2028ರ ಒಲಿಂಪಿಕ್ಸ್ T20ಯಲ್ಲಿ ಭಾರತ ತಂಡ ಪದಕ ಗೆಲ್ಲಲು ಈ ಗೆಲುವು ಸ್ಪೂರ್ತಿಯಾಗಲಿದೆ. ಇದೇ ರೀತಿ ಪ್ರದರ್ಶನ ಮುಂದುವರಿಸಿದರೆ ಪಿ ವಿ ಸಿಂಧೂ, ಕರ್ಣಂ ಮಲ್ಲೇಶ್ವರಿ, ಮೇರಿ ಕೋಮ್, ಸೈನಾ ನೆಹ್ವಾಲ್, ಮನು ಭಾಕರ್, ಸಾಕ್ಷಿ ಮಲಿಕ್ ಮುಂತಾದವರ ಸಾಲಿನಲ್ಲಿ ಟೀಂ ಇಂಡಿಯಾ ಆಟಗಾರ್ತಿಯರು ಸೇರ್ಪಡೆಯಾಗುವ ದಿನ ದೂರವಿಲ್ಲ.
2025ರ ನವೆಂಬರ್ 25ರ ಒಂದು ಸುಂದರ ಮಳೆಯ ಸಂಜೆ. ನವಿ ಮುಂಬೈನ ಡಿ ವೈ ಪಾಟೀಲ್ ಕ್ರೀಡಾಂಗಣದಲ್ಲಿ 35,000ಕ್ಕೂ ಹೆಚ್ಚು ಅಭಿಮಾನಿಗಳು ನೀಲಿ ಜೆರ್ಸಿಗಳನ್ನು ಧರಿಸಿ ಕೂಗಾಟದೊಂದಿಗೆ ಕಾಯುತ್ತಿದ್ದರು. ಮಳೆಯಿಂದ ಒಂದು ಗಂಟೆಯ ವಿಳಂಬದ ನಂತರ, ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಟೀಂ ಇಂಡಿಯಾ ಮಹಿಳಾ ಕ್ರಿಕೆಟ್ ತಂಡವು ದಕ್ಷಿಣ ಆಫ್ರಿಕಾವನ್ನು 52 ರನ್‌ಗಳಿಂದ ಸೋಲಿಸಿ ಮೊದಲ ಬಾರಿಗೆ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟ್ರೋಫಿಯನ್ನು ಎತ್ತಿ ಹಿಡಿದಾಗ, ಭಾರತೀಯ ಕ್ರಿಕೆಟ್‌ನಲ್ಲಿ ಹೊಸ ಯುಗ ಆರಂಭವಾಯಿತು. ಇದು ಕೇವಲ ಒಂದು ಗೆಲುವಲ್ಲ – ಇದು ದಶಕಗಳ ಹೋರಾಟ, ತ್ಯಾಗ, ಮತ್ತು ಅವಕಾಶಗಳ ಕೊರತೆಯ ವಿರುದ್ಧದ ಜಯವಾಗಿತ್ತು. 2005 ಮತ್ತು 2017ರ ಫೈನಲ್‌ಗಳಲ್ಲಿ ಸೋತ ನೋವುಗಳನ್ನು ಮರೆಸುವ ಈ ಕ್ಷಣವು ಭಾರತೀಯ ಮಹಿಳಾ ಕ್ರಿಕೆಟ್‌ಗೆ 1983ರ ಕಪಿಲ್ ದೇವ್ ತಂಡದ ಗೆಲುವಿನಂತೆಯೇ ಮಹತ್ವದ್ದಾಗಿದೆ. ಇದು ಕೇವಲ ಒಂದು ಗೆಲುವಲ್ಲ – ದಶಕಗಳ ಹೋರಾಟ, ತ್ಯಾಗ ಮತ್ತು ಅಸಮಾನತೆಯ ವಿರುದ್ಧದ ಜಯದ ಸಂಕೇತ. 1978ರಿಂದ ಭಾರತೀಯ ಮಹಿಳಾ ಕ್ರಿಕೆಟ್ ತಂಡ ವಿಶ್ವಕಪ್‌ಗಳಲ್ಲಿ ಪಾಲ್ಗೊಳ್ಳುತ್ತಾ ಬಂದಿದ್ದರೂ, 2005 ಮತ್ತು 2017ರಲ್ಲಿ ಫೈನಲ್ ಸೋಲುಗಳ ನೋವುಗಳನ್ನು ಅನುಭವಿಸಿತ್ತು. ಈಗ, 2025ರಲ್ಲಿ ಮೊದಲ ಗೆಲುವು ಸಾಧಿಸಿ, ತಂಡವು ಇತಿಹಾಸ ಬರೆಯಿತು.
