ಇದೀಗ ಟೀಮ್ ಇಂಡಿಯಾ ಸೆಮಿಫೈನಲ್ ಪ್ರವೇಶಿಸಬೇಕಾದರೆ ಮುಂದಿನ ಎರಡೂ ಪಂದ್ಯಗಳನ್ನು ‘ಮಾಡು ಇಲ್ಲವೇ ಮಡಿ’ ಪರಿಸ್ಥಿತಿಯಲ್ಲಿ ಎದುರಿಸಬೇಕಿದೆ. ಸೂಪರ್ 8 ಹಂತದಲ್ಲಿ ಪ್ರತಿಯೊಂದು ತಂಡವು ಕೇವಲ 3 ಪಂದ್ಯಗಳನ್ನು ಆಡುವುದರಿಂದ ತಪ್ಪು ತಿದ್ದಿಕೊಳ್ಳಲು ಅವಕಾಶ ತೀರಾ ಕಡಿಮೆ. ಫೆಬ್ರವರಿ 26 ರಂದು ಚೆನ್ನೈನಲ್ಲಿ ನಡೆಯಲಿರುವ ಜಿಂಬಾಬ್ವೆ ವಿರುದ್ಧದ ಪಂದ್ಯ ಹಾಗೂ ಮಾರ್ಚ್ 1 ರಂದು ಕೋಲ್ಕತ್ತಾದಲ್ಲಿ ನಡೆಯಲಿರುವ ಪ್ರಬಲ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯಗಳಲ್ಲಿ ಭಾರತ ಕೇವಲ ಗೆದ್ದರೆ ಸಾಲದು, ಬದಲಾಗಿ ಅತಿ ದೊಡ್ಡ ಅಂತರದ ಗೆಲುವುಗಳನ್ನು ದಾಖಲಿಸುವುದು ಅನಿವಾರ್ಯವಾಗಿದೆ
ಭಾನುವಾರದ ರಜಾ ದಿನದಂದು ಅಹಮದಾಬಾದ್‌ನ ಕ್ರೀಡಾಂಗಣದಲ್ಲಿ ನೆಚ್ಚಿನ ತಾರೆಯರ ಆಟ ಕಣ್ತುಂಬಿಕೊಳ್ಳಲು ಜಮಾಯಿಸಿದ್ದ ಲಕ್ಷಾಂತರ ಅಭಿಮಾನಿಗಳ ಹರ್ಷೋದ್ಗಾರ. ಮತ್ತೊಂದೆಡೆ ಟಿ20 ವಿಶ್ವಕಪ್ ಟೂರ್ನಿಯಲ್ಲಿ 2024ರಿಂದ ಸತತ 12 ಪಂದ್ಯಗಳನ್ನು ಗೆದ್ದು ಬೀಗುತ್ತಿದ್ದ ಭಾರತ ತಂಡದ ಅಜೇಯತೆಯ ಗರ್ವ. ಆದರೆ, ಭಾನುವಾರದ ಆ ಕರಾಳ ಇರುಳು ಭಾರತೀಯ ಕ್ರಿಕೆಟ್ ಪಾಲಿಗೆ ಮರ್ಮಾಘಾತವನ್ನೇ ನೀಡಿತು. 2026ರ ಐಸಿಸಿ ಪುರುಷರ ಟಿ20 ವಿಶ್ವಕಪ್‌ನ ಸೂಪರ್-8 ಹಂತದ ಅತ್ಯಂತ ಮಹತ್ವದ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ನೀಡಿದ ತಿರುಗೇಟಿಗೆ ತತ್ತರಿಸಿದ ಸೂರ್ಯಕುಮಾರ್ ಯಾದವ್ ಬಳಗ, ಬರೋಬ್ಬರಿ 76 ರನ್‌ಗಳ ಅಂತರದ ಶೋಚನೀಯ ಶರಣಾಗತಿಗೆ ಸಾಕ್ಷಿಯಾಯಿತು.
