ಮುಂಬರುವ 2026ರ ಐಸಿಸಿ ಪುರುಷರ ಟಿ20 ವಿಶ್ವಕಪ್ ಪಂದ್ಯಗಳನ್ನು ಭಾರತದಿಂದ ಸ್ಥಳಾಂತರಿಸಬೇಕೆಂಬ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ (ಬಿಸಿಬಿ) ಮನವಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ತಿರಸ್ಕರಿಸಿದೆ. ಭಾರತದಲ್ಲಿ ಆಟಗಾರರ ಸುರಕ್ಷತೆಗೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ಅಥವಾ ನಂಬಲರ್ಹ ಬೆದರಿಕೆಗಳು ಕಂಡುಬಂದಿಲ್ಲ ಎಂದು ಐಸಿಸಿ ಸ್ಪಷ್ಟಪಡಿಸಿದೆ.
ಐಪಿಎಲ್‌ನಿಂದ ಬಾಂಗ್ಲಾ ವೇಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ಬಿಡುಗಡೆ ಮಾಡಿದ ವಿವಾದದ ಬೆನ್ನಲ್ಲೇ, ಆಟಗಾರರ ಸುರಕ್ಷತೆಯ ಕಾರಣವೊಡ್ಡಿ ಬಿಸಿಬಿ ಪಂದ್ಯಗಳ ಸ್ಥಳ ಬದಲಾವಣೆಗೆ ಕೋರಿತ್ತು. ಆದರೆ, ಮಂಗಳವಾರ (ಜ.6) ನಡೆದ ಆನ್‌ಲೈನ್ ಸಭೆಯಲ್ಲಿ ಬಿಸಿಬಿ ಪ್ರತಿನಿಧಿಗಳೊಂದಿಗೆ ಚರ್ಚಿಸಿದ ಐಸಿಸಿ ಅಧಿಕಾರಿಗಳು, ಸದ್ಯದ ಮಟ್ಟಿಗೆ ಪಂದ್ಯಾವಳಿಯ ವೇಳಾಪಟ್ಟಿ ಅಥವಾ ಸ್ಥಳಗಳಲ್ಲಿ ಯಾವುದೇ ಬದಲಾವಣೆ ಮಾಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ ಎಂದು ‘ಕ್ರಿಕ್‌ಬಝ್’ ವರದಿ ಮಾಡಿದೆ.
ಜನೆವರಿ 4 ರಂದು ನಡೆದ ತುರ್ತು ಸಭೆಯ ನಂತರ, ಆಟಗಾರರು, ತಂಡದ ಅಧಿಕಾರಿಗಳು ಮತ್ತು ಮಂಡಳಿಯ ಸದಸ್ಯರ ಸುರಕ್ಷತೆಯನ್ನು ಕಾಪಾಡುವ ದೃಷ್ಟಿಯಿಂದ ಬಾಂಗ್ಲಾದೇಶದ ಪಂದ್ಯಗಳನ್ನು ಭಾರತದಿಂದ ಹೊರಗೆ ನಡೆಸುವಂತೆ ಕೋರಿ ಬಿಸಿಬಿ ಐಸಿಸಿಗೆ ಪತ್ರ ಬರೆದಿತ್ತು. ಬಿಸಿಸಿಐ ನಿರ್ದೇಶನದ ಮೇರೆಗೆ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡವು 9.2 ಕೋಟಿ ರೂ.ಗೆ ಖರೀದಿಸಿದ್ದ ಮುಸ್ತಾಫಿಜುರ್ ಅವರನ್ನು ಬಿಡುಗಡೆ ಮಾಡಿದ ನಂತರ ಈ ಬೆಳವಣಿಗೆ ನಡೆದಿತ್ತು. ಇದಕ್ಕೆ ಪ್ರತಿಯಾಗಿ ಬಿಸಿಬಿ ಬಾಂಗ್ಲಾದೇಶದಲ್ಲಿ ಐಪಿಎಲ್ ಪ್ರಸಾರವನ್ನು ನಿಷೇಧಿಸಿದೆ ಮತ್ತು ಮುಸ್ತಾಫಿಜುರ್ ಈಗ ಪಾಕಿಸ್ತಾನ್ ಸೂಪರ್ ಲೀಗ್ (ಪಿಎಸ್‌ಎಲ್) ಸೇರಲಿದ್ದಾರೆ.
ಇದನ್ನು ಓದಿದ್ದೀರಾ? ಟಿ20 ವಿಶ್ವಕಪ್ | ಭಾರತಕ್ಕೆ ಬರುವುದಿಲ್ಲ ಎಂದು ಘೋಷಿಸಿದ ಬಾಂಗ್ಲಾದೇಶ
ವೇಳಾಪಟ್ಟಿ ಯಥಾಸ್ಥಿತಿ
ಐಸಿಸಿ ನಿರ್ಧಾರದಂತೆ ಬಾಂಗ್ಲಾದೇಶ ತಂಡವು ನಿಗದಿತ ವೇಳಾಪಟ್ಟಿಯಂತೆಯೇ ಭಾರತದಲ್ಲಿ ಆಡಬೇಕಿದೆ. ಫೆಬ್ರವರಿ 7 ರಂದು ವೆಸ್ಟ್ ಇಂಡೀಸ್, ಫೆಬ್ರವರಿ 9 ರಂದು ಇಟಲಿ ಮತ್ತು ಫೆಬ್ರವರಿ 14 ರಂದು ಇಂಗ್ಲೆಂಡ್, ಫೆಬ್ರವರಿ 17 ರಂದು ನೇಪಾಳ ವಿರುದ್ಧ ಆಡಲಿದೆ.
ಐಸಿಸಿ ಮತ್ತು ಬಿಸಿಬಿ ನಡುವಿನ ಮಾತುಕತೆಯ ಸ್ವರೂಪದ ಬಗ್ಗೆ ಭಿನ್ನ ವರದಿಗಳು ಬರುತ್ತಿವೆ. ಸ್ಥಳಾಂತರದ ಮನವಿಯನ್ನು ಐಸಿಸಿ ಕಟುವಾಗಿ ತಿರಸ್ಕರಿಸಿದ್ದು, ಭಾರತಕ್ಕೆ ಬಂದು ಆಡದಿದ್ದರೆ ಅಂಕಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದೆ ಎಂದು ‘ಇಎಸ್‌ಪಿಎನ್ ಕ್ರಿಕ್‌ಇನ್ಫೋ’ ವರದಿ ಮಾಡಿದೆ. ಆದರೆ, ತಮಗೆ ಅಂತಹ ಯಾವುದೇ ಎಚ್ಚರಿಕೆ ಬಂದಿಲ್ಲ ಎಂದು ಬಿಸಿಬಿ ಹೇಳಿಕೊಂಡಿದೆ.
ಈ ಕುರಿತು ಜನವರಿ 10 ರೊಳಗೆ ಅಧಿಕೃತ ಲಿಖಿತ ನಿರ್ಧಾರ ಹೊರಬರುವ ನಿರೀಕ್ಷೆಯಿದೆ. ಫೆಬ್ರವರಿ 7 ರಿಂದ ಭಾರತ ಮತ್ತು ಶ್ರೀಲಂಕಾದಲ್ಲಿ ಟೂರ್ನಿ ಆರಂಭವಾಗಲಿದ್ದು, ಸದ್ಯಕ್ಕೆ ಐಸಿಸಿ ಭದ್ರತಾ ವಿಚಾರದಲ್ಲಿ ಭಾರತದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ.





