ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಗುವಾಹಟಿಯಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನದ ಆಟದಲ್ಲಿ ಭಾರತ ತಂಡ ಮೊದಲ ಇನಿಂಗ್ಸ್‌ನಲ್ಲಿ 83.5 ಓವರ್‌ಗಳಲ್ಲಿ ಕೇವಲ 201 ರನ್‌ಗಳಿಗೆ ಆಲೌಟ್ ಆಗಿ 288 ರನ್‌ಗಳ ಭಾರೀ ಹಿನ್ನಡೆ ಅನುಭವಿಸಿದೆ.
ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್‌ನಲ್ಲಿ ಗಳಿಸಿದ 489 ರನ್‌ಗಳಿಗೆ ಉತ್ತರವಾಗಿ ಭಾರತ ತಂಡ ದಕ್ಷಿಣ ಆಫ್ರಿಕಾದ ವೇಗಿ ಮಾರ್ಕೋ ಯಾನ್ಸನ್ ಅದ್ಭುತ ಬೌಲಿಂಗ್‌ನಿಂದ ತತ್ತರಿಸಿತು.
ದಿನದ ಆರಂಭದಲ್ಲಿ ಭಾರತದ ಆರಂಭಿಕ ಆಟಗಾರರು ಸ್ಥಿರತೆ ತೋರುತ್ತಾರೆಂಬ ನಿರೀಕ್ಷೆಯಿದ್ದರೂ, ಯಶಸ್ವಿ ಜೈಸ್ವಾಲ್ (58 ರನ್) ಮತ್ತು ಕೆಎಲ್ ರಾಹುಲ್ (22 ರನ್) ಮಾತ್ರ ಚೂರು ಭರವಸೆ ನೀಡಿದರು. ಮೊದಲ ವಿಕೆಟ್ 65 ರನ್‌ಗಳಿಗೆ ಬಿದ್ದ ನಂತರ, ಸಾಯಿ ಸುದರ್ಶನ್ (15 ರನ್) ಮತ್ತು ಧ್ರುವ್ ಜುರೆಲ್ (0 ರನ್) ಬೇಗನೇ ಔಟ್ ಆದರು.
ಇದನ್ನು ಓದಿದ್ದೀರಾ? ಮೀಸಲಾತಿ ಆಟಗಾರʼ ಎಂದು ಹಂಗಿಸಿದವರಿಗೆ ಗೆಲುವಿನ ಉತ್ತರ ಕೊಟ್ಟ ತೆಂಬಾ ಬವುಮಾ
ನಾಯಕ ರಿಷಭ್ ಪಂತ್ (7 ರನ್) ಮತ್ತು ರವೀಂದ್ರ ಜಡೇಜಾ (6 ರನ್) ಸಹ ಆರಂಭದಲ್ಲೇ ವಿಕೆಟ್ ಕಳೆದುಕೊಂಡರು. ನಿತೀಶ್ ಕುಮಾರ್ ರೆಡ್ಡಿ (10 ರನ್) ಮತ್ತು ವಾಷಿಂಗ್ಟನ್ ಸುಂದರ್ (48 ರನ್) ಸಣ್ಣ ಪ್ರತಿರೋಧ ತೋರಿದರೂ, ಮಾರ್ಕೋ ಯಾನ್ಸನ್‌ನ ವೇಗದ ಬೌಲಿಂಗ್ ಮುಂದೆ ನಿಲ್ಲಲಿಲ್ಲ.
ಯಾನ್ಸನ್ ಏಕಾಂಗಿಯಾಗಿ ಭಾರತೀಯ ಬ್ಯಾಟ್ಸ್‌ಮನ್‌ಗಳನ್ನು ಹೈರಾಣು ಮಾಡಿದರು. ಅವರು 19.5 ಓವರ್‌ಗಳಲ್ಲಿ ಕೇವಲ 48 ರನ್ ನೀಡಿ 6 ವಿಕೆಟ್ ಪಡೆದರು.
ಕೆಳಕ್ರಮಾಂಕದಲ್ಲಿ ಕುಲದೀಪ್ ಯಾದವ್ (19 ರನ್) ಮತ್ತು ಜಸ್ಪ್ರೀತ್ ಬುಮ್ರಾ (5 ರನ್) ರನ್ ಗಳಿಸಿ ಔಟ್ ಆದರು. ವಾಷಿಂಗ್ಟನ್ ಸುಂದರ್ ಅತೀ ಹೆಚ್ಚು 48 ರನ್ ಗಳಿಸಿ ತಂಡಕ್ಕೆ ಸಣ್ಣ ಗೌರವ ನೀಡಿದರು. ಯಾನ್ಸನ್ ಹೊರತುಪಡಿಸಿ ಸೈಮನ್ ಹಾರ್ಮರ್ 3 ವಿಕೆಟ್ ಮತ್ತು ಕೇಶವ ಮಹಾರಾಜ್ 1 ವಿಕೆಟ್ ಪಡೆದರು.
ಭಾರತ ತಂಡವು ಮೊದಲ ಇನಿಂಗ್ಸ್‌ನಲ್ಲಿ 288 ರನ್‌ಗಳ ಹಿನ್ನಡೆ ಅನುಭವಿಸಿದ್ದರೂ ದಕ್ಷಿಣ ಆಫ್ರಿಕಾ ತಂಡ ಫಾಲೋಆನ್ ಹೇರದೇ ಅಚ್ಚರಿ ಮೂಡಿಸಿದೆ. ಎದುರಾಳಿ ತಂಡವು ಮೊದಲ ಇನಿಂಗ್ಸ್‌ನಲ್ಲಿ 200 ರನ್‌ಗಳ ಹಿನ್ನಡೆ ಅನುಭವಿಸಿದರೆ, ಆ ತಂಡವನ್ನು ಮೊದಲು ದ್ವಿತೀಯ ಇನಿಂಗ್ಸ್ ಆಡಲು ಆಹ್ವಾನಿಸಬಹುದು. ಆದರೆ ನಾಯಕ ತೆಂಬಾ ಬವುಮಾ ಫಾಲೋಆನ್ ಹೇರದೆ ಮತ್ತೆ ಬ್ಯಾಟಿಂಗ್ ನಡೆಸಲು ನಿರ್ಧರಿಸಿದ್ದಾರೆ. ಅದರಂತೆ 288 ರನ್‌ಗಳ ಮುನ್ನಡೆಯೊಂದಿಗೆ ಸೌತ್ ಆಫ್ರಿಕಾ ದ್ವಿತೀಯ ಇನಿಂಗ್ಸ್ ಆರಂಭಿಸಿದೆ.
2ನೇ ಇನಿಂಗ್ಸ್ ಆರಂಭಿಸಿರುವ ದಕ್ಷಿಣ ಆಫ್ರಿಕಾ 4 ಓವರ್‌ಗಳಲ್ಲಿ 18 ರನ್ ಗಳಿಸಿದೆ. ಐಡೆನ್ ಮಾರ್ಕ್ರಾಮ್ ಹಾಗೂ ರಯಾನ್ ರಿಕೆಲ್ಟನ್ ಬ್ಯಾಟಿಂಗ್ ಮಾಡುತ್ತಿದ್ದಾರೆ.





