KSCA ಅಧ್ಯಕ್ಷ ಚುನಾವಣೆ ನಡೆಯುವುದು ಹೇಗೆ? ಸಂಸ್ಥೆ ಇತಿಹಾಸ; ಸಮಗ್ರ ಒಳನೋಟ

Date:

ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) 1933ರಿಂದ ಭಾರತೀಯ ಕ್ರಿಕೆಟ್‌ಗೆ ಅನೇಕ ದಿಗ್ಗಜರನ್ನು ನೀಡಿದ ಹೆಮ್ಮೆಯ ಸಂಸ್ಥೆ. ಚಿನ್ನಸ್ವಾಮಿ ಯುಗದಲ್ಲಿ ಕಟ್ಟಿದ ಬುನಾದಿ, ಗ್ರಾಮೀಣ ವಲಯಗಳ ವಿಸ್ತರಣೆ, ರಣಜಿ ಟ್ರೋಫಿ ಸೇರಿದಂತೆ ಅನೇಕ ದೇಶೀಯ ಪ್ರಶಸ್ತಿ ಜಯಗಳು ಹಾಗೂ ದ್ರಾವಿಡ್, ಕುಂಬ್ಳೆ, ಶ್ರೀನಾಥ್, ಕೆ.ಎಲ್. ರಾಹುಲ್‌ ಮೊದಲಾದ ನಕ್ಷತ್ರಗಳ ಹುಟ್ಟಿಗೆ ಕಾರಣವಾದ ಸಂಸ್ಥೆ. ಇತ್ತೀಚಿನ ಕೆಲವು ವಿವಾದಗಳನ್ನು ಹೊರತುಪಡಿಸಿದರೆ ಕೆಎಸ್‌ಸಿಎ ಸಾಧನೆ ಶ್ಲಾಘನೀಯ ಎನ್ನಬಹುದು

ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ (ಕೆಎಸ್‌ಸಿಎ) ಆಡಳಿತ ಮಂಡಳಿಗೆ ಡಿಸೆಂಬರ್‌ 7ರಂದು ನಡೆಯಬೇಕಿದ್ದ ಚುನಾವಣೆಯು ಇದೀಗ ಕಾನೂನು ಹೋರಾಟದ ಸ್ವರೂಪ ಪಡೆದುಕೊಂಡಿದೆ. ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಮಾಜಿ ಅಧ್ಯಕ್ಷ ಬ್ರಿಜೇಶ್‌ ಪಟೇಲ್‌ ಬಣದಿಂದ ನಾಮಪತ್ರ ಸಲ್ಲಿಸಿದ್ದ ಪ್ರಜಾವಾಣಿ – ಡೆಕ್ಕನ್‌ ಹೆರಾಲ್ಡ್ ಸಮೂಹದ ನಿರ್ದೇಶಕರಾದ ಕೆ ಎನ್‌ ಶಾಂತಕುಮಾರ್‌ ಅವರ ಉಮೇದುವಾರಿಕೆಯನ್ನು ಚುನಾವಣಾಧಿಕಾರಿಗಳು ತಿರಸ್ಕರಿಸಿದ್ದೇ ಈ ವಿವಾದದ ಕೇಂದ್ರಬಿಂದು. ಕೇವಲ 200 ರೂಪಾಯಿಗಳ ವಂತಿಗೆ ಹಣ (Subscription Fee) ಬಾಕಿ ಉಳಿಸಿಕೊಂಡಿದ್ದಾರೆ ಎಂಬ ತಾಂತ್ರಿಕ ಕಾರಣವನ್ನು ಮುಂದಿಟ್ಟುಕೊಂಡು ಶಾಂತಕುಮಾರ್ ಅವರ ನಾಮಪತ್ರವನ್ನು ಅಸಿಂಧುಗೊಳಿಸಲಾಗಿತ್ತು.

ಇದರ ಲಾಭ ಎದುರಾಳಿ ಬಣದ, ಮಾಜಿ ಕ್ರಿಕೆಟಿಗ ಬಿ ಕೆ ವೆಂಕಟೇಶ್‌ ಪ್ರಸಾದ್‌ ಅವರಿಗೆ ಆಗುವ ಸಾಧ್ಯತೆಯಿತ್ತು. ನಾಮಪತ್ರ ತಿರಸ್ಕೃತಗೊಂಡಿದ್ದರಿಂದ ವೆಂಕಟೇಶ್‌ ಪ್ರಸಾದ್‌ ಅವಿರೋಧವಾಗಿ ಆಯ್ಕೆಯಾಗುವ ಹಾದಿ ಸುಗಮವಾಗಿತ್ತು. ಇದನ್ನು ಪ್ರಶ್ನಿಸಿ ಶಾಂತಕುಮಾರ್ ಹೈಕೋರ್ಟ್ ಮೊರೆ ಹೋಗಿದ್ದಾರೆ. ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರಿದ್ದ ಏಕಸದಸ್ಯ ಪೀಠವು, ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಪ್ರಕಟಿಸದಂತೆ ತಡೆ ನೀಡಿದೆ ಮತ್ತು ನಾಮಪತ್ರ ಪರಿಶೀಲನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಒದಗಿಸುವಂತೆ ಸೂಚಿಸಿದೆ. ಹೀಗಾಗಿ, ಡಿಸೆಂಬರ್ 7ರಂದು ನಡೆಯಬೇಕಿರುವ ಚುನಾವಣೆ ತೀವ್ರ ಕುತೂಹಲ ಮತ್ತು ಅನಿಶ್ಚಿತತೆಯನ್ನು ಮೂಡಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
Karnataka players