ಭಾರತದ ಪಾಲಿಗೆ ಇದೊಂದು ಕೇವಲ ಅನಿರೀಕ್ಷಿತ ಸೋಲಲ್ಲ, ಇದು ತಂಡದ ಸುತ್ತ ಹೆಣೆಯಲಾಗಿದ್ದ ಅಜೇಯತೆಯ ಕೃತಕ ವೇಷ ಕಳಚಿಬಿದ್ದ ನೈಜ ದರ್ಶನ. 2024ರ ವಿಶ್ವಕಪ್ ಫೈನಲ್‌ನಲ್ಲಿ ಭಾರತದ ಎದುರು ಅನುಭವಿಸಿದ್ದ ಸೋಲಿಗೆ ಬಡ್ಡಿ ಸಮೇತ ಸೇಡು ತೀರಿಸಿಕೊಳ್ಳುವ ತುಡಿತದಲ್ಲಿದ್ದ ಹರಿಣಗಳ ಪಡೆ, ಕರಾರುವಕ್ಕಾದ ಕಾರ್ಯತಂತ್ರ, ಸಾಂಘಿಕ ಹಾಗೂ ಶಿಸ್ತುಬದ್ಧ ಆಟದ ಮೂಲಕ ಹಾಲಿ ಚಾಂಪಿಯನ್ನರ ಸದ್ದಡಗಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್‌ಗಿಳಿದ ಏಡೆನ್ ಮಾರ್ಕ್ರಮ್ ನೇತೃತ್ವದ ದಕ್ಷಿಣ ಆಫ್ರಿಕಾ ತಂಡದ ಆರಂಭವೇನೂ ಸುಗಮವಾಗಿರಲಿಲ್ಲ. ಭಾರತದ ಪ್ರಮುಖ ಅಸ್ತ್ರ, ವೇಗಿ ಜಸ್‌ಪ್ರೀತ್ ಬುಮ್ರಾ (3/15) ಅವರ ಬೆಂಕಿಯುಗುಳುವ ದಾಳಿಗೆ ನಲುಗಿದ ಆಫ್ರಿಕಾ, ಕೇವಲ 20 ರನ್ ಗಳಿಸುವಷ್ಟರಲ್ಲಿ 3 ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ತೀವ್ರ ಸಂಕರ್ಷಕ್ಕೆ ಸಿಲುಕಿತ್ತು. ಕ್ರೀಡಾಂಗಣದಲ್ಲಿ ಭಾರತದ ಅಭಿಮಾನಿಗಳ ಕೇಕೆ ಮುಗಿಲುಮುಟ್ಟಿತ್ತು. ಆದರೆ, ಈ ಹಂತದಲ್ಲಿ ಜೊತೆಯಾದ ಅನುಭವಿ ಡೇವಿಡ್ ಮಿಲ್ಲರ್ ಹಾಗೂ ಯುವ ಆಟಗಾರ ಡೆವಾಲ್ಡ್ ಬ್ರೆವಿಸ್ ಪಂದ್ಯದ ಚಿತ್ರವನ್ನೇ ಸಂಪೂರ್ಣವಾಗಿ ಬದಲಾಯಿಸಿದರು.
