ಭಾರತೀಯ ಕ್ರಿಕೆಟ್ ತಂಡ ಅತ್ಯುತ್ತಮವಾಗಿದೆ. ಯಾವುದೇ ಆಟಗಾರನಿಗಾದರೂ ಸರಿ, ಫಾರ್ಮ್ ಕಾಯ್ದುಕೊಳ್ಳುವುದು ಕಷ್ಟದ ಕೆಲಸ. ಅದು ತನ್ನ ಆಟಕ್ಕಿಂತ ಹೆಚ್ಚಾಗಿ, ಸಹ ಆಟಗಾರ ಮತ್ತು ಎದುರಾಳಿಯ ಬೌಲಿಂಗ್‌ನಿಂದಲೂ ನಿರ್ಧರಿಸಲ್ಪಡುತ್ತದೆ.
ಭಾರತೀಯ ಕ್ರಿಕೆಟ್ ತಂಡದ ಸ್ಫೋಟಕ ಬ್ಯಾಟರ್ ಮತ್ತು ಉಪನಾಯಕ ಶುಭ್‌ಮನ್ ಗಿಲ್, ಮೊನ್ನೆ ಗುರುವಾರ ಮುಲ್ಲಾನ್‌ಪುರದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಮೊದಲ ಎಸೆತಕ್ಕೆ ಡಕ್ ಔಟ್ ಆದರು. ಇನ್ನು ತಂಡದ ನಾಯಕ ಸೂರ್ಯಕುಮಾರ್ ಯಾದವ್, ನಂಬರ್ 4ರಲ್ಲಿ ಇಳಿದು, ನಾಲ್ಕು ಎಸೆತಗಳಲ್ಲಿ ಕೇವಲ 5 ರನ್ ಗಳಿಸಿ ಪೆವಿಲಿಯನ್‌ಗೆ ತೆರಳಿದರು. ಇದು ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರೀ ನಿರಾಶೆಯನ್ನು ಹುಟ್ಟುಹಾಕಿದೆ. ನಾಯಕ ಮತ್ತು ಉಪನಾಯಕ ಫಾರ್ಮ್ ಕಳೆದುಕೊಂಡಿರುವುದರ ಕುರಿತು ಚರ್ಚೆಗೂ ಈಡುಮಾಡಿದೆ.
ಅದರಲ್ಲೂ ಟಿ20 ವಿಶ್ವಕಪ್‌ಗೆ ಇನ್ನು ಎರಡು ತಿಂಗಳುಗಳಿಗಿಂತ ಕಡಿಮೆ ಸಮಯ ಬಾಕಿ ಇರುವ ಈ ಸಂದರ್ಭದಲ್ಲಿ, ಅವರಿಬ್ಬರ ಅಸ್ಥಿರತೆ ಆಯ್ಕೆದಾರರಿಗೆ ಸಮಸ್ಯೆಯಾಗಿದೆ. ಆದರೂ ಟೀಮ್ ಮ್ಯಾನೇಜ್‌ಮೆಂಟ್, ಇಬ್ಬರು ಬ್ಯಾಟರ್‍ಗಳ ಬಗ್ಗೆ ಆತ್ಮವಿಶ್ವಾಸವನ್ನು ಹೊಂದಿದೆ.
