ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ನಡೆದ ಎರಡನೇ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತ ತಂಡವು ಐತಿಹಾಸಿಕ ಸಾಧನೆಗೈದಿದೆ. ರಾಯ್‌ಪುರದ ಶಾಹಿದ್ ವೀರ್ ನಾರಾಯಣ್ ಸಿಂಗ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡವು 209 ರನ್‌ಗಳ ಬೃಹತ್ ಗುರಿಯನ್ನು ಕೇವಲ 15.2 ಓವರ್‌ಗಳಲ್ಲಿ ಬೆನ್ನಟ್ಟಿ, 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಇದರೊಂದಿಗೆ 5 ಪಂದ್ಯಗಳ ಸರಣಿಯಲ್ಲಿ ಭಾರತ 2-0 ಮುನ್ನಡೆ ಕಾಯ್ದುಕೊಂಡಿದೆ.
ತಂಡದ ದಾಖಲೆಗಳು
ಅತಿ ದೊಡ್ಡ ಚೇಸ್: ಟಿ20 ಇತಿಹಾಸದಲ್ಲಿ ಭಾರತ ಯಶಸ್ವಿಯಾಗಿ ಬೆನ್ನಟ್ಟಿದ ಜಂಟಿ ಗರಿಷ್ಠ ರನ್ ಮೊತ್ತ ಇದಾಗಿದೆ (209). ಇದಕ್ಕೂ ಮುಂಚೆ 2023ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 209 ರನ್ ಚೇಸ್ ಮಾಡಿತ್ತು.
ವಿಶ್ವದ ಮೊದಲ ತಂಡ: 200ಕ್ಕೂ ಹೆಚ್ಚು ರನ್‌ಗಳ ಗುರಿಯನ್ನು ಬೆನ್ನಟ್ಟಿ, ಇನ್ನು 28 ಎಸೆತಗಳು ಬಾಕಿ ಇರುವಂತೆಯೇ ಗೆಲುವು ಸಾಧಿಸುವ ಮೂಲಕ ಭಾರತ ವಿಶ್ವವಿಕ್ರಮ ಸ್ಥಾಪಿಸಿದೆ.
ಇಶಾನ್-ಸೂರ್ಯ ಜೊತೆಯಾಟ: 3ನೇ ವಿಕೆಟ್‌ಗೆ ಇಶಾನ್ ಕಿಶನ್ ಮತ್ತು ಸೂರ್ಯಕುಮಾರ್ ಯಾದವ್ 122 ರನ್‌ಗಳ ಸ್ಫೋಟಕ ಜೊತೆಯಾಟವಾಡಿದರು.
ಇಶಾನ್ ವೇಗದ ಅರ್ಧಶತಕ: ಇಶಾನ್ ಕಿಶನ್ ಕೇವಲ 21 ಎಸೆತಗಳಲ್ಲಿ ಅರ್ಧಶತಕ ಪೂರೈಸಿ, ನ್ಯೂಜಿಲೆಂಡ್ ವಿರುದ್ಧ ಅತಿ ವೇಗದ ಅರ್ಧಶತಕ ಸಿಡಿಸಿದ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಇದನ್ನು ಓದಿದ್ದೀರಾ? ಸೈನಾ ನೆಹ್ವಾಲ್ | ‘ಹಿಸ್ಸಾರ್’ನಿಂದ ವಿಶ್ವದ ನಂಬರ್ 1 ಪಟ್ಟ ಪಡೆದ ಛಲಗಾರ್ತಿ
ಪಂದ್ಯದ ವಿವರ:
ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಭಾರತದ ನಿರ್ಧಾರ ಮೊದಲು ತಪ್ಪೆನಿಸಿತ್ತು. ನ್ಯೂಜಿಲೆಂಡ್‌ನ ರಚಿನ್ ರವೀಂದ್ರ (44) ಮತ್ತು ಕೊನೆಯ ಹಂತದಲ್ಲಿ ನಾಯಕ ಮಿಚೆಲ್ ಸ್ಯಾಂಟ್ನರ್ (ಅಜೇಯ 47) ಅವರ ಪ್ರತಿದಾಳಿಯಿಂದ ಕಿವೀಸ್ ಪಡೆ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 208 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಭಾರತದ ಪರ ಕುಲದೀಪ್ ಯಾದವ್ 2 ವಿಕೆಟ್ ಪಡೆದರು.
ಗುರಿ ಬೆನ್ನಟ್ಟಿದ ಭಾರತ, ಆರಂಭದಲ್ಲಿಯೇ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ವಿಕೆಟ್ ಕಳೆದುಕೊಂಡು 6-2 ಸ್ಥಿತಿಯಲ್ಲಿ ಸಂಕಷ್ಟಕ್ಕೆ ಸಿಲುಕಿತ್ತು. ಈ ಸಂದರ್ಭದಲ್ಲಿ ಒಂದಾದ ಇಶಾನ್ ಕಿಶನ್ (76 ರನ್, 32 ಎಸೆತ) ಮತ್ತು ನಾಯಕ ಸೂರ್ಯಕುಮಾರ್ ಯಾದವ್ (ಅಜೇಯ 82 ರನ್, 37 ಎಸೆತ) ಕಿವೀಸ್ ಬೌಲರ್‌ಗಳ ವಿರುದ್ಧ ಪ್ರತಿದಾಳಿ ನಡೆಸಿದರು.
ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿದ ಈ ಜೋಡಿ ಕಿವೀಸ್ ಬೌಲಿಂಗ್ ದಾಳಿಯನ್ನು ಧೂಳಿಪಟ ಮಾಡಿತು.
ಇಶಾನ್ ಕಿಶನ್ ಔಟಾದ ನಂತರ ಬಂದ ಶಿವಂ ದುಬೆ (ಅಜೇಯ 36), ಸೂರ್ಯ ಜೊತೆ ಸೇರಿ ಬಿರುಗಾಳಿಯಂತೆ ಬ್ಯಾಟ್ ಬೀಸಿ, ಇನ್ನು 4.4 ಓವರ್‌ಗಳು ಬಾಕಿ ಇರುವಂತೆಯೇ ಸಿಕ್ಸರ್ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು. ಈ ಗೆಲುವಿನೊಂದಿಗೆ ಭಾರತ ಸರಣಿಯಲ್ಲಿ ಬಿಗಿಹಿಡಿತ ಸಾಧಿಸಿದೆ.