ಕೆಎಸ್ಸಿಎ ಚುನಾವಣೆ ಪ್ರಕ್ರಿಯೆ ಮತ್ತು ಮತದಾನ

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ವ್ಯವಸ್ಥಾಪಕ ಸಮಿತಿ ಸದಸ್ಯರು ಲೋಧಾ ಶಿಫಾರಸುಗಳ ಅನ್ವಯ ಪ್ರಜಾಸತ್ತಾತ್ಮಕ ಮಾದರಿ ರೀತಿಯ ಚುನಾವಣೆಯಲ್ಲಿ ಆಯ್ಕೆಯಾಗುತ್ತಾರೆ. ಕರ್ನಾಟಕ ಸರ್ಕಾರದ ನಾಮನಿರ್ದೇಶಿತ ಸದಸ್ಯ, ಮಹಿಳಾ ಕ್ರಿಕೆಟ್ ಪ್ರತಿನಿಧಿಗಳು, ಜಿಲ್ಲಾ ವಲಯಗಳು ಒಳಗೊಂಡು 11 ವ್ಯವಸ್ಥಾಪಕ ಸಮಿತಿ ಸದಸ್ಯರು ಹಾಗೂ 5 ಪದಾಧಿಕಾರಿಗಳು (ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಖಜಾಂಚಿ, ವ್ಯವಸ್ಥಾಪಕ ಸಮಿತಿ ಸದಸ್ಯರು) ಒಟ್ಟಾರೆಯಾಗಿ ಕೆಎಸ್‌ಸಿಎ ‘ಆಪೆಕ್ಸ್ ಕೌನ್ಸಿಲ್’ ಅನ್ನು ರೂಪಿಸುತ್ತಾರೆ. ಈ ಕೌನ್ಸಿಲ್ ಕೆಎಸ್‌ಸಿಎಯ ಸಂಸ್ಥೆಯ ಎಲ್ಲ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಚುನಾವಣೆ ಪ್ರತಿ 3 ವರ್ಷಕ್ಕೊಮ್ಮೆ ನಡೆಯುತ್ತದೆ ಮತ್ತು ಒಬ್ಬ ವ್ಯಕ್ತಿಯು ಗರಿಷ್ಠ 9 ವರ್ಷಗಳವರೆಗೆ (ಸತತ ಅಥವಾ ನಿರಂತರವಲ್ಲದ) ಪದಾಧಿಕಾರಿಯಾಗಿ ಅಥವಾ ಸಮಿತಿ ಸದಸ್ಯನಾಗಿ ಸೇವೆ ಸಲ್ಲಿಸಬಹುದು.

ಮತದಾರರು ಯಾರು?

ಕೆಎಸ್‌ಸಿಎ ಚುನಾವಣೆಯಲ್ಲಿ ಸಾರ್ವಜನಿಕರು ಮತದಾನ ಮಾಡುವುದಿಲ್ಲ. ಬದಲಿಗೆ ಸಂಸ್ಥೆಯ ಸದಸ್ಯತ್ವ ಹೊಂದಿರುವವರು ಮಾತ್ರ ಮತ ಚಲಾಯಿಸುತ್ತಾರೆ. ಸದಸ್ಯರು ಮುಖ್ಯವಾಗಿ ಎರಡು ವರ್ಗಗಳಲ್ಲಿ ಇದ್ದಾರೆ. ಮೊದಲನೆಯದು ಅಜೀವ ಸದಸ್ಯರು- ಇವರು ವೈಯಕ್ತಿಕವಾಗಿ ಕೆಎಸ್‌ಸಿಎ ಸದಸ್ಯತ್ವ ಪಡೆದವರು. ಎರಡನೆಯದು ಸಂಸ್ಥಾ ಸದಸ್ಯರು  ರಾಜ್ಯದ ವಿವಿಧ ಕ್ರಿಕೆಟ್ ಕ್ಲಬ್‌ಗಳು, ಜಿಮ್ಖಾನಾಗಳು ಮತ್ತು ಕ್ರೀಡಾ ಸಂಸ್ಥೆಗಳು, ಉದಾಹರಣೆಗೆ ಬೆಂಗಳೂರು ಯುನೈಟೆಡ್ ಕ್ರಿಕೆಟ್ ಕ್ಲಬ್, ಎಸ್‌ಬಿಐ, ಯಂಗ್ ಕ್ರಿಕೆಟರ್ಸ್ ಮುಂತಾದವು. ಪ್ರತಿಯೊಂದು ಕ್ಲಬ್ ಪರವಾಗಿ ಒಬ್ಬ ಪ್ರತಿನಿಧಿ ಮಾತ್ರ ಮತ ಚಲಾಯಿಸುತ್ತಾನೆ. ಅಜೀವ ಸದಸ್ಯರು ಮತ್ತು ಸಂಸ್ಥಾ ಸದಸ್ಯರ ಪ್ರತಿನಿಧಿಗಳ ಸಂಖ್ಯೆಯನ್ನು ಸೇರಿಸಿದರೆ, ಕೆಎಸ್‌ಸಿಎ ವ್ಯಾಪ್ತಿಯಲ್ಲಿ 4,000ಕ್ಕೂ ಹೆಚ್ಚು ಅರ್ಹ ಮತದಾರರು ಇದ್ದಾರೆ.

