ನ್ಯೂಜಿಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡವು ಸೋಲುಂಡಿದೆ. ಕೆ.ಎಲ್ ರಾಹುಲ್ ಅವರ ಭರ್ಜರಿ ಬ್ಯಾಟಿಂಗ್‌ನ ಹೊರತಾಗಿಯೂ, ತಂಡದ ಸ್ಟಾರ್ ಬ್ಯಾಟರ್‌ಗಳಾದ ವಿರಾಟ್ ಕೊಹ್ಲಿ ಮತ್ತು ಹೋಹಿತ್ ಶರ್ಮಾ ಅವರ ಕಳಪೆ ಪ್ರದರ್ಶನದಿಂದಾಗಿ ತಂಡವು ಸೋಲುಂಡಿದೆ ಎಂದು ಅಭಿಮಾನಿಗಳು ನಿರಾಶೆ ವ್ಯಕ್ತಪಡಿಸಿದ್ದಾರೆ.
ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಮೊದಲ ಬ್ಯಾಟಿಂಗ್ ಮಾಡಿತು. ಆರಂಭಿಕ ಆಟಗಾರರಾಗಿ ರೋಹಿತ್ ಶರ್ಮಾ ಮತ್ತು ಶಭಮನ್ ಗಿಲ್ ಸ್ಕ್ರೀಜ್‌ಗೆ ಇಳಿದಿದ್ದರು. ರೋಹಿತ್ 24 ರನ್‌ಗಳಿಗೆ ಕ್ಯಾಚ್‌ಕೊಟ್ಟು ನಿರ್ಗಮಿಸಿದರು. 3ನೇ ಕ್ರಮಾಂಕದಲ್ಲಿ ಬಂದ ಕೊಹ್ಲಿ ಕೂಡ 23 ರನ್‌ಗಳಿಗೆ ವಿಕೆಟ್ ಅರ್ಪಿಸಿದರು. 5ನೇ ಕ್ರಮಾಂಕದಲ್ಲಿ ಬಂದ ಕೆ.ಎಲ್ ರಾಹುಲ್ 112 ರನ್ ಗಳಿಸಿ ಅಜೇಯರಾಗಿ ಉಳಿದರು.
ಶ್ರೇಯಸ್ ಅಯ್ಯರ್ – 8, ಶುಭಮನ್ ಗಿಲ್ – 56, ರವೀಂದ್ರ ಜಡೇಜಾ – 27, ನಿತೀಶ್ ಕುಮಾರ್ ರೆಡ್ಡಿ – 20, ಹರ್ಷಿತ್ ರಾಣಾ – 2 ಹಾಗೂ ಕೊನೆಯದಾಗಿ ಬ್ಯಾಟಿಂಗ್‌ಗೆ ಇಳಿದ ಮೊಹಮ್ಮದ್ ಸಿರಾಜ್ 3 ಬಾಲ್‌ಗಳನ್ನು ಎದುರಿಸಿ 2 ರನ್ ಗಳಿಸಿದರು. ಭಾರತ ತಂಡವು 50 ಓವರ್‌ಗಳಲ್ಲಿ 284 ರನ್‌ಗಳಿಸಿತ್ತು.
ಈ ರನ್‌ಗಳ ಬೆನ್ನತ್ತಿದ ನ್ಯೂಜಿಲೆಂಡ್ ತಂಡ 3 ವಿಕೆಟ್ ನಷ್ಟದೊಂದಿಗೆ 47.3 ಓವರ್‌ಗಳಲ್ಲಿ 286 ರನ್ ಗಳಿಸಿ ಜಯ ಸಾಧಿಸಿದೆ. ನ್ಯೂಜಿಲೆಂಡ್ ತಂಡದ ಡೆವಾನ್ ಕನ್ವೇ – 16, ಹೆನ್ರಿ ನಿಕೋಲಸ್ – 10, ವಿಲ್ ಯಂಗ್ – 87, ಡೈರಿಲ್ ಮಿಚೆಲ್ – 131 (ಔಟಾಗದೆ), ಗ್ಲೆನ್ ಫಿಲಿಪ್ಸ್ – 32 (ಔಟಾಗದೆ) ರನ್ ಗಳಿಸಿದರು.
ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟೀಮ್ ಇಂಡಿಯಾದ ಸಹಾಯಕ ಕೋಚ್ ರಯಾನ್ ಟೆನ್ ಡೋಸ್ಚೇಟ್, ತಮ್ಮ ಆಟಗಾರರನ್ನು ಸಮರ್ಥಿಸಿಕೊಳ್ಳಲು ನಿರಾಕರಿಸಿದ್ದಾರೆ. “ನಾವು ಇಂದು ಮಾಡಿದ ಬೌಲಿಂಗ್‌ಗಿಂತ ಉತ್ತಮವಾಗಿ ಬೌಲಿಂಗ್ ಮಾಡಬೇಕು. ಭಾರತದ ಕಳಪೆ ಸ್ಪಿನ್ ಪ್ರದರ್ಶನ ಮತ್ತು 50 ಓವರ್‌ಗಳ ಸ್ವರೂಪದಲ್ಲಿ ತೀಕ್ಷ್ಣವಾಗಿ ಆಟವಾಡುವ ಅಗತ್ಯವಿದೆ” ಎಂದು ಹೇಳಿದ್ದಾರೆ.




