮ ಕೆಲಸ ಮಾಡಬಹುದು, ಆದರೆ ಪತ್ರಿಕಾಗೋಷ್ಠಿಯಲ್ಲಿ ಅವರ ಮಾತುಗಳು ಮತ್ತು ವರ್ತನೆ ತಂಡಕ್ಕೆ ಹೊರೆಯಾಗಬಹುದು. ರೋಹಿತ್ ಶರ್ಮಾ ಅಥವಾ ಅಜಿತ್ ಅಗರ್ಕರ್ ಅವರೇ ಮಾಧ್ಯಮಗಳನ್ನು ನಿಭಾಯಿಸುವುದು ಲೇಸು,” ಎಂದು ಟ್ವೀಟ್ ಮಾಡುವ ಮೂಲಕ ಗಂಭೀರ್ ಅವರ ‘ಸಂಯಮ’ದ ಬಗ್ಗೆ ಪ್ರಶ್ನೆ ಎತ್ತಿದರು.

ಭಾರತ ಕ್ರಿಕೆಟ್‌ನ ದಿಗ್ಗಜ ಸುನಿಲ್ ಗಾವಸ್ಕರ್ ಕೂಡ ಗಂಭೀರ್ ಅವರ ತಂತ್ರಗಾರಿಕೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಸೋಲಿನ ನಂತರ ಮಾತನಾಡಿದ್ದ ಅವರು, ತಂಡದ ಸಿದ್ಧತೆಯ ಕೋರಿಕೆಯನ್ನು ಎತ್ತಿ ತೋರಿಸಿದ್ದರು. “ಭಾರತ ತಂಡಕ್ಕೆ ಅಭ್ಯಾಸ ಪಂದ್ಯಗಳ ಅಗತ್ಯವಿತ್ತು. ಅದನ್ನು ರದ್ದುಗೊಳಿಸಿದ್ದು ಸರಿಯಲ್ಲ,”ಎಂದು ಗವಾಸ್ಕರ್ ಹೇಳಿದ್ದರು. ಅಲ್ಲದೆ, ಕೋಚಿಂಗ್ ಸಿಬ್ಬಂದಿಯ ಜವಾಬ್ದಾರಿಯ ಬಗ್ಗೆಯೂ ಎಚ್ಚರಿಸಿದ್ದ ಸನ್ನಿ, “ಫಲಿತಾಂಶ ಬರದಿದ್ದರೆ ಪ್ರಶ್ನೆಗಳು ಏಳುವುದು ಸಹಜ. ಗಂಭೀರ್ ಅವರ ಹನಿಮೂನ್ ಅವಧಿ ಮುಗಿದಿದೆ,” ಎಂದು ಮಾರ್ಮಿಕವಾಗಿ ಎಚ್ಚರಿಸಿದ್ದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಕೇಂದ್ರದ ತಾರತಮ್ಯ ನೀತಿಯನ್ನು ಪ್ರಶ್ನಿಸುವುದು ತಪ್ಪಲ್ಲ
ಆಸ್ಟ್ರೇಲಿಯಾದ ಮಾಜಿ ನಾಯಕ ಟಿಮ್ ಪೇನ್, ಗಂಭೀರ್ ಅವರ ಸ್ವಭಾವವನ್ನೇ ಗುರಿಯಾಗಿಸಿಕೊಂಡರು. “ಗಂಭೀರ್ ಒಬ್ಬ ಉತ್ತಮ ಕೋಚ್ ಆಗಿರಬಹುದು, ಆದರೆ ಒತ್ತಡದಲ್ಲಿ ಅವರು ಸಿಡಿಮಿಡಿಗೊಳ್ಳುತ್ತಾರೆ. ಇದು ಆಸ್ಟ್ರೇಲಿಯಾಕ್ಕೆ ಲಾಭದಾಯಕವಾಗಬಹುದು,” ಎಂದು ವ್ಯಂಗ್ಯವಾಡಿದ್ದರು.
ಇನ್ನೊಂದೆಡೆ, ಮಾಜಿ ಕೋಚ್ ರವಿಶಾಸ್ತ್ರಿ ಅವರು ಗಂಭೀರ್‌ಗೆ ತಾಳ್ಮೆಯ ಮಂತ್ರ ಬೋಧಿಸಿದ್ದಾರೆ. “ಆಸ್ಟ್ರೇಲಿಯಾದಲ್ಲಿ ಯಶಸ್ಸು ಕಾಣಬೇಕಾದರೆ ಶಾಂತವಾಗಿರಬೇಕು. ಎದುರಾಳಿಗಳು ಕೆಣಕುತ್ತಾರೆ, ಆದರೆ ಅದಕ್ಕೆ ಪ್ರತಿಕ್ರಿಯಿಸದೆ ಆಟದ ಮೂಲಕ ಉತ್ತರ ನೀಡಬೇಕು,” ಎಂದು ಶಾಸ್ತ್ರಿ ಸಲಹೆ ನೀಡಿದ್ದಾರೆ.