ವಿಶ್ವಕಪ್ ವಿಜಯ ಕೇವಲ ಕ್ರಿಕೆಟ್ ಸಾಧನೆಯಷ್ಟೇ ಅಲ್ಲ. ಇದು ವರ್ಷಗಳ ಹೋರಾಟ, ಅವಕಾಶಗಳ ಕೊರತೆ, ಸಾಮಾಜಿಕ ಅಡೆತಡೆಗಳು ಮತ್ತು ಶ್ರಮದ ಸಾರ್ಥಕತೆ ಈ ಗೆಲುವಿನಲ್ಲಿತ್ತು. ಮಿಥಾಲಿ ರಾಜ್, ಝುಲನ್ ಗೋಸ್ವಾಮಿ ಮುಂತಾದ ಹಿಂದಿನ ಪೀಳಿಗೆಯ ಹಲವು ಸಾಧಕಿಯರು ವರ್ಷಗಳ ಹಿಂದೆ ಈ ಗೆಲುವಿಗೆ ಬೀಜ ಬಿತ್ತಿದ್ದರು; ಹರ್ಮನ್‌ಪ್ರೀತ್ ಅವರ ತಂಡವು ಆ ಬೀಜದಿಂದ ಬೆಳೆದ ಮರಕ್ಕೆ ಚಿನ್ನದ ಫಲ ನೀಡಿದೆ. ಆ ರಾತ್ರಿ, ನೀಲಿ ಜೆರ್ಸಿ ಧರಿಸಿದ 16 ಆಟಗಾರ್ತಿಯರು ಟ್ರೋಫಿಯನ್ನು ಎತ್ತಿದಾಗ, ಅವರ ಹಿಂದೆ ನಿಂತಿದ್ದ ಲಕ್ಷಾಂತರ ಭಾರತೀಯ ಮಹಿಳೆಯರು “ನಾವು ಕೂಡ ಕ್ರಿಕೆಟ್‌ನಲ್ಲಿ ಇತಿಹಾಸ ಬರೆಯಬಹುದು” ಎಂಬ ವಿಶ್ವಾಸ ಪಡೆದರು. ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಮಹಿಳಾ ತಂಡದ ಈ ಸಾಧನೆಯು 1983ರಲ್ಲಿ ಕಪಿಲ್ ದೇವ್ ನೇತೃತ್ವದ ಪುರುಷರ ತಂಡದ ಜಯದಂತೆ ಮೈಲಿಗಲ್ಲು. ಆದರೆ ಮಹಿಳಾ ಕ್ರಿಕೆಟ್‌ನ ದಾರಿಯು ಹೆಚ್ಚು ಕಠಿಣವಾಗಿತ್ತು. ಸೌಲಭ್ಯಗಳ ಕೊರತೆ, ಸಮಾಜದ ತಾರತಮ್ಯ ಮತ್ತು ಹಣಕಾಸಿನ ಸಮಸ್ಯೆಗಳ ನಡುವೆಯೂ ಆಟಗಾರ್ತಿಯರು ಹಿಂದಿಟ್ಟ ಹೆಜ್ಜೆ ಬಿಡಲಿಲ್ಲ. ಈ ಗೆಲುವು ಮಹಿಳಾ ಕ್ರೀಡೆಯಲ್ಲಿ ಹೊಸ ಯುಗದ ಆರಂಭವಾಗಿದೆ.

ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಪ್ರಯಾಣವು 1970ರ ದಶಕದಲ್ಲಿ ಆರಂಭವಾಯಿತು. ವಿಮೆನ್ಸ್ ಕ್ರಿಕೆಟ್ ಅಸೋಸಿಯೇಷನ್ ಆಫ್ ಇಂಡಿಯಾ (WCAI) ಅಡಿಯಲ್ಲಿ ತಂಡ ಬೆಳೆಯಿತು. 2006ರಲ್ಲಿ BCCI ಅಡಿಯಲ್ಲಿ ಸೇರಿದ ನಂತರ ಹೆಚ್ಚಿನ ಪ್ರೋತ್ಸಾಹ ದೊರಕಿತು. ಆದರೆ ಆರಂಭದಲ್ಲಿ ಮೈದಾನಗಳು, ತರಬೇತಿ, ಪ್ರಯಾಣ ಸೌಲಭ್ಯಗಳ ಕೊರತೆಯಿಂದ ಆಟಗಾರ್ತಿಯರು ಹೋರಾಟಬೇಕಾಯಿತು. ಆದರೆ, ಈಗ ತಂಡದಲ್ಲಿ ಸಮಾನ ಪಂದ್ಯದ ಸಂಭಾವನೆ, ಅತ್ಯುತ್ತಮ ತರಬೇತಿ, ಹಣ ಹಾಗೂ ಅವಕಾಶ ಪಡೆಯುವ WPLಯಂತಹ ಲೀಗ್‌ಗಳು ಇವೆ. ಈ ಗೆಲುವು ಈ ಬದಲಾವಣೆಗಳ ಫಲವಾಗಿದೆ.
2ನೇ ವಿಶ್ವಕಪ್‌ನಲ್ಲಿ ಮೂರನೇ ಸ್ಥಾನ
ಮಹಿಳಾ ಕ್ರಿಕೆಟ್ ವಿಶ್ವಕಪ್ 1973ರಲ್ಲಿ ಆರಂಭವಾಯಿತು, ಆದರೆ ಭಾರತೀಯ ತಂಡ 1978ರಲ್ಲಿ ಮೊದಲ ಬಾರಿಗೆ ಪಾಲ್ಗೊಂಡಿತು. ಆಗ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಮಾತ್ರ ಪಾಲ್ಗೊಂಡಿದ್ದವು. ಭಾರತದ ಮೊದಲ ವಿಶ್ವಕಪ್ ಪ್ರಯಾಣವು ಸಾಧಾರಣವಾಗಿತ್ತು – ಗುಂಪು ಹಂತದಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧ ಸೋಲುಗಳು, ನ್ಯೂಜಿಲೆಂಡ್ ವಿರುದ್ಧ ಗೆಲುವು ಭಾರತಕ್ಕೆ ಏರಿಳಿತವನ್ನು ನೀಡಿದವು. 1982ರ ವಿಶ್ವಕಪ್‌ನಲ್ಲಿ ಭಾರತ ಸೆಮಿ-ಫೈನಲ್ ತಲುಪಿತು, ತಂಡದ ನಾಯಕಿ ಕನ್ನಡತಿ ಶಾಂತಾ ರಂಗಸ್ವಾಮಿ ಅವರ ನೇತೃತ್ವದಲ್ಲಿ ಟೀಂ ಇಂಡಿಯಾ 3ನೇ ಸ್ಥಾನ ಪಡೆಯಿತು. ಇದು ಭಾರತೀಯ ಮಹಿಳಾ ಕ್ರಿಕೆಟ್‌ಗೆ ಸಾಧನೆಯ ಪ್ರವೇಶದ್ವಾರವಾಯಿತು. ನ್ಯೂಜಿಲೆಂಡ್‌ನಲ್ಲಿ ನಡೆದ ಈ ಟೂರ್ನಿಯಲ್ಲಿ ಭಾರತ ಗುಂಪು ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿತು, ಆದರೆ ಸೆಮಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಪರಾಭವಗೊಂಡಿತು. 