ಇಲ್ಲಿನ ಬಿಸಿಎ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ ರೋಚಕ ಜಯ ಸಾಧಿಸಿದೆ. ಆದರೆ, ಪಂದ್ಯದ ವೇಳೆ ವಿಕೆಟ್ ಕೀಪರ್, ಕನ್ನಡಿಗ ಕೆ ಎಲ್ ರಾಹುಲ್ ಮತ್ತು ಬೌಲರ್ ವಾಷಿಂಗ್ಟನ್ ಸುಂದರ್ ನಡುವಿನ ತಮಿಳು ಸಂಭಾಷಣೆ ಹಾಗೂ ಈ ಕುರಿತು ವೀಕ್ಷಕ ವಿವರಣೆಗಾರ (ಕಾಮೆಂಟೇಟರ್) ಸಂಜಯ್ ಬಂಗಾರ್ ನೀಡಿದ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ.
ಪಂದ್ಯದ ನಿರ್ಣಾಯಕ ಹಂತದಲ್ಲಿ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಅವರಿಗೆ ಬೌಲಿಂಗ್ ಸಲಹೆಗಳನ್ನು ನೀಡುವಾಗ ರಾಹುಲ್ ತಮಿಳು ಭಾಷೆಯನ್ನು ಬಳಸಿದರು. ಈ ವೇಳೆ ಕಾಮೆಂಟರಿ ಬಾಕ್ಸ್‌ನಲ್ಲಿದ್ದ ಮಾಜಿ ಕ್ರಿಕೆಟಿಗರಾದ ವರುಣ್ ಆರೋನ್ ಮತ್ತು ಸಂಜಯ್ ಬಂಗಾರ್ ನಡುವೆ ನಡೆದ ಸಂಭಾಷಣೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಏನಿದು ಘಟನೆ?
ನ್ಯೂಜಿಲೆಂಡ್ ಬ್ಯಾಟರ್‌ಗಳಾದ ಡೆವೊನ್ ಕಾನ್ವೇ ಮತ್ತು ಹೆನ್ರಿ ನಿಕೋಲ್ಸ್ ಉತ್ತಮ ಆರಂಭ ಪಡೆದಿದ್ದ ಸಮಯವದು. ಈ ವೇಳೆ ದಾಳಿಗಿಳಿದ ವಾಷಿಂಗ್ಟನ್ ಸುಂದರ್ ಅವರಿಗೆ, ಚೆಂಡಿನ ವೇಗವನ್ನು ತಗ್ಗಿಸುವಂತೆ ವಿಕೆಟ್ ಹಿಂದಿದ್ದ ರಾಹುಲ್ ತಮಿಳಿನಲ್ಲಿ ಸೂಚನೆ ನೀಡುತ್ತಿದ್ದರು. ಸುಂದರ್ ಅವರ ಮಾತೃಭಾಷೆ ತಮಿಳು ಆಗಿರುವುದರಿಂದ, ಅವರಿಗೆ ವಿಷಯವನ್ನು ಸ್ಪಷ್ಟವಾಗಿ ಅರ್ಥಮಾಡಿಸಲು ರಾಹುಲ್ ಈ ಮಾರ್ಗ ಅನುಸರಿಸಿದ್ದರು.
ಸ್ಟಂಪ್ ಮೈಕ್‌ನಲ್ಲಿ ರಾಹುಲ್ ತಮಿಳು ಮಾತು ಕೇಳಿಸುತ್ತಿದ್ದಂತೆಯೇ, ಕಾಮೆಂಟರಿ ಮಾಡುತ್ತಿದ್ದ ವರುಣ್ ಆರೋನ್, “ಕೆ.ಎಲ್.ರಾಹುಲ್ ವಾಷಿಂಗ್ಟನ್ ಸುಂದರ್ ಜತೆ ತಮಿಳಿನಲ್ಲಿ ಮಾತನಾಡಬೇಕಾಗಿ ಬಂತು. ಅವರು ವೇಗವಾಗಿ ಬೌಲಿಂಗ್ ಮಾಡದಂತೆ ಹೇಳುತ್ತಿದ್ದಾರೆ. ಸಂಜಯ್ ಭಾಯ್, ಸುಂದರ್ ಅವರಿಗೆ ತಮಿಳು ಚೆನ್ನಾಗಿ ಅರ್ಥವಾಗುತ್ತದೆ ಎಂಬುದನ್ನು ನೀವು ಒಪ್ಪುವುದಿಲ್ಲವೇ?” ಎಂದು ಸಹ-ಕಾಮೆಂಟೇಟರ್ ಸಂಜಯ್ ಬಂಗಾರ್ ಅವರನ್ನು ಪ್ರಶ್ನಿಸಿದರು.
