ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಗೆಲುವು ದಾಖಲಿಸಿದೆ. ಮೊದಲೆರಡು ಪಂದ್ಯಗಳನ್ನು ಸೋತು ಸರಣಿಯನ್ನು ಕಳೆದುಕೊಂಡಿದ್ದರೂ, ಕೊನೆಯ ಪಂದ್ಯದಲ್ಲಿ 9 ವಿಕೆಟ್‌ಗಳಿಂದ ಗೆದ್ದು ಭಾರತ ಕ್ಲೀನ್ ಸ್ವೀಪ್ ಮುಜುಗರದಿಂದ ಪಾರಾಯಿತು.
ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 46.4 ಓವರ್‌ಗಳಲ್ಲಿ 236 ರನ್‌ಗಳಿಗೆ ಆಲೌಟ್ ಆಯಿತು. ಬಳಿಕ 237 ರನ್‌ಗಳ ಗುರಿ ಬೆನ್ನಟ್ಟಿದ ಭಾರತಕ್ಕೆ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ 38.3 ಓವರ್‌ಗಳಲ್ಲಿ ಅಜೇಯ ಜೊತೆಯಾಟದ ಮೂಲಕ ಗೆಲುವು ತಂದುಕೊಟ್ಟರು.
ರೋಹಿತ್ ಶರ್ಮಾ 125 ಎಸೆತಗಳಲ್ಲಿ 121 ರನ್‌ಗಳ ಸ್ಫೋಟಕ ಶತಕ ಬಾರಿಸಿದರೆ, ವಿರಾಟ್ ಕೊಹ್ಲಿ 81 ಎಸೆತಗಳಲ್ಲಿ 74 ರನ್‌ಗಳನ್ನು ಕಲೆಹಾಕಿದರು. ಇಬ್ಬರ ನಡುವಿನ ಎರಡನೇ ವಿಕೆಟ್‌ಗೆ 168 ರನ್‌ಗಳ ಅಜೇಯ ಪಾಲುದಾರಿಕೆ ತಂಡವನ್ನು 38.3 ಓವರ್‌ಗಳಲ್ಲಿ ಗುರಿ ತಲುಪುವಂತೆ ಮಾಡಿತು. ರೋಹಿತ್ ಶರ್ಮಾ (121* ರನ್, 125 ಎಸೆತ, 13 ಬೌಂಡರಿ, 3 ಸಿಕ್ಸರ್) ಮತ್ತು ವಿರಾಟ್ ಕೊಹ್ಲಿ (74* ರನ್, 81 ಎಸೆತ, 7 ಬೌಂಡರಿ) ಎರಡನೇ ವಿಕೆಟ್‌ಗೆ 168 ರನ್‌ಗಳ ಭದ್ರ ಜೊತೆಯಾಟ ನೀಡಿದರು.
237 ರನ್‌ಗಳ ಗುರಿ ಎದುರಿಸಿದ ಭಾರತಕ್ಕೆ ಶುಭಮನ್ ಗಿಲ್ ಮತ್ತು ರೋಹಿತ್ ಶರ್ಮಾ ಉತ್ತಮ ಆರಂಭ ಒದಗಿಸಿದರು. ಇಬ್ಬರು ಮೊದಲ ವಿಕೆಟ್‌ಗೆ 69 ರನ್‌ಗಳ ಜೊತೆಯಾಟ ನೀಡಿದರು. ಗಿಲ್ ಔಟಾದ ನಂತರ ಕ್ರೀಸ್‌ಗೆ ಬಂದ ವಿರಾಟ್ ಕೊಹ್ಲಿ ಆರಂಭದಿಂದಲೇ ವಿಶ್ವಾಸದ ಆಟ ಪ್ರದರ್ಶಿಸಿದರು. ಹಳೆಯ ದಿನಗಳನ್ನು ನೆನಪಿಸುವಂತೆ ರೋಹಿತ್ ಹಾಗೂ ಕೊಹ್ಲಿ ಅಮೋಘ ಬ್ಯಾಟಿಂಗ್ ಮೂಲಕ ಆಸ್ಟ್ರೇಲಿಯಾ ಬೌಲರ್‌ಗಳಿಗೆ ಬೆವರಿಳಿಸಿದರು.