ಚುನಾವಣಾ ಪ್ರಕ್ರಿಯೆ:

ಕೆಎಸ್‌ಸಿಎ ಚುನಾವಣೆಯನ್ನು ನಡೆಸಲು ಸ್ವತಂತ್ರ ‘ಚುನಾವಣಾಧಿಕಾರಿ’ಯನ್ನು ನೇಮಿಸಲಾಗುತ್ತದೆ. ನಾಮಪತ್ರ ಸಲ್ಲಿಕೆ, ಪರಿಶೀಲನೆ, ಉಮೇದುವಾರಿಕೆ ಹಿಂಪಡೆಯುವಿಕೆ ಮತ್ತು ಅಂತಿಮವಾಗಿ ಮತದಾನ ಪ್ರಕ್ರಿಯೆ ನಡೆಯುತ್ತದೆ. ಸದಸ್ಯರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಮಹಾಸಭೆಯಲ್ಲಿ ಅಥವಾ ನಿಗದಿಪಡಿಸಿದ ಮತಗಟ್ಟೆಯಲ್ಲಿ ಮತ ಚಲಾಯಿಸುತ್ತಾರೆ. ಕೆಎಸ್‌ಸಿಎ ಚುನಾವಣೆಯನ್ನು ಪೂರ್ಣವಾಗಿ ಪಾರದರ್ಶಕ ಮತ್ತು ವಸ್ತುನಿಷ್ಠವಾಗಿ ನಡೆಸಲು ಸಂಸ್ಥೆ ಸ್ವತಂತ್ರ ಚುನಾವಣಾಧಿಕಾರಿಯನ್ನು ನೇಮಿಸುತ್ತದೆ. ಈ ಚುನಾವಣಾಧಿಕಾರಿ ಸಂಪೂರ್ಣ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡುತ್ತಾನೆ ಮತ್ತು ನಿಯಮಗಳಿಗೆ ಅನುಗುಣವಾಗಿ ಎಲ್ಲ ಹಂತಗಳನ್ನು ನೆರವೇರಿಸುತ್ತಾನೆ. ಮೊದಲಿಗೆ ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಸಲ್ಲಿಸುತ್ತಾರೆ. ನಂತರ, ಚುನಾವಣಾಧಿಕಾರಿ ಅವುಗಳನ್ನು ಪರಿಶೀಲಿಸಿ, ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸುತ್ತಾರೆ. ಬೇಕಿದ್ದರೆ ಅಭ್ಯರ್ಥಿಗಳಿಗೆ ಹಿಂಪಡೆಯುವಿಕೆ ಮಾಡಲು ಅವಕಾಶ ನೀಡಲಾಗುತ್ತದೆ. ಅಂತಿಮ ಪಟ್ಟಿಯಲ್ಲಿ ಉಳಿದ ಅಭ್ಯರ್ಥಿಗಳಿಗಾಗಿ ನಿಗದಿತ ದಿನಾಂಕದಲ್ಲಿ ಮತದಾನ ನಡೆಯುತ್ತದೆ. ಸದಸ್ಯರು ಸಾಮಾನ್ಯವಾಗಿ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಮಹಾಸಭೆಯಲ್ಲಿ ಅಥವಾ ಕೆಎಸ್‌ಸಿಎ ನಿಗದಿಪಡಿಸಿದ ಮತಗಟ್ಟೆಗಳಲ್ಲಿ ಮತ ಚಲಾಯಿಸುತ್ತಾರೆ. ಮತದಾನ ಪ್ರಕ್ರಿಯೆ ಪೂರ್ಣಗೊಂಡ ನಂತರ, ಚುನಾವಣಾಧಿಕಾರಿ ಫಲಿತಾಂಶಗಳನ್ನು ಘೋಷಿಸುತ್ತಾರೆ ಮತ್ತು ಆಯ್ಕೆಯಾದ ಸದಸ್ಯರು ಮತ್ತು ಪದಾಧಿಕಾರಿಗಳು ಅಧಿಕಾರ ವಹಿಸಿಕೊಳ್ಳುತ್ತಾರೆ. ಈ ಮೂಲಕ ಚುನಾವಣೆ ಪ್ರಕ್ರಿಯೆ ಸಂಪೂರ್ಣವಾಗಿ ಪ್ರಜಾಸತ್ತಾತ್ಮಕ ಮತ್ತು ನಿಯಮಾಧಾರಿತ ರೀತಿಯಲ್ಲಿ ಪೂರ್ಣಗೊಳ್ಳುತ್ತದೆ.

Karnataka players 1

ಕೆಎಸ್ಸಿಎ ಇತಿಹಾಸ ಮತ್ತು ಬೆಳವಣಿಗೆ

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) 1933ರಲ್ಲಿ ಸ್ಥಾಪನೆಯಾಯಿತು. ಆಗ ಇದನ್ನು ‘ಮೈಸೂರು ಕ್ರಿಕೆಟ್ ಅಸೋಸಿಯೇಷನ್’ ಎಂದು ಕರೆಯಲಾಗುತ್ತಿತ್ತು. ಮೊದಲ ಅಧ್ಯಕ್ಷ ಪ್ರೊ. ಜೆ ಸಿ ರೊಲ್ಲೊ (ಬ್ರಿಟಿಷ್) ಅವರ ಕಾಲದಲ್ಲಿ, ಇದು ಮೈಸೂರು ರಾಜ್ಯ ಕ್ರಿಕೆಟ್ ಸಂಸ್ಥೆಯಾಗಿ ಆರಂಭವಾಯಿತು. 1973ರಲ್ಲಿ ಮೈಸೂರು ರಾಜ್ಯಕ್ಕೆ ‘ಕರ್ನಾಟಕ’ ಎಂದು ಮರುನಾಮಕರಣವಾದಾಗ, ಈ ಸಂಸ್ಥೆಯೂ ‘ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ’ (KSCA) ಎಂದು ಬದಲಾಯಿತು. ಬಿಸಿಸಿಐಗೆ ಸಂಯೋಜಿತಗೊಂಡಿರುವ ಅತ್ಯಂತ ಹಳೆಯ ಮತ್ತು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಇದೂ ಒಂದು. ಬಿಸಿಸಿಐ (ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ)ಯ ಒಂದು ಪೂರ್ಣ ಸದಸ್ಯ ಸಂಸ್ಥೆಯಾಗಿ, ಕೆಎಸ್‌ಸಿಎ ರಾಜ್ಯದ ಕ್ರಿಕೆಟ್‌ನ್ನು ನಿರ್ವಹಿಸುತ್ತದೆ.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಭಾರತೀಯ ಕ್ರಿಕೆಟ್ ತಂಡದ ಸಮಸ್ಯೆಯೇ ‘ಗಂಭೀರ’!

