ಲಾಭದ ಉದ್ದೇಶದಿಂದಲೇ ರೂಪುಗೊಂಡ ಜೂಜಾಟದ ವೇದಿಕೆಗಳಲ್ಲಿ AI ಬಳಕೆಯಾಗುತ್ತಿರುವುದು ಗೇಮಿಂಗ್ ಕ್ಷೇತ್ರಕ್ಕೇ ದೊಡ್ಡ ಸವಾಲು. ಏಕೆಂದರೆ, AI ಎನ್ನುವುದು ಮಾನವನ ಸ್ವಭಾವ, ಚಟುವಟಿಕೆ, ಆಟದಲ್ಲಿನ ಆತನ ಸ್ಕಿಲ್ಸ್, ಡೇಟಾ ವಿಶ್ಲೇಷಣೆಗಳೆಲ್ಲವನ್ನೂ ಏಕಕಾಲಕ್ಕೆ ದುರುಪಯೋಗಪಡಿಸಿ ಕೊಳ್ಳುತ್ತದೆ.
ಮಾನವನಂತೆಯೇ ವರ್ತಿಸುವ AI ಬೋಟ್‌ಗಳನ್ನು ಬಳಸಿಕೊಂಡು ಆನ್‌ಲೈನ್ ಜೂಜು ನಡೆಸಿ ನೂರಾರು ಕೋಟಿ ವಂಚನೆ ಮಾಡಿದ ದೆಹಲಿ ಹಾಗೂ ಗುರುಗ್ರಾಮದ ಎರಡು ಗೇಮಿಂಗ್ ಕಂಪನಿಗಳ ಬೃಹತ್ ವಂಚನೆ ಜಾಲವನ್ನು ಜಾರಿ ನಿರ್ದೇಶನಾಲಯ (ಇಡಿ) ಭೇದಿಸಿದೆ.
ಆನ್‌ಲೈನ್ ಜೂಜಿಗೆ ನಿಷೇಧವಿದ್ದರೂ ಗೇಮಿಂಗ್ ಆಪ್‌ಗಳ ಮೂಲಕ ಜೂಜಾಡುತ್ತಿರುವ ಕುರಿತು ಬಂದ ದೂರುಗಳ ಆಧಾರದ ಮೇಲೆ ವಿನ್‌ರೋ ಮತ್ತು ಪಾಕೆಟ್-52 ಎಂಬ ಎರಡು ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳ ವಿರುದ್ಧ ಇಡಿ ಬೆಂಗಳೂರು ವಲಯ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿತ್ತು. ಈ ಆಪ್‌ಗಳನ್ನು ನಡೆಸುತ್ತಿರುವ ವಿನ್ ಗೇಮ್ಸ್ ಪ್ರೈ.ಲಿಮಿಟೆಡ್ ಮತ್ತು ನಿರ್ದೇಸ ನೆಟ್‌ವರ್ಕ್ಸ್ ಪ್ರೈ.ಲಿಮಿಟೆಡ್ ವಿರುದ್ಧ ತನಿಖೆ ಆರಂಭಿಸಿತ್ತು. ದೆಹಲಿ ಹಾಗೂ ಗುರುಗ್ರಾಮದಲ್ಲಿರುವ ಕಂಪನಿ ಕಚೇರಿಗಳ ಮೇಲೆ ಇದೇ ತಿಂಗಳ 18ರಿಂದ 22ರವರೆಗೆ ನಡೆಸಿ ಶೋಧದಲ್ಲಿ, ಕಂಪನಿಗಳು ಮನುಷ್ಯನ ಹೆಸರಿನಲ್ಲಿ AI ಆಧಾರಿತ ನಕಲಿ ಖಾತೆಗಳನ್ನು ಸೃಷ್ಟಿಸಿ, ಚಂದಾದಾರರು ಅವುಗಳ ವಿರುದ್ಧವೇ ಆಟವಾಡುವಂತೆ ಜಾಲ ರೂಪಿಸಿದ್ದನ್ನು ಇಡಿ ಪತ್ತೆಹಚ್ಚಿದೆ.
ಲಕ್ಷಾಂತರ ಬಳಕೆದಾರರನ್ನು ಹೊಂದಿದ್ದ ಈ ಎರಡೂ ಗೇಮಿಂಗ್ ಆಪ್‌ಗಳಲ್ಲಿ, ನೈಜ ಆಟಗಾರರು ಪರಸ್ಪರ ಸ್ಪರ್ಧಿಸುತ್ತಿದ್ದಾರೆ ಎನ್ನುವ ನಂಬಿಕೆ ಮೂಡಿಸಲಾಗಿತ್ತಾದರೂ, ಹಲವೆಡೆ AI ಬೋಟ್‌ಗಳನ್ನೇ ಎದುರಾಳಿಗಳಾಗಿ ಬಳಸಲಾಗುತ್ತಿತ್ತು. ಪರಿಣಾಮ, AI ಬುದ್ಧಿಮಟ್ಟದ ಜತೆ ಸ್ಪರ್ಧಿಸಲಾಗದೆ ಬಹುತೇಕ ಸಂದರ್ಭಗಳಲ್ಲಿ ನೈಜ ಆಟಗಾರರೇ ಸೋಲು ಕಾಣುತ್ತಿದ್ದರು. ಇದರಿಂದ ನೂರಾರು ಕೋಟಿ ರೂಪಾಯಿ ನಷ್ಟಕ್ಕೆ ಸಿಲುಕುತ್ತಿದ್ದರು.
