ಜು. 31ರಿಂದ ಲಂಡನ್ನಿನ ಕೆನ್ನಿಂಗ್ಟನ್ ಓವಲ್ನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಐದನೇ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ಟೀಮ್ ಇಂಡಿಯಾ 396 ರನ್ಗಳಿಗೆ ಆಲೌಟ್ ಆಗಿದೆ. ಆ ಮೂಲಕ ಇಂಗ್ಲೆಂಡ್ ಗೆಲುವಿಗೆ 374 ರನ್ಗಳ ಗುರಿಯನ್ನು ನೀಡಿದೆ.
ಎರಡನೇ ದಿನದಾಟದ ಅಂತ್ಯದ ವೇಳೆಗೆ ನೈಟ್ ವಾಚ್ಮೆನ್ ಆಗಿ ಬ್ಯಾಟಿಂಗ್ ಮಾಡಲು ಬಂದಿದ್ದ ಬೌಲರ್ ಆಕಾಶ್ ದೀಪ್ ಟೆಸ್ಟ್ ಕ್ರಿಕೆಟ್ನಲ್ಲಿ ಮೊದಲ ಅರ್ಧಶತಕ ಗಳಿಸುವ ಮೂಲಕ ಮಿಂಚಿದರು. ಟೀಮ್ ಇಂಡಿಯಾ ಪರವಾಗಿ ಉತ್ತಮವಾಗಿ ಬ್ಯಾಟಿಂಗ್ ಮಾಡಿದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಜೊತೆಗೆ ಮೂರನೇ ವಿಕೆಟ್ಗೆ 107 ರನ್ಗಳ ಜೊತೆಯಾಟ ನಡೆಸುವಲ್ಲಿ ಯಶಸ್ವಿಯಾದರು.
ಔಟ್ ಆಗುವುದಕ್ಕೂ ಮುನ್ನ 94 ಎಸೆತಗಳನ್ನು ಎದುರಿಸಿದ ಆಕಾಶ್ ದೀಪ್, 12 ಬೌಂಡರಿಗಳ ನೆರವಿನಿಂದ 66 ರನ್ ಗಳಿಸುವಲ್ಲಿ ಸಫಲರಾದರು. ಮೂರನೇ ವಿಕೆಟ್ಗೆ ಜೈಸ್ವಾಲ್ ಹಾಗೂ ಆಕಾಶ್ ದೀಪ್ ಜೋಡಿಯು ನಡೆಸಿದ ಉತ್ತಮ ಜೊತೆಯಾಟದಿಂದ ಟೀಮ್ ಇಂಡಿಯಾ ಉತ್ತಮ ಸ್ಥಿತಿಗೆ ತಲುಪಿತು.
ಆ ಬಳಿಕ ಬ್ಯಾಟಿಂಗ್ ಮುಂದುವರಿಸಿದ ಯಶಸ್ವಿ ಜೈಸ್ವಾಲ್ ಶತಕ ಬಾರಿಸಿ ಮಿಂಚಿದರು. 2 ಸಿಕ್ಸ್ ಹಾಗೂ 14 ಬೌಂಡರಿಗಳ ನೆರವಿನಿಂದ 118 ರನ್ ಗಳಿಸುವಲ್ಲಿ ಸಫಲರಾದರು. ಜೈಸ್ವಾಲ್ ಔಟ್ ಆದ ಬಳಿಕ ರವೀಂದ್ರ ಜಡೇಜಾ ಅರ್ಧಶತಕ (53 ರನ್)ದ ಕೊಡುಗೆ ನೀಡಿದರು. ಎರಡನೇ ಇನ್ನಿಂಗ್ಸ್ನ ಕೊನೆಯಲ್ಲಿ ಉಳಿದಿದ್ದ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರಿಂದ ಇಂಗ್ಲೆಂಡ್ ಗೆಲುವಿಗೆ 374 ರನ್ಗಳ ಗುರಿಯನ್ನು ನೀಡುವಲ್ಲಿ ಸಫಲರಾದರು.
ವಾಷಿಂಗ್ಟನ್ ಸುಂದರ್ 46 ಎಸೆತಗಳನ್ನು ಎದುರಿಸಿ 4 ಭರ್ಜರಿ ಸಿಕ್ಸರ್ ಹಾಗೂ 4 ಬೌಂಡರಿಗಳ ನೆರವಿನಿಂದ ಅರ್ಧಶತಕ ಗಳಿಸುವ ಮೂಲಕ ಮಿಂಚಿದರು. ಇಂಗ್ಲೆಂಡ್ ಪರವಾಗಿ ಎರಡನೇ ಇನ್ನಿಂಗ್ಸ್ನಲ್ಲಿ ಟಿ ಸಿ ಟಂಗ್, 125 ರನ್ ನೀಡಿ 5 ವಿಕೆಟ್ ಪಡೆದು ಮಿಂಚಿದರು.
ಐದು ಪಂದ್ಯಗಳ ಈ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ತಂಡ ಎರಡರಲ್ಲಿ ಜಯ ಸಾಧಿಸಿದೆ, ಭಾರತ ಒಂದನ್ನು ಗೆದ್ದಿದೆ. ಮತ್ತೊಂದು ಪಂದ್ಯ ಡ್ರಾ ಆಗಿದೆ. ಈ ಟೆಸ್ಟ್ ಪಂದ್ಯವನ್ನು ಇಂಗ್ಲೆಂಡ್ ಗೆದ್ದಲ್ಲಿ ಸರಣಿಯನ್ನು ವಶಪಡಿಸಿಕೊಳ್ಳಲಿದೆ. ಶುಭಮನ್ ಗಿಲ್ ನೇತೃತ್ವದ ಟೀಮ್ ಇಂಡಿಯಾ ಕೊನೆಯ ಟೆಸ್ಟ್ ಪಂದ್ಯವನ್ನು ಗೆದ್ದರೆ ಸರಣಿ 2-2 ಸಮಬಲ ಆಗಲಿದೆ.