ಆರಂಭದಲ್ಲಿ ಎಚ್ಚರಿಕೆಯ ಆಟವಾಡಿದ ಈ ಜೋಡಿ, ಪಿಚ್‌ನ ಸ್ವರೂಪ ಅರಿತ ಬಳಿಕ ಭಾರತೀಯ ಬೌಲರ್‌ಗಳ ಮೇಲೆ ಸವಾರಿ ಮಾಡಿತು. ‘ಕಿಲ್ಲರ್’ ಮಿಲ್ಲರ್ ಕೇವಲ 35 ಎಸೆತಗಳಲ್ಲಿ ಸಿಡಿಸಿದ 63 ರನ್‌ಗಳು ಹಾಗೂ ಬ್ರೆವಿಸ್ ಅವರ 45 ರನ್‌ಗಳ(29 ಚೆಂಡು) ಅಮೂಲ್ಯ ಕಾಣಿಕೆ ಆಫ್ರಿಕಾ ಪಾಳಯಕ್ಕೆ ಮರುಜೀವ ನೀಡಿತು. ಇವರಿಬ್ಬರು ಎಚ್ಚರಿಕೆಯಿಂದ ನಿರ್ಮಿಸಿದ 97 ರನ್‌ಗಳ ಭರ್ಜರಿ ಜೊತೆಯಾಟ ಭಾರತದ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿತು. ಮಧ್ಯಮ ಓವರ್‌ಗಳಲ್ಲಿ ಭಾರತದ ಸ್ಪಿನ್ನರ್ ವರುಣ್ ಚಕ್ರವರ್ತಿ (1/47) ಮತ್ತು ವೇಗಿ ಹಾರ್ದಿಕ್ ಪಾಂಡ್ಯ(0/45) ಅವರನ್ನು ನಿರ್ದಾಕ್ಷಿಣ್ಯವಾಗಿ ದಂಡಿಸಿದ ಆಫ್ರಿಕನ್ ಬ್ಯಾಟರ್‌ಗಳು ರನ್ ವೇಗವನ್ನು ಹಿಗ್ಗಿಸಿದರು. ಇನಿಂಗ್ಸ್‌ನ ಕೊನೆಯ ಹಂತದಲ್ಲಿ ಅಬ್ಬರಿಸಿದ ಟ್ರಿಸ್ಟಾನ್ ಸ್ಟಬ್ಸ್ ಕೇವಲ 24 ಎಸೆತಗಳಲ್ಲಿ ಅಜೇಯ 44 ರನ್ ಸಿಡಿಸುವ ಮೂಲಕ ದಕ್ಷಿಣ ಆಫ್ರಿಕಾ ತಂಡದ ಮೊತ್ತವನ್ನು ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 187 ರನ್‌ಗಳ ಬೃಹತ್ ಗುರಿಯತ್ತ ಕೊಂಡೊಯ್ದರು.
ಇದನ್ನು ಓದಿದ್ದೀರಾ? ಟಿ20 ವಿಶ್ವಕಪ್: ಆಸ್ಟ್ರೇಲಿಯಾ ನಂತರ ಶ್ರೀಲಂಕಾ ಮಣಿಸಿದ ಜಿಂಬಾಬ್ವೆ
188 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ, ಬ್ಯಾಟಿಂಗ್ ಸ್ನೇಹಿ ಎನ್ನಲಾದ ಪಿಚ್‌ನಲ್ಲಿ ಅಕ್ಷರಶಃ ಮಕಾಡೆ ಮಲಗಿತು. ಆಫ್ರಿಕಾದ ಶಿಸ್ತುಬದ್ಧ ಹಾಗೂ ಆಕ್ರಮಣಕಾರಿ ಬೌಲಿಂಗ್ ದಾಳಿಯ ಮುಂದೆ ಭಾರತದ ಘಟನಾಘಟಿ ಬ್ಯಾಟರ್‌ಗಳು ಪೆವಿಲಿಯನ್ ಪರೇಡ್ ನಡೆಸಿದರು. ಪಂದ್ಯದ ಮೊದಲ ಓವರ್‌ನಲ್ಲೇ ಆರಂಭಿಕ ಆಟಗಾರ ಇಶಾನ್ ಕಿಶನ್ ಅವರನ್ನು ಶೂನ್ಯಕ್ಕೆ ಔಟ್ ಮಾಡಿದ ನಾಯಕ ಏಡೆನ್ ಮಾರ್ಕಮ್ ಭಾರತಕ್ಕೆ ಆರಂಭಿಕ ಆಘಾತ ನೀಡಿದರು. ಆದಾದ ಬೆನ್ನಲ್ಲೇ, ಯುವ ಆಟಗಾರ ತಿಲಕ್ ವರ್ಮಾ(1) ಮಾರ್ಕೊ ಜಾನ್ಸೆನ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಮತ್ತೋರ್ವ ಆರಂಭಿಕ ಅಭಿಷೇಕ್ ಶರ್ಮಾ(15) ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲುವ ವ್ಯವಧಾನ ತೋರಲಿಲ್ಲ.