16  ಅಧ್ಯಕ್ಷರ ಕಾರ್ಯನಿರ್ವಹಣೆ

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA)ಯನ್ನು 1933ರಿಂದ ಇಲ್ಲಿಯವರೆಗೆ ಮೊತ್ತ 16 ಅಧ್ಯಕ್ಷರು ಮುನ್ನಡೆಸಿದ್ದ್ದಾರೆ. ಪ್ರೊ. ಜೆ.ಸಿ. ರೊಲ್ಲೊ ಅವರು ಮೊದಲ ಅಧ್ಯಕ್ಷರಾಗಿ ಸಂಸ್ಥೆಗೆ ಜನ್ಮ ನೀಡಿದರೆ, ಎಸ್.ಪಿ. ರಾಜಗೋಪಾಲಚಾರಿ ಮತ್ತು ಟಿ. ಸಿಂಗರವೇಲು ಮುದಲಿಯಾರ್ ಅವರು ಆರಂಭಿಕ ಬೆಳವಣಿಗೆ ಹಾಗೂ ರಣಜಿ ಟ್ರೋಫಿ ಪ್ರವೇಶಕ್ಕೆ ದಾರಿ ಮಾಡಿಕೊಟ್ಟರು. ಜೆ.ಬಿ. ಮಲ್ಲಾರಾಧ್ಯ ಅವರು ಜಿಲ್ಲಾ ಲೀಗ್‌ಗಳನ್ನು ರಚಿಸಿ ಬುನಾದಿ ಬಲಪಡಿಸಿದರೆ, ಎಸ್.ಎ. ಶ್ರೀನಿವಾಸನ್ ಅವರ ಕಾಲದಲ್ಲಿ ಮೊದಲ ರಣಜಿ ಟ್ರೋಫಿ ಗೆಲುವು ಬಂದಿತು. ಕ್ಯಾಪ್ಟನ್ ಎಮ್.ಜಿ. ವಿಜಯಸಾರತಿ ಅವರು ರಾಜ್ಯದ ವ್ಯಾಪ್ತಿಯನ್ನು ವಿಸ್ತರಿಸಿದರು. ನಂತರ ಬಂದ ಎಂ. ಚಿನ್ನಸ್ವಾಮಿ (1978-90) ಅವರ 12 ವರ್ಷಗಳ ಆಡಳಿತವೇ ಕೆಎಸ್‌ಸಿಎ ಇತಿಹಾಸದ ಸುವರ್ಣಯುಗ – ಚಿನ್ನಸ್ವಾಮಿ ಸ್ಟೇಡಿಯಂ ನಿರ್ಮಾಣ, ಮೂರು ರಣಜಿ ಟ್ರೋಫಿಗಳು ಮತ್ತು ಕರ್ನಾಟಕ ಕ್ರಿಕೆಟ್‌ಗೆ ಅಂತಾರಾಷ್ಟ್ರೀಯ ಗುರುತು ತಂದುಕೊಟ್ಟ ದಿಗ್ಗಜ.

ಅವರ ನಂತರ ಕ್ಯಾಪ್ಟನ್ (ಡಾ.) ಕೆ. ತಿಮ್ಮಪ್ಪಯ್ಯ ಅವರು ಹೆಚ್ಚಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಬೆಂಗಳೂರಿಗೆ ತಂದರು; ಕೆ.ಎಂ. ರಾಮಪ್ರಸಾದ್ ಅವರು 2002ರಲ್ಲಿ ಕೆಎಸ್‌ಸಿಎ ಅಕಾಡೆಮಿಯನ್ನು ಸ್ಥಾಪಿಸಿದರು. ಮೈಸೂರು ಸಂಸ್ಥಾನದ ಶ್ರೀಕಂಠದತ್ತ ನರಸಿಂಹರಾಜ ವಾಡಿಯಾರ್ ಅವರು ರಾಜಕೀಯ ಬೆಂಬಲ ನೀಡಿದರು. ಅನಿಲ್ ಕುಂಬ್ಳೆ ಅವರು ಆಧುನಿಕ, ವೃತ್ತಿಪರ ಆಡಳಿತ ಮತ್ತು ಯುವ ಪ್ರತಿಭೆಗಳ ಬೆಳವಣಿಗೆಗೆ ಒತ್ತು ಕೊಟ್ಟರು. ಎ ಆರ್ ಅಶೋಕ್ ಆನಂದ್ ಅವರು ಮೂಲಸೌಕರ್ಯ ಸುಧಾರಣೆ ಮಾಡಿದರು. ಸಂಜಯ್ ದೇಸಾಯ್ ಅವರು ಟಿ20 ಟೂರ್ನಿಗಳಿಗೆ ಚಾಲನೆ ತಂದರು. ರೋಜರ್ ಬಿನ್ನಿ ಅವರು ಮಹಾರಾಜಾ ಟ್ರೋಫಿ ಕೆಎಸ್‌ಸಿಎ ಟಿ20 ಟೂರ್ನಿಯನ್ನು ಆರಂಭಿಸಿದರು. ಈ 16 ಮಂದಿ ಅಧ್ಯಕ್ಷರಲ್ಲಿ ಪ್ರತಿಯೊಬ್ಬರೂ ತಮ್ಮ ಕಾಲದಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.

