ಮಹಿಳಾ ಏಕದಿನ ಕ್ರಿಕೆಟ್ ವಿಶ್ವಕಪ್ ತನ್ನ ಕೊನೆಯ ಹಂತ ತಲುಪಿದ್ದು, ಟೂರ್ನಿಯ ಎರಡನೇ ಸೆಮಿಫೈನಲ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಇಂದು ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ರೋಚಕ ಕಾದಾಟಕ್ಕೆ ಸಜ್ಜಾಗಿವೆ. ಏಳು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾದ ವಿರುದ್ಧ ಸ್ವದೇಶದ ಮಣ್ಣಿನಲ್ಲಿ ಭಾರತ ತನ್ನ ಮೊದಲ ವಿಶ್ವಕಪ್ ಗೆಲುವಿನ ಕನಸಿನತ್ತ ಒಂದು ಹೆಜ್ಜೆ ಮುಂದಿಡಲು ತುದಿಗಾಲಿನಲ್ಲಿ ನಿಂತಿದೆ.
2017ರಲ್ಲಿ ಡರ್ಬಿಯಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿದ್ದ ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್‌ರ ಐತಿಹಾಸಿಕ 171 ರನ್‌ಗಳ ಇನಿಂಗ್ಸ್ ಇಂದಿಗೂ ಅಭಿಮಾನಿಗಳ ಮನದಲ್ಲಿ ಚಿರಸ್ಥಾಯಿಯಾಗಿದೆ. ಈ ಬಾರಿಯೂ ಅಂತಹದ್ದೇ ಅದ್ಭುತ ಪ್ರದರ್ಶನಕ್ಕೆ ಭಾರತ ಕಾಯುತ್ತಿದೆ. ಸ್ಮೃತಿ ಮಂಧಾನ (365 ರನ್) ತಂಡದ ಪ್ರಮುಖ ರನ್ ಸ್ಕೋರರ್ ಆಗಿದ್ದು, ಆಸ್ಟ್ರೇಲಿಯಾದ ಬೌಲಿಂಗ್ ದಾಳಿಯ ವಿರುದ್ಧ ತನ್ನ ಆಕ್ರಮಣಕಾರಿ ಆಟದಿಂದ ಗಮನ ಸೆಳೆದಿದ್ದಾರೆ. ಗಾಯದಿಂದ ಚೇತರಿಸಿಕೊಂಡಿರುವ ರಿಚಾ ಘೋಷ್ ಮತ್ತು ಆಸ್ಟ್ರೇಲಿಯಾದ ನಾಯಕಿ ಅಲಿಸ್ಸಾ ಹೀಲಿ ತಮ್ಮ ತಂಡಗಳಿಗೆ ಬಲ ತುಂಬಲಿದ್ದಾರೆ.
ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್‌ನ ಅಪ್ರತಿಹತ ಶಕ್ತಿ ಎಂದು ಪರಿಗಣಿಸಲಾಗುತ್ತದೆ. 12 ವಿಶ್ವಕಪ್‌ಗಳಲ್ಲಿ 7 ಬಾರಿ ಪ್ರಶಸ್ತಿ ಗೆದ್ದಿರುವ ಆಸೀಸ್ ತಂಡವನ್ನು ಮಣಿಸುವುದು ಯಾವಾಗಲೂ ಸವಾಲು. ಆದರೆ, ಈ ಬಾರಿ ಭಾರತ ತನ್ನ ಸ್ವದೇಶಿ ಪಿಚ್‌ನಲ್ಲಿ ಆಡುತ್ತಿರುವುದರಿಂದ ಅದಕ್ಕೆ ಆತ್ಮವಿಶ್ವಾಸ ಹೆಚ್ಚಿದೆ. 2017ರಲ್ಲಿ ಹರ್ಮನ್‌ಪ್ರೀತ್ ಕೌರ್ ಅವರ ಅಬ್ಬರದ ಶತಕದ ನೆರವಿನಿಂದ ಭಾರತ ಆಸ್ಟ್ರೇಲಿಯಾವನ್ನು ಸೋಲಿಸಿತ್ತು. ಅದೇ ರೀತಿಯ ಪ್ರದರ್ಶನದ ನಿರೀಕ್ಷೆಯಿದೆ.