ಪರಿಸ್ಥಿತಿ ಕೈಮೀರುತ್ತಿದ್ದಾಗ ತಂಡಕ್ಕೆ ಆಸರೆಯಾಗಬೇಕಿದ್ದ ನಾಯಕ ಸೂರ್ಯಕುಮಾರ್ ಯಾದವ್ (18 ರನ್, 22 ಎಸೆತ) ಮತ್ತು ಉಪನಾಯಕ ಹಾರ್ದಿಕ್ ಪಾಂಡ್ಯ (18) ತೀರಾ ನಿರಾಶೆ ಮೂಡಿಸಿದರು. ಒತ್ತಡದ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಇಬ್ಬರೂ ಎಡವಿದರು. ಫಿನಿಶರ್ ಎಂದೇ ಖ್ಯಾತಿ ಪಡೆದಿರುವ ಟಿ20 ಸ್ಪೆಷಲಿಸ್ಟ್ ರಿಂಕು ಸಿಂಗ್ ಸೊನ್ನೆ ಸುತ್ತಿದ್ದು ತಂಡದ ದುಸ್ಥಿತಿಗೆ ಕನ್ನಡಿ ಹಿಡಿಯಿತು. ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ (11) ಅವರನ್ನು ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿಸಿದ ಪ್ರಯೋಗವೂ ಸಂಪೂರ್ಣ ವಿಫಲವಾಯಿತು.
ಒಂದು ಕಡೆ ವಿಕೆಟ್‌ಗಳ ಪತನ ನಿರಂತರವಾಗಿ ಮುಂದುವರಿದರೂ, ಕೆಳ ಕ್ರಮಾಂಕದಲ್ಲಿ ಏಕಾಂಗಿ ಹೋರಾಟ ನಡೆಸಿದ ಶಿವಂ ದುಬೆ (37 ಎಸೆತಗಳಲ್ಲಿ 42 ರನ್) ಕೊಂಚ ಪ್ರತಿರೋಧ ಒಡ್ಡಿದರು. ಆದರೆ ಅವರಿಗೆ ಉಳಿದವರಿಂದ ಕನಿಷ್ಠ ಬೆಂಬಲವೂ ಸಿಗಲಿಲ್ಲ. ಮಾಜಿ ನಾಯಕ ಸುನಿಲ್ ಗವಾಸ್ಕರ್ ಪಂದ್ಯದ ನಂತರ ಟೀಕಿಸಿದಂತೆ, ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳದೆ ಕೇವಲ ‘ಬ್ಯಾಟ್ ಬೀಸುವ’ ಭಾರತದ ಏಕಮುಖಿ ಧೋರಣೆ ತಂಡದ ಪಾಲಿಗೆ ಮುಳುವಾಯಿತು. ಅಂತಿಮವಾಗಿ ಭಾರತ ತಂಡ 18.5 ಓವರ್‌ಗಳಲ್ಲಿ ಕೇವಲ 111 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಭಾರಿ ಮುಖಭಂಗ ಅನುಭವಿಸಿತು. ಮಾರ್ಕೊ ಜಾನ್ಸೆನ್ (4/22) ಮತ್ತು ಸ್ಪಿನ್ನರ್ ಕೇಶವ್ ಮಹಾರಾಜ್ (3/24) ಭಾರತದ ಬ್ಯಾಟಿಂಗ್ ಬೆನ್ನೆಲುಬನ್ನು ಸಂಪೂರ್ಣವಾಗಿ ಮುರಿದರು.
