ನವಿ ಮುಂಬೈನಲ್ಲಿ ನಡೆದ ಮಹಿಳಾ ಏಕದಿನ ವಿಶ್ವಕಪ್‌ನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಮಹಿಳೆಯರ ತಂಡ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ಫೈನಲ್‌ಗೆ ಪ್ರವೇಶ ಪಡೆದಿದೆ.
ಆಸ್ಟ್ರೇಲಿಯಾ ನೀಡಿದ್ದ ಸವಾಲಿನ ಮೊತ್ತವನ್ನು ಬೆನ್ನಟ್ಟುವಲ್ಲಿ ಯಶಸ್ವಿಯಾದ ಹರ್ಮನ್ ಪ್ರೀತ್ ಕೌರ್ ಪಡೆ ಅತ್ಯುತ್ತಮ ಪ್ರದರ್ಶನ ನೀಡಿ ಮೂರನೇ ಬಾರಿ ಫೈನಲ್‌ಗೆ ಪ್ರವೇಶಿಸಿತು. ಭಾನುವಾರ(ನ.2) ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.
ಭಾರತ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ದಾಖಲೆಯ ರನ್ ಬಿನ್ನಟ್ಟಿ ಅಬ್ಬರಿಸಿದೆ. ಭಾರತದ ಪರ ಭರವಸೆಯ ಆಟಗಾರ್ತಿ ಜೆಮಿಮಾ ರೋಡ್ರಿಗಸ್ ಸ್ಪೋಟಕ ಬ್ಯಾಟಿಂಗ್ ಮಾಡಿ ಗೆಲುವಿನಲ್ಲಿ ಮಿಂಚಿದರು. ಒತ್ತಡವನ್ನು ಮೆಟ್ಟಿನಿಂತು ಬ್ಯಾಟ್ ಮಾಡಿದ ಜೆಮಿಮಾ ದಾಖಲೆಯ ಮೊತ್ತವನ್ನು ಚೇಸ್ ಮಾಡುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದರು.
ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಭಾರತ ದಾಖಲೆಯ ರನ್ ಬೆನ್ನಟ್ಟಿದೆ. ಈ ಮೊದಲು 2025ರಲ್ಲಿ ಆಸ್ಟ್ರೇಲಿಯಾ ಇದೇ ವಿಶ್ವಕಪ್‌ನ ಲೀಗ್ ಹಂತದ ಪಂದ್ಯದಲ್ಲಿ 331 ರನ್ ಬೆನ್ನಟ್ಟಿತ್ತು. ಈ ದಾಖಲೆಯನ್ನು ಭಾರತ ಈಗ ಅಳಿಸಿ ಹಾಕಿ, ಹೊಸ ಇತಿಹಾಸ ನಿರ್ಮಿಸಿದೆ.
ಇದನ್ನು ಓದಿದ್ದೀರಾ? ರೋಹಿತ್ ಶರ್ಮಾ ಇತಿಹಾಸ ನಿರ್ಮಾಣ; 38ರ ವಯಸ್ಸಿನ ವಿಶ್ವದ ನಂ.1 ಬ್ಯಾಟ್ಸ್‌ಮನ್
ಮಹತ್ವದ ಪಂದ್ಯದಲ್ಲಿ ಶೆಫಾಲಿ ವರ್ಮಾ ಒತ್ತಡವನ್ನು ಮೆಟ್ಟಿನಿಂತು ಬ್ಯಾಟ್ ಮಾಡುವಲ್ಲಿ ವಿಫಲರಾದರು. ಸ್ಮೃತಿ ಮಂಧಾನ ಸಹ 24 ರನ್‌ಗಳಿಗೆ ಔಟ್ ಆದರು. ಮೂರನೇ ವಿಕೆಟ್‌ಗೆ ಹರ್ಮನ್ ಪ್ರೀತ್ ಕೌರ್ ಹಾಗೂ ಜೆಮಿಮಾ ರೊಡ್ರಿಗಾಸ್ ಜೋಡಿ 176 ಎಸೆತಗಳಲ್ಲಿ 167 ರನ್ ಸಿಡಿಸಿ ತಂಡಕ್ಕೆ ಆಧಾರವಾಯಿತು. ಹರ್ಮನ್ ಪ್ರಿತ್ 10 ಬೌಂಡರಿ, 2 ಸಿಕ್ಸರ್ ಸಹಾಯದಿಂದ 89 ರನ್ ಬಾರಿಸಿ ಔಟ್ ಆದರು. ಮಧ್ಯಮ ಕ್ರಮಾಂಕದಲ್ಲಿ ದೀಪ್ತಿ ಶರ್ಮಾ 24, ರಿಚಾ ಘೋಷ್ 26, ಅಮನ್‌ಜೋತ್ ಕೌರ್ ಅಜೇಯ 15 ರನ್ ಬಾರಿಸಿದರು.
ಜೆಮಿಮಾ ಶತಕ
25 ವರ್ಷದ ಜೆಮಿಮಾ ರೋಡ್ರಿಗಸ್ ತಮ್ಮ ವೃತ್ತಿ ಜೀವನದ ಸ್ಮರಣೀಯ ಇನಿಂಗ್ಸ್ ಕಟ್ಟಿದರು. ಇವರು 134 ಎಸೆತಗಳಲ್ಲಿ 14 ಬೌಂಡರಿ ನೆರವಿನಿಂದ ಅಜೇಯ 127 ರನ್ ಪೇರಿಸಿದರು. ಅಂತಿಮವಾಗಿ ಭಾರತ 48.3 ಓವರ್‌ಗಳಲ್ಲಿ 5 ವಿಕೆಟ್‌ಗೆ 341 ರನ್ ಬಾರಿಸಿ ಫೈನಲ್‌ಗೆ ಅರ್ಹತೆ ಪಡೆಯಿತು.
ಆಸ್ಟ್ರೇಲಿಯಾ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಸತತ 15 ಪಂದ್ಯಗಳನ್ನು ಗೆದ್ದ ದಾಖಲೆಗೆ ತಡೆ ಬಿದ್ದಿತು. 2017ರಲ್ಲಿ ಭಾರತವೇ ಆಸ್ಟ್ರೇಲಿಯಾವನ್ನು ಸೆಮಿಫೈನಲ್ ಪಂದ್ಯದಲ್ಲಿ ಮಣಿಸಿ, ಫೈನಲ್‌ಗೆ ಪ್ರವೇಶ ಪಡೆದಿತ್ತು.





