ಕ್ರಿಕೆಟ್‌ನಲ್ಲಿ ಕೊನೆಯ ಎಸೆತದವರೆಗೂ ಹೋರಾಡುವ ಗುಣವಿದ್ದ ಇಮ್ರಾನ್, ರಾಜಕೀಯದಲ್ಲೂ ಸೋಲೊಪ್ಪಿಕೊಳ್ಳದೆ ಜೈಲಿನಿಂದಲೇ ಹೋರಾಟ ಮುಂದುವರಿಸಿದ್ದಾರೆ. ಒಂದು ಕಾಲದಲ್ಲಿ ಪಾಕಿಸ್ತಾನದ ಭರವಸೆಯ ಕಿರಣವಾಗಿದ್ದ ‘ಕಪ್ತಾನ’, ಇಂದು ತನ್ನದೇ ದೇಶದ ಕಾನೂನಿನ ಕುಣಿಕೆಯಲ್ಲಿ ಸಿಲುಕಿರುವುದು ವಿಪರ್ಯಾಸವೇ ಸರಿ
ಒಬ್ಬ ವ್ಯಕ್ತಿ ತನ್ನ ದೇಶಕ್ಕೆ ವಿಶ್ವಕಪ್ ತಂದುಕೊಟ್ಟ ಹೀರೋ ಆಗಿ ಮೆರೆದರು. ಅದೇ ವ್ಯಕ್ತಿ ರಾಜಕೀಯ ಪಕ್ಷ ಕಟ್ಟಿ, ದಶಕಗಳ ಹೋರಾಟದ ನಂತರ ದೇಶದ ಪ್ರಧಾನಿಯಾದರು. ಆದರೆ, ವಿಧಿಯಾಟ ಎಂಬಂತೆ, ಇಂದು ಅದೇ ವ್ಯಕ್ತಿ ನೂರಾರು ಪ್ರಕರಣಗಳನ್ನು ಹೊತ್ತು ಸೆರೆಮನೆಯ ಕತ್ತಲ ಕೋಣೆಯಲ್ಲಿದ್ದಾರೆ. ಇದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಬದುಕಿನ ಚಿತ್ರಣ. ಕ್ರಿಕೆಟ್ ಮೈದಾನದಲ್ಲಿನ ಸ್ವಿಂಗ್ ಬೌಲಿಂಗ್‌ಗಿಂತಲೂ ಅವರ ಜೀವನದ ತಿರುವುಗಳು ಹೆಚ್ಚು ಅನಿರೀಕ್ಷಿತವಾಗಿವೆ.
ಲಾಹೋರ್‌ನ ಐಷಾರಾಮಿ ಬದುಕಿನಿಂದ ಆಕ್ಸ್‌ಫರ್ಡ್ ಶಿಕ್ಷಣದವರೆಗೆ, ಲಂಡನ್‌ನ ನೈಟ್ ಲೈಫ್ ನಿಂದ ಇಸ್ಲಾಮಿಕ್ ರಾಷ್ಟ್ರದ ನಾಯಕನಾಗುವವರೆಗೆ ಇಮ್ರಾನ್ ಖಾನ್ ಸಾಕಷ್ಟು ಹಾದಿ ಸವೆಸಿದ್ದಾರೆ.
ಬಾಲ್ಯ ಮತ್ತು ಪ್ರತಿಷ್ಠಿತ ಶಿಕ್ಷಣ
ಇಮ್ರಾನ್ ಅಹ್ಮದ್ ಖಾನ್ ನಿಯಾಜಿ ಜನಿಸಿದ್ದು 1952ರ ಅಕ್ಟೋಬರ್ 5ರಂದು ಲಾಹೋರ್‌ನಲ್ಲಿ. ತಂದೆ ಇಕ್ರಮುಲ್ಲಾ ಖಾನ್ ನಿಯಾಜಿ ಸಿವಿಲ್ ಇಂಜಿನಿಯರ್ ಆಗಿದ್ದರು. ಶ್ರೀಮಂತ ಪಂಫ್ದೂನ್ ಕುಟುಂಬದಲ್ಲಿ ಜನಿಸಿದ ಇಮ್ರಾನ್, ಬಾಲ್ಯದಿಂದಲೇ ಯಾವುದೇ ಕುಂದುಕೊರತೆಯಿಲ್ಲದೆ ಬೆಳೆದರು.