ಇದನ್ನು ಓದಿದ್ದೀರಾ? ಟಿ20 ಆರ್ಭಟದಲ್ಲಿ ಮಂಕಾಗುತ್ತಿರುವ ‘ಏಕದಿನ’ದ ಅಸ್ತಿತ್ವ: ಕ್ರಿಕೆಟ್ ಜಗತ್ತಿನ ಮುಂದಿದೆ ಯಕ್ಷಪ್ರಶ್ನೆ
ಇದಕ್ಕೆ ಪ್ರತ್ಯುತ್ತರ ನೀಡಿದ ಭಾರತ ತಂಡದ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್, “ನಾನು ರಾಷ್ಟ್ರಭಾಷೆಯನ್ನು (ಹಿಂದಿ) ಹೆಚ್ಚು ನಂಬುತ್ತೇನೆ,” ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದರು. ತಕ್ಷಣವೇ ಪ್ರತಿಕ್ರಿಯಿಸಿದ ಆರೋನ್, “ನಾನು ಪ್ರಾದೇಶಿಕ ಭಾಷೆಗಳನ್ನು ಮಾತ್ರ ನಂಬುತ್ತೇನೆ ಎಂದು ಎಲ್ಲಿ ಹೇಳಿದೆ?” ಎಂದು ಮರುಪ್ರಶ್ನಿಸಿದರು. ನಂತರ ಬಂಗಾರ್, “ನೋಡಿ, ಹಿಂದಿನ ಎಸೆತವನ್ನು ಅವರು 92 ಕಿ.ಮೀ ವೇಗದಲ್ಲಿ ಎಸೆದಿದ್ದಾರೆ. ಹೀಗಾಗಿ ಭಾಷೆ ಅಷ್ಟು ಮುಖ್ಯ ಎಂದು ನನಗನ್ನಿಸುವುದಿಲ್ಲ,” ಎಂದು ಮಾತು ಬದಲಿಸಿದರು.
ಹಿಂದಿ ರಾಷ್ಟ್ರಭಾಷೆಯಲ್ಲ: ವಾಸ್ತವವೇನು?
ಸಂಜಯ್ ಬಂಗಾರ್ ಅವರು ಪರೋಕ್ಷವಾಗಿ ಹಿಂದಿಯನ್ನು ‘ರಾಷ್ಟ್ರಭಾಷೆ’ ಎಂದು ಉಲ್ಲೇಖಿಸಿರುವುದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ವಾಸ್ತವದಲ್ಲಿ ಭಾರತದ ಸಂವಿಧಾನದ ಪ್ರಕಾರ ದೇಶಕ್ಕೆ ಯಾವುದೇ ‘ರಾಷ್ಟ್ರಭಾಷೆ’ ಇಲ್ಲ. ಸಂವಿಧಾನದ 8ನೇ ಪರಿಚ್ಛೇದದ ಅಡಿಯಲ್ಲಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಿಗೆ ಕೇಂದ್ರ ಸರ್ಕಾರದ ಆಡಳಿತಕ್ಕೆ ಬಳಸುವ ‘ಅಧಿಕೃತ ಭಾಷೆಗಳ’ ಸ್ಥಾನಮಾನವಿದೆಯೇ ಹೊರತು, ರಾಷ್ಟ್ರಭಾಷೆಯ ಸ್ಥಾನಮಾನವಿಲ್ಲ. ಕನ್ನಡಿಗ ರಾಹುಲ್ ಸಮಯೋಚಿತವಾಗಿ ತಮಿಳು ಬಳಸಿದ್ದನ್ನು ಸಮರ್ಥಿಸುವ ಬದಲು ಬಂಗಾರ್ ‘ರಾಷ್ಟ್ರಭಾಷೆ’ಯ ಪಾಠ ಮಾಡಲು ಹೋಗಿದ್ದು ಕ್ರೀಡಾಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಭಾರತಕ್ಕೆ 4 ವಿಕೆಟ್‌ಗಳ ಜಯ
ವಿವಾದದ ನಡುವೆಯೂ ಟೀಂ ಇಂಡಿಯಾ ಅಮೋಘ ಪ್ರದರ್ಶನ ನೀಡಿತು. ನ್ಯೂಜಿಲೆಂಡ್ ನೀಡಿದ್ದ 301 ರನ್‌ಗಳ ಗುರಿಯನ್ನು ಬೆನ್ನತ್ತಿದ ಭಾರತ, ವಿರಾಟ್ ಕೊಹ್ಲಿ (93) ಮತ್ತು ನಾಯಕ ಶುಭಮನ್ ಗಿಲ್ (56) ಅವರ ಜವಾಬ್ದಾರಿಯುತ ಆಟದ ನೆರವಿನಿಂದ 4 ವಿಕೆಟ್‌ಗಳ ಜಯ ಸಾಧಿಸಿತು. ಶ್ರೇಯಸ್ ಅಯ್ಯರ್ 49 ರನ್ ಗಳಿಸಿ ತಂಡದ ಗೆಲುವಿಗೆ ಕಾಣಿಕೆ ನೀಡಿದರು.
ಇದಕ್ಕೂ ಮುನ್ನ ನ್ಯೂಜಿಲೆಂಡ್ ಪರ ಡ್ಯಾರಿಲ್ ಮಿಚೆಲ್ ಅರ್ಧಶತಕ ಬಾರಿಸಿ ತಂಡದ ಮೊತ್ತವನ್ನು 300ಕ್ಕೆ ತಲುಪಿಸಿದರು. ಭಾರತದ ಪರ ಹರ್ಷಿತ್ ರಾಣಾ, ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ತಲಾ 2 ವಿಕೆಟ್ ಪಡೆದರು. ಈ ಗೆಲುವಿನೊಂದಿಗೆ ಭಾರತ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.