ಈ ಶೋಚನೀಯ ಸೋಲಿನೊಂದಿಗೆ ಭಾರತದ ಸೆಮಿಫೈನಲ್ ಪ್ರವೇಶದ ಹಾದಿ ಅತ್ಯಂತ ಕ್ಲಿಷ್ಟಕರ ಹಾಗೂ ಲೆಕ್ಕಾಚಾರದ ಗೂಡಾಗಿ ಮಾರ್ಪಟ್ಟಿದೆ. 76 ರನ್‌ಗಳ ಬೃಹತ್ ಅಂತರದ ಸೋಲಿನಿಂದಾಗಿ, ಸೂಪರ್ 8 ಹಂತದ ‘ಗ್ರೂಪ್ 1’ರ ಅಂಕಪಟ್ಟಿಯಲ್ಲಿ ಭಾರತದ ನೆಟ್ ರನ್ ರೇಟ್ ಪಾತಾಳಕ್ಕೆ, ಅಂದರೆ -3.800 ಕ್ಕೆ ಕುಸಿದಿದೆ. ಇದರೊಂದಿಗೆ ತಂಡವು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಮತ್ತೊಂದೆಡೆ ಭರ್ಜರಿ ಜಯದೊಂದಿಗೆ ದಕ್ಷಿಣ ಆಫ್ರಿಕಾ +3.800 ರನ್ ರೇಟ್‌ನೊಂದಿಗೆ ಅಗ್ರಸ್ಥಾನಕ್ಕೇರಿ ಸೆಮಿಫೈನಲ್‌ನತ್ತ ಒಂದು ಹೆಜ್ಜೆ ಇಟ್ಟಿದೆ.
ಇದೀಗ ಟೀಮ್ ಇಂಡಿಯಾ ಸೆಮಿಫೈನಲ್ ಪ್ರವೇಶಿಸಬೇಕಾದರೆ ಮುಂದಿನ ಎರಡೂ ಪಂದ್ಯಗಳನ್ನು ‘ಮಾಡು ಇಲ್ಲವೇ ಮಡಿ’ ಪರಿಸ್ಥಿತಿಯಲ್ಲಿ ಎದುರಿಸಬೇಕಿದೆ. ಸೂಪರ್-8 ಹಂತದಲ್ಲಿ ಪ್ರತಿಯೊಂದು ತಂಡವು ಕೇವಲ 3 ಪಂದ್ಯಗಳನ್ನು ಆಡುವುದರಿಂದ ತಪ್ಪು ತಿದ್ದಿಕೊಳ್ಳಲು ಅವಕಾಶ ತೀರಾ ಕಡಿಮೆ. ಫೆಬ್ರವರಿ 26 ರಂದು ಚೆನ್ನೈನಲ್ಲಿ ನಡೆಯಲಿರುವ ಜಿಂಬಾಬ್ವೆ ವಿರುದ್ಧದ ಪಂದ್ಯ ಹಾಗೂ ಮಾರ್ಚ್ 1 ರಂದು ಕೋಲ್ಕತ್ತಾದಲ್ಲಿ ನಡೆಯಲಿರುವ ಪ್ರಬಲ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯಗಳಲ್ಲಿ ಭಾರತ ಕೇವಲ ಗೆದ್ದರೆ ಸಾಲದು, ಬದಲಾಗಿ ಅತಿ ದೊಡ್ಡ ಅಂತರದ ಗೆಲುವುಗಳನ್ನು ದಾಖಲಿಸುವುದು ಅನಿವಾರ್ಯವಾಗಿದೆ. ತಮ್ಮ -3.800 ನೆಟ್ ರನ್ ರೇಟ್ ಅನ್ನು ಉತ್ತಮ ಸ್ಥಿತಿಗೆ ತರಲು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅದ್ಭುತ ಪ್ರದರ್ಶಿಸಬೇಕಿದೆ. ದೊಡ್ಡ ಗೆಲುವಿನ ಅಂತರದ ಜೊತೆಗೆ, ಗುಂಪಿನ ಇತರ ಪಂದ್ಯಗಳ ಫಲಿತಾಂಶವೂ ಭಾರತದ ಪರವಾಗಿ ಒಲಿದು ಬರಬೇಕಾದ ಅನಿವಾರ್ಯತೆ ಇದೆ. ಒಂದು ವೇಳೆ ಜಿಂಬಾಬ್ವೆ ಅಥವಾ ವೆಸ್ಟ್ ಇಂಡೀಸ್ ವಿರುದ್ಧ ಒಂದೇ ಒಂದು ಪಂದ್ಯದಲ್ಲಿ ಎಡವಿದರೂ, ತವರಿನಲ್ಲೇ ವಿಶ್ವಕಪ್ ಉಳಿಸಿಕೊಳ್ಳುವ ಭಾರತದ ಕನಸು ನುಚ್ಚುನೂರಾಗುವುದು ನಿಶ್ಚಿತ.