ಲಾಹೋರ್‌ನ ಪ್ರತಿಷ್ಠಿತ ಐಚಿಸನ್ ಕಾಲೇಜಿನಲ್ಲಿ ಶಾಲಾ ಶಿಕ್ಷಣ ಮುಗಿಸಿದ ಅವರು, ನಂತರ ಉನ್ನತ ವ್ಯಾಸಂಗಕ್ಕಾಗಿ ಇಂಗ್ಲೆಂಡ್‌ಗೆ ತೆರಳಿದರು. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರ, ರಾಜಕೀಯ ಮತ್ತು ಅರ್ಥಶಾಸ್ತ್ರವನ್ನು ಅಧ್ಯಯನ ಮಾಡಿದರು. ಇಂಗ್ಲೆಂಡ್‌ನಲ್ಲಿದ್ದಾಗ ಅವರು ಪಾಶ್ಚಿತ್ಯ ಜೀವನಶೈಲಿಗೆ ಒಗ್ಗಿಕೊಂಡಿದ್ದರು. ಆದರೆ ಇವೆಲ್ಲದರ ನಡುವೆಯೂ ಕ್ರಿಕೆಟ್ ಮೇಲಿನ ಅವರ ಪ್ರೀತಿ ಮಾತ್ರ ಕಡಿಮೆಯಾಗಿರಲಿಲ್ಲ.

ಕ್ರಿಕೆಟ್ ಲೋಕದ ‘ಸುಲ್ತಾನ’
1971ರಲ್ಲಿ ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ ತಂಡಕ್ಕೆ ಪದಾರ್ಪಣೆ ಮಾಡಿದಾಗ ಇಮ್ರಾನ್ ಖಾನ್ ಒಬ್ಬ ಸಾಧಾರಣ ಬೌಲರ್ ಆಗಿದ್ದರು. ಆದರೆ ತಮ್ಮ ಕಠಿಣ ಪರಿಶ್ರಮದಿಂದ ಅವರು ವಿಶ್ವದ ಅತ್ಯಂತ ಖ್ಯಾತ ವೇಗದ ಬೌಲರ್ ಆಗಿ ರೂಪಗೊಂಡರು. ರಿವರ್ಸ್ ಸ್ವಿಂಗ್ ಕಲೆಯನ್ನು ಕರಗತ ಮಾಡಿಕೊಂಡಿದ್ದ ಇಮ್ರಾನ್, ಬ್ಯಾಟ್ಸ್‌ಮನ್‌ಗಳ ಪಾಲಿಗೆ ಸಿಂಹಸ್ವಪ್ನವಾಗಿದ್ದರು.
ಕೇವಲ ಬೌಲರ್ ಆಗಷ್ಟೇ ಅಲ್ಲದೆ, ಒಬ್ಬ ಆಲ್-ರೌಂಡರ್ ಆಗಿಯೂ ಅವರು ಮಿಂಚಿದರು. 1982ರಲ್ಲಿ ಪಾಕಿಸ್ತಾನ ತಂಡದ ನಾಯಕತ್ವ ವಹಿಸಿಕೊಂಡ ನಂತರ ತಂಡದ ಚಿತ್ರಣವನ್ನೇ ಬದಲಿಸಿದರು. ತಂಡದಲ್ಲಿ ಶಿಸ್ತು ಮತ್ತು ಗೆಲ್ಲಲೇಬೇಕೆಂಬ ಛಲವನ್ನು ತುಂಬಿದರು.
