ಕ್ರಿಕೆಟ್ ಎಂದಾಗ ಪುರುಷರ ತಂಡವಾಗಲಿ, ಮಹಿಳೆಯರ ತಂಡವಾಗಲಿ ಮಾನಸಿಕ ಒತ್ತಡ, ದೈಹಿಕ ನೋವು ಇದ್ದೇ ಇರುವಂತದ್ದು. ಆದರೆ ಮಹಿಳೆಯರು ಕ್ರಿಕೆಟ್ ಮೈದಾನದಲ್ಲಿ ಮುಟ್ಟಿನೊಂದಿಗೆ ಮೌನ ಕದನವನ್ನೂ ನಡೆಸುವವರು. ಮಹಿಳಾ ಕ್ರಿಕೆಟಿಗರ ಹಿಂದೆ ನಮಗೆ ತಿಳಿಯದ ದೈಹಿಕ ಯಾತನೆಯ ಕಥೆಗಳಿವೆ.
ಕ್ರಿಕೆಟ್ ಎಂಬುದು ಬರೀ ಪುರುಷರಿಗೆ ಸೀಮಿತ ಎಂಬ ಕಾಲವೊಂದಿತ್ತು. ಆದರೆ ಇಂದು ಕಾಲ ಬದಲಾಗಿದೆ. ಪುರುಷರಿಗೆ ಸಮಾನವಾಗಿ, ಸದೃಢವಾಗಿ ಮಹಿಳೆಯರು ಕ್ರಿಕೆಟ್‌ನಲ್ಲಿ ತೊಡಗಿಕೊಂಡಿದ್ದಾರೆ. ಭಾರತದಲ್ಲಿ ‘ಮೆನ್ ಇನ್ ಬ್ಲೂ’ಗೆ ಸಮಾನವಾಗಿ ‘ವುಮೆನ್ ಇನ್ ಬ್ಲೂ’ ಹೊರಹೊಮ್ಮಿದೆ. 1887ರಲ್ಲಿ ಇಂಗ್ಲೆಂಡ್‌ನಲ್ಲಿ ಆರಂಭವಾದ ವಿಶ್ವದ ಮೊದಲ ಮಹಿಳಾ ಕ್ರಿಕೆಟ್ ತಂಡ ‘ವೈಟ್ ಹೀದರ್ ಕ್ಲಬ್’ (White Heather Club) ಇತಿಹಾಸದಲ್ಲಿ ಪ್ರಮುಖ ಮೈಲಿಗಲ್ಲನ್ನು ತಲುಪಿದೆ. ಭಾರತದಲ್ಲಿ 1973ರಲ್ಲಿ ಲಕ್ನೋದಲ್ಲಿ ‘ಮಹಿಳಾ ಕ್ರಿಕೆಟ್ ಅಸೋಸಿಯೇಷನ್ ಆಫ್ ಇಂಡಿಯಾ’ (WCAI) ಸ್ಥಾಪನೆಯೊಂದಿಗೆ ಆರಂಭವಾದ ಮಹಿಳಾ ಕ್ರಿಕೆಟ್ ಲೋಕ ಇಂದು ಜಾಗತಿಕವಾಗಿ ತಮ್ಮದೇ ಆದ ಛಾಪು ಮೂಡಿಸಿದೆ.
2025ರ ನವೆಂಬರ್ 2ರಂದು ಭಾರತೀಯ ಮಹಿಳಾ ತಂಡವು ತನ್ನ ಮೊದಲ ವಿಶ್ವಕಪ್ ಮುಕುಟವನ್ನು ಗೆಲ್ಲುವ ಮೂಲಕ ಹೊಸ ಇತಿಹಾಸ ಬರೆದಿದೆ. ಆದರೆ ಈ ದಾರಿ ಅಷ್ಟು ಸುಲಭವಲ್ಲ. ಅಷ್ಟಕ್ಕೂ ಮಹಿಳಾ ಕ್ರಿಕೆಟ್ ಎನ್ನುವುದು ಕೇವಲ ಬ್ಯಾಟ್ ಮತ್ತು ಬಾಲ್ ನಡುವಿನ ಹೋರಾಟವಲ್ಲ. ಪುರುಷರ ತಂಡಕ್ಕಿಂತ ಭಿನ್ನವಾಗಿ, ಹೆಚ್ಚಾಗಿ ದೈಹಿಕ, ಮಾನಸಿಕ ಒತ್ತಡಗಳನ್ನು ಹೊತ್ತು, ಅದರೊಂದಿಗೆ ಜೀವಿಸಿ ತಂಡವನ್ನು ಗೆಲುವಿನತ್ತ ಸಾಗಿಸುವವರು ಮಹಿಳಾ ಕ್ರಿಕೆಟ್ ಆಟಗಾರರು.