Karnataka players womern
ಶಾಂತಾ ರಂಗಸ್ವಾಮಿ

ಬೆಂಗಳೂರು ಹೊರತುಪಡಿಸಿ ರಾಜ್ಯಾದ್ಯಂತ ವಿಸ್ತರಣೆ

ಹಲವು ದಶಕಗಳ ಕಾಲ ಕರ್ನಾಟಕ ಕ್ರಿಕೆಟ್ ಎಂದರೆ ಕೇವಲ ಬೆಂಗಳೂರು ಎಂಬ ಭಾವನೆ ಪ್ರಬಲವಾಗಿತ್ತು, ಆದರೆ ಕಳೆದ ಎರಡು ದಶಕಗಳಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಈ ಏಕಮುಖಿ ಚಿತ್ರಣವನ್ನು ಸಂಪೂರ್ಣ ಬದಲಾಯಿಸಿದೆ. ರಾಜ್ಯವನ್ನು ಬೆಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ, ಶಿವಮೊಗ್ಗ, ರಾಯಚೂರು, ಮಂಗಳೂರು ಮತ್ತು ತುಮಕೂರು ಎಂಬ ವಲಯಗಳಾಗಿ ವಿಂಗಡಿಸಿ ಪ್ರತಿ ವಲಯದಲ್ಲೂ ಕ್ರಿಕೆಟ್ ಮೂಲಸೌಕರ್ಯ ಮತ್ತು ಆಟಗಾರರ ಬೆಳವಣಿಗೆಗೆ ವ್ಯವಸ್ಥಿತ ಯೋಜನೆ ರೂಪಿಸುವ ಮೂಲಕ ಕೆಎಸ್‌ಸಿಎ ಸಮತೋಲಿತ ಅಭಿವೃದ್ಧಿ ಸಾಧಿಸಿದೆ. ಇದರ ಫಲವಾಗಿ ಬೆಂಗಳೂರಿನ ಆಚೆಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣಗಳು ನಿರ್ಮಾಣವಾಗಿವೆ. ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನ (ಗಂಗೋತ್ರಿ ಗ್ಲೇಡ್ಸ್) ರಣಜಿ ಪಂದ್ಯಗಳಿಗೆ ಆತಿಥ್ಯ ವಹಿಸುತ್ತಿದೆ. ಹುಬ್ಬಳ್ಳಿಯ ಕೆಎಸ್‌ಸಿಎ ಕ್ರೀಡಾಂಗಣ (ರಾಜನಗರ) ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸುವ ಸಾಮರ್ಥ್ಯ ಹೊಂದಿದೆ. ಶಿವಮೊಗ್ಗ ಮತ್ತು ಬೆಳಗಾವಿಯಲ್ಲಿಯೂ ಸುಸಜ್ಜಿತ ಟರ್ಫ್ ಮೈದಾನಗಳು ಸಿದ್ಧವಾಗಿವೆ. ಈ ಎಲ್ಲ ಪ್ರಯತ್ನಗಳಿಂದ ಕರ್ನಾಟಕ ಕ್ರಿಕೆಟ್ ಇದೀಗ ರಾಜ್ಯದ ಎಲ್ಲ ಮೂಲೆಗಳಿಂದಲೂ ಪ್ರತಿಭೆಗಳನ್ನು ಹುಟ್ಟುಹಾಕುವ, ನಿಜವಾದ ರಾಜ್ಯವ್ಯಾಪಿ ಕ್ರೀಡೆಯಾಗಿ ರೂಪಿತಗೊಂಡಿದೆ.