ಇದನ್ನು ಓದಿದ್ದೀರಾ? ವ್ಯಕ್ತಿಚಿತ್ರ | KSCA ಕ್ರೀಡಾಂಗಣದ ಶಿಲ್ಪಿ- ಎಂ ಚಿನ್ನಸ್ವಾಮಿ
1992ರ ವಿಶ್ವಕಪ್ ಗೆಲುವು
ಇಮ್ರಾನ್ ಖಾನ್ ಅವರ ಕ್ರಿಕೆಟ್ ಬದುಕಿನ ಅತ್ಯುನ್ನತ ಕ್ಷಣವೆಂದರೆ 1992ರ ಏಕದಿನ ವಿಶ್ವಕಪ್. ಆಸ್ಟ್ರೇಲಿಯಾದಲ್ಲಿ ನಡೆದ ಈ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಆರಂಭದಲ್ಲಿ ಸೋತು ಸುಣ್ಣವಾಗಿತ್ತು. ಇನ್ನೇನು ಟೂರ್ನಿಯಿಂದ ಹೊರಬೀಳುವ ಹಂತದಲ್ಲಿದ್ದಾಗ, ಇಮ್ರಾನ್ ಖಾನ್ ತಮ್ಮ ತಂಡದ ಆಟಗಾರರನ್ನು ಉದ್ದೇಶಿಸಿ “ಮೂಲೆಗುಂಪಾದ ಹುಲಿಗಳಂತೆ ಹೋರಾಡಿ” ಎಂದು ಕರೆ ನೀಡಿದರು. ಆ ಮಾತು ತಂಡದಲ್ಲಿ ಮೋಡಿ ಮಾಡಿತು. ಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿ, ಪಾಕಿಸ್ತಾನಕ್ಕೆ ಚೊಚ್ಚಲ ವಿಶ್ವಕಪ್ ತಂದುಕೊಟ್ಟರು. ಅಂದು 39 ವರ್ಷದ ಇಮ್ರಾನ್, ವಿಶ್ವಕಪ್ ಎತ್ತಿ ಹಿಡಿದಾಗ ಇಡೀ ಪಾಕಿಸ್ತಾನವೇ ಸಂಭ್ರಮದಲ್ಲಿ ತೇಲಾಡಿತ್ತು. ಅದೇ ವರ್ಷ ಅವರು ಕ್ರಿಕೆಟ್‌ಗೆ ವಿದಾಯ ಹೇಳಿದರು.
ಸಮಾಜ ಸೇವೆ ಮತ್ತು ಕ್ಯಾನ್ಸರ್ ಆಸ್ಪತ್ರೆ
ಕ್ರಿಕೆಟ್ ನಿವೃತ್ತಿಯ ನಂತರ ಇಮ್ರಾನ್ ಖಾನ್ ಅವರ ಜೀವನದ ದೃಷ್ಟಿಕೋನ ಬದಲಾಯಿತು. ತಮ್ಮ ತಾಯಿ ಶೌಕತ್ ಖಾನಮ್ ಅವರು ಕ್ಯಾನ್ಸರ್ ಕಾಯಿಲೆಯಿಂದ ನರಳಿ ಮೃತಪಟ್ಟಿದ್ದು ಇಮ್ರಾನ್ ಅವರಿಗೆ ಆಘಾತ ನೀಡಿತ್ತು. ಪಾಕಿಸ್ತಾನದ ಬಡ ಜನರಿಗೆ ಕ್ಯಾನ್ಸರ್ ಚಿಕಿತ್ಸೆ ಸಿಗುವುದು ಎಷ್ಟು ಕಷ್ಟ ಎಂಬುದನ್ನು ಅವರು ಅರಿತರು.

ಇದರ ಫಲವಾಗಿ, ಅವರು ವಿಶ್ವಾದ್ಯಂತ ದೇಣಿಗೆ ಸಂಗ್ರಹಿಸಿ, ಲಾಹೋರ್‌ನಲ್ಲಿ ‘ಶೌಕತ್ ಖಾನಮ್ ಮೆಮೋರಿಯಲ್ ಕ್ಯಾನ್ಸರ್ ಆಸ್ಪತ್ರೆ’ಯನ್ನು ಸ್ಥಾಪಿಸಿದರು. ಬಡವರಿಗೆ ಉಚಿತ ಚಿಕಿತ್ಸೆ ನೀಡುವ ಈ ಆಸ್ಪತ್ರೆ, ಇಮ್ರಾನ್ ಖಾನ್ ಅವರಿಗೆ ಪಾಕಿಸ್ತಾನದ ಜನಸಾಮಾನ್ಯರ ನಡುವೆ ಭಾರೀ ಜನಪ್ರಿಯತೆಯನ್ನು ತಂದುಕೊಟ್ಟಿತು. ಇದೇ ಅವರ ರಾಜಕೀಯ ಪ್ರವೇಶಕ್ಕೆ ಭದ್ರ ಬುನಾದಿಯಾಯಿತು.