ಇದನ್ನು ಓದಿದ್ದೀರಾ? ಕಾಶ್ಮೀರದ ಹಳ್ಳಿಗಳಲ್ಲಿ ಮುಟ್ಟು ಈಗಲೂ ಗುಟ್ಟು: ಐದು ದಿನದ ರೋಗ ಅಂತ ಕರೀತಾರೆ!
ಕ್ರಿಕೆಟ್ ಎಂದಾಗ ಪುರುಷರ ತಂಡವಾಗಲಿ, ಮಹಿಳೆಯರ ತಂಡವಾಗಲಿ ಮಾನಸಿಕ ಒತ್ತಡ, ದೈಹಿಕ ನೋವು ಇದ್ದೇ ಇರುವಂತದ್ದು. ಆದರೆ ಮಹಿಳೆಯರು ಕ್ರಿಕೆಟ್ ಮೈದಾನದಲ್ಲಿ ಮುಟ್ಟಿನೊಂದಿಗೆ ಮೌನ ಕದನವನ್ನೂ ನಡೆಸುವವರು. ಅದರಲ್ಲೂ ಟೆಸ್ಟ್ ಪಂದ್ಯಗಳ ವೇಳೆ ಮೈದಾನದಲ್ಲಿ ಬಿಳಿ ಉಡುಪು ಧರಿಸಿ, ಸಾವಿರಾರು ಪ್ರೇಕ್ಷಕರ ಮುಂದೆ ಓಡುತ್ತಾ, ಡೈವ್ ಹೊಡೆಯುತ್ತಾ ಆಡುವ ಮಹಿಳಾ ಕ್ರಿಕೆಟಿಗರ ಹಿಂದೆ ನಮಗೆ ತಿಳಿಯದ ದೈಹಿಕ ಯಾತನೆಯ ಕಥೆಗಳಿವೆ. ಹೀಗಿರುವಾಗ ಮುಟ್ಟಿನ ನೋವು-ಸಂಕಟಗಳ ನುಂಗಿ, ಕಲೆಗಳಾಗುವ ಭಯದ ನಡುವೆ ಮುನ್ನುಗ್ಗುತ್ತಿರುವ ಮಹಿಳಾ ಕ್ರಿಕೆಟ್ ಕಲಿಗಳಿಗೊಂದು ನಮ್ಮ ಸಲಾಮ್ ಸಲ್ಲಲೇಬೇಕು.
ಮುಟ್ಟಿನ ನೋವನ್ನು ಹೊತ್ತುಕೊಂಡು ಕೆಲಸ ಮಾಡುವುದೆಂದರೆ ಅದು ನರಕ ಸಂಕಟ. ಹೀಗಿರುವಾಗ ಮುಟ್ಟಿನ ನೋವಿನ ನಡುವೆ ಮೈದಾನಕ್ಕೆ ಇಳಿಯಬೇಕಾದ ಅನಿವಾರ್ಯತೆ ಮಹಿಳಾ ಕ್ರಿಕೆಟಿಗರದ್ದು. ಕ್ರೀಡಾಂಗಣದಲ್ಲಿ ಚಾಕಚಕ್ಯತೆಯಿಂದ ಬೌಂಡರಿ ತಡೆಯುವಾಗ ಅಥವಾ ಶತಕ ಬಾರಿಸಿದಾಗ ನಾವು ಮಹಿಳಾ ಕ್ರಿಕೆಟಿಗರ ಪ್ರತಿಭೆಯನ್ನು ಕೊಂಡಾಡುತ್ತೇವೆ. ಆದರೆ ಅದೇ ಸಮಯದಲ್ಲಿ ಅವರ ದೇಹದ ಒಳಗಾಗುತ್ತಿರುವ ಹೋರಾಟದ ಬಗ್ಗೆ ನಮಗೆ ಅರಿವಿರುವುದಿಲ್ಲ. ಮುಟ್ಟಾದ ವೇಳೆ ಇರುವ ಹೊಟ್ಟೆನೋವು, ಬೆನ್ನುನೋವು, ಸುಸ್ತನ್ನು ಬದಿಗೊತ್ತಿ ಸಿಕ್ಸರ್ ಬಾರಿಸುವುದು – ಇದೊಂದು ರೀತಿಯ ಮೌನ ಕ್ರಾಂತಿ. ನೋವನ್ನು ಬಚ್ಚಿಟ್ಟು, ಮುಚ್ಚಿಟ್ಟು ಮೈದಾನದಲ್ಲಿ ಅಬ್ಬರಿಸುವವರು ಈ ಮಹಿಳಾ ಕ್ರಿಕೆಟ್ ಕಲಿಗಳು.