1988ರಲ್ಲಿ ಮತ್ತೆ ಸೆಮಿ-ಫೈನಲ್, ಆಸ್ಟ್ರೇಲಿಯಾ ವಿರುದ್ಧ ಮತ್ತೆ ಸೋಲು. ಅನುಭವಿಸಿತು ಈ ಸಮಯದಲ್ಲಿ ಡಯಾನಾ ಎಡುಲ್ಜಿ ಮತ್ತು ಶುಭಾಂಗಿ ಕುಲಕರ್ಣಿ ಮುಂತಾದವರು ತಂಡದ ಬೆನ್ನೆಲುಬಾಗಿದ್ದರು. 1993ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ಟೂರ್ನಿಯಲ್ಲಿ ಭಾರತ ಗುಂಪು ಹಂತದಲ್ಲಿ ಹೊರಬಿದ್ದಿತು. ನಂತರ ಚೇತರಿಸಿಕೊಂಡು 1997ರಲ್ಲಿ ಭಾರತದಲ್ಲಿ ನಡೆದ ವಿಶ್ವಕಪ್‌ನಲ್ಲಿ ಸೆಮಿ-ಫೈನಲ್‌ವರೆಗೂ ತಲುಪಿತು, ಆದರೆ ಆಸ್ಟ್ರೇಲಿಯಾ ವಿರುದ್ಧ ಪುನಃ ಸೋಲು ಅನುಭವಿಸಿದರೂ ಈ ಟೂರ್ನಿಯಲ್ಲಿ ನೀತು ಡೇವಿಡ್ ಅವರ ಸ್ಪಿನ್ ಬೌಲಿಂಗ್ ಎಲ್ಲರ ಗಮನ ಸೆಳೆದಿತು.
2000ರಲ್ಲಿ ನ್ಯೂಜಿಲೆಂಡ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ನಾಲ್ಕನೇ ಬಾರಿ ಭಾರತ ಸೆಮಿ-ಫೈನಲ್ ಪ್ರವೇಶಿಸಿತು. ಆದರೆ ನ್ಯೂಜಿಲೆಂಡ್ ವಿರುದ್ಧ ಗೆಲ್ಲಲು ಸಾಧ್ಯವಾಗಲಿಲ್ಲ. ಈ ಟೂರ್ನಿಯಲ್ಲಿ ಅಂಜುಮ್ ಚೋಪ್ರಾ ಮತ್ತು ಮಿಥಾಲಿ ರಾಜ್ ಉತ್ತಮ ಪ್ರದರ್ಶನ ತೋರಿದ್ದರು. 2005ರ ವಿಶ್ವಕಪ್ ಭಾರತಕ್ಕೆ ಮೊದಲ ದೊಡ್ಡ ಮೈಲಿಗಲ್ಲು. ದಕ್ಷಿಣ ಆಫ್ರಿಕಾದಲ್ಲಿ ನಡೆದ ಟೂರ್ನಿಯಲ್ಲಿ ಮಿಥಾಲಿ ರಾಜ್ ನಾಯಕತ್ವದಲ್ಲಿ ತಂಡ ಮೊದಲ ಬಾರಿ ಫೈನಲ್ ತಲುಪಿತು. ಗುಂಪು ಹಂತದಲ್ಲಿ ಉತ್ತಮ ಪ್ರದರ್ಶನ, ಸೆಮಿ-ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿತ್ತು. ಆದರೆ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಪರಾಭವಗೊಳ್ಳಬೇಕಾಯಿತು. ಮಿಥಾಲಿ ರಾಜ್ ಟೂರ್ನಿಯಲ್ಲಿ 199 ರನ್ ಗಳಿಸಿದರು, ಝುಲನ್ ಗೋಸ್ವಾಮಿ 13 ವಿಕೆಟ್ ಪಡೆದರು.