ಇದನ್ನು ಓದಿದ್ದೀರಾ? IND vs AUS | ರೋಚಕ ಹಣಾಹಣಿಯಲ್ಲಿ ಸರಣಿ ಸೋತ ಭಾರತ
ಅಭಿಮಾನಿಗಳ ಆಸೆ ಈಡೇರಿಸಿದ ರೋಹಿತ್-ಕೊಹ್ಲಿ
ಸರಣಿಯ ಆರಂಭದಿಂದಲೂ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯವರ ಪ್ರದರ್ಶನವೇ ಅಭಿಮಾನಿಗಳ ಗಮನದ ಕೇಂದ್ರವಾಗಿತ್ತು. ಮೊದಲ ಎರಡು ಪಂದ್ಯಗಳಲ್ಲಿ ಸರಣಿಯ ಫಲಿತಾಂಶ ನಿರ್ಧಾರವಾಗಿದ್ದರೂ, ಕೊನೆಯ ಪಂದ್ಯದಲ್ಲಿ ಈ ಇಬ್ಬರು ದಿಗ್ಗಜರು ತಮ್ಮ ಅದ್ಭುತ ಆಟದ ಮೂಲಕ ಅಭಿಮಾನಿಗಳಿಗೆ ಮನರಂಜನೆಯ ರಸದೌತಣವನ್ನೇ ನೀಡಿದರು. ರೋಹಿತ್ ತಮ್ಮ 33ನೇ ಏಕದಿನ ಶತಕವನ್ನು (ಆಸ್ಟ್ರೇಲಿಯಾದಲ್ಲಿ 6ನೇ ಶತಕ) ಬಾರಿಸಿದರೆ, ಕೊಹ್ಲಿ 75ನೇ ಅರ್ಧಶತಕದೊಂದಿಗೆ ಮಿಂಚಿದರು. ಈ ಜೋಡಿಯ 19ನೇ ಶತಕದ ಜೊತೆಯಾಟವು ಭಾರತದ ಗೆಲುವಿಗೆ ಮುನ್ನುಡಿಯಾಯಿತು.
ಸರಣಿಯನ್ನು ಆಸ್ಟ್ರೇಲಿಯಾ 2-1 ಅಂತರದಿಂದ ಗೆದ್ದುಕೊಂಡಿದ್ದರೂ, ಅಂತಿಮ ಪಂದ್ಯದಲ್ಲಿ ರೋಹಿತ್–ಕೊಹ್ಲಿಯ ಪ್ರದರ್ಶನ ಅಭಿಮಾನಿಗಳಿಗೆ ಅಪಾರ ಸಂತೋಷ ನೀಡಿತು. ಮೂರು ಪಂದ್ಯಗಳಲ್ಲಿ ಉತ್ತಮ ಆಟವಾಡಿದ ಕಾರಣ ಸರಣಿ ಹಾಗೂ ಪಂದ್ಯ ಪುರುಷೋತ್ತಮ ಪ್ರಶಸ್ತಿ ರೋಹಿತ್ ಶರ್ಮಾ ಪಾಲಾಯಿತು.
- ಆಸ್ಟ್ರೇಲಿಯಾ: 236 (46.4 ಓವರ್)
- ಭಾರತ: 237/1 (38.3 ಓವರ್)
- ರೋಹಿತ್ ಶರ್ಮಾ: 121(125), ಕೊಹ್ಲಿ: 74(81)
- ಭಾರತಕ್ಕೆ 9 ವಿಕೆಟ್‌ಗಳಿಂದ ಗೆಲುವು
- ಫಲಿತಾಂಶ : ಆಸ್ಟ್ರೇಲಿಯಾಕ್ಕೆ 2–1 ಜಯ