ಮುಟ್ಟಿನ ನೋವನ್ನು ತೋಡಿಕೊಂಡ ಆಟಗಾರ್ತಿಯರು
ಈ ನೋವನ್ನು ಹಲವು ಬಾರಿ ಮಹಿಳಾ ಕ್ರಿಕೆಟ್ ಆಟಗಾರರು ನೆನಪಿಸಿಕೊಂಡಿದ್ದಾರೆ. 2009ರಲ್ಲಿ ಭಾರತೀಯ ಕ್ರಿಕೆಟ್ ತಾರೆ ಮಿಥಾಲಿ ರಾಜ್ ಅವರಿಗೆ ವಿಶ್ವಕಪ್ ಪಂದ್ಯವೊಂದರ ಸಂದರ್ಭದಲ್ಲೇ ಮುಟ್ಟಾಗಿ ತೀವ್ರವಾದ ನೋವಿನಿಂದ ನಿಲ್ಲಲೂ ಸಾಧ್ಯವಾಗುತ್ತಿರಲಿಲ್ಲ. ಆದರೂ ತಂಡಕ್ಕಾಗಿ ಮೈದಾನಕ್ಕಿಳಿದು ಅರ್ಧಶತಕ ಬಾರಿಸಿದ್ದರು. ಇದನ್ನು ಕಾರ್ಯಕ್ರಮವೊಂದರಲ್ಲಿ ನೆನಪಿಸಿಕೊಂಡಿದ್ದರು. ಅದೇ ರೀತಿ ಜೆಮಿಮಾ ರೋಡ್ರಿಗಸ್, ಸ್ನೇಹ್ ರಾಣಾ ಇತ್ತೀಚೆಗೆ ಕ್ರಿಕೆಟ್ ಸಂದರ್ಭದಲ್ಲಿ ಮುಟ್ಟಾಗಿ ಉಂಟಾಗುವ ಯಾತನೆ ಬಗ್ಗೆ ಮುಕ್ತವಾಗಿ ಮಾತನಾಡಿದ್ದರು.
“ಮುಟ್ಟಿನ ಸಮಯದಲ್ಲಿ ಹಾರ್ಮೋನ್ ಬದಲಾವಣೆ ಆಗುವುದರಿಂದಾಗಿ ಸ್ನಾಯುಗಳು ಮತ್ತು ಮೂಳೆಗಳು ದುರ್ಬಲಗೊಂಡಂತೆ ಆಗುತ್ತದೆ. 90ರ ದಶಕದಲ್ಲಿ ಮುಟ್ಟಿನ ಬಗ್ಗೆ ಮಾತನಾಡುವುದು ಒಂದು ನಿಷೇಧಿತ ವಿಷಯವಾಗಿತ್ತು. ಸಹ ಆಟಗಾರರೊಂದಿಗೂ ಹಂಚಿಕೊಳ್ಳಲು ಸಾಧ್ಯವಿರಲಿಲ್ಲ” ಎನ್ನುತ್ತಾರೆ ಮಿಥಾಲಿ ರಾಜ್.