ರಾಜಕೀಯ ಪ್ರವೇಶ ಮತ್ತು ಸುದೀರ್ಘ ಹೋರಾಟ
1996ರಲ್ಲಿ ಇಮ್ರಾನ್ ಖಾನ್ ‘ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್’ (ಪಿಟಿಐ) ಎಂಬ ರಾಜಕೀಯ ಪಕ್ಷವನ್ನು ಸ್ಥಾಪಿಸಿದರು. ‘ಇನ್ಸಾಫ್’ ಎಂದರೆ ನ್ಯಾಯ. ಭ್ರಷ್ಟಾಚಾರದ ವಿರುದ್ಧ ಹೋರಾಟ ಮತ್ತು ನ್ಯಾಯಯುತ ಸಮಾಜ ನಿರ್ಮಾಣ ಅವರ ಗುರಿಯಾಗಿತ್ತು.
ಆದರೆ, ಕ್ರಿಕೆಟ್ ಪಿಚ್‌ನಲ್ಲಿ ಸಿಕ್ಕ ಯಶಸ್ಸು ರಾಜಕೀಯದಲ್ಲಿ ತಕ್ಷಣ ಸಿಗಲಿಲ್ಲ. ಆರಂಭದ ಚುನಾವಣೆಗಳಲ್ಲಿ ಅವರ ಪಕ್ಷ ಹೀನಾಯವಾಗಿ ಸೋತಿತು. ಹಲವು ವರ್ಷಗಳ ಕಾಲ ಅವರು ಸಂಸತ್ತಿನಲ್ಲಿ ತಮ್ಮ ಪಕ್ಷದ ಏಕೈಕ ಸದಸ್ಯರಾಗಿದ್ದರು. ರಾಜಕೀಯ ವಿಶ್ಲೇಷಕರು ಅವರನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಸುಮಾರು 22 ವರ್ಷಗಳ ಕಾಲ ಅವರು ರಾಜಕೀಯದಲ್ಲಿ ಏಕಾಂಗಿ ಹೋರಾಟ ನಡೆಸಿದರು. ನಿಧಾನವಾಗಿ, ಪಾಕಿಸ್ತಾನದ ಯುವಜನತೆ ಇಮ್ರಾನ್ ಕಡೆಗೆ ಆಕರ್ಷಿತರಾದರು. ನವಾಜ್ ಷರೀಫ್ ಮತ್ತು ಭುಟ್ಟೋ ಕುಟುಂಬಗಳ ಭ್ರಷ್ಟಾಚಾರದಿಂದ ಬೇಸತ್ತಿದ್ದ ಜನರಿಗೆ ಇಮ್ರಾನ್ ಒಬ್ಬ ಪ್ರಾಮಾಣಿಕ ನಾಯಕನಂತೆ ಕಂಡರು. 2011ರ ಲಾಹೋರ್ ರ್ಯಾಲಿಯ ನಂತರ ಅವರ ಜನಪ್ರಿಯತೆ ಉತ್ತುಂಗಕ್ಕೇರಿತು.