ಕಳೆದ ವರ್ಷದಲ್ಲಿ ಸೂರ್ಯ 20 ಇನ್ನಿಂಗ್ಸ್‌ಗಳಲ್ಲಿ ಕೇವಲ 227 ರನ್ ಗಳಿಸಿದ್ದು, ಸರಾಸರಿ 13.35 ಮತ್ತು ಸ್ಟ್ರೈಕ್ ರೇಟ್ 120.10 ಇತ್ತು. ಅವರು ಸ್ಫೋಟಕ ಬ್ಯಾಟರ್ ಎನಿಸಿಕೊಂಡರೂ, 20 ಇನ್ನಿಂಗ್ಸ್‌ಗಳಲ್ಲಿ ಅರ್ಧಶತಕ ಸಿಡಿಸಲಾಗಲಿಲ್ಲ. ಅರ್ಧಶತಕ ಹಾಳಾಗಿಹೋಗಲಿ, ಅವರಾಡಿದ ಇನ್ನಿಂಗ್ಸ್‌ಗಳಲ್ಲಿ ಕೇವಲ ಎರಡು ಮಾತ್ರ 20 ಎಸೆತಗಳಿಗಿಂತ ಹೆಚ್ಚು ಎಸೆತಗಳಿಗೆ ಬ್ಯಾಟ್ ಬೀಸಿದ್ದು ಆಘಾತಕಾರಿಯಾದದ್ದು ಮತ್ತು ಅರಗಿಸಿಕೊಳ್ಳಲಾಗದ್ದು.
ಇದನ್ನು ಓದಿದ್ದೀರಾ?: ಕುಸ್ತಿ ಅಖಾಡಕ್ಕೆ ಮರಳುವ ವಿನೇಶ್ ಫೋಗಟ್ ನಿರ್ಧಾರಕ್ಕೆ ಸ್ವಾಗತ!
ಇನ್ನು ಉಪನಾಯಕ ಶುಭ್‌ಮನ್ ಗಿಲ್ ಲೆಕ್ಕಾಚಾರಕ್ಕೆ ಬಂದರೆ, ಸೆಪ್ಟೆಂಬರ್‌ನಲ್ಲಿ ಏಷ್ಯಾ ಕಪ್‌ನಲ್ಲಿ ಒಂದು ವರ್ಷಕ್ಕಿಂತ ಹೆಚ್ಚು ಕಾಲದ ನಂತರ ಮೊದಲ ಟಿ20 ಆಡಿದ್ದು, ಪಾಕಿಸ್ತಾನದ ವಿರುದ್ಧ. ಈ ಪಂದ್ಯದಲ್ಲಿ 28 ಎಸೆತಗಳಲ್ಲಿ 47 ರನ್ ಗಳಿಸಿದ್ದೇ ಅವರ ಅತಿ ಹೆಚ್ಚು ಸ್ಕೋರ್ ಆಗಿತ್ತು. ಅವರು 14 ಪಂದ್ಯಗಳಲ್ಲಿ ಸರಾಸರಿ 23.90 ಮತ್ತು ಸ್ಟ್ರೈಕ್ ರೇಟ್ 142.93 ಹೊಂದಿದ್ದಾರೆ. ಅವರ ವೈಫಲ್ಯಗಳು ಮಧ್ಯಮ ಕ್ರಮಾಂಕದ ಬ್ಯಾಟರ್‍ಗಳ ಮೇಲೆ ಒತ್ತಡವನ್ನು ಹೆಚ್ಚಿಸಿವೆ. ಏಕೆಂದರೆ ಪ್ರತಿ ಪಂದ್ಯದಲ್ಲೂ ಅಭಿಷೇಕ್ ಶರ್ಮಾ ತಮ್ಮ ಸ್ಫೋಟಕ ಆಟವನ್ನು ಆಡುವುದು ಸಾಧ್ಯವಿಲ್ಲ.