ಇದನ್ನು ಓದಿದ್ದೀರಾ? ವಿದ್ಯಾರ್ಥಿನಿಯರಿಗೆ ಮುಟ್ಟಿನ ಕಪ್: ತಪ್ಪು ಕಲ್ಪನೆ ಬಿಡಿ; ಹೆಣ್ಣುಮಕ್ಕಳಿಗೆ ಬಳಕೆ ತರಬೇತಿ ನೀಡಿ
ಮುಟ್ಟಿನ ಸಮಯದಲ್ಲಿ ಕ್ರಿಕೆಟ್ ಆಡುವುದು ಸುಲಭವಲ್ಲ ಎನ್ನುತ್ತಾರೆ ಜೆಮಿಮಾ ರೋಡ್ರಿಗಸ್ ಹೇಳಿದ್ದಾರೆ. “ನೋವಿನ ಜೊತೆಗೆ ಬಿಳಿ ಬಟ್ಟೆಯ ಮೇಲೆ ಕಲೆ ಉಂಟಾಗುವ ಭಯ ಸದಾ ಇರುತ್ತದೆ. ಇದು ಪುರುಷ ಕ್ರಿಕೆಟಿಗರು ಎದುರಿಸದ ಸವಾಲು. ಕೆಲವು ಆಟಗಾರ್ತಿಯರಿಗೆ ಹೊಟ್ಟೆ ನೋವು ಎಷ್ಟು ತೀವ್ರವಾಗಿರುತ್ತದೆ ಎಂದರೆ ಅವರಿಗೆ ನಡೆಯಲು ಸಹ ಸಾಧ್ಯವಾಗುವುದಿಲ್ಲ. ನೋವು ನಿವಾರಕ ಮಾತ್ರೆ ಸೇವಿಸಿ ದೇಶಕ್ಕಾಗಿ ಆಡುತ್ತಾರೆ” ಎಂದು ಹಲವು ಬಾರಿ ರೋಡ್ರಿಗಸ್ ಹೇಳಿಕೊಂಡಿದ್ದಾರೆ.

Whisper India ಅಭಿಯಾನದ ವೇಳೆ ಮಾತನಾಡಿದ್ದ ಮಹಿಳಾ ತಂಡದ ಉಪನಾಯಕಿ ಸ್ಮೃತಿ ಮಂಧಾನ, “ನಾಲ್ಕೈದು ವರ್ಷಗಳ ಹಿಂದೆ ಈ ವಿಷಯದ ಬಗ್ಗೆ ಮಾತನಾಡಲು ಸಂಕೋಚವಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಈಗ ಆಟಗಾರ್ತಿಯರು ತಮ್ಮ ದೈಹಿಕ ಸ್ಥಿತಿಯ ಬಗ್ಗೆ ಮಂಡಳಿಯ ಸಹಾಯಕ ಸಿಬ್ಬಂದಿಯೊಂದಿಗೆ ಮುಕ್ತವಾಗಿ ಚರ್ಚಿಸುತ್ತಾರೆ. ಇದರಿಂದಾಗಿ ಆಟದ ವೇಳೆ ಹೊಂದಾಣಿಕೆ ಮಾಡಿಕೊಳ್ಳಲು ಸುಲಭವಾಗುತ್ತದೆ” ಎಂದು ತಿಳಿಸಿದ್ದಾರೆ.
ಇನ್ನು The Chill Hour Podcastನಲ್ಲಿ ಮುಟ್ಟಿನ ದಿನಗಳಲ್ಲಿ ತಮ್ಮ ಆಟದ ಬಗ್ಗೆ ವಿವರಿಸಿದ್ದ ಸ್ನೇಹ ರಾಣಾ, “ತೀವ್ರವಾದ ಹೊಟ್ಟೆನೋವು ಇದ್ದರೂ ಮಾತ್ರೆ ಸೇವಿಸಿ ಪಂದ್ಯವಾಡಬೇಕಾದ ಅನಿವಾರ್ಯತೆ ಇರುತ್ತದೆ. ಮೈದಾನದಲ್ಲಿ ಆಡುವಾಗ ವಿಶ್ರಾಂತಿ ಪಡೆಯುವ ಆಯ್ಕೆ ಇಲ್ಲದಿರುವುದರಿಂದ ಹೀಟ್ ಪ್ಯಾಕ್ ಬಳಸಿ ನೋವು ನಿರ್ವಹಣೆ ಮಾಡಬೇಕಾಗುತ್ತದೆ” ಎಂದಿದ್ದಾರೆ.