‘ನಯಾ ಪಾಕಿಸ್ತಾನ್ ಮತ್ತು ಪ್ರಧಾನಿ ಪಟ್ಟ
2018ರ ಸಾರ್ವತ್ರಿಕ ಚುನಾವಣೆಯಲ್ಲಿ ಇಮ್ರಾನ್ ಖಾನ್ ಅವರ ಪಿಟಿಐ ಪಕ್ಷ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದಿತು. “ನಾನು ಹಳೆಯ ಪಾಕಿಸ್ತಾನವನ್ನು ಬದಲಿಸಿ, ‘ನಯಾ ಪಾಕಿಸ್ತಾನ್’ (ಹೊಸ ಪಾಕಿಸ್ತಾನ) ನಿರ್ಮಿಸುತ್ತೇನೆ” ಎಂದು ಅವರು ಜನರಿಗೆ ಭರವಸೆ ನೀಡಿದರು. ಸೇನೆಯ ಬೆಂಬಲವೂ ಅವರಿಗಿದೆ ಎಂದು ಹೇಳಲಾಗಿತ್ತು. ಅಂತಿಮವಾಗಿ, ಅವರು ಪಾಕಿಸ್ತಾನದ 22ನೇ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ಪ್ರಧಾನಿಯಾಗಿ ಸವಾಲುಗಳು
ಆದರೆ ಆಡಳಿತ ನಡೆಸುವುದು ಕ್ರಿಕೆಟ್ ಆಡಿದಷ್ಟು ಸುಲಭವಾಗಿರಲಿಲ್ಲ. ಪಾಕಿಸ್ತಾನದ ಆರ್ಥಿಕತೆ ಪಾತಾಳಕ್ಕೆ ಕುಸಿಯಿತು. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿತು. ಸಾಲಕ್ಕಾಗಿ ಅವರು ಐಎಂಎಫ್ ಮತ್ತು ಇತರ ದೇಶಗಳ ಮುಂದೆ ಕೈಚಾಚಬೇಕಾಯಿತು. ಸೇನೆಯ ಜೊತೆಗಿನ ಸಂಘರ್ಷಕೂಡ ಹೆಚ್ಚಾಯಿತು. ಪಾಕಿಸ್ತಾನದ ರಾಜಕೀಯದಲ್ಲಿ ಸೇನೆಯದ್ದೇ ಮೇಲುಗೈ. ಆರಂಭದಲ್ಲಿ ಸೇನೆಯ ಜೊತೆ ಉತ್ತಮ ಸಂಬಂಧ ಹೊಂದಿದ್ದ ಇಮ್ರಾನ್, ನಂತರದ ದಿನಗಳಲ್ಲಿ ಸೇನಾ ಮುಖ್ಯಸ್ಥರ ನೇಮಕ ವಿಚಾರದಲ್ಲಿ ಸೇನೆಯ ಕೆಂಗಣ್ಣಿಗೆ ಗುರಿಯಾದರು. ಇದೇ ಅವರ ಪತನಕ್ಕೆ ಮುಖ್ಯ ಕಾರಣವಾಯಿತು.

ಅಧಿಕಾರದಿಂದ ಪತನ ಮತ್ತು ಜೈಲು ಪಾಲು
2022ರ ಏಪ್ರಿಲ್ ತಿಂಗಳು ಇಮ್ರಾನ್ ಖಾನ್ ಪಾಲಿಗೆ ಕರಾಳವಾಗಿತ್ತು. ವಿರೋಧ ಪಕ್ಷಗಳು ಒಂದಾಗಿ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದವು. ಪಾಕಿಸ್ತಾನದ ಇತಿಹಾಸದಲ್ಲೇ ಅವಿಶ್ವಾಸ ನಿರ್ಣಯದ ಮೂಲಕ ಅಧಿಕಾರ ಕಳೆದುಕೊಂಡ ಮೊದಲ ಪ್ರಧಾನಿ ಎಂಬ ಕುಖ್ಯಾತಿಗೆ ಇಮ್ರಾನ್ ಒಳಗಾದರು. ಅಧಿಕಾರ ಕಳೆದುಕೊಂಡ ನಂತರ ಇಮ್ರಾನ್ ಸುಮ್ಮನೆ ಕೂರಲಿಲ್ಲ. ದೇಶಾದ್ಯಂತ ಬೃಹತ್ ಪ್ರತಿಭಟನೆಗಳನ್ನು ನಡೆಸಿ, ಸೇನೆ ಮತ್ತು ಸರ್ಕಾರದ ವಿರುದ್ಧ ಗುಡುಗಿದರು. ಇದರ ಪರಿಣಾಮವಾಗಿ ಅವರ ಮೇಲೆ ತೋಷಖಾನಾ ಪ್ರಕರಣ, ಸೈಫರ್ ಪ್ರಕರಣ, ಅಲ್-ಖಾದಿರ್ ಟ್ರಸ್ಟ್ ಪ್ರಕರಣ ಸೇರಿ ನೂರಾರು ಪ್ರಕರಣಗಳು ದಾಖಲಾದವು.