ಆದರೆ ಸಹಾಯಕ ತರಬೇತುದಾರ ರ್‍ಯಾನ್ ಟೆನ್ ಡೋಸ್‌ಚೇಟ್, ಶುಭ್‌ಮನ್ ಗಿಲ್ ಮತ್ತು ಸೂರ್ಯ ಅವರ ಬೆಂಬಲಕ್ಕೆ ನಿಂತಿದ್ದಾರೆ. ತಂಡದೊಳಗೆ ಅವರಿರಬೇಕು, ಅವರಲ್ಲಿ ಪೂರ್ಣ ನಂಬಿಕೆ ಇದೆ ಎಂದು ಒತ್ತಿ ಹೇಳಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದ ಕೊನೆಯಲ್ಲಿ ಗಿಲ್‌ನಲ್ಲಾದ ಬದಲಾವಣೆಯ ಕೆಲವು ಉತ್ತಮ ಅಂಶಗಳನ್ನು ನಾನು ಗಮನಿಸಿದ್ದೇನೆ. ಅವರ ಐಪಿಎಲ್ ದಾಖಲೆಯನ್ನು ನೋಡಿ ಆಯ್ಕೆ ಮಾಡಿದ್ದರೂ, ಕೆಲವು ಪಂದ್ಯಗಳಲ್ಲಿ ಒತ್ತಡದಿಂದಾಗಿ ಅಸ್ಥಿರತೆ ಕಾಡಿರಬಹುದು. ಆದರೂ ಮುಂದೆ ಚೆನ್ನಾಗಿ ಆಡಲಿದ್ದಾರೆ ಎಂಬ ವಿಶ್ವಾಸವಿದೆ ಎಂದಿದ್ದಾರೆ.
ಹಾಗೆಯೇ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಕುರಿತು, ಎಲ್ಲರೂ ಎಲ್ಲಾ ಕಾಲಕ್ಕೆ ಉತ್ತಮವಾಗಿ ಆಡಲು ಸಾಧ್ಯವಿಲ್ಲ. ಆಟ ಅಂದಮೇಲೆ ಏರಿಳಿತಗಳಿರುತ್ತವೆ. ಅಲ್ಲಿ ಎಲ್ಲರೂ ಆಡಲಾಗುವುದಿಲ್ಲ. ಸೂರ್ಯ ಸ್ಫೋಟಕ ಆಟಗಾರ ಮತ್ತು ಉತ್ತಮ ನಾಯಕ. ಮುಂಬರುವ ಪಂದ್ಯಗಳಲ್ಲಿ ಅವರು ಆಡುವ ನಂಬಿಕೆ ನನಗಿದೆ ಎಂದಿದ್ದಾರೆ.
ಮೊನ್ನೆಯ ಪಂದ್ಯದಲ್ಲಿ ಶುಭ್‌ಮನ್ ಗಿಲ್ ಬೇಗನೆ ಔಟ್ ಆದಾಗ, ಸೂರ್ಯ ನಂಬರ್ ಮೂರರ ಸ್ಥಾನದಲ್ಲಿ ಬ್ಯಾಟಿಂಗ್ ಮಾಡದೇ ತಪ್ಪು ಮಾಡಿದರು ಎಂಬುದು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಮತ್ತು ವಿಶ್ಲೇಷಕರ ತೀವ್ರ ಟೀಕೆಯಾಗಿದೆ.
ಈ ಟೀಕೆಗೆ ಉತ್ತರವೆಂಬಂತೆ ಸೂರ್ಯಕುಮಾರ್ ಯಾದವ್‌ರನ್ನು ಕೈಬಿಟ್ಟು ನಾಯಕತ್ವದಲ್ಲಿ ಬದಲಾವಣೆ ತರುವುದು ಇಂತಹ ಕಡಿಮೆ ಸಮಯದಲ್ಲಿ ಪರಿಹಾರವಲ್ಲ. ಟಿ20ಗಳಂತಹ ಹೈ-ರಿಸ್ಕ್ ಕ್ರಿಕೆಟ್‌ನಲ್ಲಿ ಯಾವುದೇ ಬ್ಯಾಟರ್‌ಗೆ ಇಂತಹ ಕಳಪೆ ರನ್ ಸರಣಿ ಸಂಭವಿಸಬಹುದು. ಸೂರ್ಯ ಈ ಹಿಂದೆ ಐಪಿಎಲ್‌ನಲ್ಲೂ ಹೀಗೆಯೇ ಆಡಿದ್ದರು. ಆ ನಂತರ ಅದ್ಭುತವಾಗಿ ಹೊರಬಂದಿದ್ದರು. ಸತತ ಕಡಿಮೆ ಸ್ಕೋರ್‌ಗಳು ಸೂರ್ಯನ ನಾಯಕತ್ವದ ಮೇಲೆ ಪ್ರಭಾವ ಬೀರಬಹುದು ಎಂಬುದರಲ್ಲಿ ಸಂದೇಹವಿಲ್ಲ. ಅವರಿಗೆ ಸರಿಯಾದ ಬ್ಯಾಟಿಂಗ್ ಸ್ಥಾನ ಮತ್ತು ಉತ್ತಮ ಶಾಟ್ ಆಯ್ಕೆಯ ಅಗತ್ಯವಿದೆ. ಅಂತಹ ಸ್ಥಿತಿಯಿಂದ ಹೊರಬರುವ ಅನುಭವವೂ ಅವರಲ್ಲಿದೆ.