ಇದನ್ನು ಓದಿದ್ದೀರಾ? 2 Grand Slam ಗೆದ್ದಿದ್ದ ಕನ್ನಡಿಗ ರೋಹನ್ ಬೋಪಣ್ಣ ಟೆನಿಸ್‌ಗೆ ವಿದಾಯ
2009ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ವಿಶ್ವಕಪ್‌ನಲ್ಲಿ ಭಾರತ ಸೆಮಿ-ಫೈನಲ್ ತಲುಪಿತು, ಆದರೆ ಇಂಗ್ಲೆಂಡ್ ವಿರುದ್ಧ ಸೋಲಬೇಕಾಯಿತು. ಮಿಥಾಲಿ ರಾಜ್ ಅವರ ಬ್ಯಾಟಿಂಗ್ ಮತ್ತು ಝುಲನ್‌ರ ಬೌಲಿಂಗ್ ಅತ್ಯುತ್ತಮವಾಗಿತ್ತು. 2013ರಲ್ಲಿ ಭಾರತದಲ್ಲಿ ನಡೆದ ವಿಶ್ವಕಪ್ ದೊಡ್ಡ ಟೀಂ ಇಂಡಿಯಾಗೆ ಆಘಾತ ತಂದಿತ್ತು. ತಂಡವು ಗುಂಪು ಹಂತದಲ್ಲಿ ಹೊರಬಿದ್ದಿತು. ಮತ್ತೆ ಪುಟಿದೆದ್ದ ಭಾರತದ ಆಟಗಾರ್ತಿಯರು 2017ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ಟೂರ್ನಿಯಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದರು. ಭಾರತ ಫೈನಲ್ ತಲುಪಿತು. ಮಿಥಾಲಿ ರಾಜ್ ನಾಯಕತ್ವದಲ್ಲಿ ಗುಂಪು ಹಂತ ಹಾಗೂ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿತ್ತು. ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ 9 ರನ್‌ಗಳಿಂದ ಶರಣಾಬೇಕಾಯಿತು. ಈ ಟೂರ್ನಿ ಮಹಿಳಾ ಕ್ರಿಕೆಟ್‌ಗೆ ಭಾರತದಲ್ಲಿ ಹೊಸ ಹುರುಪು ತಂದಿತು. 2022ರಲ್ಲಿ ನ್ಯೂಜಿಲೆಂಡ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಭಾರತ ಸೆಮಿ-ಫೈನಲ್ ತಲುಪಿತು, ಆದರೆ ಇಂಗ್ಲೆಂಡ್ ವಿರುದ್ಧ ಸೋಲಬೇಕಾಯಿತು. ಸ್ಮೃತಿ ಮಂಧಾನ (434 ರನ್) ಮತ್ತು ಹರ್ಮನ್ ಪ್ರೀತ್ ಕೌರ್ ಈ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದರು. ಐದು ದಶಕಗಳ ನಿರಂತರ ಹೋರಾಟಕ್ಕೆ 2025ರಲ್ಲಿ ಫಲ ದೊರಕಿದೆ.
ಹಲವು ಆಟಗಾರ್ತಿಯರ ಪರಿಶ್ರಮ
ಭಾರತೀಯ ಮಹಿಳಾ ಕ್ರಿಕೆಟ್‌ನ ಯಶಸ್ಸಿನ ಹಿಂದೆ ಹಿಂದಿನ ಆಟಗಾರರ ಶ್ರಮ ಅಪಾರ. ಡಯಾನಾ ಎಡುಲ್ಜಿ, 1970-80ರ ದಶಕದಲ್ಲಿ ಆಟಗಾರ್ತಿಯಾಗಿ ಮತ್ತು ಆಡಳಿತಗಾರ್ತಿಯಾಗಿ ಮಹಿಳಾ ಕ್ರಿಕೆಟ್‌ಅನ್ನು ಬೆಳೆಸಿದರು. ಅರ್ಜುನ ಪ್ರಶಸ್ತಿ ವಿಜೇತೆಯಾದ ಅವರು, ಮಹಿಳಾ ಕ್ರಿಕೆಟ್‌ಗೆ ಸೌಲಭ್ಯಗಳು ಸಿಗುವಂತೆ ಹೋರಾಡಿದರು. ಅವರ ಕೊಡುಗೆಯು ತಂಡಕ್ಕೆ ವೃತ್ತಿಪರತೆ ತಂದಿತು. ಶುಭಾಂಗಿ ಕುಲಕರ್ಣಿ, ಮೊದಲ ನಾಯಕಿಯಾಗಿ ತಂಡವನ್ನು ನಡೆಸಿದರು. ಅವರ ನೇತೃತ್ವದಲ್ಲಿ ಭಾರತ ಮೊದಲ ವಿಶ್ವಕಪ್‌ನಲ್ಲಿ ಭಾಗವಹಿಸಿತು.