ಇದನ್ನು ಓದಿದ್ದೀರಾ? ICC Women’s World Cup: ನ್ಯೂಜಿಲೆಂಡ್ ಮಣಿಸಿ ಸೆಮಿಫೈನಲ್ ಪ್ರವೇಶಿಸಿದ ಭಾರತ
ಗಾಯಾಳು ಪ್ರತಿಕಾ ರಾವಲ್ (308 ರನ್) ಬದಲಿಗೆ ಶೆಫಾಲಿ ವರ್ಮಾ ತಂಡಕ್ಕೆ ಕೂಡಿಕೊಂಡಿದ್ದು, ಸ್ಮೃತಿಯೊಂದಿಗೆ ಆರಂಭಿಕ ಜೋಡಿಯಾಗಿ ವೇಗದ ಆರಂಭ ನೀಡುವ ನಿರೀಕ್ಷೆಯಿದೆ. ಜೆಮಿಮಾ ರೋಡ್ರಿಗಾಸ್, ಹರ್ಲೀನ್ ಡಿಯೋಲ್, ಮತ್ತು ದೀಪ್ತಿ ಶರ್ಮಾ ಅವರಂತಹ ಆಟಗಾರ್ತಿಯರು ಮಧ್ಯಮ ಕ್ರಮಾಂಕದಲ್ಲಿ ಸ್ಥಿರತೆಯನ್ನು ಒದಗಿಸಬೇಕಿದೆ. ಬೌಲಿಂಗ್‌ನಲ್ಲಿ ರೇಣುಕಾ ಸಿಂಗ್, ಕ್ರಾಂತಿ ಗೌಡ್ ಮತ್ತು ಸ್ಪಿನ್ನರ್‌ಗಳಾದ ದೀಪ್ತಿ ಶರ್ಮಾ, ಸ್ನೇಹ ರಾಣಾ ಆಸ್ಟ್ರೇಲಿಯಾದ ಬ್ಯಾಟಿಂಗ್ ಶಕ್ತಿಯನ್ನು ಕಾಡಬೇಕಿದೆ.
ಆಸ್ಟ್ರೇಲಿಯಾ ತಂಡದಲ್ಲಿ ಅಲಿಸ್ಸಾ ಹೀಲಿ, ಎಲ್ಲಿಸ್ ಪೆರಿ, ಮತ್ತು ಆಶ್ಲೀ ಗಾರ್ಡ್ನರ್‌ರಂತಹ ಸ್ಟಾರ್ ಆಟಗಾರ್ತಿಯರು ಯಾವುದೇ ಕ್ಷಣದಲ್ಲಿ ಪಂದ್ಯದ ಚಿತ್ರಣವನ್ನೇ ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ, ಲೀಗ್ ಹಂತದಲ್ಲಿ ಆಸ್ಟ್ರೇಲಿಯಾದ ವಿರುದ್ಧ ಸೋತಿದ್ದ ಭಾರತ ಈ ಬಾರಿ ತವರಿನಲ್ಲಿ ಹೆಚ್ಚಿನ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿಯಲಿದೆ.
ಮುಂಬೈನಲ್ಲಿ ಮಳೆಯ ಮುನ್ಸೂಚನೆಯಿಂದ ಪಂದ್ಯಕ್ಕೆ ಅಡ್ಡಿಯಾಗುವ ಸಾಧ್ಯತೆ ಇದೆ. ಟಾಸ್‌ನ ಪಾತ್ರವೂ ನಿರ್ಣಾಯಕವಾಗಿದ್ದು, ಅಭಿಮಾನಿಗಳು ಪೂರ್ಣ ಪಂದ್ಯಕ್ಕೆ ಆತಿಥ್ಯ ವಹಿಸುವ ಭರವಸೆಯಲ್ಲಿದ್ದಾರೆ. ಗೆದ್ದ ತಂಡ ನವೆಂಬರ್ 2ರಂದು ದಕ್ಷಿಣ ಆಫ್ರಿಕಾದ ವಿರುದ್ಧ ಫೈನಲ್‌ನಲ್ಲಿ ಸೆಣಸಲಿದೆ.
ಉಭಯ ತಂಡಗಳ ಆಟಗಾರ್ತಿಯರು:
ಭಾರತ: ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಹರ್ಲೀನ್ ಡಿಯೋಲ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಜೆಮಿಮಾ ರೋಡ್ರಿಗಾಸ್, ರಿಚಾ ಘೋಷ್ (ವಿಕೆಟ್ ಕೀಪರ್), ದೀಪ್ತಿ ಶರ್ಮಾ, ಸ್ನೇಹ ರಾಣಾ, ಕ್ರಾಂತಿ ಗೌಡ್, ಶ್ರೀ ಚರಣಿ, ರೇಣುಕಾ ಸಿಂಗ್.
ಆಸ್ಟ್ರೇಲಿಯಾ: ಅಲಿಸ್ಸಾ ಹೀಲಿ (ನಾಯಕಿ, ವಿಕೆಟ್ ಕೀಪರ್), ಫೋಬ್ ಲಿಚ್‌ಫೀಲ್ಡ್, ಎಲ್ಲಿಸ್ ಪೆರಿ, ಅನ್ನಾಬೆಲ್ ಸಥರ್ಲ್ಯಾಂಡ್, ಬೆತ್ ಮೂನಿ, ಆಶ್ಲೀ ಗಾರ್ಡ್ನರ್, ತಾಹಲಿಯಾ ಮೆಕ್‌ಗ್ರಾತ್, ಸೋಫಿ ಮೊಲಿನೆಕ್ಸ್, ಅಲಾನಾ ಕಿಂಗ್, ಕಿಮ್ ಗಾರ್ತ್, ಮೇಗನ್ ಶಟ್.
ಪಂದ್ಯ ಆರಂಭ: ಮದ್ಯಾಹ್ನ 3.30
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್ ನೆಟ್‌ವರ್ಕ್