ಭಾರತ ಮತ್ತು ಸೌತ್ ಆಫ್ರಿಕಾ ನಡುವಣ ಮೂರನೇ ಟಿ20 ಪಂದ್ಯವು ಧರ್ಮಶಾಲಾದಲ್ಲಿ ಡಿ.14ರಂದು ನಡೆಯಲಿದೆ. ಇದನ್ನೆಲ್ಲ ಗಮನಿಸಿಯೇ ಈ ಪಂದ್ಯಕ್ಕಾಗಿ ಟೀಮ್ ಇಂಡಿಯಾ ತನ್ನ ಪ್ಲೇಯಿಂಗ್ ಇಲವೆನ್ನಲ್ಲಿ ಮಹತ್ವದ ಬದಲಾವಣೆಗೆ ಕೈಹಾಕಿದೆ ಎನ್ನಲಾಗುತ್ತಿದೆ. ಮುಲ್ಲನ್ಪುರ್ನಲ್ಲಿ ನಡೆದ ದ್ವಿತೀಯ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಹೀನಾಯವಾಗಿ ಸೋಲನನುಭವಿಸಿದೆ. ಆ ಸೋಲಿಗೆ ಕಾರಣರಾದ ಇಬ್ಬರನ್ನು ಕೈ ಬಿಟ್ಟು ಮತ್ತಿಬ್ಬರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ. ಅದರಂತೆ ಕಳೆದ ಎರಡು ಮ್ಯಾಚ್ಗಳಲ್ಲೂ ವಿಫಲರಾಗಿರುವ ಶುಭ್‌ಮನ್ ಗಿಲ್ ಬದಲಿಗೆ ಸಂಜು ಸ್ಯಾಮ್ಸನ್ ಅವಕಾಶ ನೀಡಬಹುದು. ಇಲ್ಲಿ ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮಾ ಆರಂಭಿಕ ಬ್ಯಾಟ್ಸ್‌ಮನ್‌ಗಳಾದರೆ, ಮೂರನೇ ಕ್ರಮಾಂಕದಲ್ಲಿ ನಾಯಕ ಸೂರ್ಯಕುಮಾರ್ ಯಾದವ್ ಬ್ಯಾಟ್ ಬೀಸಲಿದ್ದಾರೆ. ನಾಲ್ಕನೇ ಕ್ರಮಾಂಕದಲ್ಲಿ ತಿಲಕ್ ವರ್ಮಾ ಕಣಕ್ಕಿಳಿದರೆ, ಆಲ್ರೌಂಡರ್ಗಳಾಗಿ ಶಿವಂ ದುಬೆ ಹಾಗೂ ಹಾರ್ದಿಕ್ ಪಾಂಡ್ಯ ರನ್ ಪೇರಿಸಲು ಅನುಕೂಲವಾಗುತ್ತದೆ ಎಂಬ ವಾದವೂ ಇದೆ. ಇನ್ನು ವಿಕೆಟ್ ಕೀಪರ್ ಆಗಿ ಜಿತೇಶ್ ಶರ್ಮಾ ಅವರನ್ನು ಮುಂದುವರೆಸಲಿದ್ದಾರೆ ಎಂಬ ಮಾತುಗಳೂ ಕೇಳಿಬರತೊಡಗಿವೆ.