ನೀಟು ಡೇವಿಡ್, ಸ್ಪಿನ್ ಬೌಲರ್‌ರಾಗಿ 141 ವಿಕೆಟ್ ಪಡೆದರು. ಅವರ ಬೌಲಿಂಗ್ ಹಲವು ಗೆಲುವುಗಳಿಗೆ ಕಾರಣ. ಅಂಜುಮ್ ಚೋಪ್ರಾ, ಬ್ಯಾಟರ್ ಆಗಿ 2000ರ ವಿಶ್ವಕಪ್‌ನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರು ಮಹಿಳಾ ಕ್ರಿಕೆಟ್‌ಗೆ ಹೊಸ ಮೆರುಗು ನೀಡಿದರು. ಮಿಥಾಲಿ ರಾಜ್ – ಭಾರತೀಯ ಮಹಿಳಾ ಕ್ರಿಕೆಟ್‌ನ ಸಾಧಕಿಯಾಗಿದ್ದಾರೆ. 1999ರಿಂದ 2022ರವರೆಗೆ ಆಡಿ, 10,000ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ರನ್ ಗಳಿಸಿದರು. ಏಕದಿನದಲ್ಲಿ ಅತಿ ಹೆಚ್ಚು ರನ್ ಗಳಿಕೆಯ ದಾಖಲೆ, ಇದರಲ್ಲಿ 7 ಶತಕಗಳು ಸೇರಿವೆ. 2005 ಮತ್ತು 2017ರ ಫೈನಲ್‌ಗಳಲ್ಲಿ ಅವರೆ ನಾಯಕಿಯಾಗಿದ್ದರು, ಅವರ ಶ್ರಮವು ನಿಜಕ್ಕೂ ಶ್ಲಾಘನೀಯ. ಅವರ ಪ್ರಭಾವವು ಮತ್ತಷ್ಟು ಆಟಗಾರ್ತಿ ಯರನ್ನು ಕ್ರಿಕೆಟ್‌ಗೆ ಆಕರ್ಷಿಸಿತು, ಭಾರತದಲ್ಲಿ ಮಹಿಳಾ ಕ್ರಿಕೆಟ್ ಜನಪ್ರಿಯಗೊಳಿಸಿತು.
ಝುಲನ್ ಗೋಸ್ವಾಮಿ – ‘ಚಕ್ಡಾ ಎಕ್ಸ್‌ಪ್ರೆಸ್’ ಎಂಬ ಖ್ಯಾತಿ ಪಡೆದಿರುವ ಇವರು 2002ರಿಂದ 2022ರವರೆಗೆ ಆಡಿ, 255 ಏಕದಿನ ವಿಕೆಟ್‌ಗಳೊಂದಿಗೆ ದಾಖಲೆ ಬರೆದಿದ್ದಾರೆ. ಅವರು ಮಹಿಳಾ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ್ತಿ. 2005ರಲ್ಲಿ 13 ವಿಕೆಟ್, 2017ರಲ್ಲಿ ಉತ್ತಮ ಪ್ರದರ್ಶನ. ಅವರ ಮತ್ತು ಮಿಥಾಲಿ ರಾಜ್‌ರ ಜೊತೆಯಾಟವು ಭಾರತೀಯ ಮಹಿಳಾ ಕ್ರಿಕೆಟ್‌ಗೆ ಮತ್ತಷ್ಟು ಬಲ ನೀಡಿತು. ಅವರು ಬಿಸಿಸಿಐನಲ್ಲಿ ಪುರುಷರಂತೆ ತಮಗೂ ಎಲ್ಲ ಸವಲತ್ತುಗಳನ್ನು ನೀಡಬೇಕೆಂದು ಹೋರಾಟ ನಡೆಸಿದರು. ಇಬ್ಬರೂ ನಿವೃತ್ತರಾದ ನಂತರವೂ, ಅವರ ಕೊಡುಗೆಯು ಶಫಾಲಿ, ದೀಪ್ತಿ ಮುಂತಾದವರಿಗೆ ಸ್ಫೂರ್ತಿಯಾಗಿದೆ. 