ಈಗ ಇಮ್ರಾನ್ ಖಾನ್ ರಾವಲ್ಪಿಂಡಿಯ ಅಡಿಯಾಲ ಜೈಲಿನಲ್ಲಿದ್ದಾರೆ. ಅವರಿಗೆ ಜೈಲು ಶಿಕ್ಷೆಯೂ ಪ್ರಕಟವಾಗಿದೆ. ಅವರ ಪಕ್ಷದ ಚಿಹ್ನೆಯಾದ ‘ಕ್ರಿಕೆಟ್ ಬ್ಯಾಟ್’ ಅನ್ನು ಕೂಡ ಚುನಾವಣಾ ಆಯೋಗ ರದ್ದುಪಡಿಸಿತ್ತು.
ಭಾರತದೊಂದಿಗಿನ ಸಂಬಂಧ
ಇಮ್ರಾನ್ ಖಾನ್ ಕ್ರಿಕೆಟಿಗರಾಗಿದ್ದಾಗ ಭಾರತದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ಭಾರತದ ಹಲವು ಕ್ರಿಕೆಟಿಗರ ಜೊತೆ ಅವರಿಗೆ ಉತ್ತಮ ಸ್ನೇಹವಿತ್ತು. ಸಿಖ್ ಯಾತ್ರಾರ್ಥಿಗಳಿಗಾಗಿ ಪಾಕಿಸ್ತಾನದ ಕರ್ತಾರ್‌ಪುರಕ್ಕೆ ಹೋಗಲು ಕಾರಿಡಾರ್ ತೆರೆದಿದ್ದು ಅವರ ಆಡಳಿತದ ಒಂದು ಸಕಾರಾತ್ಮಕ ನಿರ್ಧಾರವಾಗಿತ್ತು. ಭಾರತವು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಪಡಿಸಿದ ನಂತರ, ಇಮ್ರಾನ್ ಖಾನ್ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಆರ್‌ಎಸ್‌ಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ವಿಶ್ವಸಂಸ್ಥೆಯಲ್ಲಿಯೂ ಭಾರತದ ವಿರುದ್ಧ ಮಾತನಾಡಿದರು.
ಇಮ್ರಾನ್ ಖಾನ್ ಒಬ್ಬ ವರ್ಚಸ್ವಿ ನಾಯಕ ಎಂಬುದರಲ್ಲಿ ಎರಡು ಮಾತಿಲ್ಲ. ಕೋಟ್ಯಂತರ ಜನರು ಅವರನ್ನು ಇಂದಿಗೂ ಆರಾಧಿಸುತ್ತಾರೆ. ಆದರೆ, ರಾಜಕೀಯದ ಚದುರಂಗದಾಟದಲ್ಲಿ ಅವರು ಮಾಡಿದ ತಪ್ಪುಗಳು ಸೆರೆಮನೆಗೆ ತಳ್ಳಿದೆ.
ಕ್ರಿಕೆಟ್‌ನಲ್ಲಿ ಕೊನೆಯ ಎಸೆತದವರೆಗೂ ಹೋರಾಡುವ ಗುಣವಿದ್ದ ಇಮ್ರಾನ್, ರಾಜಕೀಯದಲ್ಲೂ ಸೋಲೊಪ್ಪಿಕೊಳ್ಳದೆ ಜೈಲಿನಿಂದಲೇ ಹೋರಾಟ ಮುಂದುವರಿಸಿದ್ದಾರೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ, ಅವರು ಮತ್ತೆ ರಾಜಕೀಯ ಮುಖ್ಯವಾಹಿನಿಗೆ ಬರುವುದು ಕಷ್ಟಸಾಧ್ಯ ಎಂದೇ ಹೇಳಲಾಗುತ್ತಿದೆ. ಒಂದು ಕಾಲದಲ್ಲಿ ಪಾಕಿಸ್ತಾನದ ಭರವಸೆಯ ಕಿರಣವಾಗಿದ್ದ ‘ಕಪ್ತಾನ’, ಇಂದು ತನ್ನದೇ ದೇಶದ ಕಾನೂನಿನ ಕುಣಿಕೆಯಲ್ಲಿ ಸಿಲುಕಿರುವುದು ವಿಪರ್ಯಾಸವೇ ಸರಿ.





