ಪಶ್ಚಿಮ ಬಂಗಾಳದ ಕಲ್ಯಾಣಿ ನಗರದ ಬಿಸಿಎ ಮೈದಾನದಲ್ಲಿ ನಡೆದ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಎರಡು ಬಾರಿಯ ಚಾಂಪಿಯನ್ ಬಂಗಾಳ ತಂಡವನ್ನು 6 ವಿಕೆಟ್‌ಗಳಿಂದ ಮಣಿಸಿದ ಜಮ್ಮು ಮತ್ತು ಕಾಶ್ಮೀರ ತಂಡವು, ತನ್ನ 67 ವರ್ಷಗಳ ರಣಜಿ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸುವ ಮೂಲಕ ಹೊಸ ಮೈಲಿಗಲ್ಲು ನೆಟ್ಟಿದೆ.
ಬಂಗಾಳ ತಂಡದ ಅನುಭವಿ ವೇಗಿ ಮೊಹಮ್ಮದ್ ಶಮಿ ಅವರ 8 ವಿಕೆಟ್‌ಗಳ ಅಸಾಧಾರಣ ಸಾಧನೆಯ ನಡುವೆಯೂ, ಜಮ್ಮು-ಕಾಶ್ಮೀರ ಆಟಗಾರರು ತೋರಿದ ಸಂಯಮದ ಆಟ ಅವರಿಗೆ ಈ ಐತಿಹಾಸಿಕ ಗೆಲುವು ತಂದುಕೊಟ್ಟಿತು.
ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಬಂಗಾಳ 328 ರನ್ ಗಳಿಸಿದ್ದರೆ, ಜಮ್ಮು-ಕಾಶ್ಮೀರ 302 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಹಿನ್ನಡೆ ಅನುಭವಿಸಿತ್ತು. ಮೊದಲ ಇನಿಂಗ್ಸ್‌ನಲ್ಲಿ ಮೊಹಮ್ಮದ್ ಶಮಿ 8 ವಿಕೆಟ್ ಕಬಳಿಸಿ ಮಿಂಚಿದ್ದರು. ಆದರೆ ಎರಡನೇ ಇನಿಂಗ್ಸ್‌ನಲ್ಲಿ ತಿರುಗೇಟು ನೀಡಿದ ಜಮ್ಮು-ಕಾಶ್ಮೀರ, ವೇಗಿ ಆಕಿಬ್ ನಬಿ ಅವರ (ಪಂದ್ಯದಲ್ಲಿ ಒಟ್ಟು 9 ವಿಕೆಟ್) ನಿಖರ ದಾಳಿಯ ನೆರವಿನಿಂದ ಬಂಗಾಳ ತಂಡವನ್ನು ಕೇವಲ 99 ರನ್‌ಗಳಿಗೆ ಆಲೌಟ್ ಮಾಡಿತು. ಇದರಿಂದ ಜಮ್ಮು-ಕಾಶ್ಮೀರ ತಂಡಕ್ಕೆ ಗೆಲ್ಲಲು ಕೇವಲ 126 ರನ್‌ಗಳ ಸಾಧಾರಣ ಗುರಿ ದೊರೆಯಿತು.
ಇದನ್ನು ಓದಿದ್ದೀರಾ? ಬ್ಯಾಟ್ ಬೀಸಿದ ‘ಫಿನಿಶರ್’ಗೆ ಕ್ಲೀನ್ ಬೌಲ್ಡ್ ಆದ ಸಂಸದೆ
ಈ ಗುರಿಯನ್ನು ಬೆನ್ನಟ್ಟಿದ ಜಮ್ಮು-ಕಾಶ್ಮೀರ 43 ರನ್ ಗಳಿಸುವಷ್ಟರಲ್ಲಿ ಶುಭಂ ಪುಂಡೀರ್ ಹಾಗೂ ನಾಯಕ ಪರಾಸ್ ಡೋಗ್ರಾ ಅವರ ವಿಕೆಟ್ ಕಳೆದುಕೊಂಡು ಅಲ್ಪ ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಬಂಗಾಳ ತಂಡವು ಮತ್ತೆ ಪಂದ್ಯದ ಮೇಲೆ ಹಿಡಿತ ಸಾಧಿಸುವ ಲಕ್ಷಣಗಳು ಗೋಚರಿಸಿದ್ದವು. ಆದರೆ ಒತ್ತಡದ ಪರಿಸ್ಥಿತಿಯಲ್ಲಿ ಅದ್ಭುತ ಜೊತೆಯಾಟವಾಡಿದ ವಂಶಜ್ ಶರ್ಮಾ (ಅಜೇಯ 43) ಮತ್ತು ಅಬ್ದುಲ್ ಸಮದ್ (ಅಜೇಯ 30), ಮುರಿಯದ 55 ರನ್‌ಗಳ ಜೊತೆಯಾಟವಾಡುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ಅಂತಿಮವಾಗಿ ತಂಡವು 34.4 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 126 ರನ್ ಗಳಿಸಿ ವಿಜಯಿಯಾಯಿತು.
1959-60ರ ಆವೃತ್ತಿಯಲ್ಲಿ ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಿದ್ದ ಜಮ್ಮು ಮತ್ತು ಕಾಶ್ಮೀರ ತಂಡವನ್ನು ಇದುವರೆಗೆ ಪ್ರಬಲ ಪ್ರಶಸ್ತಿ ಆಕಾಂಕ್ಷಿ ಎಂದು ಪರಿಗಣಿಸಿರಲಿಲ್ಲ. 2013-14ರ ಆವೃತ್ತಿಯಲ್ಲಿ ನಾಕೌಟ್ ಹಂತ ಪ್ರವೇಶಿಸಿದ್ದೇ ಅವರ ಈವರೆಗಿನ ಅತ್ಯುತ್ತಮ ಸಾಧನೆಯಾಗಿತ್ತು. ಇದೀಗ ಆರು ದಶಕಗಳ ಸುದೀರ್ಘ ಕಾಯುವಿಕೆಯ ನಂತರ ಚೊಚ್ಚಲ ಬಾರಿಗೆ ಫೈನಲ್ ತಲುಪಿರುವುದು ಭಾರತೀಯ ದೇಶೀಯ ಕ್ರಿಕೆಟ್‌ನಲ್ಲಿ ಆ ತಂಡದ ಗಮನಾರ್ಹ ಬೆಳವಣಿಗೆಯನ್ನು ಸಾಬೀತುಪಡಿಸಿದೆ.
ಫೆ. 24 ರಂದು ನಡೆಯುವ ಫೈನಲ್ ಪಂದ್ಯದಲ್ಲಿ ಪ್ರಶಸ್ತಿ ಸುತ್ತಿಗಾಗಿ ಕರ್ನಾಟಕ ತಂಡವನ್ನು ಎದುರಿಸಲಿದೆ.