2025ರ ಗೆಲುವಿನ ನಂತರ ತಂಡ ಅವರೊಂದಿಗೆ ಟ್ರೋಫಿ ಹಂಚಿಕೊಂಡ ಭಾವುಕ ಕ್ಷಣಗಳು ಅವರ ಪ್ರಭಾವವನ್ನು ತೋರಿಸುತ್ತವೆ. ಇವರಲ್ಲದೆ ಜೆಮಿಮಾ ರೋಡ್ರಿಗಸ್, ದೀಪ್ತಿ ಶರ್ಮಾ, ಸ್ಮೃತಿ ಮಂಧಾನ ಮುಂತಾದವರ ಶ್ರಮವು WPLಯಂತಹ ಲೀಗ್‌ಗಳಲ್ಲಿ ಖ್ಯಾತಿ ತಂದಿದೆ. ಹಿಂದಿನ ಆಟಗಾರ್ತಿಯರಾಗಲಿ, ಈಗ ಪ್ರತಿನಿಧಿಸುತ್ತಿರುವ ಆಟಗಾರ್ತಿಯರಲ್ಲಿ ಬಹುತೇಕರು ಯಾರೂ ಪ್ರಭಾವಿ, ಶ್ರೀಮಂತ ಮನೆತನದವರಲ್ಲ. ಮಧ್ಯಮ ವರ್ಗ, ಬಡ ಕುಟುಂಬ ಹಾಗೂ ಗ್ರಾಮೀಣ ಹಿನ್ನಲೆಯಿಂದ ಬಂದವರು.
ಒಲಿಂಪಿಕ್ಸ್ ಪದಕಕ್ಕೆ ಸ್ಪೂರ್ತಿ
ಈ ಗೆಲುವು ಮಹಿಳಾ ಕ್ರಿಕೆಟ್ ಅನ್ನು ಮುಖ್ಯವಾಹಿನಿಗೆ ತಂದಿದೆ. WPLಯಂತಹ ಲೀಗ್‌ಗಳು ಪ್ರತಿಭೆಗಳನ್ನು ಬೆಳೆಸಿದವು, ಮಹಿಳೆಯರನ್ನು ಆಕರ್ಷಿಸಿದವು. WPL ಭಾರತವನ್ನು ದೊಡ್ಡಮಟ್ಟಕ್ಕೆ ಕೊಂಡೊಯ್ಯಲಿದೆ. ಭವಿಷ್ಯದಲ್ಲಿ ಅಂಡರ್-19, ತಳ ಮಟ್ಟದ ಅಭಿವೃದ್ಧಿ, ದೇಶಿ ವಿದೇಶ ಮಟ್ಟದ ಪ್ರವಾಸಗಳು, ಸಮಾನ ಸೌಲಭ್ಯಗಳು ಅಗತ್ಯ. ಹಾಗೆಯೇ 2028ರ ಒಲಿಂಪಿಕ್ಸ್ T20ಯಲ್ಲಿ ಭಾರತ ತಂಡ ಪದಕ ಗೆಲ್ಲಲು ಈ ಗೆಲುವು ಸ್ಪೂರ್ತಿಯಾಗಲಿದೆ. ಇದೇ ರೀತಿ ಪ್ರದರ್ಶನ ಮುಂದುವರಿಸಿದರೆ ಪಿ ವಿ ಸಿಂಧೂ, ಕರ್ಣಂ ಮಲ್ಲೇಶ್ವರಿ, ಮೇರಿ ಕೋಮ್, ಸೈನಾ ನೆಹ್ವಾಲ್, ಮನು ಭಾಕರ್, ಸಾಕ್ಷಿ ಮಲಿಕ್ ಮುಂತಾದವರ ಸಾಲಿನಲ್ಲಿ ಟೀಂ ಇಂಡಿಯಾ ಆಟಗಾರ್ತಿಯರು ಸೇರ್ಪಡೆಯಾಗುವ ದಿನ ದೂರವಿಲ್ಲ.





