ಭಾರತ – ಇಂಗ್ಲೆಂಡ್ ನಡುವೆ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನವಾದ ಇಂದು ಟೀಂ ಇಂಡಿಯಾ ಬೃಹತ್ ಮೊತ್ತದತ್ತ ದಾಪುಗಾಲಿಡುತ್ತಿದೆ. ಆಲ್‌ರೌಂಡರ್ ರವೀಂದ್ರ ಜಡೇಜಾ ಅವರು ನಾಯಕ ಶುಭ್‌ಮನ್ ಗಿಲ್‌ಗೆ ಅವರೊಂದಿಗಿನ ಜೊತೆಯಾಟದಲ್ಲಿ ಅರ್ಧ ಶತಕ ಪೂರೈಸಿದರು. ಪಾನೀಯ ವಿರಾಮದ ವೇಳೆಗೆ ಟೀಂ ಇಂಡಿಯಾ 100 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 375 ರನ್ ಪೇರಿಸಿದೆ.
ಇಂಗ್ಲೆಂಡ್ ವಿರುದ್ಧ ಮೊದಲ ದಿನದ ಗೌರವಕ್ಕೆ ಪಾತ್ರವಾಗಿ 85 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 310 ರನ್ ಪೇರಿಸಿ ಎರಡನೇ ದಿನಾದಾಟ ಆರಂಭಿಸಿದ ನಾಯಕ ಶುಭಮನ್ ಗಿಲ್ ಹಾಗೂ ಆಲ್‌ರೌಂಡರ್ ರವೀಂದ್ರ ಜಡೇಜಾ ತಮ್ಮ ಮುರಿಯದ 6ನೇ ವಿಕೆಟ್ ಜೊತೆಯಾಟವನ್ನು ಮುಂದುವರಿಸಿದ್ದಾರೆ. 230 ಎಸೆತಗಳಲ್ಲಿ 162 ರನ್ ಕಲೆ ಹಾಕಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
113 ಚೆಂಡುಗಳಲ್ಲಿ ರವೀಂದ್ರ ಜಡೇಜಾ 9 ಬೌಂಡರಿ ನೆರವಿನಿಂದ ಅಜೇಯ 68 ರನ್ ಬಾರಿಸಿದ್ದಾರೆ. ನಾಯಕ ಶುಭಮನ್ ಗಿಲ್ ಜವಾಬ್ದಾರಿಯನ್ನು ಅರಿತು ಬ್ಯಾಟಿಂಗ್ ಮಾಡುತ್ತಿದ್ದು, 263 ಚೆಂಡುಗಳಲ್ಲಿ 17 ಬೌಂಡರಿ ನೆರವಿನಿಂದ ಅಜೇಯ 150 ರನ್ ಬಾರಿಸಿ ಆಡುತ್ತಿದ್ದಾರೆ.
ಇದನ್ನು ಓದಿದ್ದೀರಾ? ಮೂವರು ಸ್ಟಾರ್ ಆಟಗಾರರ ದಾಖಲೆ ಮುರಿಯುವ ಹೊಸ್ತಿಲಲ್ಲಿ ಯಶಸ್ವಿ ಜೈಸ್ವಾಲ್
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾದ ಆರಂಭ ಕಳಪೆಯಾಗಿತ್ತು. ಸಮಯೋಚಿತ ಬ್ಯಾಟಿಂಗ್ ನಡೆಸುವಲ್ಲಿ ಕರ್ನಾಟಕದ ಸ್ಟಾರ್ ಆಟಗಾರ ಕೆಎಲ್ ರಾಹುಲ್ ವಿಫಲರಾದರು. ಪ್ರವಾಸಿ ತಂಡ 15 ರನ್ ಕಲೆ ಹಾಕುವಷ್ಟರಲ್ಲಿ ಒಂದು ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು. ಈ ವೇಳೆ ಎರಡನೇ ವಿಕೆಟ್‌ಗೆ ಯಶಸ್ವಿ ಜೈಸ್ವಾಲ್ ಹಾಗೂ ಕರುಣ್ ನಾಯರ್ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ 90 ಎಸೆತಗಳಲ್ಲಿ 80 ರನ್ ಸೇರಿಸಿತು. ಇನ್ನು ಕರುಣ್ ನಾಯರ್ (31) ಅವಕಾಶವನ್ನು ಬಳಸಿಕೊಳ್ಳುವಲ್ಲಿ ವಿಫಲರಾದರು.
ಮೂರನೇ ವಿಕೆಟ್‌ಗೆ ಯಶಸ್ವಿ ಜೈಸ್ವಾಲ್ ಹಾಗೂ ನಾಯಕ ಶುಭಮನ್ ಗಿಲ್ ಜೋಡಿ ವಿಕೆಟ್ ಬೀಳದಂತೆ ಕಾಯ್ದುಕೊಳ್ಳುವಲ್ಲಿ ಸಫಲವಾಯಿತು. ಈ ಜೋಡಿ 131 ಎಸೆತಗಳಲ್ಲಿ 66 ರನ್ ಸೇರಿಸಿತು. ಈ ವೇಳೆ ಉತ್ತಮ ಬ್ಯಾಟಿಂಗ್ ನಡೆಸುತ್ತಿದ್ದ ಯಶಸ್ವಿ ಜೈಸ್ವಾಲ್ ಕಳಪೆ ಹೊಡೆತಕ್ಕೆ ಮುಂದಾಗಿ ಔಟ್ ಆದರು. ಇವರು 107 ಎಸೆತಗಳಲ್ಲಿ 13 ಬೌಂಡರಿ ನೆರವಿನಿಂದ 87 ರನ್ ಬಾರಿಸಿ ಅಬ್ಬರಿಸಿದರು.





