ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳಾ ಕ್ರಿಕೆಟ್ ತಂಡವು ಆಸ್ಟ್ರೇಲಿಯಾ ಪ್ರವಾಸದಲ್ಲಿ ಅದ್ಭುತ ಸಾಧನೆ ಮಾಡಿದ್ದು, ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯನ್ನು 2-1 ಅಂತರದಿಂದ ಮುಡಿಗೇರಿಸಿಕೊಂಡಿದೆ.
ಸರಣಿ ನಿರ್ಣಾಯಕ ಮೂರನೇ ಪಂದ್ಯದಲ್ಲಿ ಉಪನಾಯಕಿ ಸ್ಮೃತಿ ಮಂಧಾನ ಅವರ ಸ್ಫೋಟಕ ಬ್ಯಾಟಿಂಗ್ ಹಾಗೂ ಕನ್ನಡತಿ ಶ್ರೇಯಾಂಕ ಪಾಟೀಲ್ ಅವರ ಸ್ಪಿನ್ ಮೋಡಿಯ ನೆರವಿನಿಂದ ಭಾರತ 17 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ 176 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿದರೆ, ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 159 ರನ್‌ಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗಿಳಿದ ಭಾರತಕ್ಕೆ ಆರಂಭಿಕ ಆಘಾತ ಎದುರಾಯಿತು. ಸ್ಪೋಟಕ ಆಟಗಾರ್ತಿ ಶಫಾಲಿ ವರ್ಮಾ ಮೂರನೇ ಓವರ್‌ನಲ್ಲೇ ವಿಕೆಟ್ ಒಪ್ಪಿಸಿದರು. ಆದರೆ ಆ ಬಳಿಕ ಜೊತೆಯಾದ ಉಪನಾಯಕಿ ಸ್ಮೃತಿ ಮಂಧಾನ ಹಾಗೂ ಜೆಮಿಮಾ ರೊಡ್ರಿಗಸ್ ಆಸ್ಟ್ರೇಲಿಯಾ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿದರು.
ಸ್ಮೃತಿ ಮಂಧಾನ ಕೇವಲ 55 ಎಸೆತಗಳಲ್ಲಿ 82 ರನ್ ಸಿಡಿಸುವ ಮೂಲಕ ಕಾಂಗರೂ ನೆಲದಲ್ಲಿ ತಮ್ಮ ಶ್ರೇಷ್ಠ ಇನಿಂಗ್ಸ್ ಆಡಿದರು. ಜೆಮಿಮಾ (ಅರ್ಧಶತಕ) ಜೊತೆಗೂಡಿ ಮಂಧಾನ 121 ರನ್‌ಗಳ ಅತ್ಯಮೂಲ್ಯ ಪಾಲುದಾರಿಕೆ ನಿರ್ಮಿಸಿದರು. ಆಸ್ಟ್ರೇಲಿಯಾ ಪರ ಬೌಲಿಂಗ್‌ನಲ್ಲಿ ಅನ್ನಾಬೆಲ್ ಸದರ್ಲ್ಯಾಂಡ್ 2 ವಿಕೆಟ್ ಪಡೆದು ಮಿಂಚಿದರು.
ಇದನ್ನು ಓದಿದ್ದೀರಾ? ರಣಜಿ ಟ್ರೋಫಿ: ಡ್ರಾದಲ್ಲಿ ಅಂತ್ಯಗೊಂಡ ಸೆಮಿಫೈನಲ್; ಇನಿಂಗ್ಸ್ ಮುನ್ನಡೆಯೊಂದಿಗೆ ಫೈನಲ್‌ಗೆ ಕರ್ನಾಟಕ
ಶ್ರೇಯಾಂಕ-ಚರಣಿ ಬೌಲಿಂಗ್ ಕಮಾಲ್
177 ರನ್‌ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾಕ್ಕೆ ಜಾರ್ಜಿಯಾ ವಾಲ್ ಮೊದಲ ಓವರ್‌ನಲ್ಲೇ 18 ರನ್ ಸಿಡಿಸಿ ಬಿರುಸಿನ ಆರಂಭ ಒದಗಿಸಿದರು. ಆದರೆ ಎರಡನೇ ಓವರ್‌ನಲ್ಲಿ ದಾಳಿಗಿಳಿದ ಕನ್ನಡಿಗ ಶ್ರೇಯಾಂಕ ಪಾಟೀಲ್ ಜಾರ್ಜಿಯಾ ಅವರನ್ನು ಪೆವಿಲಿಯನ್‌ಗೆ ಅಟ್ಟುವ ಮೂಲಕ ಆಸ್ಟ್ರೇಲಿಯಾಕ್ಕೆ ಆಘಾತ ನೀಡಿದರು.
ಬೆನ್ನು ಬೆನ್ನಿಗೆ ವಿಕೆಟ್ ಕಳೆದುಕೊಂಡ ಆಸ್ಟ್ರೇಲಿಯಾ ಕೇವಲ 32 ರನ್‌ಗಳಿಗೆ 3 ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಉಪನಾಯಕಿ ಆಶ್ಲೀ ಗಾರ್ಡ್ನರ್ ಏಕಾಂಗಿಯಾಗಿ ಹೋರಾಡಿ ಅರ್ಧಶತಕ ಗಳಿಸಿದರಾದರೂ, ಅವರಿಗೆ ಇತರ ಬ್ಯಾಟರ್‌ಗಳಿಂದ ಸೂಕ್ತ ಬೆಂಬಲ ಸಿಗಲಿಲ್ಲ. ಭಾರತದ ಪರ ಶ್ರೇಯಾಂಕ ಪಾಟೀಲ್ (3/22) ಮತ್ತು ಶ್ರೀ ಚರಣಿ (3/32) ತಲಾ ಮೂರು ವಿಕೆಟ್ ಪಡೆದು ಮಿಂಚಿದರೆ, ಅರುಂಧತಿ ರೆಡ್ಡಿ 2 ವಿಕೆಟ್ ಕಬಳಿಸಿದರು.
ಐತಿಹಾಸಿಕ ದಾಖಲೆಗಳು
10 ವರ್ಷಗಳ ಕಾಯುವಿಕೆಗೆ ಅಂತ್ಯ: ಭಾರತ ತಂಡವು 2016ರ ಬಳಿಕ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾವನ್ನು ಅದರದ್ದೇ ನೆಲದಲ್ಲಿ ಟಿ20 ಸರಣಿಯಲ್ಲಿ ಮಣಿಸಿ ಇತಿಹಾಸ ಬರೆದಿದೆ. 2017ರ ನಂತರ ಆಸ್ಟ್ರೇಲಿಯಾ ಮಹಿಳಾ ತಂಡವು ತನ್ನ ತವರಿನಲ್ಲಿ ಯಾವುದೇ ಮಾದರಿಯ ಸರಣಿಯನ್ನು ಸೋತಿದ್ದು ಇದೇ ಮೊದಲು.
ಅಂಕಪಟ್ಟಿಯಲ್ಲಿ ಮುನ್ನಡೆ: ಈ ಪ್ರವಾಸವು ಬಹು-ಸ್ವರೂಪದ ಸರಣಿಯಾಗಿದ್ದು (ಟಿ20, ಏಕದಿನ ಮತ್ತು ಟೆಸ್ಟ್ ಒಳಗೊಂಡಂತೆ), ಸದ್ಯ ಭಾರತ 4-2 ಅಂಕಗಳ ಮುನ್ನಡೆ ಕಾಯ್ದುಕೊಂಡಿದೆ.