 ರಾಷ್ಟ್ರಮಟ್ಟದಲ್ಲಿ ಮಿಂಚಿದ ಗ್ರಾಮೀಣ ಪ್ರತಿಭೆಗಳು

ಕೆಎಸ್‌ಸಿಎಯ ವಲಯಾಧಾರಿತ ಅಭಿವೃದ್ಧಿ ಮತ್ತು ಮೂಲಸೌಕರ್ಯ ವಿಸ್ತರಣೆಯ ಫಲವಾಗಿ ಕರ್ನಾಟಕ ಕ್ರಿಕೆಟ್ ಈಗ ನಗರಕೇಂದ್ರಿತವಲ್ಲದೆ ನಿಜವಾದ ಗ್ರಾಮೀಣ-ನಗರ ಸಮ್ಮಿಲನವಾಗಿದೆ. ಒಂದು ಕಾಲದಲ್ಲಿ ಬೆಂಗಳೂರಿನ ಕ್ಲಬ್‌ಗಳೇ ತಂಡವನ್ನು ತುಂಬಿಕೊಳ್ಳುತ್ತಿದ್ದರೆ, ಇಂದು ರಾಜ್ಯದ ಗ್ರಾಮೀಣ ಭಾಗಗಳೇ ಭಾರತೀಯ ಕ್ರಿಕೆಟ್‌ಗೆ ಸ್ಟಾರ್ ಆಟಗಾರರನ್ನು ಪೂರೈಕೆ ಮಾಡುತ್ತಿವೆ. ಗದಗ ಜಿಲ್ಲೆಯ ಸುನಿಲ್ ಜೋಶಿ, ಬೆಂಗಳೂರಿನ ದೊಡ್ಡ ಗಣೇಶ್, ಮಂಗಳೂರಿನ ಕೆ.ಎಲ್. ರಾಹುಲ್, ದಾವಣಗೆರೆಯ ವಿನಯ್ ಕುಮಾರ್, ಕೊಡಗಿನ ವಿದ್ವತ್ ಕಾವೇರಪ್ಪ ಮತ್ತು ರಾಜ್ಯದ ವಿವಿಧ ಭಾಗಗಳಲ್ಲಿ ಬೆಳೆದು ಭಾರತಕ್ಕೆ ವೇಗದ ಬೌಲರ್ ಆಗಿ ಮಿಂಚಿದ ಪ್ರಸಿದ್ಧ್ ಕೃಷ್ಣ ಇವರೆಲ್ಲರೂ ಈ ಬದಲಾವಣೆಯ ಜ್ವಲಂತ ಉದಾಹರಣೆಗಳು. ಇದರಿಂದ ಕರ್ನಾಟಕ ಕ್ರಿಕೆಟ್ ಇದೀಗ ರಾಜ್ಯದ ಎಲ್ಲ ಮಣ್ಣಿನ ಸುಗಂಧವನ್ನು ಹೊತ್ತು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆರೆಯುತ್ತಿದೆ. ಕೆಎಸ್‌ಸಿಎ ನಡೆಸುವ ಟ್ಯಾಲೆಂಟ್ ಹಂಟ್ ಮತ್ತು ವಯೋಮಿತಿ ಪಂದ್ಯಾವಳಿಗಳು (U-14, U-16, U-19) ಗ್ರಾಮೀಣ ಪ್ರತಿಭೆಗಳನ್ನು ಗುರುತಿಸುವಲ್ಲಿ ಯಶಸ್ವಿಯಾಗಿವೆ.

ಕೆಎಸ್ಸಿಎ ಆರ್ಥಿಕ ಮೂಲ

ಕೆಎಸ್‌ಸಿಎ ದೇಶದ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆಗಳಲ್ಲಿ ಒಂದಾಗಿ ಹೊರಹೊಮ್ಮಲು ಕಾರಣವಾದ ಆದಾಯದ ಮೂಲಗಳು ಬಹುಮುಖಿಯಾಗಿವೆ. ಬಿಸಿಸಿಐಯಿಂದ ಬರುವ ಅತಿದೊಡ್ಡ ಅನುದಾನ (ಐಪಿಎಲ್ ಮಾಧ್ಯಮ ಹಕ್ಕುಗಳು ಮತ್ತು ಪ್ರಾಯೋಜಕತ್ವದಿಂದ ಗಳಿಸಿದ ಆದಾಯದ ಪಾಲು ವಾರ್ಷಿಕವಾಗಿ ಕೋಟ್ಯಂತರ ರೂಪಾಯಿಗಳು), ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಅಂತಾರಾಷ್ಟ್ರೀಯ ಟೆಸ್ಟ್, ಏಕದಿನ ಮತ್ತು ಟಿ20 ಪಂದ್ಯಗಳ ಟಿಕೆಟ್ ಮಾರಾಟ ಹಾಗೂ ಜಾಹೀರಾತುಗಳಿಂದ ದೊಡ್ಡ ಮೊತ್ತ, ಆರ್‌ಸಿಬಿ ತವರು ಮೈದಾನವಾಗಿರುವುದರಿಂದ ಐಪಿಎಲ್ ಆವೃತ್ತಿಯಲ್ಲಿ ಮೈದಾನದ ಬಾಡಿಗೆ ಮತ್ತು ಇತರ ಶುಲ್ಕಗಳು, ಜೊತೆಗೆ ಕ್ಲಬ್ ಹೌಸ್‌ನ ಜಿಮ್, ಬ್ಯಾಡ್ಮಿಂಟನ್ ಕೋರ್ಟ್ ಮುಂತಾದ ಸೌಲಭ್ಯಗಳ ಸದಸ್ಯತ್ವ ಶುಲ್ಕಗಳು ಸೇರಿ ಈ ಎಲ್ಲ ಆದಾಯವನ್ನು ಸಂಸ್ಥೆಯು ಕ್ರೀಡಾಂಗಣಗಳ ನಿರ್ವಹಣೆ, ಆಟಗಾರರ ವೇತನ ಮತ್ತು ಪಿಂಚಣಿ, ಜಿಲ್ಲಾ ಮಟ್ಟದ ಕ್ರಿಕೆಟ್ ಅಭಿವೃದ್ಧಿ ಯೋಜನೆಗಳು ಹಾಗೂ ಗುಣಮಟ್ಟದ ತರಬೇತುದಾರರ ನೇಮಕಕ್ಕೆ ವ್ಯವಸ್ಥಿತವಾಗಿ ಬಳಸಿಕೊಳ್ಳುತ್ತದೆ. ಇದರಿಂದ ಕರ್ನಾಟಕ ಕ್ರಿಕೆಟ್ ಆರ್ಥಿಕವಾಗಿ ಸದೃಢವಾಗಿ, ರಾಜ್ಯದ ಎಲ್ಲ ಮಟ್ಟದ ಆಟಗಾರರ ಬೆಳವಣಿಗೆಗೆ ಅಡಿಗಲ್ಲಾಗಿ ನಿಂತಿದೆ.

