ಐಸಿಸಿ ಪುರುಷರ ಟಿ20 ವಿಶ್ವಕಪ್ 2026ರ ಸೂಪರ್-8 ಹಂತದ ನಿರ್ಣಾಯಕ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವಿಗೆ ವೆಸ್ಟ್ ಇಂಡೀಸ್ ತಂಡ 196 ರನ್‌ಗಳ ಕಠಿಣ ಗುರಿ ನೀಡಿದೆ. ಸೆಮಿಫೈನಲ್ ಹಂತಕ್ಕೇರಲು ಭಾರತ ಈ ಪಂದ್ಯದಲ್ಲಿ ಜಯ ಸಾಧಿಸುವುದು ಅನಿವಾರ್ಯವಾಗಿದೆ.
ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡವು ತನ್ನ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 195 ರನ್ ಗಳಿಸಿ ಬೃಹತ್ ಮೊತ್ತವನ್ನು ಕಲೆಹಾಕಿದೆ.
ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ವೆಸ್ಟ್ ಇಂಡೀಸ್ ಪರ, ಕೊನೆಯ ಓವರ್‌ಗಳಲ್ಲಿ ನಾಯಕ ರೋವ್‌ಮನ್ ಪೊವೆಲ್ ಹಾಗೂ ಜೇಸನ್ ಹೋಲ್ಡರ್ ಬಿರುಸಿನ ಬ್ಯಾಟಿಂಗ್ ನಡೆಸಿದರು. ಕೇವಲ 19 ಎಸೆತಗಳನ್ನು ಎದುರಿಸಿದ ಪೊವೆಲ್ ಅಜೇಯ 34 ರನ್ ಸಿಡಿಸಿದರೆ, ಅವರಿಗೆ ಉತ್ತಮ ಜೊತೆ ನೀಡಿದ ಹೋಲ್ಡರ್ 22 ಎಸೆತಗಳಲ್ಲಿ 37 ರನ್ ಗಳಿಸುವ ಮೂಲಕ ತಂಡದ ಮೊತ್ತವನ್ನು 190ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಅಂತಿಮ ಓವರ್‌ಗಳಲ್ಲಿ ಈ ಜೋಡಿಯ ಸ್ಪೋಟಕ ಆಟವು ಭಾರತೀಯ ಬೌಲರ್‌ಗಳಿಗೆ ತಲೆನೋವಾಗಿ ಪರಿಣಮಿಸಿತು.
ಇದನ್ನು ಓದಿದ್ದೀರಾ? ಶೋಯೆಬ್ ಖಾನ್ | ಬಿಹಾರದ ಕುಗ್ರಾಮದಿಂದ ಯುಎಇ ವಿಶ್ವಕಪ್ ತಂಡದವರೆಗೆ ರೋಚಕ ಪಯಣ
ಮತ್ತೊಂದೆಡೆ, ಟೀಮ್ ಇಂಡಿಯಾದ ಪ್ರಮುಖ ವೇಗಿ ಅರ್ಷದೀಪ್ ಸಿಂಗ್ ವಿಂಡೀಸ್ ಬ್ಯಾಟರ್‌ಗಳನ್ನು ಕಟ್ಟಿಹಾಕುವಲ್ಲಿ ಸಂಪೂರ್ಣ ವಿಫಲರಾದರು. ತಮ್ಮ 4 ಓವರ್‌ಗಳ ಸ್ಪೆಲ್‌ನಲ್ಲಿ ಯಾವುದೇ ವಿಕೆಟ್ ಪಡೆಯದೆ 43 ರನ್ ಬಿಟ್ಟುಕೊಡುವ ಮೂಲಕ ಬಹಳ ದುಬಾರಿಯಾದರು.
ಸೆಮಿಫೈನಲ್ ಪ್ರವೇಶದ ಕನಸು ನನಸಾಗಲು ಟೀಮ್ ಇಂಡಿಯಾದ ಬ್ಯಾಟರ್‌ಗಳು ಎಚ್ಚರಿಕೆ ಹಾಗೂ ಜವಾಬ್ದಾರಿಯುತ ಆಟವಾಡಬೇಕಾದ ಒತ್ತಡದಲ್ಲಿದ್ದಾರೆ.