ಆಯ್ಕೆದಾರರದು ಇದೇ ಅಂತಿಮ ನಿರ್ಧಾರ ಎನ್ನುವಂತಾದರೆ, ಮೊನ್ನೆ ಗಿಲ್ ಮೊದಲ ಬಾಲಿಗೇ ಔಟ್ ಆದದ್ದನ್ನು ಕೊಂಚ ರೀವೈಂಡ್ ಮಾಡಿ ನೋಡುವುದೊಳಿತು. ಬ್ಯಾಟ್ ಮಾಡಲು ಬಂದ ಗಿಲ್, ಸ್ಥಿರವಾಗಿದ್ದರು. ಕ್ರೀಸ್‌ನಲ್ಲಿ ನಿಂತು ಆಡುವ ದೃಢತೆ ಎದ್ದುಕಾಣುತ್ತಿತ್ತು. ಆದರೆ ಕ್ರೀಸ್‌ನಲ್ಲಿ ತಳವೂರುವ ಮೊದಲೇ ಲುಂಗಿಡಿಯ ಬಾಲ್ ನುಗ್ಗಿತು. ಅವರ ಬೌಲಿಂಗ್ ಉನ್ನತ ಗುಣಮಟ್ಟದ್ದಾಗಿತ್ತು. ಅವರು ಬೌಲಿಂಗ್ ಮಾಡಿದ ಕೋನ ಅತ್ಯುತ್ತಮವಾಗಿತ್ತು. ಗಿಲ್ ಫಾರ್ಮ್‌ನಲ್ಲಿದ್ದರೆ ಆ ಎಸೆತವನ್ನು ಸುಲಭವಾಗಿ ಆಡುತ್ತಿದ್ದರು. ಆದರೆ ಅವರು ಫಾರ್ಮ್‌ನಲ್ಲಿರಲಿಲ್ಲ.
ಆದರೂ ಅವರನ್ನು, ಮುಂಬೈ ಕ್ರಿಕೆಟ್ ಲಾಬಿಯ ಕಾರಣದಿಂದಾಗಿ ಆಲ್-ಫಾರ್ಮ್ಯಾಟ್ ನಾಯಕನನ್ನಾಗಿ ಮಾಡುವ ಉದ್ದೇಶದಿಂದ ಟಿ20 ಸರಣಿಗೆ ಮರಳಿ ಕರೆತಂದರು. ಯಶಸ್ವಿ ಜೈಸ್ವಾಲ್ ಮತ್ತು ಸಂಜು ಸ್ಯಾಮ್ಸನ್ ಕಾಯುತ್ತಿರುವುದರಿಂದ, ಗಿಲ್ ಮೇಲೆ ಸಹಜವಾಗಿಯೇ ಒತ್ತಡ ಹೆಚ್ಚಾಯಿತು. ಉಪನಾಯಕನ ಸ್ಥಾನಕ್ಕೇರಿಸಿದಾಗ ಸಹಜವಾಗಿಯೇ ತಂಡದ ಒತ್ತಡ ಮತ್ತು ತನ್ನ ಆಟದ ಸ್ಥಿರತೆ ಕಾಯ್ದುಕೊಳ್ಳುವುದು ಕಷ್ಟವಾಯಿತು.
