ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಟೆಸ್ಟ್ ಪಂದ್ಯ ಇಂದಿನಿಂದ ದೆಹಲಿಯಲ್ಲಿ ಆರಂಭವಾಗಿದ್ದು, ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಆರಂಭಿಕರಾದ ಕೆ ಎಲ್ ರಾಹುಲ್(10) ಹಾಗೂ ಯಶಸ್ವಿ ಜೈಸ್ವಾಲ್(5) ಬ್ಯಾಟಿಂಗ್ ಮಾಡುತ್ತಿದ್ದಾರೆ. ಭಾರತ 6 ಓವರ್‌ಗಳಲ್ಲಿ 15 ರನ್ ಗಳಿಸಿದೆ.
ಮೊದಲ ಟೆಸ್ಟ್‌ನಲ್ಲಿ ಭರ್ಜರಿ ಗೆಲುವು ಸಾಧಿಸಿದ ಭಾರತ ತಂಡವು ಯಾವುದೇ ಬದಲಾವಣೆಯಿಲ್ಲದೆ ಈ ಪಂದ್ಯಕ್ಕೆ ಕಣಕ್ಕಿಳಿದಿದೆ. ಆದರೆ, ವೆಸ್ಟ್ ಇಂಡೀಸ್ ತಂಡವು ತಮ್ಮ ಆಡುವ ಬಳಗದಲ್ಲಿ ಎರಡು ಬದಲಾವಣೆಗಳನ್ನು ಮಾಡಿದ್ದು, ಟೆವಿನ್ ಇಮ್ಲಾಚ್ ಮತ್ತು ಆಂಡರ್ಸನ್ ಫಿಲಿಪ್‌ಗೆ ಅವಕಾಶ ನೀಡಿದೆ.
ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ವೆಸ್ಟ್ ಇಂಡೀಸ್ ವಿರುದ್ಧ ಇನಿಂಗ್ಸ್ ಮತ್ತು 140 ರನ್‌ಗಳ ಭರ್ಜರಿ ಗೆಲುವು ಸಾಧಿಸಿತ್ತು. ಶುಭಮನ್ ಗಿಲ್ ನಾಯಕತ್ವದ ಭಾರತ ತಂಡವು ಬೌಲಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿತು. ರಾಹುಲ್, ಧ್ರವ್ ಜುರೆಲ್ ಹಾಗೂ ರವೀಂದ್ರ ಜಡೇಜಾ ಅವರ ಆಕರ್ಷಕ ಶತಕಗಳು, ಜೊತೆಗೆ ಕುಲದೀಪ್ ಯಾದವ್ ಮತ್ತು ಮೊಹಮ್ಮದ್ ಸಿರಾಜ್‌ರ ಆಕ್ರಮಕಾರಿ ಬೌಲಿಂಗ್‌ನಿಂದ ಭಾರತಕ್ಕೆ ಭರ್ಜರಿ ಗೆಲುವು ಲಭಿಸಿತ್ತು.
ಇದನ್ನು ಓದಿದ್ದೀರಾ? ಎಡಗೈ ತುಂಡಾದರೂ ಬತ್ತದ ಉತ್ಸಾಹ; ಜಾವೆಲಿನ್ ಥ್ರೋ ವಿಭಾಗದಲ್ಲಿ ಭಾರತದ ರಿಂಕು ವಿಶ್ವ ದಾಖಲೆ
ಭಾರತದ ಮುಂದಿನ ಬ್ಯಾಟಿಂಗ್ ಸಾಲಿನಲ್ಲಿ ಸಾಯಿ ಸುಧರ್ಶನ್, ನಾಯಕ ಶುಭ್‌ಮನ್ ಗಿಲ್, ರವೀಂದ್ರ ಜಡೇಜಾ, ವಿಕೆಟ್‌ಕೀಪರ್ ಧ್ರುವ ಜುರೇಲ್, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಇದ್ದಾರೆ.
ವೆಸ್ಟ್ ಇಂಡೀಸ್ ತಂಡವು ರಾಸ್ಟನ್ ಚೇಸ್ ನಾಯಕತ್ವದಲ್ಲಿ ಎರಡು ಬದಲಾವಣೆಗಳೊಂದಿಗೆ ಕಣಕ್ಕಿಳಿದಿದೆ. ಟೆವಿನ್ ಇಮ್ಲಾಚ್ ವಿಕೆಟ್ ಕೀಪರ್ ಆಗಿ ಮತ್ತು ಆಂಡರ್ಸನ್ ಫಿಲಿಪ್ ವೇಗದ ಬೌಲರ್ ಆಗಿ ತಂಡಕ್ಕೆ ಮರಳಿದ್ದಾರೆ. ತಂಡದ ಆಡುವ ಬಳಗದಲ್ಲಿ ತಗೆನರಿನ್ ಚಂದರ್‌ಪಾಲ್, ಜಾನ್ ಕ್ಯಾಂಪ್‌ಬೆಲ್, ಆಲಿಕ್ ಅಥನಾಜೆ, ಶೈ ಹೋಪ್, ರಾಸ್ಟನ್ ಚೇಸ್, ಟೆವಿನ್ ಇಮ್ಲಾಚ್, ಜಸ್ಟಿನ್ ಗ್ರೀವ್ಸ್, ಖಾರಿ ಪಿಯರೆ, ಜೊಮೆಲ್ ವಾರಿಕನ್, ಆಂಡರ್ಸನ್ ಫಿಲಿಪ್ ಮತ್ತು ಜೇಡನ್ ಸೀಲ್ಸ್ ಇದ್ದಾರೆ.
ಮೊದಲ ಟೆಸ್ಟ್‌ನ ಗೆಲುವಿನ ಉತ್ಸಾಹದೊಂದಿಗೆ ಎರಡನೇ ಟೆಸ್ಟ್‌ಗೆ ಇಳಿದಿರುವ ಭಾರತ ತಂಡವು ಸರಣಿಯನ್ನು 2-0 ಅಂತರದಲ್ಲಿ ಕೈವಶ ಮಾಡಿಕೊಳ್ಳಲು ಎದುರು ನೋಡುತ್ತಿದೆ. ಯಶಸ್ವಿ ಜೈಸ್ವಾಲ್ ಮತ್ತು ಕೆ.ಎಲ್. ರಾಹುಲ್ ಆರಂಭಿಕ ಜೋಡಿಯಿಂದ ಭಾರತ ಗಟ್ಟಿಯಾದ ಆರಂಭವನ್ನು ಎದುರುನೋಡುತ್ತಿದೆ. ಇನ್ನು ಶುಭಮನ್ ಗಿಲ್, ರವೀಂದ್ರ ಜಡೇಜಾ ಮತ್ತು ಜಸ್ಪ್ರೀತ್ ಬುಮ್ರಾ ಅವರಂತಹ ಆಟಗಾರರಿಂದ ತಂಡವು ಭರವಸೆಯ ಆಟವನ್ನು ತೋರಲಿದೆ. ಪಂದ್ಯದ ಮುಂದಿನ ಕೆಲವು ದಿನಗಳಲ್ಲಿ ದೆಹಲಿಯ ಪಿಚ್‌ನಲ್ಲಿ ರೋಚಕ ಕದನ ನಡೆಯಲಿದ್ದು, ಭಾರತ ತನ್ನ ಪ್ರಾಬಲ್ಯವನ್ನು ಮುಂದುವರಿಸುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.