ಗಂಭೀರ್ ಬೆನ್ನಿಗೆ ನಿಂತ ದಾದಾ
ಇಷ್ಟೆಲ್ಲಾ ಟೀಕೆಗಳ ನಡುವೆಯೂ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಗಂಭೀರ್ ಬೆಂಬಲಕ್ಕೆ ನಿಂತಿದ್ದಾರೆ. “ಗಂಭೀರ್ ಸ್ವಭಾವವೇ ಹಾಗೆ. ಅವರನ್ನು ಬದಲಾಯಿಸಲು ಹೋಗಬೇಡಿ. ಆಕ್ರಮಣಕಾರಿ ಮನೋಭಾವವೇ ಅವರನ್ನು ವಿಶ್ವಕಪ್ ವಿಜೇತರನ್ನಾಗಿ ಮಾಡಿದೆ. ಅವರಿಗೆ ಸ್ವಲ್ಪ ಸಮಯ ಕೊಡಿ, ಫಲಿತಾಂಶ ತಾನಾಗಿಯೇ ಬರುತ್ತದೆ,” ಎಂದು ಗಂಗೂಲಿ ಸಮರ್ಥಿಸಿಕೊಂಡಿದ್ದಾರೆ.

ಬಿಸಿಸಿಐ ಕಟ್ಟಪ್ಪಣೆ
ಮೂಲಗಳ ಪ್ರಕಾರ, ನ್ಯೂಜಿಲೆಂಡ್ ಸರಣಿಯ ಸೋಲಿನ ನಂತರ ಬಿಸಿಸಿಐ ನಡೆಸಿದ ಆರು ಗಂಟೆಗಳ ಸುದೀರ್ಘ ಸಭೆಯಲ್ಲಿ ಗಂಭೀರ್ ಅವರ ಕೆಲವು ನಿರ್ಧಾರಗಳ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗಿದೆ. ಸದ್ಯ ತಂಡವು ಸಂಕ್ರಮಣ ಕಾಲದಲ್ಲಿದ್ದು, ರೋಹಿತ್, ಕೊಹ್ಲಿಯಂತಹ ಹಿರಿಯರು ಮತ್ತು ಜೈಸ್ವಾಲ್, ಗಿಲ್ ಅವರಂತಹ ಕಿರಿಯರ ನಡುವೆ ಸೇತುವೆಯಾಗುವ ಜವಾಬ್ದಾರಿ ಗಂಭೀರ್ ಮೇಲಿದೆ.
ಗೌತಮ್ ಗಂಭೀರ್ ಒಬ್ಬ ಹೋರಾಟಗಾರ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಕೋಚ್ ಆಗಿ ಕೇವಲ ತಂತ್ರಗಾರಿಕೆ ಮಾತ್ರವಲ್ಲದೆ, ಟೀಕೆಗಳನ್ನು ಸ್ವೀಕರಿಸುವ ಮತ್ತು ಒತ್ತಡದ ಸಂದರ್ಭದಲ್ಲಿ ತಂಡದ ವಾತಾವರಣವನ್ನು ತಿಳಿಯಾಗಿಡುವ ಜಾಣ್ಮೆಯೂ ಅಗತ್ಯ. ಹಿರಿಯರ ಮಾತುಗಳು ಕೇವಲ ಟೀಕೆಗಳಲ್ಲ, ಅವು ಭಾರತ ಕ್ರಿಕೆಟ್‌ನ ಹಿತದೃಷ್ಟಿಯಿಂದ ಬಂದ ಎಚ್ಚರಿಕೆ ಗಂಟೆಗಳು ಎಂಬುದನ್ನು ಗಂಭೀರ್ ಅರ್ಥಮಾಡಿಕೊಳ್ಳಬೇಕಿದೆ. ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿ, ಟಿ20 ವಿಶ್ವಕಪ್, ಆಸ್ಟ್ರೇಲಿಯಾ ಸರಣಿಯ ಫಲಿತಾಂಶವು ಗಂಭೀರ್ ಅವರ ಕೋಚಿಂಗ್ ಭವಿಷ್ಯದ ದಿಕ್ಸೂಚಿಯಾಗಲಿದೆ.