ಇದನ್ನು ಮೂರನೇ ಟಿ20ಯಲ್ಲಿ ತಂಡದ ಆಯ್ಕೆದಾರರು ತಿದ್ದಿಕೊಳ್ಳುವಂತೆ ಕಾಣುತ್ತಿದೆ. ಈ ಬಾರಿ ಅಕ್ಷರ್ ಪಟೇಲ್ ಅವರನ್ನು ಕೈ ಬಿಟ್ಟು ಕುಲ್ದೀಪ್ ಯಾದವ್ ಅಥವಾ ಹರ್ಷಿತ್ ರಾಣಾಗೆ ಚಾನ್ಸ್ ನೀಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಏಕೆಂದರೆ ಅಕ್ಷರ್ ಪಟೇಲ್ ಕಡೆಯಿಂದ ಕಳೆದೆರಡು ಪಂದ್ಯಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ. ಹೀಗಾಗಿ ಕುಲ್ದೀಪ್ ಅಥವಾ ಹರ್ಷಿತ್ಗೆ ಚಾನ್ಸ್ ನೀಡಬಹುದು. ಇಲ್ಲಿ ಕುಲ್ದೀಪ್ ಯಾದವ್ ಅನುಭವಿ ಆಟಗಾರನಾಗಿರುವ ಕಾರಣ ಅವರಿಗೆ ಪ್ಲೇಯಿಂಗ್ ಇಲವೆನ್ನಲ್ಲಿ ಚಾನ್ಸ್ ಸಿಗುವ ಸಾಧ್ಯತೆ ಹೆಚ್ಚಿದೆ. ಇನ್ನುಳಿದಂತೆ ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ ಹಾಗೂ ಅರ್ಷದೀಪ್ ಸಿಂಗ್ ಬೌಲರ್ಗಳಾಗಿ ಕಾಣಿಸಿಕೊಳ್ಳಲಿದ್ದಾರೆ.
ಯಾವ ಕೋನದಿಂದ ನೋಡಿದರೂ, ಭಾರತೀಯ ಕ್ರಿಕೆಟ್ ತಂಡ ಅತ್ಯುತ್ತಮವಾಗಿದೆ. ಆಟಗಾರರು ತಮ್ಮ ಪ್ರತಿಭೆಯನ್ನು ಪ್ರದರ್ಶನಕ್ಕಿಡಲು ಬೇಕಾದ ಪ್ರೋತ್ಸಾಹವೂ ಇದೆ. ಕೈ ಕೊಡುತ್ತಿರುವುದು ಫಾರ್ಮ್ ಮಾತ್ರ. ಯಾವುದೇ ಆಟಗಾರನಿಗಾದರೂ ಸರಿ, ಫಾರ್ಮ್ ಕಾಯ್ದುಕೊಳ್ಳುವುದು ಕಷ್ಟದ ಕೆಲಸ. ಅದು ತನ್ನ ಆಟಕ್ಕಿಂತ ಹೆಚ್ಚಾಗಿ, ಸಹ ಆಟಗಾರ ಮತ್ತು ಎದುರಾಳಿಯ ಬೌಲಿಂಗ್‌ನಿಂದಲೂ ನಿರ್ಧರಿಸಲ್ಪಡುತ್ತದೆ.
ಸೌತ್ ಆಫ್ರಿಕಾ ವಿರುದ್ಧ ಇನ್ನೂ ಮೂರು ಟಿ20 ಪಂದ್ಯಗಳಿವೆ. ಭಾರತ ತಂಡ ಬಲಿಷ್ಠವಾಗಿದೆ. ಸೌತ್ ಆಫ್ರಿಕಾ ಕೂಡ ಬಿಟ್ಟುಕೊಡದಂತೆ, ಕೆಚ್ಚಿಗೆ ಬಿದ್ದು ಆಡುವ ಆಟಗಾರರನ್ನು ಹೊಂದಿದೆ. ಹೀಗಿರುವಾಗ ಫಲಿತಾಂಶ ಏನು ಬೇಕಾದರೂ ಆಗಬಹುದು. ನೋಡೋಣ…

ಲೇಖಕ, ಪತ್ರಕರ್ತ