KSCA 3

ರಾಜ್ಯ ಕ್ರಿಕೆಟ್‌ ತಂಡದ ಸಾಧನೆಗಳು

ಕರ್ನಾಟಕವು ಭಾರತೀಯ ದೇಶೀಯ ಕ್ರಿಕೆಟ್‌ನಲ್ಲಿ ಮುಂಬೈ ನಂತರ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾಗಿ ಹೊರಹೊಮ್ಮಿದ್ದು, ರಣಜಿ ಟ್ರೋಫಿಯಲ್ಲಿ 8 ಬಾರಿ ಚಾಂಪಿಯನ್ ಆಗಿದೆ. ಮೊದಲ ಗೆಲುವು 1973-74ರಲ್ಲಿ ಶ್ರೇಷ್ಠ ಸ್ಪಿನ್ನರ್ ಇ.ಎ.ಎಸ್. ಪ್ರಸನ್ನ ನಾಯಕತ್ವದಲ್ಲಿ ಬಂದಿತು. ನಂತರ 1990ರ ದಶಕದಲ್ಲಿ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್ ಮತ್ತಿತರ ದಿಗ್ಗಜರಿದ್ದ ತಂಡವು ಬಲಿಷ್ಠ ಪ್ರದರ್ಶನ ತೋರಿತು. 1995-96, 1997-98, 1998-99ರಲ್ಲಿ ಗೆಲುವು ಸಾಧಿಸಿತು. 2013-14 ಮತ್ತು 2014-15ರಲ್ಲಿ ವಿನಯ್ ಕುಮಾರ್ ನಾಯಕತ್ವದಲ್ಲಿ ಸತತ ಎರಡು ಬಾರಿ ಚಾಂಪಿಯನ್ ಆಯಿತು. ಇದರ ಜೊತೆಗೆ 1977-78 ಮತ್ತು 2018-19ರಲ್ಲಿಯೂ ಪ್ರಶಸ್ತಿ ಗಳಿಸಿತು.

ರಾಜ್ಯವು ಇರಾನಿ ಕಪ್ 6 ಬಾರಿ, ವಿಜಯ ಹಜಾರೆ ಟ್ರೋಫಿ (ಲಿಸ್ಟ್ ಎ) 4 ಬಾರಿ ಹಾಗೂ ಸೈಯದ್ ಮುಷ್ತಾಕ್ ಅಲಿ ಟ್ರೋಫಿ (ಟಿ20) 2 ಬಾರಿ ಗೆದ್ದಿದೆ. ಆದರೆ ಅತ್ಯಂತ ಗಮನಾರ್ಹ ಸಾಧನೆ 2013-14 ಮತ್ತು 2014-15ರ ಋತುವಿನಲ್ಲಿ ಬಂದಿತು. ಈ ಎರಡೂ ವರ್ಷಗಳಲ್ಲಿ ಕರ್ನಾಟಕ ರಣಜಿ ಟ್ರೋಫಿ, ಇರಾನಿ ಕಪ್ ಮತ್ತು ವಿಜಯ ಹಜಾರೆ ಟ್ರೋಫಿ ಎಂಬ ಮೂರು ಪ್ರಮುಖ ಪ್ರಶಸ್ತಿಗಳನ್ನು ಗೆದ್ದು ದೇಶೀಯ ಕ್ರಿಕೆಟ್‌ನಲ್ಲಿ ಅಪೂರ್ವ ಸಾಧನೆ ಮಾಡಿತು. ಈ ದಾಖಲೆ ಇಂದಿಗೂ ಯಾವ ತಂಡವೂ ಮಾಡದಿರುವುದು ಕರ್ನಾಟಕದ ಹೆಗ್ಗಳಿಕೆ.

ಭಾರತ ತಂಡಕ್ಕೆ ಕರ್ನಾಟಕದ ಕೊಡುಗೆ

ಕರ್ನಾಟಕವು ಭಾರತೀಯ ಕ್ರಿಕೆಟ್‌ಗೆ ಅಪಾರ ಪ್ರತಿಭೆಗಳನ್ನು ನೀಡಿ, ದೇಶೀಯ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಮರ ಗುರುತು ಮೂಡಿಸಿದೆ. 1970ರ ದಶಕದಲ್ಲಿ ಕರ್ನಾಟಕದ ಸ್ಪಿನ್ ದಾಳಿಯು ವಿಶ್ವದರ್ಜೆಯಾಗಿ ಮಾರ್ಪಟ್ಟಿತು. ಇ.ಎ.ಎಸ್. ಪ್ರಸನ್ನ ಮತ್ತು ಬಿ.ಎಸ್. ಚಂದ್ರಶೇಖರ್ ಎಂಬ ಎರಡು ಮಹಾನ್ ಸ್ಪಿನ್ನರ್‌ಗಳ ಜೊತೆಗೆ, ಸಣ್ಣ ಎತ್ತರದ ದಿಗ್ಗಜ ಬ್ಯಾಟರ್ ಜಿ ಆರ್ ವಿಶ್ವನಾಥ್, 1983ರ ವಿಶ್ವಕಪ್ ಹೀರೊ ರೋಜರ್ ಬಿನ್ನಿ, ಅತ್ಯುತ್ತಮ ವಿಕೆಟ್ ಕೀಪರ್ ಸೈಯದ್ ಕಿರ್ಮಾನಿ ಹಾಗೂ ಸ್ಟೈಲಿಶ್ ಬ್ಯಾಟರ್ ಬ್ರಿಜೇಶ್ ಪಟೇಲ್ ಅವರು ಭಾರತೀಯ ತಂಡದ ಬುನಾದಿಯಾದರು. ಈ ತಲೆಮಾರಿನ ಕಾರಣದಿಂದಲೇ ಕರ್ನಾಟಕ ಮೊದಲ ಬಾರಿಗೆ 1973-74ರಲ್ಲಿ ರಣಜಿ ಟ್ರೋಫಿ ಗೆದ್ದಿತು.