ಇದಕ್ಕಿಂತ ಗಂಭೀರವೆಂದರೆ, ವಿನ್ ಗೇಮ್ಸ್ ಪ್ರೈ.ಲಿಮಿಟೆಡ್ ಭಾರತದಲ್ಲಿ ಜೂಜಾಡಿ ಸಂಗ್ರಹಿಸಿದ್ದ ಹಣವನ್ನು ಅಮೆರಿಕದ ತನ್ನ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾವಣೆ ಮಾಡಿಕೊಳ್ಳುವ ವ್ಯವಸ್ಥೆಯನ್ನೂ ಮಾಡಿಟ್ಟಿತ್ತು. ತನಿಖೆಯ ಭಾಗವಾಗಿ, ಈ ಕಂಪನಿಗೆ ಸೇರಿದ ಸುಮಾರು ₹505 ಕೋಟಿ ಮೌಲ್ಯದ ಬ್ಯಾಂಕ್ ಠೇವಣಿಗಳು, ಷೇರು ಹೂಡಿಕೆಗಳು ಹಾಗೂ ಮ್ಯೂಚುವಲ್ ಫಂಡ್‌ಗಳನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿದೆ. ನಿರ್ದೇಸ ನೆಟ್‌ವರ್ಕ್ ಪ್ರೈ.ಲಿಮಿಟೆಡ್‌ನ ವಿವಿಧ ಖಾತೆಗಳಲ್ಲಿದ್ದ ಸುಮಾರು ₹18.57 ಕೋಟಿ ಮೌಲ್ಯದ ಆಸ್ತಿಗಳನ್ನು ವಶಕ್ಕೆ ಪಡೆದಿದೆ.

AI ಈಗಾಗಲೇ ಎಲ್ಲಾ ಕ್ಷೇತ್ರಗಳನ್ನೂ ತನ್ನ ಕಬಂದ ಬಾಹುಗಳಿಂದ ಆವರಿಸಿಕೊಳ್ಳುತ್ತಿದೆ. ಇದು ತಂತ್ರಜ್ಞಾನದ ಕ್ರಾಂತಿ ಎನಿಸಿದರೂ, ತಂತ್ರಜ್ಞಾನವನ್ನು ಆನ್‌ಲೈನ್ ಜೂಜಾಟದ ವಂಚನೆಗೆ ಬಳಸಿಕೊಳ್ಳುತ್ತಿರುವ ಹೊಸ ಪ್ರವೃತ್ತಿ ದೇಶದಲ್ಲಿ ಗಂಭೀರ ಚಿಂತೆ ಹುಟ್ಟಿಸಿದೆ. ನಕಲಿ ಅಪ್ಲಿಕೇಶನ್‌ಗಳು, ಕೃತಕ ಲಾಭದ ಭರವಸೆಗಳು, ಕ್ರಿಪ್ಟೋ ಆಧಾರಿತ ಜಾಲಗಳು ತಮ್ಮ ವ್ಯಾಪ್ತಿಯನ್ನು ಅತಿಯಾಗಿ ವಿಸ್ತರಿಸಿಕೊಳ್ಳುತ್ತಿವೆ. ಇದೀಗ ಮಾನವ ಆಟಗಾರರಂತೆ ವರ್ತಿಸುವ AI ಬೋಟ್‌ಗಳನ್ನು ಸೃಷ್ಟಿಸಿ ನೇರ ವಂಚನೆಗೆ ಕೈ ಹಾಕುತ್ತಿರುವುದು ಬೆಳಕಿಗೆ ಬಂದಿದೆ. ಈ AI ಬೋಟ್‌ಗಳು ನೈಜ ಆಟಗಾರರ ಆಟದ ಶೈಲಿ, ಮನೋಭಾವ, ತಪ್ಪುಗಳ ಮಾದರಿ, ತಂತ್ರಗಳ ಬದಲಾವಣೆಗಳನ್ನು ಕೇವಲ ಮಿಲಿ ಸೆಕೆಂಡ್‌ಗಳಲ್ಲಿ ವಿಶ್ಲೇಷಿಸುವ ಸಾಮರ್ಥ್ಯ ಹೊಂದಿವೆ. ಇದರಿಂದ ಮಾನವರು ಗೆಲ್ಲುವ ಸಾಧ್ಯತೆ ತೀರಾ ಕಡಿಮೆ.
