ದಕ್ಷಿಣ ಆಫ್ರಿಕಾ ತಂಡವು ಭಾರತದ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ 408 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಜಯದೊಂದಿಗೆ ದಕ್ಷಿಣ ಆಫ್ರಿಕಾ ಐತಿಹಾಸಿಕ 2-0 ಸರಣಿ ಗೆಲುವನ್ನು ದಾಖಲಿಸಿದೆ. ಈ ಸೋಲಿನೊಂದಿಗೆ ತವರಿನಲ್ಲಿ ಭಾರತದ ಹೀನಾಯ ಪ್ರದರ್ಶನವಾಗಿದೆ.
ಅಸ್ಸಾಂನ ಗುವಾಹಟಿಯಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ನೀಡಿದ 549 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಟೀಂ ಇಂಡಿಯಾ ಎರಡನೇ ಇನಿಂಗ್ಸ್‌ನಲ್ಲಿ 140 ರನ್‌ಗಳಿಗೆ ಆಲೌಟ್ ಆಯಿತು. ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಸೈಮನ್ ಹಾರ್ಮರ್ 6/37 ವಿಕೆಟ್ ಪಡೆದು ಜಯದ ರೂವಾರಿಯಾದರು.ಅಲ್ಲದೆ, ಕೇಶವ್ ಮಹಾರಾಜ್ 2, ಮುತ್ತು ಸ್ವಾಮಿ, ಜಾನ್ಸೆನ್ ತಲಾ ಒಂದೊಂದು ವಿಕೆಟ್ ಕಿತ್ತರು
ಮೊದಲ ಇನಿಂಗ್ಸ್‌ನಲ್ಲಿ 489 ರನ್‌ಗಳ ಬೃಹತ್ ಮೊತ್ತ ದಾಖಲಿಸಿತು, ಆದರೆ ಭಾರತ ತಂಡ ಮೊದಲ ಇನಿಂಗ್ಸ್‌ನಲ್ಲಿ ಕೇವಲ 201 ರನ್‌ಗಳಿಗೆ ಆಲೌಟ್ ಆಯಿತು. ದಕ್ಷಿಣ ಆಫ್ರಿಕಾ ಎರಡನೇ ಇನಿಂಗ್ಸ್‌ನಲ್ಲಿ 260/5 ರನ್‌ಗಳಿಗೆ ಡಿಕ್ಲೇರ್ ಮಾಡಿಕೊಂಡು ಭಾರತಕ್ಕೆ 549 ರನ್‌ಗಳ ಗುರಿ ನೀಡಿತು. ಆದರೆ ಭಾರತ ಎರಡನೇ ಇನಿಂಗ್ಸ್‌ನಲ್ಲಿ ಕೇವಲ 140 ರನ್‌ಗಳಿಗೆ ಆಲೌಟ್ ಆಗಿ ಪಂದ್ಯವನ್ನು ಕಳೆದುಕೊಂಡಿತು.
ಇದನ್ನು ಓದಿದ್ದೀರಾ? ದೀಪಿಕಾ ಟಿ ಸಿ | ಅಂಧತ್ವದ ಗೆರೆಗಳನ್ನು ಮೀರಿ ಕ್ರಿಕೆಟ್‌ನಲ್ಲಿ ಬೆಳಗುತ್ತಿರುವ ನಕ್ಷತ್ರ
ಭಾರತದ ಪರ ಏಕಾಂಗಿ ಹೋರಾಟ ನಡೆಸಿದ ಬ್ಯಾಟರ್‌ಗಳಲ್ಲಿ ರವೀಂದ್ರ ಜಡೇಜಾ (54 ರನ್) ಬಿಟ್ಟರೆ ಉಳಿದವರು ಹೆಚ್ಚು ರನ್ ಗಳಿಸಲು ವಿಫಲರಾದರು.
ದಕ್ಷಿಣ ಆಫ್ರಿಕಾದ ಮೊದಲ ಇನಿಂಗ್ಸ್‌ನಲ್ಲಿ ಸೆನುರಾನ್ ಮುತ್ತುಸ್ವಾಮಿ 109 ರನ್ ಮತ್ತು ಮಾರ್ಕೋ ಜಾನ್ಸೆನ್ 93 ರನ್ ಗಳಿಸಿ ತಂಡಕ್ಕೆ ಬಲವಾದ ಅಡಿಪಾಯ ಹಾಕಿದರು. ಭಾರತದ ಮೊದಲ ಇನಿಂಗ್ಸ್‌ನಲ್ಲಿ ಯಶಸ್ವಿ ಜೈಸ್ವಾಲ್ 58 ಮತ್ತು ವಾಷಿಂಗ್ಟನ್ ಸುಂದರ್ 48 ರನ್ ಗಳಿಸಿದರೂ, ಮಾರ್ಕೋ ಜಾನ್ಸೆನ್ 6 ವಿಕೆಟ್ ಕಬಳಿಸಿ ಭಾರತವನ್ನು ಸಂಕಷ್ಟಕ್ಕೆ ದೂಡಿದರು.