1990 ಮತ್ತು 2000ರ ದಶಕದಲ್ಲಿ ಕರ್ನಾಟಕ ಭಾರತೀಯ ಕ್ರಿಕೆಟ್‌ನ ಬೆನ್ನೆಲುಬಾಗಿತ್ತು. ಅನಿಲ್ ಕುಂಬ್ಳೆ (ಟೆಸ್ಟ್‌ನಲ್ಲಿ ಭಾರತದ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್), ರಾಹುಲ್ ದ್ರಾವಿಡ್ (ದಿ ವಾಲ್), ಭಾರತದ ಮೊದಲ ವೇಗಿ ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್, ದೊಡ್ಡ ಗಣೇಶ್, ಸುನಿಲ್ ಜೋಶಿ ಮತ್ತು ವಿಜಯ್ ಭಾರದ್ವಾಜ್ ಅವರು ಈ ಯುಗದ ದಿಗ್ಗಜರು. ಈ ಆಟಗಾರರ ಬಲದಿಂದ ಕರ್ನಾಟಕ 1990ರ ದಶಕದಲ್ಲಿ ಮೂರು ರಣಜಿ ಪ್ರಶಸ್ತಿ ಗಳಿಸಿತು.

KSCA 1

ಆಧುನಿಕ ಯುಗ ಹಾಗೂ ಮಹಿಳಾ ಕ್ರಿಕೆಟ್ ಕೊಡುಗೆ

ಪ್ರಸ್ತುತ ಯುಗದಲ್ಲಿ ಕೆ.ಎಲ್. ರಾಹುಲ್ (ಎಲ್ಲ ಮಾದರಿಯಲ್ಲೂ ಆಡುವ ಪ್ರಮುಖ ಬ್ಯಾಟರ್), ಮಯಾಂಕ್ ಅಗರ್ವಾಲ್, ತ್ರಿಶತಕ ಸಾಧಿಸಿದ ಕರುಣ್ ನಾಯರ್, ಮನೀಶ್ ಪಾಂಡೆ, ವೇಗಿ ಪ್ರಸಿದ್ಧ್ ಕೃಷ್ಣ ಹಾಗೂ ದೇವದತ್ ಪಡಿಕ್ಕಲ್ ಅವರು ಟೀಮ್ ಇಂಡಿಯಾ ಪ್ರತಿನಿಧಿಸಿದ್ದಾರೆ. ಮಹಿಳಾ ಕ್ರಿಕೆಟ್‌ನಲ್ಲಿಯೂ ಕರ್ನಾಟಕ ಮುಂಚೂಣಿಯಲ್ಲಿದೆ. ಭಾರತ ಮಹಿಳಾ ತಂಡದ ಮೊದಲ ನಾಯಕಿ ಶಾಂತಾ ರಂಗಸ್ವಾಮಿ ಮತ್ತು ವೇದಾ ಕೃಷ್ಣಮೂರ್ತಿ ಅವರಂತಹ ಆಟಗಾರ್ತಿಯರು ರಾಜ್ಯದ ಹೆಮ್ಮೆಯ ಕೊಡುಗೆಯಾಗಿದ್ದಾರೆ. ಈ ರೀತಿ ಮೂರು ತಲೆಮಾರುಗಳಲ್ಲಿ ಕರ್ನಾಟಕ ಭಾರತೀಯ ಕ್ರಿಕೆಟ್‌ಗೆ ಅಪಾರ ಸಂಪತ್ತನ್ನು ನೀಡುತ್ತಲೇ ಇದೆ.

ಇದೆಲ್ಲವನ್ನು ಗಮನಿಸಿದರೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಕೇವಲ ಒಂದು ಆಡಳಿತ ಮಂಡಳಿಯಲ್ಲ, ಅದು ಪ್ರತಿಭೆಗಳನ್ನು ರೂಪಿಸುವ ಕಾರ್ಖಾನೆ. ಕಾಲ್ತುಳಿತ ಸೇರಿದಂತೆ ಕೆಲವು ವಿವಾದಗಳು ಮತ್ತು ಕಾನೂನು ಹೋರಾಟಗಳು ಕಪ್ಪು ಚುಕ್ಜೆಯಾದರೂ, ಹಲವು ಸಾಧನೆಗಳು ಕರ್ನಾಟಕದಿಂದ ಹೊರಹೊಮ್ಮಿವೆ. ಬಿಸಿಸಿಐನಿಂದ ಬರುವ ಕೋಟ್ಯಂತರ ರೂಪಾಯಿ ಅನುದಾನದ ಸದ್ಬಳಕೆ, ಪಾರದರ್ಶಕ ಆಯ್ಕೆ ಪ್ರಕ್ರಿಯೆ ಮತ್ತು ಗ್ರಾಮೀಣ ಭಾಗದ ಪ್ರತಿಭೆಗಳಿಗೆ ಸಮಾನ ಅವಕಾಶ ನೀಡುವುದು ಯಾವುದೇ ಆಡಳಿತ ಮಂಡಳಿಯ ಆದ್ಯತೆಯಾಗಬೇಕು. ಮುಂದಿನ ದಿನಗಳಲ್ಲೂ ಸಮರ್ಥ ನಾಯಕತ್ವವು ಕೆಎಸ್‌ಸಿಎ ಚುಕ್ಕಾಣಿ ಹಿಡಿದರೆ, ಕರ್ನಾಟಕ ಕ್ರಿಕೆಟ್ ಇನ್ನಷ್ಟು ಎತ್ತರಕ್ಕೆ ಏರುವುದರಲ್ಲಿ ಸಂಶಯವಿಲ್ಲ.

blank profile picture 973460 640
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...