ಕಾಲ ಬದಲಾಗುತ್ತಿದೆ; ಸಂವೇದನೆ ಹೆಚ್ಚುತ್ತಿದೆ, ಆದರೆ…
ಒಂದು ಕಾಲದಲ್ಲಿ ಮುಟ್ಟಿನ ಬಗ್ಗೆ ಮಾತನಾಡುವುದೂ ಕಷ್ಟವಾಗಿತ್ತು. ಆದರೆ ಈಗ ಕಾಲ ಬದಲಾಗಿದೆ. ಮಹಿಳೆಯರು ಮುಟ್ಟಿನ ಬಗ್ಗೆ ಮುಕ್ತವಾಗಿ ಮಾತನಾಡಬಹುದಾದ ವಾತಾವರಣವಿದೆ. ಸದ್ಯ ಮಹಿಳಾ ಕ್ರಿಕೆಟಿಗರಿಗಾಗಿ ವಿಶೇಷ ವಿನ್ಯಾಸದ ಒಳ ಉಡುಪುಗಳು ಮತ್ತು ಮುಟ್ಟಿನ ಬಟ್ಟಲಿನಂತಹ (Menstrual Cup) ಅತ್ಯಾಧುನಿಕ ನೈರ್ಮಲ್ಯ ಉತ್ಪನ್ನಗಳು ಲಭ್ಯವಿದೆ.
ಫಿಸಿಯೋಥೆರಪಿಸ್ಟ್‌ಗಳು ಮತ್ತು ತರಬೇತುದಾರರು ಆಟಗಾರ್ತಿಯರ ಮುಟ್ಟಿನ ದಿನಾಂಕಗಳನ್ನು ಗಮನದಲ್ಲಿಟ್ಟುಕೊಂಡು ತರಬೇತಿ ಅವಧಿಗಳನ್ನು ಸರಿಹೊಂದಿಸುತ್ತಾರೆ. ಆದರೆ ಬಿಳಿ ಬಟ್ಟೆ ಧರಿಸಿ ಆಡುವಾಗ ಸೋರುವಿಕೆಯ ಭಯ ಮಹಿಳಾ ಆಟಗಾರ್ತಿಯರಿಗೆ ಸದಾ ಕಾಡುತ್ತದೆ. ಅಷ್ಟು ಮಾತ್ರವಲ್ಲದೆ ಮುಟ್ಟಿನ ಸಮಯದಲ್ಲಿ ದೇಹ ಬೇಗ ಸುಸ್ತಾಗುತ್ತದೆ, ನಿರ್ಜಲೀಕರಣ ಉಂಟಾಗುತ್ತದೆ. ಇವೆಲ್ಲವನ್ನೂ ಆಟಗಾರ್ತಿಯರು ನಿಭಾಯಿಸಿಕೊಂಡು ಹೋಗುತ್ತಿದ್ದಾರೆ.
ಮಹಿಳಾ ಕ್ರಿಕೆಟಿಗರು ಮೈದಾನದಲ್ಲಿ ಚೆಂಡನ್ನು ಬೌಂಡರಿಗಟ್ಟುವ ಪ್ರತಿ ಬಾರಿಯೂ, ಕೇವಲ ತಮ್ಮ ಎದುರಾಳಿ ತಂಡವನ್ನಷ್ಟೇ ಅಲ್ಲ ತಮ್ಮ ಮುಟ್ಟನ್ನು, ಮುಟ್ಟಿನ ನೋವನ್ನೂ ಗೆಲ್ಲುತ್ತಿರುತ್ತಾರೆ. ಕೇವಲ ಆಟಗಾರರಲ್ಲ, ಪ್ರತಿ ತಿಂಗಳೂ ಮೌನವಾಗಿ ಯುದ್ಧ ಗೆಲ್ಲುವ ಯೋಧರೆಂದರೆ ತಪ್ಪಾಗಲಾರದು. ಮಹಿಳಾ ಕ್ರಿಕೆಟಿಗರ, ಇತರೆ ಅಥ್ಲೇಟ್‌ಗಳ ದೃಢ ಸಂಕಲ್ಪಕ್ಕೆ ನಾವು ಮತ್ತೊಮ್ಮೆ, ಮಗದೊಮ್ಮೆ ಸಲಾಮ್ ಹೇಳಲೇಬೇಕು.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