AI ಬೋಟ್‌ಗಳಿಂದಾಗುವುದು ಕೇವಲ ತಾಂತ್ರಿಕ ಮೋಸವಷ್ಟೇ ಅಲ್ಲ, ಅದು ನಂಬಿಕೆ ಕಳೆದುಕೊಳ್ಳುವಂತೆ ಮಾಡುವ ಮಾನಸಿಕ ವಂಚನೆಯೂ ಆಗಿದೆ. ನೈಜ ಬಳಕೆದಾರರು ತಮ್ಮ ಎದುರಾಳಿಯೂ ನನ್ನಂತೆ ಮನುಷ್ಯ ಎಂದು ಭಾವಿಸಿ ನಿರಾಳವಾಗಿ ಹಣ ಹೂಡಬಹುದು. ಆದರೆ, ವಾಸ್ತವದಲ್ಲಿ ಅದು ಕಂಪ್ಯೂಟರ್ ನಿಯಂತ್ರಿತ ಮೋಸದ ಜಾಲಗಳೆಂದು ಮೋಸಹೋದ ನಂತರ ತಿಳಿಯುತ್ತದೆ. ಇದು ಮೋಸಹೋದ ವ್ಯಕ್ತಿಯು ತನ್ನ ಬುದ್ಧಿ ಮಟ್ಟ, ಆಟದ ಕೌಶಲ್ಯಗಳು, ತಂತ್ರಗಾರಿಕೆ ಮೇಲೆಯೇ ಸಂಶಯ ಪಡುವಂತೆ ಮಾಡುತ್ತದೆ. ತನ್ನನ್ನು ತಾನೇ ನಂಬದಂತೆ ಮಾಡುತ್ತದೆ. ಖಿನ್ನತೆಗೂ ಎಡೆ ಮಾಡಿಕೊಡಬಹುದು.
ಲಾಭದ ಉದ್ದೇಶದಿಂದಲೇ ರೂಪುಗೊಂಡ ಜೂಜಾಟದ ವೇದಿಕೆಗಳಲ್ಲಿ AI ಬಳಕೆಯಾಗುತ್ತಿರುವುದು ಗೇಮಿಂಗ್ ಕ್ಷೇತ್ರಕ್ಕೇ ದೊಡ್ಡ ಸವಾಲು. ಏಕೆಂದರೆ, AI ಎನ್ನುವುದು ಮಾನವನ ಸ್ವಭಾವ, ಚಟುವಟಿಕೆ, ಆಟದಲ್ಲಿನ ಆತನ ಸ್ಕಿಲ್ಸ್, ಡೇಟಾ ವಿಶ್ಲೇಷಣೆಗಳೆಲ್ಲವನ್ನೂ ಏಕಕಾಲಕ್ಕೆ ದುರುಪಯೋಗಪಡಿಸಿಕೊಳ್ಳುತ್ತದೆ. ಇದರಿಂದ ನಿಯಂತ್ರಣ ಮತ್ತು ಪತ್ತೆಹಚ್ಚುವಿಕೆ ಸೈಬರ್ ಅಪರಾಧ ತನಿಖಾಧಿಕಾರಿಗಳಿಗೆ ಇನ್ನಷ್ಟು ಕಠಿಣವಾಗುತ್ತದೆ. ಇದು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗಲಿದೆ ಎನ್ನುತ್ತಾರೆ ತಜ್ಞರು.
ಇದನ್ನೂ ಓದಿ: ಶಿಕ್ಷಣ ಕ್ಷೇತ್ರದಲ್ಲಿ AI ಕ್ರಾಂತಿ: ಸಾಧ್ಯತೆ ಮತ್ತು ಸವಾಲುಗಳೇನು?
ಈ ಪ್ರಕರಣವು ಭಾರತದಲ್ಲಿ ಡಿಜಿಟಲ್ ವಂಚನೆಗಳ ಮುಂದಿನ ಹಂತ ಹೇಗಿರಬಹುದು ಎಂಬುದಕ್ಕೆ ಒಂದು ಎಚ್ಚರಿಕೆಯ ಗಂಟೆಯಂತೆ ತೋರುತ್ತಿದೆ. ಸದ್ಯ, ಗೇಮಿಂಗ್ ಉದ್ಯಮದ ಮೇಲೆ ಕಟ್ಟುನಿಟ್ಟಿನ ನಿಯಂತ್ರಣ ಮತ್ತು AI ದುರುಪಯೋಗದ ವಿರುದ್ಧ ಗಟ್ಟಿಯಾದ ಕಾನೂನು ವ್ಯವಸ್ಥೆಯ ಅಗತ್ಯವಿದೆ ಎಂಬುದನ್ನು ಒತ್ತಿ ಹೇಳಿದೆ.





